ನೇಪಾಳದಲ್ಲಿ ಹರ ಹರ ಮಹಾದೇವ..
ಪುಮ್ಡಿಕೋಟ್ ಗಿರಿಧಾಮದಲ್ಲಿ ರಚನೆಯಾಗಿರುವ 17 ಮೀಟರ್ ವ್ಯಾಸ ಹಾಗು 22 ಮೀಟರ್ ಎತ್ತರದ ಡಮರುಗ, ಏಷಿಯಾ ಖಂಡದಲ್ಲಿಯೇ ಅತಿ ದೊಡ್ಡ ಡಮರುಗ ಎಂಬ ಮನ್ನಣೆಗೆ ಇದು ಪಾತ್ರವಾಗಿದೆ. ನೇಪಾಳದ ಕಲಾಪ್ರಕಾರಗಳಲ್ಲಿ ಶಿವನ ಪ್ರತೀಕಗಳಾದ ಡಮರು ಹಾಗು ತ್ರಿಶೂಲಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಇವು ಶಿವನನ್ನು ನೇಪಾಳದ ಧಾರ್ಮಿಕ ಹಾಗು ಸಾಂಸ್ಕೃತಿಕ ಕುರುಹಾಗಿಸುವಲ್ಲಿ ನೆರವಾಗಿವೆ.
- ಮಂಜುನಾಥ ಡಿ. ಎಸ್
ವಿಭಿನ್ನ ಅಭಿರುಚಿಗಳ ಪ್ರವಾಸಿಗರನ್ನು ತಮ್ಮೆಡೆಗೆ ಆಕರ್ಷಿಸುವ ಹಲವಾರು ತಾಣಗಳಿವೆ. ನೇಪಾಳದ ಕಾಸ್ಕಿ ಜಿಲ್ಲೆಯ ಪೋಖರ ನಗರದ ಸಮೀಪದಲ್ಲಿರುವ ಪುಮ್ಡಿಕೋಟ್ ಗಿರಿಧಾಮ ಇಂಥ ತಾಣಗಳಲ್ಲೊಂದು. ಚಾರಣಿಗರು, ಪ್ರಕೃತಿಪ್ರಿಯರು, ಫೊಟೋಗ್ರಾಫರ್ಸ್, ಸಾಹಸಿಗರು, ಹೀಗೆ ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಹೊಂದಿದವರನ್ನು ಕೈಬೀಸಿ ಕರೆಯುತ್ತಿದ್ದ ಈ ಬೆಟ್ಟದ ಮೇಲೆ ಸುಮಾರು ಐದು ವರ್ಷಗಳ ಹಿಂದೆ ಶಿವನ ದೊಡ್ಡ ವಿಗ್ರಹವನ್ನು ಸ್ಥಾಪಿಸಲಾಯಿತು. ಆಗಿನಿಂದ ಇದು ದಿನಂಪ್ರತಿ ಸಹಸ್ರಾರು ಧಾರ್ಮಿಕ ಶ್ರದ್ಧಾಳುಗಳನ್ನು ತನ್ನ ತೆಕ್ಕೆಗೆ ಬರಮಾಡಿಕೊಳ್ಳುತ್ತಿದೆ.
ವಾಹನ ನಿಲ್ದಾಣದಿಂದ ಈ ತಾಣಕ್ಕೆ ನಡೆದು ಹೋಗುತ್ತಿದ್ದಾಗ ದೂರದಿಂದಲೇ ಬೆಟ್ಟದ ಮೇಲಿನ ಮಹದೇವನ ಮೂರ್ತಿ ಕಾಣಿಸಿತು. ಮುಂದೆ ಮುಂದೆ ಸಾಗಿದಂತೆ ಮೂರ್ತಿ ದೊಡ್ಡದಾಗಿಯೂ, ಸ್ಪಷ್ಟವಾಗಿಯೂ ಕಾಣತೊಡಗಿತು. ಕಣ್ಣುಗಳೊಡನೆ ಮನಸ್ಸು ಸಹ ಮಹದೇವನಲ್ಲಿ ನೆಟ್ಟಿತ್ತು. ಬೌದ್ಧ ವಾಸ್ತುಶಿಲ್ಪದ ಸೊಬಗಿನ ಮುಖ್ಯ ದ್ವಾರದಿಂದ ಕಂಡ ವರ್ಣಮಯ ದೃಶ್ಯ ಮೋಹಕವಾಗಿತ್ತು. ಮುಂದಿನ ಚಿಕ್ಕ ಪ್ರವೇಶ ದ್ವಾರ ಶಿವನ ನಾಲ್ಕು ಮುಖಗಳಿಂದ ಕೂಡಿದ್ದ ಲಿಂಗಾಕಾರದಲ್ಲಿತ್ತು. ಮೆಟ್ಟಿಲುಗಳನ್ನು ಹತ್ತಿ, ಈ ದ್ವಾರವನ್ನು ದಾಟಿ ಸ್ವಲ್ಪ ಮುಂದೆ ಸಾಗಿದಂತೆ ಗುಮ್ಮಟಾಕಾರದ ಧ್ಯಾನಮಂದಿರದ ಮೇಲೆ ಆಸೀನನಾಗಿದ್ದ ಶಿವನ ಭವ್ಯ ಮೂರ್ತಿಯ ದಿವ್ಯ ದರ್ಶನವಾಯಿತು.

ನಡುಭಾಗದಲ್ಲಿ 57 ಅಡಿ ಎತ್ತರವಿರುವ ಧ್ಯಾನಮಂದಿರದ ಮೇಲ್ಭಾಗದಲ್ಲಿ 51 ಅಡಿ ಎತ್ತರದ ಈ ಶಿವನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದು, ಕೈಲಾಸನಾಥ ಮಹದೇವನ ಮೂರ್ತಿಯ ನಂತರ, ನೇಪಾಳದಲ್ಲಿರುವ ಎರಡನೆಯ ಅತಿ ದೊಡ್ಡ ಶಿವನ ಪ್ರತಿಮೆಯಾಗಿದೆಯಂತೆ. ಹುಲಿಯ ಚರ್ಮದ ಮೇಲೆ ಕುಳಿತಿರುವ ಶಿವನ ಮೂರ್ತಿಯ ಎಡಗೈಲಿ ತ್ರಿಶೂಲ ಮತ್ತು ಡಮರು ಇವೆ. ಓಂಕಾರ ಸಹಿತ ಬಲಗೈನ ಮುದ್ರೆ ಭಕ್ತರಿಗೆ ಅಭಯ ನೀಡುತ್ತಿರುವಂತಿದೆ. ನೀಲಕಾಯದ, ನಾಗಾಭರಣನಾದ, ಚಂದ್ರಧರ ಶಿವನ ಶಾಂತವದನ ಕಣ್ಮನ ತಣಿಸುವಂತಿದೆ. ಹಳಿಗಳ ಮೇಲಿರಿಸಿರುವ ಗಣಪನ ಮೂರ್ತಿ ಶಿವನಿಗೆ ನಿಧಾನವಾಗಿ ಪ್ರದಕ್ಷಿಣೆ ಹಾಕುತ್ತಿರುತ್ತದೆ. ಮಂದಿರದ ಮೇಲು ಹಂತವನ್ನು ತಲುಪಲು ಇಕ್ಕೆಲಗಳಲ್ಲಿ ಪಾವಟಿಕೆಗಳಿವೆ.
ದೇಗುಲದ ಸುತ್ತ ಎರಡು ಮಜಲುಗಳಲ್ಲಿಯೂ ಶಿವಲಿಂಗಗಳಿವೆ. ಇವಲ್ಲದೆ ಮಂದಿರದ ಮುಂಭಾಗದಲ್ಲಿಯೂ ಎರಡು ಶಿವಲಿಂಗಗಳಿವೆ. ಇವುಗಳ್ಲೊಂದು ಕೃತಕ ಕೊಳದ ನಡುವೆ ಸ್ಥಿತವಾಗಿದೆ. ಕಾರಂಜಿಗಳಿಂದ ಚಿಮ್ಮುವ ನೀರು ಶಿವಲಿಂಗವನ್ನು ತೋಯಿಸುವುದನ್ನು ನೋಡಿದಾಗ ಲಿಂಗಕ್ಕೆ ಅಭಿಷೇಕವಾಗುತ್ತಿರುವಂತೆ ಭಾಸವಾಗುತ್ತದೆ. ಮಂದಿರದೆಡೆಗೆ ಮುಖಮಾಡಿ ಕುಳಿತಿರುವ ಸ್ವರ್ಣವರ್ಣದ ನಂದಿಯ ಪ್ರತಿಮೆಯೂ ಅಂದವಾಗಿದೆ.
ಇಲ್ಲಿನ ಇನ್ನೊಂದು ಪ್ರಮುಖ ರಚನೆ 17 ಮೀಟರ್ ವ್ಯಾಸ ಹಾಗು 22 ಮೀಟರ್ ಎತ್ತರದ ಡಮರುಗ. ಏಷಿಯಾ ಖಂಡದಲ್ಲಿಯೇ ಅತಿ ದೊಡ್ಡ ಡಮರುಗ ಎಂಬ ಮನ್ನಣೆಗೆ ಇದು ಪಾತ್ರವಾಗಿದೆ.
ನೇಪಾಳದ ಕಲಾಪ್ರಕಾರಗಳಲ್ಲಿ ಶಿವನ ಪ್ರತೀಕಗಳಾದ ಡಮರು ಹಾಗು ತ್ರಿಶೂಲಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಇವು ಶಿವನನ್ನು ನೇಪಾಳದ ಧಾರ್ಮಿಕ ಹಾಗು ಸಾಂಸ್ಕೃತಿಕ ಕುರುಹಾಗಿಸುವಲ್ಲಿ ನೆರವಾಗಿವೆ. ಎದುರಿನ ಬೆಟ್ಟದಲ್ಲಿರುವ ಶಿವನ ಪರಿವಾರದ ಪ್ರತಿಮೆಗಳು ಸಹ ಇಲ್ಲಿಂದ ಗೋಚರಿಸಿದವು. ವಾಪಸಾಗುವಾಗ ಇವುಗಳನ್ನು ಹತ್ತಿರದಿಂದ ದರ್ಶಿಸಿದೆ.
ಸಮದ್ರಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿರುವ ಈ ಗಿರಿಯನ್ನು ಜನಪ್ರಿಯ ಪ್ರವಾಸಿ ಕೇಂದ್ರವನ್ನಾಗಿಸುವ ಉದ್ದೇಶದಿಂದ ಪುಮ್ಡಿಕೋಟ್ ಅಭಿವೃದ್ಧಿ ಸಮಿತಿಯು ಇಲ್ಲಿ ದೇಗುಲ ಸಂಕೀರ್ಣವೊಂದನ್ನು ನಿರ್ಮಿಸಲು ತೀರ್ಮಾನಿಸಿತು. 2017ರಲ್ಲಿ ದೊಡ್ಡ ಮೊತ್ತದ ಧನ ಸಂಗ್ರಹಕ್ಕೆ ಮುಂದಾಯಿತು. ಸಂಕೀರ್ಣದ ನಿರ್ಮಾಣ ಕಾರ್ಯವನ್ನು ಆರಂಭಿಸಿತು. ಪ್ರಧಾನ ಮಂದಿರ ಇನ್ನೂ ಪೂರ್ಣಗೊಳ್ಳಬೇಕಿದೆ. ಈಗ ಪಗೋಡಾಕೃತಿಯ ಸಣ್ಣ ಗುಡಿಯೊಂದರಲ್ಲಿ ಶಿವಾರಾಧನೆ ನಡೆಯುತ್ತಿದೆ.

ಶಿವ ಪಾರ್ವತಿಯರನ್ನೊಳಗೊಂಡ ಸುಮೇರು ಪರ್ವತದ ಪ್ರತಿಕೃತಿ ಮತ್ತು ಹುತಾತ್ಮರ ಸ್ಮಾರಕ ವನ ಅಭಿವೃದ್ಧಿ ಯೋಜನೆಯ ಭಾಗವಾಗಿವೆ. ಇವುಗಳ ನಿರ್ಮಾಣ ಕಾರ್ಯ ಸಂಪೂರ್ಣವಾಗಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು. ಅದಾದ ನಂತರ ಈ ತಾಣ ಇನ್ನಷ್ಟು ಜನಪ್ರಿಯವಾಗಲಿದೆ.
ಈ ಗಿರಿಶೃಂಗದಿಂದ ಕಂಡ ಫೇವಾ ಸರೋವರ, ತಾಲ್ ಬಾರಾಹಿ ಮಂದಿರ, ವಿಶ್ವಶಾಂತಿ ಪಗೋಡ ಸೇರಿದಂತೆ ಪೋಖರ ನಗರದ ವಿಹಂಗಮ ನೋಟ ನೇತ್ರಾನಂದಕರವಾಗಿತ್ತು. ಹತ್ತಿರದಿಂದ ದೂರದವರೆಗೆ ಹರಡಿದ್ದ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಅನ್ನಪೂರ್ಣ ಪರ್ವತಶ್ರೇಣಿ, ಕಣಿವೆಗಳು, ಬಿಳಿಯ ಮೋಡಗಳು, ಅಂಕುಡೊಂಕಿನ ದಾರಿಗಳು ಆ ಪರಿಸರದ ಅಗಾಧತೆ, ಸುಂದರತೆ, ಹಾಗು ವೈವಿಧ್ಯತೆಗಳನ್ನು ಪರಿಚಯಿಸಿದವು. ಮನೋಹರ ಮಹದೇವನ ದರುಶನದೊಡನೆ ರಮಣೀಯ ನಿಸರ್ಗದ ದರುಶನವೂ ಆಯಿತು.