• ಸುಮಾ ಸತೀಶ್

ಭಾರತದಲ್ಲಿ‌ ನಾವಿನ್ನೂ ನವರಾತ್ರಿಯ ಗುಂಗಿನಲ್ಲಿರುವಾಗಲೇ ಮಲೇಷಿಯಾದಲ್ಲಿ ದೀಪಾವಳಿ ಅರಳಿ ನಿಂತಿದೆ. ದೀಪಾವಳಿಯನ್ನು ನಾವಾಗಲೇ ಅಚ್ಚರಿ ಆನಂದದಿಂದ ಕಣ್ತುಂಬಿಕೊಂಡಿದ್ದಾಯ್ತು.

ದೀಪಾವಳಿ ನಾಲ್ಕು ದಿನಗಳ ಆಚರಣೆಯಾದರೂ ಬಹುತೇಕ ಮನೆಗಳಲ್ಲಿ ಕೊನೆಯ ಒಂದೋ ಎರಡೋ ದಿ‌ನಕ್ಕೆ ಜೈ ಅನ್ನಿಸಿಬಿಡುವುದು ಸಾಮಾನ್ಯ.‌ ಮಾಲ್‌ಗಳಲ್ಲಿ ವಾಣಿಜ್ಯ ಕಾರಣದಿಂದ ಒಂದು ವಾರ ಹದಿನೈದು ದಿನ ಒಂದಿಷ್ಟು ಅಲಂಕಾರ, ಅಲ್ಲಲ್ಲಿ ದೀಪಾವಳಿ ಸೇಲ್, ಉಡುಗೊರೆ ಎಂಬ ಕಟೌಟ್‌ಗಳು ಇರಬಹುದು. ತುಳಸಿ ಹಬ್ಬದವರೆಗೆ(ಕಿರು ದೀಪಾವಳಿ) ದೀಪಗಳ ಸಾಲನ್ನು ಪ್ರೀತಿಯಿಂದ ಕಾಪಿಡುವ ಮಂದಿ ಬೆರಳೆಣಿಕೆಯಷ್ಟು. ಇನ್ನು ಹೊಟೇಲ್‌ಗಳಲ್ಲಿ ಹಬ್ಬದ ದಿನ ಬಾಳೆಯೆಲೆ ಊಟ ಸುಲಭದಲ್ಲಿ ದಕ್ಕುವುದರಿಂದ, ಅದನ್ನೂ ಅಲ್ಲಿಯೇ ಮಾಡಿದರಾಯ್ತು. ಬಂಧು ಬಾಂಧವರ ಬಾಂಧವ್ಯದ ಬೆಳಕು ನಂದಿಸಿ ಕತ್ತಲಲ್ಲಿಯೇ ಉಳಿಸಿ ಕಾಲವನ್ನು ಮುಂದುವರೆಸಿದ್ದೇವೆ. ಸ್ನೇಹಿತರನ್ನು ಮನೆಗೆ ಕರೆದು ಉಣಬಡಿಸಬೇಕಿಲ್ಲ. ಯಾಂತ್ರಿಕತೆ ಆವರಿಸಿ ಅವರವರ ಬದುಕು ಅವರವರಿಗೆ.

ಸರ್ವಧರ್ಮ ಸಮನ್ವಯ ನಡೆ

ಮಲೇಷಿಯಾದಲ್ಲಿಯೂ ಆಧುನಿಕತೆಯ ಗಾಳಿ ಬೀಸಿ, ಯುವ ಪೀಳಿಗೆಯಲ್ಲಿ ಅಂದಿನ ಬಾಂಧವ್ಯಗಳು ಕಮ್ಮಿಯಾಗಿದ್ದರೂ ನಮ್ಮಷ್ಟು‌ ಮೋಸವಿಲ್ಲ. ನಮ್ಮಲ್ಲಿ ಸರ್ವಧರ್ಮ ಸಮನ್ವಯದ ಬೊಬ್ಬೆ ಹೊಡೆಯುತ್ತೇವೆ. ಆಚರಣೆಗೆ ತಾರೆವು. ಇಲ್ಲಿ ಎಲ್ಲ ಹಬ್ಬಗಳ ಆಚರಣೆಯೂ ವಿಶೇಷವೇ. ಮುಸಲ್ಮಾನರು ಬಹುಸಂಖ್ಯಾತರು. ಚೀನೀಯರು, ಹಿಂದೂಗಳು ಅಲ್ಪಸಂಖ್ಯಾತರು. ಆದರೂ ಚೀನೀಯರ ಹೊಸವರ್ಷಾಚರಣೆ ಎಲ್ಲರ ಬಾಳಿಗೆ ಹೊಸವರ್ಷವಾದರೆ, ಮುಸಲ್ಮಾನರ ರಂಜಾನ್ ಎಲ್ಲರದೂ ಸಹ. ಹಿಂದೂಗಳ ದೀಪಾವಳಿ ಎಲ್ಲರ ಮನಗಳಲ್ಲಿ ದೀಪ ಬೆಳಗಿಸುತ್ತದೆ. ಪ್ರತಿ ಹಬ್ಬವೂ ಸುದೀರ್ಘ ತಿಂಗಳ ಕಾಲ ಆಚರಿಸಲ್ಪಡುತ್ತದೆ. ಪರಸ್ಪರರ ಮನೆಗಳಿಗೆ ಹೋಗುವ, ವಿಶೇಷ ತಿನಿಸು ಸವಿಯುವ ಉಡುಗೊರೆ ಪಡೆಯುವ ಬೆಚ್ಚನೆಯ ಪ್ರೀತಿಗೆ ಇನ್ನೂ ತಾವಿದೆ, ಬೆಸುಗೆಯ ಕಾವೂ ಇದೆ.

Deepavali celebration at Malaysia

ಪ್ರಪಂಚದ ಎತ್ತರದ ಅವಳಿ ಗೋಪುರ

ಮಲೇಷಿಯಾದ ರಾಜಧಾನಿ ಕ್ವಾಲಾಲಂಪುರದ ಮನಮೋಹಕ ಅವಳಿ ಗೋಪುರಕ್ಕೆ ಭೇಟಿ ಕೊಟ್ಟಾಗ, ಕಟ್ಟಡ ವಿನ್ಯಾಸ, ವೈಭವ, ಅದ್ಭುತ ವಾಸ್ತುಶಿಲ್ಪ ಸೆಳೆದಷ್ಟೇ ಮುಖ್ಯವಾಗಿ ಕಣ್ಸೆಳೆದದ್ದು, ದೀಪಾವಳಿಯನ್ನು ಸ್ವಾಗತಿಸುವ ಬೃಹತ್ತಾದ ರಂಗೋಲಿ.‌ ನಿಜವೇ ಎನ್ನಿಸುವಷ್ಟು ಸಹಜವಾಗಿರುವ ಕೃತಕ ಚೆಂಡು ಹೂವಿನ ಅಲಂಕಾರ. ವಿಶಾಲ ಕಮಲದೆಲೆಯಲ್ಲಿ ಅರಳಿ ನಿಂತ ಸಮನ್ವಯದ ಬೆಳಕು. ಅರೆ ಇದೇನು! ಇನ್ನೂ ದೀಪಾವಳಿಗೆ ಎಷ್ಟು ಸಮಯವಿದೆ ಎನ್ನುವ ಅಚ್ಚರಿಯ ನಡುವೆಯೇ ಒಂದಷ್ಟು ಮಾಹಿತಿಯನ್ನು ನಮ್ಮ ಗೈಡ್ ಕೊಟ್ಟರು.

ನಮ್ಮ ಗೈಡ್ ಭಾರತೀಯ ಮೂಲದವರು. ನಾಲ್ಕಾರು ತಲೆಮಾರುಗಳ ಹಿಂದೆ ಇಲ್ಲಿ ಬಂದು ನೆಲೆಯಾದವರು. ಅಲ್ಪಸಂಖ್ಯಾತತೆ ಎಂದೂ ಬಾಧಿಸಲಿಲ್ಲ. ದೀಪಾವಳಿಯಲ್ಲಿ ಮುಸಲ್ಮಾನ ಸ್ನೇಹಿತರು, ಚೀನೀಯರು, ಇನ್ನುಳಿದ ಆಪ್ತರು ಮನೆಗೆ ಬರುತ್ತಾರೆ. ಪಟಾಕಿಯನ್ನೂ ತರುತ್ತಾರೆ. ಒಟ್ಟಾಗಿ ಸೇರಿ ಹಚ್ಚಿ, ಸಂಭ್ರಮಿಸುತ್ತೇವೆ. ರಂಜಾನ್‌ಗೆ ನಾವು ಅವರಲ್ಲಿಗೆ ಹೋಗಿ ವಿಶೇಷ ತಿನಿಸು ಸವಿಯುತ್ತೇವೆ. ಚೀನೀಯರ ಹೊಸವರ್ಷ ನಮ್ಮದೂ ಸಹ ಎಂದು ಹೆಮ್ಮೆಯಿಂದ ಹೇಳುತ್ತಾರೆ. ನಮ್ಮ ಸರ್ಕಾರ ಅದನ್ನು ಆರಂಭದಿಂದಲೂ ಅಳವಡಿಸಿಕೊಂಡಿದೆ. ಓಪನ್ ಹೌಸ್ ಪರಿಕಲ್ಪನೆ ಇದೆ. ಇಲ್ಲಿ ಎಲ್ಲ ಹಬ್ಬಗಳನ್ನೂ ಮಲಯನ್ನರೆಲ್ಲರೂ ಸೇರಿ ಧರ್ಮಾತೀತವಾಗಿ ಒಟ್ಟಾಗಿ ಆಚರಿಸುವ ಅವಕಾಶವಿತ್ತು. ಸರ್ಕಾರ ಬಹಳ ಜೋಪಾನವಾಗಿ ಈ ಜವಾಬ್ದಾರಿ ನಿಭಾಯಿಸುತ್ತಿತ್ತು.‌ ಕೋವಿಡ್ ನಂತರ ಅದು ಕಮ್ಮಿಯಾಗಿದೆ ಎಂದು ವಿಷಾದಿಸಿದ್ದು ಮನತಟ್ಟಿತು.

ನಮ್ಮ ಸಂವಿಧಾನದಲ್ಲಿಯೂ ಸರ್ವಧರ್ಮ ಸಮನ್ವಯದ ಪಾಠವಿದ್ದರೂ ರಾಜಕಾರಣದ ದಾಳದಲ್ಲಿ ಧರ್ಮಕಾರಣವನ್ನೂ ಉರುಳಿಸುವುದು ಪರಿಪಾಠವಾಗಿದೆ. ಜನಮಾನಸದಲ್ಲಿ ಪರಸ್ಪರರ ಕುರಿತಾಗಿ ಇನ್ನೂ ಉಳಿದ ಚೂರುಪಾರು ಪ್ರೀತಿಗೂ ಇದರಿಂದ ಕುತ್ತು.

ಹಬ್ಬ ಎಂದರೆ ಬಲು ಇಷ್ಟಪಡುವ ಮಲಯನ್ನರಿಗೆ ಅದು ಯಾವ ಧರ್ಮದ್ದು ಎಂಬುದಕ್ಕಿಂತ ತಾವೂ ಒಳಗೊಳ್ಳುವ ತವಕ. ಒಂದು ಸಣ್ಣ ಉದಾಹರಣೆ ಎಂದರೆ ನಾವು ಬಂದ ದಿನ ಚೀನೀಯರ ಮಿಡ್ ಆಟಮ್ ಹಬ್ಬ ಇತ್ತು. ನಮ್ಮ ಸಂಕ್ರಾಂತಿಯ ಸುಗ್ಗಿ ಹಬ್ಬದಂತೆ.‌ ಏನು ಮಾಡುತ್ತಾರೆಂದರೆ ಮನೆಗಳಲ್ಲಿ ಬಣ್ಣಬಣ್ಣದ ನಮ ನಮೂನೆಯ ಲಾಟೀನು ಹಚ್ಚಿ, ಮೂನ್ ಕೇಕ್ ಅನ್ನುವ ಸಿಹಿತಿಂಡಿಯೊಡನೆ‌ ಆಚರಿಸುತ್ತಾರೆ. ಮೂನ್ ಕೇಕ್‌ಗಳು ನೋಡಲು ಆಕರ್ಷಕವಾಗಿದ್ದವು. ಗತಕಾಲದ ಲಾಟೀನನ್ನು ಇನ್ನೂ ಉಳಿಸಿಕೊಂಡಿರುವಂತೆಯೇ ಮಲಯನ್ನರು ಗತಕಾಲದ ಸಮನ್ವಯವನ್ನು ಇನ್ನೂ ಕಾಪಿಟ್ಟುಕೊಂಡಿದ್ದಾರೆ.

Diwali at Malaysia

ನೋಡಲು ನಮ್ಮ ಹಲಸಿನಂತೆ ಕಾಣುವ, ಗಾತ್ರದಲ್ಲಿ ಅರ್ಧದಷ್ಟು ಕಿರಿದಾಗಿರುವ ಡುರಿಯನ್ ಹಣ್ಣಿಗೂ ಒಂದು ದೊಡ್ಡ ಹಬ್ಬವಿದೆ ಇಲ್ಲಿ. ಹೀಗೆ ಸಿಗುವ ಯಾವ ಹಬ್ಬವನ್ನೂ ಪಕ್ಕಕ್ಕಿಡದೆ ಎಲ್ಲವನ್ನೂ ತೆಕ್ಕೆಗೆ ಸೆಳೆದುಕೊಂಡು ಆಸ್ವಾದಿಸುವ ಮನೋಭಾವ ಇಷ್ಟವಾಯಿತು. ಒತ್ತಡದ ಬದುಕಿನಲ್ಲಿ ಅನಿವಾರ್ಯ ಹಬ್ಬಗಳನ್ನು ಕಾಟಾಚಾರಕ್ಕೆ ಮುಗಿಸಿ, ಉಳಿದವುಗಳನ್ನು ಸದ್ದಿಲ್ಲದೆ ಸರಿಸುವ ನಮ್ಮ ಮನಸ್ಸುಗಳಿಗೆ ಇದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಒತ್ತಡದ ಬದುಕಿನಲ್ಲಿ ಹಬ್ಬಗಳನ್ನೇ ಬಿಡುಗಡೆಯ ಹಾದಿಯಾಗಿಸಿಕೊಂಡಿರುವ ಮಲಯನ್ನರಿಗೆ ಮರುಳಾದೆ.

ರಸ್ತೆಯುದ್ದಕ್ಕೂ ದೀಪಾವಳಿ ಸೇಲ್ ಮಾಹಿತಿ ನೀಡುವ ಭರ್ಜರಿ ಕಟೌಟ್‌ಗಳು ಸ್ವಾಗತಿಸುತ್ತಿದ್ದವು. ದೀಪಾವಳಿಗೆ ಅವಿವಾಹಿತ ಮಕ್ಕಳಿಗೆ ಮಾತ್ರ ಉಡುಗೊರೆಯನ್ನು ತಂದೆತಾಯಿಗಳು ಕೊಡುತ್ತಾರೆ. ವಿವಾಹಿತರು ಅವರೇ ಕೊಡಬೇಕು. ವಿವಾಹ ಜವಾಬ್ದಾರಿಯ ಚೌಕಟ್ಟು ಎಂಬ ಭಾವ. ಹೊಸಬಟ್ಟೆ ಮಾಮೂಲಿ. ಅದರ ಹೊರತಾಗಿ ಅಂಗ್ ಪಾವ್ ಅಂದರೆ ಉಡುಗೊರೆ ಕೊಡುತ್ತಾರೆ. ಅದು ಹಣದ ರೂಪದಲ್ಲಿ. ಹಣ ಸಂಪತ್ತಿನ ಸಂಕೇತ. ಪ್ರೀತಿಯಿಂದ ಕೊಟ್ಟು ಸಮೃದ್ಧವಾಗಲೆಂದು ಹಾರೈಸುತ್ತಾರೆ. ಅದೂ ನೇರಳೆ ಬಣ್ಣದ ಕವರ್‌ನಲ್ಲಿ ಹಣ ಕೊಡುತ್ತಾರೆ. ಚೀನೀಯರು ಹೊಸ ವರ್ಷಾ‍ಚರಣೆಗೆ ಕೆಂಪು ಕವರ್‌ನಲ್ಲಿ, ಮುಸಲ್ಮಾನರು ರಂಜಾನ್‌ನಲ್ಲಿ ಹಸಿರು ಕವರ್‌ನಲ್ಲಿ ಕೊಡುತ್ತಾರೆ. ಬಣ್ಣಗಳಿಗೂ ಹಬ್ಬಗಳಿಗೂ ತಳಕಿದೆ. ತಮ್ಮ ಮಕ್ಕಳಿಗೆ ಮಾತ್ರವಲ್ಲ, ಮನೆಗೆ ಬಂದ ಸ್ನೇಹಿತರು, ಬಂಧುಗಳಿಗೂ ಈ ಉಡುಗೊರೆಯಲ್ಲಿ, ಪ್ರೀತಿಯಲ್ಲಿ ಪಾಲಿದೆ.

ಅವಳಿ ಗೋಪುರದೊಳಗಿನ ವಿಸ್ತಾರವಾದ ದೀಪಾವಳಿ ರಂಗವಲ್ಲಿ ವಿಶಾಲಗೊಳಿಸಿದ ಮನದೊಡನೆ ಹೊರಬಂದೊಡನೆ ರಾತ್ರಿ 8 ಗಂಟೆಗೆ ಸರಿಯಾಗಿ ಸೂರ್ಯ ಕೆ ಎಲ್ ಸಿ ಸಿ ಮಾಲ್‌ನ ಮುಂಭಾಗದಲ್ಲಿ ನಾಲ್ಕಾರು ನಿಮಿಷ ಬಣ್ಣದ ಕಾರಂಜಿಯ ಸಂಗೀತ ನೃತ್ಯ ಮನಸ್ಸನ್ನು ಸೆಳೆಯಿತು. ಮೇಲೆ ಚಿಮ್ಮುತ್ತಿದ್ದ ನೀರಿನ ಬಣ್ಣದೋಕುಳಿ ಹಾಗೂ ವರ್ಣಮಯ ಪಟಾಕಿಗಳ ಹೊಳಪು ಮನಸ್ಸಿಗೆ ಆಪ್ತವಾಗಿದ್ದು ಮನಸಿನಂತೆ ಮಹದೇವ ಎನ್ನಬಹುದು.