Sunday, July 20, 2025
Sunday, July 20, 2025

ಅಚಲೇಶ್ವರ ದೇವಾಲಯ ವಿಜ್ಞಾನಲೋಕಕ್ಕೆ ಸವಾಲು

ಇಲ್ಲಿ ಪ್ರತಿಷ್ಠಾಪನೆಯಾಗಿರುವ ಶಿವಲಿಂಗ ಎಷ್ಟು ಆಳದಲ್ಲಿದೆ ಎಂದು ತಿಳಿಯಲು ಒಮ್ಮೆ ಉತ್ಖನನ ನಡೆಸಲಾಯಿತು. ಹಲವಾರು ದಿನಗಳವರೆಗೆ ಅಗೆದರೂ ಅದರ ತುದಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಆದ್ದರಿಂದ ಅಗೆಯುವ ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಲಾಯಿತು. ಈ ಶಿವಲಿಂಗದ ಆಳವನ್ನು ಇಂದಿನವರೆಗೂ ಅಂದಾಜು ಮಾಡಲಾಗಿಲ್ಲ.

- ಶಿವಮಾದು

ಭಾರತದಲ್ಲಿ ಅನೇಕ ನಿಗೂಢ ಮತ್ತು ಪವಾಡದ ದೇವಾಲಯಗಳಿವೆ. ಇಂದಿಗೂ ವಿಜ್ಞಾನಕ್ಕೆ ಸವಾಲಾಗಿರುವ ಅನೇಕ ಪುರಾತನ ಪುಣ್ಯಸ್ಥಳಗಳಿವೆ. ಅವುಗಳಲ್ಲಿ ಒಂದು ರಾಜಸ್ಥಾನದ ಧೋಲ್ಪುರದಲ್ಲಿ ನೆಲೆನಿಂತಿದೆ. ಶಿವಭಕ್ತರು ನೋಡಲೇಬೇಕಾದ ಪವಿತ್ರ ಸ್ಥಳವಿದು. ಶ್ರಾವಣ ಶಿವರಾತ್ರಿ ಸಮಯದಲ್ಲಿ ದೇಶವಿದೇಶಗಳಿಂದ ಭಕ್ತರು ಬಂದು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಪವಾಡ ತಿಳಿದರೆ ನಿಮಗೆ ಒಂದು ಕ್ಷಣ ಅಚ್ಚರಿಯಾಗುವುದಂತೂ ಖಂಡಿತ.

ಧೋಲ್ಪುರದ ಚಂಬಲ್ ನದಿಯ ಕಂದರಗಳಲ್ಲಿರುವ ಈ ಶಿವ ದೇವಾಲಯವನ್ನು ಜನರು 'ಅಚಲೇಶ್ವರ ಮಹಾದೇವ' ದೇವಾಲಯ ಎಂದು ಕರೆಯುತ್ತಾರೆ. ಇಲ್ಲಿನ ವಿಶೇಷತೆ ಏನೆಂದರೆ ಈ ದೇವಾಲಯದಲ್ಲಿರುವ ಶಿವಲಿಂಗವು ದಿನಕ್ಕೆ ಮೂರು ಬಾರಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಈ ಪವಾಡ ನೋಡಲೆಂದೇ ದೇಶ ವಿದೇಶಗಳಿಂದ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಶಿವಲಿಂಗವು ಈ ರೀತಿ ತನ್ನ ಬಣ್ಣವನ್ನು ಬದಲಾಯಿಸುವುದರ ಹಿಂದಿನ ಕಾರಣವನ್ನು ವಿಜ್ಞಾನಿಗಳಿಗೂ ಇಲ್ಲಿಯವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

achaleshar

ಏನು ಈ ನಿಗೂಢತೆ?

ಧೋಲ್ಪುರದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯ ಎಷ್ಟು ಹಳೆಯದು ಮತ್ತು ಈ ಶಿವಲಿಂಗವನ್ನು ಯಾವಾಗ ಸ್ಥಾಪಿಸಲಾಯಿತು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ಇದು ಸುಮಾರು ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಇಲ್ಲಿರುವ ಶಿವನನ್ನು ಸ್ವಯಂಭು ಎಂದು ಹೇಳಲಾಗುತ್ತದೆ. ಇಲ್ಲಿ ಪ್ರತಿಷ್ಠಾಪನೆಯಾಗಿರುವ ಶಿವಲಿಂಗ ಎಷ್ಟು ಆಳದಲ್ಲಿದೆ ಎಂದು ತಿಳಿಯಲು ಒಮ್ಮೆ ಉತ್ಖನನ ನಡೆಸಲಾಯಿತು. ಹಲವಾರು ದಿನಗಳವರೆಗೆ ಅಗೆದರೂ ಅದರ ತುದಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಆದ್ದರಿಂದ ಅಗೆಯುವ ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಲಾಯಿತು. ಈ ಶಿವಲಿಂಗದ ಆಳವನ್ನು ಇಂದಿನವರೆಗೂ ಅಂದಾಜು ಮಾಡಲಾಗಿಲ್ಲ. ಪ್ರಾಚೀನ ಕಾಲದಲ್ಲಿ, ರಾಜರು ಮತ್ತು ಚಕ್ರವರ್ತಿಗಳು ಸಹ ಶಿವಲಿಂಗದ ಬುಡವನ್ನು ಕಂಡು ಹಿಡಿಯಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ತ್ರಿನೇತ್ರಲಿಂಗ ತ್ರಿವರ್ಣಲಿಂಗ!

ಇಲ್ಲಿನ ಶಿವಲಿಂಗವು ದಿನಕ್ಕೆ ಮೂರು ಬಾರಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಶಿವಲಿಂಗ ಕೆಂಪು ಬಣ್ಣದಲ್ಲಿದ್ದರೆ, ಮಧ್ಯಾಹ್ನದ ವೇಳೆಗೆ ಕೇಸರಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಸೂರ್ಯಾಸ್ತವಾಗುತ್ತಿದ್ದಂತೆ ಶಿವಲಿಂಗದ ಬಣ್ಣವು ಗಾಢವಾಗುತ್ತದೆ,. ಅಂದರೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಶಿವಲಿಂಗದ ಬಣ್ಣ ಬದಲಾಗಲು ಕಾರಣವೇನು ಎಂಬುದು ಯಾರಿಗೂ ಇದು ತಿಳಿದಿಲ್ಲ. ಶಿವಲಿಂಗವು ಈ ರೀತಿ ತನ್ನ ಬಣ್ಣವನ್ನು ಬದಲಾಯಿಸುವುದರ ಹಿಂದಿನ ಕಾರಣವನ್ನು ವಿಜ್ಞಾನಿಗಳಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಶಿವಲಿಂಗದ ಬಣ್ಣದಲ್ಲಿನ ಬದಲಾವಣೆಯನ್ನು ನೋಡುವುದು ಬಹಳ ಪವಿತ್ರ ಮತ್ತು ಪುಣ್ಯವೆಂದು ಪರಿಗಣಿಸಲಾಗಿದೆ.

achaleshwara temple (1)

ಎಲ್ಲ ಎಷ್ಟಾರ್ಥಗಳು ಸಾಕಾರ!

ಈ ನಿಗೂಢ ಶಿವಲಿಂಗಕ್ಕೆ ಭೇಟಿ ನೀಡುವುದರಿಂದ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಜೀವನದ ಎಲ್ಲ ರೀತಿಯ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ, ಈ ದೇವಾಲಯಕ್ಕೆ ಭೇಟಿ ನೀಡಿದ ನಂತರ, ವ್ಯಕ್ತಿಗೆ ಅದರಿಂದ ಪರಿಹಾರ ಸಿಗುತ್ತದೆ. ಇದಲ್ಲದೇ ಅವಿವಾಹಿತರು ಈ ಶಿವಲಿಂಗದ ದರ್ಶನ ಪಡೆದರೆ ಅವರು ಬಯಸಿದ ಜೀವನ ಸಂಗಾತಿಯನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ.

ದೇವಾಲಯವನ್ನು ರಕ್ಷಿಸಿದ ನಂದಿ

2500 ವರ್ಷಗಳಿಗೂ ಹಳೆಯದಾದ ಈ ಅಚಲೇಶ್ವರ ಮಹಾದೇವ ದೇವಾಲಯದಲ್ಲಿ ಬೃಹತ್​​ ನಂದಿಯ ವಿಗ್ರಹ ಇದೆ. ಈ ನಂದಿ ವಿಗ್ರಹವನ್ನು ಐದು ವಿಭಿನ್ನ ಲೋಹಗಳ ಮಿಶ್ರಲೋಹದಿಂದ ಮಾಡಲಾಗಿದೆ. ಲೂಟಿಕೋರ ಇಸ್ಲಾಂ ದೊರೆಗಳು ಈ ದೇವಾಲಯವನ್ನು ಧ್ವಂಸ ಮಾಡಲು ಮುಂದಾದಾಗ ಇಲ್ಲಿರುವ ನಂದಿ ಲಕ್ಷಾಂತರ ಜೇನುನೊಣಗಳನ್ನು ಬಿಡುಗಡೆ ಮಾಡುವ ಮೂಲಕ ಮುಸ್ಲಿಂ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿತು ಎಂದು ದೇವಾಲಯದ ಅಧಿಕಾರಿಗಳು ಹೇಳುತ್ತಾರೆ.

ಶ್ರಾವಣ ಮಾಸದಲ್ಲಿ ಜಾತ್ರೆ ಸಡಗರ

ಶ್ರಾವಣ ಮಾಸದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ. ಈ ಸಮಯದಲ್ಲಿ, ಇಲ್ಲಿ ಒಂದು ದೊಡ್ಡ ಜಾತ್ರೆಯನ್ನು ಸಹ ಆಯೋಜಿಸಲಾಗುತ್ತದೆ. ಆದರೆ ಕೊರೋನಾದಿಂದಾಗಿ ಎರಡು ಮೂರು ವರ್ಷಗಳ ಕಾಲ ಇಲ್ಲಿನ ಜಾತ್ರೆಯನ್ನು ನಿಲ್ಲಿಸಲಾಗಿತ್ತು. ಈಗ ಶ್ರಾವಣ ಮಾಸದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಕಾಣಬಹುದು. ಶಿವಲಿಂಗದ ವಿಶಿಷ್ಟತೆಯಿಂದಾಗಿ, ಈ ದೇವಾಲಯದ ಖ್ಯಾತಿಯು ವೇಗವಾಗಿ ಹರಡುತ್ತಿದೆ. ಜತೆಗೆ ವಿದೇಶಿಗರೂ ಈ ದೇವಾಲಯಕ್ಕೆ ಭೇಟಿ ನೀಡುವುದನ್ನು ಕಾಣಬಹುದು.

acahleshwara shivaling

ದೇವಾಲಯವನ್ನು ತಲುಪುವುದು ಹೇಗೆ?

ಅಚಲೇಶ್ವರ ಮಹಾದೇವ ದೇವಾಲಯವು ಧೋಲ್ಪುರದ ಚಂಬಲ್‌ನಲ್ಲಿದೆ. ಧೋಲ್ಪುರವು ರಾಜಸ್ಥಾನದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಗರವಾಗಿದೆ. ಧೋಲ್ಪುರವು ಜೈಪುರದಿಂದ ಸುಮಾರು 280 ಕಿ.ಮೀ ದೂರದಲ್ಲಿದೆ. ಆಗ್ರಾದಿಂದ ಧೋಲ್ಪುರ ಕೇವಲ 55 ಕಿ.ಮೀ ದೂರದಲ್ಲಿದೆ.

ಬಸ್ ಮೂಲಕ:

ಇತರ ಪ್ರಮುಖ ನಗರಗಳಿಂದ ಧೋಲ್ಪುರಕ್ಕೆ ಅನೇಕ ಬಸ್ಸುಗಳು ಹೋಗುತ್ತವೆ. ಇಲ್ಲಿ ಮೂವತ್ತು ನಿಮಿಷಗಳಿಗೊಮ್ಮೆ ಬಸ್​​ ಸೌಲಭ್ಯವಿದ್ದು, ನೀವು ಬಸ್ಸಿನಲ್ಲಿ ಪ್ರಯಾಣಿಸಬಹುದು.

ರೈಲು ಮೂಲಕ:

ಅನೇಕ ರೈಲುಗಳು ಧೋಲ್ಪುರ್ ಜಂಕ್ಷನ್ ರೈಲು ನಿಲ್ದಾಣಕ್ಕೆ ಹೋಗುತ್ತವೆ.

ವಿಮಾನದ ಮೂಲಕ:

ಆಗ್ರಾ ವಿಮಾನ ನಿಲ್ದಾಣ (ಖೇರಿಯಾ ವಿಮಾನ ನಿಲ್ದಾಣ) ಧೋಲ್ಪುರಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ