ಓ ಪಾಂಡುರಂಗಾ.. ಪ್ರಭೂ ವಿಠಲಾ..
ವಿಷ್ಣು ತನ್ನ ಸೊಂಟದ ಮೇಲೆ ಕೈಯಿಟ್ಟು ಇಟ್ಟಿಗೆಯ ಮೇಲೆ ಅಲ್ಲಿಯೇ ನೆಲೆನಿಲ್ಲುತ್ತಾನೆ. ಆದಕಾರಣ ಅಲ್ಲಿ ನೆಲೆನಿಂತ ವಿಷ್ಣುವನ್ನು ವಿಠ್ಠಲ ಎಂದು ಕರೆಯಲಾಯಿತು. ವಿಠ್ಠಲ ಎಂದರೆ ಸಂಸ್ಕೃತದಲ್ಲಿ ಇಟ್ಟಿಗೆ ಎಂದರ್ಥ. ಇಟ್ಟಿಗೆಯ ಮೇಲೆ ವಿಷ್ಣುವು ನಿಂತಿದ್ದಕ್ಕೆ ಅವನನ್ನು ವಿಠ್ಠಲ ಎಂದು ಕರೆಯುತ್ತಾರೆ.
- ಸೌಮ್ಯಾ ಸನತ್
ಭಜನಾ ಭೂಮಿಯಂದೇ ಪ್ರಸಿದ್ಧಿ ಪಡೆದ ಪಂಢರಾಪುರ, ಮಹಾರಾಷ್ಟ್ರದ ಆರಾಧ್ಯ ದೈವ ಪಾಂಡುರಂಗನ ಸನ್ನಿಧಾನ. ಇಲ್ಲಿ ಪ್ರಥಮ ಏಕಾದಶಿಯಂದು ಪಾಂಡುರಂಗ ವಿಠಲನ ದರ್ಶನಕ್ಕಾಗಿ ಕಾಲ್ನಡಿಗೆಯಲ್ಲಿ 22 ದಿನ ನಡೆದು ಬರುತ್ತಾರೆ. ಪ್ರಥಮ ಏಕಾದಶಿ ಈ ಭಕ್ತರ ಪಾಲಿಗೆ ಪವಿತ್ರ ದಿನ.
ಪಂಢರಾಪುರದಲ್ಲಿ ಶ್ರೀಕೃಷ್ಣ ಹಾಗು ಆತನ ಪತ್ನಿಯಾದ ರುಕ್ಮಿಣಿ ಶಿಲಾ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿಂದ ಶ್ರದ್ಧಾ-ಭಕ್ತಿ, ಭಾವಶುದ್ಧಿಯ ಪ್ರತೀಕವಾಗಿ, ಸಾಮರಸ್ಯದ ದ್ಯೋತಕವಾಗಿ ''ವಾರಕರಿ'' ಸಂಪ್ರದಾಯ ಅನುಸರಿಸುತ್ತ ಆಷಾಢ ಶುದ್ಧ ಏಕಾದಶಿ ದಿನ ವಿಠ್ಠಲನ ದರ್ಶನ ಪಡೆಯುವ ತವಕದಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಾರೆ.
ಜಗದ್ವಿಖ್ಯಾತಿಯನ್ನು ಹೊಂದಿರುವ ಈ ದೇವಾಲಯವು ಮಹಾರಾಷ್ಟ್ರದ ಭೀಮಾ ನದಿಯ ಬಲದಂಡೆಯ ಮೇಲಿರುವ ಸೋಲಾಪುರ ಜಿಲ್ಲೆಯ ಪಂಢರಾಪುರದಲ್ಲಿದೆ. ಹಿಂದಿನ ಶಾಸನಗಳ ಪ್ರಕಾರ ಈಗಿನ ಪಂಢರಾಪುರಕ್ಕೆ ಪಂಡರಿಗೆ, ಪಂಡರಂಗೆ, ಪಾಂಡುರಂಗ ಕ್ಷೇತ್ರ ಎಂಬ ಹೆಸರುಗಳು ಇದ್ದವು. ಈ ಸ್ಥಳದಲ್ಲಿ ಭೀಮಾನದಿ ಅರ್ಧಚಂದ್ರಾಕೃತಿಯಲ್ಲಿ ಹರಿಯುವುದರಿಂದ ಭೀಮಾ ನದಿಯನ್ನು "ಚಂದ್ರಭಾಗ"ಎಂದೂ ಕರೆಯಲಾಗುತ್ತದೆ.

ಐತಿಹ್ಯ
ಕರ್ನಾಟಕದಲ್ಲಿ ಪಸರಿಸಿರುವ ಹಲವು ದಂತಕಥೆಗಳ ಪ್ರಕಾರ ಈಗ ಪಂಢರಾಪುರದಲ್ಲಿ ಇರುವಂಥ ಶ್ರೀವಿಜಯವಿಠ್ಠಲ ಮೊದಲು ಇದ್ದದ್ದು ಹಂಪಿಯಲ್ಲಿ. ವಿಜಯನಗರ ಸಾಮ್ರಾಜ್ಯ ಕೊನೆಗೊಂಡಾಗ ಅಲ್ಲಿದ್ದ ವಿಠ್ಠಲಮೂರ್ತಿಯನ್ನು ತೆಗೆದುಕೊಂಡು ಹೋಗಿ ಪಂಢರಾಪುರದಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂಬ ನಂಬಿಕೆ ಇದೆ.
ಮತ್ತೊಂದು ಕಥೆಯ ಪ್ರಕಾರ ಪುಂಡಲೀಕ ಎಂಬ ಭಕ್ತನೊಬ್ಬ ವಿಷ್ಣುವನ್ನು ಆರಾಧಿಸುತ್ತಿದ್ದನು. ಒಮ್ಮೆ ಆತನ ಭಕ್ತಿಗೆ ಮೆಚ್ಚಿ ಭಗವಾನ್ ವಿಷ್ಣು ಪ್ರತ್ಯಕ್ಷವಾಗಿ ಆತನ ಮನೆಗೆ ಬಂದಾಗ ಪುಂಡಲೀಕನು ತನ್ನ ತಂದೆ ಮತ್ತು ತಾಯಿಯ ಸೇವೆಯಲ್ಲಿ ನಿರತನಾಗಿದ್ದನು. ಇದನ್ನು ಕಂಡ ವಿಷ್ಣು ಅಲ್ಲೇ ನಿಂತನು. ಎಷ್ಟು ಸಮಯವಾದರೂ ಪುಂಡಲೀಕ ವಿಷ್ಣುವಿನ ಕಡೆಗೆ ನೋಡಲೇ ಇಲ್ಲ ಆತನು ತನ್ನ ತಂದೆ ತಾಯಿಯರ ಸೇವೆಯಲ್ಲಿಯೇ ಮಗ್ನನಾಗಿದ್ದನು. ಇದನ್ನು ಕಂಡ ವಿಷ್ಣು ತಾನು ಬಂದಿರುವುದಾಗಿ ಪುಂಡರೀಕನಿಗೆ ಎಚ್ಚರಿಸುತ್ತಾನೆ. ಪುಂಡಲೀಕನು ತನ್ನ ತಂದೆ-ತಾಯಿಗಳ ಸೇವೆಯ ತರುವಾಯ ಬರುವುದಾಗಿ ಹೇಳುತ್ತಾನೆ.
ಆಗ ವಿಷ್ಣು ತಾನು ಇಲ್ಲಿ ನಿಂತು ಏನು ಮಾಡಲಿ ಎಂದು ಕೇಳುತ್ತಾನೆ. ಆಗ ಪುಂಡಲೀಕ ಒಂದು ಇಟ್ಟಿಗೆಯನ್ನು ವಿಷ್ಣುವಿನ ಕಡೆಗೆ ಎಸೆದು ಇಟ್ಟಿಗೆಯ ಮೇಲೆ ನಿಂತಿರು ಎಂದು ಹೇಳುತ್ತಾನೆ. ಭಕ್ತ ಪುಂಡಲೀಕ ಎಷ್ಟು ಸಮಯವಾದರೂ ಬರದ ಕಾರಣ ವಿಷ್ಣು ತನ್ನ ಸೊಂಟದ ಮೇಲೆ ಕೈಯಿಟ್ಟು ಇಟ್ಟಿಗೆಯ ಮೇಲೆ ಅಲ್ಲಿಯೇ ನೆಲೆನಿಲ್ಲುತ್ತಾನೆ. ಆದಕಾರಣ ಅಲ್ಲಿ ನೆಲೆನಿಂತ ವಿಷ್ಣುವನ್ನು ವಿಠ್ಠಲ ಎಂದು ಕರೆಯಲಾಯಿತು. ವಿಠ್ಠಲ ಎಂದರೆ ಸಂಸ್ಕೃತದಲ್ಲಿ ಇಟ್ಟಿಗೆ ಎಂದರ್ಥ. ಇಟ್ಟಿಗೆಯ ಮೇಲೆ ವಿಷ್ಣುವು ನಿಂತಿದ್ದಕ್ಕೆ ಅವನನ್ನು ವಿಠ್ಠಲ ಎಂದು ಕರೆಯುತ್ತಾರೆ.
ದೇಗುಲ ಪ್ರಾಂಗಣ
ಪಂಢರಾಪುರ ದೇವಾಲಯವು ಆರು ದ್ವಾರಗಳನ್ನು ಹೊಂದಿದ್ದು, ಪೂರ್ವ ದ್ವಾರವನ್ನು ನಾಮದೇವ್ ಘಾಟ್ ಎಂದು ಕರೆಯಲಾಗುತ್ತದೆ. ದೇವಾಲಯದ ಗೋಡೆಗಳ ಮೇಲೆ 13 ನೇ ಶತಮಾನದ ಕೆಲವು ಶಾಸನಗಳಿವೆ.
ವಿಠ್ಠಲ ದೇವರ ವಿಗ್ರಹವು ಕಪ್ಪುಕಲ್ಲಿನಿಂದ ಮಾಡಲ್ಪಟ್ಟಿದ್ದು ಮೂರೂವರೆ ಅಡಿ ಎತ್ತರವಿದೆ. ಅವನ ತಲೆಯ ಮೇಲೆ ಶಿವಲಿಂಗ ಮತ್ತು ಕುತ್ತಿಗೆಯಲ್ಲಿ ಕೌಸ್ತುಭ ಮಣಿ ಇದೆ. ಇದನ್ನು ಗರ್ಭಗುಡಿಯಲ್ಲಿ ಬೆಳ್ಳಿ ತಟ್ಟೆಯಾಕಾರದ ಪ್ರಭಾವಲದ ಮುಂದೆ ಇರಿಸಲಾಗಿದೆ.
ದೇವಾಲಯವು ಗಣಪತಿ, ಶ್ರೀಕೃಷ್ಣನ ಪತ್ನಿಯರು, ರುಕ್ಮಿಣಿ, ರಾಧಾ, ಸತ್ಯಭಾಮ, ಗರುಡ, ರಾಮ ಮತ್ತು ಲಕ್ಷ್ಮಣ, ಕಾಶಿ ವಿಶ್ವನಾಥ, ಕಾಲಭೈರವ, ನರಸೋಬ ಮತ್ತು ದತ್ತಾತ್ರೇಯರಿಗೆ ಸಮರ್ಪಿತವಾದ ಹಲವಾರು ಸಣ್ಣ ದೇವಾಲಯಗಳನ್ನು ಪಂಢರಾಪುರ ದೇವಾಲಯದ ಸಂಕೀರ್ಣದೊಳಗೆ ಹೊಂದಿದೆ.
"ವಾರಿ" ಎಂದರೆ ಏನು?
ವಾರಿ ಎಂದರೆ ನಿರ್ದಿಷ್ಟ (ಧಾರ್ಮಿಕ) ಸ್ಥಳಕ್ಕೆ ನಿಯಮಿತವಾಗಿ ಭೇಟಿ ಕೊಟ್ಟು ಹರಕೆ ತೀರಿಸುವುದೆಂದರ್ಥ. ಇಲ್ಲಿ ಪಂಢರಾಪುರ ಯಾತ್ರೆಯನ್ನು 'ವಾರಿ' ಎನ್ನುವುದು ವಾಡಿಕೆ. "ವಾರಿ " ಯಾತ್ರೆಯನ್ನು ಮಾಡುವ ಸಂಪ್ರದಾಯವೇ "ವಾರಕರಿ". ಇಪ್ಪತ್ತು ದಿನಗಳವರೆಗೆ ಅಖಂಡವಾಗಿ ಹರಿನಾಮ ಸ್ಮರಣೆ ಮಾಡುತ್ತಾ ಸ್ವಂತ ಮನೆಯಿಂದ ಪಂಢರಾಪುರಕ್ಕೆ ಭಗವಂತನಡೆಗೆ ನಡೆದುಕೊಂಡು ಮನೆಗೆ ಹಿಂದಿರುಗುವ ಪ್ರಕ್ರಿಯೆ ಇದು.

"ವಾರಕರಿ ನಡೆದು ಬಂದ ದಾರಿ"
ಹದಿಮೂರನೇ ಶತಮಾನದಿಂದ ಪಂಢರಾಪುರ ಪಾದಯಾತ್ರೆ ನಡೆದುಕೊಂಡು ಬಂದಿದೆ. ಪಲ್ಲಕ್ಕಿಯಲ್ಲಿ ಸಂತರ ಪಾದುಕೆಗಳನ್ನು ಹೊತ್ತು ಪಾದಯಾತ್ರೆ ನಡೆಸುವ ವಾರಕರಿ ಸಂಪ್ರದಾಯ 1685ರಿಂದ ನಡೆಯುತ್ತಿದೆ. ಇದಕ್ಕೆ ಚಾಲನೆ ನೀಡಿದವರು ತುಕಾರಾಮ ಮಹಾರಾಜರ ಮಗ ನಾರಾಯಣ ಮಹಾರಾಜರು. ಸದ್ಯ ಆಷಾಢದಲ್ಲಿ ನಾನಾ ಭಾಗಗಳಿಂದ 40ಕ್ಕೂ ಹೆಚ್ಚು ಪಲ್ಲಕ್ಕಿಗಳನ್ನು ಹೊತ್ತು ಭಕ್ತರು ಪಂಢರಾಪುರಕ್ಕೆ ತೆರಳುತ್ತಾರೆ. ಇದರಲ್ಲಿ ಅಳಂದದ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿ, ದೇಹುವಿನ ತುಕಾರಾಮ, ಪೈಠಣದ ಏಕನಾಥ, ತ್ರಯಂಬಕೇಶ್ವರದ ನಿವೃತ್ತಿನಾಥ, ಮುಕ್ತಿನಗರದ ಮುಕ್ತಾಬಾಯಿ, ಶೇಂಗಾವದ ಗಜಾನನ ಮಹಾರಾಜರು, ಸಾಸವಾಡದ ಸೋಪಾನ ಮಹಾರಾಜರ ಪಲ್ಲಕ್ಕಿಗಳು ಪ್ರಧಾನವಾಗಿವೆ.
ಪಂಢರಾಪುರದ ಮುಖ್ಯ ಯಾತ್ರೆಯು ಪುಣೆಯ ದೇಹು ಪ್ರದೇಶದಲ್ಲಿ ನೆಲೆಗೊಂಡಿರುವ ಸಂತ ತುಕಾರಾಂ ದೇವಾಲಯದಿಂದ ಪ್ರಾರಂಭವಾಗುತ್ತದೆ. ನಂತರ ಪುಣೆಯ ಆಳಂದಿಯಲ್ಲಿರುವ ಸಂತ ಧ್ಯಾನೇಶ್ವರದಿಂದ ಪಾಲ್ಖಿ ಸೇರಿಕೊಳ್ಳುತ್ತದೆ. ಪಂಢರಾಪುರಕ್ಕೆ ಹೋಗುವ ದಾರಿಯಲ್ಲಿ ಹಲವಾರು ಹಳ್ಳಿಗಳಿಂದ ಬರುವ ಅನೇಕ ಪಾಲ್ಕಿಗಳು ಮುಖ್ಯ ಪಾಲ್ಕಿಯನ್ನು ಸೇರುತ್ತವೆ.
ಈ ಪಲ್ಲಕ್ಕಿಗಳೊಂದಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು ತುಳಸಿ ಮಾಲೆ ಧರಿಸಿ, ''ತ್ಯಾಗ, ದಯೆ, ಸೌಹಾರ್ದ, ಅಹಿಂಸೆ, ಪ್ರೀತಿ, ಮಾನವೀಯತೆ, ಕ್ಷಮಾ ಗುಣಗಳೊಂದಿಗೆ ಸರಳ ಜೀವನ ನಡೆಸುತ್ತೇವೆ. ಕೇವಲ ಶಾಕಾಹಾರ ಸೇವಿಸಿ ಏಕಾದಶಿ ಉಪವಾಸ ಕೈಗೊಳ್ಳುತ್ತೇವೆ. ಹರಿಪಥ ಗ್ರಂಥ ಓದುವ ಜತೆಗೆ ಭಜನೆ, ಕೀರ್ತನೆಗಳಲ್ಲಿ ಕಾಲ ಕಳೆದು ಅಂತರಂಗದಲ್ಲಿ ಭಗವಂತನನ್ನು ಕಾಣುತ್ತೇವೆ,'' ಎಂದು ನಿರ್ಧರಿಸಿ ಸಾತ್ವಿಕ ಮಾರ್ಗದಲ್ಲಿ ನಡೆದು ಬದುಕಿಗೊಂದು ಹೊಸ ಅರ್ಥ ನೀಡುತ್ತಾರೆ. ಇದು ಅಕ್ಷರಶಃ ಮಾನವೀಯ ಪಾಠಶಾಲೆ. ಜಾತಿ, ಧರ್ಮ, ಪಂಥಗಳ ಭೇದವನ್ನು ಮೀರಿ ಭಕ್ತಿಯ ಹೆಸರಲ್ಲಿ ಮಾನವೀಯ ಅಂತಃಕರಣ ಒಂದಾಗುವ ಶುಭಯೋಗ.
ಶತಶತಮಾನಗಳಿಂದಲೂ ಸಾಗಿಕೊಂಡು ಬಂದಿರುವ ವಾರಿ 21ನೇಯ ಶತಮಾನ 'ಆಧುನಿಕ ಯುಗ'ದಲ್ಲೂ ತನ್ನ ಉತ್ಸಾಹ, ಚೈತನ್ಯವನ್ನು ಹಾಗೇ ಉಳಿಸಿಕೊಂಡು ಬಂದಿರುವುದು ಪವಾಡವೇ ಸರಿ. ಹಾಗಾಗಿ ವಾರಿ ಎಂದರೆ "ಸಮಾಜದರ್ಶನ" ಹಾಗೂ "ಆತ್ಮದರ್ಶನ" ಸಂತರ ಸಾಂಗತ್ಯದಲ್ಲಿ ವಾರಿ ಪ್ರಪಂಚದಲ್ಲಿದ್ದುಕೊಂಡೇ ಪರಮಾರ್ಥದೆಡೆ ಸಾಗುವ ವಿಶಿಷ್ಟ ಹಾದಿ.
ಪಂಢರಿನಾಥ ಮಹಾರಾಜ ಕೀ ಜೈ... ಎನ್ನುತ್ತಾ, ತಾಳ, ಮೃದಂಗಗಳ ಮೇಳದ ನಡುವೆ ಈ ಜೈಕಾರಕ್ಕೆ ಲಕ್ಷ ಲಕ್ಷಕ್ಕೂ ಹೆಚ್ಚು ಕನ್ನಡದ ಕಂಠಗಳು ಜೊತೆಗೂಡುತ್ತವೆ. ಸಾಧು-ಸಂತ-ಮಹಾತ್ಮರೊಡನೆ ಅಭಂಗಗಳನ್ನು ಹಾಡುತ್ತಾ, ಪಾಂಡುರಂಗನ ನಾಮಸ್ಮರಣೆಯೊಂದಿಗೆ ಲಕ್ಷಾಂತರ ಜನರು ಶಿಸ್ತುಬದ್ಧವಾಗಿ ಕಾಲ್ನಡಿಗೆಯ ಪಂಢರಾಪುರಕ್ಕೆ ಸಾಗುವ ಈ ಯಾತ್ರೆ ಮಾನವೀಯತೆಯ ದೊಡ್ಡ ವಿಶ್ವವಿದ್ಯಾಲಯ. ಜಾತಿ, ಮತ, ಪಂಥದ ಭೇದವಿಲ್ಲ. ಮೇಲುಕೀಳು ಎಂಬ ತಾರತಮ್ಯಗಳಿಲ್ಲ ಇಲ್ಲಿ ಎಲ್ಲರೂ ಪಾಂಡುರಂಗನ ಭಕ್ತರೇ.
ಭೇಟಿ ನೀಡಲು ಅತ್ಯಂತ ಪ್ರಶಸ್ತ ಕಾಲಾವಧಿ
ಪಂಢರಾಪುರಕ್ಕೆ ಭೇಟಿ ನೀಡಲು ಅತ್ಯಂತ ಉತ್ತಮ ಕಾಲಾವಧಿ ಎಂದರೆ ಜೂನ್ ಮತ್ತು ಜುಲೈ. ಈ ತಿಂಗಳು ಅಷಾಡ ಮಾಸವಿರುವುದರಿಂದ ವಿಠಲನಿಗೆ ವಿಶೇಷ ದಿಂಡಿ ಉತ್ಸವ ನಡೆಸಲಾಗುತ್ತದೆ. ಅಷಾಢ ಏಕಾದಶಿ ಹಾಗೂ ಕಾರ್ತೀಕ ಏಕಾದಶಿಯಂದು ವಿಷೇಶ ದಿಂಡಿ ಉತ್ಸವ ನಡೆಸುತ್ತಾರೆ. ಈ ದೇಗುಲವು ಭಕ್ತರ ದರ್ಶನಕ್ಕಾಗಿ ಮುಂಜಾನೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ತೆರೆದಿರಲಾಗಿರುತ್ತದೆ.
ಪಂಢರಾಪುರಕ್ಕೆ ತಲುಪುವ ಬಗೆ
ವಾಯುಮಾರ್ಗದ ಮೂಲಕ: ಅತ್ಯಂತ ಹತ್ತಿರದ ವಿಮಾನ ನಿಲ್ದಾಣವೆಂದರೆ ಪುಣೆ ವಿಮಾಣ ನಿಲ್ದಾಣ. ಬೆಂಗಳೂರಿನಿಂದ ಮಹಾರಾಷ್ಟ್ರದ ಪುಣೆಗೆ ನೇರ ವಿಮಾನ ಮಾರ್ಗವಿದೆ. 574 ಕಿಮೀ ಅಥವಾ ಆರೂವರೆ ಗಂಟೆಗಳ ಪ್ರಯಾಣ.
ರೈಲು ಮಾರ್ಗ :
ಪುಣೆಯಿಂದ ಹಲವಾರು ರೈಲುಗಳ ವ್ಯವಸ್ಥೆಗಳಿವೆ. ಬೆಂಗಳೂರಿನಿಂದ ಪಂಢರಾಪುರಕ್ಕೆ ನೇರ ರೈಲ್ವೆ ವ್ಯವಸ್ಥೆ ಇದ್ದು ಸುಮಾರು 880 ಕಿ.ಮೀ ಅಂತರವಿದೆ.
ರಸ್ತೆ ಮಾರ್ಗ:
ನೇರ ಪಂಢರಾಪುರಕ್ಕೆ ಬೆಂಗಳೂರಿನಿಂದ ನೇರ ಬಸ್ ವ್ಯವಸ್ಥೆಗಳಿಲ್ಲ. ಆದರೆ ರಸ್ತೆ ಮಾರ್ಗದ ಮೂಲಕ ತೆರಳಲು ಸುಮಾರು 645 ಕಿಮೀ ದೂರವಿದೆ.