ಲೋಟಸ್ ಟೆಂಪಲ್ ಭೇಟಿ ನೀಡುವ ಮುನ್ನ ಈ ವಿಚಾರಗಳನ್ನು ತಿಳಿದುಕೊಳ್ಳಿ…
ದೆಹಲಿಯನ್ನು ಸುತ್ತಾಡಲು ಹೋಗುವವರು ನೀವಾದರೆ ತಪ್ಪದೇ ಭೇಟಿ ನೀಡಬೇಕಿರುವ ದೇವಾಲಯ ಲೋಟಸ್ ಟೆಂಪಲ್. ವಿಶೇಷವಾದ ಈ ದೇವಾಲಯದ ವಾಸ್ತುಶಿಲ್ಪ, ಕೆತ್ತನೆಗಳಂತೂ ಧಾರ್ಮಿಕ ಪ್ರವಾಸವನ್ನು ಮೆಚ್ಚಿಕೊಳ್ಳುವವರಿಗೆ ಸೂಕ್ತ ತಾಣ.
ಪ್ರತಿಯೊಂದು ನಗರವು ತನ್ನ ಗುರುತನ್ನು ರೂಪಿಸಿಕೊಳ್ಳಲು ಸಹಾಯ ಮಾಡುವ ಕೆಲವು ಸ್ಮಾರಕಗಳನ್ನು ಒಳಗೊಂಡಿರುತ್ತದೆ. ಅಂಥ ಸ್ಮಾರಕಗಳ ಪೈಕಿ ದೆಹಲಿಯ ಲೋಟಸ್ ಟೆಂಪಲ್ ಪ್ರಮುಖವಾದುದು. ದೆಹಲಿಗೆ ಭೇಟಿ ನೀಡುವವರು ನೀವಾದರೆ ಅಲ್ಲಿನ ಪ್ರಮುಖ ಪ್ರವಾಸಿ ಸ್ಥಳ ಲೋಟಸ್ ಟೆಂಪಲ್ ಗೆ ತಪ್ಪದೇ ಭೇಟಿ ನೀಡಿ.
ಹೆಸರೇ ಸೂಚಿಸುವಂತೆ, ಈ ದೇವಾಲಯವು ಕಮಲದ ಆಕಾರದಲ್ಲಿದೆ. ಅದ್ಭುತ ವಾಸ್ತುಶಿಲ್ಪದಿಂದಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಈ ದೇವಾಲಯ, ಸೂರ್ಯಾಸ್ತದ ಸಮಯದ ಛಾಯಾಗ್ರಹಣಕ್ಕೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಈ ಲೋಟಸ್ ಟೆಂಪಲ್ ಗೆ ಭೇಟಿ ನೀಡುವ ಮುನ್ನ ನೀವು ತಿಳಿದಿರಲೇಬೇಕಾದ ಅನೇಕ ಸಂಗತಿಗಳಿವೆ. ಅಚ್ಚರಿಗೊಳಿಸುವ ಈ ದೇವಾಲಯದ ಬಗೆಗಿರುವ ಮಾಹಿತಿ ನಿಮಗಾಗಿ.

ಕಮಲ ದೇವಾಲಯದ ಬಗ್ಗೆ ತಿಳಿಯಲೇಬೇಕಿರುವ 5 ಕುತೂಹಲಕಾರಿ ಸಂಗತಿಗಳು ಇಲ್ಲಿವೆ:
ಎಲ್ಲಾ ಧರ್ಮಗಳಿಗೂ ಸಲ್ಲುವ ದೇವಾಲಯ
ಸಾಮಾನ್ಯವಾಗಿ ದೇವಾಲಯಗಳಲ್ಲಿ ಒಂದೇ ಧರ್ಮವನ್ನು ಪಾಲನೆ ಮಾಡುತ್ತಾರೆ, ಅನುಸರಿಸುತ್ತಾರೆ. ಆದರೆ ಲೋಟಸ್ ಟೆಂಪಲ್ ಒಂದು ಧರ್ಮವನ್ನೇ ನೆಚ್ಚಿಕೊಂಡಿಲ್ಲ. ಇದು ಬಹಾಯಿ ಪೂಜಾ ಸ್ಥಳವಾಗಿದೆ. ಅಂದರೆ ಎಲ್ಲಾ ಹಿನ್ನೆಲೆ ಮತ್ತು ನಂಬಿಕೆಗಳ ಜನರನ್ನು ಇಲ್ಲಿ ಸ್ವಾಗತಿಸಲಾಗುತ್ತದೆ. ಮನುಜ ಕುಲದಲ್ಲಿ ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ಗ್ರೀಸ್‌ನ ಅಮೃತಶಿಲೆ ಪಡೆದಿರುವ ಹೊಸ ರೂಪ
ಮೊದಲ ನೋಟದಲ್ಲೇ ಅರಳುವ ಬಿಳಿ ದಳಗಳ ಕಮಲದ ಹೂವಿನಂತೆ ಕಾಣಿಸಿಕೊಳ್ಳುವ ಈ ದೇವಾಲಯದ ಹೊರ ನೋಟ ನೋಡುಗರನ್ನು ಆಕರ್ಷಿಸುತ್ತದೆ. ಗ್ರೀಸ್‌ನಿಂದ ಆಮದು ಮಾಡಲಾದ ಪೆಂಟೆಲಿಕ್ ಅಮೃತಶಿಲೆಯಿಂದ ಈ ವಿಶೇಷ ರಚನೆ ನಿರ್ಮಾಣಗೊಂಡಿದೆ. ಪ್ರಾಚೀನ ಯುರೋಪಿಯನ್ ಸ್ಮಾರಕಗಳಲ್ಲೂ ಇದೇ ಅಮೃತಶಿಲೆಗಳನ್ನು ಬಳಕೆ ಮಾಡಲಾಗಿದ್ದು, ದೇವಾಲಯದ ಒಳಾಂಗಣವನ್ನೂ ಇದು ತಂಪಾಗಿರಿಸುತ್ತದೆ.
ಆಚರಣೆ, ಧರ್ಮೋಪದೇಶಗಳಿಗೆ ಇಲ್ಲಿ ಅವಕಾಶವಿಲ್ಲ
ಕಮಲ ದೇವಾಲಯದ ಒಳಗೊಮ್ಮೆ ಹೆಜ್ಜೆ ಹಾಕಿ ನೋಡಿದರೆ ಅಲ್ಲಿ ಯಾವುದೇ ವಿಗ್ರಹಗಳು ಕಾಣಸಿಗುವುದಿಲ್ಲ. ಯಾವುದೇ ಆಚರಣೆಗಳಾಗಲೀ, ಧಾರ್ಮಿಕ ಉಪನ್ಯಾಸಗಳಾಗಲೀ ಇಲ್ಲಿ ಇರುವುದೇ ಇಲ್ಲ. ಸದ್ದು ಗದ್ದಲಗಳಿಲ್ಲದೆ ಈ ಪರಿಸರವಂತೂ ಶಾಂತವಾಗಿ ಮನಸ್ಸಿಗೆ ನೆಮ್ಮದಿಯನ್ನು ನೀಡುವಂತಿದೆ. ನೀವು ಯಾವುದೇ ಧರ್ಮ,ನಂಬಿಕೆ, ಆಚಾರಗಳನ್ನು ಅನುಸರಿಸುವವರೇ ಆದರೂ ಇಲ್ಲಿ ಮೌನ ಪ್ರಾರ್ಥನೆ, ಧ್ಯಾನಕ್ಕೆ ಮಾತ್ರ ಅವಕಾಶವಿದೆ.

ಇರಾನಿನ ವಾಸ್ತುಶಿಲ್ಪಿಯ ಕೈಚಳಕ
ಲೋಟಸ್ ಟೆಂಪಲ್ ಇಷ್ಟೊಂದು ಸುಂದರವಾಗಿ ರೂಪುಗೊಂಡಿರುವುದರ ಹಿಂದೆ ಇರಾನಿನ ವಾಸ್ತುಶಿಲ್ಪಿ ಫರಿಬೋರ್ಜ್ ಸಹಾಬಾ ಅವರ ಶ್ರಮವನ್ನು ಗುರುತಿಸಲೇಬೇಕು. ಈ ದೇವಾಲಯದ ವಿನ್ಯಾಸದ ಕೆಲಸವನ್ನು ಅವರು 1976 ರಲ್ಲಿ ಪ್ರಾರಂಭಿಸಿ ಸುಮಾರು ಒಂದು ದಶಕಗಳ ನಂತರ ದೇವಾಲಯಕ್ಕೆ ಹೊಸ ಜೀವ ತುಂಬಿದರು. ಆಧ್ಯಾತ್ಮಿಕತೆಯನ್ನು ವಾಸ್ತುಶಿಲ್ಪದ ಸೊಬಗಿನೊಂದಿಗೆ ಬೆರೆಸುವ ರಚನೆಯನ್ನು ರಚಿಸುವುದು ಅವರ ಗುರಿಯಾಗಿತ್ತು.
ದೇಗುಲ ಒಳಾಂಗಣ ನೈಸರ್ಗಿಕವಾಗಿಯೇ ತಂಪು
ವಿಶೇಷವಾದ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯದ ಒಳಾಗಂಣವಂತೂ ನೈಸರ್ಗಿಕವಾಗಿಯೇ ತಂಪಾದ ಅನುಭವವನ್ನು ನೀಡುತ್ತದೆ. ಪರಿಸರವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿರುವ ಈ ದೇಗುಲದಲ್ಲಿ ನೈಸರ್ಗದತ್ತ ಬೆಳಕು ದಳಗಳ ನಡುವಿನ ಅಂತರಗಳ ಮೂಲಕ ಪ್ರವೇಶಿಸುತ್ತದೆ. ಅಲ್ಲದೆ ಸುತ್ತಮುತ್ತಲಿನ ಕೊಳಗಳು ಒಳಗೆ ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೀಗೆ ಹಲವು ವಿಶೇಷತೆಗಳಿಂದ ಕೂಡಿರುವ ಲೋಟಸ್ ಟೆಂಪಲ್ ಬರಿಯ ಭೇಟಿಗೊಂದು ತಾಣವೆಂಬಂತೆ ಉಳಿಯದೆ, ಜನರ ನಂಬಿಕೆಗಳೊಂದಿಗೆ ಬೆಸೆದುಕೊಂಡಿದೆ. ಸಮಾಜಲ್ಲಿರುವ ಧರ್ಮಗಳ ಬೇಲಿಗಳನ್ನು ದಾಟಿ ಎಲ್ಲರಿಗೂ ಸಲ್ಲುವಂಥ ತಾಣವಾಗಿ ರೂಪುಗೊಂಡಿದೆ.