ಈ ದ್ವೀಪದ ತುಂಬೆಲ್ಲ ದೇವದಾಸ್‌ಗಳೇ...
ವಿಷಾನಿಲದ ತೀವ್ರತೆ ಎಷ್ಟಿರಬಹುದು ಎಂಬುದನ್ನು ತಿಳಿಯಲು ಆ ಸಮಯದಲ್ಲಿ ಕೆಲವು ಮೊಲಗಳನ್ನು ಇಲ್ಲಿಗೆ ತರಲಾಗಿತ್ತು ಮತ್ತು ಯುದ್ಧ ಮುಗಿದ ನಂತರ ಕಾರ್ಮಿಕರು ಅವುಗಳನ್ನು ಬಿಡುಗಡೆ ಮಾಡಿದರು ಎಂದು ಕೆಲವು ಮೂಲಗಳು ಹೇಳುತ್ತವೆ. ಇನ್ನೂ ಕೆಲ ಮೂಲಗಳ ಪ್ರಕಾರ ಎಪ್ಪತ್ತರ ದಶಕದಲ್ಲಿ ಶಾಲಾ ಮಕ್ಕಳ ಗುಂಪೊಂದು ಇಲ್ಲಿ ಪ್ರವಾಸದಲ್ಲಿದ್ದಾಗ ಎಂಟು ಮೊಲಗಳನ್ನು ತಂದು ಬಿಟ್ಟರು, ಅವುಗಳ ಸಂತತಿ ಈಗಿನ ಮೊಲಗಳಂತೆ.
- ವಿದ್ಯಾ ವಿ. ಹಾಲಭಾವಿ
ಅದೊಂದು ಏಳು ಲಕ್ಷ ಚದರ ಮೀಟರ್ ವಿಸ್ತೀರ್ಣದ ಪುಟ್ಟ ದ್ವೀಪ. ಅಲ್ಲಿನ ನೆಲದಲ್ಲಿ ಎತ್ತ ನೋಡಿದರೂ ಬರೀ ಮೊಲಗಳೇ. ಓಕುನೊಷೀಮಾ ಹೆಸರಿನ ಈ ದ್ವೀಪವು ಜಪಾನ್ ಒಳನಾಡಿನ ಸಮುದ್ರದಲ್ಲಿ, ಹಿರೋಷಿಮಾ ಮತ್ತು ಶಿಕೊಕು ದ್ವೀಪದ ನಡುವೆ ಇದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಈ ದ್ವೀಪವು ರಾಸಾಯನಿಕ ಯುದ್ಧಕ್ಕಾಗಿ ವಿಷಕಾರಿ ಅನಿಲವನ್ನು ತಯಾರಿಸುವ ಅತ್ಯಂತ ರಹಸ್ಯ ಮಿಲಿಟರಿ ನೆಲೆಯಾಗಿತ್ತು. ಇಂದು ಸಾವಿರಾರು ಕಾಡು ಮೊಲಗಳ ಆಶ್ರಯ ತಾಣವಾಗಿದೆ.
ಜಪಾನ್ ದೇಶವು 1925ರ ಜಿನಿವಾ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರ ಪ್ರಕಾರ ಯುದ್ಧದಲ್ಲಿ ರಾಸಾಯನಿಕ ಅಸ್ತ್ರಗಳ ಬಳಕೆಗೆ ಸಂಪೂರ್ಣ ನಿಷೇಧವಿತ್ತು. ಆದರೆ, ಅವುಗಳ ತಯಾರಿಕೆ ಹಾಗು ಸಂಗ್ರಹಣೆಗೆ ನಿಷೇಧವಿರಲಿಲ್ಲ. ಆಗ ಜಪಾನಿನ ಸೇನೆಯು 1929 ಹಾಗು 1945ರ ನಡುವೆ ಅತ್ಯಂತ ಗೌಪ್ಯವಾಗಿ ಬೃಹತ್ ಪ್ರಮಾಣದಲ್ಲಿ ವಿಷಾನಿಲ ಉತ್ಪಾದನಾ ಘಟಕಗಳನ್ನು ಈ ದ್ವೀಪದಲ್ಲಿ ಸ್ಥಾಪಿಸಿತ್ತು. ಸುಮಾರು 6000 ಟನ್‌ಗಳಷ್ಟು ರಾಸಾಯನಿಕ ಅನಿಲವನ್ನು ಇಲ್ಲಿ ಉತ್ಪಾದಿಸಲಾಗುತ್ತಿತ್ತು. ಇಲ್ಲಿನ ನಿವಾಸಿಗಳು ಮತ್ತು ಉದ್ಯೋಗಿಗಳಿಗೆ ಸ್ಥಾವರ ಏನು ಉತ್ಪಾದಿಸುತ್ತಿದೆ ಎನ್ನುವುದನ್ನು ತಿಳಿಸಿರಲಿಲ್ಲ. ಎಲ್ಲವನ್ನೂ ರಹಸ್ಯವಾಗಿ ಮುಚ್ಚಿಡಲಾಗಿತ್ತು. ಈ ರಹಸ್ಯ ಕಾಪಾಡಲು ಜಪಾನ್, ಓಕುನೊಷೀಮಾ ದ್ವೀಪದ ಅಸ್ತಿತ್ವವನ್ನೇ ಕೆಲವು ನಕ್ಷೆಗಳಿಂದ ತೆಗೆದುಬಿಟ್ಟಿತ್ತು. ಅಷ್ಟೇ ಅಲ್ಲ ಅಕಸ್ಮಾತ್ ರಾಸಾಯನಿಕದಿಂದ ವಿಪತ್ತು ಸಂಭವಿಸಿದರೂ ಇಲ್ಲಿಯೇ ಸಂಭವಿಸಲಿ ಎನ್ನುವುದು ಜಪಾನ್‌ನ ಯೋಜನೆಯಾಗಿತ್ತಂತೆ. ಇಲ್ಲಿ ಜನಸಂಖ್ಯೆ ಕಡಿಮೆ, ಟೊಕಿಯೋ ಮತ್ತು ಇತರ ಪ್ರಮುಖ ನಗರಗಳಿಂದ ಬಹಳ ದೂರದಲ್ಲಿದೆ ಎನ್ನುವ ಕಾರಣಗಳಿಂದ ಈ ದ್ವೀಪ ಸೂಕ್ತ ಎಂದು ಸೇನೆ ಭಾವಿಸಿತ್ತಂತೆ.

ಯುದ್ಧ ಮುಗಿದಾಗ ಸ್ಥಾವರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸುಡಲಾಯಿತು. ಮಿತ್ರ ಪಕ್ಷದ ಸೇನಾ ಪಡೆಗಳು ವಿಷಾನಿಲವನ್ನು ವಿಲೇವಾರಿ ಮಾಡಿದವು.
ಈ ವಿಷಾನಿಲದ ತೀವ್ರತೆ ಎಷ್ಟಿರಬಹುದು ಎಂಬುದನ್ನು ತಿಳಿಯಲು ಆ ಸಮಯದಲ್ಲಿ ಕೆಲವು ಮೊಲಗಳನ್ನು ಇಲ್ಲಿಗೆ ತರಲಾಗಿತ್ತು ಮತ್ತು ಯುದ್ಧ ಮುಗಿದ ನಂತರ ಕಾರ್ಮಿಕರು ಅವುಗಳನ್ನು ಬಿಡುಗಡೆ ಮಾಡಿದರು ಎಂದು ಕೆಲವು ಮೂಲಗಳು ಹೇಳುತ್ತವೆ. ಇನ್ನೂ ಕೆಲ ಮೂಲಗಳ ಪ್ರಕಾರ ಎಪ್ಪತ್ತರ ದಶಕದಲ್ಲಿ ಶಾಲಾ ಮಕ್ಕಳ ಗುಂಪೊಂದು ಇಲ್ಲಿ ಪ್ರವಾಸದಲ್ಲಿದ್ದಾಗ ಎಂಟು ಮೊಲಗಳನ್ನು ತಂದು ಬಿಟ್ಟರು, ಅವುಗಳ ಸಂತತಿ ಈಗಿನ ಮೊಲಗಳಂತೆ. ಅದೇನೇ ಇದ್ದರೂ ಓಕುನೊಷೀಮಾದ ಮೂಲ ಮೊಲಗಳ ಸಂತತಿ, ಪರ ಭಕ್ಷಕಗಳಿಂದ ಮುಕ್ತವಾದ ವಾತಾವರಣದಲ್ಲಿ ಬೀಡುಬಿಟ್ಟಿವೆ. ಇವುಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಪ್ರದೇಶವನ್ನು ಉಸಾಗಿ ಜೀಮಾ (ಮೊಲಗಳ ದ್ವೀಪ) ಎಂದೂ ಕರೆಯಲಾಗಿದೆ.

ಕಾಡು ಪ್ರಾಣಿಯಾಗಿದ್ದರೂ ದ್ವೀಪದಲ್ಲಿರುವ ಮೊಲಗಳು ಮನುಷ್ಯರಿಗೆ ಚೆನ್ನಾಗಿ ಒಗ್ಗಿಕೊಂಡಿವೆ. ತಿಂಡಿ ಬಯಸಿ ಸಂದರ್ಶಕರ ಸುತ್ತ ಸುಳಿಯುತ್ತವೆ. ಮುದ್ದಾಡಿ ಮಡಿಲಿನಲ್ಲಿ ಕೂರಿಸಿಕೊಂಡು ಅವುಗಳೊಂದಿಗೆ ಆಟವಾಡಬಹುದು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೊಲಗಳನ್ನು ಸಾಕಲು ಮತ್ತು ಆಹಾರ ನೀಡಲು ಅವಕಾಶವಿದೆ. ಆದರೆ ನಾಯಿ ಮತ್ತು ಬೆಕ್ಕುಗಳನ್ನು ಈ ದ್ವೀಪದೊಳಗೆ ಬಿಡುವುದಿಲ್ಲ. ಇಲ್ಲಿರುವ ರೆಸಾರ್ಟ್, ಹೊಟೇಲ್‌ಗಳಲ್ಲಿ ಮೊಲಗಳ ಆಹಾರವನ್ನು ಮಾರುತ್ತಾರೆ. ಇಂಟರ್ನೆಟ್‌ನಲ್ಲಿ ಈ ಪ್ರದೇಶ ವೈರಲ್ ಆಗಿ ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ವಿಷಾನಿಲದ ಬಗ್ಗೆ ಜನರನ್ನು ಎಚ್ಚರಿಸಲು 1988ರಲ್ಲಿ ವಿಷಾನಿಲ ವಸ್ತು ಸಂಗ್ರಹಾಲಯವನ್ನು ತೆರೆಯಲಾಗಿದೆ.
ಬಿಡಾರ ಹೂಡಲು ಸ್ವಲ್ಪ ಸ್ಠಳ, ಚಿಕ್ಕದಾದ ಗಾಲ್ಫ್ ಮೈದಾನ, ಸುಂದರವಾದ ಬೀಚ್ ಹಾಗೂ ಬಹಳಷ್ಟು ಸಂಖ್ಯೆಗಳಲ್ಲಿರುವ ಮೊಲಗಳು ಇವುಗಳ ಮಧ್ಯೆ ಸಮಯ ಕಳೆಯಲು ನೀವು ಇಲ್ಲಿಗೆ ಹೋಗಿಬನ್ನಿ.