Monday, April 27, 2026
Monday, April 27, 2026

ಬೆರಗುಗೊಳಿಸುವ ವಾಸ್ತುಶಿಲ್ಪದ ವಿಶ್ವವಿದ್ಯಾಲಯ

ದೇವಾಲಯದ ಶಿಲ್ಪಗಳು ಎಂಥವರನ್ನೂ ಬೆರಗುಗೊಳಿಸುತ್ತವೆ. ಹೊರಭಾಗದ ಮಿಥುನ ಶಿಲ್ಪಗಳು ಕುತೂಹಲ ಮೂಡಿಸುತ್ತವೆ. ಅರ್ಧಮಂಟಪದ ಶಿಲಾವೈಭವದಿಂದ ಮನಸ್ಸು ಹೊರಬರುವುದೇ ಇಲ್ಲ. ಕಂಬಗಳ ಮೇಲಿನ ಶಿಲ್ಪಗಳು ಹೊಸ ಕಥೆಯನ್ನೇ ಹೇಳುತ್ತವೆ. ಶೃಂಗಾರರಸವು ತುಂಬಿ ತುಳುಕಿದೆ. ಛತ್ತಿನಲ್ಲಿರುವ ನಾಗರಾಜನ ಶಿಲ್ಪವಂತೂ ಪರಮಾದ್ಭುತವಾಗಿದೆ.

  • ಬಂಡು ಕಟ್ಟಿ

ಐಹೊಳೆಯಲ್ಲಿರುವ ನೂರಾರು ಗುಡಿಗಳನ್ನು ಗಮನವಿಟ್ಟು ನೋಡಿದವರು ಇದನ್ನು ವಾಸ್ತುಶಿಲ್ಪ ಕಲೆಯ ತೊಟ್ಟಿಲು ಎನ್ನುತ್ತಾರೆ. ನಿಜ, ಐಹೊಳೆಯು ದೇವಾಲಯ ಶಿಲ್ಪಕಲೆಯ ಮೊದಲ ಶಾಲೆಯಾಗಿತ್ತು. ಆದರೆ ಐಹೊಳೆಯ ದುರ್ಗಾ ದೇವಾಲಯವನ್ನು ನೋಡಿದವರಿಗೆ ಇದು ಕೇವಲ ತೊಟ್ಟಿಲಲ್ಲ; ಇದು ವಿಶ್ವವಿದ್ಯಾಲಯವೇ ಆಗಿತ್ತು ಎನ್ನಿಸದಿರಲಾರದು. ಈ ದೇವಾಲಯವನ್ನು ನಿರ್ಮಿಸಿದ ಸ್ಥಪತಿಗಳು ತಮ್ಮ ಜಾಣ್ಮೆ ಹಾಗೂ ಪ್ರತಿಭೆಯನ್ನೆಲ್ಲಾ ಈ ದೇವಾಲಯ ನಿರ್ಮಾಣಕ್ಕಾಗಿ ಬಸಿದಿದ್ದಾರೆ! ಇದು ವಾಸ್ತುಶಿಲ್ಪದ ಮೇರುಕೃತಿ. ಸಾಂಪ್ರದಾಯಕ ಆಲೋಚನೆಗಳನ್ನು ಕೈಬಿಟ್ಟು ಆ ಕಾಲದ ಶಿಲ್ಪಿಗಳು ಹೊಸ ದಾರಿ ತುಳಿದಿದ್ದಾರೆ.

ಇದನ್ನೂ ಓದಿ: ಜಗದೊಡೆಯ ಜಗನ್ನಾಥನ ದರ್ಶನದಲ್ಲಿ ಸಿಕ್ಕ ನೆಮ್ಮದಿ

ಇದು ಸೂರ್ಯದೇವಾಲಯವಾಗಿತ್ತು ಎನ್ನುವುದು ಕೂಡಾ ಸೋಜಿಗದ ಸಂಗತಿ. ನಿಖರವಾದ ದಿನಾಂಕವುಳ್ಳ ಶಾಸನವು ಲಭ್ಯವಿಲ್ಲವಾದರೂ ಲಿಪಿಶಾಸ್ತ್ರಗಳ ಆಧಾರದ ಮೇಲೆ ದುರ್ಗಾ ದೇವಾಲಯವನ್ನು ಕ್ರಿ.ಶ. 700ಕ್ಕಿಂತ ಮೊದಲು ನಿರ್ಮಿಸಿದ್ದು ಎಂದು ನಂಬಬಹುದಾಗಿದೆ. ದೇವಾಲಯದ ಹಿಂಭಾಗವು ಅರ್ಧವೃತ್ತಾಕಾರವಾಗಿದ್ದು ಅಪರೂಪದ್ದಾಗಿದೆ. ಅರ್ಧವೃತ್ತಾಕಾರದ ಎರಡು ಪ್ರದಕ್ಷಿಣಾಪಥಗಳು ಈ ದೇವಾಲಯದ ಮೌಲ್ಯವನ್ನು ತುಂಬಾ ಹೆಚ್ಚಿಸಿವೆ. ಮೇಲೆ ಚತುರಸ್ರಾಕಾರದ ಶಿಖರವಿದ್ದು ಅದರ ತುದಿಯಲ್ಲಿದ್ದ ಅಮಲಕವು ಕೆಳಗೆ ಬಿದ್ದಿದೆ.

Untitled design - 2026-04-27T131257.707

ಹೆಸರಿನ ವಿಶೇಷತೆ:

ಐಹೊಳೆಯಲ್ಲಿರುವ ಗುಡಿಗಳ ಹೆಸರುಗಳೆಲ್ಲವೂ ಸ್ಥಳಿಯರು ನೀಡಿದ ಕೊಡುಗೆಗಳಾಗಿವೆ. ಗೌಡರಗುಡಿ, ಚಕ್ರಗುಡಿ, ಲಾಡಖಾನ ಗುಡಿ, ಗೌರಿಗುಡಿ, ಬಡಿಗೇರ ಗುಡಿ, ತಾರಪ್ಪನ ಗುಡಿ, ಹುಚ್ಚಮಲ್ಲಿಗುಡಿ, ಕೊಂತಿಗುಡಿ, ಮೇಗುತಿ, ರಾವಳಫಡಿ ಇತ್ಯಾದಿ. ಊರಲ್ಲಿ ಎಲ್ಲಿ ನಿಂತರೂ ಎತ್ತರವಾಗಿ ಎದ್ದು ಕಾಣುವ ಈ ದೇವಾಲಯವನ್ನು ಸ್ಥಳೀಯರು ದುರ್ಗಾಗುಡಿ ಎಂದು ಕರೆದರು, ಪಕ್ಕದಲ್ಲಿರುವ ದುರ್ಗದಿಂದಾಗಿ ಈ ಹೆಸರು ಬಂದಿದೆಯೆನ್ನುತ್ತಾರೆ ಕೆಲವರು. ಆದರೆ ಅದು ಹಾಗಾಗಿರಲಿಕ್ಕಿಲ್ಲ; ಏಕೆಂದರೆ ಈ ಭಾಗದಲ್ಲಿ ಕೋಟೆಗಳನ್ನು ದುರ್ಗವೆನ್ನುವುದಿಲ್ಲ.

ಹಾಗಾದರೆ ಇದು ಯಾಕೆ ದುರ್ಗಾ ದೇವಾಲಯ? ಉತ್ತರ ತುಂಬಾ ಸರಳವಾಗಿದೆ. ಹಳೆಯ ಕಾಲದಲ್ಲಿ ಈ ದೇವಾಲಯದೊಳಗೆ ಹೋಗಲು ಸಾಧ್ಯವಿರಲಿಲ್ಲ. ಕಸ ಕಡ್ಡಿಗಳು, ಕಲ್ಲುಮಣ್ಣು ರಾಶಿಯಿಂದ ಜನರು ಹೊರಗಿನಿಂದ ಮಾತ್ರ ದೇವಾಲಯ ನೋಡುವಂತಿತ್ತು. ಉತ್ತರದ ಗೋಡೆಯ ಮೇಲಿನ ಮಾಡಿನಲ್ಲಿ ಎಷ್ಟು ದೂರದಿಂದಲೂ ಕಾಣುವ ಮಹಿಷಾಸುರ ಮರ್ದಿನಿಯ ಮೂರ್ತಿ ಇದೆ. ಇದು ಎಲ್ಲರನ್ನೂ ಆಕರ್ಷಿಸುತ್ತದೆ. ಜನರು ಇದನ್ನು ದುರ್ಗಾದೇವಿ ಎಂದು ಭಾವಿಸಿ ದುರ್ಗಾಗುಡಿ ಎಂದು ಕರೆದಿರುವ ಸಂಭಾವ್ಯತೆ ಹೆಚ್ಚಾಗಿದೆ.

Untitled design - 2026-04-27T131245.263

ಬೆರಗುಗೊಳಿಸುವ ಶಿಲ್ಪಗಳು

ದೇವಾಲಯದ ಶಿಲ್ಪಗಳು ಎಂಥವರನ್ನೂ ಬೆರಗುಗೊಳಿಸುತ್ತವೆ. ಹೊರಭಾಗದ ಮಿಥುನ ಶಿಲ್ಪಗಳು ಕುತೂಹಲ ಮೂಡಿಸುತ್ತವೆ. ಅರ್ಧಮಂಟಪದ ಶಿಲಾವೈಭವದಿಂದ ಮನಸ್ಸು ಹೊರಬರುವುದೇ ಇಲ್ಲ. ಕಂಬಗಳ ಮೇಲಿನ ಶಿಲ್ಪಗಳು ಹೊಸ ಕಥೆಯನ್ನೇ ಹೇಳುತ್ತವೆ. ಶೃಂಗಾರರಸವು ತುಂಬಿ ತುಳುಕಿದೆ. ಛತ್ತಿನಲ್ಲಿರುವ ನಾಗರಾಜನ ಶಿಲ್ಪವಂತೂ ಪರಮಾದ್ಭುತವಾಗಿದೆ.

ಈ ಗುಡಿಗೆ ಎರಡು ಅಧಿಷ್ಠಾನಗಳಿವೆ. ಅರ್ಧ ವರ್ತುಳಾಕಾರದ ಎರಡು ಪ್ರದಕ್ಷಿಣಾಪಥಗಳಿವೆ. ಗರ್ಭಗೃಹವು ಮಂಟಪಕ್ಕಿಂತ ಎತ್ತರದಲ್ಲಿದೆ. ಒಳ ಪ್ರದಕ್ಷಿಣಾಪಥದಲ್ಲಿ ಕಲ್ಲಿನ ಜಾಲಂದ್ರಗಳಿವೆ. ಅವು ಹನ್ನೆರಡು ಮಾಸಗಳು, ಆರು ಋತುಗಳನ್ನು ಪ್ರತಿಬಿಂಬಿಸುತ್ತಿದ್ದು ಇದು ಸೂರ್ಯದೇವಾಲಯ ಎಂಬುದನ್ನು ಗಟ್ಟಿಗೊಳಿಸುತ್ತವೆ. ಮಂಟಪದಲ್ಲಿರುವ ಕಂಬಗಳು ಚಚ್ಚೌಕಾಗಿದ್ದು ಅವುಗಳ ಮೇಲೆ ಸುಂದರ ಶಿಲ್ಪಗಳಿವೆ. ಈ ಕಂಬಗಳಿಗೆ ನಾಲ್ಕು ಅಡಿ ಎತ್ತರದ ಬೋದಿಗೆಗಳಿದ್ದು ತುಂಬಾ ಅಲಂಕೃತವಾಗಿವೆ. ಈ ಬೋದಿಗೆಗಳು ಜಗತ್ಪ್ರಸಿದ್ಧ ಅಜಂತಾ 72ನೆಯ ಗುಹೆಯ ಬೋದಿಗೆಗಳನ್ನು ಹೋಲುತ್ತವೆ.

Untitled design - 2026-04-27T131305.226

ಮುಖಮಂಟಪದ ಕಂಭಗಳಲ್ಲಿ ಹಿರಣ್ಯಕಶಿಪುವಿನ ಹೊಟ್ಟೆ ಬಗೆಯುತ್ತಿರುವ ನರಸಿಂಹ, ಅರ್ಧನಾರೀಶ್ವರ ಮುಂತಾದ ವಿಗ್ರಹಗಳಿವೆ. ಮೊಗಸಾಲೆಯ ಮಾಡುಗಳಲ್ಲಿ ವೃಷಭವಾಹನ ಶಿವ, ಗರುಡಾಸೀನ ವಿಷ್ಣು, ನಿಂತಿರುವ ನರಸಿಂಹ, ವರಾಹ, ಹರಿಹರ, ಮಹಿಷಾಸುರಮರ್ದಿನಿ ಮುಂತಾದ ಶಿಲ್ಪಗಳು ಶಿಲ್ಪಿ ಚಾಣಾಕ್ಷತೆಗೆ ಸಾಕ್ಷಿಯಾಗಿ ನಿಂತಿವೆ.

ವೈಚಾರಿಕ ಲೇಖಕರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ