Saturday, April 18, 2026
Saturday, April 18, 2026

ಕಾಲಾತೀತ ಚಿಂತನೆಗಳ ದಿವ್ಯಜ್ಯೋತಿ

ವಚನ ಸಾಹಿತ್ಯ ಎಂಬ ಶ್ರೇಷ್ಠವಾದ ಅನುಭಾವ ಜಗತ್ತಿಗೆ ನೀಡಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ. ʼಎನಗಿಂತ ಕಿರಿಯರಿಲ್ಲʼ ಎಂಬ ವಿನಮ್ರ ಭಾವದಿಂದ ಜಗತ್ತನ್ನು ಬೆಳಗಿದ ಜಗದ ಜ್ಯೋತಿ, ಭಕ್ತಿ ಭಂಡಾರ, ಶ್ರೇಷ್ಠ ಮಾನವತಾವಾದಿ, ದಾರ್ಶನಿಕ ಬಸವಣ್ಣನವರು ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಂಡವರು.

'ಸಕಲ ಜೀವಾತ್ಮಕೂ ಲೇಸನ್ನೇ ಬಯಸುವ ಧರ್ಮ ಮಾನವ ಧರ್ಮ'ಎಂದು ಪ್ರತಿಪಾದಿಸಿದ ಬಸವಣ್ಣನವರು ʼಧರ್ಮದ ಮೂಲವೇ ದಯೆʼ ಎಂಬ ಸಾರ್ವತ್ರಿಕ ಸತ್ಯವನ್ನು ಮುಕ್ತವಾಗಿ ಸಾರಿ ಜಾತಿಮತಗಳಿಗೆ ಅತೀತವಾಗಿರುವ ಮಾನದ ಧರ್ಮವೇ ಸರ್ವಶ್ರೇಷ್ಠ ಎಂಬ ಸತ್ಯವನ್ನು ಸಾರುವ ಮೂಲಕ ಶಾಶ್ವತವಾಗಿ ಜನಮಾನಸದಲ್ಲಿ ನೆಲೆಗೊಂಡಿದ್ದಾರೆ. ಸಮಾಜ ಸುಧಾರಕ ಮತ್ತು ಸಮಾಜದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸ್ವರೂಪವನ್ನೇ ಬದಲಿಸಿದ ಕ್ರಾಂತಿಕಾರಿ ಹಾಗೂ 12ನೆಯ ಶತಮಾನದ ದಾರ್ಶನಿಕ ಬಸವಣ್ಣ. ಬಸವಣ್ಣನವರ ಜೀವನ ಮತ್ತು ಬೋಧನೆಗಳು ಮಾನವ ಘನತೆ, ಪ್ರಾಮಾಣಿಕ ಕೆಲಸ ಮತ್ತು ಅಂತರಂಗದ ಶುದ್ಧತೆಯನ್ನು ಆಧ್ಯಾತ್ಮಿಕ ಜೀವನದ ಕೇಂದ್ರಬಿಂದುವನ್ನಾಗಿ ಮಾಡುವ ಹಾದಿಯನ್ನು ತೋರಿದವು. ಇಂಥ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಬೆಂಗಳೂರಿನ ʼಬಸವ ವೇದಿಕೆ (ರಿ.)ʼ ಮುಂದಾಗಿದೆ. ಇದೇ ಏಪ್ರಿಲ್‌ 27ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: ಶಾಂತಿ ಅಹಿಂಸೆಯ ನೆಲೆವೀಡು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ

ಈ ಕಾರ್ಯಮದಲ್ಲಿ ಪರಮ ಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳವರು ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠ, ಮೈಸೂರು ಇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

Untitled design - 2026-04-18T182206.038

ಕಾರ್ಯಕ್ರಮಗಳ ವಿವರ:

ಈ ಸಮಾರಂಭದಲ್ಲಿ ಈ ವರ್ಷದ ಪ್ರತಿಷ್ಠಿತ ʼಬಸವಶ್ರೀʼ ಪ್ರಶಸ್ತಿಯನ್ನು ನಮ್ಮ ರಾಷ್ಟ್ರದ ಧೀಮಂತ ನಾಯಕರೂ ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡರವರಿಗೆ ನೀಡಿ ಗೌರವಿಸಲಾಗುವುದು. ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿಗಳೂ ಪ್ರಸ್ತುತ ಸಂಸದರೂ ಅದ ಶ್ರೀ ಬಸವರಾಜ ಬೊಮ್ಮಾಯಿ ಅವರು ವಹಿಸಿಕೊಂಡು ʼಬಸವಶ್ರೀʼ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಈ ಸಮಾರಂಭದ ಉದ್ಘಾಟನೆಯನ್ನು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಸೋಮಣ್ಣನವರು ನೆರವೇರಿಸಲಿದ್ದಾರೆ. ಈ ಸಮಾರಂಭದಲ್ಲಿ ʼವಚನ ಸಾಹಿತ್ಯ ಪ್ರಶಸ್ತಿʼಯನ್ನು ಪ್ರಸಿದ್ಧ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರ್ಜಗಿಯವರಿಗೆ ನೀಡಲಿದ್ದು, ಈ ಪ್ರಶಸ್ತಿಯನ್ನು ನಮ್ಮ ನಾಡಿನ ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಶ್ರೀ ಎಚ್. ಕೆ. ಪಾಟೀಲ್ ಅವರು ಪ್ರದಾನ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ʼಬಸವ ಜ್ಯೋತಿʼ ವಿಶೇಷ ಸಂಚಿಕೆಯನ್ನು ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಡುಗಡೆ ಮಾಡಲಿದ್ದಾರೆ. ಸಮಾರಂಭಕ್ಕೂ ಮುನ್ನ ಪ್ರಖ್ಯಾತ ಗಾಯಕಿ ಶ್ರೀಮತಿ ಪಾವನಿ ಅವರಿಂದ ವಚನ ಗಾಯನ ಏರ್ಪಡಿಸಲಾಗಿದೆ. ಬಸವ ವೇದಿಕೆ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಇತಿಹಾಸ:

ʼಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ದಿʼ ಎಂಬ ಸರ್ವಕಾಲಕ್ಕೂ ಪ್ರಸ್ತುತವಾಗಬಹುದಾದ ಸಪ್ತ ಸೂತ್ರಗಳ ಮೂಲಕ ಇಡೀ ಜಗತ್ತಿಗೆ ಒಂದು ವಿಶಿಷ್ಟವಾದ ಜೀವನ ಸಂವಿಧಾನವನ್ನು ನೀಡಿದ ಹಿರಿಮೆ ಬಸವಣ್ಣನವರಿಗೆ ಸಲ್ಲುತ್ತದೆ.

ಮಹಾನ್ ಕ್ರಾಂತಿ ಪುರುಷ ಬಸವಣ್ಣನವರ ಮತ್ತು ಶರಣರ ದಿವ್ಯಾದರ್ಶಗಳ ತತ್ತ್ವಸಿದ್ಧಾಂತಗಳ ಪ್ರಸಾರದ ಮೂಲಕ ನಾಡಿನ ಜನತೆಯಲ್ಲಿ ಬಸವಾದಿ ಶರಣರ ಚಿಂತನೆಯ ಬಗ್ಗೆ ಅರಿವು ಮತ್ತು ಜಾಗೃತಿ ಉಂಟು ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ 1991ರಲ್ಲಿ ಸಮಾನ ಮನಸ್ಕರೆಲ್ಲರೂ ಸೇರಿ ಪ್ರಾರಂಭಿಸಿದ ಸಂಘಟನೆ ʼಬಸವ ವೇದಿಕೆʼ. ಬಸವಾದಿ ಶರಣರ ಚಿಂತನೆಗಳನ್ನು ಮತ್ತು ಅವರು ಪ್ರತಿಪಾದಿಸಿದ ವಿಚಾರಧಾರೆಯನ್ನು ಜಾಗತಿಕ ನೆಲೆಯಲ್ಲಿ ಪ್ರಸಾರ ಮಾಡುವ ದಿಶೆಯಲ್ಲಿ ಈ ವೇದಿಕೆ ಅತ್ಯಂತ ಕ್ರಿಯಾಶೀಲವಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಒಂದು ಸಂಸ್ಥೆ ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ನಾಡಿನ ರಾಷ್ಟ್ರದ ಮಹಾನ್ ಸಾಧಕರಿಗೆ ನೀಡುತ್ತಾ ಬಂದಿರುವುದು ಒಂದು ಮಹತ್ಸಾಧನೆ. ಇದುವೆರೆಗೆ 'ಬಸವ ವೇದಿಕೆ'ಯಿಂದ 'ಬಸವಶ್ರೀ' ಪ್ರಶಸ್ತಿಗೆ ಭಾಜನರಾದವರು ತಮ್ಮ ನಿಸ್ವಾರ್ಥ ಸಾಮಾಜಿಕ, ಸಾಂಸ್ಕೃತಿಕ ಸೇವೆಯ ಮೂಲಕ ನಾಡಿನ ಘನತೆಯನ್ನು ಹೆಚ್ಚಿಸಿರುವರು. ಅವರಲ್ಲಿ ಅನೇಕರು ಭಾರತ ಸರ್ಕಾರ ನೀಡುವ ಪ್ರತಿಷ್ಠಿತ 'ಪದ್ಮಶ್ರೀ', 'ಪದ್ಮಭೂಷಣ' ಹಾಗೂ 'ಪದ್ಮವಿಭೂಷಣ', 'ಭಾರತ ರತ್ನ' ಪ್ರಶಸ್ತಿಗಳಿಗೆ ಪಾತ್ರರಾದಂಥ ಮಹಾನುಭಾವರು.

ಈವರೆಗಿನ ವಿಶೇಷತೆ:

ಹಲವು ವರ್ಷಗಳಿಂದ ಈ ಸಂಸ್ಥೆಯಿಂದ ಸಾಕಷ್ಟು ಕೆಲಸಗಳಾಗಿವೆ ಎನ್ನುವುದಕ್ಕೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯಯೇ ಸಾಕ್ಷಿ. ಡಾ. ಬಿ.ಡಿ. ಜತ್ತಿಯವರ ಆದಿಯಾಗಿ, ಡಾ. ಎಸ್. ನಿಜಲಿಂಗಪ್ಪ, ಡಾ. ಎಚ್. ನರಸಿಂಹಯ್ಯ, ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ್‌, ನಾಡೋಜ ಡಾ. ಚಂದ್ರಶೇಖರ ಕಂಬಾರ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ವೀರೇಂದ್ರ ಹೆಗ್ಗಡೆ, ಡಾ. ಸುಧಾಮೂರ್ತಿ, ಭಾರತರತ್ನ ಡಾ. ಸಿ.ಎನ್.ಆರ್.ರಾವ್‌ ಸೇರಿದಂತೆ ಸಮಾಜದ ಅನೇಕ ಗಣ್ಯಮಾನ್ಯ ಸಾಧಕರಿಗೆ ʼಬಸವಶ್ರೀʼ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಗೆಯೇ ಡಾ. ಸಿ.ಪಿ. ಕೃಷ್ಣಕುಮಾರ್‌, ಡಾ. ಎಸ್. ವಿದ್ಯಾಶಂಕರ, ಡಾ. ಸಾ.ಶಿ. ಮರುಳಯ್ಯ, ಇಬ್ರಾಹೀಂ ನ. ಸುತಾರರವರು, ಪಂಡಿತ ವೆಂಕಟೇಶ್ ಕುಮಾರ್‌, ಡಾ. ವೀಣಾ ಬನ್ನಂಜೆ, ಶ್ರೀಮತಿ ಸಂಗೀತ ಕಟ್ಟ, ಪ್ರೊ. ಡಾ. ಮಲ್ಲೇಪುರಂ ಜಿ. ವೆಂಕಟೇಶ, ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ಶ್ರೀಮತಿ ಎಂ.ಡಿ. ಪಲ್ಲವಿ ಸೇರಿದಂತೆ ಹಲವು ಸಾಧಕರಿಗೆ ʼವಚನ ಸಾಹಿತ್ಯ ಶ್ರೀʼ ಪ್ರಶಸ್ತಿ ನೀಡಲಾಗಿದೆ.

Untitled design - 2026-04-18T182156.340

ವಿಶೇಷ ಮನವಿ:

ಕರ್ನಾಟಕ ಸರಕಾರವು ಮಹಾನ್ ಮಾನವತವಾದಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಂಥ ತೀರ್ಮಾನ ಕೈಗೊಂಡ ಕರ್ನಾಟಕ ಸರಕಾರವನ್ನು ತುಂಬು ಹೃದಯದಿಂದ ಅಭಿನಂದಿಸುವ ʼಬಸವ ವೇದಿಕೆʼಯು ವಿಶೇಷ ಮನವಿಯನ್ನು ಸರಕಾರದ ಮುಂದಿಟ್ಟಿದೆ. ಬಸವಣ್ಣನವರ ದಿವ್ಯಾದರ್ಶಗಳ ಪ್ರಸಾರ, ಅವರ ಹೆಸರಿನಲ್ಲಿ ಒಂದು ವಿಶ್ವ ಆಧ್ಯಾತ್ಮಿಕ ಶರಣ ತತ್ತ್ವ ಕೇಂದ್ರ, ನಾಡಿನಾದ್ಯಂತ ಬಸವ ಭವನಗಳ ನಿರ್ಮಾಣ, ವಚನಗಳ ಸಂಶೋಧನೆ ಮತ್ತು ಪ್ರಕಟಣೆ, ಬಸವಾದಿ ಶರಣರ ವಿಚಾರಧಾರೆಗಳ ಬಗ್ಗೆ ಶಾಲಾ-ಕಾಲೇಜುಗಳ ಪಠ್ಯಗಳಲ್ಲಿ ಅಳವಡಿಕೆ ಆಗಬೇಕು. ಬಸವಾದಿ ಶರಣರ ವಿಚಾರಧಾರೆಗಳ ಪ್ರಸಾರ ಮಾಡುತ್ತಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳಿಗೆ ವಾರ್ಷಿಕ ಅನುದಾನ, ಬಸವಾದಿ ಶರಣರ ತತ್ತ್ವಗಳನ್ನು ಆಧರಿಸಿ ವಿವಿಧ ಸಂಸ್ಥೆಗಳು ಹಮ್ಮಿಕೊಳ್ಳುವ ವಿಚಾರ ಸಂಕಿರಣ ಹಾಗೂ ಸಮ್ಮೇಳನಗಳಿಗೆ ಆರ್ಥಿಕ ನೆರವು, ಪೂರಕವಾದ ಯೋಜನೆಗಳನ್ನು ಕರ್ನಾಟಕ ಸರಕಾರ ತನ್ನ ಆಯವ್ಯಯದಲ್ಲಿ ಅಳವಡಿಸಬೇಕು. ಬಸವಣ್ಣನವರು ಕೇವಲ ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕರು ಮಾತ್ರವಲ್ಲ, ವಿಶ್ವದ ಧಾರ್ಮಿಕ ಜ್ಯೋತಿ, ವಿಶ್ವದ ಮಹಾನ್ ಮಾನವತವಾದಿ, ವಿಶ್ವದ ದಾರ್ಶನಿಕ ಮಹಾನ್ ಚೇತನ. ಹೀಗಾಗಿ ಬಸವಣ್ಣನವರನ್ನು ವಿಶ್ವ ಸಂಸ್ಥೆಯು ವಿಶ್ವದ ಮಹಾನ್ ಮಾನವತಾವಾದಿ ಎಂದು ಘೋಷಿಸುವಂತೆ ಕರ್ನಾಟಕ ಸರಕಾರವು ಸೂಕ್ತ ಪ್ರಸ್ತಾವನೆಯನ್ನು ಭಾರತ ಸರಕಾರದ ಮೂಲಕ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಬೇಕು ಎಂದು ಬಸವ ವೇದಿಕೆ ವಿನಂತಿಸುತ್ತದೆ.

ಇದು ನನ್ನ ಸೌಭಾಗ್ಯ:

ಸುಮಾರು ನಾಲ್ಕು ದಶಕಗಳ ಕಾಲ ಸರಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನನಗೆ ಸಾಹಿತ್ಯ, ಸಂಸ್ಕೃತಿ, ಕಲೆಗಳ ಅಭಿರುಚಿ ಬಾಲ್ಯದಿಂದಲೇ ಮೂಡಿಬಂದಿದ್ದು ನನ್ನ ಬದುಕಿನ ಸೌಭಾಗ್ಯವೇ ಎಂದು ಭಾವಿಸಿರುತ್ತೇನೆ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ, ಸಂಸ್ಕೃತಿ, ಕಲೆಗಳ ಸೇವಾದೀಕ್ಷೆಯನ್ನು ಪಡೆದುಕೊಂಡಿದ್ದ ನನಗೆ ನನ್ನ ಆಡಳಿತಾತ್ಮಕ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದು, ಸಾಹಿತ್ಯಕ ಚಿಂತನೆಯ ಅನುಭಾವದ ಮೂಸೆಯಲ್ಲಿ ಮೂಡಿಬಂದ ಮಾನವೀಯ ಸಂವೇದನೆಯೇ ಎಂದರೆ ಅತಿಶಯೋಕ್ತಿಯಲ್ಲ. ವಿಶೇಷವಾಗಿ ವಚನ ಸಾಹಿತ್ಯ ನನ್ನ ಆಡಳಿತ ಕ್ಷೇತ್ರದ ಕಾರ್ಯ ನಿರ್ವಹಣೆಯಲ್ಲಿ ದಾರಿದೀಪವಾಗಿದೆ. ವಚನ ಸಾಹಿತ್ಯದ ಮೇಲಿನ ನನ್ನ ಆಸಕ್ತಿ ಹಾಗೂ ಬಸವಾದಿ ಶರಣರ ವಿಚಾರಧಾರೆಯಲ್ಲಿ ನನಗಿರುವ ಭಕ್ತಿ ಶ್ರದ್ಧೆಗಳೇ ನನಗೆ ಬಸವ ವೇದಿಕೆಯ ಸ್ಥಾಪನೆಗೆ ಮೂಲ ಪ್ರೇರಣೆ. ಬಸವ ವೇದಿಕೆಯು ನೀಡುತ್ತಾ ಬಂದಿರುವ 'ಬಸವಶ್ರೀ' ಪ್ರಶಸ್ತಿಯ ಮೂಲ ಕಲ್ಪನೆಯನ್ನು ಪ್ರಪ್ರಥಮವಾಗಿ ಕರ್ನಾಟಕ ಸರಕಾರಕ್ಕೆ ನೀಡಿದ ಹಿರಿಮೆಯು ನಮ್ಮ ಬಸವ ವೇದಿಕೆಯದಾಗಿದ್ದು ಇದರ ಸ್ಫೂರ್ತಿ ಹಾಗೂ ಪ್ರೇರಣೆಯಿಂದಾಗಿ ರಾಜ್ಯದಾದ್ಯಂತ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಇಂದು ಸಂಸ್ಥಾಪಿಸಲ್ಪಟ್ಟಿರುವುದು ಅತ್ಯಂತ ಹೆಮ್ಮೆ ಹಾಗೂ ಅಭಿಮಾನವನ್ನು ಉಂಟುಮಾಡಿದೆ. ರಾಜ್ಯ ಸರಕಾರವು ಸ್ಥಾಪಿಸಿರುವ ಪ್ರತಿಷ್ಠಿತ ಬಸವ ಪುರಸ್ಕಾರದ ಕಲ್ಪನೆ ಮೊಳಕೆಯೊಡೆದಿದ್ದು ಬಸವ ವೇದಿಕೆಯ ಸಮಾರಂಭವೊಂದರಲ್ಲಿ ಎಂದು ಹೇಳಲು ತುಂಬಾ ಹೆಮ್ಮೆಯೆನಿಸಿದೆ. ಮನುಕುಲದಲ್ಲಿ ಕಂಡ ಮಹಾನುಭಾವ ಮಾನವತಾವಾದಿ ಬಸವಣ್ಣನವರ ಹೆಸರಿನಲ್ಲಿ ಎಷ್ಟೆಷ್ಟು ಪ್ರಶಸ್ತಿಗಳು ಪ್ರದಾನವಾದರೂ ಅವು ನಮಗೆ ಸಂತೋಷ ತಂದುಕೊಡುತ್ತದೆ.

- ಡಾ. ಸಿ. ಸೋಮಶೇಖರ, ಭಾ.ಆ.ಸೇ.(ನಿ)

ಅಧ್ಯಕ್ಷರು, ಬಸವ ವೇದಿಕೆ, ಬೆಂಗಳೂರು

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ