ಹಕ್ಕಿಗಳ ಹಕ್ಕಿನ ಜಾಗ.. ಕೊಂಡಜ್ಜಿ ಕೆರೆ
ವಿಶಿಷ್ಟವಾಗಿ ಇಲ್ಲಿ ಯೂರೋಪಿನ ಬಿಳಿ ಹುಬ್ಬಿನಬಾತು , ಸೂಜಿ ಬಾಲದಬಾತು, ಕಂದುಬಾತು, ಮಂಗೋಲಿಯಾದ ಪಟ್ಟೆತಲೆ ಹೆಬ್ಬಾತು, ಕಾಶ್ಮೀರ ಸೇರಿದಂತೆ ಉತ್ತರ ಭಾರತದಿಂದಲೂ ಬರುವ ನವರಂಗ, ಮರಳು ಪೀಪಿ, ಗುಬುಟ ಕೊಕ್ಕಿನಬಾತು, ಹೆಜ್ಜಾರ್ಲೆ ಸೇರಿ 72 ವಿವಿಧ ಪ್ರಬೇಧದ ವಲಸೆ ಹಕ್ಕಿಗಳನ್ನು ಕಾಣಬಹುದು.
- ಜಯರಾಮ.ಎನ್, ದಾವಣಗೆರೆ
ಹಚ್ಚ ಹಸಿರಿನ ಕುರುಚಲು ಕಾಡು, ಬೆಟ್ಟ - ಗುಡ್ಡಗಳ ನಡುವೆ ತನ್ನ ವಿಶಾಲವಾದ ಮೈಸಿರಿಯನ್ನು ಹರಡಿಕೊಂಡು ಫಳಫಳನೆ ಕಂಗೊಳಿಸುತ್ತಾ ಕುಳಿತಿದ್ದಾಳೆ ಇಲ್ಲೊಬ್ಬಳು ಸುಂದರಿ. ಮನಸ್ಸನ್ನು ತನ್ನ ಮಡಿಲಲ್ಲಿ ಬೆಸೆಯುವಂತೆ ಮಾಡುವ, ಮೌನದಲ್ಲೇ ಮಂತ್ರಮುಗ್ಧಗೊಳಿಸುವ ಇವಳು ಅನನ್ಯ ಸೌಂದರ್ಯವತಿ. ಮಲೆನಾಡನ್ನೂ ನಾಚಿಸುವಂತಿದೆ ಇವಳ ಪ್ರಾಕೃತಿಕ ಸೌಂದರ್ಯ. ಸದಾ ಮೊಳುಗುತಿದೆ ಹಕ್ಕಿಗಳ ಕುಹೂಕುಹೂ ಕಲರವ. ಕಣ್ಣುಗಳಿಗೆ ಇಂಪುಣಿಸುತಿದೆ ಹಸಿರಿನ ಬಿಚ್ಚು ಪರಿಸರ, ಮೈಮನವ ಕುಣಿಸಿ ತಣಿಸುತಿದೆ ಅಲ್ಲಿನ ಪ್ರಶಾಂತವಾದ ವಾತಾವರಣ.
ದಿನನಿತ್ಯದ ಜಂಜಾಟಗಳಿಂದ ದೂರ ಸರಿದು ನಯನ ಮನೋಹರ ಪ್ರಕೃತಿ ತಾಣದಲ್ಲಿನ ಸೌಂದರ್ಯವನ್ನು ಆಸ್ಪಾದಿಸಲು, ಅಲ್ಲಿನ ಪ್ರಶಾಂತತೆಯಲ್ಲಿ ಕ್ಷಣ ಹೊತ್ತು ಮೈಮರೆತು ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳುವ ಇಚ್ಛೆ ಬಹಳಷ್ಟು ಜನರಲ್ಲಿ ಇದ್ದೇ ಇರುತ್ತದೆ.
ಅಂಥವರಿಗಾಗಿಯೇ ಸೃಷ್ಟಿಯಾದಂತಿರುವ ಈ ಪ್ರಕೃತಿ ಎಂಬ ಮಾಯೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿರುವ ಸುಂದರವಾದ ಕೆರೆ. ದಾವಣಗೆರೆಯಿಂದ ಸುಮಾರು 15 ಕೀ.ಮೀ. ದೂರದಲ್ಲಿರುವ ಈ ಪ್ರದೇಶವನ್ನು ಬಯಲುಸೀಮೆಯ ಓಯಸಿಸ್ ಎಂದೇ ಕರೆಯಬಹುದು. ಎರಡು ಗುಡ್ಡಗಳ ನಡುವೆ ಕಟ್ಟೆ ಕಟ್ಟಿ ವಿಶಾಲವಾದ ಕೆರೆ ನಿರ್ಮಿಸಲಾಗಿದ್ದು, ಕೆರೆಯ ಬಲಭಾಗಕ್ಕೆ ವಿಶಾಲವಾದ ಅರಣ್ಯ ಪ್ರದೇಶವಿದೆ. ಈ ಕಾಡಿನಲ್ಲಿ ಅನೇಕ ಬಗೆಯ ಪ್ರಾಣಿ, ಪಕ್ಷಿಗಳನ್ನು ಕಾಣಬಹುದು. ಅದರಲ್ಲೂ ಇದು ಪಕ್ಷಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಅನೇಕ ಬಗೆಯ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ವಿಶಿಷ್ಟವಾಗಿ ಇಲ್ಲಿ ಯೂರೋಪಿನ ಬಿಳಿ ಹುಬ್ಬಿನಬಾತು, ಸೂಜಿ ಬಾಲದಬಾತು, ಕಂದುಬಾತು, ಮಂಗೋಲಿಯಾದ ಪಟ್ಟೆತಲೆ ಹೆಬ್ಬಾತು, ಕಾಶ್ಮೀರ ಸೇರಿದಂತೆ ಉತ್ತರ ಭಾರತದಿಂದಲೂ ಬರುವ ನವರಂಗ, ಮರಳು ಪೀಪಿ, ಗುಬುಟ ಕೊಕ್ಕಿನಬಾತು, ಹೆಜ್ಜಾರ್ಲೆ ಸೇರಿ 72 ವಿವಿಧ ಪ್ರಬೇಧದ ವಲಸೆ ಹಕ್ಕಿಗಳನ್ನು ಕಾಣಬಹುದು. ಈ ಪೈಕಿ ದಾವಣಗೆರೆಯ ಕೊಂಡಜ್ಜಿ ಕೆರೆಯನ್ನು ಪಕ್ಷಿಗಳ “ಹಾಟ್ ಸ್ಪಾಟ್” ಎಂದೇ ಗುರುತಿಸಲಾಗಿದೆ.

ಇದೊಂದು ಪಿಕ್ ನಿಕ್ ತಾಣವಾಗಿ ಪ್ರಸಿದ್ಧವಾಗಿದೆ. ಈ ಸ್ಥಳವು ದಕ್ಷಿಣ ಭಾರತದ ಪ್ರಮುಖ ಸ್ಕೌಟ್ ಮತ್ತು ಗೈಡ್ ತರಬೇತಿ ಕೇಂದ್ರಗಳಲ್ಲಿ ಒಂದಾಗಿದೆ. ಕೆರೆಯ ಮುಂಭಾಗದಲ್ಲಿಯೇ ಈ ತರಬೇತಿ ಭವನವಿದೆ. ಈ ಕೆರೆಯಲ್ಲಿ ದೋಣಿ ವಿಹಾರಕ್ಕೂ ಅನುಮತಿ ನೀಡಲಾಗಿದೆ. ಈ ಸ್ಥಳದಲ್ಲಿ ಸ್ವಚ್ಛತೆ ಅಭಾವವಿದ್ದು ಅಲ್ಪ ಅವ್ಯವಸ್ಥೆಯಿಂದ ಕೂಡಿದೆ. ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸರಿಯಾದ ವ್ಯವಸ್ಥೆ ಕಲ್ಪಿಸಿದರೆ ಈ ಸುಂದರ ತಾಣವೂ ಹೆಚ್ಚಿನ ಪ್ರವಾಸಿ ರಸಿಕರನ್ನು ಸೆಳೆಯುವುದರಲ್ಲಿ ಸಂದೇಹವಿಲ್ಲ.
ಪ್ರವಾಸಿಗರ ನೆಚ್ಚಿನ ತಾಣವಾಗಲು ಯೋಗ್ಯವಿರುವಂಥ ಈ ಅದ್ಭುತ ಸ್ಥಳ ಇಂದು ಕೆಲ ಯುವಕರ ಪಾಲಿಗೆ ಪಾರ್ಟಿ ತಾಣವಾಗಿ ಪರಿಣಮಿಸುತ್ತಿರುವುದು ವಿಪರ್ಯಾಸ. ಪಾರ್ಟಿ ನೆಪದಲ್ಲಿ ಮದ್ಯದ ಬಾಟಲಿಗಳನ್ನು ಒಡೆದುಹಾಕಿದ್ದಾರೆ. ಎಲ್ಲೆಂದರಲ್ಲಿ ಗಾಜಿನ ಚೂರು, ಪ್ಲಾಸ್ಟಿಕ್ ತ್ಯಾಜ್ಯ, ಪೇಪರ್ ತಟ್ಟೆಗಳನ್ನು ಎಸೆದು ನೈಸರ್ಗಿಕ ಶುದ್ಧತೆಗೆ ಧಕ್ಕೆಯಾಗಿದೆ. ನಮ್ಮ ಸುತ್ತಮುತ್ತಲಿನ ಪ್ರಕೃತಿ ತಾಣ ಅಲ್ಲಿನ ಗಿಡಮರಗಳು ನಮ್ಮ ಮನೆ ಮಕ್ಕಳಿದ್ದಂತೆ. ನಮ್ಮ ಮನೆ ಹಾಗೂ ಮಕ್ಕಳ ಮೇಲೆ ಕಾಳಜಿ ವಹಿಸುವಂತೆ ನಮ್ಮ ಸುತ್ತಮುತ್ತಲಿನ ಪರಿಸರದ ಮೇಲೆಯೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅತ್ಯಗತ್ಯ. ಇಂದು ನಮ್ಮ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡಿದರೆ ನಾಳೆಯ ದಿನ ಪರಿಸರ ನಮ್ಮನ್ನು ಉಳಿಸುವುದಿಲ್ಲ. ಇದರ ಹೊರತುಪಡಿಸಿ ಈ ನೈಸರ್ಗಿಕ ಸೌಂದರ್ಯವತಿಯಾದ ಕೊಂಡಜ್ಜಿ ಕೆರೆಯು ನೆಮ್ಮದಿ ಅರಸಿ ಬರುವ ಪ್ರಕೃತಿ ಪ್ರೇಮಿಗಳನ್ನು ಮನಸೂರೆಗೊಳಿಸುತ್ತದೆ. ಒಮ್ಮೆ ಈ ರಮಣೀಯ ಪ್ರಕೃತಿ ತಾಣವನ್ನು ಕಣ್ತುಂಬಿಕೊಳ್ಳುವುದರ ಜತೆಗೆ ಬೆಣ್ಣೆನಗರಿಯಲ್ಲಿನ ಇನ್ನೂ ಅನೇಕ ಮನಮೋಹಕ ತಾಣಗಳ ಸೌಂದರ್ಯ ಸವಿದು ಬನ್ನಿ.