Saturday, November 22, 2025
Saturday, November 22, 2025

ಗೂಂ ಟೂರ್ ಗೆಳತಿಯರ ಸಂಗಡ

ಮಲ್ಲಳ್ಳಿ ಜಲಪಾತದ ಕಣಿವೆಗೆ ಮೆಟ್ಟಿಲುಗಳ ವ್ಯವಸ್ಥೆ ಇದೆ. ಇಳಿಯುವುದೇ ಸ್ವರ್ಗ, ತಿರುಗಿ ಏರುವುದು ನರಕ ಎಂದು ನೋವಿನ ಹಾಡು ಹಾಡುವ ಕಾಲುಗಳನ್ನು ಕಾಳಜಿ ಮಾಡುತ್ತಲೇ ಇಳಿದೆವು. ಬಿದ್ದು ಬೆಳ್ನೊರೆಯಾಗಿ ಸಾಗುವ ನೀರಿನ ಚೆಲುವು, ತಂಪು ಗಾಳಿ ಸೂಸುವ ಸಸ್ಯಸಂಪತ್ತು, ನೆಮ್ಮದಿಯಾಗಿ ಹಾರಾಟ ನಡೆಸುತ್ತಿರುವ ಮೋಹಕ ಚಿಟ್ಟೆಗಳು ಎಲ್ಲವನ್ನೂ ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮದಾಗಿತ್ತು.

- ಮಾಲತಿ ಹೆಗಡೆ

ಹೊಸದಾಗಿ ಹಾಕಿದ ಅಡಿಕೆ ತೋಟದಲ್ಲಿ ಬಾಳೆಕಂದು ನೆಡಿಸಬೇಕು. ಕಥಾ ಸಂಕಲನದ ಮುಖಪುಟ ಸಿದ್ಧವಾಗಿದೆಯೋ ಕೇಳಬೇಕು. ಸತತ ಮಳೆಯಿಂದ ಅಂಗಳದ ಹೂವಿನ ಗಿಡಗಳೆಡೆ ಬೆಳೆದ ಕಳೆ ಕೀಳಬೇಕು. ಹೀಗೆ ಮಾಡಬೇಕಾದ ಕೆಲಸಗಳು ಸರದಿ ಹಚ್ಚಿದಾಗ ಇದ್ದಕ್ಕಿದ್ದಂತೆ ಇವೆಲ್ಲವುಗಳಿಂದ ಎರಡು ದಿನ ಬ್ರೇಕ್ ತೆಗೆದುಕೊಳ್ಳುವ ಆಲೋಚನೆ ಬಂದಿತು. ಮೈಸೂರಿನ ಇನ್ಸ್‌ಪೈರಿಂಗ್‌ ಸೋಲ್ಮೇಟ್‌ಗಳಿಗೆ ಫೋನಾಯಿಸಿದೆ. ಹೆಚ್ಚು ಕಡಿಮೆ ಅವರು ನನ್ನಂತೆ ದೀಪಾವಳಿ ನಂತರ ಎಲ್ಲಾದರೊಂದು ದಿನ ಔಟಿಂಗ್ ಬೇಕೆನ್ನುವ ಮನಸ್ಥಿತಿಯಲ್ಲಿಯೇ ಇದ್ದರು. ಮಂಜುಳಾ, ಸುಧಾ, ವಿದ್ಯಾ, ಅನಿತಾ ಪ್ಲಾನಿಂಗ್ ಶುರುಮಾಡಿ ವೆಹಿಕಲ್ ಬುಕ್ ಮಾಡಿದರು. ಒಂಬತ್ತು ಗೆಳತಿಯರು ಮೈಸೂರಿನಿಂದ ಬೆಳಕು ಹರಿಯುವ ಹೊತ್ತಿಗೆ ಒಂದು ದಿನ ಪ್ರವಾಸಕ್ಕೆ ಹೊರಟೆವು. ಡ್ರೈವರ್ ಕೃಷ್ಣ ʼಮನೆಯೇ ಮಂತ್ರಾಲಯ' ಹಾಡು ಹಾಕಿದ. ಗಂಡ ಮಕ್ಕಳನ್ನು ಇವತ್ತು ಸಂಜೆಯವರೆಗೆ ನೆನಪಿಸಿಕೊಳ್ಳುವಂತಿಲ್ಲ. ಬೇರೆ ಹಾಡು ಹಾಕ್ರೀ ಎಂದು ಅನಿತಾ ಅದೇಶ ಹೊರಡಿಸಿದಾಗ ನಗುವೋ ನಗು. ಅಂತ್ಯಾಕ್ಷರಿ ಹಾಡುತ್ತಾ ಅಭಿನಯವೂ ಶುರುವಾಯ್ತು. ಕುಶಾಲನಗರದ ನಕ್ಷತ್ರ ಹೊಟೇಲ್‌ನಲ್ಲಿ ಮಸಾಲಾದೋಸೆ, ಉದ್ದಿನವಡಾ, ರವಾ ದೋಸೆಯನ್ನು ಹೊಟ್ಟೆಗಿಳಿಸಿ ಕಾಫಿ ಕುಡಿದು ಹೊರಟಾಗ ಗಲಾಟೆ ಮಾಡುವ ಮೂಡ್ ಇಮ್ಮಡಿಯಾಗಿತ್ತು.

Chikli falls

ಕುಶಾಲನಗರದಿಂದ ಕಾಡಿನ ಹೊಟ್ಟೆ ಸೀಳಿ ಮಾಡಿದ ರಸ್ತೆಯಲ್ಲಿ ಸಾಗಿ ಚಿಕ್ಲಿ ಹೊಳೆ ಜಲಾಶಯ ತಲುಪಿದೆವು. ಕೊಡಗಿನ ಪ್ರಸಿದ್ಧ, ಸುಂದರ ತಾಣವಿದು. ಸುತ್ತಲಿನ ಗುಡ್ಡ ಬೆಟ್ಟಗಳಿಂದ ಹರಿದು ಬರುವ ನೀರಿಗೆ ತಡೆಯೊಡ್ಡಿ ನಿಲ್ಲಿಸಿರುವ ಜಾಗವನ್ನು ಥಟ್ಟನೇ ನೋಡಿದರೆ ವಿಶಾಲವಾದ ಕೆರೆಯಂತೆ ಕಾಣುತ್ತದೆ. ಜಲಾಶಯದಲ್ಲಿ ನಿಂತ ನೀರಿನ ಬಲ ಭಾಗದಲ್ಲಿ ಅರ್ಧ ಚಂದ್ರಾಕಾರದ ಕಟ್ಟೆ ಕಟ್ಟಲಾಗಿದೆ. ಅಲ್ಲಿಂದ ಧುಮ್ಮಿಕ್ಕುವ ನೀರು ಹರಿದು ಕಾಲುವೆಗಳಲ್ಲಿ ಸಾಗಿ ಕೃಷಿಕರ ಪಾಲಿನ ಜೀವದಾಯಿಯಾಗಿದೆ.

ಸ್ವಚ್ಛವಾದ ಜಲರಾಶಿಯ ಹಿಂಭಾಗದಲ್ಲಿ ಸಸ್ಯಸಂಕುಲ ಹೇರಳವಾಗಿದೆ. ಅಲ್ಲಿಗೆ ಹೋಗುವ ಎಲ್ಲರಿಗೂ ತಮ್ಮನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಬಯಕೆ ಮೂಡುತ್ತದೆ. ನಾವೂ ಅಲ್ಲೊಂದಿಷ್ಟು ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡು, ಅಲ್ಲಿಂದ ಹರಿಯುವ ನೀರು ಧುಮ್ಮಿಕ್ಕುವ ಜಲಪಾತದ ಕಡೆಗೆ ಹೊರಟೆವು.

Mallalli falls

ಕಾಡಿನ ಮಧ್ಯೆ ಹುಟ್ಟಿ ಹರಿಯುತ್ತಿರುವ ಕುಮಾರಧಾರಾ ನದಿ ಕಲ್ಲುಬಂಡೆಗಳಿಂದ ಕೂಡಿದ ಕಣಿವೆಯ ಕಡೆಗೆ ವೇಗವಾಗಿ ಭೋರ್ಗರೆಯುತ್ತಾ ಧುಮ್ಮಿಕ್ಕುವ ಜಾಗವೇ ಮಲ್ಲಳ್ಳಿ ಜಲಪಾತ. ವಾಹನ ಇಳಿದಲ್ಲಿಯೇ ಜಲಪಾತದ ದರ್ಶನವಾಗುತ್ತದೆ. ಆದರೂ ನೀರು ಬೀಳುವುದನ್ನು ಎದುರಿನಿಂದ ನೋಡುವ ಖುಷಿ ಅನುಭವ ಬೇರೆಯೇ. ಕಣಿವೆಗೆ ಮೆಟ್ಟಿಲುಗಳ ವ್ಯವಸ್ಥೆ ಇದೆ. ಇಳಿಯುವುದೇ ಸ್ವರ್ಗ, ತಿರುಗಿ ಏರುವುದು ನರಕ ಎಂದು ನೋವಿನ ಹಾಡು ಹಾಡುವ ಕಾಲುಗಳನ್ನು ಕಾಳಜಿ ಮಾಡುತ್ತಲೇ ಇಳಿದೆವು. ಬಿದ್ದು ಬೆಳ್ನೊರೆಯಾಗಿ ಸಾಗುವ ನೀರಿನ ಚೆಲುವು, ತಂಪು ಗಾಳಿ ಸೂಸುವ ಸಸ್ಯಸಂಪತ್ತು, ನೆಮ್ಮದಿಯಾಗಿ ಹಾರಾಟ ನಡೆಸುತ್ತಿರುವ ಮೋಹಕ ಚಿಟ್ಟೆಗಳು ಎಲ್ಲವನ್ನೂ ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮದಾಗಿತ್ತು. ಎಲ್ಲವನ್ನೂ ನೋಡಿ ಅಲ್ಲಿಂದ ಹೊರಟೆವು.

ಇನ್ನೆಲ್ಲಿಗೆ? ಕೇಳಿದಾಗ ಗೆಳತಿ ಮಂಜು ʻಪುಷ್ಪಗಿರಿʼ ಎಂದು ಚುಟುಕಾಗಿ ಉತ್ತರಿಸಿದಳು. ಇಕ್ಕಟ್ಟಾದ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಅರ್ಧ ಗಂಟೆ ಕ್ರಮಿಸಿದ ನಂತರ ಒಂದು ಡೆಡ್ ಎಂಡಿಗೆ ತಲುಪಿದೆವು. ಒಂದು ದಾರಿ ಕಣಿವೆಯೆಡೆಗೆ ಇನ್ನೊಂದು ಬೆಟ್ಟದೆಡೆಗೆ ಇತ್ತು. ಎತ್ತ ಹೋಗುವುದೆಂಬ ಗೊಂದಲದಲ್ಲಿದ್ದಾಗ ಘಂಟಾನಾದ ಕಿವಿಗೆ ಬಿತ್ತು. ಕೊಂಚ ತಗ್ಗಿನೆಡೆ ನಡೆದರೆ ಆ ನಿರ್ಜನ ಪ್ರದೇಶದಲ್ಲಿ ಸುಂದರ ಸುವ್ಯವಸ್ಥಿತವಾದ ದೇಗುಲದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀ ಶಾಂತಲಿಂಗೇಶ್ವರ ಸ್ವಾಮಿ! ನೂರಾರು ವರ್ಷಗಳ ಹಿಂದೆ, ಮೇಯಲು ಬಿಟ್ಟ ಹಸುವೊಂದು ಭೂಮಿಯಲ್ಲಿ ಹುದುಗಿದ್ದ ಈ ಉದ್ಭವಲಿಂಗದ ಮೇಲೆ ಹಾಲು ಸುರಿಸಿ ಅಭಿಷೇಕ ಮಾಡುತ್ತಿತ್ತಂತೆ. ಆ ಹಸುವನ್ನು ಸಾಕಿದ ಹೆಣ್ಣು ಮಗಳು ಮನೆಗೆ ಬರುವ ಹಸುವಿನ ಕೆಚ್ಚಲು ಬರಿದಾಗುವ ಗುಟ್ಟು ಬಿಡಿಸಲು ಕುತೂಹಲದಿಂದ ಒಂದು ದಿನ ಹಸುವನ್ನು ಹಿಂಬಾಲಿಸಿದಳು. ಹಸು ಹಾಲಿನಭಿಷೇಕ ಮಾಡುವುದನ್ನು ನೋಡಿ ಮೂರ್ಛೆ ಹೋದಳು. ಅವಳನ್ನು ಅರಸುತ್ತ ಬಂದ ಹಳ್ಳಿಗರೆದುರು ನಡೆದಿದ್ದನ್ನು ಹೇಳಿದಳು. ಆ ಊರಿನವರು ಮಣ್ಣನ್ನು ಬಿಡಿಸಿ ಲಿಂಗ ಇರುವುದನ್ನು ಪತ್ತೆ ಮಾಡಿ ಅಲ್ಲಿಯೇ ಗುಡಿ ಕಟ್ಟಿ ನಿತ್ಯ ಪೂಜೆಮಾಡಲು ಆರಂಭಿಸಿದರು ಎಂಬ ಪ್ರತೀತಿ ಅಲ್ಲಿದೆ. ಹೀಗೆಂದು ಅಲ್ಲಿನ ಅರ್ಚಕರು ನಮಗೆ ಹೇಳಿದರು. ಶ್ರದ್ಧೆ ಇದ್ದಲ್ಲಿ ವಿಮರ್ಶೆ ಇರಕೂಡದು. ಪೂಜೆ, ಮಂಗಳಾರತಿಯನ್ನು ನೋಡಿ ಕಣ್ತುಂಬಿಕೊಂಡು ನಮಿಸಿ ಹೊರಬಂದೆವು.

Pushpagiri hills

ಪುಳಿಯೋಗರೆ, ಮೊಸರನ್ನ, ಉಂಡೆ, ನಿಪ್ಪಟ್ಟಿನ ಪುಷ್ಕಳ ಭೋಜನ ಹಸಿದ ಹೊಟ್ಟೆಗಳಿಗೆ ಅಮೃತವಾಯ್ತು. ಅಡುಗೆ ಸಿಧ್ದಪಡಿಸಿಕೊಂಡು ಬಂದ ಸುಧಾಗೆ ಅನ್ನದಾತಾ ಸುಖಿಭವ ಎಂದು ತುಂಬು ಮನದಿಂದ ಶುಭಕೋರಿ ಪುಷ್ಪಗಿರಿಯನ್ನು ಏರಲು ಆರಂಭಿಸಿದೆವು. ದಾರಿಯ ಇಕ್ಕೆಲದಲ್ಲಿ ತರಹೇವಾರಿ ಸಸ್ಯ ಸಂಕುಲ‌, ಅದೆಷ್ಟು ಬಗೆಯ, ಹುಲ್ಲು, ಔಷಧಿಯ ಸಸ್ಯಗಳು, ಕುರುಚಲು ಸಸ್ಯಗಳು, ಹೆಮ್ಮರಗಳು. ಆ ದಾರಿಯಲ್ಲಿ ಸುಮಾರು ಇಪ್ಪತ್ತು ನಿಮಿಷ ಅವುಗಳನ್ನು ಗಮನಿಸುತ್ತ ಗಿರಿಯ ತುದಿಗೇರಿದೆವು. ಎಲ್ಲರ ಮಾತುಗಳು ಮೌನದೆಡೆಗೆ ಜಾರಿ ಧ್ಯಾನಸ್ಥರಾದೆವು. ಪ್ರಕೃತಿಯ ಅಗಾಧ ಶಕ್ತಿಯ ಅರಿವು ನಮ್ಮ ಜೀವನದ ಅಲ್ಪತೆಯನ್ನೂ ಅರಿವಿಗೆ ತರುತ್ತದೆ. ಬಂಡೆಗಳ ಮೇಲೆ ವಿರಮಿಸಿದ್ದ ನಮಗ್ಯಾರಿಗೂ ಆ ಸ್ಥಳ ಬಿಟ್ಟು ಹೊರಡಲು ಮನಸಿರಲಿಲ್ಲ. ಆದರೆ ಕರ್ತವ್ಯದ ಕರೆ ಕರೆಯುತ್ತಿತ್ತು. ದಾರಿಯುದ್ದಕ್ಕೂ ನಗು ಹರಟೆ, ಹಾಡು, ಕುಣಿತ. ಮೈಸೂರು ತಲುಪಿದಾಗ ಮನಸ್ಸಿಗೆ ನವಚೈತನ್ಯ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..