ಇಲ್ಲಿಂದ ತಿರುಪತಿಗೆ ಸುರಂಗಮಾರ್ಗವಿದೆಯಂತೆ! ಪದ್ಮಾವತಿಯನ್ನು ವೆಂಕಟರಮಣ ಮದುವೆಯಾಗಿದ್ದು ಇಲ್ಲೇ...
ನವರಂಗ ಮಂಟಪವನ್ನು ಸಂಪೂರ್ಣ ಕಲ್ಲಿನಿಂದ ಮಾಡಲಾಗಿದ್ದು, ಒಂಬತ್ತು ಕಂಬಗಳ ಮೇಲೆ ವಿಷ್ಣುವಿನ ದಶಾವತಾರ, ದೇವತೆಗಳ ಕಲ್ಲಿನ ಕೆತ್ತನೆಯಿದೆ. ಮುಖಮಂಟಪದಿಂದ ಗರ್ಭಗುಡಿಯಲ್ಲಿರುವ ವೆಂಕಟರಮಣ ಹಾಗೂ ಪದ್ಮಾವತಿಯನ್ನು ಕಣ್ತುಂಬಿಕೊಳ್ಳಬಹುದು. ಇಡೀ ದೇವಾಲಯವನ್ನು ವಾಸ್ತು ಪ್ರಕಾರವೇ ನಿರ್ಮಿಸಲಾಗಿದೆ. ಉಡುಪಿಯ ವಾದಿರಾಜ ಯತಿಗಳು ತಮ್ಮ ಕೃತಿಗಳಲ್ಲಿ ಮಂಜುಗುಣಿಯ ಕುರಿತು ಉಲ್ಲೇಖವನ್ನು ಮಾಡಿದ್ದಾರೆ.
- ವಿಶಾಖಾ ಭಟ್
ಸಹ್ಯಾದ್ರಿ ಪರ್ವತ ಶ್ರೇಣಿಗಳು, ಹಾಲ್ನೊರೆಯಂತೆ ಧುಮ್ಮಿಕ್ಕಿ ಭೋರ್ಗರೆಯುವ ಜಲಪಾತಗಳು ಸ್ವರ್ಗವೇ ಧರೆಗಿಳಿದು ಬಂದ ರೀತಿಯಲ್ಲಿ ಭಾಸವಾಗುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಂಜುಗುಣಿಯಲ್ಲಿ ವೆಂಕಟರಮಣ ನೆಲೆಸಿದ್ದಾನೆ. ಮಂಜುಗುಣಿ ಕರ್ನಾಟಕದ ತಿರುಪತಿ ಎಂದೇ ಹೆಸರುವಾಸಿ. ಸಾವಿರಾರು ಭಕ್ತರನ್ನು ಹೊಂದಿರುವ ಈ ದೇವಾಲಯ 9 ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ವೆಂಕಟರಮಣ ಪದ್ಮಾವತಿಯ ಸಮೇತನಾಗಿ ಭಕ್ತರಿಗೆ ಆಶೀರ್ವದಿಸುತ್ತಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲ ಗ್ರಾಮ ಪಂಚಾಯಿತಿಯ ಮಂಜುಗುಣಿ ಶ್ರೀ ವೆಂಕಟೇಶ್ವರ ದೇವಸ್ಥಾನವು ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿದೆ. 9ನೇ ಶತಮಾನದಲ್ಲಿ ತಿರುಮಲ ಯೋಗಿಗಳು ತಿರುಪತಿಯಿಂದ ಕರ್ನಾಟಕಕ್ಕೆ ತೀರ್ಥಯಾತ್ರೆ ಕೈಗೊಂಡಾಗ ಮಂಜುಗುಣಿಯ ಗಿಳಿ ಗುಂಡಿಯ ಬಳಿಯ ಕಲ್ಯಾಣಿಯಲ್ಲಿ ಶಂಖ ಚಕ್ರನಾದ ಶ್ರೀನಿವಾಸನ ಮೂರ್ತಿ ಪತ್ತೆಯಾಯಿತು ಎಂದು ಹೇಳಲಾಗುತ್ತದೆ. ಬಳಿಕ ಅವರು ತಿರುಪತಿ ವೆಂಕಟೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ ತಿರುಪತಿ ವೆಂಕಟೇಶ್ವರ ಒಪ್ಪಿಗೆ ಪಡೆದೇ ತಿರುಮಲ ಯೋಗಿಗಳು ಈಗಿನ ಮಂಜುಗುಣಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದರು. ಕರ್ನಾಟಕದಾದ್ಯಂತ ಚಿಕ್ಕ ತಿರುಪತಿ ಎಂದು ಕರೆಯಲ್ಪಡುವ ಈ ದೇವಸ್ಥಾನಕ್ಕೆ ತಿರುಪತಿಯಿಂದ ಸುರಂಗಮಾರ್ಗವಿದೆ ಎಂದು ಹೇಳಲಾಗುತ್ತದೆ.

ಐತಿಹ್ಯದ ಪ್ರಕಾರ ತಿರುಪತಿ ವೆಂಕಟೇಶ್ವರ ಬೇಟೆಯಾಡಲು ಪಶ್ಚಿಮಘಟ್ಟದ ಈ ಕಾಡಿಗೆ ಬಂದು ದಣಿವಾಗಿ ಮಲಗಿದ್ದನಂತೆ. ಆಗ ಈ ಜಾಗದಲ್ಲಿ ಪದ್ಮಾವತಿ ದೇವಿಯನ್ನು ನೋಡಿ ವಿವಾಹವಾದ ಎಂದು ಸಹ ಹೇಳಲಾಗುತ್ತದೆ. ಇದೇ ಕಾರಣದಿಂದ ಗಿಳಿಗುಂಡಿಯಲ್ಲಿ ತನ್ನ ಪ್ರತಿಬಿಂಬವನ್ನು ಬಿಟ್ಟು ಸಾಗಿದ ಎಂಬ ಪ್ರತೀತಿಯೂ ಇದೆ. ಚೈತ್ರ ಪೂರ್ಣಿಮೆಯ ದಿನ ನಡೆಯುವ ಮಹಾ ರಥೋತ್ಸವಕ್ಕೆ ಶ್ರೀ ವೆಂಕಟೇಶ ತಿರುಪತಿಯಿಂದ ಬರುತ್ತಾನೆ ಎಂದು ಭಕ್ತರು ನಂಬುತ್ತಾರೆ.
ಮಂಜುಗುಣಿಯ ಶ್ರೀ ವೆಂಕಟರಮಣ ದೇವಾಲಯವನ್ನು ಸಂಪೂರ್ಣ ಕಲ್ಲಿನಿಂದ ನಿರ್ಮಿಸಲಾಗಿದೆ. ದೇವಸ್ಥಾನದ ಒಳಗೆ ಪ್ರವೇಶಿಸುತ್ತಲೇ ಸುಮಾರು 35 ಅಡಿಯ ಕಲ್ಲಿನ ಗರುಡಗಂಬವನ್ನು ಕಾಣಬಹುದಾಗಿದೆ. ಅದರ ಎದುರೇ ಗರುಡ ದೇವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗರುಡಗಂಬದ ಮೇಲೆ ಹಲವು ದೇವರ ಚಿತ್ರಗಳನ್ನು ಕೆತ್ತಲಾಗಿದೆ. ಒಳಗಡೆ ಸಾಗಿದರೆ, ವಿಜಯನಗರ ಶೈಲಿಗಿಂತಲೂ ಪುರಾತನವಾದ ಶೈಲಿಯ ವಾಸ್ತುಶಿಲ್ಪಗಳು ಕಾಣಸಿಗುತ್ತವೆ. ನವರಂಗ ಮಂಟವನ್ನು ಸಂಪೂರ್ಣ ಕಲ್ಲಿನಿಂದ ಮಾಡಲಾಗಿದ್ದು, ಒಂಬತ್ತು ಕಂಬಗಳ ಮೇಲೆ ವಿಷ್ಣುವಿನ ದಶಾವತಾರ, ದೇವತೆಗಳ ಕಲ್ಲಿನ ಕೆತ್ತನೆಯಿದೆ. ಮುಖಮಂಟಪದಿಂದ ಗರ್ಭಗುಡಿಯಲ್ಲಿರುವ ವೆಂಕಟರಮಣ ಹಾಗೂ ಪದ್ಮಾವತಿಯನ್ನು ಕಣ್ತುಂಬಿಕೊಳ್ಳಬಹುದು. ಇಡೀ ದೇವಾಲಯವನ್ನು ವಾಸ್ತು ಪ್ರಕಾರವೇ ನಿರ್ಮಿಸಲಾಗಿದೆ. ಉಡುಪಿಯ ವಾದಿರಾಜ ಯತಿಗಳು ತಮ್ಮ ಕೃತಿಗಳಲ್ಲಿ ಮಂಜುಗುಣಿಯ ಕುರಿತು ಉಲ್ಲೇಖವನ್ನು ಮಾಡಿದ್ದಾರೆ.

ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ರಥ ದೇವಾಲಯದ ಮತ್ತೊಂದು ಆಕರ್ಷಣೆ. ದೇವಸ್ಥಾನದಿಂದ ಅನತಿ ದೂರದಲ್ಲಿ ಶ್ರೀ ಚಕ್ರತೀರ್ಥ ಕೆರೆ ಇದೆ. ಈ ಕೆರೆಯಲ್ಲಿ ಮಿಂದೆದ್ದರೆ ಯಾವುದೇ ಚರ್ಮರೋಗವಿದ್ದರೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಚಕ್ರತೀರ್ಥ ಕೆರೆಯು ಜಲ ಚರ್ಮರೋಗ ನಿವಾರಕ ಗುಣ ಹೊಂದಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ಕೆರೆಯ ಬಳಿ ಹೋಗಿ ನೀರನ್ನು ಮುಟ್ಟಿ ಬರುತ್ತಾರೆ. ಅಲ್ಲಿಂದ ಅನತಿ ದೂರದಲ್ಲಿ ಮಾರುತಿ ದೇವಾಲಯವಿದೆ. ಅನಾದಿ ಕಾಲದಿಂದಲೂ ಹನುಮಂತ ಅಲ್ಲಿ ನೆಲೆಸಿದ್ದಾನೆ.
ತಲುಪುವುದು ಹೇಗೆ?
ಶಿರಸಿಯಿಂದ 25 ಕಿಮೀ ದೂರದಲ್ಲಿರುವ ಮಂಜುಗುಣಿಗೆ ತೆರಳಲು ಬಸ್ಸುಗಳ ವ್ಯವಸ್ಥೆ ಇದೆ. ಶಿರಸಿ- ಕುಮಟಾ ಮಾರ್ಗದಲ್ಲಿ ತೆರಳಿದರೆ ಖೂರ್ಸೆ ಕ್ರಾಸ್ ಬಳಿ ಬಲಕ್ಕೆ ತಿರುಗಿ, ಹಾಗೆಯೇ ಕಾಡಿನ ದಾರಿಯಲ್ಲಿ ಮುಂದೆ ಸಾಗಿದರೆ ಮಂಜುಗುಣಿ ದೇವಾಲಯ ತಲುಪಬಹುದು. ದೇವರ ದರ್ಶನಕ್ಕೆಂದು ಬರುವ ಭಕ್ತಾದಿಗಳಿಗೆ ಪ್ರತಿ ನಿತ್ಯವೂ ಅನ್ನಸಂತರ್ಪಣೆ ನಡೆಯುತ್ತದೆ.