Friday, July 4, 2025
Friday, July 4, 2025

ಜೋಕೆ ನಾನು ಬಳ್ಳಿಯ ಮಿಂಚು.. ಎಂದು ಹಾಡುವ ಮುರೇಗಾರ್ ಜಲಪಾತ!

ಮೊದಲೆಲ್ಲ ಸ್ಥಳೀಯರು ಮಾತ್ರ ಭೇಟಿ ಕೊಡುತ್ತಿದ್ದ ಸ್ಥಳವಿದು. ಆದರೆ, ಇತ್ತೀಚೆಗೆ ಹೆಚ್ಚಲ್ಪಟ್ಟ ಸೋಷಿಯಲ್ ಮೀಡಿಯಾ ಬಳಕೆಯ ಕಾರಣಕ್ಕೆ ಈ ಜಲಪಾತ ಹೆಚ್ಚು ಬೆಳಕಿಗೆ ಬಂತು. ಮೊದಲೆಲ್ಲ ವಾರದ ದಿನವಿರಲಿ, ವೀಕೆಂಡ್ ಇರಲಿ ಒಂದೇ ರೀತಿ ಇರುತ್ತಿತ್ತು. ಸ್ಥಳೀಯರು ತಮ್ಮ ಸಂಬಂಧಿಕರನ್ನು, ಶಾಲಾ ಶಿಕ್ಷಕರು ಮಕ್ಕಳನ್ನು ಒಂದು ದಿನ ಪಿಕ್ನಿಕ್ಗೆ ಕರೆದುಕೊಂಡು ಹೋಗುತ್ತಿದ್ದ ಜಾಗ ಇದಾಗಿತ್ತು. ಆದರೆ, ಈಗ ವಾರಾಂತ್ಯ ಬಂದರೆ ಇಲ್ಲಿ ಜನಜಂಗುಳಿ.

- ರಾಜ್‌ ಎಸ್.ಎಚ್‌

ಜಲಪಾತ ಎಂದರೆ ಸಾಕು. ಎಲ್ಲರ ಕಿವಿಯೂ ಒಮ್ಮೆ ನೆಟ್ಟಗಾಗುತ್ತದೆ. ಇದರ ಜೊತೆ ಜಲಪಾತದ ನೀರು ಬೀಳುವ ಜಾಗಕ್ಕೆ ಹೋಗುವಾಗ ಎದುರಾಗುವ ಸವಾಲು, ಅಲ್ಲಿ ಹೋದ ಬಳಿಕ ಆಗಬಹುದಾದ ತೊಂದರೆಗಳು ಕಣ್ಣು ಮುಂದೆ ಹಾದು ಹೋದಾಗ ಯಾರೇ ಆದರೂ ಒಮ್ಮೆ ಹಿಂದೇಟು ಹಾಕುತ್ತಾರೆ. ಆದರೆ, ಹೋಗುವ ದಾರಿಯೂ ಸುಲಭ, ಅಲ್ಲಿ ಹೋದ ಬಳಿಕ ಅಪಾಯ ಕಡಿಮೆ ಎಂಬಂಥ ಜಲಪಾತ ಸಿಕ್ಕಿ ಬಿಟ್ಟರೆ? ಅದು ನಿಜಕ್ಕೂ ಸ್ವರ್ಗವೇ ಆಗಿರುತ್ತದೆ. ಈ ರೀತಿಯ ಒಂದು ಅಪರೂಪದ ಜಲಪಾತ ಇದೆ. ಅದರ ಹೆಸರೇ ಮುರೇಗಾರ್ ಜಲಪಾತ. ಇದು ಇರೋದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಣದೂರು ಗ್ರಾಮದಲ್ಲಿ.

ಮುರೇಗಾರ್ ಜಲಪಾತದ ಸೌಂದರ್ಯವನ್ನು ವರ್ಣಿಸೋಕೆ ಪದಗಳು ಸಿಗುವುದಿಲ್ಲ. ಹೋಗುವ ಸ್ಥಳಕ್ಕಿಂತ, ಹೋಗುವ ದಾರಿಯೇ ಚೆಂದ ಎಂಬ ಮಾತನ್ನು ಕೆಲವರು ಹೇಳುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಹೋಗುವ ದಾರಿಯ ಜತೆಗೆ ಹೋದ ಬಳಿಕ ಸಿಗುವ ಸ್ಥಳವೂ ಸುಂದರ. ಕಾಡುಗಳನ್ನು ಸೀಳಿಕೊಂಡು ಮಾಡಲ್ಪಟ್ಟ ದಾರಿಯಲ್ಲಿ ಏರಿಳಿತಗಳನ್ನು ದಾಟುತ್ತಾ ಸಾಗಿದರೆ ನೀವು ಜಲಪಾತ ತಲುಪುತ್ತೀರಿ.

meregar falls

ಇತ್ತೀಚೆಗೆ ಬೆಳಕಿಗೆ ಬಂದ ಜಲಪಾತ

ಶಿರಸಿ ತಾಲೂಕಿನಲ್ಲೇ ಇದ್ದರೂ ಮುರೇಗಾರ್ ಜಲಪಾತದ ಹೆಸರು ಬಹಳಷ್ಟು ಸ್ಥಳೀಯರಿಗೆ ಗೊತ್ತಿರಲೇ ಇಲ್ಲ. ಈಗಲೂ ಅನೇಕರಿಗೆ ಗೊತ್ತಿಲ್ಲ. ಈ ಜಲಪಾತ ಶಿರಸಿ ನಗರದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಮೊದಲೆಲ್ಲ ಸ್ಥಳೀಯರು ಮಾತ್ರ ಭೇಟಿ ಕೊಡುತ್ತಿದ್ದ ಸ್ಥಳವಿದು. ಆದರೆ, ಇತ್ತೀಚೆಗೆ ಹೆಚ್ಚಲ್ಪಟ್ಟ ಸೋಷಿಯಲ್ ಮೀಡಿಯಾ ಬಳಕೆಯ ಕಾರಣಕ್ಕೆ ಈ ಜಲಪಾತ ಹೆಚ್ಚು ಬೆಳಕಿಗೆ ಬಂತು. ಮೊದಲೆಲ್ಲ ವಾರದ ದಿನವಿರಲಿ, ವೀಕೆಂಡ್ ಇರಲಿ ಒಂದೇ ರೀತಿ ಇರುತ್ತಿತ್ತು. ಸ್ಥಳೀಯರು ತಮ್ಮ ಸಂಬಂಧಿಕರನ್ನು, ಶಾಲಾ ಶಿಕ್ಷಕರು ಮಕ್ಕಳನ್ನು ಒಂದು ದಿನ ಪಿಕ್​ನಿಕ್​ಗೆ ಕರೆದುಕೊಂಡು ಹೋಗುತ್ತಿದ್ದ ಜಾಗ ಇದಾಗಿತ್ತು. ಆದರೆ, ಈಗ ವಾರಾಂತ್ಯ ಬಂದರೆ ಇಲ್ಲಿ ಜನಜಂಗುಳಿ.

ಮೈಯ್ಯೊಡ್ಡಿ ನಿಂತು ನೋಡಿ

ಮುರೇಗಾರ್ ಜಲಪಾತದಲ್ಲಿ ನೀರು ಮೇಲಿನಿಂದ ಕೆಳಕ್ಕೆ ಧುಮುಕುವುದಿಲ್ಲ. ಬದಲಿಗೆ ಕಲ್ಲುಗಳ ಮೇಲೆ ಬಳಕುತ್ತಾ ಕೆಳಕ್ಕೆ ಬೀಳುತ್ತದೆ. ಹೀಗಾಗಿ, ನೀರಿನ ಸೆಳೆತ ಕೊಂಚ ಕಡಿಮೆಯೇ. ಇದರಿಂದ ನೀವು ನೀರು ಬೀಳುವ ಜಾಗದಲ್ಲಿ ಹೋಗಿಯೂ ನಿಲ್ಲಬಹುದು. ನೀರು ಬೀಳುವುದನ್ನು ನೋಡುತ್ತಾ ನಿಂತರೆ ಹಾಲಿನ ನೊರೆಯೇ ಬೀಳುತ್ತಿದೆಯೇನೋ ಎಂದು ನಿಮಗೆ ಅನಿಸದೇ ಇರದು. ಅದರಲ್ಲೂ ಮಳೆಗಾಲದ ಆರಂಭದಲ್ಲಿ ಹೋದರೆ ನೀರಿನ ಭೋರ್ಗರೆತದಿಂದ ಹೊರಹೊಮ್ಮುವ ಸಣ್ಣ ನೀರಿನ ಕಣಗಳು ನಿಮ್ಮನ್ನು ಆವರಿಸಿ ಬೇರೆಯದೇ ಫೀಲ್ ಕೊಡುತ್ತದೆ.

ಪಾಂಡವರು ಬಂದಿದ್ದ ಪ್ರತೀತಿ

ಮುರೇಗಾರ್ ಜಲಪಾತದಲ್ಲಿ ಕೇವಲ ಫಾಲ್ಸ್ ಮಾತ್ರವಿಲ್ಲ. ಇಲ್ಲಿ ದೊಡ್ಡ ಕಲ್ಲು ಬಂಡೆಯ ಮೇಲೆ ಕೆತ್ತಲ್ಪಟ್ಟ ಈಶ್ವರ ಲಿಂಗ, ಬಸವನ ಮೂರ್ತಿಯನ್ನು ಕೂಡ ನೀವು ಕಾಣಬಹುದು. ಶಿವರಾತ್ರಿ ದಿನದಂದು ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ. ಆ ದಿನ ಸ್ಥಳೀಯರು ಬಂದು ಇಲ್ಲಿ ಪೂಜೆ ಮಾಡಿ, ನೀರಿನಲ್ಲಿ ಮುಳುಗಿ ತಮ್ಮ ಪಾಪವನ್ನು ಕಳೆದುಕೊಂಡು ಹೋಗುತ್ತಾರೆ. ಇಲ್ಲಿ ಪಾಂಡವರು ಬಂದಿದ್ದರು ಎಂಬ ಪ್ರತೀತಿ ಇದೆ. ಏಕೆಂದರೆ ಇಲ್ಲಿ ಒಂದು ಸಣ್ಣ ಗುಹೆ ಇದೆ. ಇದಕ್ಕೆ ಭೀಮನ ಗುಹೆ ಎಂಬ ಹೆಸರಿದೆ. ಭೀಮನ ಹೆಜ್ಜೆ ಮತ್ತು ಕಲ್ಲಲ್ಲಿ ಕೆತ್ತಲ್ಪಟ್ಟ ಬಟ್ಟಲನ್ನು ನೀವು ಇಲ್ಲಿ ಕಾಣಬಹುದು. ಪಾಂಡವರು ಊಟ ಮಾಡಲು ಬಳಕೆ ಮಾಡಿದ ಬಟ್ಟಲು ಅದು ಎಂಬ ನಂಬಿಕೆ ಇದೆ. ನಿಜವಾಗಿಯೂ ಇಲ್ಲಿ ಪಾಂಡವರು ಬಂದಿದ್ದರೇ? ಈ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.

ಮೈಮರೆತರೆ ಅಪಾಯ

ನೀರು ಎಂದಾಗ ಸ್ವಲ್ಪ ಎಚ್ಚರಿಕೆ ಬೇಕೆ ಬೇಕು. ಏಕೆಂದರೆ ಇಲ್ಲಿಯೂ ಕೆಲವು ಅಪಾಯಕಾರಿ ಸ್ಥಳವಿದೆ. ನೀರು ಬೀಳುವ ಸ್ಥಳ ತುಂಬಾ ಅಪಾಯಕಾರಿ. ಏಕೆಂದರೆ ಇಲ್ಲಿ ನೀರಿನ ಸೆಳೆತ ಹೆಚ್ಚು, ಜೊತೆಗೆ ಆಳವೂ ಹೆಚ್ಚಾಗಿದೆ. ನೀವು ಅತಿ ಉತ್ಸಾಹದಲ್ಲಿ ನೀರಿಗೆ ಇಳಿದರೆ ಮರಳಿ ಬರುತ್ತೀರಿ ಎನ್ನುವ ಯಾವುದೇ ಗ್ಯಾರಂಟಿಯನ್ನು ಯಾರೂ ಕೊಡೋದಿಲ್ಲ.

muregar falls

ಯಾವ ಟೈಮ್ ಬೆಸ್ಟ್ ?

ಜಲಪಾತ ನೋಡಲು ಜನ ಇಷ್ಟಪಡೋದು ಮಳೆಗಾಲದಲ್ಲಿ. ಭೋರ್ಗರ್ರೆವ ಜಲಪಾತ ಕಣ್ಣಿಗೆ ಹಬ್ಬ. ಆದರೆ ಮುರೇಗಾರ್ ಜಲಪಾತಕ್ಕೆ ಭೇಟಿ ನೀಡಲು ಅಕ್ಟೋಬರ್​ನಿಂದ ಜನವರಿ ಸೂಕ್ತ ಸಮಯ. ಮಳೆಗಾಲದಲ್ಲಿ ಬಂದರೆ ದೂರದಿಂದ ನೋಡೋಕೆ ಅದ್ಭುತ. ಆದರೆ ನೀರಿನ ಸಮೀಪಕ್ಕೆ ಹೋಗೋದು ಅಸಾಧ್ಯ. ನೀರಿನ ಹರಿವು ಮತ್ತು ಅಬ್ಬರ ಹೇಗಿರುತ್ತದೆ ಅಂದ್ರೆ ಆನೆ ನಡೆದಿದ್ದೇ ಹಾದಿ ಎಂಬಂತೆ ಮನಸ್ಸಿಗೆ ಬಂದಂತೆಲ್ಲ ನೀರು ಧುಮುಕುತ್ತಿರುತ್ತದೆ. ಆಗ ರಮಣೀಯ ದೃಶ್ಯಗಳ ಜೊತೆ ಕಾಣದ ಅಪಾಯವೂ ಹೆಚ್ಚು. ಅದೇ ನೀವು ಬೇಸಗೆಯಲ್ಲಿ ಬಂದರೆ ನೀರು ಬತ್ತಿ ಬರಿದಾದ ಬಂಡೆಗಲ್ಲನ್ನು ನೋಡಿ ಬರಬೇಕಾಗುತ್ತದೆ. ಹೀಗಾಗಿ ಅಕ್ಟೋಬರ್​ನಿಂದ ಜನವರಿ ಅವಧಿಯಲ್ಲಿ ಬಂದರೆ ಜಲಪಾತದ ಸೌಂದರ್ಯ ನೋಡುವುದರ ಜೊತೆಗೆ ಮನಸೋ ಇಚ್ಛೆ ನೀರಿನಲ್ಲಿ ಆಟ ಆಡಬಹುದು. ಜತೆಗೆ ಬೋನಸ್ ಗಿಫ್ಟ್ ಎಂಬಂತೆ ನೀರಿನ ಸೆಳೆತಕ್ಕೆ ಸಿಕ್ಕಿ ಕಡೆಯಲ್ಪಟ್ಟ ಮೊಟ್ಟೆ ಆಕಾರದ ಸುಂದರವಾದ ಕಲ್ಲುಗಳನ್ನು ನೀವು ಸಂಗ್ರಹಿಸಬಹುದು.

ಅಕ್ರಮ ಚಟುವಟಿಕೆಗಳಿಗಿಲ್ಲ ಅವಕಾಶ

ಈ ಮೊದಲು ಈ ಜಲಪಾತಕ್ಕೆ ಯಾರೇ ಬಂದರೂ ಹೇಳುವವರು ಕೇಳುವವರು ಇರಲಿಲ್ಲ. ಆದರ ಈಗ ಹಾಗಿಲ್ಲ. ಅರಣ್ಯ ಇಲಾಖೆಯಿಂದ ಇಲ್ಲಿ ಒಂದು ಚೆಕ್ ಪಾಯಿಂಟ್ ಮಾಡಲಾಗಿದೆ. ಇಲ್ಲಿ ಎಂಟ್ರಿ ಫೀ ಪಾವತಿಸಿಯೇ ನೀವು ಮುಂದೆ ಸಾಗಬೇಕು. ಹೀಗಾಗಿ, ಎಣ್ಣೆ ಬಾಟಲಿ ಹಿಡಿದು ಬರುವ ಕನಸನ್ನು ಇಟ್ಟುಕೊಂಡಿದ್ದರೆ ಅದನ್ನು ಮರೆಯೋದು ಉತ್ತಮ.

ಏನಿದೆ.. ಏನಿಲ್ಲ?

ಇದು ನಗರ ಪ್ರದೇಶದಿಂದ ತುಂಬ ದೂರ ಇರುವುದರಿಂದ ಇಲ್ಲಿ ಊಟದ ವ್ಯವಸ್ಥೆಯನ್ನು ನಿರೀಕ್ಷಿಸುವಂತಿಲ್ಲ. ಬಿಎಸ್​ಎನ್​ಎಲ್ ಹೊರತುಪಡಿಸಿದಂತೆ ಉಳಿದ ಯಾವುದೇ ನೆಟ್ ವರ್ಕ್​ಗಳು ಇಲ್ಲಿ ಲಭ್ಯವಿಲ್ಲ. ಇನ್ನು ಟಾಯ್ಲೆಟ್, ಡ್ರೆಸ್ ಬದಲಾಯಿಸಿಕೊಳ್ಳಲು ಚೇಂಜಿಂಗ್ ರೂಂ ಹಾಗೂ ಸಣ್ಣ ಪುಟ್ಟ ಸ್ನ್ಯಾಕ್ಸ್​ಗಳು ಇಲ್ಲಿ ಲಭ್ಯ. ಉಳಿದಂತೆ ಹೆಚ್ಚಿನ ಯಾವುದೇ ವ್ಯವಸ್ಥೆಯನ್ನು ನೀವು ಇಲ್ಲಿ ನಿರೀಕ್ಷಿಸಬಾರದು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..