Wednesday, February 4, 2026
Wednesday, February 4, 2026

ಮಹಾಕಾಳೇಶ್ವರ ಜ್ಯೋತಿರ್ಲಿಂಗ – ಕಾಲ ಮತ್ತು ಮರಣದ ಅಧಿಪತಿ !

ಭಕ್ತರ ಶ್ರದ್ಧೆಗೆ ಮನಸೋತ ಮಹಾದೇವನು ಶಾಂತನಾದ. ʼನಾನು ಎಂದಿಗೂ ಉಜ್ಜಯಿನಿಯನ್ನು ತ್ಯಜಿಸುವುದಿಲ್ಲ. ಇಲ್ಲಿ ನನ್ನನ್ನು ಪೂಜಿಸುವವರು ಮರಣಭಯದಿಂದ ಮುಕ್ತರಾಗುತ್ತಾರೆʼ ಎಂದು ವಾಗ್ದಾನ ನೀಡಿದನು. ಇಂದಿಗೂ ಸ್ಮಶಾನದಿಂದ ತಂದ ಬಿಸಿಬಿಸಿ ಬೂದಿಯಿಂದ ಜ್ಯೋತಿರ್ಲಿಂಗದ ಪೂಜೆಯನ್ನು ಮಾಡುವ ಪದ್ಧತಿ ಇದೆ. ಅದನ್ನು ಭಸ್ಮಾರತಿ ಎಂದು ಕರೆಯಲಾಗುತ್ತದೆ.

  • ಅರುಣ ಷಡಕ್ಷರಿ

ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ವಿಶೇಷವೇನೆಂದರೆ ಅದು ದಕ್ಷಿಣಮುಖಿಯಾಗಿ ಇರುವ ಏಕೈಕ ಜ್ಯೋತಿರ್ಲಿಂಗ ದೇವಸ್ಥಾನ. (ಉಳಿದೆಲ್ಲ ಜ್ಯೋತಿರ್ಲಿಂಗ ದೇವಸ್ಥಾನಗಳು ಉತ್ತರ ಮುಖಿಯಾಗಿಯೋ ಅಥವಾ ಪೂರ್ವ ಮುಖಿಯಾಗಿಯೋ ಇವೆ.) ನಮ್ಮ ನಂಬಿಕೆಗಳ ಪ್ರಕಾರ ಮರಣದ ದೇವರಾದ ಯಮಧರ್ಮರಾಜ ದಕ್ಷಿಣ ದಿಕ್ಕಿನಲ್ಲಿರುತ್ತಾನಂತೆ. ಮಹಾಕಾಳೇಶ್ವರನು ದಕ್ಷಿಣಮುಖಿಯಾಗಿ ಇರುವುದರಿಂದ ಕಾಲ(ಕಾಳ) ಮತ್ತು ಮರಣ(ಮೃತ್ಯು) ಮೇಲಿನ ಅವನ ಪರಮಾಧಿಕಾರವನ್ನು ಸೂಚಿಸುತ್ತದೆ. ಮಹಾಕಾಳನನ್ನು ಭಕ್ತಿಯಿಂದ ಪೂಜಿಸುವುದರಿಂದ ದೀರ್ಘಾಯುಷ್ಯ ಹಾಗೂ ಅಕಾಲಮರಣದಿಂದ ರಕ್ಷಣೆ ದೊರೆಯುತ್ತದೆ. ಏಕೆಂದರೆ ಶಿವನು ಯಮನ ವಿರುದ್ಧ ರಕ್ಷಕನಾಗಿ ನಿಂತಿರುವನು ಎಂಬ ನಂಬಿಕೆಯಿದೆ.

ಮಹಾಕಾಳನ ಪೌರಾಣಿಕ ಕಥೆ

New Project (61)

ಬಹಳ ಹಿಂದಿನ ಕಾಲದಲ್ಲಿ ಅವಂತಿಪುರ ಎಂಬ ಸಣ್ಣ ಗ್ರಾಮವೊಂದಿತ್ತು. ಅಲ್ಲಿ ಮಹಾದೇವನ ಭಕ್ತರು ವಾಸಿಸುತ್ತಿದ್ದರು. ದುಷಣ ಎಂಬ ಭಯಾನಕ ಅಸುರನು ಆ ಗ್ರಾಮದ ಮೇಲೆ ದಾಳಿ ಮಾಡಿ, ಅದನ್ನು ಧೂಳು, ಭಸ್ಮ ಮತ್ತು ವಿನಾಶದಿಂದ ಆವರಿಸಿದನು. ಆ ಗ್ರಾಮದಲ್ಲಿದ್ದ ಒಬ್ಬ ಭಕ್ತ ಬ್ರಾಹ್ಮಣನು ವೇದಪ್ರಿಯ. ಅವನಿಗೆ ನಾಲ್ಕು ಪುತ್ರರು. ಅವರು ಅಸುರನ ಅನ್ಯಾಯಕ್ಕೆ ತಲೆಬಾಗದೆ, ನಿರಂತರವಾಗಿ ಮಹಾದೇವನ ನಾಮಸ್ಮರಣೆಯಲ್ಲಿ ತೊಡಗಿದರು.

ಕೋಪಗೊಂಡ ಅಸುರನು, ʼಶಿವನ ಪೂಜೆಯನ್ನು ನಿಲ್ಲಿಸಿ ನನ್ನನ್ನೇ ಪೂಜಿಸಬೇಕು. ಇಲ್ಲವಾದರೆ ನಿಮ್ಮೆಲ್ಲರನ್ನೂ ಕೊಲ್ಲುತ್ತೇನೆʼ ಎಂದು ಬೆದರಿಕೆ ಹಾಕಿದನು. ಆದರೂ ಗ್ರಾಮಸ್ಥರು ಹಾಗೂ ಬ್ರಾಹ್ಮಣ ಮಕ್ಕಳು ಅಚಲ ಭಕ್ತಿಯಿಂದ ಪ್ರಾರ್ಥನೆ ಮುಂದುವರಿಸಿದರು. ಅಷ್ಟರಲ್ಲಿ ಭೂಮಿ ಕಂಪಿಸಿತು. ಆಕಾಶದಲ್ಲಿ ಭಾರೀ ಘೋಷ ಮೊಳಗಿತು. ದೈವಿಕ ಕ್ರೋಧದಿಂದ ದಹಿಸುತ್ತಿದ್ದ ಮಹಾದೇವನು ಭಯಾನಕ ರೂಪದಲ್ಲಿ ಪ್ರತ್ಯಕ್ಷನಾಗಿ ʼನನ್ನ ಭಕ್ತರು ನನ್ನನ್ನು ಪೂಜಿಸುತ್ತಿರುವಾಗ ಯಾರೇ ಅಡ್ಡಿಪಡಿಸಿದರೂ ಅವರು ನಾಶವಾಗುತ್ತಾರೆʼ ಎಂದು ಘೋಷಿಸಿದನು. ಕ್ಷಣಮಾತ್ರದಲ್ಲಿ ಮಹಾದೇವನು ಅಸುರನನ್ನು ಸಂಹರಿಸಿದನು. ಸುಟ್ಟುಹೋದ ಅಸುರನ ದೇಹದಿಂದ ಉಳಿದ ಭಸ್ಮವನ್ನು ತನ್ನ ದೇಹದ ಮೇಲೆ ಲೇಪಿಸಿಕೊಂಡನು. ಈ ದಿವ್ಯ ದೃಶ್ಯವನ್ನು ಕಂಡ ಭಕ್ತರು ಭಾವುಕರಾಗಿ ಕಣ್ಣೀರಿಟ್ಟು ಗಟ್ಟಿಯಾಗಿ ʼಹರ ಹರ ಮಹಾದೇವ! ಹರ ಹರ ಮಹಾಕಾಳ!ʼ ಎಂದು ಭಜಿಸತೊಡಗಿದರು. ಭಕ್ತರ ಶ್ರದ್ಧೆಗೆ ಮನಸೋತ ಮಹಾದೇವನು ಶಾಂತನಾದ. ʼನಾನು ಎಂದಿಗೂ ಉಜ್ಜಯಿನಿಯನ್ನು ತ್ಯಜಿಸುವುದಿಲ್ಲ. ಇಲ್ಲಿ ನನ್ನನ್ನು ಪೂಜಿಸುವವರು ಮರಣಭಯದಿಂದ ಮುಕ್ತರಾಗುತ್ತಾರೆʼ ಎಂದು ವಾಗ್ದಾನ ನೀಡಿದನು. ಇಂದಿಗೂ ಸ್ಮಶಾನದಿಂದ ತಂದ ಬಿಸಿಬಿಸಿ ಬೂದಿಯಿಂದ ಜ್ಯೋತಿರ್ಲಿಂಗದ ಪೂಜೆಯನ್ನು ಮಾಡುವ ಪದ್ಧತಿ ಇದೆ. ಅದನ್ನು ಭಸ್ಮಾರತಿ ಎಂದು ಕರೆಯಲಾಗುತ್ತದೆ.

ಮಹಾಕಾಳ ದೇವಸ್ಥಾನದಲ್ಲಿ ನನ್ನ ಅನುಭವ

ನಾವು ಬೆಂಗಳೂರಿನಿಂದ ಇಂದೋರ್‌ಗೆ ವಿಮಾನದಲ್ಲಿ ಹೋದೆವು. ಅಲ್ಲಿಂದ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಉಜ್ಜಯಿನಿ ತಲುಪಿದೆವು. ನಾವು ದೇವಸ್ಥಾನದ ಸಮೀಪದಲ್ಲಿರುವ ಸರಳ ಹಾಗೂ ಒಂದು ಸಣ್ಣ ಹೊಟೇಲಿನಲ್ಲಿ ತಂಗಿದ್ದೆವು, ಏಕೆಂದರೆ ಬೆಳಗಿನ ಜಾವ 3:30ಕ್ಕೆ ಭಸ್ಮಾರತಿಗೆ ಹಾಜರಾಗಬೇಕಾಗಿತ್ತು. ನಾವು ದೇವಸ್ಥಾನವನ್ನು ತಲುಪಿದೆವು. ನಮ್ಮನ್ನು ವಿಶಾಲ ಮೆಟ್ಟಿಲುಗಳಿರುವ ದೊಡ್ಡ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಆದರೆ ಸುಮಾರು ಅರ್ಧ ಗಂಟೆಯ ನಂತರ, ಒಂದು ಅದ್ಭುತವಾದ ಬೆಳ್ಳಿ ಬಾಗಿಲು ತೆರೆಯಿತು. ನಮಗೆ ಸ್ವತಃ ಮಹಾಕಾಳ ಜ್ಯೋತಿರ್ಲಿಂಗದ ದರ್ಶನವಾಯಿತು.

New Project (59)

ಅಭಿಷೇಕ, ಪೂಜೆ-ಪುನಸ್ಕಾರಗಳು ಆರಂಭವಾದವು. ಹಾಲು, ಮೊಸರು, ಜೇನುತುಪ್ಪ ಮುಂತಾದ ದ್ರವ್ಯಗಳಿಂದ ಜ್ಯೋತಿರ್ಲಿಂಗಕ್ಕೆ ಅಭಿಷೇಕ ಮಾಡಲಾಯಿತು. ಅನಂತರ ಶುದ್ಧೋದಕದ ಅಭಿಷೇಕ. ಜ್ಯೋತಿರ್ಲಿಂಗಕ್ಕೆ ದಟ್ಟವಾದ ವಿಶೇಷವಾದ ಗಂಧದ ಲೇಪನವನ್ನು ಮಾಡಿ, ಸುಂದರವಾದ ದೈವಿಕ ಮುಖಾಕೃತಿಯನ್ನು ರೂಪಿಸಲಾಯಿತು. ಶಕ್ತಿಯುತ ಮಂತ್ರೋಚ್ಛಾರಣೆ ಮತ್ತು ದೇವಾಲಯದ ಘಂಟೆಗಳ ಧ್ವನಿ ಸಭಾಂಗಣವನ್ನು ಸಂಪೂರ್ಣವಾಗಿ ಕಂಪಿಸುವಂತೆ ಮಾಡಿತು. ಅನಂತರ ಒಬ್ಬ ಪುರೋಹಿತರು ಪವಿತ್ರ ಭಸ್ಮವನ್ನು ಜ್ಯೋತಿರ್ಲಿಂಗದ ಮೇಲೆ ಸುರಿಯಲು ಆರಂಭಿಸಿದರು. ಗರ್ಭಗೃಹ ಸಂಪೂರ್ಣವಾಗಿ ಭಸ್ಮದಿಂದ ತುಂಬಿತ್ತು. ಆ ದೃಶ್ಯ ಮೋಹಕ, ದೈವಿಕ ಮತ್ತು ಪದಗಳಲ್ಲಿ ವಿವರಿಸಲಾಗದಷ್ಟು ಅದ್ಭುತವಾಗಿತ್ತು. ನಂತರ ಭವ್ಯವಾದ ಆರತಿ ನೆರವೇರಿಸಲಾಯಿತು. ಆ ಆರತಿಗೆ ತಕ್ಕಂತೆಯೇ ತಮ್ಮ ಮೈಕೈಗಳನ್ನು ಕುಣಿಸುವ, ಬಾಗಿಸುವ ಪುರೋಹಿತರ ಶೈಲಿ ಮತ್ತೂ ಆಕರ್ಷಕ. ಬಹು ದೀರ್ಘ ಕಾಲ ನೆನಪಿನಲ್ಲಿ ಉಳಿಯುವಂಥದ್ದು. ಆಗ ಜ್ಯೋತಿರ್ಲಿಂಗದ ಮೇಲಿನ ಭಸ್ಮ ನಿಧಾನವಾಗಿ ನೆಲೆಗೊಳ್ಳುತ್ತದೆ. ಮಹಾದೇವನು ಸಂಪೂರ್ಣವಾಗಿ ಭಸ್ಮದಿಂದ ಆವೃತನಾಗಿ ಕಾಣಿಸಿಕೊಂಡನು. ಇದು ಎಲ್ಲವೂ ಅಂತಿಮವಾಗಿ ಭಸ್ಮವಾಗುತ್ತದೆ ಎಂಬ ಶಾಶ್ವತ ಸತ್ಯದ ಸಂಕೇತ! ಈ ಭಸ್ಮಾರತಿಯ ಪೂಜೆ ಎಷ್ಟು ಭವ್ಯವಾಗಿರುತ್ತದೆ ಅಂದರೆ ನಾವೆಲ್ಲ ಒಮ್ಮೆಯಾದರೂ ಅನುಭವಿಸಲೇಬೇಕಾದ ದರ್ಶನ. ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವವರು ಭಸ್ಮಾರತಿಯನ್ನು ನೋಡಲೇಬೇಕೆಂಬ ಕಡ್ಡಾಯವಿಲ್ಲ. ಆದರೆ ಅದೊಂದು ಅನುಭವಿಸಲೇಬೇಕಾದ ದೈವಿಕ ಅನುಭವ. ಅದು ನಮ್ಮನ್ನು ವಿನಮ್ರಗೊಳಿಸಿ, ಭಾವುಕರನ್ನಾಗಿಸಿ, ಕಾಲ ಮತ್ತು ಮರಣಕ್ಕೂ ಮೀರಿದ ಶಿವನ ಸಾನಿಧ್ಯವನ್ನು ಆಳವಾಗಿ ಅನುಭವಿಸುವಂತೆ ಮಾಡುತ್ತದೆ. ಯಾತ್ರಾರ್ಥಿಗಳು ಕೂಡ ತಮಗೇ ಅರಿಯದಂತೆ ಹರ ಹರ ಮಹಾದೇವ, ಹರ ಹರ ಮಹಾಕಾಳ ಎಂದು ಜಪಿಸ ತೊಡಗುತ್ತಾರೆ.

ಉಜ್ಜಯಿನಿಯಲ್ಲಿ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಅಲ್ಲದೇ ನೋಡಲೇಬೇಕಾದ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಬರ್ತ್ರಿಹರಿ ಕವಿ ಇದ್ದರು ಎಂದು ಹೇಳಲಾಗುವ ಪುರಾತನ ಗುಹೆಗಳಿವೆ. ಪುರಾತನ ಕಾಲದ ಗಡಿಯಾರ ಜಂತರ್ ಮಂತರ್ ಇದೆ. ಶ್ರೀಕೃಷ್ಣ ಪರಮಾತ್ಮನು ತನ್ನ ವಿದ್ಯಾಭ್ಯಾಸವನ್ನು ಪಡೆದ ಸಂದೀಪನಿ ಆಶ್ರಮ ಇದೆ. ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವ ಹರ್ಸಿದ್ಧಿ ಮಾತಾ ದೇವಾಲಯವಿದೆ. ಹತ್ತಿರದಲ್ಲೇ ಹರಿಯುವ ಶಿಪ್ರ ನದಿಯಲ್ಲಿ ಸಂಜೆಯ ಹೊತ್ತು ಗಂಗಾ ಆರತಿಯ ಆಕರ್ಷಕ ಕಾರ್ಯಕ್ರಮವನ್ನೂ ನೋಡಬಹುದು.

ಕಾಳ ಭೈರವನಿಗೆ ಬ್ರಾಂದಿ ಅಭಿಷೇಕ

New Project (62)

ಉಜ್ಜಯಿನಿಯಲ್ಲಿ ನಾವು ನೋಡಲೇಬೇಕಾದ ಮತ್ತೊಂದು ವಿಶೇಷ ದೇವಸ್ಥಾನವೆಂದರೆ ಅದು ಕಾಳಭೈರವ ದೇವಸ್ಥಾನ. ಇಲ್ಲಿನ ವಿಚಿತ್ರ ಸಂಪ್ರದಾಯವೆಂದರೆ ಇಲ್ಲಿರುವ ಕಾಳಭೈರವನಿಗೆ ನೈವೇದ್ಯ ಮಾಡುವುದು ವಿಸ್ಕಿ, ಬ್ರಾಂದಿ ಮುಂತಾದ ಮಾದಕ ಪಾನೀಯಗಳಿಂದ. ನಮಗೆ ಪ್ರಸಾದವಾಗಿ ಕೊಡುವುದು ಕೂಡ ಇದೇ ಮಾದಕ ದ್ರವ್ಯಗಳು! (ಪ್ರಸಾದವನ್ನು ಸೇವಿಸಲೇಬೇಕೆಂಬ ಕಡ್ಡಾಯ ನಿಯಮವಿಲ್ಲ).

ಉಜ್ಜಯಿನಿಯ ಮತ್ತೊಂದು ಆಕರ್ಷಣೆ ಎಂದರೆ ಬೀದಿ ಬದಿಗಳಲ್ಲಿ ಅಂದರೆ ಅಂಗಡಿಗಳಲ್ಲಿ ಮಾರುವ ತಾಜಾ ಜಿಲೇಬಿಗಳು, ಸಿಹಿಸಿಹಿ ಗುಲಾಬ್ ಜಾಮೂನುಗಳು ಮತ್ತು ಖಾರ ಖಾರವಾದ ಕಚೋರಿಗಳು. ಕುಂಭಮೇಳ ಮುಂತಾದ ವಿಶೇಷ ಸಂದರ್ಭಗಳಲ್ಲಿ ಉಜ್ಜಯಿನಿಯನ್ನು ಸಂದರ್ಶಿಸಬಹುದು. ಆದರೆ ಲಕ್ಷಗಟ್ಟಲೆ ಇರುವ ಜನಸಾಗರದಲ್ಲಿ ತೇಲುತ್ತಾ ಮುಳುಗುತ್ತಾ ಸಾಗಬೇಕು. ಈಗ ನಾವೂ ಹರಹರ ಮಹಾದೇವ, ಹರಹರ ಮಹಾಕಾಳ ಎಂದು ಜಪಿಸುತ್ತಾ ಉಜ್ಜಯಿನಿಯ ಪ್ರಯಾಣದ ತಯಾರಿ ಮಾಡಿಕೊಳ್ಳಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ