ಐಫೆಲ್ ಟವರ್ ಎದುರಲ್ಲಿ ಸೆಲ್ಫೀ ಬೇಕು!
ನಂಗೆ ಮೋಷನ್ ಸಿಕ್ನೆಸ್ ಇದೆ. ಆದರೆ ಅದಕ್ಕೆ ಕೇರ್ ಮಾಡದೇ ಪ್ರವಾಸ ಮಾಡ್ತಾ ಇರ್ತೀನಿ. ಟ್ರಾವೆಲ್ ಟೈಮಲ್ಲಿ ಒಂದೋ ಹೈಪರ್ ಆಕ್ಟಿವ್ ಇರ್ತೀನಿ ಇಲ್ಲಾಂದ್ರೆ ನಿದ್ದೆ ಮಾಡಿಬಿಡ್ತೀನಿ. ಇವೆರಡೂ ನಾನು ಮೋಷನ್ ಸಿಕ್ನೆಸ್‌ಗೆ ಕಂಡುಕೊಂಡಿರೋ ಪರಿಹಾರ.
ಕರ್ನಾಟಕದ ಗಂಧದ ಬೀಡು, ಕಲೆ-ಸಂಸ್ಕೃತಿಗಳ ತವರು ಎಂದೇ ಹೆಸರಾಗಿರುವ ಸಾಗರದ ಮತ್ತೊಂದು ಅಪ್ಪಟ ಪ್ರತಿಭೆ ಅನಘಾ ಸಾಗರ್. ತಮ್ಮ ಅಭಿನಯದ ಮೂಲಕವೇ ಕಿರುತೆರೆಯಲ್ಲಿ ಬೇರೂರಿರುವ ಈ ನಟಿ, ರಂಗಭೂಮಿಯ ಪ್ರಾಡಕ್ಟು. ನೃತ್ಯ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಸಾಕಷ್ಟು ಪ್ರದರ್ಶನ ಮಾಡಿ ಆ ಮೂಲಕವೇ ಕಿರುತೆರೆಯ ಗಮನ ಸೆಳೆದವರು. ಗಣೇಶನ ಮೂರ್ತಿ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಕುಟುಂಬದಿಂದ ಬಂದಿರುವ ಈಕೆಗೆ ಅಭಿನಯಕ್ಷೇತ್ರದಲ್ಲಿ ಮಹತ್ತರವಾದದ್ದು ಸಾಧಿಸುವಾಸೆ.
ಶಾಂತಂಪಾಪಂ ಸೀರಿಯಲ್ ಮೂಲಕ ಪದಾರ್ಪಣೆ ಮಾಡಿದ ಅನಘಾ, ಆನಂತರ ರಾಧೇಶ್ಯಾಮ, ಅರ್ಧಾಂಗಿ, ಆನಂದರಾಗ, ಸೂರ್ಯವಂಶ, ಕರಿಮಣಿ ಮತ್ತು ಭಾರ್ಗವಿ ಎಲ್ ಎಲ್ ಬಿ ಮುಂತಾದ ಧಾರಾವಾಹಿಗಳ ಮೂಲಕ ಇದೀಗ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಎಂಬ ಚಿತ್ರದಲ್ಲಿ ನಾಯಕಿಪಾತ್ರ ಮಾಡಿ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟಿದ್ದು, ಇವರ ಗಿರೇಬಾಜಿ ಎಂಬ ಕಿರುಚಿತ್ರ ಮೂರು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ಪ್ರತಿ ಕ್ಷಣವೂ ಮನಸ್ಸು ಪ್ರವಾಸ ಹೋಗಲು ಹಾತೊರೆಯುತ್ತಿರುತ್ತದೆ ಎನ್ನುವ ಅನಘಾ ಪ್ರವಾಸಿ ಪ್ರಪಂಚದೊಂದಿಗೆ ಮಾತನಾಡಿದ್ದು ಹೀಗೆ.
ಪ್ರವಾಸದ ಹುಚ್ಚು ಶುರುವಾಗಿದ್ದೆಲ್ಲಿ?
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಜತೆ ಇದ್ದೆ. ಇತರರನ್ನು ಟ್ರಿಪ್ ಕರೆದುಕೊಂಡು ಹೋಗೋ ಮೊದಲು ನಾವು ಟ್ರಿಪ್ ಮಾಡಿರುತ್ತಿದ್ದೆವು. ಮಲೆನಾಡು, ಉತ್ತರಕನ್ನಡ ಸುತ್ತಮುತ್ತ ಇರೋ ಎಲ್ಲ ಟ್ರೆಕ್ಕಿಂಗ್ ಸ್ಪಾಟ್ಸ್, ನದಿ, ಸಮುದ್ರ, ಟೆಂಪಲ್ಸ್ ಎಲ್ಲೆಡೆ ಸುತ್ತಲು ಶುರು ಮಾಡಿದ್ದು ಆಗಲೇ.
ಸೋಲೋ ಟ್ರಿಪ್ ಇಷ್ಟಾನೋ ಗ್ರೂಪ್ ಟ್ರಿಪ್ ಇಷ್ಟಾನೋ?
ಸೋಲೋ ಟ್ರಿಪ್ ಮಾಡೋಕೆ ಬಹಳ ಆಸೆ ಇದೆ. ಅವಕಾಶ ಸಿಕ್ಕಿಲ್ಲ. ಪ್ರವಾಸಕ್ಕೆ ನಮ್ಮದೇ ಒಂದು ಗ್ರೂಪ್ ಇದೆ. ಅವರೊಂದಿಗೆ ವೇವ್ ಲೆಂತ್ ಮ್ಯಾಚ್ ಆಗೋದ್ರಿಂದ ಆ ಪ್ರವಾಸಗಳನ್ನು ಎಂಜಾಯ್ ಮಾಡ್ತಿದ್ದೇನೆ.

ನಟಿಯಾಗಿ ನಿಮಗೆ ಪ್ರವಾಸ ಎಷ್ಟು ಮುಖ್ಯ ಅನಿಸುತ್ತೆ?
ನಿರಂತರ ಶೂಟಿಂಗ್‌ನ ಸ್ಟ್ರೆಸ್ ಕಡಿಮೆಯಾಗೋಕೆ, ಒಂದೇ ಥರದ ರೊಟೀನ್‌ನಿಂದ ಹೊರಬರೋಕೆ ಪ್ರವಾಸ ಬೆಸ್ಟ್ ಮೆಡಿಸಿನ್. ಇನ್ನು ನಟಿಯಾಗಿ ನಮಗೆ ಪ್ರವಾಸ ಸಾಕಷ್ಟು ಕಲಿಸುತ್ತದೆ. ಭಿನ್ನ ಶೈಲಿಯ ಭಾಷೆ, ಸೊಗಡು, ಲೈಫ್ ಸ್ಟೈಲ್, ಇವೆಲ್ಲ ನೋಡೋದ್ರಿಂದ ಅವುಗಳನ್ನು ಪಾತ್ರದಲ್ಲಿ ಅಳವಡಿಸಿಕೊಳ್ಳೋಕೆ ಸಹಾಯವಾಗುತ್ತದೆ. ಭಾರ್ಗವಿ ಎಲ್ ಎಲ್ ಬಿ ಧಾರಾವಾಹಿಯಲ್ಲಿ ನಾನು ಉತ್ತರ ಕರ್ನಾಟಕ ಭಾಷೆ ಮಾತನಾಡೋ ಸಂದರ್ಭವಿದೆ. ಪ್ರವಾಸ ಮತ್ತು ಅಲ್ಲಿ ಗಮನಿಸಿದ ಭಾಷೆ, ಸೊಗಡು ನನ್ನ ಪಾತ್ರಕ್ಕೆ ಸಹಕಾರಿಯಾಯ್ತು.
ನಿಮ್ಮನ್ನು ತುಂಬ ಪ್ರಭಾವಿಸಿದ ಪ್ರವಾಸ ಯಾವುದು?
ಚಾರ್ ಧಾಮ್. ಅದನ್ನು ನಾನು ಭೂಲೋಕದ ಸ್ವರ್ಗ ಅಂತೀನಿ. ನಾನು ಜಗತ್ತನ್ನು ನೋಡೋ ರೀತಿ, ಜೀವವನನ್ನು ನೋಡೋ ರೀತಿ ಬದಲಿಸಿದ್ದು ಚಾರ್ ಧಾಮ್ ಪ್ರವಾಸ.
ಇಂದಿನ ಯುವಜನತೆ ಅದರಲ್ಲೂ ನಟಿಯರು ಧಾರ್ಮಿಕ ಪ್ರವಾಸದತ್ತ ಹೆಚ್ಚು ಒಲವು ತೋರಿಸ್ತಿರೋದಕ್ಕೆ ಕಾರಣ ಏನು?
ನನ್ನ ಪ್ರಕಾರ ಸೋಷಿಯಲ್ ಮೀಡಿಯಾದಿಂದ ಆಗಿರೋ ಪಾಸಿಟಿವ್ ಬದಲಾವಣೆ ಇದೆ. ನಮ್ಮ ಧಾರ್ಮಿಕ ಸ್ಥಳಗಳು ಇಷ್ಟು ಅದ್ಭುತವಾಗಿವೆ ಅಂತ ಇಂದಿನ ಪೀಳಿಗೆಗೆ ತಿಳಿಸೋದ್ರಲ್ಲಿ ಫೇಸ್ ಬುಕ್ , ಇನ್ ಸ್ಟಾಗ್ರಾಮ್ ಪಾತ್ರವಿದೆ.
ಅಲ್ಲಿ ಗೋವಾ, ಕೇರಳ, ವಿಯೆಟ್ನಾಂ ಥೈಲ್ಯಾಂಡ್ ಥರದ ಜಾಗಗಳದ್ದೂ ರೀಲ್ಸ್ ಇರುತ್ತವಲ್ಲ?
ಹೌದು. ಖಂಡಿತ ಅಂಥ ಜಾಗಗಳೂ ಇಷ್ಟವೇ. ಅದನ್ನೂ ಎಂಜಾಯ್ ಮಾಡ್ತೀನಿ. ಆದರೆ ಧಾರ್ಮಿಕ ಪ್ರವಾಸದಿಂದ ನಮ್ಮೊಳಗೊಂದು ಬೇರೆ ಎನರ್ಜಿ ಉದ್ಭವವಾಗುತ್ತೆ. ಅದನ್ನು ಫೀಲ್ ಮಾಡ್ತೀವಿ. ಧಾರ್ಮಿಕ ಪ್ರವಾಸಗಳು ನಮ್ಮಲ್ಲೊಂದು ಬದಲಾವಣೆಗೆ ಕಾರಣವಾಗುತ್ತವೆ.
ಬ್ಯುಸಿ ಶೂಟಿಂಗ್ ಮಧ್ಯ ಪ್ರವಾಸ ಹೇಗೆ ಸಾಧ್ಯವಾಗುತ್ತೆ?
ಮೂರುಹೊತ್ತೂ ನಾವು ಎಲ್ಲಿ ತಿರುಗೋಕೆ ಹೋಗೋದು ಅಂತ ಚರ್ಚಿಸುತ್ತಲೇ ಇರುತ್ತೇವೆ. ಥಿಯೇಟರ್ ಫ್ರೆಂಡ್ಸೇ ನನ್ನ ಕಂಪನಿ. ಸಣ್ಣ ಗ್ಯಾಪ್ ಸಿಕ್ಕರೂ ಬ್ಯಾಗ್ ಪ್ಯಾಕ್ ರೆಡಿ ಆಗಿರುತ್ತದೆ.
ಪ್ರವಾಸ ಅಂದ್ರೆ ಹೇಗೆ ತಯಾರಾಗ್ತೀರಿ?
ನಾನು ಪ್ರತಿ ಪ್ರವಾಸಕ್ಕೂ ಪ್ರತ್ಯೇಕ ಶಾಪಿಂಗ್ ಮಾಡ್ತೀನಿ. ಬೇಕಿರೋದು ಬೇಡದ್ದು ಎಲ್ಲವನ್ನೂ ಬ್ಯಾಗಲ್ಲಿ ತುಂಬಿಕೊಳ್ತೀನಿ. ಅಲ್ಲಿ ಹೋದಾಗ ಯಾವುದಕ್ಕೂ ತೊಂದರೆಯಾಗಬಾರದು ಅಂತ. ಯಾರಿಗೆ ಏನೇ ಬೇಕಾದ್ರೂ ಅದು ನನ್ನ ಬ್ಯಾಗಲ್ಲಿರುತ್ತೆ ಎಂಬಷ್ಟು ತಯಾರಿರ್ತೀನಿ.

ಭಾರದ ಬ್ಯಾಗಲ್ಲಿ ಪ್ರವಾಸ ಕಷ್ಟ ಅಲ್ಲವೇ?
ಅದನ್ನು ಹೊರೋಕೆ ಫ್ರೆಂಡ್ಸ್ ಇರ್ತಾರಲ್ಲ ( ಹಹ)
ಪ್ರವಾಸದಲ್ಲಿ ನೆನಪಲ್ಲುಳಿಯೋ ಅನುಭವ ಏನಾದ್ರೂ ಆಗಿದೆಯಾ?
ಪ್ರತಿ ಪ್ರವಾಸವೂ ಭಿನ್ನ ಅನುಭವವವೇ. ಕಹಿ ಅನುಭವ ಅಂತ ಯಾವುದೂ ಆಗಿಲ್ಲ. ಎಲ್ಲಾ ವಯೋಮಾನದವರೂ ಪ್ರವಾಸದಲ್ಲಿ ಸಿಗುತ್ತಾರೆ. ಎಲ್ಲರೊಂದಿಗೆ ಬೆರೆಯೋ, ಅರ್ಥ ಮಾಡಿಕೊಳ್ಳೋ ಅವಕಾಶ ಸಿಗೋದು ಪ್ರವಾಸದಲ್ಲಿ ಮಾತ್ರ.

ಯಾವ ಥರದ ಪ್ರವಾಸ ಇಷ್ಟ?
ಟೆಂಪಲ್ ಟೂರ್, ಬೀಚ್, ಟ್ರೆಕ್ಕಿಂಗ್ ಎಲ್ಲವೂ ಇಷ್ಟ. ಬೆಟ್ಟ ಹತ್ತಿದ್ರೂ ಸನ್ ಸೆಟ್ ಸನ್ ರೈಸ್ ನೋಡೋಕೆ ಕಾಯ್ತೀನಿ. ಸಮುದ್ರತೀರಕ್ಕೆ ಹೋದ್ರೂ ಸೂರ್ಯಾಸ್ತ ಸೂರ್ಯೋದಯ ನೋಡೋಕೆ ಇಷ್ಟ ಪಡ್ತೀನಿ. ಬೀಚ್ ಜಾಸ್ತಿ ಇಷ್ಟ.
ವಿದೇಶ ಪ್ರವಾಸ ಅಂದ್ರೆ ಎಲ್ಲಿ ಹೋಗೋ ಕನಸಿದೆ?
ಪ್ಯಾರಿಸ್ ಟ್ರಿಪ್ ಮಾಡಿ ಐಫೆಲ್ ಟವರ್ ಎದುರಲ್ಲಿ ಫೊಟೋ ತೆಗೆಸಿಕೊಳ್ಳುವ ಆಸೆ. ಖಂಡಿತ ಮುಂದಿನ ದಿನಗಳಲ್ಲಿ ಹೋಗೇಹೋಗ್ತೀನಿ.
ಪ್ರವಾಸಕ್ಕೆ ಹೊರಡೋ ಮುನ್ನ ಯಾವ ವಿಷಯ ಹೆಚ್ಚು ಯೋಚಿಸೋದು?
ಫುಡ್. ನಾನು ಚಾರ್ ಧಾಮ್ ಹೋಗಿ ಬಂದ ನಂತರ ಮಾಂಸಾಹಾರ ಸಂಪೂರ್ಣವಾಗಿ ತ್ಯಜಿಸಿದ್ದೇನೆ. ಪ್ರವಾಸಿ ಸ್ಥಳಗಳ ವಿಶೇಷ ಫುಡ್ ಎಲ್ಲವನ್ನೂ ಟೇಸ್ಟ್ ಮಾಡಬೇಕು ಅಂತ ಆಸೆ. ರುಚಿಯಾಗಿದ್ರೆ ಸಾಕು. ತುಂಬ ಪರ್ಟಿಕ್ಯುಲರ್ ಇಲ್ಲ. ಮ್ಯಾಗಿ ತಿಂದಾದರೂ ಇರಬಲ್ಲೆ.
ಟ್ರಾವೆಲ್ ಮಾಡುವಾಗ ನಿದ್ದೆ ಮಾಡ್ತೀರೋ ಅಥವಾ ಆಕ್ಟಿವ್ ಇರ್ತೀರೋ?
ನಂಗೆ ಮೋಷನ್ ಸಿಕ್ನೆಸ್ ಇದೆ. ಆದರೆ ಅದಕ್ಕೆ ಕೇರ್ ಮಾಡದೇ ಪ್ರವಾಸ ಮಾಡ್ತಾ ಇರ್ತೀನಿ. ಟ್ರಾವೆಲ್ ಟೈಮಲ್ಲಿ ಒಂದೋ ಹೈಪರ್ ಆಕ್ಟಿವ್ ಇರ್ತೀನಿ ಇಲ್ಲಾಂದ್ರೆ ನಿದ್ದೆ ಮಾಡಿಬಿಡ್ತೀನಿ. ಇವೆರಡೂ ನಾನು ಮೋಷನ್ ಸಿಕ್ನೆಸ್‌ಗೆ ಕಂಡುಕೊಂಡಿರೋ ಪರಿಹಾರ. ಡ್ರೈ ಲೆಮನ್ ಇಟ್ಕೊಂಡಿರ್ತೀನಿ. ವಿಂಡೋ ಸೀಟ್ ಯಾರಿಗೂ ಬಿಡಲ್ಲ.
ಯಾವ ಟ್ರಾವೆಲ್ ಮೂವೀ ಇಷ್ಟ?
ಯೆ ಜವಾನಿ ಹೈ ದಿವಾನಿ ಸಿನಿಮಾ ಸಿಕ್ಕಾಪಟ್ಟೆ ಇಷ್ಟ. ಅದನ್ನು ನೋಡಿದಾಗಿನಿಂದ ಮನಾಲಿಗೆ ಹೋಗೋ ಆಸೆ ಜಾಸ್ತಿ ಆಗಿದೆ. ಮೊದಲಿಂದಲೂ ಸ್ನೋ ಅಂದ್ರೆ ಇಷ್ಟ ನಂಗೆ.
ಯಾವುದಾದರೂ ಸ್ಟಾರ್ ಜೊತೆ ಪ್ರವಾಸ ಹೋಗೋದಾದ್ರೆ ಯಾರ ಜತೆ ಹೋಗಬಯಸುತ್ತೀರಿ?
ಮಾತನಾಡೋಕೆ, ಸಹಪ್ರಯಾಣಕ್ಕೆ ಕಂಫರ್ಟ್ ಇದ್ದುಬಿಟ್ಟರೆ, ಯಾರ ಜತೆಗಾದರೂ ಹೋಗಬಲ್ಲೆ. ಕಂಫರ್ಟ್ ಫೀಲ್ ಆಗೋದು ಮುಖ್ಯ. ಬೋರಿಂಗ್ ಇರಬಾರದು ಹಾಗಂತ ಅತಿ ತಲೆ ತಿನ್ನಲೂ ಬಾರದು. ನೀವು ಕೇಳ್ತಿದೀರಿ ಅಂತ ಹೇಳ್ತೀನಿ. ಸ್ಟಾರ್ ಅಂದ್ರೆ ನಂಗೆ ಯಶ್ ತುಂಬ ಇಷ್ಟ.
ಬಾಯ್ ಫ್ರೆಂಡ್ ಜತೆ ಇಂಥ ಜಾಗಕ್ಕೆ ಹೋಗಬೇಕೆಂಬ ಕನಸಿದೆಯಾ?
ನಂಗೆ ಬಾಯ್ ಫ್ರೆಂಡ್ ಇಲ್ಲ. ಭವಿಷ್ಯದಲ್ಲಿ ಜೀವನಸಂಗಾತಿ ಜತೆಗೆ ಮನಾಲಿ, ಪ್ಯಾರಿಸ್‌ನ ಐಫೆಲ್ ಟವರ್ ಇವೆರಡೂ ಕಡೆ ಹೋಗುವ ಆಸೆ ಇದೆ.
ಪ್ರವಾಸ ಹೋದಾಗ, ನಟಿಯೆಂದು ಅಭಿಮಾನಿಗಳು ಮುತ್ತಿಕೊಂಡರೆ ಹೇಗನಿಸುತ್ತದೆ?
ನಂಗೆ ಆ ಅನುಭವ ಆಗಿಲ್ಲ. ಹಾಗೆ ಆದರೂ ಅದು ನಮ್ಮ ಕೆಲಸವನ್ನು ಜನರು ಗುರುತಿಸಿ ಮೆಚ್ಚುತ್ತಿದ್ದಾರೆ ಎಂಬ ಸಂತೃಪ್ತಿ ಕೊಡುತ್ತದೆ. ಖುಷಿ ಪಡ್ತೀನಿ.
ಪ್ರವಾಸದಲ್ಲಿ ಜಾಸ್ತಿ ಕೇಳೋ ಹಾಡು ಅಥವಾ ಪ್ಲೇಲಿಸ್ಟ್?
ನಾನು ಟ್ರಾವೆಲ್ ಶುರು ಆದಾಗಿಂದ ಮುಗಿಯೋತನಕ ನಾನ್ ಸ್ಟಾಪ್ ಹಾಡು ಕೇಳ್ತೀನಿ. ಹನುಮಾನ್ ಚಾಲೀಸದಿಂದ ಶುರು ಆಗುತ್ತೆ. ಫೀಲಿಂಗ್ ಸಾಂಗ್ ಮೆಲೋಡಿ ಸಾಂಗ್ ನಿಂದ ಪಾರ್ಟಿ ಸಾಂಗ್ ತನಕ ಎಲ್ಲವೂ ಓಡ್ತಾನೇ ಇರತ್ತೆ.
ಸಾಗರದವರಾಗಿ ನೀವು ಹೊರಗಿನಿಂದ ಬಂದವರಿಗೆ ಯಾವ ಪ್ರವಾಸಿ ತಾಣಕ್ಕೆ ಕರೆದೊಯ್ತೀರಿ?
ನಾನು ತುಂಬ ಇಷ್ಟ ಪಡುವ ಜಾಗ ವರದಹಳ್ಳಿ. ಲಾಂಚ್ ಇದ್ದ ಸಮಯದಲ್ಲಿ ಸಿಗಂದೂರು ಕೂಡ ಫೇವರಿಟ್ ಆಗಿತ್ತು. ಬೇರೆ ಊರಿಂದ ಬರೋ ಫ್ರೆಂಡ್ಸ್‌ಗೆ ನಾನು ಜೋಗ್ ಫಾಲ್ಸ್, ಸಿಗಂದೂರು, ವರದಹಳ್ಳಿ ಮತ್ತು ಕೊಡಚಾದ್ರಿಗೆ ಕರೆದೊಕೊಂಡು ಹೋಗ್ತೀನಿ. ಶಿವಮೊಗ್ಗದಿಂದ ಸಾಗರಕ್ಕೆ ಹೋಗುವಾಗ ಸಿಗುವ ರಸ್ತೆ ಮತ್ತು ಅಕ್ಕ ಪಕ್ಕದ ಹಸಿರು ಮರಗಳ ಸಾಲು ಯಾವ ಫಾರಿನ್ನಿಗೂ ಕಮ್ಮಿ ಇಲ್ಲ. ನಾನು ಪ್ರತಿ ಬಾರಿ ಊರಿಗೆ ಹೋಗುವಾಗಲೂ ಆ ದೃಶ್ಯ ಕಣ್ತುಂಬಿಕೊಳ್ತೀನಿ. ಅದೊಂದು ಅದ್ಭುತ ದೃಶ್ಯ.