Friday, October 3, 2025
Friday, October 3, 2025

ಉತ್ತರಾಖಂಡದ ದ್ವಾರಹತ್‌ ಪಟ್ಟಣದಲ್ಲಿದೆ ಮಣಿಯನ್ ದೇವಾಲಯ ಸಂಕೀರ್ಣ: ಇದರ ವಾಸ್ತುಶಿಲ್ಪವನ್ನು ಕಂಡರೆ ಬೆರಗಾಗುತ್ತೀರಿ..

ದೇವ ಭೂಮಿ ಎಂದೇ ಕರೆಸಿಕೊಳ್ಳುವ ಉತ್ತರಾಖಂಡ ರಾಜ್ಯವು ಅನೇಕ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಸ್ಥಳಗಳಿಗೆ ಹೆಸರು ಮಾಡಿದೆ. ಆದರೆ ಇಲ್ಲಿನ ದ್ವಾರಹತ್ ಪಟ್ಟಣದಲ್ಲಿರುವ ಮಣಿಯನ್ ದೇವಾಲಯ ಸಂಕೀರ್ಣದ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಮಾಹಿತಿ.

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ದ್ವಾರಹತ್ ಪಟ್ಟಣವು ವಿಭಿನ್ನವಾದ ಸಂಸ್ಕೃತಿ-ಪರಂಪರೆ ಮತ್ತು ಐತಿಹಾಸಿಕವಾಗಿಯೂ ಹೆಸರುವಾಸಿಯಾಗಿದೆ. 7 ರಿಂದ 12 ನೇ ಶತಮಾನದವರೆಗೆ ಕುಮಾವೂನ್ ಪ್ರದೇಶವನ್ನು ಆಳಿದ ಕತ್ಯೂರಿ ರಾಜವಂಶವು ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಮುಖ್ಯ ಕಾರಣರೆಂದರೂ ತಪ್ಪಾಗಲಾರದು.

ಗಮನಸೆಳೆಯುವ ಮಣಿಯನ್ ದೇವಾಲಯ ಸಂಕೀರ್ಣ:

ದ್ವಾರಾಹತ್‌ನ ಜನಪ್ರಿಯ ದೇವಾಲಯಗಳಲ್ಲಿ ದುನಗಿರಿ ದೇವಾಲಯ ಪ್ರಮುಖವಾದುದಾದರೂ ಮಣಿಯನ್ ದೇವಾಲಯ ಸಂಕೀರ್ಣವು ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಹಿಂದೂ ದೇವತೆ ದುರ್ಗಾ ಮಾತೆಗೆ ಸಮರ್ಪಿತವಾದ ಈ ಗುಂಪು ದೇವಾಲಯವು, ಪುರಾತನ ವಾಸ್ತುಶಿಲ್ಪಗಳ ಮೂಲಕವೂ ಪ್ರವಾಸಿಗರನ್ನು ಬೆರಗಾಗಿಸುತ್ತದೆ.

maniyan temple

ದ್ವಾರಾಹತ್‌ನಲ್ಲಿವೆ 55 ಪ್ರಾಚೀನ ಹಿಂದೂ ದೇವಾಲಯಗಳು:

ದ್ವಾರಾಹತ್‌ನಲ್ಲಿ ಸಾಕಷ್ಟು ಪುರಾತನ ಹಿಂದೂ ದೇವಾಲಯಗಳಿವೆ. ಪ್ರಮುಖವಾಗಿ 55 ಪ್ರಾಚೀನ ದೇವಾಲಯಗಳು ತಮ್ಮ ಇಂಡೋ-ಆರ್ಯನ್ ಶೈಲಿ ಮಾತ್ರವಲ್ಲದೆ ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಎಂಟು ಗುಂಪುಗಳಾಗಿ ವಿಂಗಡಿಸಲಾದ ಈ ಪ್ರಾಚೀನ ದೇವಾಲಯಗಳು ಪುರಾತತ್ವ ಮೌಲ್ಯವನ್ನು ಹೊಂದಿದ್ದು, ಸಂರಕ್ಷಿತ ತಾಣಗಳಾಗಿವೆ.

ಇವುಗಳಲ್ಲಿ ಪ್ರಮುಖವಾದುದು ಮಣಿಯನ್ ದೇವಾಲಯಗಳ ಸಂಕೀರ್ಣ. ಇದು 11 ಮತ್ತು 13 ನೇ ಶತಮಾನಗಳ ನಡುವೆ ನಿರ್ಮಿಸಲಾಗಿರುವುದಾಗಿ ಪುರಾತತ್ತ್ವ ಇಲಾಖೆ ಮಾಹಿತಿ ನೀಡಿದೆ. ಇಲ್ಲಿ ಒಂದೇ ಕಡೆಯಲ್ಲಿ ಒಂಬತ್ತು ದೇವಾಲಯಗಳನ್ನು ಕಾಣಬಹುದಾಗಿದ್ದು, ನಾಲ್ಕು ದೇವಾಲಯಗಳನ್ನು ಒಂದು ಚೌಕದಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಕೆಲವು ಜೈನ ತೀರ್ಥಂಕರರಿಗೆ ಮತ್ತು ಕೆಲವು ದೇವತೆಗಳಿಗೆ ಮೀಸಲಾಗಿವೆ.

The-Ancient-Dwarahat-Temples-

ಮಣಿಯನ್ ದೇವಾಲಯ ಸಂಕೀರ್ಣದ ಮಧ್ಯಭಾಗವು ದುರ್ಗಾದೇವಿಗೆ ಸಮರ್ಪಿತವಾಗಿದ್ದು, ಇದು ಅತ್ಯಂತ ಪ್ರಮುಖವಾದ ದೇವಾಲಯವಾಗಿದೆ. ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಇದು, ವಿಶೇಷವಾದ ಗೋಪುರವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಸಿಂಹದ ಮೇಲೆ ಕುಳಿತಿರುವ ಎಂಟು ಕೈಗಳುಳ್ಳ ದುರ್ಗಾ ದೇವಿಯ ಸುಂದರವಾಗಿ ಕೆತ್ತನೆಯ ವಿಗ್ರಹ ಎಂಥವರಲ್ಲೂ ಭಕ್ತಿ ಬಾವನೆಯನ್ನು ಮೂಡಿಸುತ್ತದೆ.

ದೇವಿಯ ದೇವಾಲಯದ ಸುತ್ತಲೂ ಶಿವ, ವಿಷ್ಣು, ಗಣೇಶ, ಸೂರ್ಯ ದೇವರಿಗಾಗಿ ಸಣ್ಣ ದೇಗುಲಗಳಿದ್ದು, ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ವಾಸ್ತುಶಿಲ್ಪ ಶೈಲಿ ಮತ್ತು ಕಲಾತ್ಮಕ ಅಂಶಗಳನ್ನು ಹೊಂದಿದೆ. ದ್ವಾರಗಳು, ಕಂಬಗಳು ಮತ್ತು ಗೋಡೆಗಳ ಮೇಲಿನ ಸೂಕ್ಷ್ಮ ಕೆತ್ತನೆಗಳು ಹಿಂದಿನ ಯುಗದ ಅಸಾಧಾರಣ ಕರಕುಶಲತೆಯನ್ನು ಪ್ರದರ್ಶಿಸುತ್ತವೆ. ದೇವಾಲಯಗಳ ಕೆತ್ತನೆಗಳು ಮತ್ತು ವಾಸ್ತುಶಿಲ್ಪ ಶೈಲಿಯು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಬೈಜನಾಥ್ ದೇವಾಲಯ ಮತ್ತು ಅಲ್ಮೋರಾದ ಕತರ್ಮಲ್ ಸೂರ್ಯ ದೇವಾಲಯದಂತಹ ಇತರ ಪ್ರಮುಖ ದೇವಾಲಯಗಳಲ್ಲಿ ಕಂಡುಬರುವ ಕತ್ಯೂರಿ ಯುಗದ ವಾಸ್ತುಶಿಲ್ಪವನ್ನು ಹೋಲುತ್ತದೆ.

dwarahat-2518859

ದ್ವಾರಾಹತ್‌ಗೆ ಭೇಟಿಗೆ ಸೂಕ್ತ ಸಮಯವೆಂದು ?

ಮಾರ್ಚ್ ನಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಇಲ್ಲಿನ ಹವಾಮಾನವು ಉತ್ತಮವಾಗಿರುತ್ತದೆ. ಈ ಪ್ರದೇಶದ ನೈಸರ್ಗಿಕ ಸೌಂದರ್ಯ ಆಸ್ವಾದಿಸಲು ಮತ್ತು ಈ ಪ್ರಾಚೀನ ದೇವಾಲಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗಿದು ಬಹಳ ಒಳ್ಳೆಯ ಕಾಲ.

ದ್ವಾರಾಹತ್ ತಲುಪುವುದು ಹೇಗೆ ?

ಈ ಪಟ್ಟಣವು ಉತ್ತರಾಖಂಡದ ಅಲ್ಮೋರಾ ಮತ್ತು ರಾಣಿಖೇತ್‌ನಂತಹ ವಿವಿಧ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಆದರೆ 109 ಕಿಮೀ ದೂರದಲ್ಲಿ ಕಠ್ಗೋಡಮ್ ರೈಲು ನಿಲ್ದಾಣವಿದೆ. ಅಲ್ಲದೆ 143 ಕಿಮೀ ದೂರದಲ್ಲಿ ಪಂತ್‌ನಗರದಲ್ಲಿ ವಿಮಾನ ನಿಲ್ದಾಣವಿದ್ದು, ಅಲ್ಲಿಂದ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದುಕೊಂಡು ಇಲ್ಲಿಗೆ ತಲುಪಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ