Tuesday, October 28, 2025
Tuesday, October 28, 2025

ಪುಣ್ಯ ಭೂಮಿ - ಪ್ರಭಾಸ ಕ್ಷೇತ್ರ

ಶಿವನಿಗಾಗಿ ಇಲ್ಲಿ ಚಂದ್ರನು ಚಿನ್ನದ ಮಂದಿರ, ನಂತರ ರಾವಣನು ಬೆಳ್ಳಿಯ ಹಾಗೂ ಶ್ರೀಕೃಷ್ಣ ಗಂಧದ ಮರದಲ್ಲಿ ಮಂದಿರ ಕಟ್ಟಿಸಿದರಂತೆ. ಕೊನೆಯಲ್ಲಿ ಭೀಮಕುಮಾರನು ಕಲ್ಲಿನಲ್ಲಿ ಮಂದಿರವನ್ನು ಕಟ್ಟಿಸಿದನೆಂಬ ಪ್ರತೀತಿ ಇಲ್ಲಿದೆ.

  • ಗೀತಾ ಕುಂದಾಪುರ

ಗುಜರಾತ್‌ನ ಪಶ್ಚಿಮ ಕರಾವಳಿಯಲ್ಲಿರುವ ಪ್ರಭಾಸ ಕ್ಷೇತ್ರವು ಭಕ್ತರಿಗೆ, ಯಾತ್ರಿಗಳಿಗೆ ಪುಣ್ಯಭೂಮಿ. ಇಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಜತೆಗೆ ಹಲವು ಪುಣ್ಯಕ್ಷೇತ್ರಗಳಿವೆ. ಅವುಗಳಲ್ಲಿ ವಿಶ್ವ ವಿಖ್ಯಾತ ಸೋಮನಾಥ ದೇವಾಲಯ ಭಕ್ತಿ, ಆಧ್ಯಾತ್ಮ, ಇತಿಹಾಸ, ಶಿಲ್ಪಕಲೆಯ ಸಂಗಮ ಕ್ಷೇತ್ರ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಮತ್ತು ಬೃಹದಾಕಾರದ ಲಿಂಗವಾಗಿದೆ. ದಾಳಿಕೋರರ ಕೆಂಗಣ್ಣಿಗೆ ಗುರಿಯಾಗಿ ಹಲವು ಬಾರಿ ದಾಳಿಗೆ ಒಳಗಾದರೂ ಪುನರ್‌ ನವೀಕರಣಗೊಂಡು ಗಟ್ಟಿಯಾಗಿ ನಿಂತಿದೆ.

ಮಂದಿರ ನಿರ್ಮಾಣ ಹಿನ್ನೆಲೆ ಇತಿಹಾಸ

ಚಂದ್ರನು ಪ್ರಜಾಪತಿ ದಕ್ಷನ 27 ಪುತ್ರಿಯರನ್ನು ವಿವಾಹವಾದನಂತೆ, ಚಂದ್ರನಿಗೆ 27 ಪತ್ನಿಯರಲ್ಲಿ ರೋಹಿಣಿಯ ಮೇಲೇಯೇ ಹೆಚ್ಚು ಪ್ರೀತಿ ತೋರಿಸುತ್ತಾ ಉಳಿದವರನ್ನು ಮರೆತು ಬಿಟ್ಟನಂತೆ. ಇದನ್ನು ಕಂಡ ದಕ್ಷ ಶಾಪ ಕೊಟ್ಟನಂತೆ, ಇದರಿಂದ ಚಂದ್ರನ ಶಕ್ತಿ ಕುಂದಿತು. ಶಾಪವನ್ನು ನಿವಾರಿಸಲು ಪ್ರಭಾಸ ತೀರ್ಥಕ್ಕೆ ಬಂದು ಶಿವನನ್ನು ಪ್ರಾರ್ಥಿಸಿದ, ಶಿವ ಚಂದ್ರನ ಭಕ್ತಿಗೆ ಒಲಿದು ಅವನ ಶಾಪವನ್ನು ನಿವಾರಿಸಿದನು. ನಂತರ ಚಂದ್ರನು ಶಿವ, ಪಾರ್ವತಿಯರನ್ನು ಪ್ರಭಾಸ ಕ್ಷೇತ್ರದಲ್ಲಿ ನೆಲೆಸುವಂತೆ ಕೇಳಿಕೊಂಡನು. ಇದಕ್ಕೆ ಒಪ್ಪಿದ ಶಿವನು ಶಿವಲಿಂಗ ರೂಪದಲ್ಲಿ ಸ್ಥಾಪಿತನಾದನು. ಚಂದ್ರನು ಇಲ್ಲಿ ಶಿವನಿಗಾಗಿ ಚಿನ್ನದ ಮಂದಿರ ಕಟ್ಟಿಸಿದನಂತೆ. ನಂತರ ರಾವಣನು ಬೆಳ್ಳಿಯ ಹಾಗೂ ಶ್ರೀಕೃಷ್ಣ ಗಂಧದ ಮರದಲ್ಲಿ ಮಂದಿರ ಕಟ್ಟಿಸಿದನಂತೆ. ಕೊನೆಯಲ್ಲಿ ಭೀಮಕುಮಾರನು ಕಲ್ಲಿನಲ್ಲಿ ಮಂದಿರವನ್ನು ಕಟ್ಟಿಸಿದನೆಂಬ ಪ್ರತೀತಿ ಇದೆ. ಇದು ದಂತಕತೆಯಾದರೆ ಇತಿಹಾಸ ಪುಟಗಳಲ್ಲೂ ಇಲ್ಲಿ ನಡೆದ ಹಲವಾರು ಘಟನೆಗಳ ಉಲ್ಲೇಖಗಳಿವೆ.

ಅಂದಿನ ದಿನಗಳಲ್ಲಿ ಇಲ್ಲಿದ್ದ ಅಗಾಧ ಸಂಪತ್ತೇ ಮಂದಿರಕ್ಕೆ ಮುಳುವಾಯಿತೋ ಏನೋ? ಮಂದಿರವು ಹಲವು ದಾಳಿಗಳಿಗೆ ಒಳಗಾಯಿತು. 11ನೇ ಶತಮಾನದಲ್ಲಿ ಮೊಹಮ್ಮದ್‌ ಘಜನಿ ದಂಡೆತ್ತಿ ಬಂದ, ಈ ಯುದ್ಧದಲ್ಲಿ 70 ಸಾವಿರ ಜನರು ಮಡಿದರು. ಘಜನಿ ಯುದ್ಧದಲ್ಲಿ ಗೆಲ್ಲುತ್ತಿದ್ದಂತೆ ಮಂದಿರದ ಸಂಪತ್ತನ್ನು ಕೊಳ್ಳೆ ಹೊಡೆದದ್ದಲ್ಲದೆ ಮಂದಿರವನ್ನು ಧ್ವಂಸ ಮಾಡಿದ. ಪುನರ್ ನಿರ್ಮಾಣಗೊಂಡ ಮಂದಿರದ ಮೇಲೆ 13 ಮತ್ತು 14ನೇ ಶತಮಾನದಲ್ಲಿ ಮತ್ತೆ ದಾಳಿ ನಡೆಯಿತು. 18ನೇ ಶತಮಾನದಲ್ಲಿ ಔರಂಗಜೇಬನು ಇದನ್ನು ನಾಶ ಮಾಡಿದ್ದನು. 19ನೇ ಮತ್ತು 20ನೇ ಶತಮಾನದಲ್ಲಿ ಇದನ್ನು ಮಸೀದಿಯಾಗಿ ಪರಿವರ್ತಿಸಲಾಗಿತ್ತು. ಸ್ವಾತಂತ್ರ್ಯದ ನಂತರ ಭಾರತದ ಉಪ ಪ್ರಧಾನಿಯಾಗಿದ್ದ ಸರ್ದಾರ್‌ ವಲ್ಲಭಭಾಯ್‌ ಪಟೇಲರು ಮಂದಿರ ಪುನರ್‌ ನಿರ್ಮಾಣ ಪ್ರಕ್ರಿಯೆ ಆರಂಭಿಸಿದ್ದರು. 1951ರಲ್ಲಿ ಈ ಕಾರ್ಯ ಮುಗಿದಿತ್ತು. ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಅವರು ಮಂದಿರದ ಪ್ರಾಣ ಪ್ರತಿಷ್ಟಾಪನೆ ಮಾಡಿ ಉದ್ಧಾಟನೆ ಕಾರ್ಯ ನಡೆಸಿದ್ದರು.

somanath temple

ವಾಸ್ತುಶಿಲ್ಪ

ಅರಬ್ಬಿ ಕಡಲಿನ ತಟದಲ್ಲಿನ ಸೋಮನಾಥ ಮಂದಿರದ ಮುಖ ಮಂಟಪವು ಎರಡು ಅಂತಸ್ತಿನಲ್ಲಿದೆ. ಅಗಲವಾದ ಹಜಾರ ಮತ್ತು ಕೆತ್ತನೆಗಳಿರುವ ನೂರಾರು ಕಂಬಗಳಿವೆ. ಹಳದಿ ಮರಳುಕಲ್ಲಿನಿಂದ ಕಟ್ಟಿದ ಮಂದಿರದ ವಾಸ್ತುಶಿಲ್ಪ ಅತ್ಯಂತ ಸುಂದರವಾಗಿದೆ. ಮುಖ ಮಂಟಪಕ್ಕೆ ಅಂಟಿಕೊಂಡು ಗರ್ಭಗ್ರಹವಿದ್ದು ಮೇಲ್ಭಾಗದಲ್ಲಿ ಶಿಖರವಿದೆ. ಶಿಖರದ ತುದಿಯಲ್ಲಿ ಬಂಗಾರದ ಕಳಶವಿದೆ. ಪಕ್ಕದಲ್ಲಿ ತ್ರಿಕೋನಾಕಾರದ ಧ್ವಜ ಹಾರಾಡುತ್ತಿರುತ್ತದೆ. ಸೋಮನಾಥ ಜ್ಯೋತಿರ್ಲಿಂಗವು ಬೃಹದಾಕಾರದ ಜ್ಯೋತಿರ್ಲಿಂಗವಾಗಿದೆ. ಮಂದಿರದ ವಾಸ್ತುಶಿಲ್ಪವು ಮಾರು-ಗುರ್ಜರ ಶೈಲಿಯಲ್ಲಿದೆ. ʻಪ್ರಭಾಶಂಕರಭಾಯಿ ಓಘಡಭಾಯಿ ಸೋಂಪುರʼ ಇದರ ಮುಖ್ಯ ಶಿಲ್ಪಿ.

ಇಲ್ಲಿನ ಮತ್ತೊಂದು ವಿಶೇಷವೆಂದರೆ ಮಂದಿರದ ಅಂಗಳದಲ್ಲಿ, ದಕ್ಷಿಣ ದಿಕ್ಕಿನಲ್ಲಿರುವ ʻಬಾಣ ಸ್ತಂಭʼ. ಕಂಬದ ಮೇಲೆ ಬಾಣವಿರುದಕ್ಕೆ ಇದಕ್ಕೆ ಈ ಹೆಸರು, ಈ ಬಾಣವು ಸಮುದ್ರದತ್ತ ತಿರುಗಿಕೊಂಡಿದೆ. ಕಂಬದ ಮೇಲೆ ವಾಕ್ಯವೊಂದನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಇದರ ಪ್ರಕಾರ ಭಾಣದ ದಿಕ್ಕಿನಲ್ಲಿ ಪ್ರಯಾಣಿಸಿದರೆ ಬೆಟ್ಟವೊಂದು ಸಿಗದು, ಬದಲಿಗೆ ದಕ್ಷಿಣ ದೃವ (ಅಂಟಾರ್ಟಿಕ) ತಲುಪಬಹುದು. ಈ ಬಗ್ಗೆ 6ನೇ ಶತಮಾನದ ಗ್ರಂಥವೊಂದರಲ್ಲಿ ಉಲ್ಲೇಖಗಳಿವೆ. ಇದು ನಮ್ಮ ಶಿಲ್ಪಕಲೆಯಲ್ಲಿ ಹೇಗೆ ಆಧ್ಯಾತ್ಮ ಹಾಗೂ ವಿಜ್ಞಾನಗಳು ಸಂದಿಸುತ್ತಿದ್ದವು ಎನ್ನುವುದಕ್ಕೆ ಸಾಕ್ಷಿ.

ದಿನದ ಮೂರು ಹೊತ್ತು ಶಂಖ, ವಾದ್ಯದೊಂದಿಗೆ ಆರತಿ ಇಲ್ಲಿ ನಡೆಯುತ್ತದೆ. ಅಭಿಷೇಕ, ರುದ್ರಾಭಿಷೇಕ ಮುಂತಾದ ಸೇವೆಗಳನ್ನೂ ಮಾಡಬಹುದು. ಮಂದಿರದ ಸುತ್ತ ಸುಂದರವಾದ ಉದ್ಯಾನವಿದೆ, ಕುಳಿತುಕೊಳ್ಳಲು ಆಸನಗಳಿವೆ. ಇಲ್ಲಿ ಸಿಗುವ ಚಿಕ್ಕಿ ಪ್ರಸಾದವೂ ಸ್ವಾದಿಷ್ಠವಾಗಿರುತ್ತದೆ. ಸೋಮನಾಥನ ದರ್ಶನ ಪಡೆದು ಪ್ರಾರ್ಥಿಸಿದರೆ ಪೂರ್ವಕೃತ ಪಾಪಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಇಲ್ಲಿಗೆ ಭೇಟಿನೀಡುವ ಭಕ್ತರದ್ದು. ಸೋಮನಾಥ ಮಂದಿರದ ಪಕ್ಕದಲ್ಲೇ ಮತ್ತೊಂದು ಶಿವ ಮಂದಿರವಿದೆ, ಇದನ್ನು ಮರಾಠ ರಾಣಿ ಅಹಲ್ಯಾ ಬಾಯಿ ಹೋಳ್ಕರ್‌ 1782ರಲ್ಲಿ ಕಟ್ಟಿಸಿದಳು ಎನ್ನಲಾಗಿದೆ.

Somanath Mandir

ಇವುಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು

ತ್ರಿವೇಣಿ ಸಂಗಮ

ಸೋಮನಾಥ ಮಂದಿರದಿಂದ 1ಕಿಮೀ ದೂರದಲ್ಲಿ ಕಪಿಲ, ಹಿರಣ್ಯ, ಸರಸ್ವತಿ ನದಿಗಳು ಸಂಗಮವಾಗುತ್ತವೆ. ಸಂಗಮವು ಸ್ವಲ್ಪ ದೂರದಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಈ ತ್ರಿವೇಣಿ ಸಂಗಮದಲ್ಲಿ ಮಿಂದು ತನು ಮನವನ್ನು ಶುಚಿಯಾಗಿಸಿಕೊಂಡು ಸೋಮನಾಥ ಮಂದಿರವನ್ನು ಪ್ರವೇಶಿಸುವುದು ಇಲ್ಲಿನ ಪದ್ದತಿ.

ಬಾಲ್ಕ ತೀರ್ಥ

ಸೋಮನಾಥದಿಂದ 4ಕಿಮೀ ದೂರದಲ್ಲಿ ಬಾಲ್ಕ ತೀರ್ಥ ಕ್ಷೇತ್ರವಿದೆ. ಇಲ್ಲಿ ಕೃಷ್ಣನು ಮಲಗಿರುವಾಗ ಬೇಡನೊಬ್ಬ ಕೃಷ್ಣನ ಕಾಲನ್ನು ಮೀನೆಂದು ತಿಳಿದು ಬಾಣ ಬಿಟ್ಟ ಜಾಗವಿದು. ಈ ಪ್ರಶಾಂತವಾದ ಜಾಗದಲ್ಲಿ ಸುಂದರ ಪುಟ್ಟ ಮಂದಿರವಿದೆ. ಇಲ್ಲಿ ಕೃಷ್ಣ ಕಾಲು ನೀಡಿ ಮಲಗಿಕೊಂಡಿದ್ದು ಬೆರಳಿಗೆ ಬಾಣ ಚುಚ್ಚಿಕೊಂಡಿರುವ ಮೂರ್ತಿ ಇದೆ.

ಗೋಲೋಕ ಧಾಮ ತೀರ್ಥ/ ದೇಹೋತ್ಸರ್ಗ ತೀರ್ಥ

ಕೃಷ್ಣನ ಕೊನೆಯ ಪಯಣದ ಜಾಗವಿದು. ಇಲ್ಲಿಂದ ಕೃಷ್ಣನು ತನ್ನ ಲೋಕಕ್ಕೆ ಹಿಂತಿರುಗಿದ ಎನ್ನಲಾಗಿದೆ. ಹಿರಣ್ಯ ನದಿಯ ದಡದಲ್ಲಿರುವ ಈ ಜಾಗವು ಸೋಮನಾಥದಿಂದ 2 ಕಿಮೀ ದೂರದಲ್ಲಿದೆ. ಈ ಜಾಗವನ್ನು ದೇಹೋತ್ಸರ್ಗ ಎಂದೂ ಕರೆಯುತ್ತಾರೆ. ಕೃಷ್ಣನ ಪಾದದ ಗುರುತಿರುವ ಕಲ್ಲೊಂದು ಇಲ್ಲಿದೆ. ಇಲ್ಲಿ ಬಲರಾಮ ಗುಹೆಯೂ ಇದೆ. ಬಲರಾಮನೂ ಇದೇ ಗುಹೆಯಲ್ಲಿ ದೇಹತ್ಯಾಗ ಮಾಡಿ, ವಾಸುಕಿಯಾಗಿ ತನ್ನ ಲೋಕಕ್ಕೆ ಮರಳಿದ ಎನ್ನಲಾಗಿದೆ. ಇದರ ಪಕ್ಕದಲ್ಲಿ ಗೀತಾ ಮಂದಿರ ಮತ್ತು ಲಕ್ಷ್ಮೀ ನಾರಾಯಣ ಮಂದಿರವೂ ಇದೆ. ಪಾಂಡವರು ತಮ್ಮ ಜೀವನದ ಕೊನೆಯ ಘಟ್ಟವಾಗಿ ಹಿಮಾಲಯದತ್ತ ಸಾಗುವ ಮೊದಲು ಇಲ್ಲಿ ಶಿವನನ್ನು ಪೂಜಿಸಿದರೆಂಬ ಪ್ರತೀತಿ ಇದೆ.

ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಪ್ರವಾಸ ಮಾಡಲು ಉತ್ತಮ ಸಮಯವಾಗಿದೆ. ಇತಿಹಾಸದಲ್ಲಿ ಆಸಕ್ತಿ ಉಳ್ಳವರು, ಆಸ್ತಿಕರು- ನಾಸ್ತಿಕರು, ಭಾರತೀಯರು ಅಥವಾ ವಿದೇಶಿಯರು ಯಾರು ಬೇಕಾದರೂ ಈ ಸ್ಥಳಕ್ಕೆ ಭೇಟಿ ನೀಡಬಹುದು, ಎಲ್ಲರಿಗೂ ಇದೊಂದು ಉತ್ತಮ ಪ್ರವಾಸಿ ತಾಣವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ