ತಮಿಳುನಾಡಿಗೆ ಭೇಟಿ ನೀಡಿದರೆ ಈ ಪುಣ್ಯಕ್ಷೇತ್ರ ಮಿಸ್ ಮಾಡಲೇಬೇಡಿ
ಈ ದೇವಾಲಯಕ್ಕೆ ಭೇಟಿ ನೀಡುವವರು ಮೊದಲು ಸಮುದ್ರದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇದು ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ತಮಿಳುನಾಡಿನಲ್ಲಿ ಸುಬ್ರಹ್ಮಣ್ಯ(ಮುರುಗನ್) ದೇವರಿಗೆ ಅರ್ಪಿತವಾದ ಪ್ರಮುಖ ಆರು ಪ್ರಸಿದ್ಧ ಪುಣ್ಯಕ್ಷೇತ್ರಗಳಿವೆ. ಪುರಾಣಕಥೆಗಳು ಮತ್ತು ಮಹಿಮೆಗಳಿಗೆ ಈ ಸ್ಥಳ ಸಾಕ್ಷಿಯಾಗಿದ್ದು ಭಕ್ತರು ಸುಬ್ರಹ್ಮಣ್ಯೇಶ್ವರನಿಗೆ ಅಪಾರ ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸುತ್ತಾರೆ. ಈ ಆರು ಕ್ಷೇತ್ರಗಳಲ್ಲಿ ಐದು ದೇವಾಲಯಗಳು ಪರ್ವತ ಪ್ರದೇಶಗಳಲ್ಲಿ ಇದ್ದರೆ, ಒಂದು ಮಾತ್ರ ಸಮುದ್ರತೀರದಲ್ಲಿದೆ. ಅದುವೇ ತಿರುಚೆಂಡೂರಿನ ಕುಮಾರಸ್ವಾಮಿ ದೇವಸ್ಥಾನ. ಇದು ಆರು ಕ್ಷೇತ್ರಗಳ ಪೈಕಿ ಮೊದಲನೆಯದು. ಹಿಂದೂಗಳು ತಪ್ಪದೆ ಭೇಟಿ ನೀಡಬೇಕಾದ ಅದ್ಭುತ ಕ್ಷೇತ್ರಗಳಲ್ಲಿ ಒಂದು. ಈ ದೇವಾಲಯದ ಐತಿಹಾಸಿಕ ಹಿನ್ನೆಲೆ, ಸುಬ್ರಹ್ಮಣ್ಯನ ಮಹಿಮೆಗಳು, ಇಲ್ಲಿನ ಪ್ರಕೃತಿ ಸೌಂದರ್ಯ ಭಕ್ತರನ್ನು ಬೆರಗುಗೊಳಿಸುತ್ತದೆ.

ಪುರಾಣ ಕಥೆ
ಮೂರು ಲೋಕಗಳಲ್ಲಿ ತೊಂದರೆ ಉಂಟುಮಾಡುತ್ತಿದ್ದ ತಾರಕಾಸುರ ಮತ್ತು ಸುರಪಾದ ಎಂಬ ರಾಕ್ಷಸರ ವಧೆಗಾಗಿ ಸುಬ್ರಹ್ಮಣ್ಯ ಹುಡುಕುತ್ತಿರುತ್ತಾನೆ. ಈ ರಾಕ್ಷಸರನ್ನು ಕೊಲ್ಲುವ ಮೊದಲು ಅವನು ಈ ಸ್ಥಳದಲ್ಲಿಯೇ ಇದ್ದು ಶಿವನನ್ನು ಪೂಜಿಸಿದನು ಎಂದು ಹೇಳಲಾಗುತ್ತದೆ. ಕುಮಾರಸ್ವಾಮಿ ತಾರಕಾಸುರನನ್ನು ಕೊಂದ ನಂತರ, ರಾಕ್ಷಸ ಸುರಪಾದನು ಆಲದ ಮರದ ರೂಪದಲ್ಲಿ ಈ ಸ್ಥಳದಲ್ಲಿ ಅಡಗಿಕೊಂಡಿರುತ್ತಾನೆ. ಇದನ್ನು ಕಂಡ ಕುಮಾರಸ್ವಾಮಿ ತನ್ನ ಆಯುಧದಿಂದ ಆಲದ ಮರವನ್ನು ಎರಡು ತುಂಡುಗಳಾಗಿ ಕತ್ತರಿಸಿ ರಾಕ್ಷಸನನ್ನು ಸಂಹರಿಸುತ್ತಾನೆ. ಕೊನೆಯ ಕ್ಷಣಗಳಲ್ಲಿ, ರಾಕ್ಷಸನ ಇಚ್ಛೆಯಂತೆ, ಸುಬ್ರಹ್ಮಣೇಶ್ವರನು ಆಲದ ಮರದ ಎರಡು ಭಾಗಗಳಿಂದ ರೂಪುಗೊಂಡ ನವಿಲು ಮತ್ತು ಕೋಳಿಯನ್ನು ತನ್ನ ವಾಹನಗಳಾಗಿ ಸ್ವೀಕರಿಸುತ್ತಾನೆ. ನಂತರ ದೇವರು ಭಕ್ತರನ್ನು ಆಶೀರ್ವದಿಸಲು ಇಲ್ಲಿ ನೆಲೆಸಿದನು ಎಂದು ಹೇಳಲಾಗುತ್ತದೆ.
ಶಕ್ತಿಯುತ ವಿಗ್ರಹ
ತಿರುಚೆಂಡೂರಿನ ಸುಬ್ರಹ್ಮಣ್ಯೇಶ್ವರ ವಿಗ್ರಹವು ಅತ್ಯಂತ ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಅನೇಕ ಘಟನೆಗಳಿವೆ. 1646 ಮತ್ತು 1648 ರ ನಡುವೆ, ತಿರುಚೆಂಡೂರ್ ಮುರುಗನ್ ದೇವಾಲಯವನ್ನು ಡಚ್ ಈಸ್ಟ್ ಇಂಡಿಯಾ ಕಂಪನಿ ಆಕ್ರಮಿಸಿಕೊಂಡಿತ್ತು. ಪೋರ್ಚುಗೀಸರೊಂದಿಗಿನ ಯುದ್ಧದ ಸಂದರ್ಭದಲ್ಲಿ, ಅವರು ಈ ದೇವಾಲಯದಲ್ಲಿ ಆಶ್ರಯ ಪಡೆದರು. ಸ್ಥಳೀಯರು ಅವರನ್ನು ಹೊರಹಾಕಲು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ. ಹೆಚ್ಚುತ್ತಿರುವ ಒತ್ತಡದಿಂದ, ಡಚ್ಚರು ದೇವಾಲಯದ ಸಂಪತ್ತು ಮತ್ತು ಮುಖ್ಯ ವಿಗ್ರಹವನ್ನು ಕದ್ದು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಅವರು ವಿಗ್ರಹದೊಂದಿಗೆ ಸಮುದ್ರ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ, ಒಂದು ದೊಡ್ಡ ಬಿರುಗಾಳಿ ಬಂದು ಅವರನ್ನು ಭಯಭೀತಗೊಳಿಸಿತು.
ಇದೆಲ್ಲವೂ ವಿಗ್ರಹದಿಂದಲೇ ಎಂದು ಭಾವಿಸಿ ಅವರು ಅದನ್ನು ಸಮುದ್ರದಲ್ಲಿ ಬಿಟ್ಟರು. ನಂತರ ಬಿರುಗಾಳಿಯ ಪ್ರಭಾವ ಕಡಿಮೆಯಾಯಿತು. ಕೆಲವು ದಿನಗಳ ನಂತರ, ವಡಮಲಯಪ್ಪನ್ ಪಿಳ್ಳೈ ಎಂಬ ಭಕ್ತನಿಗೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ಕನಸಿನಲ್ಲಿ ಕಾಣಿಸಿಕೊಂಡು “ಸಮುದ್ರದಲ್ಲಿ ಗರುಡ ಪಕ್ಷಿ ಸಂಚರಿಸುವ ಪ್ರದೇಶದಲ್ಲಿ ನಿಂಬೆಹಣ್ಣು ತೇಲುತ್ತದೆ. ಅದರ ಕೆಳಭಾಗದಲ್ಲಿ ಹುಡುಕು” ಎಂದು ಹೇಳಿ ಕಣ್ಮರೆಯಾಗುತ್ತಾನೆ. ಅದೇ ರೀತಿ, ಅವನು ಸಮುದ್ರದಲ್ಲಿ ಹುಡುಕಿದಾಗ, ವಿಗ್ರಹವು ಕಾಣುತ್ತದೆ.. ಪುನಃ ವಿಗ್ರಹವನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಇದೆಲ್ಲವೂ ಇಂದಿಗೂ ದೇವಾಲಯದಲ್ಲಿ ಚಿತ್ರಗಳ ರೂಪದಲ್ಲಿ ಕೆತ್ತಿರುವುದನ್ನು ಕಾಣಬಹುದು.
ಬಾಲಸುಬ್ರಹ್ಮಣ್ಯ ಸ್ವಾಮಿಯ ರೂಪ
ಇಲ್ಲಿನ ದೇವರ ವಿಗ್ರಹವು ಬಾಲಕನ ರೂಪದಲ್ಲಿದ್ದು, ಧಾನ್ಯ ಮುದ್ರೆಯಲ್ಲಿರುತ್ತಾನೆ. ಇಂಥ ಬಾಲರೂಪದ ವಿಗ್ರಹವು ಇಡೀ ದೇಶದಲ್ಲಿ ಬೇರೆಲ್ಲೂ ಇಲ್ಲ. ಬಾಲಕನಾಗಿ ರಾಕ್ಷಸರನ್ನು ಸೋಲಿಸಿದ ಕುಮಾರಸ್ವಾಮಿಯನ್ನು ಇಲ್ಲಿ ಬಾಲಸುಬ್ರಹ್ಮಣ್ಯ ಸ್ವಾಮಿ ಎಂದು ಪೂಜಿಸಲಾಗುತ್ತದೆ. ಸ್ಕಂದ ಷಷ್ಟಿ ಪ್ರಯುಕ್ತ 6 ದಿನಗಳ ಕಾಲ ದೊಡ್ಡ ಉತ್ಸವ ನಡೆಯುತ್ತದೆ. ಈ ದೇವಾಲಯದಲ್ಲಿ ಕುಮಾರಸ್ವಾಮಿ ಎರಡು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಶಿವ, ವಲ್ಲಿ ಮತ್ತು ದೇವಸೇನಾ ದೇವಾಲಯಗಳು ಸಹ ವಿಶೇಷವಾಗಿವೆ.
ವಿಭೂತಿ ಮಹಿಮೆ
ಸುಬ್ರಹ್ಮಣ್ಯೇಶ್ವರನ ವಿಗ್ರಹವನ್ನು ಹೊರತೆಗೆದು ಪ್ರತಿಷ್ಠಾಪಿಸಿದ ನಂತರ, ತಿರುವೈದುರೈ ಮಠದಲ್ಲಿ ವಾಸಿಸುತ್ತಿದ್ದ ದೇಶಿಕಮೂರ್ತಿಗೆ ಸ್ವಾಮಿ ಕನಸಿನಲ್ಲಿ ಕಾಣಿಸಿಕೊಂಡರಂತೆ. ಅವರು 9 ಅಂತಸ್ತಿನ ರಾಜ ಗೋಪುರವನ್ನು ನಿರ್ಮಿಸಲು ಹೇಳುತ್ತಾರೆ. ಬಡವನಾಗಿದ್ದ ದೇಶಿಕಮೂರ್ತಿ, ದೇವಾಲಯ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸ್ವಾಮಿ ವಿಭೂತಿಯನ್ನು ವಿತರಿಸುತ್ತಾರೆ. ಅವರು ಸ್ವಲ್ಪ ದೂರ ಹೋದಾಗ, ವಿಭೂತಿ ಚಿನ್ನದ ನಾಣ್ಯಗಳಾಗಿ ಬದಲಾಗುತ್ತದೆ. ಆಶ್ಚರ್ಯದಿಂದ ಜನರು ಸ್ವಯಂಪ್ರೇರಣೆಯಿಂದ ದೇವಾಲಯ ನಿರ್ಮಾಣದಲ್ಲಿ ಭಾಗವಹಿಸಿ ಗೋಪುರದ ನಿರ್ಮಾಣವನ್ನು ಪೂರ್ಣಗೊಳಿಸುತ್ತಾರೆ.ಇದು ಚಾಲ್ತಿಯಲ್ಲಿರುವ ಇನ್ನೊಂದು ನಂಬಿಕೆ. ಅಂದಿನಿಂದ, ಭಕ್ತರು ಸ್ವಾಮಿ ವಿಭೂತಿಯನ್ನು ಬಹಳ ಮಹಿಮೆಯುಳ್ಳದ್ದಾಗಿ ಪರಿಗಣಿಸುತ್ತಾರೆ. ಇದನ್ನು ಹಣೆಯ ಮೇಲೆ ಧರಿಸುತ್ತಾರೆ ಹಾಗೂ ವಿಭೂತಿಯನ್ನು ಮನೆಯಲ್ಲಿ ಇಡುವುದರಿಂದ ಅಪಾಯಗಳು ಮತ್ತು ಕಾಯಿಲೆಗಳು ದೂರವಾಗುತ್ತವೆ ಎಂದು ನಂಬಿದ್ಧಾರೆ.

ಸುನಾಮಿಯನ್ನು ಹಿಮ್ಮೆಟ್ಟಿಸಿದ ದೇವಾಲಯ
ಡಿಸೆಂಬರ್ 26, 2004 ರಂದು ತಮಿಳುನಾಡಿಗೆ ಅಪ್ಪಳಿಸಿದ ಸುನಾಮಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಕಡಲ ತೀರದಿಂದ ಕರಾವಳಿಯ ಕೆಲವು ಮೈಲುಗಳ ವರೆಗೆ ಎಲ್ಲವೂ ಕೊಚ್ಚಿಹೋಯಿತು. ಆದಾಗ್ಯೂ, ಪಕ್ಕದಲ್ಲಿರುವ ಈ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ. ಇದಲ್ಲದೆ, ಈ ದೇವಾಲಯದಿಂದ ಸುನಾಮಿ ಎರಡು ಕಿಲೋಮೀಟರ್ ಹಿಂದಕ್ಕೆ ಸರಿಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ದೇವಾಲಯದಲ್ಲಿರುವ ಶಾಸನಗಳಲ್ಲಿ ನೀರಿನಿಂದ ದೇವಾಲಯಕ್ಕೆ ಯಾವ ಹಾನಿಯಾಗುವುದಿಲ್ಲ ಎಂಬ ಉಲ್ಲೇಖ ಇದೆ ಎಂದು ಹೇಳಲಾಗುತ್ತದೆ. ಇದನ್ನು ಭಕ್ತರು ದೈವಿಕವೆಂದು ಪರಿಗಣಿಸುತ್ತಾರೆ.
ದೇವಾಲಯಕ್ಕೆ ಭೇಟಿ ನೀಡುವವರು ಮೊದಲು ಸಮುದ್ರದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇದು ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಈ ದೇವಾಲಯವು ವರ್ಷವಿಡೀ, ವಿಶೇಷವಾಗಿ ಪ್ರಮುಖ ಹಬ್ಬಗಳು ಮತ್ತು ಶುಭ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಇದು ಅಂತಾರಾಷ್ಟ್ರೀಯ ಮಾನ್ಯತೆ ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟ ತಮಿಳುನಾಡಿನ ನಾಲ್ಕನೇ ಹಿಂದೂ ದೇವಾಲಯವಾಗಿದೆ.
ತಲುಪುವುದು ಹೇಗೆ?
ತಿರುಚೆಂಡೂರು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿದೆ. ಈ ದೇವಾಲಯವು ತೂತುಕುಡಿಯಿಂದ 40 ಕಿ.ಮೀ, ತಿರುನಲ್ವೇಲಿಯಿಂದ 60 ಕಿ.ಮೀ, ಕನ್ಯಾಕುಮಾರಿಯಿಂದ 90 ಕಿ.ಮೀ ಮತ್ತು ಮಧುರೈನಿಂದ 175 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ತಮಿಳುನಾಡು ಸರ್ಕಾರಿ ಬಸ್ಸುಗಳು, ಟ್ಯಾಕ್ಸಿಗಳು ಮತ್ತು ಖಾಸಗಿ ವಾಹನಗಳ ಮೂಲಕ ತಲುಪಬಹುದು.
ರೈಲಿನ ಮೂಲಕ ಬರುವವರು ಚೆನ್ನೈನಿಂದ ತಿರುನಲ್ವೇಲಿಗೆ ರೈಲು ಮಾರ್ಗವಾಗಿ ಬಂದು ಅಲ್ಲಿಂದ ರಸ್ತೆಯ ಮೂಲಕ ಇಲ್ಲಿಗೆ ತಲುಪಬಹುದು.
ವಿಮಾನದ ಮೂಲಕ ಬರುವವರಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ತೂತುಕ್ಕುಡಿ. ಇದು 40 ಕಿ.ಮೀ ದೂರದಲ್ಲಿದೆ. ಇದು ಚೆನ್ನೈ ವಿಮಾನ ನಿಲ್ದಾಣದಿಂದ 617 ಕಿ.ಮೀ ದೂರದಲ್ಲಿದೆ. ಚೆನ್ನೈನಲ್ಲಿ ವಿಮಾನದ ಮೂಲಕ ಬರುವವರು ಇಲ್ಲಿಗೆ ರೈಲು ಅಥವಾ ರಸ್ತೆಯ ಮೂಲಕ ಪ್ರಯಾಣಿಸಬೇಕು.