Sunday, July 20, 2025
Sunday, July 20, 2025

ಪುಣ್ಯ ಭೂಮಿಯ ಯಾತ್ರೆಯ ಕಥನ

ಪಂಚಗಂಗಾ ಘಾಟ್ ಸಂಪೂರ್ಣ ಜನ ಸ್ತೋಮದಿಂದ ಕೂಡಿ ಕಾಲಭೈರವನ ದರ್ಶನಕ್ಕಾಗಿ ಕಾಯುತ್ತಿತ್ತು.ಕಾಯುವುದೋ‌ ಬಿಡುವುದೋ ಎನ್ನುವ ಮನಸ್ಸಿನ ಗೊಂದಲದ ನಡುವೆಯೇ ಜಾಗ ಮಾಡಿಕೊಂಡು ಒಂದು ಕಡೆ ಸರತಿಯಲ್ಲಿ ಸೇರಿಯೇ ಬಿಟ್ಟೆವು. ಕೇವಲ ಅರ್ಧ ಗಂಟೆಯಲ್ಲಿ ದರ್ಶನ ಆಗಿ ಹೊರಬಂದೆವು. ಅದರೊಂದಿಗೆ ಕಾಶಿಯ ನಮ್ಮ ಪಯಣ ಪರಿಪೂರ್ಣವಾಯಿತು.

  • ರಮ್ಯಾ ಮಹಾಬಲಡ್ಕ

ಯಾತ್ರೆ ಎಂದರೆ ಭಗವಂತನೆಡೆಗೆ ನಡೆಯುವ ಪಯಣ ಎಂದು ಬಲ್ಲವರು ಹೇಳುತ್ತಾರೆ. ಶ್ರೇಷ್ಠವಾದಂಥ ದೇವಸ್ಥಾನಗಳಿರುವ ತಾಣಗಳಿಗೆ ಹೆಜ್ಜೆಹೆಜ್ಜೆಯಲ್ಲೂ ಭಗವಂತನ ಸ್ಮರಣೆಯೊಂದಿಗೆ ನಡೆಯವುದೇ ಯಾತ್ರೆ. ಕಾಶಿ ಪುಣ್ಯ ಭೂಮಿ ಸ್ಪರ್ಶಿಸಿದ್ದು, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದು,ಅಯೋಧ್ಯೆ ಎಂಬ ಮೋಕ್ಷದಾಯಕ‌ ಭೂಮಿಗೆ ಹೋದ ಯಾತ್ರೆಯ ಕಥನವಿದು...

ಮಹಾಕುಂಭ ಮೇಳ

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವು ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಧಾರ್ಮಿಕ ಆಚರಣೆ.. ಈ ಸಂದರ್ಭದಲ್ಲಿ ತ್ರಿವೇಣಿ ಸ್ನಾನ ಮಾಡಬೇಕೆಂಬುದು ಮಹದಾಸೆ ನನಗಷ್ಟೇ ಅಲ್ಲದೆ ನನ್ನ ಪುಟ್ಟ ಮಗಳಿಗೂ ಇತ್ತು. ಆದರೆ ವಿಮಾನ ಪ್ರಯಾಣದ ವೆಚ್ಚವನ್ನು ನೋಡಿದರೆ ಎಂಥವರೂ ಅಚ್ಚರಿಗೊಳಗಾಗುತ್ತಿದ್ದರು. ನಿರಾಸೆಯಿಂದ ನಮ್ಮೊಳಗಿದ್ದ ಆಸೆಯನ್ನ ಬದಿಗೊತ್ತಬೇಕೆಂದುಕೊಳ್ಳುವಾಗ, ವಿಮಾನ ಪ್ರಯಾಣದ ದರ ಕಡಿಮೆಗೆ ಲಭ್ಯವಾಯ್ತು. ಅಂದು ಬೆಂಗಳೂರಿನಿಂದ-ವಾರಣಾಸಿಗೆ, ಲಕ್ನೋವಿನಿಂದ ಬೆಂಗಳೂರಿಗೆ flight ticket ಬುಕ್ ಮಾಡಿಕೊಂಡೆವು. ಹೋಗುವ ಒಂದು ವಾರದ ಹಿಂದಷ್ಟೇ ಅಲ್ಲಿ ಭೇಟಿ ಮಾಡಬಹುದಾದ ಇನ್ನುಳಿದ ಪ್ರವಾಸಿ ತಾಣಗಳ ಬಗ್ಗೆ ಪಟ್ಟಿ ಮಾಡಿಕೊಂಡೆವು.

ಧಾರ್ಮಿಕ ಯಾತ್ರೆಗೆ ಕಾಯಾ-ಮನಸಾ ಸಿದ್ಧತೆ

ದೇವರ ದರ್ಶಕ್ಕೆ ಹೋಗುವಾಗ, ಹಲವು ವಿಷಯಗಳ ಬಗ್ಗೆ ಅತ್ಯಂತ ಕಾಳಜಿ ವಹಿಸಬೇಕಾಗುತ್ತದೆ. ಸೂತಕ ಬರಬಾರದು, ಅಶೌಚಾದಿಗಳು ಬರಬಾರದು, ನಾವು ಹೆಣ್ಣು ಮಕ್ಕಳಿಗಾದರೆ ಹೋದಮೇಲೆ ಅಲ್ಲಿ ಮುಟ್ಟು ಶುರುವಾಗಬಾರದು. ಹೀಗೆ ಹಲವು ವಿಚಾರಗಳಿರುವುದರಿಂದ ಯಾವುದೇ ವಿಘ್ನಗಳು ಬಾರದಿರಲಿ ಎಂದು ವಿಘ್ನೇಶ್ವರನನ್ನು ಹಾಗೂ ಕುಲಗುರುಗಳನ್ನ ಪ್ರಾರ್ಥಿಸಿ, ಪ್ಯಾಕಿಂಗ್ ಮಾಡಿಕೊಂಡು ಹೊರಡುವ ಸಮಯವನ್ನು ಕಾಯತೊಡಗಿದೆವು.

ಮಗಳಿಗಿದು ಮೊದಲ ವಿಮಾನ ಪ್ರಯಾಣ, ಅದರ ಸಂಭ್ರಮ ಹಾಗೂ ಭಯದಲ್ಲಿ ಅವಳಿದ್ದಳು. ಮನಸ್ಸಿನ ಈ ಎಲ್ಲ ಮಿಶ್ರ ಭಾವದಿಂದ ಬೆಂಗಳೂರು ವಿಮಾನ ನಿಲ್ದಾಣ ತಲುಪಿದೆವು. ಆಕಾಶ ಏರ್ (Akasa Air) ವಿಮಾನ ಹತ್ತಿ ಕುಳಿತೆವು. ಮೊದಲ ಬಾರಿಯಾಗಿದ್ದರಿಂದ ಮಗಳೂ ಹೆದರಿಕೊಂಡಾಳೇ ಎಂಬ ಭಯದಲ್ಲಿದ್ದವಳಿಗೆ take off ಸುಲಭವಾಗಿತ್ತು. ಹಾಗಾಗಿ ಅವಳ ಭಯ ಅಲ್ಲಿಗೇ ಹಾರಿ‌ ಹೋಯಿತು.

gangarati assi ghat

ಅಸ್ಸಿ ಘಾಟಿನಲ್ಲಿ ಗಂಗಾರತಿಯ ಅನುಭವ

ಸುಖ ಪ್ರಯಾಣದೊಂದಿಗೆ ಕಾಶಿ ಮಣ್ಣನ್ನು ಸ್ಪರ್ಶಿಸಿದ ಆ ಮೊದಲ ಹೆಜ್ಜೆಯು ಅವಿಸ್ಮರಣೀಯ. ಕಾಶಿ ನಾಡನ್ನು ಸ್ವಲ್ಪ ಸುತ್ತಾಡಿ, ಸಂಜೆ ವೇಳೆಗೆ ಗಂಗಾರತಿಗಾಗಿ ಅಸ್ಸಿ ಘಾಟಿಗೆ ಬಂದೆವು. ಬಂದ ಕೂಡಲೇ ಆರತಿಯ ಸಂಯೋಜಕರಲ್ಲೊಬ್ಬರು ಬನ್ನಿ ಎದುರು ಕುಳಿತುಕೊಳ್ಳಿ ಎಂದು ಸನ್ನೆ ಮಾಡಿ ಕರೆದು ಎದುರು ಕೂರಿಸಿದರು. ಅಲ್ಲದೆ ಸ್ವಲ್ಪ ಹೊತ್ತಲ್ಲೇ ಮತ್ತೆ ಬಂದು ಆರತಿ ಮಾಡುತ್ತೀರಾ ಅಂತ ಕೇಳಿದರು. ಎದುರು ಕೂರಿಸಿದಾಗಲೇ ಗಂಗಾಮಾತೆಯೇ ಕರೆದು ಕೂರಿಸಿದಳೇ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆವು. ಈಗ ಆರತಿ ಮಾಡುವ ಅವಕಾಶ ಸಿಕ್ಕಾಗಲಂತೂ ಆನಂದಭಾಷ್ಪವೇ ಬಂದು ತನುಮನ ಗಂಗೆಯಲ್ಲಿ ಮುಳುಗಿಹೋಯಿತು. ಜೀವನದ ಅದ್ಭುತ ಅನುಭವವಿದು ಎನಿಸಿಬಿಟ್ಟಿತ್ತು. ಅಲ್ಲಿ ಸೇರಿದ್ದ ಸಾವಿರಕ್ಕೂ ಹೆಚ್ಚು ಮಂದಿಯ ನಡುವೆ ಕೇವಲ‌ 20-25 ಜನರಿಗಷ್ಟೇ ಗಂಗಾರತಿಯ ಅವಕಾಶ ಸಿಕ್ಕಿತ್ತು. ಅದರಲ್ಲಿ ನಾವೂ ಒಬ್ಬರು ಎಂಬುದೇ ನಮ್ಮ ಸಂಭ್ರಮಕ್ಕೆ ಕಾರಣ. ಆ ದಿವ್ಯ ಕ್ಷಣಗಳನ್ನು ಮನದಲ್ಲಿ ತುಂಬಿ ವಿಶ್ರಾಂತಿಯತ್ತ ತೆರಳಿದೆವು.

ಮರುದಿನ ಬೆಳಗ್ಗೆ ಕೃಷ್ಣನೆಂಬ ದೋಣಿಯ ಸಾರಥಿಯೊಂದಿಗೆ ಕಾಶಿ ಘಾಟ್‌ ಗಳನ್ನು ನೋಡುತ್ತಾ, ಗಂಗೆಯ ಮಡಿಲಲ್ಲಿ ದೋಣಿ ಸವಾರಿ ಮಾಡುತ್ತಾ ಮತ್ತೆ ಅಸ್ಸಿ ಘಾಟ್ ನ ಒಂದು ಮೂಲೆಯಲ್ಲಿ ಇಳಿದು, ಪುಣ್ಯ ಗಂಗಾ ಸ್ನಾನ ಮಾಡಿ ಪಾವನರಾದೆವು. ಎಲ್ಲ ದಿನದಂತೆ‌ ಅಲ್ಲವೇ ಆ ದಿನವೂ ಅಂದರೆ, ಅಲ್ಲ. ಅಲ್ಲವೇ ಅಲ್ಲ. ಗಂಗಾ ಸ್ನಾನ ಮಾಡಿದವರಿಗೇ ಗೊತ್ತು, ಆ ಸ್ನಾನದ ಮಹತ್ವ ಹಾಗೂ ಆ ಸ್ನಾನಾನಂತರದ ದಿವ್ಯ ಅನುಭೂತಿ. ಪ್ರತಿಯೊಬ್ಬರೂ ಅನುಭವಿಸಲೇ ಬೇಕು. ಜೀವನ‌ ಪಾವನ ಮಾಡಿಕೊಳ್ಳಲೇ ಬೇಕು.

ಗಂಗಾರತಿಯಾಯಿತು, ಗಂಗಾ ಸ್ನಾನವಾಯಿತು. ಕಾಶಿಗೆ ಹೋದ ಎರಡು ಮುಖ್ಯ ಉದ್ದೇಶಗಳ ಸಾಕಾರವಾಯಿತು. ಇನ್ನೊಂದು ಪ್ರಮುಖ ಉದ್ದೇಶವೇ ಕಾಶಿ ವಿಶ್ವನಾಥನ ದರ್ಶನ. ಸೋಮವಾರ ಕಾಶಿಯಲ್ಲಿ ಅತಿಯಾದ‌ ಜನಜಂಗುಳಿ. ಆದರೆ ನಮಗೆ ಈ ಹಿಂದೆ ಹೋದವರು ನೀಡಿದ್ದ ಅಲ್ಲಿನವರ ಸಂಪರ್ಕ ಸಂಖ್ಯೆಯನ್ನು ಬಳಸಿಕೊಂಡು, ವಿಶ್ವನಾಥನಿಂದ ಕೇವಲ 50 ಮೀಟರ್ ದೂರದಲ್ಲಿ ನಿಂತು ನೋಡಲು ಸಾಧ್ಯವಾಯಿತು. ಕಾಶೀಪುರಾಧೀಶ ವಿಶ್ವನಾಥನ ದರ್ಶನ ಪಡೆದು ಧನ್ಯರಾದೆವು.

ಬಿಂದು ಮಾಧವನ ದರ್ಶನ ಭಾಗ್ಯ

ಬೋಟ್ ನಲ್ಲಿ ಘಾಟ್ ದರ್ಶನವಾದರೂ ಕಾಲ್ನಡಿಗೆಯ ಮೂಲಕವೂ ಘಾಟ್‌ ಗಳನ್ನು ಸುತ್ತಾಡಿಕೊಂಡು, ಬಿಂದು ಮಾಧವನ ದರ್ಶನಕ್ಕೆ ಹೋದೆವು. ಹೆಚ್ಚು ಜನ ಸಂಚಾರವಿರಲಿಲ್ಲ. ಬಿಳಿ ಶಿಲೆಯಲ್ಲಿ ನಗುಮುಖನಾಗಿ, ಬಂದವರನ್ನು ಹರಸುತ್ತಾ ಬಂದವರಿಗೆ ಮನಸ್ಸಿಗೆ ತಂಪನ್ನೀಯುತ್ತ ಇರುವ ಬಿಂದು ಮಾಧವ ಹಾಗೂ ಅಲ್ಲೇ ಇರುವ ಲಕ್ಷ್ಮೀ ನಾರಾಯಣ ದೇವರ ಅದ್ಬುತ ದರ್ಶನವನ್ನು ಕಣ್ಣುತುಂಬಿಕೊಂಡೆವು.

bindu madhava temple

ಇವರನ್ನೆಲ್ಲ ನೋಡಿದರೆ ಸಾಕೇ ಕ್ಷೇತ್ರ ಪಾಲನಾದ ಕಾಲಭೈರವನನ್ನು ನೋಡಬೇಡವೇ? ಇಡೀ ಪಂಚಗಂಗಾ ಘಾಟ್ ಸಂಪೂರ್ಣ ಜನ ಸ್ತೋಮದಿಂದ ಕೂಡಿ ಅವನ ದರ್ಶನಕ್ಕಾಗಿ ಕಾಯುತ್ತಿತ್ತು. ಕಾಯುವುದೋ‌ ಬಿಡುವುದೋ ಎನ್ನುವ ಮನಸ್ಸಿನ ಗೊಂದಲದ ನಡುವೆಯೇ ಜಾಗ ಮಾಡಿಕೊಂಡು ಒಂದು ಕಡೆ ಸರತಿಯಲ್ಲಿ ಸೇರಿಯೇ ಬಿಟ್ಟೆವು. ಕೇವಲ ಅರ್ಧ ಗಂಟೆಯಲ್ಲಿ ದರ್ಶನ ಆಗಿ ಹೊರಬಂದೆವು. ಅದರೊಂದಿಗೆ ಕಾಶಿಯ ನಮ್ಮ ಪಯಣ ಪರಿಪೂರ್ಣವಾಯಿತು.

ಪ್ರಯಾಗ್‌ ರಾಜ್‌ ನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ

ಮರುದಿನ‌, ಪ್ರಯಾಗ್‌ ರಾಜ್‌ ಹೋಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ, ಅಯೋಧ್ಯೆಗೆ ಹೋಗುವುದು ಪ್ಲಾನ್. ಅದರಂತೆ ಪ್ರಯಾಗ್‌ ರಾಜ್‌ ಗೆ ನಮ್ಮ ಪಯಣ ಬೆಳೆಸಿದೆವು. ಸಂಗಮಸ್ಥಾನ ತಲುಪಿದರೆ ಅಲ್ಲಿ ಬೋಟ್‌ ಗಳ ದರ, ಕುಂಭಮೇಳದ ನಂತರ ನೆತ್ತಿಗೇರಿತ್ತು. ಹೇಗೋ ಹೇಳಿ ಒಪ್ಪಿಸಿ 2000 ರು.ಗೆ ಬೋಟ್‌ ಬುಕಿಂಗ್‌ ಮಾಡಿಕೊಂಡೆವು. ತ್ರಿವೇಣಿ ಸಂಗಮಕ್ಕೆ ಕರೆದುಕೊಂಡು‌ ಹೋದರೆ ಅಲ್ಲಿ ಮತ್ತೆ ಇಳಿಯಲು ದುಡ್ಡು. ಅಂತೂ ಗೊತ್ತಿಲ್ಲದ ಊರಲ್ಲಿ ಮಾಡುವುದೇನು ಎಂದು ಅಲ್ಲೂ ದುಡ್ಡು ಕೊಟ್ಟು ನೀರಿಗಿಳಿದು ಸಂಗಮ ಸ್ನಾನದ ದಿವ್ಯ ಅನುಭೂತಿ ಪಡೆದುಕೊಂಡೆವು. ನೀರಿನೊಳಗೆ ಮುಳುಗಿದಾಗ ಕಣ್ಣು ತೆರೆದು ನೋಡಿದರೆ ಅಲ್ಲಿ ಒಂದು ಬೇರೆಯೇ ಪ್ರಪಂಚ ನಮ್ಮ ಮುಂದಿತ್ತು. ಸಂಗಮದ ತಿಳಿ ಹಸಿರು ಬಣ್ಣದ ನೀರು ಮೈಮನವನ್ನು ತಣಿಸಿತ್ತು. ಗಂಗೆ-ಯಮುನೆಯನ್ನು ಬೋಟ್ ನಲ್ಲಿ ದಾಟಿ, ದಡಕ್ಕೆ ಬಂದು ನಮ್ಮ ಪಯಣವನ್ನು ಅಯೋಧ್ಯೆ ಕಡೆಗೆ ಮುಂದುವರಿಸಿದೆವು.

ಅಯೋಧ್ಯೆಯ ಬಾಲರಾಮನ ದರುಶನ

ಮಧ್ಯಾಹ್ನ 2.30ರ ವೇಳೆಗೆ ಅಯೋಧ್ಯೆ ತಲುಪಿದೆವು. ಸಂಜೆಯ ವೇಳೆ ಅಯೋಧ್ಯಾಧಿಪತಿ ಬಾಲರಾಮನ ದರ್ಶನಕ್ಕೆ ಹೊರಟೆವು.

ayodhye bala rama

ಅದು ಬಾಲರಾಮನ ನೈವೇದ್ಯದ ಸಮಯವಾಗಿತ್ತು. ನೈವೇದ್ಯ ಮುಗಿದು ಬಾಗಿಲು ತೆರೆಯುವವರೆಗೆ ಹತ್ತು ನಿಮಿಷ, ದೇವಾಲಯದ ಒಳಗೆ ನಿಂತು ಅವನ‌ ದರ್ಶನಕ್ಕಾಗಿ ಕಾದು, ದೇವಸ್ಥಾನದ ಒಳ ಸೌಂದರ್ಯವನ್ನು ಆಸ್ವಾದಿಸುತ್ತಾ, ತೆರೆತೆಗೆದ ತಕ್ಷಣ, ರಾಮನ ದರ್ಶನದ ಭಾಗ್ಯ ಆರತಿ ಸಮೇತವಾಗಿತ್ತು. ಅದ್ಭುತ, ಅತ್ಯದ್ಭುತ ರಾಮನನ್ನ ಕಣ್ಣು ತುಂಬಿಕೊಂಡೆವು. ಜನರು ಕಡಿಮೆ ಇದ್ದುದರಿಂದ ನೂಕು ನುಗ್ಗಲಿಲ್ಲದೆ ರಾಮ ಲಲ್ಲಾನನ್ನು ನೋಡಿ ಆನಂದವನ್ನು ಅನುಭವಿಸಿದೆವು.

ಮರುದಿನ, ಸರಯೂ ತೀರ, ರಾಮ ನಿರ್ಯಾಣದ ಜಾಗಗಳಿಗೆಲ್ಲ ಹೋಗಿ, ಅಲ್ಲಿಯ ರಾಮ ದೇವಸ್ಥಾನದ ಸಾನಿಧ್ಯದಲ್ಲಿ ಸ್ವಲ್ಪ ಕಾಲವಿದ್ದು, ಅಯೋಧ್ಯೆ ರಾಮ ಜನ್ಮಭೂಮಿಯನ್ನು ಕಣ್ತುಂಬಿಕೊಂಡೆವು. ಮಧ್ಯಾಹ್ನ ಮೇಲೆ ಲಕ್ನೋಗೆ ಹೊರಟೆವು. ಬೆಂಗಳೂರಿಗೆ ಪ್ರಯಾಣ ಬೆಳೆಸಿ, ಮಧ್ಯಾಹ್ನದ ವೇಳೆಗೆ ಮರಳಿ ಗೂಡಿಗೆ ಬಂದೆವು. ಶರೀರ ಹಿಂದಿರುಗಿ ಬಂದರೂ ಅದೆಷ್ಟೋ ದಿನ ಮನಸ್ಸು ಆ ಪುಣ್ಯ ಭೂಮಿಯನ್ನು ನೆನೆಯುತ್ತಲೇ ಇತ್ತು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ