• ಶಿವನಗೌಡ ಕಿಲಬನೂರ

ಹುಬ್ಬಳ್ಳಿ, ಗಂಡು ಮೆಟ್ಟಿದ ನಾಡು, ಸಿದ್ದಿಪುರುಷರ ನಾಡೂ ಹೌದು. ತನ್ನ ಆಚರಣೆ, ಜಾತ್ರೆ, ಸೌಹಾರ್ದತೆಗಳಿಂದಲೂ ಗುರುತಿಸಿಕೊಂಡಿದೆ. ಅವುಗಳಲ್ಲಿ ಒಂದು ಶ್ರೀ ಸಿದ್ಧಾರೂಢ ಮಠ. ಅಸಂಖ್ಯಾತ ಭಕ್ತರ ನಂಬಿಕೆಯ ಸ್ಥಳ. ಸಿದ್ಧಾರೂಢರ ತಪೋಭೂಮಿ.

ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡಗಳ ನಡುವೆ ನೋಡಲು ಚೆನ್ನಬಸವ ಸಾಗರ ಚೆಂದವೋ ಚೆಂದ

ಪುರಾಣದ ಪ್ರಕಾರ

ಪ್ರಸ್ತುತ ತಪೋಭೂಮಿಗೆ ಕಾರಣರಾದವರು ತಪಸ್ವಿ ಶ್ರೀ ಸಿದ್ಧಾರೂಢರು. 1836ರಲ್ಲಿ ಬೀದರ್ ಜಿಲ್ಲೆಯ ಚಳಕಾಪುರದಲ್ಲಿ ಗುರುಶಾಂತಪ್ಪ ಹಾಗೂ ದೇವಮಲ್ಲಮ್ಮ ಎಂಬ ಮಹಾತ್ಮರ ಉದರದಲ್ಲಿ ಜನಿಸಿದರು. ಚಿಕ್ಕಂದಿನಲ್ಲೇ ಅಧ್ಯಾತ್ಮದ ಕಡೆ ವಾಲಿದರು. ದೇಶಾಂತರವಾಗಿ ಕಾಲ್ನಡಿಗೆಯಲ್ಲೇ ತೀರ್ಥಯಾತ್ರೆ ಕೈಗೊಂಡು ಸಂಚಾರಿಯಾದರು. ಅಧ್ಯಾತ್ಮ ಹಾಗೂ ಪರಿಶುದ್ಧ ಜ್ಞಾನವನ್ನು ಅರಿತು, ಅದನ್ನು ಸಮಾಜಕ್ಕೆ ಬೋಧಿಸಿದರು. ನಂತರ ಕಬೀರ್ ದಾಸ್, ಗುರುನಾಥಾರೂಢ, ಕಲಾವತಿ ದೇವಿ, ಮುಕ್ತಾನಂದ, ಆತ್ಮಾನಂದ ಮುಂತಾದವರು ಸಿದ್ದಾರೂಢರಿಗೆ ಅನುಯಾಯಿಗಳಾದರು. ತಮ್ಮ ನಲವತ್ನಾಲ್ಕನೆಯ ವಯಸ್ಸಿನಲ್ಲಿ ಹುಬ್ಬಳ್ಳಿಗೆ ಬಂದು ಆಜೀವ ಪರ್ಯಂತ ಅಲ್ಲಿಯೇ ಜೀವಿಸಿ, ಅನೇಕ ಪವಾಡಗಳನ್ನು ಮಾಡಿದರು. ಅಸಂಖ್ಯಾತರ ಬಾಳಿಗೆ ನೆಮ್ಮದಿಯಾಗಿ, ಹಸಿದವರಿಗೆ ಅನ್ನ-ಆಶ್ರಯ ಕೊಟ್ಟು ಸಲಹಿದರು. 93ನೆಯ ವಯಸ್ಸಿಗೆ ನಿಧನರಾದರು.

Untitled design (6)

ಏನು ವಿಶೇಷ?

ಧಾರ್ಮಿಕ ಪರಿಸರದಲ್ಲಿ ಕೂಡಿಕೊಂಡಿರು ಈ ದೇವಸ್ಥಾನದಲ್ಲಿ ಮುಖ್ಯವಾಗಿರುವುದು ಶ್ರೀ ಸಿದ್ಧಾರೂಢರ ಸಮಾಧಿ. ʻಸಿದ್ದಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರʼ ಅನ್ನುವ ಮಾತಿದೆ. ಅಂಗಾರ ಎಂದರೆ ವಿಭೂತಿ. ಸದಾಕಾಲ ವಿಭೂತಿ ದ್ವಾರದಲ್ಲಿ ಇರಲೇಬೇಕು. ಸಮಾಧಿಯ ಅಂಗಳದಲ್ಲಿ ನಿಂತು ನೋಡಿದರೆ ಗರ್ಭಗುಡಿಯಲ್ಲಿನ ಸಿದ್ದಾರೂಢರ ಪ್ರತಿಮೆಯ ದರ್ಶನವಾಗುತ್ತದೆ. ಗರ್ಭಗುಡಿಯ ಒಳಗೂ ಹೋಗಬಹುದು. ಗರ್ಭಗುಡಿಯ ಕೆಳಗೆ ಸಮಾಧಿ ಇದೆ. ವಿಶೇಷವೆಂದರೆ ಗರ್ಭಗುಡಿಯ ಹೊರಗೆ ದಿನದ ಪ್ರತಿದಿನ ಇಪ್ಪತ್ನಾಲ್ಕು ಗಂಟೆಯೂ ತಂಬೂರಿ ನುಡಿಸಲಾಗುತ್ತದೆ. ಕಳೆದ 93 ವರ್ಷಗಳಿಂದ ಆ ತಂಬೂರಿ ಹೆಗಲಿನಿಂದ ಹೆಗಲು ಬದಲಿಸಿದೆಯೇ ಹೊರತು ಎಂದೂ ಕೆಳಗೆ ಇಟ್ಟಿಲ್ಲ. ನಿರಂತರ ʻಓಂ ನಮಃ ಶಿವಾಯʼ ಸ್ಮರಣೆಯಲ್ಲಿ ಆ ತಂಬೂರಿ ಬೆರೆತು ಹೋಗಿದೆ. ಮತ್ತೊಂದು ವಿಶೇಷವೆಂದರೆ ʻಆರೂಢ ಜ್ಯೋತಿʼ. ಸಿದ್ದಾರೂಢರು ಕಾಲವಾದ ಸಮಯದಲ್ಲಿ ಹಚ್ಚಿದ ಜ್ಯೋತಿ ಇಂದಿಗೂ ಬೆಳಗುತ್ತಿದೆ. ನಿರಂತರ ಬತ್ತಿ ತೈಲವನ್ನೆರೆದು ಕಾದಿಟ್ಟುಕೊಂಡಿರುವುದು ಭಕ್ತಿಗೆ ಕನ್ನಡಿ ಹಿಡಿದಂತಿದೆ. ಇನ್ನೂ ಕೈಲಾಸ ಮಂಟಪದ ವಿನ್ಯಾಸ, ರಚನೆ ಧಾರ್ಮಿಕವಾಗಿ ಹೇಗಿರಬೇಕು ಹಾಗಿದೆ. ಹಾಗೆಯೇ ವಿನ್ಯಾಸವನ್ನು ಮಾಡಿ ಕೊಟ್ಟವರು ಒಬ್ಬ ನೇಗಿಲು ಕುಂಟೆ ಕೂರಿಗೆ ಮಾಡುವ ಬಡಗಿ. ಅವರ ಹೆಸರು ಮಿಶ್ರಿಕೋಟಿ ಕಾಳಪ್ಪ ಆಚಾರ್.

Untitled design (7)

ಮಠದ ವರಾಂಡದಲ್ಲಿ ಒಂದು ಹೊಂಡವಿದೆ. ಅಲ್ಲಿ ಪ್ರತಿ ಕಾರ್ತಿಕದಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಶಿವರಾತ್ರಿಯಲ್ಲಿ ಪ್ರತಿವರ್ಷ ಅದ್ದೂರಿಯಾಗಿ ರಥೋತ್ಸವದೊಂದಿಗೆ ಜಾತ್ರೆ ನಡೆಯುತ್ತದೆ. ಗಂಗಾ ಆರತಿಯನ್ನೂ ಕಣ್ತುಂಬಿಕೊಳ್ಳಬಹುದು. ಪ್ರತಿದಿನವೂ ಇಲ್ಲಿ ಪೂಜೆ ಭಜನೆ ಚಾಲ್ತಿಯಲ್ಲಿರುತ್ತವೆ. ಸೋಮವಾರ ಹಾಗೂ ಹಬ್ಬ ಹರಿದಿನಗಳಲ್ಲಿ ದೇವಸ್ಥಾನ ಮೆರುಗಿನಿಂದ ಕೂಡಿರುತ್ತದೆ. ʻಸಿದ್ಧಾರೂಢರ ಜೋಳಿಗೆ ಜಗಕ್ಕೆಲ್ಲ ಹೋಳಿಗೆʼ ಎಂಬ ಸೂಕ್ತಿಯಿದೆ. ಇದರಂತೆ ಬಂದ ಭಕ್ತಾದಿಗಳಿಗೆ ವರ್ಷದ ಎಲ್ಲಾ ದಿನಗಳಲ್ಲೂ ಉಪಾಹಾರ- ಊಟದ ವ್ಯವಸ್ಥೆ ಇರುತ್ತದೆ.

ದಾರಿ ಹೇಗೆ?

ಬೆಂಗಳೂರಿನಿಂದ ಹುಬ್ಬಳ್ಳಿಗೆ ರೈಲು ಮತ್ತು ಬಸ್‌ನ ಮೂಲಕ ಸುಲಭವಾಗಿ ತಲುಪಬಹುದು. ಅಲ್ಲಿಂದ ಸಿಟಿ ಬಸ್ ಅಥವಾ ಆಟೋ ಮೂಲಕ ಸಿದ್ಧಾರೂಢ ಮಠಕ್ಕೆ ತಲುಪಬಹುದು.