ಏನೀ ಜಲಪಾತದ ಪ್ರೇಮಕಥೆ?
ಬಂಡೆಗಳ ನಡುವೆ ಚುಂಚಿ ಶಾಂತವಾಗಿ ಹರಿಯುತ್ತಾಳೆ. ಬಳುಕುತ್ತಾ ಎತ್ತರದಿಂದ ಧುಮ್ಮಿಕ್ಕುತ್ತಾಳೆ. ಕೆಲವೊಮ್ಮೆ ಸಿಟ್ಟಿಗೆದ್ದವಳಂತೆ ಭೋರ್ಗರೆಯುತ್ತಾಳೆ. ಅವಳ ಸದ್ದು ಕೇಳಿದೊಡನೆ ದೂರದೆಲ್ಲೆಲ್ಲೋ ಹೆಜ್ಜೆಯಿಡುತ್ತಾ ಬರುವ ನಮಗೆ ಹೇಳತೀರದ ಪುಳಕ. ಗೂಸ್ಬಂಪ್ಸ್ ಅಂತೀವಲ್ಲ ಥೇಟ್ ಹಾಗೆ. ಕೂಡಲೇ ಅವಳ ವೈಭವವನ್ನು ಕಣ್ತುಂಬಿಕೊಳ್ಳುವ ಕಾತರತೆ. ಅಂದಹಾಗೆ ಜಲಧಾರೆಗೆ ತನ್ನ ಹೆಸರಿಟ್ಟ ಕಾರಣಕ್ಕೆ ಆ ಬುಡಕಟ್ಟು ಮಹಿಳೆ ಚುಂಚಿಯ ಆತ್ಮ ಅದೆಷ್ಟು ಸಂಭ್ರಮಪಟ್ಟಿರಬಹುದು!
- ಯತೀಶ ಎಸ್
ವಾಟರ್ ಥೆರಪಿ ಎಂಬುದಿದೆ ಗೊತ್ತಾ? ಸ್ವಚ್ಛಂದವಾಗಿ ಹರಿಯುವ ನೀರಿಗೆ ನಮ್ಮನ್ನು ಹಗುರಾಗಿಸುವ ಶಕ್ತಿಯಿದೆ. ನೀರು ಜಿಡ್ಡು ಹಿಡಿದ ಮೈಗೆ ಮುದ ನೀಡುತ್ತದೆ. ಮನಸ್ಸನ್ನು ಅರಳಿಸುತ್ತದೆ. ವರ್ಷಧಾರೆಯಂತೆ ಧುಮ್ಮಿಕ್ಕುವ ಜಲಪಾತಕ್ಕೆ ಮೈಯೊಡ್ಡಿ ನಿಂತರೆ ಆಹಾ! ಸುಖಾನುಭವ. ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಮಲೆನಾಡು ಪ್ರದೇಶಗಳಿಗೆ ಹೋಗಬೇಕು ಅಂತಿಲ್ಲ. ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಅದ್ಭುತವಾದ ಜಲಪಾತವೊಂದಿದೆ. ರಸ್ತೆಯ ಧೂಳು ಕುಡಿದು ಬೇಸತ್ತಿದ್ದರೆ, ವಾರಪೂರ್ತಿ ಹಾಂಕಿಂಗ್ ಸದ್ದುಗಳನ್ನು ಕೇಳಿ ತಲೆಚಿಟ್ಟು ಹಿಡಿದು ಹೋಗಿದ್ದರೆ, ಮಹಾನಗರಿ ಬೆಂಗಳೂರಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಚುಂಚಿ ಜಲಪಾತಕ್ಕೆ ಭೇಟಿ ನೀಡಬಹುದು. ಅಲ್ಲಿ ಶುದ್ಧ ಹಳ್ಳಿಯ ಸೊಗಡಿದೆ. ಹಿತವಾದ ವಾತಾವರಣವಿದೆ. ತಲುಪುವ ದಾರಿಯೂ ಮಸ್ತಾಗಿದೆ.
ಕನಕಪುರ ಎಲ್ಲರಿಗೂ ಗೊತ್ತು. ಅದು ಬಂಡೆಗಳ ನಗರಿ. ಅಲ್ಲಿನ ಪ್ರಮುಖ ಆಕರ್ಷಕ ತಾಣವೆಂದರೆ ಚುಂಚಿ ಜಲಪಾತ. ಈ ಜಲಪಾತವು ಅಲ್ಲಿನ ಬುಡಕಟ್ಟು ದಂಪತಿಗಳಾದ ಚುಂಚ ಮತ್ತು ಚುಂಚಿಯಿಂದ ಹೆಸರನ್ನು ಪಡೆದುಕೊಂಡಿದೆ ಎನ್ನುತ್ತದೆ ಸ್ಥಳ ಪುರಾಣ. ಅಲ್ಲಿ ಚುಂಚಿ ತುಂಬಿ ಹರಿಯುತ್ತಾಳೆ. ಮಳೆಗಾಲದಲ್ಲಂತೂ ಅವಳು ನಿತ್ಯಗಾಮಿನಿ. ಆಕೆಯ ಸೌಂದರ್ಯ ವರ್ಣಿಸಲು ಅಸಾಧ್ಯ. ಬೆಂಗಳೂರಿನಿಂದ ಕೇವಲ 83 ಕಿಮೀ ದೂರದಲ್ಲಿರುವ ಈ ಜಲಪಾತದ ಹಾದಿ ತುಂಬಾ ಸುಗಮ. ಖಾಸಗಿ ವಾಹನದಲ್ಲಿ ಬೆಂಗಳೂರಿನಿಂದ ಹೊರಟರೆ ಎರಡೂವರೆ ಗಂಟೆಯ ಹಾದಿ. ಬೆಂಗಳೂರಿನಿಂದ ಕಗ್ಗಲೀಪುರ ನಂತರ ಜಕ್ಕಸಂದ್ರ - ಉಯ್ಯಂಬಳ್ಳಿ ಅಲ್ಲಿಂದ ತಾಯಿ ಮುದ್ದಮ್ಮ ಹೆಬ್ಬಾಗಿಲ ಮೂಲಕ ಪ್ರಯಾಣಿಸಿದರೆ ಮಾದರ ಹಳ್ಳಿಯ ಚುಂಚಿ ಜಲಪಾತವನ್ನು ತಲುಪಬಹುದು. ಅಲ್ಲಿ ವಾಹನಗಳನ್ನು ನಿಲ್ಲಿಸಿ 30 ರುಪಾಯಿ ಪಾರ್ಕಿಂಗ್ ಟಿಕೆಟ್ ತೆಗೆದುಕೊಂಡು ಹಾಗೆ ಮುಂದೆ ಸಾಗಿದರೆ ನಮ್ಮ ಎಡ ಭಾಗಕ್ಕೆ ಕಾಣಸಿಗುವ ಜಲಪಾತ ನಮ್ಮ ಪ್ರಯಾಣದ ಆಯಾಸವನ್ನು ಒಮ್ಮೆಲೆ ನೀಗುತ್ತದೆ.

ಬಂಡೆಗಳ ನಡುವೆ ಚುಂಚಿ ಶಾಂತವಾಗಿ ಹರಿಯುತ್ತಿರುತ್ತಾಳೆ. ಬಳುಕುತ್ತಾ ಎತ್ತರದಿಂದ ಧುಮ್ಮಿಕ್ಕುತ್ತಾಳೆ. ಕೆಲವೊಮ್ಮೆ ಸಿಟ್ಟಿಗೆದ್ದವಳಂತೆ ಭೋರ್ಗರೆಯುತ್ತಾಳೆ. ಅವಳ ಸದ್ದು ಕೇಳಿದೊಡನೆ ದೂರದೆಲ್ಲೆಲ್ಲೋ ಹೆಜ್ಜೆಯಿಡುತ್ತಾ ಬರುವ ನಮಗೆ ಹೇಳತೀರದ ಪುಳಕ. ಗೂಸ್ ಬಂಪ್ಸ್ ಅಂತೀವಲ್ಲ ಥೇಟ್ ಹಾಗೆ. ಕೂಡಲೇ ಅವಳ ವೈಭವವನ್ನು ಕಣ್ತುಂಬಿಕೊಳ್ಳುವ ಕಾತರತೆ. ಅಂದಹಾಗೆ ಜಲಧಾರೆಗೆ ತನ್ನ ಹೆಸರಿಟ್ಟ ಕಾರಣಕ್ಕೆ ಆ ಬುಡಕಟ್ಟು ಮಹಿಳೆ ಚುಂಚಿಯ ಆತ್ಮ ಅದೆಷ್ಟು ಸಂಭ್ರಮಪಟ್ಟಿರಬಹುದು.
ಹೌದು. ನಡೆಯುತ್ತಾ ಹೋದಂತೆ ಬಲಕ್ಕೆ ತಿರುಗಿ ತಲೆ ಎತ್ತಿದರೆ ನಮ್ಮ ಮುಂದೆ ಇರುವ ಬಂಡೆಯ ಕಡೆ ಒಂದು ಸೂಚನಾಫಲಕವಿದೆ. ಅದು ಜಲಪಾತದ ಕಡೆಗೆ ದಾರಿ ಎಂದು ತೋರುತ್ತದೆ. ಕಡಿದಾದ ಇಳಿಜಾರಿನಲ್ಲಿ ಸಾಗಿದಾಗ ನಮ್ಮ ಕಣ್ಣು ನಂಬಲಾಗದ ಮನೋಹರ ದೃಶ್ಯ. ಐವತ್ತು ಅಡಿ ಎತ್ತರದಿಂದ ಧುಮುಕಿ ದಣಿದು ಬಂದ ಪ್ರವಾಸಿಗರ ಮನಸೆಳೆಯುತ್ತಾಳೆ ಚುಂಚಿ. ಕೆಳಗಿಳಿಯಬೇಕಾದರೆ ಅಲ್ಲಿನ ಸೋ ಕಾಲ್ಡ್ ಗೈಡ್ ಗಳ ಸಹಾಯದಿಂದ ಜಲಪಾತದ ಹತ್ತಿರಕ್ಕೆ ತೆರಳಬಹುದು. ಚಾರ್ಜಸ್ ಅಪ್ಲಿಕೆಬಲ್ ಎಂಬುದು ನೆನಪಿರಲಿ!
ಜಲಪಾತವನ್ನು ಸೌಂದರ್ಯವನ್ನು ಆನಂದಿಸಿ ಬರುವಾಗ ಅಲ್ಲಿಯೇ ಚಿಕ್ಕ ಗುಡಿಸಲಿನ ಅಂಗಡಿಗಳು ಕಾಣುತ್ತವೆ. ತಣ್ಣನೆಯ ನೀರು ಕುಡಿದು ದಾಹವನ್ನು ನೀಗಿಸಿಕೊಳ್ಳಬಹುದು. ಮ್ಯಾಗಿ, ಚುರುಮುರಿ, ಮಜ್ಜಿಗೆ ಮುಂತಾದ ತಿನಿಸುಗಳನ್ನು ಸವಿಯಬಹುದು.
ಚುಂಚಿ ಮುಗಿದ ಮೇಲೆ ?
ಚುಂಚಿಯಿಂದ 18 ಕಿಮೀ ದೂರದಲ್ಲಿರುವ ಸಂಗಮ. ಅರ್ಕಾವತಿ ಹಾಗೂ ಕಾವೇರಿ ಒಂದೇ ಕಡೆ ಸೇರುವ ನದಿಯಲ್ಲಿ ಕೆಲವು ನಿಮಿಷಗಳ ಕಾಲಹರಣ ಮಾಡಿ ಮುಂದೆ ಸಾಗಬಹುದು. ಅಲ್ಲೇ ಮೇಕೆದಾಟು ಸಿಗುತ್ತದೆ. ಅದು ಕನ್ನಡಿಗರ ಎಷ್ಟೋ ವರ್ಷದ ಕನಸಿನ ಕೂಸು. ಅಲ್ಲಿ ವಾಹನವನ್ನು ನಿಲ್ಲಿಸಿದರೆ ಪ್ರತ್ಯೇಕ ಬಸ್ಸುಗಳಲ್ಲಿ ಹೋಗಬಹುದು. 20 ಜನ ತುಂಬಿದ ನಂತರ ಬಸ್ಸು ಹೊರಡುತ್ತದೆ. ನೀರಿನಲ್ಲಿ ಇಳಿದು ಕೆಲವು ಸಮಯ ಆಟವಾಡಿ ಅಲ್ಲಿಂದ ಹಿಂದಿರುಗಬಹುದು. ಮನೆಗೆ ಬಂದ ನಂತರವೂ ಚುಂಚಿ ಕಾಡುತ್ತಲೇ ಇರುತ್ತಾಳೆ.

ಪ್ರವಾಸಿಗರಲ್ಲಿ ವಿನಂತಿ
ಪ್ರವಾಸಿ ತಾಣಗಳನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ನಮಗಿದೆ. ಚುಂಚಿ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳುವವರು ಅಲ್ಲಿನ ವಾತಾವರಣವನ್ನೂ ಕಾಪಾಡಬೇಕಿದೆ. ಚುಂಚಿಯಲ್ಲಿ ಸ್ವಚ್ಛತೆಯ ಕೊರತೆಯಿದೆ. ಮಕ್ಕಳ ಡೈಪರ್ಸ್, ಪ್ಲಾಸ್ಟಿಕ್ ನಂಥ ಕಸವನ್ನು ಬೇಕೆಂದೆಡೆ ಎಸೆಯಲಾಗಿದೆ. ಅಲ್ಲಿಯೇ ಹತ್ತಾರು ಕಸದ ಬುಟ್ಟಿಗಳಿವೆ. ಅದರೊಳಗೆ ಹಾಕಿದರೆ ಒಳಿತು. ಸುಂದರ ತಾಣವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೇ?
ಒಂದು ದಿನದ ಪಿಕ್ನಿಕ್ ಗೆ ಹೇಳಿ ಮಾಡಿಸಿದ ತಾಣ
ಭೇಟಿಯ ಸಮಯ: ಬೆಳಗ್ಗೆ 9:00- ಸಂಜೆ- 6:00 ರವರೆಗೆ
ಒಂದು ಗಂಟೆಯ ಚಾರಣ
ಪ್ರವೇಶ ಶುಲ್ಕ : ಇಲ್ಲ – ಪಾರ್ಕಿಂಗ್ ಗೆ 30/- ಮಾತ್ರ
ದಾರಿ ಯಾವುದಯ್ಯ
ಚುಂಚಿ ಜಲಪಾತವು ಬೆಂಗಳೂರು ನಗರದಿಂದ 83 ಕಿ.ಮೀ ದೂರದಲ್ಲಿದೆ
ಮೇಕೆದಾಟು ಮತ್ತು ಸಂಗಮಕ್ಕೆ ಹೋಗುವ ಮಾರ್ಗ
ಮೆಜೆಸ್ಟಿಕ್ ನಿಲ್ದಾಣದಿಂದ, ಕನಕಪುರದ ಕೆಎಸ್ ಆರ್ ಟಿಸಿ ನಿಲ್ದಾಣದವರೆಗೂ ಬಸ್ ಗಳಿವೆ.
ಸಂಗಮದ ಕಡೆಗೆ ಹೊರಡುವ ಬಸ್ಸು ಕೂಡ ಆ ಮಾರ್ಗದಲ್ಲಿ ಹೋಗುತ್ತದೆ
ಕನಕಪುರದಿಂದ ಚುಂಚಿ ಜಲಪಾತಕ್ಕೆ ಆಟೋ ರಿಕ್ಷಾಗಳ ಮೂಲಕ ತಲುಪಬಹುದು
ಕಾರು ಮತ್ತು ಬೈಕಿನಲ್ಲಿಯೂ ಸುಲಭವಾಗಿ ಹೋಗಬಹುದು