Monday, August 18, 2025
Monday, August 18, 2025

ಸಾತೊಡ್ಡಿ ಎಂಬ ಮಿನಿ ನಯಾಗರ!

“ಎಷ್ಟೋ ಜಲಪಾತಗಳಿಗೆ ಅಲ್ಪಾಯುಷ್ಯ. ಮಳೆಗಾಲದಲ್ಲಷ್ಟೇ ಜೀವಕಳೆ. ಇನ್ನು ಕೆಲವು ಸೊರಗಿದರೂ ವರ್ಷವಿಡೀ ಸಣ್ಣ ಪ್ರಮಾಣದಲ್ಲಾದರೂ ಧುಮುಕುತ್ತಿರುತ್ತವೆ. ನೋಡಬೇಕೆನ್ನಿಸಿದಾಗ ಹೋಗಿದ್ದು ಬರಬಹುದು. ಅಂಥ ಜಲಪಾತಗಳ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತವೂ ಒಂದು. ಸಾತೊಡ್ಡಿ ಹಾಲ್ನೊರೆಗೆ ಮೈಯೊಡ್ಡುವುದೇ ಒಂದು ಪರಮ ಸುಖ”

  • ನಾಗರಾಜ ವೈದ್ಯ

ಜಲಪಾತಗಳು ಮನಸಿಗೆ ಕೊಡುವ ಆನಂದದ ಲೆಕ್ಕವೇ ಬೇರೆ. ಅದಕ್ಕೆ ಬೇರೆ ಹೋಲಿಕೆಯಿಲ್ಲ. ಎಂಥ ನೋವು, ಬೇಸರ, ದುಗುಡ ಅಥವಾ ಹತಾಶೆಯಿದ್ದರೂ ಅದನ್ನೆಲ್ಲ ಕಳೆಯುವ ಶಕ್ತಿ ಜಲಪಾತಕ್ಕಿದೆ. ಹೇಗೆ ಹಿಮಾಲಯ, ಮೌಂಟ್‌ ಎವೆರೆಸ್ಟ್‌ನಂತಹ ಪರ್ವತಗಳು ನಮ್ಮನ್ನು ಸೆಳೆಯುತ್ತವೆಯೋ, ಜಲಪಾತಗಳೂ ನಮ್ಮನ್ನು ಸೆಳೆಯುತ್ತವೆ. ನೋಡುತ್ತ ನೋಡುತ್ತ ನಮ್ಮೊಳಗೂ ಜಲಪಾತವೊಂದು ಹರಿಯತೊಡಗುತ್ತದೆ.ಇದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಒಂದರ್ಥದಲ್ಲಿ ಇವುಗಳ ಮೋಡಿಗೊಳಗಾಗದವರೇ ಇಲ್ಲ ಎಂದು ಷರಾ ಬರೆದುಬಿಡಬಹುದು!

ಇಂಥ ಮಧುರಾನುಭೂತಿ ಕೊಡುವ ನೂರಾರು ಜಲಪಾತಗಳು ನಮ್ಮ ಹೆಮ್ಮೆಯ ಕರ್ನಾಟಕದಲ್ಲಿವೆ. ಅವುಗಳನ್ನು ಹೊರಜಗತ್ತಿಗೆ ಪರಿಚಯಿಸಬೇಕಿದೆ. ಎಷ್ಟೋ ಜಲಪಾತಗಳಿಗೆ ಅಲ್ಪಾಯುಷ್ಯ. ಮಳೆಗಾಲದಲ್ಲಷ್ಟೇ ಜೀವಕಳೆ. ಇನ್ನು ಕೆಲವು ಸೊರಗಿದರೂ ವರ್ಷವಿಡೀ ಸಣ್ಣ ಪ್ರಮಾಣದಲ್ಲಾದರೂ ಧುಮುಕುತ್ತಿರುತ್ತವೆ. ನೋಡಬೇಕೆನ್ನಿಸಿದಾಗ ಹೋಗಿದ್ದು ಬರಬಹುದು. ಅಂಥ ಜಲಪಾತಗಳ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಸಾತೊಡ್ಡಿ ಜಲಪಾತವೂ ಒಂದು. ಸಾತೊಡ್ಡಿ ಹಾಲ್ನೊರೆಗೆ ಮೈಯೊಡ್ಡುವುದೇ ಒಂದು ಪರಮ ಸುಖ!

yallapura satoddi

ಮಿನಿ ನಯಾಗರ!

ಪ್ರಾಕೃತಿಕವಾಗಿ ಸಮೃದ್ಧವಾಗಿರುವ ಯಲ್ಲಾಪುರದ ಮಡಿಲಲ್ಲಿರುವ ಸಾತೊಡ್ಡ ಜಲಪಾತಕ್ಕೆ ಇದಕ್ಕೆ ಮಿನಿ ನಯಾಗರ ಎಂಬ ಹೊಗಳಿಕೆಯೂ ಇದೆ. ಗಾತ್ರದಲ್ಲಿ ಚಿಕ್ಕದಾದರೂ ಈ ಹೊಗಳಿಕೆಗೆ ತಕ್ಕಂತೆ ಇದರ ಸೌಂದರ್ಯವೂ ಇದೆ. ಕೇವಲ 15 ಮೀಟರ್ ನಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಇದು. ಗೋಡೆಯ ಮೇಲಿಂದ ಹಾಲ್ನೊರೆ ಸುರಿದಂತೆ ಕಾಣುತ್ತದೆ. ಬಂಡೆಗಳ ಉಬ್ಬು ತಗ್ಗು ಸೀಳುಗಳ ನಡುವೆ ಧಾರೆ ಧಾರೆಯಾಗಿ ಹರಿಯುವ ಇದರ ಚೆಲುವನ್ನು ನೋಡುವುದೇ ಚಂದ. ಎಲ್ಲಕ್ಕಿಂತ ಮುಖ್ಯವಾಗಿ ಹಲವು ಕಡೆಯಿಂದ, ಹಂತಗಳಿಂದ ಈ ಜಲಪಾತವನ್ನು ನೋಡಬಹುದಾಗಿದೆ. ಬೇರೆ ಬೇರೆ ಕಡೆಯಿಂದ ನೋಡಿದಾಗ ಇತರ ಸೌಂದರ್ಯವು ಬೇರೆ ರೀತಿಯಲ್ಲೇ ಕಾಣುತ್ತದೆ. ಸಾಕಷ್ಟು ಕಲ್ಲುಗಳು ಜಲಪಾತದ ಮುಂದೆ ಇದ್ದು, ಅವುಗಳ ಮೇಲೆ ನಿಂತು ಜಲಪಾತದ ಸೌಂದರ್ಯವನ್ನು ಸವಿಯಬಹುದಾಗಿದೆ. ಜಲಪಾತದ ಮುಂಭಾಗದಲ್ಲಿ ಸ್ವಲ್ಪ ಭಾಗ ಗುಂಡಿ ಇದ್ದು, ನೀರಾಟ ಆಡಲು ಈಜಲು ಅನುಕೂಲಕರವಾಗಿದ್ದರೂ ಕೂಡ, ಇದು ಅಷ್ಟೇ ಅಪಾಯಕಾರಿಯೂ ಹೌದು. ಮೇಲ್ನೋಟಕ್ಕೆ ಗೊತ್ತಾಗದ ಸುಳಿಗಳು ಇವೆ. ಇದರಿಂದ ಮೋಜಿಗಿಂತ ಅಪಾಯವೇ ಹೆಚ್ಚು. ಸಾಕಷ್ಟು ಸಾವುಗಳೂ ಇಲ್ಲಿ ಸಂಭವಿಸಿದ್ದು, ಎಲ್ಲೂ ಎಚ್ಚರ ತಪ್ಪುವಂತಿಲ್ಲ.

ವರ್ಷದ ಎಲ್ಲ ದಿನಗಳಲ್ಲೂ..

ಮಲೆನಾಡಿನ ಬೆಟ್ಟ ಕಣಿವೆಗಳ ನಡುವಿಂದ ಹಾದು, ತೋಟ - ಪಟ್ಟಿಗಳಿಗೆ ನೀರುಣಿಸುತ್ತ, ಜನಜೀವನಕ್ಕೂ ಆಧಾರವಾಗಿ ಹರಿಯುವ ಸೂರಬ್ಬಿ ಹಳ್ಳದಿಂದ ಈ ಜಲಪಾತ ನಿರ್ಮಾಣವಾಗಿದೆ. ವರ್ಷದ ಎಲ್ಲ ದಿನಗಳಲ್ಲೂ ಜೀವಂತವಾಗಿರುವುದು ಈ ಜಲಪಾತದ ವಿಶೇಷತೆ. ಬೇರೆ ಕಾಲಗಳಲ್ಲಿ ಹೆಚ್ಚು ನೀರಿಲ್ಲದಿದ್ದರೂ ಜಲಪಾತವನ್ನು ಆಸ್ವಾದಿಸುವ ತೂಕವೇನು ಕಮ್ಮಿಯಾಗಲಾರದು. ವಾರಾಂತ್ಯದ ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ಜಾಗ ಇದು. ಸಮೀಪದಲ್ಲಿ ಕೊಡಸಳ್ಳಿ ಡ್ಯಾಮ್‌ನ ಹಿನ್ನೀರಿನ ಪ್ರದೇಶವೂ ಇದೆ. ಅದನ್ನೂ ಆಸ್ವಾದಿಸಬಹುದು.

ಮಳೆಗಾಲದಲ್ಲಿ ಅಪಾಯಕಾರಿ

ಸಾಮಾನ್ಯವಾಗಿ ಜಲಪಾತವೆಂದರೆ ಮಳೆಗಾಲದಲ್ಲಿ ಮೈತುಂಬಿ ಹರಿಯುತ್ತದೆ. ಆಕರ್ಷಣೆ ಸಾವಿರ ಪಟ್ಟು ಹೆಚ್ಚಾಗುತ್ತದೆ. ಪ್ರವಾಸಿಗರು ಜಲಪಾತ ವೀಕ್ಷಣೆಗೆ ಅದೇ ಸಮಯವನ್ನು ಆಯ್ದುಕೊಳ್ಳುತ್ತಾರೆ. ಆದರೆ ಸಾತೊಡ್ಡಿ ಜಲಪಾತದ ಮಟ್ಟಿಗೆ ಮಳೆಗಾಲದಲ್ಲಿ ಹೋಗುವುದು ತುಂಬಾ ಅಪಾಯಕಾರಿ. ಇಲ್ಲಿಗೆ ತೆರಳುವ ರಸ್ತೆಯೂ ಸರಿಯಾಗಿಲ್ಲ. ನೀರಿನ ರಭಸ ತುಂಬಾ ಇರುತ್ತದೆ. ಜಲಪಾತದ ಅಕ್ಕ ಪಕ್ಕದಲ್ಲಿ ಗೋಡೆಯಂತೆ ಕಲ್ಲಿನ ಬಂಡೆಗಳಿದ್ದು, ಯಾವಾಗ ಬೇಕಾದರೂ ಕುಸಿಯಬಹುದಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ವೀಕ್ಷಣಾಗೋಪುರದ ಮೇಲೆ ಬಂಡೆಯೊಂದು ಬಿದ್ದು ಭಾರೀ ಅನಾಹುತ ಸಂಭವಿಸಿತ್ತು.

satoddi

ಫೊಟೋಗ್ರಫಿ ಆಸಕ್ತರಿಗೆ..

ನಿಮಗೆ ಫೊಟೋಗ್ರಫಿಯಲ್ಲಿ ಆಸಕ್ತಿ ಇದ್ದರೆ ಇದು ಹೇಳಿ ಮಾಡಿದಂತಹ ಸ್ಥಳ. ಹಾಲ್ನೊರೆಯಂತೆ ಹರಿಯುವ ಜಲಪಾತ ನಿಮ್ಮ ಕ್ಯಾಮೆರಾ ಕಣ್ಣಲ್ಲಿ ಮತ್ತಷ್ಟು ಸುಂದರವಾಗಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ವಿವಿಧ ಕೋನಗಳಲ್ಲಿ ನೀರಿನ ಹರಿವನ್ನು, ಬಂಡೆಗಳ ನಡುವಿನ ಹರಿವಿನ ಲಾಸ್ಯವನ್ನು ಕ್ಯಾಪ್ಚರ್ ಮಾಡಲು ಅವಕಾಶವಿದೆ. ಸುತ್ತಲೂ ಕಾಡು ಹೇರಳವಾಗಿರುವುದರಿಂದ ಚಿಟ್ಟೆಗಳು, ಪಕ್ಷಿಗಳು, ಕಪ್ಪೆ, ಜೇಡ, ಸುಂಗು ಹುಳ, ಇತ್ಯಾದಿ ಕೀಟ ಜಗತ್ತಿನ ಮಹಾ ಜಾತ್ರೆಯೇ ಇಲ್ಲಿ ನೆರೆದಿರುತ್ತದೆ. ಲ್ಯಾಂಡ್‌ ಸ್ಕೇಪ್, ನೇಚರ್ ಹಾಗೂ ಮ್ಯಾಕ್ರೋ ಫೊಟೋಗ್ರಫಿಗೆ ಇಲ್ಲಿ ಹೇರಳ ಅವಕಾಶ ಇದೆ. ಹಾರ್ನಬಿಲ್‌ಗಳೂ ನಿಮಗಿಲ್ಲಿ ಸಿಗುತ್ತವೆ. ಮಂಗಗಳು ಸಾಮಾನ್ಯ. ಆದರೆ ಇಲ್ಲಿ ಡ್ರೋನ್‌ ಹಾರಿಸುವುದಕ್ಕೆ ನಿಷೇಧವಿದೆ. ಸ್ಥಳೀಯ ಆಡಳಿತವನ್ನು ಕೇಳಿದರೆ, ಡ್ರೋನ್‌ ನಿಂದ ಜೇನು ಹುಳುಗಳಿಗೆ ತೊಂದರೆಯಾಗುತ್ತದೆ. ಅವುಗಳ ರಕ್ಷಣೆ ಸಲುವಾಗಿ ಡ್ರೋನ್‌ ಹಾರಿಸುವುದನ್ನು ನಿಷೇಧಿಸಲಾಗಿದೆ ಎನ್ನುತ್ತಾರೆ.

ಸಾತೊಡ್ಡಿಗೆ ಬರುವುದು ಹೇಗೆ?

ಸಾತೊಡ್ಡಿ ಜಲಪಾತ ಯಲ್ಲಾಪುರದಿಂದ 25.5 ಕಿಮೀ ದೂರದಲ್ಲಿದೆ. ದೇಹಳ್ಳಿ ಮಾರ್ಗವಾಗಿ ಸಾಗಬೇಕು. ಸಮೀಪದ ರೈಲು ಹಾಗೂ ವಿಮಾನ ನಿಲ್ದಾಣ ಹುಬ್ಬಳ್ಳಿಯಲ್ಲಿದ್ದು, 93 ಕಿಮೀ ಆಗುತ್ತದೆ. ಬೆಂಗಳೂರಿನಿಂದ ಇಲ್ಲಿಗೆ 450 ಕಿಮೀ.

ಉಳಿದುಕೊಳ್ಳಲು:

ಯಲ್ಲಾಪುರ ತಾಲೂಕಿನ ಪ್ರವಾಸೀ ತಾಣಗಳಿಗೆ ಭೇಟಿ ನೀಡುವುದಕ್ಕೆ ನೀವು ಆಗಮಿಸುವುದಾದರೆ ನಿಮಗೆ ಉಳಿದುಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಯಲ್ಲಾಪುರದಲ್ಲಿ ಸಾಕಷ್ಟು ಲಾಡ್ಜ್‌ಗಳಿವೆ. ರೆಸಾರ್ಟ್, ಹೋಮ್‌ ಸ್ಟೇಗಳಿವೆ. ಬುಕ್ಕಿಂಗ್ ಹಾಗೂ ಮಾರ್ಗದರ್ಶನದ ಅಗತ್ಯ www.tourhopa.com ಅಥವಾ 8762329546 ಸಂಖ್ಯೆಯನ್ನು ಸಂಪರ್ಕಿಸಬಹುದು.

Sathodi-Falls1

ಸಮೀಪದಲ್ಲೇನಿದೆ?

ಯಲ್ಲಾಪುರ ತಾಲೂಕು ಜಲಪಾತಗಳಿಗೆ ಫೇಮಸ್ಸು. ಬಸ್‌ಸ್ಟಾಂಡಿನಿಂದ 18 ಕಿಮೀ ದೂರದಲ್ಲಿ ಮಾಗೋಡು ಜಲಪಾತವಿದೆ. ಅಲ್ಲಿಂದ 6 ಕಿಮೀಗೆ ಕುಳಿಮಾಗೋಡು ಜಲಪಾತವಿದೆ. ಅಂಕೋಲಾ ಮಾರ್ಗದಲ್ಲಿ ಸಾಗಿದರೆ, ಅರಬೈಲ್ ಘಟ್ಟದ ಎಡ ಭಾಗದಲ್ಲಿ ಶಿರಲೆ ಫಾಲ್ಸ್ ಇದೆ. ಅರಬೈಲಿನಲ್ಲಿ ಮಳೆಗಾಲದ ಜಲಪಾತವೊಂದು ಕಾಣುತ್ತದೆ. ಇನ್ನುಳಿದಂತೆ - ಕವಡಿಕೆರೆಯ ವಿಶಾಲ ಸರೋವರ, ಪಕ್ಕದಲ್ಲೇ ದೇವಸ್ಥಾನ, ಚಂದಗುಳಿಯ ಗಂಟೆ ಗಣಪತಿ ದೇವಾಲಯ, ಕಾನೂರು ಜಲಪಾತ, ಸೂರ್ಯಕಲ್ಯಾಣಿ ಗುಡ್ಡ, ಮಾಗೋಡಿನ ಜೇನುಕಲ್‌ ಗುಡ್ಡವನ್ನು ವೀಕ್ಷಿಸಬಹುದು. ಹೇಳಲು ಮರೆತೆ, ಸಾತೊಡ್ಡಿ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಶಿವಪುರ ಹ್ಯಾಂಗಿಂಗ್ ಬ್ರಿಜ್ ಇದೆ. ಅದೂ ಕೂಡ ಅಪರೂಪದ ಆಕರ್ಷಣೆಯಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..