Tuesday, February 10, 2026
Tuesday, February 10, 2026

ಮೂರು ಸಾವಿರ ಮಠದಲ್ಲಿ ಮಹಾಶಿವಯೋಗೀಶ್ವರರ ಜಾತ್ರಾ ಸಂಭ್ರಮ

ಬೆಳಗಾವಿಯ ಹೊಸೂರ-ಬೈಲಹೊಂಗಲದ ಮೂರು ಸಾವಿರ ಮಠದಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರಸಿದ್ಧ ಶ್ರೀನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವದ ತಯಾರಿಯು ಭರದಿಂದ ಸಾಗಿದ್ದು, ಜಿಲ್ಲೆ,ರಾಜ್ಯ, ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ನೆಲೆಸಿರುವ ಮಠದ ಭಕ್ತರು ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಮಠದ ಪೀಠಾಧಿಪತಿಗಳಾದ ಪ್ರಭು ನೀಲಕಂಠ ಮಹಾಸ್ವಾಮಿಗಳು ಜಾತ್ರೆ, ಲಿಂ. ಗಂಗಾಧರ ಮಹಾಸ್ವಾಮಿಗಳ 73ನೆಯ ಜಯಂತಿಯ ಮಹೋತ್ಸವ ಮತ್ತು ಮಹಾಶಿವರಾತ್ರಿ ಉತ್ಸವದ ದಿವ್ಯ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ.

ಬೆಳಗಾವಿ ಎಂಬ ಹೆಸರೇ ರೋಮಾಂಚನ ತರಿಸುವಂಥದ್ದು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಮೊದಲ ಕೂಗು ಮೊಳಗಿದ್ದೇ ಅಲ್ಲಿ. ಬೆಳಗಾವಿಯಲ್ಲಿ ಮನೆ ಮನೆಗೂ ಹೋರಾಟಗಾರರಿದ್ದರು. ಅವರು ತಾಯ್ನೆಲಕ್ಕಾಗಿ ಅಹರ್ನಿಶಿ ದುಡಿದವರು. ತಾಯ್ನೆಲದ ಉಳಿವಿಗಾಗಿಯೇ ತುಡಿದು ಮಿಡಿದವರು. ಬೆಳಗಾವಿ ಎಂದರೆ ಕನ್ನಡ ನೆನಪಾಗುತ್ತದೆ. ಅಲ್ಲಿನ ಜನರಿಗೆ ಕನ್ನಡವೆಂದರೆ ಬದುಕು ಮತ್ತು ಅಸ್ತಿತ್ವ. ಕರ್ನಾಟಕ ಏಕೀಕರಣದಲ್ಲೂ ಅವರ ಪಾತ್ರ ಬಹಳ ಹಿರಿಯದು. ಅಂಥ ಬೆಳಗಾವಿಯಲ್ಲಿ ನೂರಾರು ಮಠ, ಮಂದಿರಗಳಿವೆ. ಮಠಗಳು ಲಕ್ಷಾಂತರ ಜನರನ್ನು ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಪೊರೆದಿವೆ. ಸಮ ಸಮಾಜವನ್ನು ಕಟ್ಟುವಲ್ಲಿಯೂ ಶ್ರಮಿಸಿವೆ. ಶೈಕ್ಷಣಿಕ, ಸಾಮಾಜಿಕ ಕ್ರಾಂತಿಗೂ ಮುನ್ನುಡಿ ಬರೆದಿವೆ. ಆ ಪೈಕಿ ಬೆಳಗಾವಿಯ ಹೊಸೂರ-ಬೈಲಹೊಂಗಲದ ಮೂರು ಸಾವಿರ ಮಠವು ತನ್ನ ಘನ ಪರಂಪರೆಯಿಂದಾಗಿ ರಾಜ್ಯ,ರಾಷ್ಟ್ರ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಪ್ರಸಿದ್ಧಿಯಾಗಿದೆ.

ಇದನ್ನೂ ಓದಿ: ಅವನೇ ಶ್ರೀ ವೈದ್ಯನಾಥೇಶ್ವರ ಜ್ಯೋತಿರ್ಲಿಂಗ!

ಮೂರು ಸಾವಿರ ಮಠವೆಂದರೆ ಅದು ಭಾವೈಕ್ಯತೆಯ ಮಠ. ಸಾಮರಸ್ಯದ ಮಠ. ಎಲ್ಲರನ್ನು ಸೌಹಾರ್ದ ಭಾವದಿಂದ ನೋಡುವುದರೊಂದಿಗೆ ಇಡೀ ಮಠ-ಮಾನ್ಯ ಪರಂಪರೆಗೆ ಮೂರು ಸಾವಿರ ಮಠ ಹೊಸ ಭಾಷ್ಯ ಬರೆದಿದೆ. ಜಿಲ್ಲೆಯ ಶಿಕ್ಷಣ, ಆರೋಗ್ಯ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಈ ಮಠವು ಅನನ್ಯ ಕೊಡುಗೆಯನ್ನು ನೀಡಿದೆ. ಮಠಕ್ಕೆ ಲಕ್ಷಾಂತರ ಸದ್ಭಕ್ತರಿದ್ದಾರೆ. ಮಠದ ವ್ಯಾಪ್ತಿಗೆ ಬರುವ ಶಾಲೆ, ಕಾಲೇಜುಗಳಲ್ಲಿ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಭಕ್ತ ಗಣಗಳನ್ನು ಕಳೆದ ಒಂಬೈನೂರು ವರ್ಷಗಳಿಂದ ಪೊರೆಯುತ್ತಾ ಬರುತ್ತಿರುವ ಮೂರು ಸಾವಿರ ಮಠದಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಅಕ್ಷರಶಃ ಹಬ್ಬದ ವಾತಾವರಣವು ಅಲ್ಲಿ ಮೈತಳೆದಿದ್ದು, ಇಡೀ ಮಠದ ಆವರಣ ಕಂಗೊಳಿಸುತ್ತಿದೆ. ಬೈಲಹೊಂಗಲದ ಜನರು ಮತ್ತು ವಿಶ್ವದೆಲ್ಲೆಡೆ ಇರುವ ಮಠದ ಸಹಸ್ರಾರು ಭಕ್ತರು ಬೆರಗುಗಣ್ಣುಗಳೊಂದಿಗೆ ಕಾಯುತ್ತಿದ್ದಾರೆ.

Untitled design

ಹೌದು, ಮೂರು ಸಾವಿರ ಮಠದಲ್ಲಿ ಈಗ ಶ್ರೀ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಸಂಭ್ರಮ. ಊರಿಗೆ ಊರೇ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಮಠದ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಮತ್ತು ಭಕ್ತರು ಸಡಗರದಿಂದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹತ್ತು ದಿನಗಳು ನಡೆಯುವ ಈ ಅದ್ಧೂರಿ ಜಾತ್ರಾ ಮಹೋತ್ಸವದ ದಿವ್ಯ ನೇತೃತ್ವವನ್ನು ಪೂಜ್ಯರಾದ ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಜಾತ್ರಾ ಮಹೋತ್ಸವದೊಂದಿಗೆ ಲಿಂ. ಶ್ರೀ ಗಂಗಾಧರ ಮಹಾಸ್ವಾಮಿಗಳ 73ನೆಯ ಜಯಂತಿಯ ಮಹೋತ್ಸವ ಮತ್ತು ಮಹಾಶಿವರಾತ್ರಿ ಉತ್ಸವವೂ ಕಳೆಕಟ್ಟಲಿದೆ. ಇಡೀ ಸಮಾಜವನ್ನು ಒಗ್ಗೂಡಿಸುವ ಜಾತ್ರೆ ಇದಾಗಿದ್ದು, ಭಕ್ತರು ಸಕಲ ರೀತಿಯಲ್ಲೂ ಸಹಕಾರ ನೀಡುತ್ತಿದ್ದಾರೆ. ಎಲ್ಲ ಧರ್ಮೀಯ ಜನರೂ ಜಾತ್ರೆಯ ತಯಾರಿಯಲ್ಲಿ ಕಾಯ,ವಾಚಾ ಮತ್ತು ಮನಸಾ ತೊಡಗಿಸಿಕೊಂಡಿದ್ದಾರೆ. ʼಮಹಾ ಶಿವಯೋಗೀಶ್ವರರ ಜಾತ್ರೆ ಎಂದರೆ ಅದು ಸಾಮರಸ್ಯದ ಹಬ್ಬ. ನಾವು ಜಾತಿ, ಧರ್ಮ ಮರೆತು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ. ಆ ಭಾವ ನಮ್ಮಲ್ಲಿ ಮೂಡಲು ಮೂರು ಸಾವಿರ ಮಠದ ಪೀಠಾಧಿಪತಿಗಳ ಪರಂಪರೆಯೇ ಕಾರಣʼ ಎನ್ನುತ್ತಾರೆ ಭಕ್ತರು.

ಜಾತ್ರೆಯ ಹಿನ್ನೆಲೆ

ಮೂರುಸಾವಿರಮಠಕ್ಕೆ ಬರೋಬ್ಬರಿ ಒಂಬತ್ತು ಶತಮಾನಗಳ ಭವ್ಯ ಇತಿಹಾಸವಿದೆ. ಈ ಮಠಕ್ಕೆ ವಿರಕ್ತ ಮಠ ಎಂಬ ಹೆಸರೂ ಇದೆ. ಹತ್ತಾರು ಪೀಠಾಧಿಕಾರಿಗಳು ಈ ಮಠಕ್ಕೆ ಕಾಯಕಲ್ಪ ನೀಡಿ ಭಕ್ತರನ್ನು ಪೊರೆದಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾದ ಕೆಲಸ ಮಾಡಿದ್ದಾರೆ. ಈ ಮಠದ ಆರಂಭಿಕ ಪೀಠಾಧಿಪತಿಗಳ ಬಗ್ಗೆ ಅಧಿಕೃತ ಮಾಹಿತಿಯಿಲ್ಲದಿದ್ದರೂ, ನೀಲಕಂಠ ಮಹಾಶಿವಯೋಗೀಶ್ವರ ಮಹಾಸ್ವಾಮಿಗಳು ಮಠಕ್ಕೆ ಭದ್ರ ಬುನಾದಿಯನ್ನು ಹಾಕಿದವರು. ವಾಕ್‌ ಸಿದ್ಧಿ ಪುರುಷರು ಮತ್ತು ಬಡವರ ಬಂಧುಗಳಾಗಿದ್ದ ಯೋಗೀಶ್ವರ ಸ್ವಾಮಿಯವರು ಉತ್ತರ ಭಾರತದವರು ಎನ್ನಲಾಗುತ್ತದೆ. ಇನ್ನೂ ಹಲವರು ಹಿಮಾಲಯದಿಂದ ಬಂದವರು ಎನ್ನುತ್ತಾರೆ. ಅವರ ಮೂಲ ನೆಲೆಯ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲದಿದ್ದರೂ ಮಠದ ಬೆಳವಣಿಗೆಗೆ ಅವರು ಪ್ರಾಮಾಣಿಕವಾಗಿ ಶ್ರಮಿಸಿದವರು. ಪಾಳು ಬಿದ್ದಿದ್ದ ಮಠವನ್ನು ಪುನರ್‌ ನಿರ್ಮಾಣಗೊಳಿಸಿದವರು. ಅವರು ಲಿಂಗೈಕ್ಯರಾಗಿ ಎಷ್ಟೋ ವರ್ಷಗಳ ನಂತರ ಮಠದ 16ನೆಯ ಪೀಠಾಧಿಕಾರಿಯಾಗಿ ಬಂದವರು ಪರಮಪೂಜ್ಯ ಶ್ರೀ ಗಂಗಾಧರ ಮಹಾಸ್ವಾಮಿಗಳು. ಕೇವಲ ಕಾಲು ಶತಮಾನದಲ್ಲಿ 30 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬೈಲಹೊಂಗಲದಲ್ಲಿ ಶಿಕ್ಷಣ ಕ್ರಾಂತಿಗೆ ಭದ್ರಬುನಾದಿ ಹಾಕುವುದರೊಂದಿಗೆ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ಬೆಳಗಿದವರು. ಮಠದ ಪರಂಪರೆಯ ಬಗ್ಗೆ ಅಪಾರ ಭಕ್ತಿ ಭಾವವನ್ನು ಹೊಂದಿದ್ದ ಗಂಗಾಧರ ಮಹಾಸ್ವಾಮಿಗಳು ಮಠದ ಜೀರ್ಣೋದ್ಧಾರ ಕೆಲಸವನ್ನು ಮಾಡಿದ ಸಿದ್ಧ ಪುರುಷರು ಮತ್ತು ಸಾಧಕರಾದ ನೀಲಕಂಠ ಮಹಾಶಿವಯೋಗೀಶ್ವರರ ಸ್ಮರಣಾರ್ಥ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಆಯೋಜಿಸಲು ನಿರ್ಧರಿಸಿದರು. ಜಾತ್ರಾ ಮಹೋತ್ಸವದ ಮೂಲಕ ಸಮಾಜಕ್ಕೆ ಅರಿವನ್ನು ದಾಟಿಸುವ ಸದುದ್ದೇಶ ಅವರದ್ದಾಗಿತ್ತು. ಒಂದೇ ಸೂರಿನಡಿ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿ ಇಡೀ ನಾಡಿನ ಶರಣ ಭಕ್ತರನ್ನು ಮೂರು ಸಾವಿರ ಮಠಕ್ಕೆ ಕರೆ ತಂದರು. ಪ್ರತಿ ವರ್ಷವೂ ನಡೆಯುವ ಈ ಜಾತ್ರೆಯು ರಾಷ್ಟ್ರಮಟ್ಟದಲ್ಲಿ ಖ್ಯಾತಿಯಾಯಿತು. ಗಂಗಾಧರ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಇಡೀ ಮಠದ ಜವಾಬ್ದಾರಿಯನ್ನು ವಹಿಸಿಕೊಂಡವರು 17ನೆಯ ಪೀಠಾಧಿಕಾರಿಗಳಾದ ಪೂಜ್ಯ ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳು. ಸಮಾಜದ ಏಳಿಗೆಯನ್ನೇ ತಮ್ಮ ಬದುಕಿನ ಧ್ಯೇಯ ವಾಕ್ಯವಾಗಿಸಿಕೊಂಡಿರುವ ಅವರು ಕಳೆದ ಎಂಟು ವರ್ಷಗಳಿಂದ ಜಾತ್ರಾ ಮಹೋತ್ಸವದ ದಿವ್ಯ ನೇತೃತ್ವವನ್ನು ವಹಿಸಿಕೊಂಡು ಬಹಳ ಅಚ್ಚುಕಟ್ಟಾಗಿ ಮತ್ತು ಎಲ್ಲರೂ ಮೆಚ್ಚುವಂತೆ ಆಯೋಜಿಸುತ್ತಾ ಯಶಸ್ವಿಯಾಗಿದ್ದಾರೆ.

ಹೀಗಿರಲಿದೆ ಜಾತ್ರಾ ಸಂಭ್ರಮ

ಹೊಸೂರ-ಬೈಲಹೊಂಗಲದ ಮೂರು ಸಾವಿರ ಮಠದಲ್ಲಿ ನಡೆಯುವ ಶ್ರೀ ನೀಲಕಂಠ ಮಹಾಶಿವ ಯೋಗೀಶ್ವರರ ಜಾತ್ರಾ ಮಹೋತ್ಸವವೆಂದರೆ ಸಂಭ್ರಮ ಮತ್ತು ಮೆರುಗು ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ. ಒಂದು ಊರಿನ ಜಾತ್ರೆ ಎಂದರೆ ಅದು ಆಯಾ ಕೇರಿಗಳಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಅದು ಇಡೀ ಸಮಾಜವನ್ನು ಒಂದು ಕಡೆ ಸೇರಿಸುವ ಆಚರಣೆ. ಅದು ಆ ನೆಲದ ಸಂಪ್ರದಾಯವನ್ನು ಎಲ್ಲೆಡೆ ಪಸರಿಸುವ ರೀತಿ ಎನ್ನಬಹುದು. ಈ ನಿಟ್ಟಿನ್ಲಲಿ ಮೂರು ಸಾವಿರ ಮಠದ ನಿರ್ವಿಕಲ್ಪ ಸಮಾದಿಸ್ಥ, ಅವಿರಳ ಪರಂಜ್ಯೋತಿ ಕರ್ತೃ ಶ್ರೀ ನೀಲಕಂಠ ಮಹಾಶಿವ ಯೋಗೀಶ್ವರರ ನೆನಪಿನ ಜಾತ್ರಾ ಮಹೋತ್ಸವವು ದಶಕಗಳಿಂದ ಸಮಾಜದಲ್ಲಿ ಬದಲಾವಣೆಯನ್ನು ತಂದಿದೆ. ಈ ಜಾತ್ರಾ ಮಹೋತ್ಸವವು ಪಲ್ಲಕ್ಕಿ ಉತ್ಸವದೊಂದಿಗೆ ಆರಂಭವಾಗಿ ಮಹಾರಥೋತ್ಸವದೊಂದಿಗೆ ಕೊನೆಗೊಳ್ಳುತ್ತದೆ. ರಥೋತ್ಸವವು ಅಸಂಖ್ಯಾತ ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನೆರವೇರುತ್ತದೆ. ಜವಳಿ ಕೂಟದಲ್ಲಿರುವ ರಥಕ್ಕೆ ಕಬ್ಬು, ಬಾಳೆದಿಂಡು, ತಳಿರು ತೋರಣ, ತ್ರಿವರ್ಣ ಧ್ವಜ ಸಂಕೇತದ ಪರಪರಿಯನ್ನು ಕಟ್ಟಿ ಶೃಂಗರಿಸಲಾಗುತ್ತದೆ. ಮಠದ ಆವರಣದಿಂದ ಜವಳಿಕೂಟದವರೆಗೆ ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವವು ಸಡಗರದಿಂದ ಜರುಗುತ್ತದೆ. ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿಯವರು ಪ್ರಮುಖ ನೇತೃತ್ವವನ್ನು ವಹಿಸಿಕೊಂಡಿರುತ್ತಾರೆ. ಪಲ್ಲಕ್ಕಿ ಉತ್ಸವದ ನಂತರ ಪ್ರಾತಃ ಕಾಲದಲ್ಲಿ ಅವಿರಳ ಪರಂ ಜ್ಯೋತಿ ನೀಲಕಂಠ ಮಹಾಶಿವಯೋಗೀಶ್ವರರ ಹಾಗೂ ಲಿಂ. ಗಂಗಾಧರ ಮಹಾಸ್ವಾಮಿಗಳ ಕರ್ತೃ ಗದ್ದುಗೆಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾಚರಣೆ, ಪಲ್ಲಕ್ಕಿ ಉತ್ಸವ ಮಾಡಲಾಗುತ್ತದೆ. ಜಾತ್ರೆ ನಡೆಯುವ ಅಷ್ಟು ದಿನವೂ ನಿರಂತರ ದಾಸೋಹವಿರುತ್ತದೆ. ಪಾದಯಾತ್ರೆಯ ಮೂಲಕ ಮಠಕ್ಕೆ ಬರುವ ಭಕ್ತರಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯವಿದೆ. ಕಳೆದ ವರ್ಷ ನಡೆದಂತೆ ಈ ಬಾರಿಯೂ ಪ್ರಭು ನೀಲಕಂಠ ಮಹಾಸ್ವಾಮಿಗಳ ತುಲಾಭಾರ ನಡೆಯುತ್ತದೆ ಎನ್ನುತ್ತಾರೆ ಮಠದ ಭಕ್ತರು.

Untitled design (4)

ಪ್ರಮುಖ ಆಕರ್ಷಣೆ

ಮೂರು ಸಾವಿರ ಮಠದ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವದ ಪ್ರತಿ ಕಾರ್ಯಕ್ರಮವೂ ವಿಶೇಷತೆಯಿಂದ ಕೂಡಿರುತ್ತದೆ. ಬಹಳ ಪ್ರಮುಖವಾಗಿ ಕಡೆಯ ಮೂರು ದಿನಗಳು(ಫೆ.13,14 ಹಾಗೂ15) ಅದ್ಧೂರಿ ಕಾರ್ಯಕ್ರಮಗಳು ಜರುಗುತ್ತವೆ. ಮಠಾಧೀಶರು ಮತ್ತು ಪೂಜ್ಯರಿಂದ ಷಟಸ್ಥಲ ಧ್ವಜಾರೋಹಣ, ನಾಡಿನ ಹಲವು ಮಠ ಮಾನ್ಯಗಳ ಪೀಠಾಧಿಪತಿಗಳಿಂದ ಪ್ರವಚನ ನಡೆಯುತ್ತದೆ. ಇಡೀ ಜಾತ್ರೆಗೆ ತಿಲಕವಿಟ್ಟಂತೆ ʼಅಯ್ಯಾಚಾರ ಹಾಗೂ ಲಿಂಗದೀಕ್ಷೆʼ ಬಹಳ ಅರ್ಥಪೂರ್ಣವಾಗಿ ನಡೆಯುತ್ತವೆ. ರುದ್ರಾಕ್ಷಿ ಧಾರಣೆ ಮಾಡಿ ವಿಭೂತಿಯನ್ನು ವಿತರಿಸಲಾಗುತ್ತದೆ. ಸಾಮೂಹಿಕ ವಿವಾಹಗಳೂ ಮಠಾಧೀಶರ ಸಾನಿಧ್ಯದಲ್ಲಿ ನೆರವೇರುತ್ತವೆ. ಇನ್ನು ಗುರುವಂದನಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭಗಳಿರುತ್ತವೆ.

ಎಲೆಮರೆ ಕಾಯಿ ಸಾಧಕರಿಗೆ ಪ್ರಶಸ್ತಿ

ಕಳೆದ ನಾಲ್ಕು ವರ್ಷಗಳಿಂದ ಶಿವಯೋಗೀಶ್ವರರ ಜಾತ್ರಾ ಮಹೋತ್ಸವದಲ್ಲಿ ಎಲೆ ಮರೆಕಾಯಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದ ಅಸಾಮಾನ್ಯ ಸಾಧಕರಿಗೆ ʼನೀಲಕಂಠ ಶ್ರೀʼ ಪ್ರಶಸ್ತಿಯನ್ನು ನೀಡಿ ಮೂರು ಸಾವಿರ ಮಠವು ಗೌರವಿಸುತ್ತಿದೆ. ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ನೂರಕ್ಕೂ ಹೆಚ್ಚು ಸರೋವರಗಳನ್ನು ಪುನಃ ಸ್ಥಾಪಿಸಿರುವ, ದೇಶ-ವಿದೇಶಗಳಲ್ಲಿ ಐದು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟು ಸಾಧನೆಗೈದಿರುವ ʼಲೇಕ್‌ ಮ್ಯಾನ್‌ ಆಫ್‌ ಇಂಡಿಯಾʼ ಬಿರುದಾಂಕಿತರಾದ ಶ್ರೀ ಆನಂದ ಮಲ್ಲಿಗವಾಡ ಅವರಿಗೆ ʼನೀಲಕಂಠ ಶ್ರೀʼ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.

ಸಾಮರಸ್ಯದ ಜಾತ್ರೆ

ಮಹಾಶಿವಯೋಗೀಶ್ವರರ ಜಾತ್ರೆ ಎಂದರೆ ಅದು ಸಾಮರಸ್ಯ ಮತ್ತು ಭಾವೈಕ್ಯತೆಯ ಹಬ್ಬ. ಹಿಂದೂ,ಮುಸ್ಲಿಂ,ಕ್ರೈಸ್ತರೆನ್ನದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಈಗಾಗಲೇ ಸರ್ವ ಧರ್ಮೀಯರು ಜಾತ್ರೆಯ ತಯಾರಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮನೆಯಿಂದ ಅಕ್ಕಿ,ಬೆಲ್ಲ,ಕಾಯಿಗಳನ್ನು ನೀಡುತ್ತಾ ಸಹಕರಿಸುತ್ತಿದ್ದಾರೆ. ತನು,ಮನ ಮತ್ತು ಧನವನ್ನು ಧಾರೆಯೆರೆಯುತ್ತಿದ್ದಾರೆ. ಮುಸ್ಲಿಂ ಯುವಕನೊಬ್ಬ ಜಾತ್ರೆಗೆ ಕಂಬ ಕಟ್ಟಿದರೆ, ಹಿಂದೂ ಮತ್ತು ಕ್ರೈಸ್ತ ಧರ್ಮದ ಯುವಕರು ರಥ ಎಳೆಯುತ್ತಾರೆ. ಕೋಮು ಸಂಘರ್ಷವಿಲ್ಲದೆ ಶಾಂತ ರೀತಿಯಲ್ಲಿ ಯೋಗೀಶ್ವರರ ಜಾತ್ರೆಯ ಮಹೋತ್ಸವವು ನೆರವೇರುತ್ತದೆ.

ಯಾರೆಲ್ಲ ಇರಲಿದ್ದಾರೆ?

ಪ್ರತಿ ವರ್ಷ ನೆರವೇರುವ ಈ ಜಾತ್ರಾ ಮಹೋತ್ಸವದಲ್ಲಿ ಮಠಾಧೀಶರು, ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯ ನಾಯಕರು, ವಿವಿಧ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಗಣ್ಯರು ಭಾಗವಹಿಸುತ್ತಾರೆ. ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ವಿಧಾನಸಭಾ ಪರಿಷತ್‌ನ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಸಂಸದರಾದ ಶ್ರೀ ಜಗದೀಶ ಶೆಟ್ಟರು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಸೇರಿಂದತೆ ಹಲವು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಭಾಗವಹಿಸುತ್ತಿದ್ದಾರೆ. ಇನ್ನು ಉದ್ಯಮ ಕ್ಷೇತ್ರದ ಪ್ರತಿನಿಧಿಯಾಗಿ ಅಡಿಗಾಸ್‌ ಯಾತ್ರಾ ಸಂಸ್ಥಾಪಕರಾದ ಶ್ರೀ ನಾಗರಾಜ ಅಡಿಗ ಅವರು ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ.

ಮನೋರಂಜನೆ ಕಾರ್ಯಕ್ರಮ

ಧಾರ್ಮಿಕ, ಅಧ್ಯಾತ್ಮ, ಯೋಗ, ಪಂಚಕರ್ಮದ ಜತೆಗೆ ಮನೋರಂಜನೆ ಕಾರ್ಯಕ್ರಮಗಳೂ ಮುಖ್ಯ. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವದಲ್ಲಿ ಅದ್ಭುತವಾದ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ. ಜಾತ್ರೆಯಲ್ಲಿ ನೆರೆಯುವಂಥ ಸಹಸ್ರಾರು ಪ್ರೇಕ್ಷಕರನ್ನು ಪ್ರಸಿದ್ಧ ಕಲಾವಿದರು ರಂಜಿಸಲಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ರನ್ನರ್‌ ಅಪ್‌ ಆದ ತುಳುನಾಡಿನ ಪ್ರತಿಭೆ ರಕ್ಷಿತಾ, ಅಶ್ವಿನಿ ಗೌಡ, ಸುಷ್ಮಿತಾ ಗೌಡ, ಜಾನ್ವಿ ಮತ್ತು ಈ ಮೊದಲು ಬಿಗ್‌ಬಾಸ್‌ ಶೋನಲ್ಲಿ ಗೆಲುವು ಸಾಧಿಸಿದ್ದ ಒಳ್ಳೆ ಹುಡ್ಗ ಪ್ರಥಮ್‌ ಈ ಬಾರಿಯ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆ. DKD ಖ್ಯಾತಿಯ ರುದ್ರಾ ಮಾಸ್ಟರ್‌ ತಂಡದಿಂದ ನೃತ್ಯ ವೈಭವವಿದೆ. ಸಂಗೀತ ರಸಿಕರಿಗೆ ಸಂಗೀತ ರಸದೂಟವನ್ನು ಉಣಬಡಿಸಲು ಕನ್ನಡ ಸಿನಿರಂಗದ ಮೆಲೋಡಿ ಕಿಂಗ್‌, ಪ್ರಸಿದ್ಧ ಹಿನ್ನೆಲೆ ಗಾಯಕ ರಾಜೇಶ್‌ ಕೃಷ್ಣನ್‌ ಬರುತ್ತಿದ್ದಾರೆ. ಸರಿಗಮಪ ಖ್ಯಾತಿಯ ಪೃಥ್ವಿ ಭಟ್‌ ಮತ್ತು ಸಂತೋಷ್‌ ದೇವ್‌ ಕೂಡ ಸಂಗೀತ ಸುಧೆಯನ್ನು ಹರಿಸಲಿದ್ದಾರೆ.

Untitled design (2)

ವಾಕ್‌ ಸಿದ್ದಿ ಪುರುಷರಾದ ಶ್ರೀ ನೀಲಕಂಠ ಶಿವಯೋಗಿಗಳ ನೆನಪಿನಾರ್ಥದ ಈ ಜಾತ್ರಾ ಮಹೋತ್ಸವದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುತ್ತಾರೆ. ನೀಲಕಂಠ ಶಿವಯೋಗಿಗಳು ಮತ್ತು ಲಿಂಗೈಕ್ಯ ಗಂಗಾಧರ ಸ್ವಾಮೀಜಿಯವರ ಅಸಂಖ್ಯಾತ ಭಕ್ತರು ನಮಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡಿದ್ದಾರೆ. ನಮ್ಮ ಮಠದ ಭಕ್ತರು ವಿದೇಶದಲ್ಲಿಯೂ ನೆಲೆಸಿದ್ದಾರೆ. ಪ್ರತಿ ವರ್ಷ ಜರುಗುವ ಈ ಜಾತ್ರಾ ಮಹೋತ್ಸವದಲ್ಲಿ ಅವರೆಲ್ಲರೂ ತಮ್ಮ ಮನೆಯ ಹಬ್ಬದಂತೆ ಸಂಭ್ರಮಿಸಿ ಭಾಗವಹಿಸುತ್ತಾರೆ. ಇದು ಕೇವಲ ಜಾತ್ರೆಯಲ್ಲ. ಭಾವೈಕ್ಯತೆಯ ಹಬ್ಬ. ಜಾತಿ,ಲಿಂಗ ಮತ್ತು ಧರ್ಮ ಬೇಧವಿಲ್ಲದೆ ಪ್ರತಿಯೊಬ್ಬರೂ ಜಾತ್ರೆಯ ಯಶಸ್ಸಿಗೆ ಕೈಜೋಡಿಸುತ್ತಾರೆ. ಜಾತ್ರೆಯ ಅಂಗವಾಗಿ ನಡೆಯುವ ಪಾದಯಾತ್ರೆಯಲ್ಲೂ ಸರ್ವ ಧರ್ಮೀಯರು ಪಾಲ್ಗೊಂಡು ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ. ನಮ್ಮದು ಭಾವೈಕ್ಯ ಮಠ. ನಿಜವಾದ ಅರ್ಥದಲ್ಲಿ ಮೂರು ಸಾವಿರ ಮಠವು ಸರ್ವ ಜನಾಂಗದ ಶಾಂತಿಯ ತೋಟ. ಈ ರೀತಿಯ ವಾತಾವರಣವಿರುವುದರಿಂದಲೇ ಮಠವು ಈವರೆಗೆ ತನ್ನ ಘನತೆಯನ್ನು ಉಳಿಸಿಕೊಂಡು ಬಂದಿದೆ. ಸಮಸ್ತ ಭಕ್ತರು ಬಹಳ ಅದ್ಧೂರಿಯಾಗಿ ನಡೆಯುತ್ತಿರುವ ಸಾಮರಸ್ಯದ ಹಬ್ಬವಾದ ಶ್ರೀ ಮಹಾಯೋಗೀಶ್ವರರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ನೀಲಕಂಠ ಶಿವಯೋಗಿಗಳ ಕೃಪೆಗೆ ಪಾತ್ರರಾಗಿ ಎಂದು ಕೇಳಿಕೊಳ್ಳುತ್ತೇನೆ.
- ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿ
ಪೀಠಾಧಿಪತಿಗಳು, ಮೂರು ಸಾವಿರಮಠ
ಬೈಲಹೊಂಗಲ


----------

ಬೈಲಹೊಂಗಲದ ಮಹಾ ಶಿವಯೋಗೀಶ್ವರ ಜಾತ್ರೆ ಎಂದರೆ ನಮಗೆ ಮನೆಯ ಹಬ್ಬದಂತೆ. ಪ್ರತಿ ವರ್ಷವೂ ಮನೆ ಮಂದಿ ಸಮೇತ ನಾನು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ. ಈ ಜಾತ್ರೆಯ ಮೂಲಕ ಪ್ರಭು ನೀಲಕಂಠ ಸ್ವಾಮೀಜಿಗಳು ಹೊಸ ಅರಿವನ್ನು ನಮ್ಮೊಳಗೆ ಬಿತ್ತುತ್ತಾ ಬಂದಿದ್ದಾರೆ. ಯುವ ಜನತೆಯನ್ನು ಜಾಗೃತಗೊಳಿಸುವ ಕಾರ್ಯಕ್ರಮಗಳು ಜಾತ್ರೆಯ ಅಂಗವಾಗಿ ಇಲ್ಲಿ ನಡೆಯುತ್ತವೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಪ್ರಸಿದ್ಧರಾಗಿರುವ ಪ್ರತಿಭಾವಂತ ಕಲಾವಿದರಿಂದ ಮನೋರಂಜನೆ ಕಾರ್ಯಕ್ರಮಗಳಿರುತ್ತವೆ. ಎಲೆ ಮರೆಯ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನೂ ಈ ಜಾತ್ರಾ ಮಹೋತ್ಸವದಲ್ಲಿ ಮಾಡಲಾಗುತ್ತದೆ. ರಥೋತ್ಸವವು ಈ ಜಾತ್ರೆಯ ವಿಶೇಷ. ಈ ಹಿಂದೆ ಬರೋಬ್ಬರಿ ಒಂದು ತಿಂಗಳುಗಳ ಕಾಲ ಈ ಜಾತ್ರೆ ನಡೆಯುತ್ತಿತ್ತು. ಈಗ ಹತ್ತು ದಿನಗಳು ಮಾತ್ರ ನಡೆಯುತ್ತದೆ. ಆದರೂ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವುದೇ ಸಂಭ್ರಮ ಮತ್ತು ಸಡಗರ
- ವಿನಾಯಕ
ಮಠದ ಭಕ್ತರು

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ