ಇಲ್ಲಿ ಸಿಖ್ಖರಿಗೂ ಸಿಕ್ಕಿದೆ ಪುಣ್ಯಸ್ಥಾನ !
ತೇಟ್ವಾಲ್ ಕೇವಲ ಹಿಂದು ಪವಿತ್ರ ಸ್ಥಳವಾಗಿರದೇ ಸಿಖ್ ಗುರುದ್ವಾರದ ಅಸ್ತಿತ್ವದಿಂದ ಅವರಿಗೂ ಪವಿತ್ರ ಸ್ಥಳವಾಗಿದೆ. ಹೀಗಾಗಿ ಯಾತ್ರಿಕರ ಸಂದಣಿಯೂ ಇಲ್ಲಿ ಸಹಜವಾಗಿಯೇ ಹೆಚ್ಚಾಗಿದೆ.
- ಮೋಹನ್ ಭಟ್ ಅಗಸೂರು
ಶತಮಾನಗಳ ಹಿಂದೆ ಅಖಂಡ ಹಿಂದೂ ರಾಷ್ಟ್ರ ವಿಶಾಲವಾಗಿದ್ದಾಗ ಅಂದರೆ ಈಗಿನ ಪಿ ಓ ಕೆ ಕೂಡ ನಮ್ಮೊಂದಿಗೇ ಇದ್ದಾಗ ವಿಶ್ವದ ಗಮನ ಸೆಳೆದಿದ್ದ ಶಾರದಾ ದೇವಸ್ಥಾನ ಹಾಗೂ ಗುರು ಶಂಕರರು ಸ್ಥಾಪಿಸಿದ್ದ ಶಾರದಾ ವಿದ್ಯಾಪೀಠ ಇತಿಹಾಸದ ಸುವರ್ಣ ಪುಟಗಳಲ್ಲಿ ಸೇರಿದೆ. ಆದರೆ, ಆಗಿನ ವೈಭವದ ದಾಖಲೆಗಳು ಇಂದಿಗೂ ಭಕ್ತರ ಪಾಲಿಗೆ ಪದೇಪದೆ ನೆನಪಿಸಿಕೊಳ್ಳುವಂಥದ್ದು.
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶ ನಿಜಕ್ಕೂ ಭಾರತದ ಸುಂದರ ತಾಣಗಳಲ್ಲಿ ಒಂದು. ಅಲ್ಲಿ ಶಾರದಾ ಗ್ರಾಮ ಎಂಬ ಊರು ಇತ್ತು. ಅಲ್ಲಿನ ದೇವಾಲಯ ಮೊಘಲರ ದಾಳಿಗೆ ತುತ್ತಾಗಿ ನಾಶವಾದ ನಂತರವೂ ಮತ್ತೆ ಪುನರುತ್ಥಾನವಾಗಿತ್ತು. ಗುರು ಶಂಕರರು ಇಡೀ ಅಖಂಡ ದೇಶವನ್ನು ಸುತ್ತಿ ಅನೇಕ ಕಡೆ ದೇವಸ್ಥಾನಗಳನ್ನು ಸ್ಥಾಪಿಸಿದ್ದಾರೆ. ಅವೆಲ್ಲವೂ ಇಂದು ಶ್ರೇಷ್ಠವಾಗಿ ಭಕ್ತರನ್ನು ಆಕರ್ಷಿಸುತ್ತಿದೆ. ಶಂಕರರು ಕುಳಿತ, ನಡೆದಾಡಿದ, ಧ್ಯಾನ ಮಾಡಿದ ಸ್ಥಳಗಳು ಯಾತ್ರಿಕರ ಮೆಚ್ಚುಗೆಯ ಸ್ಥಳಗಳಾಗಿವೆ ಎಂಬುದು ಗಮನಾರ್ಹವಾದುದು. ಇವುಗಳಲ್ಲಿ ಶಾರದಾ ದೇವಸ್ಥಾನವೂ ಒಂದು. ಇದು ಒಂದು ಶಕ್ತಿ ಪೀಠವಾಗಿದೆ. ಈಶ್ವರನು ಎಸೆದ ದೇವಿಯ ಬಲತೋಳು ಇದಾಗಿದೆ ಎನ್ನಲಾಗಿದೆ.

ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹಿಂದೂಗಳು ಮತ್ತು ಕಾಶ್ಮೀರ ಪಂಡಿತರು ಪೂಜಿಸುತ್ತಿದ್ದ ಪುರಾತನ ಶಾರದಾ ದೇವಸ್ಥಾನಕ್ಜೆ ಹೋಗಲು ಸಾಧ್ಯವಿಲ್ಲದೇ ಇರುವುದರಿಂದ ತೇಟ್ವಾಲ್ ನಲ್ಲಿ ನೂತನ ಶಾರದಾಂಬಾ ದೇವಾಲಯ ತಲೆ ಎತ್ತಿದೆ. ಲೈನ್ ಆಫ್ ಕಂಟ್ರೋಲ್ ನ ತೆಟ್ವಾಲ್ ನಲ್ಲಿ ದೇವಳದ ಸಮಿತಿ ಆಶ್ರಯದಲ್ಲಿ ನಿರ್ಮಾಣವಾಗಿದೆ. ದೇವಾಲಯವು 2023 ಮಾರ್ಚ್ 23 ರಂದು ಲೋಕಾರ್ಪಣೆಯಾಗಿದ್ದು, ಈ ಸಂದರ್ಭದಲ್ಲಿ ಶೃಂಗೇರಿಯ ಕಿರಿಯ ಸ್ವಾಮಿಗಳಾದ ವಿಧುಶೇಖರ ಭಾರತಿಯವರು ಸುಂದರ ಪಂಚಶಿಲೆಯ ಶಾರದಾ ವಿಗ್ರಹದ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದರು. ದೇವಳವು ಮನಸೆಳೆಯುವ ಕಳೆಯನ್ನೊದಗಿಸುವ ಪರಿಸರದ ಕಿಶನ್ ಗಂಗಾ ನದಿ ತೀರದಲ್ಲಿ ಇದೆ. ವರ್ಷವಿಡೀ ಬೆಳಗಿನಿಂದ ಸಂಜೆ ವರೆಗೆ ತೆರೆದಿರುವ ಈ ದೇವಸ್ಥಾನ ಭಕ್ತಾದಿಗಳಿಗೆ ಸದಾಮ ಮುಕ್ತವಿರುತ್ತದೆ. ದೇವಾಲಯದ ಸಮಿತಿಯ ಅಧ್ಯಕ್ಷ ರವಿಂದರ್ ಪಂಡಿತ ಅವರು ದೇಶದ ವಿವಿಧೆಡೆಯಿಂದ ಆಗಮಿಸುವ ಯಾತ್ರಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಹಲವು ಸೌಕರ್ಯಗಳನ್ನು ಒದಗಿಸಲು ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ.
ಸಿಖ್ ಗುರು ತೇಜ್ ಬಹದ್ದೂರ್ ಅವರು ಹುತಾತ್ಮರಾದ ಸ್ಥಳ ಕೂಡ ಈ ದೇವಾಲಯದ ಸಮೀಪವೇ ಇದೆ. ಸಿಖ್ ಗುರು ಹುತಾತ್ಮರಾದ 350ನೇ ವಾರ್ಷಿಕ ವನ್ನು ಇದೇ ಸೆ.1.ರಂದು ಆಚರಿಸಲಾಗಿದೆ.
ಹೀಗಾಗಿ ತೇಟ್ವಾಲ್ ಕೇವಲ ಹಿಂದು ಪವಿತ್ರ ಸ್ಥಳವಾಗಿರದೇ ಸಿಖ್ ಗುರುದ್ವಾರದ ಅಸ್ತಿತ್ವದಿಂದ ಅವರಿಗೂ ಪವಿತ್ರ ಸ್ಥಳವಾಗಿದೆ. ಹೀಗಾಗಿ ಯಾತ್ರಿಕರ ಸಂದಣಿಯೂ ಇಲ್ಲಿ ಸಹಜವಾಗಿಯೇ ಹೆಚ್ಚಾಗಿದೆ.
ತೇಟ್ವಾಲ್ ಹೋಗುವುದು ಹೇಗೆ?
-ದೆಹಲಿಯಿಂದ ಶ್ರೀನಗರ ವಿಮಾನ.
-ಶ್ರೀನಗರದಿಂದ 157 ಕಿ.ಮೀ
-ಬಾರಾಮುಲ್ಲಾ ರೈಲು ನಿಲ್ಧಾಣದಿಂದ 118 ಕಿಮೀ
-ಎರಡೂ ಕಡೆಯಿಂದ ಟ್ಯಾಕ್ಸಿಯಲ್ಲಿ ಹೋಗ ಬಹುದು.
- ಜಿಲ್ಲಾಧಿಕಾರಿ ಕುಪವಾರಾ ಅವರಿಂದ. ಇ-. ಪಾಸ್ ಪಡೆಯುವುದು ಕಡ್ಡಾಯ