ಸೈಟ್ ಮಾರಿ ಸೈಟ್ ಸೀಯಿಂಗ್!
ನಾವು ಬೆಂಗಳೂರಿನಿಂದ ಪ್ರಯಾಣ ಪ್ರಾರಂಭಿಸಿದರೂ ಗುಂಪಿನ ಜತೆ ಸೇರಿದ್ದು, ಗೋರಕ್ ಪುರದಿಂದ. ಏಜೆನ್ಸಿಯವರ ಪ್ರಕಾರ 65 ದಿನಗಳ ಪ್ರವಾಸವಾದರೂ, ನಮಗದು 75 ದಿನಗಳು. ಯಾಕೆಂದರೆ ಬೆಂಗಳೂರಿನಿಂದ ಗೋರಕ್ ಪುರಕ್ಕೆ ವಾರಕ್ಕೆ ಮುಂಚೆ ಹೊರಟು, ದಾರಿ ಮಧ್ಯೆ ಹೈದರಾಬಾದ್, ನಾಗ್ಪುರ್, ಮಧ್ಯಪ್ರದೇಶ, ಬೇಡಾ ಘಾಟ್, ಕಾಶಿಯನ್ನು ನೋಡಿಕೊಂಡು ಗೋರಕ್ ಪುರ ಸೇರಿದೆವು. ಅಲ್ಲಿಂದ ಶುರುವಾಗಿದ್ದು ಲಂಡನ್ ಪ್ರಯಾಣ.
ಮೂಲತಃ ಮೊಳಕಾಲ್ಮೂರಿನವರಾದ ಶ್ರೀನಿವಾಸ್ ಎಂ.ಜಿ. ಫಾಣಿಭಾತೆ, ಉದ್ಯೋಗದ ನಿಮಿತ್ತ 25 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದವರು. ಲೆಕ್ಕವಿಲ್ಲದಷ್ಟು ರೋಡ್ ಟ್ರಿಪ್ ಗಳನ್ನು ಮಾಡಿದ್ದರೂ ಬೆಂಗಳೂರಿನಿಂದ ಲಂಡನ್‌ಗೆ ರೋಡ್ ಟ್ರಿಪ್ ಮಾಡುವ ಇವರ ಕನಸು ವರ್ಷದ ಹಿಂದಷ್ಟೇ ನನಸಾಗಿದೆ. ಐಟಿ ಉದ್ಯೋಗಿಯಾದರೂ ಬಿಡುವು ಮಾಡಿಕೊಂಡು ತಮ್ಮ ಫೋಕ್ಸ್‌ವ್ಯಾಗನ್ ನ ಟಿಗ್ವಾನ್ ಕಾರನ್ನೇರಿ ದೇಶಗಳ ಗಡಿ ದಾಟಿ ಲಂಡನ್ ತಲುಪಿಯೇ ಬಿಟ್ಟಿದ್ದರು. ಅವರ ಬೆಂಗಳೂರು ಟು ಲಂಡನ್ ರೋಡ್ ಟ್ರಿಪ್ ಅನುಭವಗಳು ಪ್ರವಾಸಿ ಪ್ರಪಂಚದೊಂದಿಗೆ.
ದೂರದ ಪ್ರಯಾಣವೆಂದರೆ ರೈಲು, ಅದೂ ತಪ್ಪಿದರೆ ವಿಮಾನವನ್ನೇರುವ ಇಂದಿನ ದಿನಗಳಲ್ಲಿ ಕಾರಿನಲ್ಲೇ ಲಂಡನ್ ಪ್ರಯಾಣ ಮಾಡುವ ಆಸೆ ಹುಟ್ಟಿಕೊಂಡಿದ್ದು ಹೇಗೆ ?
ನಾನು ರೈಲ್ವೆ ಸಾರಿಗೆಯಲ್ಲಿ ಪ್ರಯಾಣಿಸಿದ್ದೇನೆ. ವಿಮಾನವನ್ನೇರಿ ಪ್ರವಾಸಕ್ಕೆ ಹೋಗಿದ್ದೇನೆ. ಆದರೆ ರೋಡ್ ಟ್ರಿಪ್‌ನಲ್ಲಿ ಸಿಗುವ ಮಜವೇ ಬೇರೆ. ನನಗಿರುವ ಡ್ರೈವಿಂಗ್ ಹುಚ್ಚು ನನ್ನನ್ನು ಅನೇಕ ಪ್ರವಾಸಗಳನ್ನು ಕೈಗೊಳ್ಳುವಂತೆ ಮಾಡಿದೆ. ಲೇಹ್ ಲಡಾಖ್, ಅರುಣಾಚಲ ಪ್ರದೇಶ್, ಅಸ್ಸಾಂ, ಮೇಘಾಲಯ, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್ ಹೀಗೆ ಅನೇಕ ಕಡೆಗಳಿಗೆ ರೋಡ್ ಟ್ರಿಪ್ ಮಾಡಿದ್ದೇನೆ. ಅದು ನನ್ನ ಪ್ಯಾಶನ್. ವಿಮಾನ, ರೈಲು ಪ್ರಯಾಣದಿಂದ ನೀವು ನಿಗದಿಪಡಿಸಿದ ಸ್ಥಳಗಳಿಗಷ್ಟೇ ಭೇಟಿ ನೀಡಿ ವಾಪಸ್ಸಾಗುತ್ತೀರಿ. ಆದರೆ ರೋಡ್ ಟ್ರಿಪ್ ಮಾಡಿದರೆ ಸುತ್ತಲಿನ ಪರಿಸರವನ್ನು ನೋಡುತ್ತಾ, ಎಲ್ಲದರ ಬಗೆಗೂ ಮಾಹಿತಿ ತಿಳಿಯುತ್ತಾ, ಸ್ಥಳೀಯ ಆಹಾರವನ್ನು ಸವಿಯುತ್ತಲೇ ಪ್ರಯಾಣದ ಜತೆಗೆ ಪ್ರವಾಸವನ್ನು ಆನಂದಿಸಬಹುದು. ನನ್ನ ಪತ್ನಿಯೂ ನನ್ನದೇ ಆಸಕ್ತಿ, ಅಭಿರುಚಿಗಳನ್ನು ಹೊಂದಿದ್ದು, ಸಮಾನ ಯೋಚನೆಯ ಕಾರಣದಿಂದ ಇದು ಸಾಧ್ಯವಾಗಿದೆ.

ಪ್ರಯಾಣದ ರೂಪುರೇಷೆ ಸಿದ್ಧಮಾಡಿಕೊಂಡಿದ್ದು ಹೇಗೆ ?
ವರ್ಷಗಳ ಹಿಂದೆಯೇ ಈ ರೋಡ್ ಟ್ರಿಪ್ ಹೋಗುವ ಮನಸ್ಸಾಗಿತ್ತು. ಅದು ನನ್ನ ಜೀವಮಾನದ ಆಸೆ ಕೂಡ. ಅದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಲೇ ಬಂದೆ. ಅಂದರೆ ಲಂಡನ್ ಪ್ರಯಾಣಕ್ಕೆ ಯಾವ ದೇಶಗಳ ಮೂಲಕ ಸಾಗಬೇಕು, ತಯಾರಿ ಹೇಗಿರಬೇಕು ಎಂದೆಲ್ಲ. ಆದರೆ ಕೊರೋನಾ ಬಂದು ನನ್ನ ಆಸೆಗಳಿಗೆ ತಣ್ಣೀರೆರಚಿದಂತಾಗಿತ್ತು. ಆದರೂ ಕೊರೋನಾ ಕಾಲ ಕಳೆದಂತೆ ಮತ್ತೆ ಚಿಗುರಿಕೊಂಡ ಕನಸಿಗೆ ದೆಹಲಿ ಹಾಗೂ ಮುಂಬೈ ಮೂಲದ ʻಅಡ್ವೆಂಚರಸ್ ಓವರ್ ಲ್ಯಾಂಡ್ʼ ಎಂಬ ಟ್ರಾವೆಲ್ ಕಂಪೆನಿ ನೀರುಣಿಸಿತ್ತು. ಅವರು ವರುಷಕ್ಕೊಂದು ಇಂಥ ಪ್ಲ್ಯಾನ್ಸ್ ಮಾಡುತ್ತಾರೆಂದು ತಿಳಿದು ಅವರ ಸಹಕಾರದೊಂದಿಗೆ ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡೆ. ಹೀಗೆ ಸ್ವಂತ ಕಾರಿನಲ್ಲಿ ಬೆಂಗಳೂರು ಟು ಲಂಡನ್ ಪ್ರವಾಸ ಶುರುವಾಗಿದ್ದು.
ಉದ್ಯೋಗ ಹಾಗೂ 75 ದಿನಗಳ ಈ ರೋಡ್ ಟ್ರಿಪ್ ಹೇಗೆ ಸಾಧ್ಯವಾಯ್ತು ?
ನಾನು ಕಳೆದ 25 ವರ್ಷಗಳಿಂದಲೂ ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದು, ಇಂದು ಮ್ಯಾನೇಜರ್ ಹುದ್ದೆಯಲ್ಲಿದ್ದೇನೆ. ಒಂದು ಕಂಪನಿಯಲ್ಲಿ ಉದ್ಯೋಗಿಯಾದವನು ಕ್ರೆಡಿಬಿಲಿಟಿ ಗಳಿಸಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಸಮಯದೊಳಗಾಗಿ ಕೆಲಸ ಮುಗಿಸಿಕೊಂಡು, ಫ್ರೀ ಟೈಂನಲ್ಲಿ ನಿಮಗಾಗಿ, ನಿಮ್ಮವರಿಗಾಗಿ ಮೀಸಲಿಡಬೇಕು. ನನ್ನ ವಿಚಾರಕ್ಕೆ ಬಂದರೆ ನನ್ನ ಬಳಿ ಕ್ಯಾರೀ ಫಾರ್ವರ್ಡ್ ಆದ ರಜೆಗಳು ಅನೇಕವಿತ್ತು. ಕಂಪನಿಯ ಅನುಮತಿಯ ಮೇರೆಗೆ ಅವೆಲ್ಲವನ್ನೂ ಬಳಕೆ ಮಾಡಿಕೊಂಡು ಪ್ರವಾಸಕ್ಕೆ ಹೋಗಿ ಬಂದಿದ್ದೆ.

ಬಿಗ್ ಟ್ರಿಪ್ ಎಂದ ಮೇಲೆ ಬಿಗ್ ಬಜೆಟ್ ಬೇಕಾಗುತ್ತದೆ. ಬಜೆಟ್ ಪ್ಲ್ಯಾನಿಂಗ್ ಬಗ್ಗೆ ತಿಳಿಸಿ.
ಹೌದು, ಖಂಡಿತವಾಗಿಯೂ. ಯಾವುದೇ ಏಜೆನ್ಸಿಯವರನ್ನು ಸಂಪರ್ಕಿಸದೆಯೇ ನಾವೇ ಪ್ರವಾಸ ಹೋಗಿ ಬಂದಿದ್ದರೆ ಹೆಚ್ಚು ಮೊತ್ತ ಆಗುತ್ತಿರಲಿಲ್ಲವೇನೋ. ಆದರೆ ನಾವು ಏಜೆನ್ಸಿ ಮೂಲಕ ಹೋಗಿರುವ ಕಾರಣಕ್ಕೆ ಸ್ವಲ್ಪ ದುಬಾರಿಯೇ ಆಯ್ತು. ಒಬ್ಬರಿಗೆ 25 ಲಕ್ಷ ಹಾಗೂ ಹೆಚ್ಚುವರಿ ಟ್ಯಾಕ್ಸ್, ಅದಕ್ಕೆ ಹೊರತಾಗಿ ನಮ್ಮ ಖರ್ಚು ವೆಚ್ಚಗಳೆಲ್ಲವೂ ಸೇರಿ ಇಬ್ಬರಿಗೆ ಸುಮಾರು 64ಲಕ್ಷ ರುಪಾಯಿಯಾಗಿತ್ತು. ದುಡ್ಡಿರಲಿಲ್ಲವಾದರು ಹೋಗಲೇ ಬೇಕೆಂಬ ಮಹದಾಸೆಯಿಂದಾಗಿ. ಸೈಟ್ ಒಂದನ್ನು ಮಾರಿ, ಪ್ರವಾಸಕ್ಕೆ ಹೋಗಿ ಬಂದಿದ್ದಾಯ್ತು.
ಪ್ರವಾಸದ ಪ್ಲ್ಯಾನಿಂಗ್ ಹೇಗಿತ್ತು?
ಆರ್ಥಿಕವಾಗಿ ತಯಾರಿ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾಯ್ತು, ಆದರೆ ಕುಟುಂಬದ ವಿಚಾರಕ್ಕೆ ಬಂದಾಗ ಅದು ಸುಲಭವಾಗಿರಲಿಲ್ಲ. ನನಗೆ ಇಬ್ಬರು ಮಕ್ಕಳು. ದೊಡ್ಡವಳು ಎಂಜಿನಿಯರಿಂಗ್ ಮೂರನೇ ವರ್ಷ, ಮಗ ಇನ್ನೂ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ನಾವು ಪ್ರವಾಸಕ್ಕೆ ಹೋದರೆ ಅವರನ್ನು ನೋಡಿಕೊಳ್ಳುವವವರು ಯಾರೂ ಇರಲಿಲ್ಲ. ಪ್ರವಾಸದ ನಡುವೆ ನಮಗೇನಾದರೂ ಅಪಘಾತಗಳಾದರೆ ಮಕ್ಕಳ ಜೀವನ ಹೇಗೆ ಎಂಬ ಬಗ್ಗೆ ಚಿಂತೆಯಾಗಿತ್ತು. ಆದರೆ ಮಕ್ಕಳೇ ನಮ್ಮನ್ನು ಪ್ರೋತ್ಸಾಹಿಸಿ ಜೀವನದ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಸಹಕಾರ ನೀಡಿದರು, ನಮಗೆ ಧೈರ್ಯ ತುಂಬಿದರು. ಅವರಿಂದಲೇ ನಮ್ಮ ಈ ಎರಡೂವರೆ ತಿಂಗಳ ಕಾಲದ ಪ್ರಯಾಣ ಸಾಧ್ಯವಾಗಿದ್ದು.

ಪ್ರವಾಸದ ವೇಳೆ ಆದ ಫಜೀತಿಗಳ ಬಗ್ಗೆ ಹೇಳುವಿರಾ?
ಪ್ರವಾಸ- ಫಜೀತಿ ಒಂದೇ ನಾಣ್ಯದ ಎರಡು ಮುಖಗಳಂತೆ. ಆದರೆ ನಮ್ಮ ಪ್ರಯಾಣದಲ್ಲಿ ಹೇಳಿಕೊಳ್ಳುವಂಥ ಫಜೀತಿಗಳಾಗಿಲ್ಲ. ಸಣ್ಣ ಪುಟ್ಟ ಫಜೀತಿಗಳಿವೆ. ಅಂದರೆ ಟಿಬೆಟ್ ರೀಜನ್ ನಲ್ಲಿ ಹೈ ಆಲ್ಟಿಟ್ಯೂಡ್ ನಲ್ಲಿ 730ಕಿಮೀ ದಾಟಲು ಅತಿಯಾದ ಹಿಮ ಮಳೆ ಅಡ್ಡಿಪಡಿಸಿದ್ದು, 25 ಕಿಮೀ ಸಾಗುವುದಕ್ಕೂ ಹಲವು ಗಂಟೆಗಳ ಕಾಲ ತೆಗೆದುಕೊಂಡಿದ್ದು, ಅಲ್ಲದೆ ಅದೇ ವೇಳೆ ನಮ್ಮ ಮುಂದೆಯೇ ಇದ್ದ ಅಲ್ಲಿನ ಲೋಕಲ್ ಕಾರ್ ಒಂದು ಹಿಮದಲ್ಲಿ ಸಂಚಾರ ಸಾಧ್ಯವಾಗದೇ ಜಾರಿ ಕಣಿವೆಗೆ ಬಿದ್ದದ್ದಂತೂ ನಮ್ಮನ್ನು ಭಯಭೀತರನ್ನಾಗಿಸಿತ್ತು. ಆದರೂ ಕಷ್ಟಪಟ್ಟುಕೊಂಡು ಪ್ರಯಾಣ ಮಾಡಿದ್ದೆವು. ಅಲ್ಲದೇ ಉಜ್ಬೇಕಿಸ್ತಾನ್ ಬಾರ್ಡರ್ ಕ್ರಾಸಿಂಗ್ ಭಾಗದಲ್ಲಿ ರೋಡ್ ಹದಗೆಟ್ಟಿತ್ತು. ಗುಂಡಿ ತಪ್ಪಿಸುವುದಕ್ಕೆ ಆಫ್ ರೋಡ್ ಗೆ ಕಾರು ಇಳಿಸಿ, ಮರಳಿನಲ್ಲಿಯೇ ಡ್ರೈವ್ ಮಾಡಿದ ಅನುಭವಗಳನ್ನಂತೂ ಮರೆಯಲಾಗದು. ಅಲ್ಲದೇ ಮಂಜಿನ ವಾತಾವರಣದಿಂದಾಗಿ ಅನೇಕ ಸ್ಥಳಗಳಲ್ಲಿ ಕಾರು ಸ್ಟಾರ್ಟ್ ಆಗದೆಯೇ ಕಷ್ಟಪಡಬೇಕಾಗಿಯೂ ಬಂದಿತ್ತು.
ಇಂಟರ್ ನ್ಯಾಷನಲ್ ಬಾರ್ಡರ್ ಗಳನ್ನು ದಾಟುವಾಗ ವೀಸಾ ಸಮಸ್ಯೆ ಎದುರಾಗಿಲ್ಲವೇ ?
ಕೆಲವು ವೀಸಾಗಳನ್ನು ಮೊದಲೇ ಪ್ರೊಸೆಸ್ ಮಾಡುತ್ತಾರೆ. ಈ ಪ್ರಯಾಣದಲ್ಲಿ 20 ದೇಶಗಳನ್ನು ದಾಟಬೇಕಾಗಿತ್ತು. ಎಲ್ಲ ಗಡಿಗಳಲ್ಲೂ ವೀಸಾ ಚೆಕ್ ಮಾಡುವುದಿಲ್ಲ. ಆದರೆ ಕೆಲವು ಕಡೆ ಮಾತ್ರ ಸಮಸ್ಯೆಯಾಗಿತ್ತು. ನಮಗೆ ಚೀನಾ ವೀಸಾ ಸಿಗುವುದು ಕಷ್ಟವಾಗಿತ್ತು. ಭಾರತದವರಿಗೆ ನೇರವಾಗಿ ಚೀನಾ ವೀಸಾ ಕೊಡುವುದಿಲ್ಲ. ನಮ್ಮ ಜತೆ ಅಲ್ಲಿನ ಲೋಕಲ್ ಡೆಸಿಗ್ನೇಟೆಡ್ ಗೈಡ್ ಬಂದು,ಅವರ ಜತೆಗೆ ನಮೂದಿತ ರೂಟ್ ಗಳಲ್ಲಿ ಸಂಚರಿಸಿ, ಪ್ರವಾಸ ಕೈಗೊಳ್ಳುವುದಾದರೆ ಮಾತ್ರ ಇಲ್ಲಿ ವೀಸಾ ಲಭ್ಯವಾಗುತ್ತದೆ. ಅದಕ್ಕೂ ಮುನ್ನ ನೇಪಾಳದಲ್ಲಿ 5-7 ದಿನ ಉಳಿದುಕೊಳ್ಳಬೇಕು. ಅಲ್ಲಿಂದ ವೀಸಾಗೆ ಅಪ್ಲೈ ಮಾಡಬೇಕಾಗುತ್ತದೆ. ಏಜೆನ್ಸಿಯವರು ನಮ್ಮ ಜತೆಗೇ ಇದ್ದುದರಿಂದ ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯ ಬಂದಿಲ್ಲ. ಇನ್ನು ಕಿರಿಗಿಸ್ತಾನ್, ರಷ್ಯಾಗಳಂಥ ಕಡೆಗಳಲ್ಲಿ ಅವರ ಭಾಷೆಯೇ ನಮಗೆ ಸಮಸ್ಯೆಯಾಗಿತ್ತು. ಅವರು ಆಂಗ್ಲಭಾಷೆ ಬಂದರೂ ಮಾತನಾಡುವುದಿಲ್ಲ. ಆದ್ದರಿಂದ ಪ್ರತಿ ದೇಶದ ಗಡಿಯಲ್ಲೂ ಅಲ್ಲಿನ ಲೋಕಲ್ ಗೈಡ್ ನಮ್ಮ ಜತೆಗಿದ್ದು ಸಹಕಾರ ಕೊಡುತ್ತಿದ್ದರು.
ನಿಮ್ಮ ಗುಂಪಿನ ಪ್ರಯಾಣ ಪ್ರಾರಂಭವಾಗಿದ್ದು ಎಲ್ಲಿಂದ ?
ನಾವು ಬೆಂಗಳೂರಿನಿಂದ ಪ್ರಯಾಣ ಪ್ರಾರಂಭಿಸಿದರೂ ಗುಂಪಿನ ಜತೆ ಸೇರಿದ್ದು, ಗೋರಕ್ ಪುರದಿಂದ. ಏಜೆನ್ಸಿಯವರ ಪ್ರಕಾರ 65 ದಿನಗಳ ಪ್ರವಾಸವಾದರೂ, ನಮಗದು 75 ದಿನಗಳು. ಯಾಕೆಂದರೆ ಬೆಂಗಳೂರಿನಿಂದ ಗೋರಕ್ ಪುರಕ್ಕೆ ವಾರಕ್ಕೆ ಮುಂಚೆ ಹೊರಟು, ದಾರಿ ಮಧ್ಯೆ ಹೈದರಾಬಾದ್, ನಾಗ್ಪುರ್, ಮಧ್ಯಪ್ರದೇಶ, ಬೇಡಾ ಘಾಟ್, ಕಾಶಿಯನ್ನು ನೋಡಿಕೊಂಡು ಗೋರಕ್ ಪುರ ಸೇರಿದೆವು. ಅಲ್ಲಿಂದ ಶುರುವಾಗಿದ್ದು ಲಂಡನ್ ಪ್ರಯಾಣ.

ಪ್ರವಾಸದಲ್ಲಿ ಆಹಾರದ ಸಮಸ್ಯೆ?
ನಾನು 5 ವರ್ಷಗಳ ಹಿಂದೆ ಮಾಂಸಾಹಾರವನ್ನು ಬಿಟ್ಟಿದ್ದೇನೆ. ಚೀನಾ ಹಾಗೂ ಅರಬ್ ದೇಶಗಳ ಪ್ರಯಾಣದ ವೇಳೆ ಇದುವೇ ನನಗೆ ಸಮಸ್ಯೆಯಾಗಿತ್ತು. ಆದರೆ ಏಜೆನ್ಸಿಯವರು ಪ್ರತಿ ಸ್ಟೇನಲ್ಲೂ ಫೈವ್ ಸ್ಟಾರ್ ಹೊಟೇಲ್ ಬುಕ್ ಮಾಡಿದ್ದರಿಂದ ಆಹಾರಕ್ಕೆ ಅಷ್ಟಾಗಿ ಸಮಸ್ಯೆಯಾಗಿಲ್ಲ. ಅಲ್ಲದೇ ಪ್ರವಾಸಕ್ಕೆಂದೇ ರೆಡಿಮೇಡ್ ಫುಡ್, ಖಡಕ್ ರೊಟ್ಟಿ-ಚಟ್ನಿ ಜತೆಗಿರಿಸಿಕೊಂಡಿದ್ದೆವು. ಮತ್ತೆ ಅನೇಕ ಕಡೆ ಸಲಾಡ್ಸ್, ಹಣ್ಣು, ತರಕಾರಿಗಳನ್ನೂ ತಿಂದಿದ್ದಿದೆ. ಯುರೋಪ್ ದೇಶಗಳಲ್ಲಿ ಇಂಡಿಯನ್ ರೆಸ್ಟೋರೆಂಟ್‌ಗಳು ಇರುವುದರಿಂದ ಅಲ್ಲೂ ಆಹಾರಕ್ಕೆ ಸಮಸ್ಯೆಯಾಗಿಲ್ಲ.
ಪ್ರವಾಸದ ಅನುಭವಗಳು ಕಥನ ರೂಪವನ್ನು ಪಡೆದಿದ್ದು ಹೇಗೆ ?
ಪ್ರವಾಸ ಮುಗಿಸಿ ಬಂದಮೇಲೆ ನನ್ನ ಸ್ನೇಹಿತರ ಬಳಗ, ಕುಟುಂಬದವರೆಲ್ಲರೂ ಪ್ರವಾಸದ ಅನುಭವಗಳ ಬಗ್ಗೆ ಕೇಳುತ್ತಲೇ ಇದ್ದರು. ಬೇಡಿಕೆಯ ಮೇರೆಗೆ ನಮ್ಮ ಸ್ವಕುಳಸಾಳಿ ಜನಾಂಗದ ಪತ್ರಿಕೆಯಲ್ಲಿ ಬರೆಯಲು ಪ್ರಾರಂಭಿಸಿದ್ದೆ. ಕನ್ನಡ ನನ್ನ ವ್ಯವಹಾರಿಕ ಭಾಷೆಯಲ್ಲದೇ ಹೋದರೂ ಪ್ರಯತ್ನ ಮಾಡಿದ್ದೆ. ಎಲ್ಲರೂ ನನ್ನ ಬರಹವನ್ನು ಮೆಚ್ಚಿಕೊಂಡರು. ಹೀಗೆ ಶುರುವಾದ ಬರವಣಿಗೆ ಮುಂದೆ ಪುಸ್ತಕ ರೂಪದಲ್ಲಿ ಅದನ್ನು ಹೊರತರುವ ಬಗೆಗೂ ಯೋಚಿಸುವಂತೆ ಮಾಡಿತ್ತು. ಪ್ರವಾಸ ಮುಗಿಸಿ ಬಂದು ವರ್ಷದೊಳಗೆ ಪುಸ್ತಕವನ್ನೂ ಹೊರತಂದಿದ್ದೆ. ಇದು ನನ್ನ ಜೀವಮಾನದ ಸಾಧನೆ.