ಮಾರಿ ಕಣ್ಣು ಮಸಣಿ ಕಣ್ಣು ಬಿದ್ದರೂ ತುಂತುಂಬಿ ಹರಿದಾಳೆ ತಾಯಿ..
ಕಣಿವೆಯ ಸುತ್ತಲಿರುವ ಬೆಟ್ಟಗಳು ಮಳೆಗಾಲದಲ್ಲಿ ಹಸಿರು ಹೊದಿಕೆಯನ್ನು ಹೊತ್ತು ಪ್ರಾಣಿ ಸಂಕುಲಕ್ಕೆ ನೆಲೆ ನೀಡುತ್ತವೆ. ಬರಗಾಲದಲ್ಲಿ ಬಂದ ಅದೆಷ್ಟೋ ದೂರದ ಊರಿನ ಕುರಿಗಾಹಿಗಳು ಕಣಿವೆಯ ತಪ್ಪಲಿನಲ್ಲಿ ಟಿಕಾಣಿ ಹೂಡುತ್ತಾರೆ. ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ, ಛಾಯಾಚಿತ್ರ, ಈಜಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಹೊತ್ತು ಕಳೆದಷ್ಟು ಮನಸ್ಸಿಗೆ ಮುದ.
- ಕೆ. ಎನ್. ರಂಗು, ಚಿತ್ರದುರ್ಗ
ಮಾರಿಕಣಿವೆ ಎಂದ ತಕ್ಷಣ ಥಟ್ಟನೆ ನೆನಪಾಗುವುದೇ ಭಾರತದ ನಕ್ಷೆ ಹೋಲುವ ಜಲಾಶಯ. ಇದರ ನಿರ್ಮಾಣ ಕೇವಲ ಕಲ್ಲಿನಿಂದ ಆಗಿದ್ದು, ಬ್ರಿಟಿಷ್ ಇಂಜಿನಿಯರ್‌ಗಳು ಮತ್ತು ಕರ್ನಾಟಕದ ಮುದ್ದೇನಹಳ್ಳಿಯ ವಿಶ್ವೇಶ್ವರಯ್ಯನವರು ಇದರ ವಿನ್ಯಾಸ ರೂಪಿಸಿದ್ದಾರೆ ಎನ್ನುವುದು ವಿಶೇಷ. ಇದು ವೇದಾವತಿಯ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯವಾಗಿದ್ದು, ಹಿರಿಯೂರು, ಚಳ್ಳಕೆರೆ, ತಪ್ಪಗೊಂಡನಹಳ್ಳಿ, ಮೊಳಕಾಲ್ಮೂರು ಭಾಗದಲ್ಲಿ ಹರಿದು ಆಂಧ್ರದ ಬಿಟಿಪಿ ಡ್ಯಾಮ್ ಸೇರುತ್ತದೆ. ಬೇಸಿಗೆಯಲ್ಲಿ ಕಾಲಿಟ್ಟರೆ ಕಾಯಿಸಿದ ಕಬ್ಬಿಣದಂತೆ ಸುಡುವ ವೇದಾವತಿ ನದಿಗೆ ಈ ಜಲಾಶಯದ ನೀರು ನುಗ್ಗಿತೆಂದರೆ ಆ ಭಾಗದ ಜನರಿಗೆ ಯುಗಾದಿಯ ಸಂಭ್ರಮ. ಬಯಲು ಸೀಮೆಯ ಬರಡು ಭೂಮಿಯಲ್ಲಿ ಹಸಿರು ಚಿಗುರಲು ವಾಣಿ ವಿಲಾಸ ಸಾಗರ ಬಹುಮುಖ್ಯ ಪಾತ್ರ ವಹಿಸುತ್ತದೆ. ಬರದ ನಾಡಿನ ಜೀವ ಜಲಾಶಯವಾಗಿರುವ ಮಾರಿಕಣಿವೆ ಹಿನ್ನೆಲೆ ಕುತೂಹಲ ಮತ್ತು ಆಸಕ್ತಿದಾಯಕವಾಗಿದೆ.
ವಾಣಿ ವಿಲಾಸ ಸಾಗರದ ಹಿನ್ನೆಲೆ
ಮೈಸೂರು ಮಹಾರಾಜರ ಕಾಲದಲ್ಲಿ 1907ರಲ್ಲಿ ನಿರ್ಮಾಣವಾದ ಈ ಜಲಾಶಯಕ್ಕೆ ವಾಣಿ ವಿಲಾಸ ಎಂದು ಹೆಸರು ಬಂದದ್ದೇ ಒಂದು ಐತಿಹ್ಯ. ಜಲಾಶಯ ನಿರ್ಮಾಣದ ವೇಳೆ ಹಣಕಾಸಿನ ಕೊರತೆಯ ಕಾರಣ ಕಾಮಗಾರಿ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಅಂದಿನ ರಾಜಮಾತೆ ಮತ್ತು ಚಾಮರಾಜ ಒಡೆಯರ್ ಪತ್ನಿ ಕೆಂಪನಂಜಮ್ಮಣಿ ಅವರು ತಮ್ಮ ಒಡವೆಗಳನ್ನು ಕೊಟ್ಟು ಈ ಜಲಾಶಯಕ್ಕೆ ಹಣ ಒದಗಿಸಿದರು. ಈ ಹಿನ್ನೆಲೆ ಅವರ ಹೆಸರು 'ವಾಣಿ ವಿಲಾಸ' ಎಂದು ನಾಮಕರಣ ಮಾಡಲಾಯಿತು. ಕಪ್ಪು ಕಲ್ಲುಗಳ ವಾಣಿ ವಿಲಾಸ ಸಾಗರವು ಪರ್ವತಗಳ ಮಧ್ಯೆ ನಿರ್ಮಿತವಾಗಿರುವ ನದಿ ಸಾಗರವಾಗಿದ್ದು, ಜಲಾಶಯದ ತೀರಗಳು, ಹಸಿರು ಕಣಿವೆಗಳು ಮತ್ತು ಬೃಹತ್ ಬೆಟ್ಟಗಳಿಂದ ಆವರಿಸಲ್ಪಟ್ಟಿರುವುದು ಪ್ರವಾಸಿಗರಿಗೆ ರಮಣೀಯ ಅನುಭವ ನೀಡುತ್ತದೆ.

ವಿನ್ಯಾಸ ಮತ್ತು ಸಾಮರ್ಥ್ಯ
ವಿಶ್ವೇಶ್ವರಯ್ಯನವರ ಸೃಜನಶೀಲತೆಗೆ ಸಾಕ್ಷಿಯಾಗಿರುವ ಈ ಜಲಾಶಯ ಡ್ರೋನ್ ಕಣ್ಣುಗಳಲ್ಲಿ ಭಾರತದ ನಕ್ಷೆಯ ಆಕಾರ ಹೋಲುತ್ತದೆ. ಪ್ರವಾಸಿಗರು ತೀರಾ ಹತ್ತಿರದಿಂದ ನಿಂತು ಕಣ್ತುಂಬಿಕೊಳ್ಳುವಾಗ ಕಣ್ಣು ಹಾಯುವಷ್ಟು ತಿಳಿ ನೀಲಿ ಬಣ್ಣದ ನೀರು ಕಾಣುತ್ತದೆ. ಇದರ ಒಟ್ಟು ಸಂಗ್ರಹಣ ಸಾಮರ್ಥ್ಯ 30.422 ಟಿಎಂಸಿಯಾಗಿದೆ. ವಾಣಿ ವಿಲಾಸ ಸಾಗರದ ಉದ್ದ 1300 ಮೀಟರ್, ಸುಮಾರು 40 ಮೀಟರ್ ಎತ್ತರವಿದೆ. ಕಪ್ಪು ಕಲ್ಲು ಬ್ಲಾಕ್‌ಗಳಿಂದ ನಿರ್ಮಿಸಲಾದ ಅಣೆಕಟ್ಟಿನ ಮೇಲ್ಭಾಗದಲ್ಲಿ ಕೋಟೆಯಂತಿರುವ ಹಸಿರು ಭುಜಗಳು, ಬಾಗಿಲುಗಳು ಆ ಕಾಲದ ಒಡೆಯರ್ ಶೈಲಿಯ ವಾಸ್ತುಶಿಲ್ಪದ ಸಾಕ್ಷಿ. ಜಲಾಶಯ ತುಂಬಿದಾಗ ನೀರು ಹೊರಬಿಡುವ ಗೇಟ್‌ಗಳು ದೊಡ್ಡ ಕಬ್ಬಿಣದ ಕಾಲಚಕ್ರದಂತಿವೆ. ಆ ಬಾಗಿಲ ಮೂಲಕ ನೀರು ಹೊರ ಬರುವಾಗ ನಿಜಕ್ಕೂ ಪ್ರಕೃತಿಯ ನಾದವನ್ನು ಕೇಳಿದ ಅನುಭವ. ಇಂಜಿನಿಯರ್‌ನ ಕಲ್ಪನೆ ಮತ್ತು ಕವಿ ಮನಸ್ಸಿನ ವರ್ಣನೆ ಈ ಜಲಾಶಯಕ್ಕೆ ಮತ್ತಷ್ಟು ಮೆರಗು ತಂದಿದೆ.
ಮಾರಿಕಣಿವೆಗೆ ಕೋಡಿ ಬಿದ್ದ ಸಂಭ್ರಮ
ಪ್ರತಿಯೊಂದು ಜಲಾಶಯಕ್ಕೂ ಕೋಡಿ ಬೀಳುವುದೆಂದರೆ ಒಂದು ರೀತಿಯ ಮೈದುಂಬುವುದು. ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬಂದಾಗಲೆಲ್ಲ ಮಾರಿಕಣಿವೆ ಮೊಗದಲ್ಲಿ ನಗೆಯಿರುತ್ತದೆ. ಭದ್ರಾ ಯೋಜನೆಯಿಂದ ಹರಿದು ಬರುವ ನೀರು ನೇರವಾಗಿ ಜಲಾಶಯವನ್ನು ಹೊಕ್ಕುತ್ತದೆ. ಈ ಜಲಾಶಯ ಕೋಡಿ ಬಿದ್ದು, ವೇದಾವತಿ ನದಿ ಮರಳಿನಲ್ಲಿ ನೀರು ಹಾಯ್ದು ಹೋಗುವುದನ್ನು ನೋಡುವುದು ಕಣ್ಣಿಗೆ ಹಬ್ಬವಿದ್ದಂತೆ. 1933ರಲ್ಲಿ ಜಲಾಶಯದ ಒಡಲು ಸಂಪೂರ್ಣ ತುಂಬಿ ಪ್ರಪ್ರಥಮ ಬಾರಿಗೆ ಕೋಡಿ ಬಿದ್ದು ಸಂಭ್ರಮಿಸಿತ್ತು. ಆ ಬಳಿಕ ಮಳೆಯ ಕೊರತೆ ಇದ್ದರೂ 2000ರಲ್ಲಿ ಸಂಪೂರ್ಣವಾಗಿ ಭರ್ತಿಯಾಗಿತ್ತು. ಕಳೆದ 2022ರಲ್ಲಿ 89 ವರ್ಷಗಳ ನಂತರ ಎರಡನೇ ಬಾರಿಗೆ ಕೋಡಿ ಬಿದ್ದಿತ್ತು. ಕೊನೆಯದಾಗಿ 2025ರ ಅಕ್ಟೋಬರ್ 20ರಂದು ಸಂಪೂರ್ಣವಾಗಿ ತುಂಬಿ ವೇದಾವತಿ ಮೂಲಕ ನೀರು ಹರಿದು ಹೋಗುತ್ತಿರುವುದು ವಿಶೇಷವಾಗಿದೆ.

ಕೃಷಿಗೆ ಸಹಕಾರಿಯಾಗಿರುವ ಮಾರಿಕಣಿವೆ
ವಾಣಿ ವಿಲಾಸ ಸಾಗರ ನೀರಾವರಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಜಲಾಶಯದ ನೀರು ಹತ್ತಿರದ ಹಳ್ಳಿಗಳ ಕೃಷಿಭೂಮಿಗೆ ಜಲಮೂಲವಾಗಿದೆ. ರೈತರು ತೊಗರಿ, ಈರುಳ್ಳಿ, ಜೋಳ, ಧಾನ್ಯ, ಹಣ್ಣು ಮುಂತಾದ ವಿವಿಧ ಬೆಳೆಗಳಿಗೆ ಹವಾಮಾನ ಮತ್ತು ಕಾಲಾವಧಿಯ ಅನುಗುಣವಾಗಿ ಈ ನೀರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಈ ಜಲಾಶಯದಿಂದ ಲಭ್ಯವಾಗುವ ನೀರು ರುಚಿಯಲ್ಲಿ ಸಿಹಿಯಾಗಿದ್ದು, ಸಮೃದ್ಧ ಬೆಳೆ ಬೆಳೆಯಲು ಸಹಕರಿಯಾಗಿದೆ. ಹೆಚ್ಚಾಗಿ ಹನಿ ನೀರಾವರಿಗೆ ಈ ನೀರು ಬಳಕೆಯಾಗುತ್ತಿದೆ. ಬೇಸಿಗೆಯಲ್ಲಿ ಒಣ ಭೂಮಿಗೆ ಹೆಚ್ಚು ನೀರಿನ ಅವಶ್ಯಕತೆ ಇದ್ದಾಗ ಗೇಟ್ ತೆರೆದು ವೇದಾವತಿ ಮೂಲಕ ನೀರು ಹಾಯಿಸಲಾಗುತ್ತದೆ. ಈ ಕಾರಣದಿಂದಾಗಿ ಬೋರ್ ವೆಲ್‌ಗಳು ರಿಚಾರ್ಜ್ ಆಗಿ ನೀರಿನ ಕೊರತೆಯನ್ನು ನೀಗಿಸಿ ಬೆಳೆ ಪಡೆಯಲು ಸಹಕರಿಸುತ್ತವೆ.
ಪ್ರವಾಸಿಗನಿಗೆ ವಾಣಿ ವಿಲಾಸ
ಪ್ರವಾಸಿಗರಿಗೆ ಇದು ಕಲ್ಲುಗಳ ಮಧ್ಯೆ ಇರುವ ಶತಮಾನದ ನಿಶ್ಶಬ್ಧದ ಇತಿಹಾಸದ ಹಾಳೆಗಳಂತೆ ಗೋಚರಿಸುತ್ತದೆ. ಕಣಿವೆಯ ಸುತ್ತಲಿರುವ ಬೆಟ್ಟಗಳು ಮಳೆಗಾಲದಲ್ಲಿ ಹಸಿರು ಹೊದಿಕೆಯನ್ನು ಹೊತ್ತು ಪ್ರಾಣಿ ಸಂಕುಲಕ್ಕೆ ನೆಲೆ ನೀಡುತ್ತವೆ. ಬರಗಾಲದಲ್ಲಿ ಬಂದ ಅದೆಷ್ಟೋ ದೂರದ ಊರಿನ ಕುರಿಗಾಹಿಗಳು ಕಣಿವೆಯ ತಪ್ಪಲಿನಲ್ಲಿ ಟಿಕಾಣಿ ಹೂಡುತ್ತಾರೆ. ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ, ಛಾಯಾಚಿತ್ರ, ಈಜಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಹೊತ್ತು ಕಳೆದಷ್ಟು ಮನಸ್ಸಿಗೆ ಮುದ. ಇದು ಗೋವಾ ಬೀಚ್ ಥರ ಸಂಜೆಯ ಮನರಂಜನೆ ನೀಡದಿದ್ದರೂ, ಮೈ ಪುಳಕವಾಗುವಂಥ ಅನುಭವ ಒದಗಿಸುತ್ತದೆ. ಇದು ಕೇವಲ ಜಲಾಶಯವಲ್ಲ ಲಕ್ಷಾಂತರ ರೈತರ ಕಣ್ಣೀರನ್ನು ಹಿಡಿದಿಡುವ ಆಣೆಕಟ್ಟು.