ಓ ಸಪ್ನೋ ಕೆ ರಾಜಾ, ಓ ಸಪ್ನೋ ಕಿ ರಾಣಿ!
ರಾಣಿಪುರಮ್ ಅನ್ನು 'ಕೇರಳದ ಊಟಿ' ಎಂದು ಕೆಲವರು ಕರೆಯುತ್ತಾರೆ. ಆದರೆ ಈ ಹೋಲಿಕೆ ನನಗೇನೂ ಸರಿ ಅನಿಸುವುದಿಲ್ಲ. ರಾಣಿಪುರಮ್ ತನ್ನ ಅಸ್ತಿತ್ವವನ್ನು ಪ್ರಚುರಪಡಿಸಿಕೊಳ್ಳಲು ಊಟಿಯನ್ನು ಆಶ್ರಯಿಸಬೇಕಿಲ್ಲ. ರಾಣಿಪುರಮ್‌ಗೆ ತನ್ನದೇ ಆದ ಪ್ರತ್ಯೇಕ ಸೌಂದರ್ಯವಿದೆ. ಊಟಿ ಚಹಾ ತೋಟಗಳ ನಾಡು. ಏನೋ ಹವಾಮಾನ ಒಂದೇ ರೀತಿ ಇರಬಹುದು. ಆದರೆ ಪ್ರಾದೇಶಿಕವಾಗಿ ಎರಡೂ ಸ್ಥಳಗಳು ಭಿನ್ನವಾಗಿಯೇ ಇವೆ. ಹಾಗಾಗಿ ಈ ಹೋಲಿಕೆ ನನಗೆ ಸಮಂಜಸ ಎಂದು ಕಾಣುವುದಿಲ್ಲ.
- ನವೀನಕೃಷ್ಣ ಎಸ್. ಉಪ್ಪಿನಂಗಡಿ
ಕೇರಳ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ, ತಲಕಾವೇರಿ ವನ್ಯಜೀವಿ ಅಭಯಾರಣ್ಯದ ಸಮೀಪ ನೆಲೆಗೊಂಡಿರುವ ಮನಮೋಹಕ ತಾಣವೇ ರಾಣಿಪುರಮ್. ಸುತ್ತಲೂ ಸಾರವತ್ತಾದ ಹಸಿರು. ಆಹ್ಲಾದಕರ ವಾತಾವರಣ. ಚುಮು ಚುಮು ಚಳಿಯ ಮಧ್ಯೆ ಬೆಟ್ಟವನ್ನೇರುವಾಗ ಬೀಸುವ ತಂಗಾಳಿ. ಆಹಾ.. ಆ ಕ್ಷಣದ ಸಂತೋಷವನ್ನು ಪದಗಳಲ್ಲಿ ಹಿಡಿದಿಡುವುದು ದುರ್ಲಭವೇ ಸರಿ. ಕರ್ನಾಟಕದಿಂದ ಕಾಸರಗೋಡು ಜಿಲ್ಲೆಯ ಸರಹದ್ದಿನಲ್ಲಿ ಸ್ವಲ್ಪ ಮುಂದೆ ಹೋದರೆ ಪಾನತ್ತಾಡಿಯ ಹತ್ತಿರವಿದೆ ರಾಣಿಪುರಮ್. ಇಲ್ಲಿ ಪ್ರವಾಸಿಗರ ಗದ್ದಲಗಳಿಲ್ಲ. ಇದು ಜಾಹಿರಾತಿನಿಂದ ಮುಳುಗಿಹೋಗಿಲ್ಲ. ಪ್ರಕೃತಿಯೊಂದಿಗೆ ನಾವು ಮುಕ್ತವಾಗಿ ಸಂಭಾಷಿಸಬಹುದಾದ ಸ್ಥಳವೇ ಇದು. ಇಲ್ಲಿ ಗಾಳಿ ಮಾತನಾಡುತ್ತದೆ. ತಂಗಾಳಿಗೆ ಕುಣಿಯುವ ಹುಲ್ಲು ಕವಿತೆಗಳನ್ನು ಸೃಜಿಸುತ್ತವೆ. ಮಂಜು ನಮ್ಮ ಮುಖವನ್ನು ತಟ್ಟಿ “ಓಹ್.. ನೀನು ಬಂದೆಯಾ.. ? ಬಾ.. ಸದಾ ಸ್ವಾಗತ ನಿನಗೆ..” ಎಂದು ಬರಮಾಡಿಕೊಳ್ಳುತ್ತದೆ.
ಬೆಟ್ಟದ ಮೇಲೆ ನಾವು
ಒಂದು ರಜಾ ದಿನ ಪುತ್ತೂರಿನಿಂದ ರಾಣಿಪುರಮ್‌ಗೆ ಹೊರಟ ನಾವು ಸುಳ್ಯ, ಆಲೆಟ್ಟಿ ಮಾರ್ಗವಾಗಿ ಸಾಗಿದೆವು. ಆಲೆಟ್ಟಿ ಕಳೆದ ಮೇಲೆ ಅಸಂಖ್ಯ ತಿರುವುಗಳಿರುವ ರಸ್ತೆ ಆರಂಭವಾಯಿತು. ಅಲ್ಲಿಯವರೆಗೆ ಉಲ್ಲಾಸದಿಂದಿದ್ದ ನನ್ನ ದೇಹ ಕೈಕೊಟ್ಟಿತು! ತಿರುವು-ಮುರುವುಗಳ ರಸ್ತೆ ನನಗಂತೂ ಚೂರೂ ಹಿಡಿಸಲಿಲ್ಲ. ರಾಣಿಪುರಮ್ ತಲುಪಿ ಗಾಡಿಯಿಂದ ಕೆಳಗಿಳಿದಾಗ ರಾಶಿ ಸಮಾಧಾನವಾಯಿತು. ಬೇಸ್‌ಮೆಂಟ್‌ನಲ್ಲಿ ಸುಧಾರಿಸಿದಾಗ ಉಲ್ಲಾಸ ಮತ್ತೆ ಮರಳಿತು.
ಸ್ಟಾರ್ಟಿಂಗ್ ಪಾಯಿಂಟ್‌ನಲ್ಲಿ ಕೇವಲ ಒಂದು ಅಂಗಡಿ ಮಾತ್ರವೇ ಲಭ್ಯವಿದೆ. ಅಲ್ಲಿಂದ ಗುಡ್ಡದ ಕಡೆಗೆ ತಿನಿಸುಗಳನ್ನು ಒಯ್ಯಬಹುದು. ಆದರೆ ಇಲ್ಲೆಲ್ಲೂ ವೆಜ್ ಹೊಟೇಲ್‌ಗಳ ಸುಳಿವಿಲ್ಲ. ಹಾಗಾಗಿ ವೆಜ್ ಮಾತ್ರವೇ ತಿನ್ನುವವರು ಮೊದಲೇ ಬುತ್ತಿಯಲ್ಲಿ ಕಟ್ಟಿ ಆಹಾರವನ್ನು ತರುವುದು ಸೂಕ್ತ. ಟ್ರೆಕ್ಕಿಂಗ್ ಟ್ರೇಲ್ ಆರಂಭಕ್ಕೂ ಮುನ್ನ ಇಲ್ಲಿ ಕೇರಳ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಇದೆ. ಆರಂಭದಲ್ಲಿ ಟಿಕೆಟ್ ಮಾಡಿಸಿಕೊಂಡು ಫ್ರೆಶ್‌ಅಪ್ ಆಗಿ ನಾವು ಹೊರಟೆವು. ಇಲ್ಲಿ ಸುಸಜ್ಜಿತವಾದ ಶೌಚಾಲಯದ ವ್ಯವಸ್ಥೆ ಇದೆ.

ಇಲ್ಲಿ ಒಬ್ಬರಿಗೆ ತಲಾ 50 ರುಪಾಯಿ ಟಿಕೆಟ್ ಬೆಲೆಯಿದೆ. ಕ್ಯಾಮೆರಾವೇನಾದರೂ ತಂದಿದ್ದರೆ ಹೆಚ್ಚುವರಿ 50 ರುಪಾಯಿ. ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ನಮ್ಮಲ್ಲೆನ್ನಾದರೂ ಪ್ಲಾಸ್ಟಿಕ್ ವಸ್ತುಗಳಿದ್ದರೆ ಅದನ್ನು ಕೊಂಡೊಯ್ಯಲು ಬಿಡುವುದಿಲ್ಲ. ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ನಡೆ. ಕುಮಾರ ಪರ್ವತ ಚಾರಣದಲ್ಲಿ ಗಿರಿಗದ್ದೆಯಲ್ಲಿ ಚೆಕ್ ಪೋಸ್ಟ್ ಬರುತ್ತದೆ. ಅಲ್ಲಾದರೂ ನಮ್ಮಲ್ಲಿರುವ ಪ್ಲಾಸ್ಟಿಕ್ ವಸ್ತುಗಳನ್ನು ಎಣಿಸುತ್ತಾರೆ. ಅದಕ್ಕೆ ತಕ್ಕಂತೆ ನಾವಲ್ಲಿ ಡೆಪಾಸಿಟ್ ಇಟ್ಟು ವಸ್ತುಗಳನ್ನು ಮುಂದೆ ತೆಗೆದುಕೊಂಡು ಹೋದರಾತು. ಆದರೆ ಬರುವಾಗಲೂ ಅಷ್ಟೇ ಸಂಖ್ಯೆಯ ಪ್ಲಾಸ್ಟಿಕ್ ವಸ್ತುಗಳಿರಬೇಕು. ಆಗ ಮಾತ್ರ ನಾವಿಟ್ಟ ಡೆಪಾಸಿಟ್ ನಮಗೆ ಸಿಗುತ್ತದೆ. ಇದೂ ಕೂಡ ಒಳ್ಳೆಯ ನಡೆಯೇ ಅಲ್ಲವೇ?
ರಾಣಿಪುರಮ್‌ಗೆ ಸಾಗುವಾಗ ಸಿಗುವ ಮಾರ್ಗ ರಾಣಿಪುರಮ್ ಹತ್ತಿರ ಹತ್ತಿರ ಬರುತ್ತಿದ್ದಂತೆ ಬದಲಾಗುತ್ತದೆ. ಗದ್ದಲಮಯ ಪೇಟೆ, ಹೊಟೇಲ್‌ಗಳು , ವಾಹನಗಳ ಸದ್ದು, ಮಾರುಕಟ್ಟೆಯ ಗದ್ದಲ ಇವೆಲ್ಲವೂ ಮಾಯವಾಗಿ ಹಸಿರು ಗಿಡಗಂಟಿಗಳು, ದಟ್ಟ ಕಾಡಿನ ಮಣ್ಣಿನ ದಟ್ಟ ವಾಸನೆ ನಮ್ಮ ಮೂಗಿಗಡರುತ್ತದೆ. ನಾವು ನಿಧಾನವಾಗಿ ಬೋರು ಹೊಡೆಸುವ ನಗರ ಜೀವನವನ್ನು ತೊರೆದು ಶಾಂತಿಯನ್ನೇ ಉಸಿರಾಡುತ್ತಿರುವ ರಾಣಿಪುರಮ್‌ನ ಮಡಿಲಲ್ಲಿರುತ್ತೇವೆ.

ಟ್ರೆಕ್ಕಿಂಗ್‌ಗೆ ದಿ ಬೆಸ್ಟ್
ಕಾಡಿನ ಮೂಲಕ ನಮ್ಮ ಚಾರಣ ಆರಂಭಗೊಳ್ಳುತ್ತದೆ. ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆ ನಮ್ಮ ಪ್ರಯಾಣಕ್ಕೆ ಜತೆಯಾಗುತ್ತದೆ. ಮುಂದುವರಿದಂತೆ ಕಾಂಕ್ರೀಟು ಕಾಡಿನ ಯಾಂತ್ರಿಕ ಜೀವನವನ್ನು ಬಿಟ್ಟು ಮೌನಕ್ಕೆ ಜಾರಿದಂತೆ ಭಾಸವಾಗುತ್ತದೆ. ಆರಂಭದಲ್ಲಿ ಶಬರಿಮಲೆಯ ಅಳುದಾ ಬೆಟ್ಟ ನೆನಪಾಗುತ್ತದೆ. ಕ್ರಮೇಣ ಸಾಗಿದಂತೆ ಹುಲ್ಲಿನ ಮೇಲ್ಚಾವಣಿಯಿರುವ ಸುಂದರ ಮನೆ ಸಿಗುತ್ತದೆ. ಅಲ್ಲಿ ವಿಶ್ರಮಿಸಿ ಮುಂದೆ ಹೋದರೆ ಓಪನ್ ಜಾಗಗಳು ಸಿಗುತ್ತವೆ. ಅಲ್ಲಲ್ಲಿ ಕಾಡು ಸಿಗುವುದು ಬಿಟ್ಟರೆ ಮತ್ತೆಲ್ಲೂ ಮರಗಳ ಪತ್ತೆಯಿಲ್ಲ. ಹುಲ್ಲುಗಾವಲುಗಳು ಕಿಮೀಗಳಾಚೆಗೂ ವಿಸ್ತರಿಸಿರುವುದನ್ನು ನಾವಿಲ್ಲಿ ಕಾಣಬಹುದು. ಗೆಳೆಯರೋ, ಕಝಿನ್ ಗಳೋ ಸಿಕ್ಕರೆ ಹರಟುತ್ತಾ ಹೋದರೆ ಮುಂದೆ ಸಾಗಿದ್ದೇ ಅರಿವಿಗೆ ಬರುವುದಿಲ್ಲ. ಮಳೆಗಾಲದಲ್ಲೇನಾದರೂ ರಾಣಿಪುರಮ್‌ಗೆ ಹೋದರೆ ಜೋಕೆ.. ಜಿಗಣೆಗಳ ಬಗ್ಗೆ ಎಚ್ಚರಿಕೆಯಿಂದಿರಿ. ಜಿಗಣೆಗಳು ಕಾಟಕೊಡುವುದೇ ಆರಂಭಿಕ ಹಂತದಲ್ಲಿ ಸಿಗುವ ಈ ಕಾಡಿನಲ್ಲಿ!
ರಾಣಿಪುರಮ್ ಅನ್ನು 'ಕೇರಳದ ಊಟಿ' ಎಂದು ಕೆಲವರು ಕರೆಯುತ್ತಾರೆ. ಆದರೆ ಈ ಹೋಲಿಕೆ ನನಗೇನೂ ಸರಿ ಅನಿಸುವುದಿಲ್ಲ. ರಾಣಿಪುರಮ್ ತನ್ನ ಅಸ್ತಿತ್ವವನ್ನು ಪ್ರಚುರಪಡಿಸಿಕೊಳ್ಳಲು ಊಟಿಯನ್ನು ಆಶ್ರಯಿಸಬೇಕಿಲ್ಲ. ರಾಣಿಪುರಮ್‌ಗೆ ತನ್ನದೇ ಆದ ಪ್ರತ್ಯೇಕ ಸೌಂದರ್ಯವಿದೆ. ಊಟಿ ಚಹಾ ತೋಟಗಳ ನಾಡು. ಏನೋ ಹವಾಮಾನ ಒಂದೇ ರೀತಿ ಇರಬಹುದು. ಆದರೆ ಪ್ರಾದೇಶಿಕವಾಗಿ ಎರಡೂ ಸ್ಥಳಗಳು ಭಿನ್ನವಾಗಿಯೇ ಇವೆ. ಹಾಗಾಗಿ ಈ ಹೋಲಿಕೆ ನನಗೆ ಸಮಂಜಸ ಎಂದು ಕಾಣುವುದಿಲ್ಲ. ಪ್ರವಾಸಿಗರು ಊಟಿಯ ಅಂದವನ್ನು ಕೆಡಿಸಿಬಿಟ್ಟಿದ್ದಾರೆ ಎಂಬುದು ನಾವು ಒಪ್ಪಲೇಬೇಕಾದ ಸತ್ಯ. ಅಲ್ಲೆಲ್ಲ ಗದ್ದಲವೋ ಗದ್ದಲ. ರಾಣಿಪುರಮ್ ಅದಕ್ಕೆ ತದ್ವಿರುದ್ಧ. ಊಟಿಯಲ್ಲಿ ಚಳಿಯಲ್ಲಿ ಗದ್ದಲಮಯ ವಾತಾವರಣವಿದ್ದರೆ; ಇಲ್ಲಿ ಚಳಿಯಲ್ಲಿ ಆಹ್ಲಾದಕರ ವಾತಾವರಣ!

ಎತ್ತರೆತ್ತರ ಏರುತ್ತಾ ಹೋದಂತೆ……..
ಬೆಟ್ಟವನ್ನು ಏರುತ್ತಿದ್ದಂತೆ ಈಗ ಬೆಟ್ಟದಂಚನ್ನು ತಲುಪಿದೆವು ಎಂಬಂತೆ ಭಾಸವಾಗುತ್ತದೆ! ಆದರೆ ಇಲ್ಲ, ಇನ್ನೂ ನಡೆಯಬೇಕು.. ಮೇಘಗಳು ಅಲ್ಲಲ್ಲಿ ಇಣುಕಲು ಶುರುಹಚ್ಚಿಕೊಳ್ಳುತ್ತವೆ. ಆಕಾಶ ಇನ್ನಷ್ಟು ಹತ್ತಿರವಾಗುತ್ತದೆ! ಮಲೆಯ ಮೇಲಿನ ಗಾಳಿ ಆಹಾ.. ಅದು ಇಲ್ಲಿ ಬಂದವರಿಗಷ್ಟೇ ಅರಿವಾಗುವ ವಿಷಯ. ಅದು ಚಳಿಯೂ ಹೌದು, ಉಷ್ಣತೆಯ ಶೇಷವೂ ಅದರೊಳಗಿದೆ. ಹಳೆಯ ಮಣ್ಣಿನ ವಾಸನೆ, ಕಾಡಿನ ತೇವಭರಿತ ಎಲೆಗಳು ಗಿಡಗಳಲ್ಲಿರುವ ಹೂವಿನ ಸುಗಂಧ, ಕಾಫಿಯ ಘಮ —ಎಲ್ಲವನ್ನೂ ಒಂದೇ ಉಸಿರಿನಲ್ಲಿ ತುಂಬಿಕೊಳ್ಳಬಹುದು!
ಗಿಡಗಂಟಿಗಳ ನಡುವೆ ಶಿಥಿಲಗೊಂಡಂತಿರುವ ಕೆಲವು ಕಲ್ಲಿನ ಕುರುಹುಗಳು ಹಳೆಯ ರಾಜಮನೆತನದ ಕಥೆಗಳನ್ನೋ, ಮಠದ ನೆಲೆಗಳನ್ನೋ ಸೂಚಿಸುವಂತಿದೆ. 'ರಾಣಿ' ಎಂಬ ಪದವು ಇಲ್ಲಿನ ಮೌನಕ್ಕೆ ತಕ್ಕಂತೆ ಗಂಭೀರತೆಯನ್ನು ಕೊಡಲು, 'ಪುರಂ' ಎಂಬುದು ಸ್ಥಳವನ್ನು ಸೂಚಿಸಲು ಬಂದಿದ್ದೆಂದು ಕೆಲವರು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಹೆಸರಿಗಿಂತ ಸ್ಥಳವೇ ದೊಡ್ಡ ಕಾವ್ಯ! ಅದು ಭಾಷೆಯನ್ನು ಮೀರಿದ್ದು!
ಮೇಲೇರಿದೊಡನೆ ವಿಸ್ಮಯದ ದೃಶ್ಯ. ದಿಗಂತದವರೆಗೂ ಹರಡಿರುವ ಹುಲ್ಲುಗಾವಲು. ಏಕಾಏಕಿ ಬಿಸಿಲು ಬಂದು ಮಂಜು ಕೈಕೊಡುತ್ತದೆ! ಕ್ಷಣದಲ್ಲೇ ಮತ್ತೆ ಗಾಳಿ ಕಣ್ಣುಮುಚ್ಚುವಂತೆ ಮಂಜಿನೊಂದಿಗೆ ಬರುತ್ತದೆ! ವಿಜಯನಗರದ ಕೋಟೆಯ ಮೇಲೆ ನಿಂತಂತೆ, ಕೆಳಗಿರುವ ಕಾಡಿನ ಹಸಿರು, ಹರಿದಿರುವ ಹಳ್ಳಗಳು, ಕಾಸರಗೋಡಿನ ಹಳ್ಳಿಗಳು—all in a single vast canvas! ಪ್ರವಾಸಿಗನ ಕಣ್ಣು ಮಾತ್ರವಲ್ಲ, ಹೃದಯವೂ ತುಂಬುತ್ತದೆ.
ಸಂಜೆಯೇನಾದರೂ ನಾವು ಟಾಪ್‌ನಲ್ಲಿದ್ದರೆ ಅದು ಬೇರೆಯೇ ಲೋಕವನ್ನು ಸೃಷ್ಟಿಸುತ್ತದೆ. ಚಳಿ, ಬಣ್ಣ ಬದಲಾಯಿಸುವ ಆಕಾಶ, ಬೆಟ್ಟದ ಬೆನ್ನುಬಾಗಿದಂತೆ ಬಿದ್ದಿರುವ ನೆರಳುಗಳು… ಎಲ್ಲವು ಒಂದೊಂದು ತತ್ತ್ವದಂತೆ ಭಾಸವಾಗುತ್ತದೆ! ಪ್ರಕೃತಿಯಲ್ಲೊಬ್ಬ ಗುರು ಇದ್ದರೆ ರಾಣಿಪುರಮ್ ಅವನ ಪಠ್ಯಪುಸ್ತಕವಾಗಿದೆ ಎಂಬ ಭಾವ ಮೂಡುತ್ತದೆ! ಇಲ್ಲಿ ನಿಂತಾಗ "ಯಾಂತ್ರಿಕ ಬದುಕಿನಲ್ಲಿ ಮರೆತಿದ್ದ ಶಾಂತಿ ಇಷ್ಟು ಹತ್ತಿರದಲ್ಲಿತ್ತೇ?" ಎಂಬ ಯೋಚನೆ ಉಂಟಾಗುತ್ತದೆ!

ಅದು ಬೇರೆಯದ್ದೇ ಲೋಕ
ನಗರಕ್ಕೆ ಹಿಂದಿರುಗುವಾಗ ರಸ್ತೆ ಅದೇ, ಗಾಳಿಯೂ ಅದೇ, ಆಕಾಶವೂ ಅದೇ. ಆದರೆ ಹಿಂದಿರುಗುತ್ತಿರುವ ಪ್ರವಾಸಿಗನು 'ಹಾಗೆಯೇ' ಇರುವುದಿಲ್ಲ. ರಾಣಿಪುರಮ್ ಅವನೊಳಗೆ ಏನನ್ನೋ ಬೆಳಗಿಸಿದೆ! ಬಾಹ್ಯ ಮೌನದ ಹಿಂದೆ ಅಡಗಿರುವ ಆಂತರಿಕ ಮೌನದ ಅಗತ್ಯತೆಯ ಅರಿವು ಮೂಡಿಸಿದೆ! ಜೀವನದ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕೆಂಬ ಹಠ ಬೇಡ. ಕೆಲವು ಬಾರಿ ಪ್ರಶ್ನೆಯೇ ಸಾಕು, ಪ್ರಪಂಚವೇ ಉತ್ತರ ಕೊಡುತ್ತದೆ. ರಾಣಿಪುರಮ್ ಅಂಥ ಪ್ರಶ್ನೆಗಳಿಗೆ ಉತ್ತರ ಕೊಡುವ ಬೆಟ್ಟ. ಒಬ್ಬ ಪ್ರವಾಸಿಗ ಇಲ್ಲಿಂದ ಹಿಂದಿರುಗುವಾಗ ಅವನ ಬ್ಯಾಗ್‌ಗೆ ಹೊಸ ವಸ್ತುಗಳು ಸೇರುವುದಿಲ್ಲ. ಆದರೆ ಹೃದಯಕ್ಕೆ ನೆಮ್ಮದಿ, ಸೌಂದರ್ಯ, ಉಲ್ಲಾಸ, ಮನಸ್ಸಿಗೆ ಮೌನದ ಗೀತೆ ಸೇರುತ್ತದೆ!
ರಾಣಿಪುರಮ್‌ಗೆ ಹತ್ತಿರದಲ್ಲಿರುವ ರೈಲ್ವೇ ನಿಲ್ದಾಣ ಕಾಜ್ಞಂಗಾಡ್. ಇದು ಸುಮಾರು 45 ಕಿಮೀ ದೂರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸುಮಾರು 125 ಕಿಮೀ ದೂರದಲ್ಲಿದೆ). ರೈಲಿನಲ್ಲಿ ಬಂದವರು ಕಾಜ್ಞಂಗಾಡ್‌ನಲ್ಲಿ ಬಸ್ ಹಿಡಿದು ಪಾನತ್ತಾಡಿಯವರೆಗೆ ಬಂದು ಕೊನೆಯ 9 ಕಿಮೀ ಅನ್ನು ಜೀಪ್ ಅಥವಾ ಟ್ಯಾಕ್ಸಿ ಮೂಲಕ ಪ್ರಯಾಣಿಸುವುದು ಸೂಕ್ತ. ಪಾನತ್ತಾಡಿಯಿಂದ ಮುಂದೆ ಸಾರ್ವಜನಿಕ ಸಾರಿಗೆ ಕಡಿಮೆ ಇರುವುದರಿಂದ ಬೆಳಗ್ಗೆಯೇ ಪ್ರಯಾಣಾರಂಭಿಸಿ, ಮಂಜುಗಟ್ಟುವ ಸಂಜೆಗೂ ಮೊದಲು ರಾಣಿಪುರಮ್ ತಲುಪುವುದು ಬಹಳ ಒಳ್ಳೆಯದು. ಅಂದಹಾಗೆ ಇಲ್ಲಿಯೇ ಸಮೀಪದಲ್ಲಿರುವ ಗ್ಲಾಸ್ ಬ್ರಿಡ್ಜ್‌ನ ಅನುಭವವನ್ನು ನಿಮ್ಮ ಜೋಳಿಗೆಗೆ ತುಂಬಿಸಿಕೊಳ್ಳುವುದನ್ನು ಮರೆಯಬೇಡಿ ಆಯ್ತಾ..!