Wednesday, November 18, 2026
Wednesday, November 18, 2026

ಮೈಸೂರು ನಗರ ಒಂದು ಜಾಗತಿಕ ಬ್ರ್ಯಾಂಡ್ ಆಗಿದ್ದು ಹೇಗೆ?

ಮೈಸೂರಿನ ಬ್ರ್ಯಾಂಡ್ ಹೊರಗಿನಿಂದ ಅಂಟಿಸಿದ ಲೇಬಲ್ ಅಲ್ಲ, ಅದು ಶತಮಾನಗಳ ದೂರದೃಷ್ಟಿ, ದಕ್ಷ ಆಡಳಿತ, ಕಲೆ-ಸಂಗೀತದ ಪೋಷಣೆ, ಶಿಕ್ಷಣ, ಇಂಜಿನಿಯರಿಂಗ್ ಮತ್ತು ನಾಗರಿಕರ ನಗರಪ್ರೇಮದಿಂದ ಒಳಗಿನಿಂದ ನಿರ್ಮಾಣವಾದ ಅನನ್ಯ ಗುರುತು. ಈ ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಬೆಳೆಸುವುದೇ ಮೈಸೂರಿನ ಮುಂದಿನ ಸವಾಲು.

  • ಸ್ವಾಮಿನಾಥನ್

ಜಗತ್ತಿನ ಪ್ರಮುಖ ನಗರಗಳ ಸಾಲಿನಲ್ಲಿ ಮೈಸೂರಿಗೆ ವಿಶಿಷ್ಟ ಹಾಗೂ ಗೌರವಾನ್ವಿತ ಸ್ಥಾನವಿದೆ. ಇದು ಕೇವಲ ರಾಜರ ರಾಜಧಾನಿಯಾಗಿ ಉಳಿಯದೆ, ಸಂಸ್ಕೃತಿ, ಕಲೆ-ಸಾಹಿತ್ಯ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಉತ್ತಮ ಆಡಳಿತ ಮತ್ತು ಜೀವನಮಟ್ಟದ ಮೂಲಕ ‘ಮೈಸೂರು’ ಎಂಬ ಜಾಗತಿಕ ಬ್ರ್ಯಾಂಡ್ ಆಗಿ ಬೆಳೆದಿದೆ. ಒಂದು ನಗರವನ್ನು ಕೇವಲ ಜಾಹೀರಾತಿನಿಂದ ಬ್ರ್ಯಾಂಡ್ ಮಾಡಲು ಸಾಧ್ಯವಿಲ್ಲ; ಅದರ ಗುರುತು ಮೂಲಸೌಕರ್ಯ, ನೈರ್ಮಲ್ಯ, ಕಲೆ, ಶಿಕ್ಷಣ ಮತ್ತು ಜನರ ಬದುಕಿನ ಗುಣಮಟ್ಟದಿಂದ ರೂಪುಗೊಳ್ಳುತ್ತದೆ.

ಇದನ್ನೂ ಓದಿ: ಮೈಸೂರು ಅರಮನೆಯ ಸುತ್ತಮುತ್ತಲಿನ ದೇವಾಲಯಗಳು...

ದೂರದೃಷ್ಟಿಯ ನಾಯಕತ್ವ

1881ರಲ್ಲಿ ದಿವಾನ್ ಸಿ. ರಂಗಾಚಾರ್ಲು ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸಿ ಪ್ರಜಾಪ್ರಭುತ್ವದ ಮೂಲಬೀಜ ಬಿತ್ತಿದರು. ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಆಡಳಿತದಲ್ಲಿ ಶಿವನಸಮುದ್ರ ಜಲವಿದ್ಯುತ್ ಯೋಜನೆ ಆರಂಭವಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಅವರಂಥ ತಜ್ಞರಿಗೆ ಆಡಳಿತಾತ್ಮಕ ಸ್ವಾತಂತ್ರ್ಯ ನೀಡಿ ಅಭಿವೃದ್ಧಿಗೆ ವೇಗ ನೀಡಿದರು.

ಪ್ರಜಾ ದಸರಾ

ವಿಜಯನಗರದ ಮಹಾನವಮಿ ಪರಂಪರೆಯನ್ನು 1610ರಲ್ಲಿ ರಾಜ ಒಡೆಯರ್ ಶ್ರೀರಂಗಪಟ್ಟಣದಲ್ಲಿ ಮರುಸ್ಥಾಪಿಸಿದರು. ನಂತರ ಮೈಸೂರಿಗೆ ಬಂದ ಈ ಉತ್ಸವ ರಾಜಸಿಕ ವೈಭವ, ದರ್ಬಾರ್, ಸಿಂಹಾಸನಾರೋಹಣ ಮತ್ತು ಜಂಬೂಸವಾರಿಯಿಂದ ಜಾಗತಿಕ ‘Mysore Dasara’ ಬ್ರ್ಯಾಂಡ್ ಆಯಿತು. ರಾಜಪ್ರಭುತ್ವದ ನಂತರ ಅದು ‘ನಾಡಹಬ್ಬ’ವಾಗಿ ಜನಸಾಮಾನ್ಯರ ದಸರಾವಾಯಿತು. ಅರಮನೆಯ ದೀಪಾಲಂಕಾರ, ಯುವ ದಸರಾ, ರೈತ ದಸರಾ, ಆಹಾರ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದಿಗೂ ಪ್ರವಾಸಿಗರನ್ನು ಸೆಳೆಯುತ್ತವೆ.

Untitled Design - 2026-11-18T115516.949

ನಗರಾಭಿವೃದ್ಧಿ ಮತ್ತು ಎಂಜಿನಿಯರಿಂಗ್

1903ರ City Improvement Trust Board (CITB) ಯೋಜಿತ ನಗರಾಭಿವೃದ್ಧಿಗೆ ದಾರಿ ಮಾಡಿತು. ಒಳಚರಂಡಿ, ಅಗಲ ರಸ್ತೆಗಳು, ವೃತ್ತಗಳು ಮತ್ತು ಉದ್ಯಾನಗಳು ಮೈಸೂರಿನ ನಗರ ವಿನ್ಯಾಸವನ್ನು ರೂಪಿಸಿದವು. 1902ರ ಶಿವನಸಮುದ್ರ ವಿದ್ಯುತ್ ಯೋಜನೆಯ ನಂತರ 1908ರ ವೇಳೆಗೆ ನಗರದ ಬೀದಿಗಳು ವಿದ್ಯುತ್ ದೀಪಗಳಿಂದ ಬೆಳಗಿದವು. ಕೆಆರ್‌ಎಸ್‌ ಅಣೆಕಟ್ಟು ನೀರಾವರಿಯ ಜತೆಗೆ ಬೃಂದಾವನ ಉದ್ಯಾನವನ್ನು ಪ್ರವಾಸೋದ್ಯಮದ ಆಕರ್ಷಣೆಯನ್ನಾಗಿ ಮಾಡಿತು. ವಾಣಿವಿಲಾಸ ಸಾಗರ, ಮಾರ್ಕೋನಹಳ್ಳಿ ಅಣೆಕಟ್ಟು, ಹುಲಿಕೆರೆ ಸುರಂಗಗಳು ಮತ್ತು ವಿಸ್ತರಿಸಿದ ರೈಲ್ವೇ ಜಾಲವು ಮೈಸೂರು ಸಂಸ್ಥಾನದ ಇಂಜಿನಿಯರಿಂಗ್ ಸಾಮರ್ಥ್ಯವನ್ನು ತೋರಿಸಿದವು.

ಸ್ವದೇಶಿ ಕೈಗಾರಿಕೆ ಮತ್ತು ಜಿಐ ಟ್ಯಾಗ್‌

ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಮೈಸೂರು ವರ್ಣಚಿತ್ರ, ನಂಜನಗೂಡು ರಸಬಾಳೆ ಮತ್ತು ಗಂಜೀಫಾ ಕಲೆಗಳು ನಗರದ ಹೆಸರನ್ನು ಉತ್ಪನ್ನಗಳೊಂದಿಗೆ ಜೋಡಿಸಿವೆ. ಮೈಸೂರು ಪಾಕ್ ಮತ್ತು ಮೈಸೂರು ಮಸಾಲ ದೋಸೆ ಆಹಾರ ಸಂಸ್ಕೃತಿಯ ಭಾವನಾತ್ಮಕ ಗುರುತುಗಳಾಗಿವೆ.

ಲಲಿತಕಲೆ ಮತ್ತು ಅರಮನೆಗಳ ಭವ್ಯತೆ

ವೀಣೆ ಶೇಷಣ್ಣ, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಮೈಸೂರು ವಾಸುದೇವಾಚಾರ್ಯ ಮತ್ತು ಪಿಟೀಲು ಚೌಡಯ್ಯ ಮುಂತಾದ ಸಂಗೀತ ದಿಗ್ಗಜರಿಗೆ ಮೈಸೂರು ಸಂಸ್ಥಾನ ಆಶ್ರಯ ನೀಡಿತು. ಮೈಸೂರು ವರ್ಣಚಿತ್ರ ಪರಂಪರೆ ಬೆಳೆಯಿತು. ಅಂಬಾ ವಿಲಾಸ, ಜಗನ್ಮೋಹನ, ಲಲಿತ ಮಹಲ್, ಜಯಲಕ್ಷ್ಮೀ ವಿಲಾಸ ಮತ್ತು ಚೆಲುವಾಂಬ ಅರಮನೆಗಳು ನಗರದ ಸೌಂದರ್ಯ ಹೆಚ್ಚಿಸಿದವು. 1935ರಲ್ಲಿ ಡಾ. ಎಂ.ವಿ. ಗೋಪಾಲಸ್ವಾಮಿ ಆರಂಭಿಸಿದ ರೇಡಿಯೋ ಕೇಂದ್ರಕ್ಕೆ ‘ಆಕಾಶವಾಣಿ’ ಎಂಬ ಹೆಸರು ಮೊದಲು ಮೈಸೂರಿನಲ್ಲೇ ಬಳಕೆಯಾಯಿತು.

Untitled Design - 2026-11-18T120141.240

ಸಾಹಿತ್ಯ ಮತ್ತು ಚಲನಚಿತ್ರರಂಗ

ಕುವೆಂಪು, ಬಿ.ಎಂ. ಶ್ರೀ, ಎಸ್.ಎಲ್. ಭೈರಪ್ಪ, ಚದುರಂಗ, ತ್ರಿವೇಣಿ, ಜಿ. ವೆಂಕಟಸುಬ್ಬಯ್ಯ, ಆರ್.ಕೆ. ನಾರಾಯಣ್ ಮತ್ತು ಆರ್.ಕೆ. ಲಕ್ಷ್ಮಣ್ ಮುಂತಾದವರು ಮೈಸೂರಿನ ಸಾಹಿತ್ಯಿಕ ಚೇತನವನ್ನು ಶ್ರೀಮಂತಗೊಳಿಸಿದರು. ನವಜ್ಯೋತಿ ಮತ್ತು ಪ್ರೀಮಿಯರ್ ಸ್ಟುಡಿಯೋಗಳು ಮೈಸೂರನ್ನು ಪ್ರಮುಖ ಚಿತ್ರೀಕರಣ ಕೇಂದ್ರವನ್ನಾಗಿ ಮಾಡಿದವು. ಪ್ರೀಮಿಯರ್ ಸ್ಟುಡಿಯೋದಲ್ಲಿ ಸುಮಾರು 800ಕ್ಕೂ ಹೆಚ್ಚು ಚಿತ್ರಗಳು ಹಾಗೂ ‘ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’ ಧಾರಾವಾಹಿಯ ಚಿತ್ರೀಕರಣ ನಡೆದಿರುವುದು ಈ ಪರಂಪರೆಯ ವ್ಯಾಪ್ತಿಯನ್ನು ತೋರಿಸುತ್ತದೆ.

ಜ್ಞಾನ, ಸಂಶೋಧನೆ ಮತ್ತು ಯೋಗ

1916ರ ಮೈಸೂರು ವಿಶ್ವವಿದ್ಯಾನಿಲಯ, 1891ರ Oriental Research Institute, ಮೈಸೂರು ಮೆಡಿಕಲ್ ಕಾಲೇಜು, CFTRI, DFRL ಮತ್ತು AIISH ನಗರದ ಜ್ಞಾನ-ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಿದವು. Oriental Research Institute ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸಿ, ಕೌಟಿಲ್ಯನ ‘ಅರ್ಥಶಾಸ್ತ್ರ’ವನ್ನು ಜಗತ್ತಿಗೆ ಬೆಳಕಿಗೆ ತಂದಿತು. ಕೃಷ್ಣಮಾಚಾರ್ಯ, ಪಟ್ಟಾಭಿ ಜೋಯಿಸ್ ಮತ್ತು ಬಿ.ಕೆ.ಎಸ್. ಅಯ್ಯಂಗಾರ್ ಅವರ ಪರಂಪರೆಯಿಂದ ಮೈಸೂರು ವಿಶ್ವದ ಪ್ರಮುಖ ಯೋಗ ಕೇಂದ್ರವಾಗಿ ಗುರುತಿಸಿಕೊಂಡಿದೆ. ಪ್ರತಿವರ್ಷ ವಿದೇಶಗಳಿಂದಲೂ ಸಾವಿರಾರು ಮಂದಿ ಯೋಗಾಭ್ಯಾಸಕ್ಕಾಗಿ ಆಗಮಿಸುತ್ತಾರೆ.

ಕಾರ್ಪೊರೆಟ್ ವಿಸ್ತರಣೆ ಮತ್ತು ಆಧುನಿಕ ಐಟಿ ಹಬ್

ಇನ್ಫೋಸಿಸ್ ಗ್ಲೋಬಲ್ ಟ್ರೇನಿಂಗ್ ಸೆಂಟರ್ ಮೈಸೂರನ್ನು ಜಾಗತಿಕ ಕಾರ್ಪೊರೆಟ್ ಭೂಪಟಕ್ಕೆ ತಂದಿತು. ಪಾರಂಪರಿಕ ಗುರುತಿನ ಜತೆಗೆ ಆಧುನಿಕ ತಂತ್ರಜ್ಞಾನವೂ ನಗರದ ಬ್ರ್ಯಾಂಡ್‌ಗೆ ಹೊಸ ಆಯಾಮ ನೀಡಿದೆ. ನಗರ ಯೋಜನೆ, ಸ್ವಚ್ಛತೆ, ಹಸಿರು ಪರಿಸರ ಮತ್ತು ಶಾಂತಿಯುತ ಜೀವನದಿಂದ ಮೈಸೂರು ರಾಷ್ಟ್ರೀಯ ಮಟ್ಟದಲ್ಲಿ ಸ್ವಚ್ಛ ನಗರವೆಂಬ ಗುರುತನ್ನು ಪಡೆದಿದೆ. CITB ಕಾಲದಿಂದ ರೂಪುಗೊಂಡ ನಗರ ಯೋಜನೆಯ ಶಿಸ್ತು ಮೈಸೂರಿನ ದೃಶ್ಯರೂಪದ ಗುರುತನ್ನೂ ಬಲಪಡಿಸಿದೆ.

ಇಂದು ದಶಪಥ ಎಕ್ಸ್‌ಪ್ರೆಸ್‌ವೇ ಮತ್ತು IT ವಿಸ್ತರಣೆ ಹೊಸ ಅವಕಾಶಗಳನ್ನು ತಂದಿವೆ. ಆದರೆ ದೇವರಾಜ ಮಾರುಕಟ್ಟೆ, ಲಾನ್ಸ್‌ಡೌನ್‌ನಂಥ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ಕೆರೆಗಳು ಮತ್ತು ಚಾಮುಂಡಿ ಬೆಟ್ಟದ ಪರಿಸರ ರಕ್ಷಣೆ, ಉತ್ತಮ ರಸ್ತೆಗಳು, ನೈರ್ಮಲ್ಯ ಮತ್ತು ಉದ್ಯೋಗಾವಕಾಶಗಳ ವಿಸ್ತರಣೆ ಅಗತ್ಯ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..