ಗವಿಯೇ ಗೂಡಾಗಿತ್ತು ಸ್ವಾಮಿ ರಂಗನಾಥನಿಗೆ
ಈ ಉದ್ಭವ ಲಿಂಗದ ವಿಷಯವೂ ಯಾರಿಗೂ ತಿಳಿದಿರಲಿಲ್ಲ. ಈಗ ಗವಿರಂಗಸ್ವಾಮಿಯನ್ನು ಪೂಜಿಸುವ ಅರ್ಚಕರ ಪೂರ್ವಿಕರ ಮನೆಯ ಹಸುವೊಂದು ಆಗಾಗ ಕಾಡಿನಲ್ಲಿ ಮರೆಯಾಗುತ್ತಿತ್ತು. ಅದನ್ನು ಒಂದು ದಿನ ಹಿಂಬಾಲಿಸಿದಾಗ ಹಸುವು ಉದ್ಭವ ಲಿಂಗಕ್ಕೆ ಹಾಲುಣಿಸುತ್ತಿರುವುದು ಕಂಡು ಬಂತು. ಅಂದಿನಿಂದ ಈ ಲಿಂಗವನ್ನುಅದೇ ಅರ್ಚಕ ಕುಟುಂಬದವರೇ ಪೂಜಿಸುತ್ತಿದ್ದಾರೆ.
- ಡಿ.ಟಿ.ತಿಲಕ್‌ರಾಜ್
ಆಟಿಕೆಗಳಿಗೆ ವಿಶ್ವಾದ್ಯಂತ ಪ್ರಸಿದ್ದಿ ಪಡೆದುಕೊಂಡಿರುವ ಚನ್ನಪಟ್ಟಣ ತಾಲೂಕು ಮನಮೋಹಕ ಪ್ರವಾಸಿ ತಾಣಗಳನ್ನೂ ಒಳಗೊಂಡಿದೆ. ಬೆಂಗಳೂರು ನಗರಕ್ಕೆ ತೀರಾ ಹತ್ತಿರದ ಚನ್ನಪಟ್ಟಣ ಹೇರಳ ಪ್ರಾಕೃತಿಕ ಸಂಪತ್ತನ್ನು ತನ್ನದಾಗಿಸಿಕೊಂಡಿದೆ. ಬೆಟ್ಟ ಗುಡ್ಡಗಳು, ಪ್ರಸಿದ್ಧ ದೇವಾಲಯಗಳು, ಪ್ರವಾಸಿ ತಾಣಗಳು, ಜಲಾಶಯಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇತ್ತೀಚೆಗೆ ರೆಸಾರ್ಟ್, ಹೋಂಸ್ಟೇಗಳೂ ಇಲ್ಲಿ ಹುಟ್ಟಿಕೊಂಡಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಇಲ್ಲಿನ ಶ್ರೀ ಗವಿರಂಗಸ್ವಾಮಿ ಬೆಟ್ಟ ಪ್ರವಾಸಿಗರನ್ನು, ಚಾರಣಿಗರನ್ನು ತನ್ನತ್ತ ಸೆಳೆಯುತ್ತಿದೆ. ಸಮುದ್ರ ಮಟ್ಟದಿಂದ 3200ಅಡಿ ಎತ್ತರವಿರುವ ಈ ಬೆಟ್ಟ, ಪ್ರವಾಸಿಗರ ಮನಗೆಲ್ಲುವುದರಲ್ಲಿ ಸಂಶಯವಿಲ್ಲ. ಇದು ಬೃಹತ್ ಏಕಶಿಲಾ ಬೆಟ್ಟವಾಗಿದ್ದು, ಶ್ರೀ ಗವಿರಂಗಸ್ವಾಮಿ ಇಲ್ಲಿ ನೆಲೆಸಿದ್ದಾನೆ.

ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳ ಕಡೆಗೆ ಪ್ರವಾಸ ಹೋಗಬೇಕು ಎನ್ನುವವರಿಗೆ ಈ ಬೆಟ್ಟ ಹೇಳಿ ಮಾಡಿಸಿದ ತಾಣ. ಹಚ್ಚಹಸಿರಿನಿಂದ ಕೂಡಿದ ಇದು ಯಾವ ಮಲೆನಾಡಿಗೂ ಕಡಿಮೆ ಇಲ್ಲ. ಬೆಂಗಳೂರಿನ ಸನಿಹದಲ್ಲೇ ಈ ತಾಣವಿದೆ. ಹೂ ಬಿರಿದು ನಿಂತ ಸಸಿಗಳು, ಹೊನ್ನೆ, ಸೀಗೆ, ಶ್ರೀಗಂಧದ ಮರಗಳ ಘಮಲಿನಿಂದ ಕೂಡಿದ ವನಸುಮಗಳ ಮೇಲೆ ಮಕರಂದ ಹೀರಲು ಕುಳಿತ ದುಂಬಿಗಳ ಝೇಂಕಾರ, ಗುಂಯ್ ಗುಡುವ ಜೇನು ನೊಣಗಳು, ಅಲ್ಲಲ್ಲಿ ಹಾರಾಡುವ ಬಣ್ಣ-ಬಣ್ಣದ ಚಿಟ್ಟೆಗಳು ಬೆಟ್ಟದ ತಪ್ಪಲನ್ನು ಮತ್ತೂ ಆಹ್ಲಾದಕರ ಮಾಡಿವೆ. ಇದನ್ನು ನೀವು ಅಲ್ಲಿ ಕಣ್ತುಂಬಿಕೊಳ್ಳಬಹುದು. ಇದಕ್ಕೆ ಶ್ರಾವಣ ಮಾಸ ಹೆಚ್ಚು ಸೂಕ್ತ ಕಾಲ.
ಈ ಬೆಟ್ಟದಲ್ಲಿ ಮೊದಲು ಒಂದು ಉದ್ಭವ ಲಿಂಗವಿತ್ತು. ಗವಿಪುರ ಎಂಬ ಹೆಸರಿನ ಸ್ಥಳವಿತ್ತು. ಆಗ ಈ ತಾಣ ದಟ್ಟ ಅರಣ್ಯವಾಗಿತ್ತು. ಅಲ್ಲಿದ್ದ ಉದ್ಭವ ಲಿಂಗದ ವಿಷಯವೂ ಯಾರಿಗೂ ತಿಳಿದಿರಲಿಲ್ಲ. ಈಗ ಗವಿರಂಗಸ್ವಾಮಿಯನ್ನು ಪೂಜಿಸುವ ಅರ್ಚಕರ ಪೂರ್ವಿಕರ ಮನೆಯ ಹಸುವೊಂದು ಆಗಾಗ ಕಾಡಿನಲ್ಲಿ ಮರೆಯಾಗುತ್ತಿತ್ತು. ಅದನ್ನು ಒಂದು ದಿನ ಹಿಂಬಾಲಿಸಿದಾಗ ಹಸುವು ಉದ್ಭವ ಲಿಂಗಕ್ಕೆ ಹಾಲುಣಿಸುತ್ತಿರುವುದು ಕಂಡು ಬಂತು. ಅಂದಿನಿಂದ ಈ ಲಿಂಗವನ್ನುಅದೇ ಅರ್ಚಕ ಕುಟುಂಬದವರೇ ಪೂಜಿಸುತ್ತಿದ್ದಾರೆ.
ಈ ಲಿಂಗವು ಗವಿಯಲ್ಲಿ ಇದ್ದ ಕಾರಣ ಗವಿಲಿಂಗೇಶ್ವರ ಎಂದು ಕರೆಯಲಾಗುತ್ತಿತ್ತು. ನಂತರ ಇಲ್ಲಿ ಶ್ರೀನಿವಾಸನ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಕಾರಣ ಗವಿರಂಗಸ್ವಾಮಿ ಎಂದಾಯಿತು. ಮೂಲ ಉದ್ಭವ ಲಿಂಗ ಇಂದಿಗೂ ದೇವಸ್ಥಾನದಲ್ಲಿದೆ. ಆದರೆ ಈ ದೇವಸ್ಥಾನ ಹೇಗೆ ಶ್ರೀನಿವಾಸನ (ರಂಗಸ್ವಾಮಿ) ದೇವಾಲಯವಾಯಿತು ಎಂಬುದು ನಮ್ಮ ಹಿರಿಯರಿಗೂ ತಿಳಿದಿಲ್ಲ ಎಂಬುದು ಅರ್ಚಕ ಟಿ.ಜೆ.ಯೋಗೇಶ್ ಅವರ ಮಾತು.
ಈ ಬೆಟ್ಟದಲ್ಲಿ ಗವಿರಂಗಸ್ವಾಮಿ ದೇವಸ್ಥಾನದ ಜತೆಗೆ ಆಂಜನೇಯ, ಭೈರವೇಶ್ವರ ದೇವಸ್ಥಾನಗಳಿವೆ. ಗವಿರಂಗಸ್ವಾಮಿ ಬೆಟ್ಟದಲ್ಲಿ ಇರುವ ಇನ್ನೊಂದು ಆಕರ್ಷಣೆ ಬಿಲ್ಲುಸೊಣೆ ಅಥವಾ ಬಿಲ್ಸೊಣೆ. ದೇವಸ್ಥಾನದ ಸ್ವಲ್ಪವೇ ದೂರದಲ್ಲಿರುವ ಈ ಸೊಣೆಯಲ್ಲಿ ವರ್ಷದ ಎಲ್ಲ ಕಾಲದಲ್ಲಿಯೂ ನೀರು ಸಂಗ್ರಹವಾಗಿರುತ್ತದೆ. ಆ ನೀರನ್ನೆ ದೇವರ ಅಭಿಷೇಕಕ್ಕೆ ಬಳಸುವುದು ವಾಡಿಕೆ. ಸಣ್ಣ ಗುಹೆಯಂತಿರುವ ಜಾಗದಲ್ಲಿ ಬಂಡೆಯ ಮಧ್ಯೆ ಒಂದು ಸೊಣೆ (ನೀರು ನಿಲ್ಲುವ ಜಾಗ) ಇದ್ದು, ಅಲ್ಲಿ ಸಂಗ್ರಹವಾಗಿರುವ ನೀರು ಸ್ವಚ್ಛವಾಗಿದೆ. ಎಂಥ ಬರಗಾಲದಲ್ಲಿಯೂ ಈ ನೀರು ಬತ್ತಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಈ ನೀರನ್ನು ಸಂಗ್ರಹಿಸಿ ತೀರ್ಥದ ರೂಪದಲ್ಲಿ ಮನೆಗೆ ತೆಗೆದುಕೊಂಡು ಹೋಗುವ ಪರಿಪಾಠವೂ ಇದೆ.

ತ್ರೇತಾಯುಗದಲ್ಲಿ ಶ್ರೀರಾಮ ವನವಾಸದಲ್ಲಿದ್ದಾಗ ಸೀತೆಗೆ ಬಾಯರಿಕೆ ನೀಗಿಸಲು ಬಾಣವನ್ನು ಬಿಟ್ಟು ನೀರು ಬರುವಂತೆ ಮಾಡಿದ್ದನಂತೆ. ಬಿಲ್ಲಿನಿಂದ ಈ ಸೊಣೆ ನಿರ್ಮಾಣವಾದ ಕಾರಣ ಬಿಲ್ಲುಸೊಣೆ ಎಂದು ಇದಕ್ಕೆ ಹೆಸರು ಬಂದಿದೆ ಎನ್ನಲಾಗಿದೆ. ಆದರೆ ಈ ಸೊಣೆ ಬಿಲ್ಲಿನಾಕಾರದಲ್ಲಿ ಇರುವ ಕಾರಣಕ್ಕೂ ಈ ಹೆಸರು ಬಂದಿರಬಹುದು ಎನ್ನುವ ತರ್ಕವೂ ಅಲ್ಲಿದೆ.
ಸುತ್ತಲೂ ಹಸಿರುಟ್ಟ ಬೆಟ್ಟ, ಗುಡ್ಡಗಳ ಸಾಲು, ಕಣ್ಣು ಹಾಯಿಸಿದಷ್ಟೂ ಕಾಣುವ ವನರಾಶಿ, ಸುತ್ತಲೂ ಕಣ್ಮನ ಸೆಳೆಯುವ ಹೊಲ-ಗದ್ದೆಗಳ ನಯನ ಮನೋಹರ ನೋಟ ಬೆಟ್ಟದ ತುದಿಯಿಂದ ನೋಡುವಾಗ ಕಾಣುವುದೆಲ್ಲ ಸುಂದರ.
ದಾರಿ ಹೇಗೆ?
ಬೆಂಗಳೂರುನಿಂದ ಸುಮಾರು 75ಕಿಮೀ ದೂರದಲ್ಲಿ ಈ ಸ್ಥಳವಿದ್ದು, ಚನ್ನಪಟ್ಟಣದಿಂದ ಸಾತನೂರು ಚನ್ನಪಟ್ಟಣ ಮುಖ್ಯರಸ್ತೆಯಲ್ಲಿ ಸುಮಾರು 15ಕಿಮೀ ಸಾಗಿದರೆ ಅಲ್ಲಿ ಸಿಂಗರಾಜಪುರ ಹನಿಯೂರು ಬಳಿ ಬಲಕ್ಕೆ ಈ ತಾಣ ಇದೆ. ಒಂದು ದಿನದ ಪ್ರವಾಸಕ್ಕೆ ಶ್ರೀ ಗವಿರಂಗಸ್ವಾಮಿ ಬೆಟ್ಟ ಸೂಕ್ತ ಸ್ಥಳವಾಗಿದೆ. ನಿಸರ್ಗ ಪ್ರಿಯ ಚಾರಣಿಗರಿಗೆ ಇದು ಹೇಳಿ ಮಾಡಿಸಿದ ಸ್ಥಳ.