Monday, March 30, 2026
Monday, March 30, 2026

ʻಅಮೇರಿಕಾದಲ್ಲಿ ಗೊರೂರುʼ ಅಮೆರಿಕ ಪ್ರವಾಸಿಗರಿಗೆ ಅತ್ಯಾಪ್ತವಾಗುವ ಪುಸ್ತಕ

ಶುದ್ಧ ಸಸ್ಯಾಹಾರಿಯಾದ ಅಯ್ಯಂಗಾರ್‌ ಅಮೆರಿಕದ ಹೊಟೇಲ್‌ಗಳಲ್ಲಿ ಪಟ್ಟ ಪಾಡುಗಳನ್ನೂ ವಿವರಿಸಿದ್ದಾರೆ. ಹಾಗೇ ತಾವು ಭಾರತದಿಂದ ಕೊಂಡೊಯ್ದಿದ್ದ ಸಾಂಬಾರ್‌ ಪುಡಿ, ಹುಣುಸೇ ಹಣ್ಣುಗಳಿಂದ ತಾವು ಉಳಿದುಕೊಂಡಿದ್ದ ಹೊಟೇಲ್‌ ಕೊಠಡಿಯಲ್ಲೇ ಅಡುಗೆ ಮಾಡಿ ಆ ಹೊಟೇಲ್‌ನ ಮ್ಯಾನೇಜರ್‌ಗೆ ಅನ್ನ, ಹುಳಿ, ಉಪ್ಪಿನಕಾಯಿ ಊಟ ಬಡಿಸಿದ್ದನ್ನೂ, ಆಕೆ ಅದರಿಂದ ತೃಪ್ತಳಾಗಿ ʻಇಂಥ ಊಟ ಸಿಕ್ಕರೆ ನಾನು ಸಸ್ಯಾಹಾರಿ ಆಗಬಲ್ಲೆ, ನನಗೆ ಖಾರ ಸಂಬಾರ್‌ ಇಷ್ಟʼ ಎಂದದ್ದನ್ನೂ ಉಲ್ಲೇಖಿಸಿದ್ದಾರೆ.

  • ಜ್ಯೋತಿ ಪ್ರಸಾದ್

ಕನ್ನಡದ ಖ್ಯಾತ ಸಾಹಿತಿಗಳಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ವಿರಚಿತ ʻಅಮೇರಿಕಾದಲ್ಲಿ ಗೊರೂರುʼ ಪುಸ್ತಕ ಕನ್ನಡ ಪ್ರವಾಸ ಸಾಹಿತ್ಯದ ಅತ್ಯಂತ ಜನಪ್ರಿಯ ಕೃತಿಗಳಲ್ಲಿ ಒಂದು. ಹಳ್ಳಿಯ ಸಂಪ್ರದಾಯಸ್ಥ ಕುಟುಂಬದ ಅಯ್ಯಂಗಾರ್‌ ಅವರು ತಮ್ಮ ಇಳಿವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ ಮತ್ತು ತೆರೆದಮನದ ಕುತೂಹಲದಿಂದ 1970ರ ದಶಕದ ಕೊನೆಯಲ್ಲಿ ಪತ್ನಿಯೊಡನೆ ಕೈಗೊಂಡ ಅಮೆರಿಕ ಪ್ರವಾಸದ ಅನುಭವಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ. ಇದು ಕೇವಲ ಪ್ರವಾಸಿ ತಾಣಗಳ ವಿವರಣೆಯಲ್ಲ. ಒಬ್ಬ ಭಾರತೀಯ ಸಂಪ್ರದಾಯಸ್ಥ ಮನಸು ಪಾಶ್ಚಾತ್ಯ ಜಗತ್ತಿನ ಆಧುನಿಕತೆಯನ್ನು ಅಳೆದು ನೋಡಿದ ಬಗೆ. ಅಪ್ಪಟ ಭಾರತೀಯ ಹಳ್ಳಿಯ ಪರಿಸರದಿಂದ ಬಂದ ವ್ಯಕ್ತಿ ಅಮೆರಿಕದಂಥ ಅತ್ಯಾಧುನಿಕ ದೇಶಕ್ಕೆ ಹೋದಾಗ ಉಂಟಾಗುವ 'ಸಂಸ್ಕೃತಿ ಸಂಘರ್ಷ' ಹಾಗೂ ಭಾರತೀಯ ಜನಜೀವನ ಮತ್ತು ಅಮೆರಿಕದ ಯಾಂತ್ರಿಕ ಜೀವನದ ನಡುವಿನ ವ್ಯತ್ಯಾಸಗಳು ಇಲ್ಲಿನ ಮುಖ್ಯವಸ್ತು.

ಇದನ್ನೂ ಓದಿ: ಬೆಟ್ಟ ಹೇಳುತೈತೆ ನೂರೊಂದು ಕತೆ

ಪ್ರವಾಸ ಸಾಹಿತ್ಯವೆಂದರೆ ಕೇವಲ ಹೋದ ಸ್ಥಳಗಳ ಭೌಗೋಳಿಕ ಅಥವಾ ಐತಿಹಾಸಿಕ ವಿವರಗಳು ಮಾತ್ರವಲ್ಲ. ಪ್ರವಾಸ ಕಥನವನ್ನೂ ಒಂದು ಸುಂದರ ಕಾವ್ಯದಂತೆ ಅಥವಾ ಆಪ್ತವಾದ ಹರಟೆಯಂತೆ ಬರೆಯಬಹುದು ಎಂದು ಸಾಹಿತಿ ಗೊರೂರು ತೋರಿಸಿಕೊಟ್ಟಿದ್ದಾರೆ. ಅವರ ಈ ಕೃತಿ ಅಮೆರಿಕದ ವೈಭವದ ಜತೆಗೆ ಒಬ್ಬ ಭಾರತೀಯ ಹಳ್ಳಿಗನ ಮುಗ್ಧತೆ ಮತ್ತು ಕುತೂಹಲವನ್ನು ನಮ್ಮ ಕಣ್ಣೆದುರು ತೆರೆದಿಡುತ್ತಾ ನಾವೇ ಅವರ ಜತೆಗೆ ಅಮೆರಿಕ ಸುತ್ತುತ್ತಿದ್ದೇವೆ ಎಂಬ ಭಾವನೆ ಮೂಡಿಸುತ್ತದೆ.

ಸುಮಾರು 300 ಪುಟಗಳಲ್ಲಿ, 20 ಚಿಕ್ಕ ಚಿಕ್ಕ ಅಧ್ಯಾಯಗಳಿವೆ. ಅವುಗಳಲ್ಲಿ ತಮ್ಮ ಪ್ರವಾಸದ ಅನುಭವಗಳನ್ನು ಸಾಹಿತಿ ಚೊಕ್ಕವಾಗಿ ಹಂಚಿಕೊಂಡಿದ್ದಾರೆ.

ಈ ಕೃತಿಯ ಜೀವಾಳವಿರುವುದೇ ಲೇಖಕರು ಅಮೆರಿಕವನ್ನು ನೋಡುವ ದೃಷ್ಟಿಕೋನದಲ್ಲಿ. ವಿಮಾನದ ಏರಿಳಿತಗಳಿಂದ ಪ್ರಾರಂಭಿಸಿ, ಗಗನಚುಂಬಿ ಕಟ್ಟಡಗಳವರೆಗೆ ಎಲ್ಲವನ್ನೂ ಅವರು ತಮ್ಮ ಹಳ್ಳಿಯ ಜೀವನಕ್ಕೆ ಹೋಲಿಸುತ್ತಾ ವಿವರಿಸುತ್ತಾರೆ. ಅಮೆರಿಕದ ಅತಿವೇಗದ ಜೀವನ ಮತ್ತು ಯಾಂತ್ರಿಕ ವ್ಯವಸ್ಥೆಗಳು ಆರಂಭದಲ್ಲಿ ಅವರಲ್ಲಿ ಅಚ್ಚರಿ ಮೂಡಿಸುತ್ತದೆ. ಅಲ್ಲಿನ ಜನಜೀವನ ಮತ್ತು ಟ್ರಾಫಿಕ್ ಶಿಸ್ತು, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ಸೌಲಭ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆಯೇ ವಿನಃ ಎಲ್ಲಿಯೂ ಅವರು ನಮ್ಮ ದೇಶದ ಮೇಲಿರುವ ಅಭಿಮಾನವನ್ನು ಬಿಟ್ಟುಕೊಡುವುದಿಲ್ಲ. ವಸ್ತುನಿಷ್ಠ ಅಭಿಪ್ರಾಯಗಳನ್ನು ದಾಖಲಿಸಿರುವ ಈ ಪುಸ್ತಕ ಓದುಗರಿಗೆ ಪ್ರವಾಸದ ವ್ಯಾಖ್ಯಾನವನ್ನೇ ಬದಲಿಸುತ್ತದೆ. ಪ್ರವಾಸವೆಂದರೆ ಕೇವಲ ಫೊಟೋ ತೆಗೆದುಕೊಳ್ಳುವುದಲ್ಲ, ಆ ಮಣ್ಣಿನ ಗುಣವನ್ನು, ಜನರ ಬದುಕನ್ನು ಅರಿಯುವುದು ಎಂಬ ಸತ್ಯವನ್ನು ಲೇಖಕರು ಮನವರಿಕೆ ಮಾಡಿಕೊಡುತ್ತಾರೆ.

Untitled design (16)

ಕನ್ನಡ ಸಾಹಿತ್ಯ ಲೋಕದಲ್ಲಿ ನವಿರಾದ ಹಾಸ್ಯ ಮತ್ತು ಗ್ರಾಮೀಣ ಬದುಕಿನ ಚಿತ್ರಣಕ್ಕೆ ಹೆಸರಾದ ಗೊರೂರು ತಮ್ಮ ಅಮೆರಿಕದ ಅನುಭವಗಳನ್ನು ಪುಸ್ತಕದುದ್ದಕ್ಕೂ ಬಹಳ ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ. ಅವರ ಪ್ರವಾಸ ಕಥನದ ಮೊದಲನೆಯ ಅಧ್ಯಾಯವನ್ನು ʻಅಂತರಿಕ್ಷದಲ್ಲಿ ರಂಗಮಂಟಪʼ ಎಂಬ ಶೀರ್ಷಿಕೆಯೊಂದಿಗೆ ವಿನೋದವಾಗಿ ಪ್ರಾರಂಭಿಸಿ, ಅಲ್ಲಿ ವಿಮಾನ ಪ್ರಯಾಣದ ಒಳಗಿನ ಚಿತ್ರಣವನ್ನೂ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ.

ಶುದ್ಧ ಸಸ್ಯಾಹಾರಿಯಾದ ಅಯ್ಯಂಗಾರ್‌ ಅಮೆರಿಕದ ಹೊಟೇಲ್‌ಗಳಲ್ಲಿ ಪಟ್ಟ ಪಾಡುಗಳನ್ನೂ ವಿವರಿಸಿದ್ದಾರೆ. ಹಾಗೇ ತಾವು ಭಾರತದಿಂದ ಕೊಂಡೊಯ್ದಿದ್ದ ಸಾಂಬಾರ್‌ ಪುಡಿ, ಹುಣುಸೇ ಹಣ್ಣುಗಳಿಂದ ತಾವು ಉಳಿದುಕೊಂಡಿದ್ದ ಹೊಟೇಲ್‌ ಕೊಠಡಿಯಲ್ಲೇ ಅಡುಗೆ ಮಾಡಿ ಆ ಹೊಟೇಲ್‌ನ ಮ್ಯಾನೇಜರ್‌ಗೆ ಅನ್ನ, ಹುಳಿ, ಉಪ್ಪಿನಕಾಯಿ ಊಟ ಬಡಿಸಿದ್ದನ್ನೂ, ಆಕೆ ಅದರಿಂದ ತೃಪ್ತಳಾಗಿ ʻಇಂಥ ಊಟ ಸಿಕ್ಕರೆ ನಾನು ಸಸ್ಯಾಹಾರಿ ಆಗಬಲ್ಲೆ, ನನಗೆ ಖಾರ ಸಂಬಾರ್‌ ಇಷ್ಟʼ ಎಂದದ್ದನ್ನೂ ಉಲ್ಲೇಖಿಸಿದ್ದಾರೆ.

ಅಮೆರಿಕ ಎಂದರೆ ಕೇವಲ ತಂತ್ರಜ್ಞಾನವಲ್ಲ, ಅಲ್ಲಿಯೂ ಮನುಷ್ಯ ಸಂಬಂಧಗಳಿವೆ ಎಂಬುದನ್ನು ಅವರು ಕಂಡುಕೊಳ್ಳುತ್ತಾರೆ. ಭೌತಿಕ ಸುಖದ ನಡುವೆಯೂ ಪಾಶ್ಚಾತ್ಯರು ಅನುಭವಿಸುವ ಏಕಾಂಗಿತನ ಮತ್ತು ನಮ್ಮ ದೇಶದ ಕುಟುಂಬ ವ್ಯವಸ್ಥೆಯ ಮಹತ್ವವನ್ನು ಅವರು ಸೂಕ್ಷ್ಮವಾಗಿ ಎತ್ತಿ ತೋರಿಸುತ್ತಾರೆ.

ಅಲ್ಲಿ ನೆಲೆಸಿರುವ ಭಾರತೀಯರ ಬದುಕು, ಅವರು ಅನುಭವಿಸುವ ತವರಿನ ಹಂಬಲದ ಬಗ್ಗೆ ಅವರು ಬರೆದಿದ್ದಾರೆ. ಈ ಕುರಿತು ಹೇಳುತ್ತಾ ʻಕನ್ನಡಿಗರು ಅಮೆರಿಕದಲ್ಲಿದ್ದರೂ ಭಾರತದ ಆಗು-ಹೋಗುಗಳ ಕುರಿತು ತಿಳಿದಿರುತ್ತಾರೆ. ಅವರಲ್ಲಿ ಕೆಲವರು ಅಮೆರಿಕದ ಪೌರತ್ವವನ್ನು ಪಡೆದಿರಬಹುದು. ಆದರೆ, ಇಂಡಿಯಾದ ಮೇಲಿನ ಪ್ರೀತಿ, ಆಕರ್ಷಣೆ, ವ್ಯಾಮೋಹ ಅವರಿಗೆ ಹೋಗಿಲ್ಲʼ ಎಂದು ಅವರು ಅರಿತು ದಾಖಲಿಸಿದ್ದಾರೆ. ಅಮೆರಿಕ ಪ್ರವಾಸದ ವೇಳೆ ಅವರು ಭೇಟಿನೀಡಿದ ಕೆನಡಾದ ನಯಾಗರಾ, ರಾಕೀ ಪರ್ವತಗಳು, ಟೊರೊಂಟೋ ಮತ್ತಿತರ ನಗರಗಳ ಬಗ್ಗೆಯೂ ಈ ಪುಸ್ತದಲ್ಲಿ ಒಂದೆರಡು ಅಧ್ಯಾಯಗಳಿವೆ.

ಒಟ್ಟಾರೆ ಈ ಪುಸ್ತಕ ಅಮೆರಿಕ ಪ್ರವಾಸ ಮಾಡಲು ಬಯಸುವವರಿಗೆ ಉತ್ತಮ ಮಾರ್ಗದರ್ಶಿ ಜತೆಗೆ ಒಂದು ಅತ್ಯುತ್ತಮ ಸಾಹಿತ್ಯ ಕೃತಿಯೂ ಹೌದು. ಸರಳ ಪದಗಳಲ್ಲಿ ಹಾಸ್ಯ ಮತ್ತು ಹರಟೆಯನ್ನೂ ಸೇರಿಸಿ ಸಾಮಾನ್ಯ ಓದುಗರಿಗೂ ಮತ್ತು ಸಾಹಿತ್ಯ ಪ್ರೇಮಿಗಳಿಗೂ ಇಷ್ಟವಾಗುವಂತೆ ಬರೆದಿದ್ದಾರೆ.

--

ಪುಸ್ತಕಪರಿಚಯ

ಪುಸ್ತಕದ ಹೆಸರು: ಅಮೇರಿಕಾದಲ್ಲಿ ಗೊರೂರು

ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್

ಪ್ರಕಾರ: ಪ್ರವಾಸ ಕಥನ

ವಿಶೇಷತೆ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ

ಪ್ರಕಾಶಕರು: ಐಬಿಎಚ್ ಪ್ರಕಾಶನ

1979ರಲ್ಲಿ ಪ್ರಕಟವಾದ ಈ ಪುಸ್ತಕ 2024ರಲ್ಲಿ 12ನೆಯ ಬಾರಿ ಮರುಮುದ್ರಣಗೊಂಡಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!