Saturday, November 22, 2025
Saturday, November 22, 2025

ನಿಸರ್ಗ ಸೌಂದರ್ಯ ಹಾಗೂ ಆಧ್ಯಾತ್ಮಿಕತೆಯ ಸಮ್ಮಿಲನ

ಭಕ್ತನ ರಕ್ಷಣೆಗಾಗಿ ಜ್ವಾಲಾಮುಖಿಯಂತೆ ಸ್ಪೋಟಿಸಿ ನರಸಿಂಹಸ್ವಾಮಿ ಪ್ರತ್ಯಕ್ಷನಾದ ಕಾರಣ ಜ್ವಾಲಾ ನರಸಿಂಹಸ್ವಾಮಿ ಎನ್ನುವ ಹೆಸರು ಬಂದಿದೆ. ಈ ದೇಗುಲದ ಬಳಿ 'ರಕ್ತಕುಂಡ' ಕೊಳವಿದೆ. ಹಿರಣ್ಯಕಶಿಪುವನ್ನು ಕೊಂದ ನಂತರ ಪರಮಾತ್ಮನು ಕೈ ತೊಳೆದುಕೊಂಡ ಜಾಗವಿದು ಎನ್ನಲಾಗುತ್ತದೆ. ಅಲ್ಲಿಂದ ಇನ್ನೂ ಮೇಲಕ್ಕೆ ಏರಿದರೆ ಅಚಲಾಚಯ ಪರ್ವತವಿದೆ.

  • ಅಶ್ವಿನಿ ಸುನಿಲ್

ಒಂದೇ ಊರಿನಲ್ಲಿ ಹಲವು ದೇವಸ್ಥಾನಗಳಿರುವುದು ಸಾಮಾನ್ಯ. ಆದರೆ ಒಂದೇ ಊರಿನಲ್ಲಿ ಒಂದೇ ದೇವರ ಹಲವು ದೇವಸ್ಥಾನಗಳಿರುವುದು ಅಪರೂಪವೇ. ಅಹೋಬಲಂನಲ್ಲಿ ನರಸಿಂಹ ಸ್ವಾಮಿಗೆ ಸಂಬಂಧಿಸಿದ ಒಂಬತ್ತು ದೇವಸ್ಥಾನವಿರುವುದೇ ಅಲ್ಲಿಯ ವಿಶೇಷತೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಂದ್ಯಾಲದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಅಹೋಬಲ ಕ್ಷೇತ್ರವು ಪೂರ್ವ ಘಟ್ಟದ ಬೆಟ್ಟಸಾಲಿನ ಮಧ್ಯದಲ್ಲಿದೆ.ಅಹೋಬಲ ಕ್ಷೇತ್ರದಲ್ಲಿ ಒಂಬತ್ತು ನರಸಿಂಹ ಸ್ವಾಮಿ ದೇವಸ್ಥಾನ ಇರುವುದರಿಂದ ನವನಾರಸಿಂಹ ಕ್ಷೇತ್ರವೆಂದು ಹೆಸರು ಪಡೆದಿದೆ. ಇಲ್ಲಿಯ ಪ್ರತಿಯೊಂದು ದೇವಾಲಯವೂ ಒಂದೊಂದು ಕಥೆಯನ್ನು, ಇತಿಹಾಸವನ್ನು ಹೇಳುತ್ತದೆ. ಮಹಾವಿಷ್ಣುವಿನ ನಾಲ್ಕನೇ ಅವತಾರವಾದ ನರಸಿಂಹಾವತಾರದ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ? ದೇವತೆಗಳಿಗೆ ಅತೀವ ಉಪಟಳ ನೀಡುತ್ತಿದ್ದ ಹಿರಣ್ಯಕಶ್ಯಪುವಿನ ಸಂಹಾರಕ್ಕಾಗಿ ವಿಷ್ಣು ನರಸಿಂಹ ಅವತಾರ ಎತ್ತಿದ ಕಥೆ ಎಲ್ಲರಿಗೂ ತಿಳಿದೇ ಇದೆ. ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಮಾಡಲು ಶ್ರೀ ಹರಿಯು ನರಸಿಂಹಾವತಾರ ಎತ್ತಿದ ಪುಣ್ಯ ಕ್ಷೇತ್ರವೇ ಅಹೋಬಲ ಕ್ಷೇತ್ರ.

ahobala temple  1

ಅಹೋಬಲ ಕ್ಷೇತ್ರವು ಕೇವಲ ಭಕ್ತಿ ಯ ತಾಣವಷ್ಟೇ ಅಲ್ಲ, ನಿಸರ್ಗ ಸೌಂದರ್ಯದ ಜೊತೆ ಸಾಹಸವನ್ನು ಇಷ್ಟಪಡುವ ಚಾರಣಿಗರನ್ನೂ ಆಕರ್ಷಿಸುತ್ತದೆ. ಭಕ್ತಿಯ ಜತೆಗೆ ಇಲ್ಲಿಯ ಪ್ರಕೃತಿ ಸೌಂದರ್ಯವು ಮಿಳಿತವಾಗಿ ನಮ್ಮನ್ನು ನಾವು ಮರೆತೇ ಹೋಗುತ್ತೇವೆ ಅಹೋಬಲ ಕ್ಷೇತ್ರದ ದೇವಾಲಯಗಳನ್ನು ಮೇಲಿನ ಅಹೋಬಲ ಮತ್ತು ಕೆಳಗಿನ ಅಹೋಬಲ ಎಂದು ವಿಂಗಡಿಸಿದ್ದಾರೆ.

ಕೆಳಗಿನ ಅಹೋಬಲದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಮೇಲಿನ ಅಹೋಬಲವನ್ನು ಖಾಸಗಿ ವಾಹನಗಳ ಮೂಲಕ ತಲುಪಬಹುದು. ಮೇಲಿನ ಅಹೋಬಲಕ್ಕೆ ಇನ್ನೂ ಒಂದು ಕಿಲೋಮೀಟರ್ ದೂರ ಇರುವಂತೆಯೇ ಕಾರಂಜಿ ನರಸಿಂಹಸ್ವಾಮಿ ದೇವಾಲಯ ಸಿಗುತ್ತದೆ.

ಅಲ್ಲಿಂದ ಮುಂದೆ ಮೇಲಿನ ಅಹೋಬಲ ಬೆಟ್ಟದ ಬುಡದಲ್ಲಿ ವಾಹನಗಳನ್ನು ನಿಲ್ಲಿಸಿ ಮುಂದಕ್ಕೆ ನಡೆದುಕೊಂಡೆ ಹೋಗಬೇಕು. ಮೆಟ್ಟಿಲುಗಳನ್ನು ಏರುತ್ತಾ ಹೋದಂತೆ ಅಹೋಬಲ ನರಸಿಂಹ ಸ್ವಾಮಿಯ ದೇವಸ್ಥಾನ, ಮಾಲೋಲ ನರಸಿಂಹ ಸ್ವಾಮಿಯ ದೇವಸ್ಥಾನ, ಶ್ರೀ ವರಾಹ ನರಸಿಂಹ ಸ್ವಾಮಿ / ಕ್ರೋಡನರಸಿಂಹ ಸ್ವಾಮಿ ದೇವಸ್ಥಾನ, ಶ್ರೀ ಜ್ವಾಲಾ ನರಸಿಂಹ ಸ್ವಾಮಿ ದೇವಾಲಯ ಗಳನ್ನು ದರ್ಶಿಸಬಹುದು.

ಕಡಿದಾದ ಮಾರ್ಗವನ್ನು ಕ್ರಮಿಸಿ ಬೆಟ್ಟದ ತುದಿಯನ್ನು ಏರಿದಾಗ ಸಿಗುವುದೇ ಶ್ರೀ ಜ್ವಾಲಾ ನರಸಿಂಹ ಸ್ವಾಮಿ ದೇವಾಲಯ. ದುರ್ಗಮವಾದ ದಾರಿಯನ್ನು ಕ್ರಮಿಸಿ ಉಂಟಾಗುವ ಆಯಾಸವನ್ನು ಪರಿಹರಿಸಲು ಎನ್ನುವಂತೆ ಭವನಾಶಿನಿಯ ಜಲಧಾರೆ ಕೆಳಗೆ ಬೀಳುತ್ತಿರುತ್ತದೆ. ದೇವರ ದರ್ಶನಕ್ಕೂ ಮೊದಲು ಪ್ರಕೃತಿಯೇ ನಮ್ಮ ತನು ಮನವನ್ನು ಶುದ್ಧೀಕರಿಸುವಂತೆ ತೋರುತ್ತದೆ. ನಿಸರ್ಗದತ್ತವಾದ, ಸ್ವಚ್ಛವಾದ, ಸಿಹಿಯಾದ ಆ ನೀರನ್ನು ಕುಡಿದು ಆಯಾಸವನ್ನು ಪರಿಹರಿಸಿಕೊಂಡು, ಜ್ವಾಲಾ ನರಸಿಂಹ ಸ್ವಾಮಿಯ ದರ್ಶನ ಮಾಡಬಹುದು. ಇಲ್ಲಿಯ ಪ್ರಕೃತಿ ಸೌಂದರ್ಯ, ಜಲಧಾರೆಯ ಸೊಬಗನ್ನು ಸವಿಯುತ್ತಾ ಇದ್ದರೆ ಕೆಳಗಡೆ ಬರುವ ಮನಸ್ಸಾಗದು. ಗಾಳಿ ಬೀಸುತ್ತಿದ್ದಂತೆ ಮುಖಕ್ಕೆ ನೀರಿನ ಪ್ರೋಕ್ಷಣೆಯಾಗುತ್ತಿದ್ದರೆ, ದುಗುಡುಗಳೆಲ್ಲ ಕಳೆದು ಮನಸ್ಸು ಹಗುರವಾದ ಭಾವ ಮೂಡುತ್ತದೆ.

ಭಕ್ತನ ರಕ್ಷಣೆಗಾಗಿ ಜ್ವಾಲಾಮುಖಿಯಂತೆ ಸ್ಪೋಟಿಸಿ ನರಸಿಂಹಸ್ವಾಮಿ ಪ್ರತ್ಯಕ್ಷನಾದ ಕಾರಣ ಜ್ವಾಲಾ ನರಸಿಂಹಸ್ವಾಮಿ ಎನ್ನುವ ಹೆಸರು ಬಂದಿದೆ. ಈ ದೇಗುಲದ ಬಳಿ 'ರಕ್ತಕುಂಡ' ಕೊಳವಿದೆ. ಹಿರಣ್ಯಕಶಿಪುವನ್ನು ಕೊಂದ ನಂತರ ಪರಮಾತ್ಮನು ಕೈ ತೊಳೆದುಕೊಂಡ ಜಾಗವಿದು ಎನ್ನಲಾಗುತ್ತದೆ. ಅಲ್ಲಿಂದ ಇನ್ನೂ ಮೇಲಕ್ಕೆ ಏರಿದರೆ ಅಚಲಾಚಯ ಪರ್ವತವಿದೆ. ಹಿರಣ್ಯಕಶಿಪುವಿನ ಅರಮನೆಯ ಕಂಬವನ್ನು ನರಸಿಂಹ ಸ್ವಾಮಿ ಸೀಳಿ ಬಂದಿದ್ದಕ್ಕೆ ಸಾಕ್ಷಿ ಎನ್ನುವಂತೆ ಕಂಬ ಒಂದನ್ನು ಕಾಣಬಹುದು. ಮೇಲಕ್ಕೆ ಏರಿದಂತೆಲ್ಲ ಮಾರ್ಗವು ದುರ್ಗಮವಾಗುತ್ತಾ, ಹತ್ತುವುದು ಕಷ್ಟವಾಗುತ್ತಾ ಹೋದರೂ, ನಿಸರ್ಗದ ರಮಣೀಯ ದೃಶ್ಯಗಳು ಆಯಾಸವನ್ನು ತಣಿಸುತ್ತದೆ.

ಶ್ರೀ ಭಾರ್ಗವ ನರಸಿಂಹ ಸ್ವಾಮಿ ದೇವಾಲಯ

ಕೆಳಗಿನ ಅಹೋಬಲದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನಕ್ಕೆ ಕಲ್ಲು, ಮಣ್ಣಿನ ರಸ್ತೆಯಲ್ಲಿಯೇ ಹೋಗಬೇಕು. ದೇವಸ್ಥಾನವನ್ನು ಪ್ರವೇಶಿಸಲು ಸುಮಾರು 130 ಮೆಟ್ಟಲು ಏರಬೇಕು. ಮೆಟ್ಟಿಲಿನ ಸಮೀಪವೇ ಅಕ್ಷಯ ತೀರ್ಥವೆಂಬ ಸುಂದರ ಕೊಳವಿದೆ. ಅಲ್ಲದೆ ಯೋಗಮುದ್ರೆಯಲ್ಲಿರುವ ಶ್ರೀ ಯೋಗಾನಂದ ನರಸಿಂಹ ಸ್ವಾಮಿ ದೇವಾಲಯ, ನರಸಿಂಹಮೂರ್ತಿಗಳಲ್ಲಿಯೇ ಅತ್ಯಂತ ದೊಡ್ಡದಾದ, ಜೊತೆಗೆ ಸುಂದರವಾಗಿರುವ ಮೂರ್ತಿ ಇರುವ ಶ್ರೀ ಛತ್ರವಟ ನರಸಿಂಹ ಸ್ವಾಮಿ ದೇವಾಲಯಗಳು ಕೂಡಾ ಇಲ್ಲಿನ ವಿಶೇಷ.

ಶ್ರೀ ಪಾವನ ನರಸಿಂಹ ಸ್ವಾಮಿ

ಕೆಳಗಿನ ಅಹೋಬಲದಿಂದ ಸುಮಾರು 16 ಕಿಲೋಮೀಟರ್ ದೂರದಲ್ಲಿ ದುರ್ಗಮವಾದ ಕಾಡು ಪ್ರದೇಶದಲ್ಲಿ ಇರುವ ಶ್ರೀ ಪಾವನ ನರಸಿಂಹ ಸ್ವಾಮಿ ದೇವಾಲಯಕ್ಕೆ ಹೋಗುವುದೇ ಒಂದು ದೊಡ್ಡ ಸಾಹಸ. ಕೆಳಗಿನ ಅಹೋಬಲದಿಂದ ಜೀಪು ಅಥವಾ ಟ್ರ್ಯಾಕ್ಟರ್ ನಲ್ಲಿ ಇಲ್ಲಿಗೆ ತಲುಪಬಹುದು. ಕಾಡಿನ ಮಧ್ಯದಲ್ಲಿ ಹಾದು ಹೋಗುವ ಈ ದಾರಿಯಲ್ಲಿ ರಸ್ತೆಯೇ ಇಲ್ಲ ಎನ್ನಬಹುದು. ಕಲ್ಲು ಬಂಡೆಗಳ ಈ ರಸ್ತೆ ಯಲ್ಲಿ ಹೋಗುವುದು ದುಸ್ತರವಾದರೂ ಭಕ್ತರು ಮಾತ್ರ ತಂಡೋಪತಂಡವಾಗಿ ಇಲ್ಲಿಗೆ ಬರುತ್ತಾರೆ. ಪ್ರಯಾಣಿಸುವುದು ಜೀಪಿನಲ್ಲಾದರೂ ಒಂದು ರೀತಿ ಸಾಹಸಮಯ ಯಾತ್ರೆ ಎಂದೇ ಹೇಳಬಹುದು. ಮಾರ್ಗ ಮಧ್ಯದಲ್ಲಿ ವಾಹನವೇನಾದರೂ ಕೆಟ್ಟು ಹೋದರೆ ಹೊರಗಿನ ಪ್ರಪಂಚವನ್ನು ಸಂಪರ್ಕಿಸಲು ಮುಂದಿನ ವಾಹನ ಬರುವ ತನಕ ಕಾಯುವುದು ಅನಿವಾರ್ಯ. ಕಾಡುದಾರಿಯಲ್ಲಿ ಹೋಗಬೇಕಾದ ಕಾರಣ ಮಧ್ಯಾಹ್ನ ಒಂದು ಗಂಟೆಯ ನಂತರ ಇಲ್ಲಿ ಪ್ರವೇಶ ನಿಷೇಧವಿದೆ.

ahobala 2

ಈ ದೇವಾಲಯದ ಇನ್ನೊಂದು ವಿಶೇಷ ಎಂದರೆ ಮಹಾವಿಷ್ಣು ನರಸಿಂಹಾವತಾರ ಎತ್ತಿದಾಗ ಲಕ್ಷ್ಮಿಯು ಬೇಟೆಗಾರ ಜನಾಂಗದಲ್ಲಿ ಜನಿಸಿ ಚಿಂಚುಲಕ್ಷ್ಮಿಯಾಗಿ ಆತನನ್ನು ವಿವಾಹವಾಗುತ್ತಾಳೆ ಹಾಗಾಗಿ ಬುಡಕಟ್ಟು ಜನಾಂಗದವರು ನರಸಿಂಹ ದೇವರನ್ನು ತಮ್ಮ ಅಳಿಯ ಎಂದು ಭಾವಿಸಿ, ತಮ್ಮ ಸಂಪ್ರದಾಯದಂತೆ ಮೇಕೆ, ಕುರಿ, ಕೋಳಿ ಮೊದಲಾದವುಗಳನ್ನು ಆತನಿಗೆ ಬಲಿಕೊಡುವ ಪದ್ಧತಿ ಇದೆ

ಅರಣ್ಯ ಪ್ರದೇಶವಾದ ಕಾರಣ ದೇವಾಲಯದಲ್ಲಿ ರಾತ್ರಿ ಉಳಿಯಲು ಅವಕಾಶವಿಲ್ಲದಿದ್ದರೂ ಕೆಲವೊಂದು ವಿಶೇಷ ದಿನಗಳಲ್ಲಿ ಅಕ್ಕಪಕ್ಕದ ಹಳ್ಳಿಯ ಜನರು ಟ್ರ್ಯಾಕ್ಟರ್ ಗಳಲ್ಲಿ ಕುಟುಂಬ ಸಮೇತ ಹೋಗಿ ರಾತ್ರಿ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಮೇಕೆ, ಕುರಿ, ಕೋಳಿಗಳನ್ನು ಬಲಿ ನೀಡಿ ಅಲ್ಲಿಯೇ ಉಳಿದುಕೊಂಡು ಅಡುಗೆ ಮಾಡಿ ತಿಂದು ಬೆಳಗ್ಗೆ ವಾಪಸು ಬರುವ ಪದ್ದತಿ ಇದೆ. ಅಹೋಬಲ ಕ್ಷೇತ್ರದ ವಿಶೇಷವೆಂದರೆ ಇಲ್ಲಿ ಯಾವ ದಿಕ್ಕಿನಲ್ಲಿ ಹೋದರೂ ನರಸಿಂಹ ಸ್ವಾಮಿಯ ದರ್ಶನವಾಗುತ್ತದೆ. ಅದರಲ್ಲೂ ಒಂದೇ ಊರಿನಲ್ಲಿ, ವಿಭಿನ್ನ ರೀತಿಯ,ವಿಭಿನ್ನ ರೂಪಗಳಲ್ಲಿ ನರಸಿಂಹನ ದರ್ಶನವಾಗುವುದು ವಿಶೇಷ.

ಕ್ಷೇತ್ರದ ದರ್ಶನವನ್ನು ಮಾಡುವಾಗ ನಮ್ಮಜೊತೆಗೆ ಮಾರ್ಗದರ್ಶಕರನ್ನು ಕರೆದುಕೊಂಡು ಹೋದರೆ ಪ್ರತಿಯೊಂದು ದೇವಾಲಯದ ವೈಶಿಷ್ಟ್ಯ, ಇತಿಹಾಸವನ್ನು ಅರಿತುಕೊಳ್ಳಬಹುದು. ಜತೆಗೆ ಪುಟ್ಟ ಮಕ್ಕಳು, ವಯಸ್ಸಾದವರಿದ್ದರೆ ಗೈಡ್ ಗಳ ಸಹಾಯ ಅನುಕೂಲವಾಗುತ್ತದೆ . ದುರ್ಗಮವಾದ ಬೆಟ್ಟವನ್ನು ಹತ್ತುವಾಗ ಆಯಾಸವಾಗುವ ಸಾಧ್ಯತೆ ಇರುವುದರಿಂದ ಅಗತ್ಯವಾದ ನೀರು, ಚಾಕಲೇಟ್, ಬಿಸ್ಕೆಟ್ ಗಳನ್ನು ಜೊತೆಗೆ ಕೊಂಡೊಯ್ಯುವುದು ಸೂಕ್ತ. ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರಲಾರದವರು ಡೋಲಿಯ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಬಹುದು. ಬೆಂಗಳೂರಿನಿಂದ ಅಹೋಬಲಕ್ಕೆ ಹೋಗುವವರು ಹತ್ತಿರದಲ್ಲಿಯೇ ಇರುವ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದು. ಬೇಲಂ ಗುಹೆ, ಮಹಾನಂದಿ , ಯಾಗಂಟಿ ದೇವಸ್ಥಾನ, ಗಂಡಿ ಕೋಟೆ, ಗ್ರಾಂಡ್ ಕ್ಯಾನಿಯನ್ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದರೆ ನಿಮ್ಮ ಯಾತ್ರೆ ಪರಿಪೂರ್ಣವಾದಂತೆ.

ದಾರಿ ಹೇಗೆ?

ಬೆಂಗಳೂರಿನಿಂದ 370 ಕಿಲೋಮೀಟರ್ ದೂರದಲ್ಲಿರುವ ಅಹೋಬಲವನ್ನು ರೈಲು , ಬಸ್ಸು ಅಥವಾ ಖಾಸಗಿ ವಾಹನಗಳ ಮೂಲಕ ತಲುಪಬಹುದು. ರೈಲಿನ ಮೂಲಕ ಮೂಲಕ ಹೋಗುವುದಾದರೆ ನಂದ್ಯಾಲಕ್ಕೆ ಹೋಗಿ ಅಲ್ಲಿಂದ ಬೇರೆ ವಾಹನದಲ್ಲಿ ಅಹೋಬಲಕ್ಕೆ ಹೋಗಬಹುದು. ಅಥವಾ ಬಸ್ಸು ಅಥವಾ ಖಾಸಗಿ ವಾಹನದಲ್ಲಿಯೂ ಅಹೋಬಲವನ್ನು ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ