Tuesday, February 24, 2026
Tuesday, February 24, 2026

ಸಫಾರಿಯ ಪ್ರತ್ಯಕ್ಷ ವರದಿ

ಚಿರತೆಯೊಂದು ಹುಲ್ಲೆಯನ್ನು ಬೇಟೆಯಾಡುತ್ತಿರುವ ಸಂದೇಶ ವಾಕಿ-ಟಾಕಿಯಲ್ಲಿ ಬಂತು. ನಮ್ಮ ವಾಹನ ರಭಸದಿಂದ ಸೂಚಿತ ಮಾರ್ಗದತ್ತ ನುಗ್ಗಿತು. ನಾವು ಸ್ಥಳಕ್ಕೆ ತಲುಪುವ ಹೊತ್ತಿಗೆ ಏಳೆಂಟು ಸಫಾರಿ ವಾಹನಗಳು ಮರದ ಸುತ್ತಲೂ ಜಮಾಯಿಸಿದ್ದವು. ಛತ್ರಿ ಆಕಾರದ ಮರದಿಂದ 30 ಅಡಿ ದೂರದಲ್ಲಿ ನಿಂತು ಮರದತ್ತ ಎಲ್ಲರೂ ದುರ್ಬಿನ್ ಹಿಡಿದು ನೋಡುತ್ತಿದ್ದರು. ನಾವು ಆ ದೃಶ್ಯಕ್ಕೆ ಕಣ್ಣಾದೆವು. ನಿಸ್ತೇಜವಾಗಿದ್ದ ಹುಲ್ಲೆಯ ಕುತ್ತಿಗೆಯನ್ನು ಚಿರತೆ ಕಚ್ಚಿಕಚ್ಚಿ ತಿನ್ನುತ್ತಿರುವ ದೃಶ್ಯ ದಾರುಣವಾಗಿತ್ತು.

- ಪ್ರಹ್ಲಾದ್‌ ಪರ್ವತಿ

ಆಕಾಶದಲ್ಲಿ ಗರುಡನೋಟ, ನೆಲದ ಮೇಲೆ ಸಿಂಹ ಗರ್ಜನೆ, ನೀರಲ್ಲಿನೀರಾನೆ ಮೊಸಳೆಗಳ ಮೌನಕಾಯಕ. ಪ್ರಕೃತಿ ಐಶ್ವರ್ಯದ ಈ ಹುಲ್ಗಾಡು ಪ್ರಾಣಿ ಸಂಚಲನದ ಅದ್ಭುತ ಲೋಕ. ಆಫ್ರಿಕಾ ಖಂಡದ ಹೃದಯ ಭೂಮಿಯಲ್ಲಿ ಸಾವಿರಾರು ಮೈಲುಗಳಲ್ಲಿ ಮೈ ಚಾಚಿರುವ ಪ್ರಾಣಿ ವೈವಿಧ್ಯದ ಮಿಡಿತದ ಪ್ರತಿಧ್ವನಿಯ ತಾಣವೇ ಮಸಾಯ್ ಮಾರಾ. ಪ್ರತಿ ವರ್ಷ ಜೀವನ ಯಾತ್ರೆಯಂತೆ ಲಕ್ಷಾಂತರ ವನ್ಯಜೀವಿಗಳು ತಮ್ಮ ಪಾದ ಸ್ಪರ್ಶದಿಂದ ಇಲ್ಲಿ ಬದುಕಿನ ದಾರಿ ಕಂಡುಕೊಳ್ಳುತ್ತವೆ.

ಕನಸು ಕೈಗೂಡಿತು

ನನ್ನ ಬಹುದಿನದ ಕನಸು ಸಾಕಾರಗೊಂಡಿದ್ದು ನನ್ನ ಅಳಿಯ ಅನಿಲ ಕಾರ್ಯನಿಮಿತ್ತ ವಾಸಿಸುವ ಆಫ್ರಿಕಾದ ‘ಮೊಂಬಾಸಾ’ ಕ್ಕೆ ಆತನ ಒತ್ತಾಸೆಯ ಮೇರೆಗೆ ಭೇಟಿ ನೀಡಿದ್ದರಿಂದಾಗಿ. ಕೀನ್ಯಾ ದೇಶದ ಈ ಅಭಯಾರಣ್ಯದ ʼವಿಶ್ವಪ್ರಸಿದ್ಧ ವಾರ್ಷಿಕ ವನ್ಯಜೀವಿ ವಲಸೆʼಗೆ ಭೇಟಿ ನೀಡಲು ಎಲ್ಲ ವ್ಯವಸ್ಥೆಯನ್ನು ಆತನೇ ಮಾಡಿದ್ದರಿಂದಾಗಿ ನನ್ನ ಹುಮ್ಮಸ್ಸು ಮತ್ತಷ್ಟು ಹೆಚ್ಚಿತ್ತು. ಕಳೆದ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ನಾವು ಬೆಂಗಳೂರಿನಿಂದ ಮುಂಬಯಿಯ ಮೂಲಕ ವಿಮಾನದಿಂದ ನೈರೋಬಿಗೆ ಬೆಳಗ್ಗೆ ಐದು ಗಂಟೆಗೆ ತಲುಪಿದೆವು. ನಮಗಾಗಿ ಗೊತ್ತುಪಡಿಸಿದ ಸಫಾರಿ ವಾಹನದ ಚಾಲಕ ಹಾಗೂ ಗೈಡ್ ರೂಬಿನ್ ನಮ್ಮನ್ನು ರಾಷ್ಟ್ರೀಯ ʼಮಸಾಯ್ ಮಾರಾʼ ಮೀಸಲು ಪ್ರದೇಶಕ್ಕೆ ಕರೆದುಕೊಂಡು ಹೊರಟ. ಕೀನ್ಯಾದ ‘ಗ್ರೇಟ್ ಲಿಫ್ಟ್‘ ಕಣಿವೆ ಮೂಲಕ ನಾವು ಸುಮಾರು ಐದು ಗಂಟೆ (250 ಕಿಮೀ) ಪ್ರವಾಸಮಾಡಿ, ಅಭಯಾರಣ್ಯ ಪ್ರವೇಶದ್ವಾರ ತಲುಪಿದೆವು. ಅಲ್ಲಿ ನಮ್ಮ ಪಾಸ್ ಪೋರ್ಟ್ ಪರಿಶೀಲನೆಯ ನಂತರ ಪ್ರವೇಶಶುಲ್ಕ ಪಡೆದು (ಪ್ರತಿಯೊಬ್ಬರಿಗೆ ಪ್ರತಿದಿನಕ್ಕೆ 200 ಡಾಲರ್ ಪ್ರವೇಶ ಶುಲ್ಕ, ವಾಸ್ತವ್ಯದ ವೆಚ್ಚ ಪ್ರತ್ಯೇಕ) ಪ್ರವೇಶಾವಕಾಶ ನೀಡಲಾಯಿತು. ಹುಲ್ಲುಗಾಡಿನ (ಸವನ್ನಾ) ಮಣ್ಣಿನ ರಸ್ತೆಯ ಅರಣ್ಯ ಪ್ರದೇಶವನ್ನುಪ್ರವೇಶಿಸುತ್ತಿದಂತೆಯೇ ಹಿಂಡುಹಿಂಡಾಗಿ ಸಾಗುತ್ತಿದ್ದ ಜೀಬ್ರಾ, ಹುಲ್ಲೆಗಳು, ಕಾಡೆಮ್ಮೆ, ಜಿರಾಫೆಗಳನ್ನು ಕಂಡು ರೋಮಾಂಚನವಾಯಿತು. ಅರಣ್ಯದಲ್ಲಿ ಕಾಯ್ದಿರಿಸಲಾಗಿದ್ದ ಸಫಾರಿ ಲಾಡ್ಜ್ ತಲುಪಿದಾಗ ಮಧ್ಯಾಹ್ನವಾಗಿತ್ತು. ಸ್ನಾನ ಹಾಗೂ ಊಟದ ನಂತರ ನಮ್ಮ ಸಫಾರಿ ಆರಂಭವಾಯಿತು. ಬಂಗಾರ ಬಣ್ಣದ ಮೃದುವಾದ ಹುಲ್ಲು ಬೆಳೆದ, ಬೇಲಿಯಿಲ್ಲದ ಈ ಪ್ರದೇಶವು ಅತೀ ಹೆಚ್ಚು ಕಾಡುಪ್ರಾಣಿಗಳ ಸಾಂದ್ರತೆಗೆ ಹೆಸರುವಾಸಿಯಾಗಿದೆ. ನೈರುತ್ಯ ಕೀನ್ಯಾದ ಈ ಶ್ರೀಮಂತ ಜೀವವೈವಿಧ್ಯ ತಾಣ 1500 ಚ.ಕಿಮೀ ವಿಸ್ತೀರ್ಣ ಹೊಂದಿದ್ದು, ಕಣ್ಣಿಗೆ ಕಾಣುವಷ್ಟು ದೂರದ ಬೆಟ್ಟ-ಗುಡ್ಡಗಳ ವರೆಗೆ ಹರಡಿಕೊಂಡಿರುವ ಹುಲ್ಗಾಡು ಪ್ರದೇಶ, ಅಲ್ಲಲ್ಲಿ ಬೆಳೆದು ನಿಂತ ಪುಟ್ಟಪುಟ್ಟ ಗಿಡಗಳು ವನ್ಯಜೀವಿಗಳಿಗೆ ಆಸರೆಯಾಗಿವೆ.

ಇದನ್ನೂ ಓದಿ: ಮೈಸೂರಿನಲ್ಲಿ ಬೆಕ್ಕುಗಳು!

ಅದು ವಿಸ್ಮಯ ಲೋಕ

ಎತ್ತರಿಸಿದ ಮೇಲ್ಛಾವಣಿಯ ಸಫಾರಿ ವಾಹನ ಏರು-ತಗ್ಗಿನ ಮಾರ್ಗದಲ್ಲಿ ಸಾಗುತ್ತಿದ್ದಂತೆಯೇ ನಮ್ಮ ಗೈಡ್ ರೂಬೆನ್ ಗೆ ಚಿರತೆಯೊಂದು ಹುಲ್ಲೆಯನ್ನು ಬೇಟೆಯಾಡುತ್ತಿರುವ ಸಂದೇಶ ವಾಕಿ-ಟಾಕಿಯಲ್ಲಿ ಬಂತು. ನಮ್ಮ ವಾಹನ ರಭಸದಿಂದ ಸೂಚಿತ ಮಾರ್ಗದತ್ತ ನುಗ್ಗಿತು. ನಾವು ಸ್ಥಳಕ್ಕೆ ತಲುಪುವ ಹೊತ್ತಿಗೆ ಏಳೆಂಟು ಸಫಾರಿ ವಾಹನಗಳು ಮರದ ಸುತ್ತಲೂ ಜಮಾಯಿಸಿದ್ದವು. ಛತ್ರಿ ಆಕಾರದ ಮರದಿಂದ 30 ಅಡಿ ದೂರದಲ್ಲಿ ನಿಂತು ಮರದತ್ತ ಎಲ್ಲರೂ ದುರ್ಬಿನ್ ಹಿಡಿದು ನೋಡುತ್ತಿದ್ದರು. ನಾವು ಆ ದೃಶ್ಯಕ್ಕೆ ಕಣ್ಣಾದೆವು. ನಿಸ್ತೇಜವಾಗಿದ್ದ ಹುಲ್ಲೆಯ ಕುತ್ತಿಗೆಯನ್ನು ಚಿರತೆ ಕಚ್ಚಿಕಚ್ಚಿ ತಿನ್ನುತ್ತಿರುವ ದೃಶ್ಯ ದಾರುಣವಾಗಿತ್ತು. ಮರದ ಕೊಂಬೆಯಲ್ಲಿ ತಂದಿಟ್ಟ ಬೇಟೆಪ್ರಾಣಿಯ ರಕ್ತ ನೆಲಕ್ಕೆ ತೊಟ್ಟಿಕ್ಕುತ್ತಿತ್ತು. ಸುತ್ತಲೂ ನೆರೆದ ಪ್ರವಾಸಿಗರನ್ನು ನೋಡದೇ ಚಿರತೆ ತನ್ನ ಬಾಯಿಗೆ ಬಿಡುವಿಲ್ಲದ ಕೆಲಸ ನೀಡುವಲ್ಲಿಮಗ್ನವಾಗಿತ್ತು. ಈ ಘಟನೆಯನ್ನು ದೂರದಿಂದ ಕ್ಯಾಮೆರಾ ಜೂಮ್ ಮಾಡಿ ಕ್ಲಿಕ್ಕಿಸಿ ಅಲ್ಲಿಂದ ಮುಂದೆ ಸಾಗುತ್ತಿದ್ದಂತೆಯೇ, ತಮ್ಮ ಗುಂಪಿನಿಂದ ಬೇರ್ಪಟ್ಟ ಸದಸ್ಯನೊಬ್ಬ ಚಿರತೆಯ ಸಂಚಿಗೆ ಬಲಿಯಾದ ಸಂಗತಿಯ ಅರಿವಿಲ್ಲದೆ ಹುಲ್ಲೆಗಳ (ಆಂಟಿಲೋಪ) ಪ್ರಭೇದಗಳಾದ ಗಸೇಲ್, ನಂಗರ್, ಇಂಪಾಲಾ, ಯುಡೋಕಾಸಗಳು ಗುಂಪುಗುಂಪಾಗಿ ಹುಲ್ಲು ಮೇಯುತ್ತಾ ಚೆಲ್ಲಾಟವಾಡುತ್ತಿದ್ದವು.

Untitled design (76)

ನಮ್ಮದುರಿಗೆ ಬಂದ ಸಫಾರಿ ಚಾಲಕನೊಬ್ಬ ಸನಿಹದ ಗುಡ್ಡದತ್ತ ಕೈ ಮಾಡಿ ಆನೆಗಳ ಇರುವನ್ನು ತಿಳಿಸಿದ. ಅಳಿವಿನಂಚಿನಲ್ಲಿರುವ ಆಫ್ರಿಕನ್ ಆನೆಗಳತ್ತ ನಮ್ಮ ಚಿತ್ತ ಹರಿಯಿತು. ದೈತ್ಯಾಕಾರದ ಬೂದು ಬಣ್ಣದ, ದೊಡ್ಡ ಕಿವಿಗಳ ಹತ್ತಾರು ಆನೆಗಳ ಸಾಲು ತಾವು ನಡೆದದ್ದೇ ದಾರಿ ಎನ್ನುವಂತೆ ಗಂಭೀರವಾಗಿ ಹೆಜ್ಜೆಹಾಕುತ್ತಿದ್ದವು. ಅವುಗಳ ಸೊಂಡಿಲು, ಕಾಲುಗಳು ಬಳಿ ವಿಭಿನ್ನ ಗಾತ್ರದ ಆನೆಮರಿಗಳು ಚೆಲ್ಲಾಟವಾಡುತ್ತ ಹಿಂದೆ ಮುಂದೆ ಗುದಪಡೆಯನ್ನು ಅನುಸರಿಸುತ್ತಿದ್ದವು. ಸೂರ್ಯ ಗೂಡು ಸೇರುವ ಸಮಯವಾಗಿದ್ದರಿಂದ ವಾಹನವನ್ನು ಲಾಡ್ಜ್ ನತ್ತ ಒಯ್ಯುವುದಾಗಿ ಗೈಡ್ ತಿಳಿಸುತ್ತಾ, ಸಂಜೆ ಆರುಗಂಟೆಯ ನಂತರ ಸಫಾರಿ ಸಂಚಾರ ನಿಷೇಧಿಸಲಾಗಿದೆಯೆಂದ. ಮಣ್ಣಿನ ಉಬ್ಬುತಗ್ಗು ರಸ್ತೆಯಲ್ಲಿ ಕುಲುಕಾಡುತ್ತ ಮರಳಿ ಸಾಗುತ್ತಿದ್ದಾಗ ಪಕ್ಕದ ಹುಲ್ಲಿನ ಮೈದಾನದಿಂದ ಅನಿರೀಕ್ಷಿತವಾಗಿ ಬಂದ ನೂರಾರು ಕಪ್ಪುಪಟ್ಟಿಯ ಜೀಬ್ರಾಗಳು ಯೋಧರಂತೆ ಮುಕ್ತವಾಗಿ ರಸ್ತೆಗೆ ಸಾಗಿಬಂದಾಗ ನಮ್ಮ ವಾಹನಕ್ಕೆ ಬ್ರೇಕ್ ಬಿತ್ತು. ಬಿಳಿ ಕ್ಯಾನ್ವಾಸ್ ಮೇಲೆ ಅಳತೆ ಮಾಡಿದಂತೆ ಕಪ್ಪುಪಟ್ಟಿ ಚಿತ್ರಿಸಿದ್ದಂತೆ ಕಂಡ ಇವುಗಳ ಆಕರ್ಷಕ ನೋಟ ಮನಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.

ಮಾರಾ ನದಿಯ ಬೆಳದಿಂಗಳು

ಮರುದಿನ ಬೆಳಗ್ಗೆ ಸೂರ್ಯೋದಯದೊಂದಿಗೆ ನಮ್ಮ ಪಯಣ ಆರಂಭ ಗೊಂಡಿತು. ಮೊದಲಿಗೆ ನೇರವಾಗಿ ಪ್ರಸಿದ್ಧ ʼಮಾರಾʼನದಿಯ ತೀರಕ್ಕೆ ಬಂದೆವು. ನದಿಯ ಪಾತ್ರದಲ್ಲಿನ ಬಂಡೆಗಳ ಮೇಲೆ ಬಿಸಿಲಿಗೆ ಮೈ ಕಾಯಿಸುತ್ತ ನಿಶ್ಚಿಂತೆಯಿಂದ ಮಲಗಿದ ಹಲವಾರು ಮೊಸಳೆಗಳನ್ನು ನೋಡುವ ಅವಕಾಶ ನಮಗಲ್ಲಿ ಸಿಕ್ಕಿತು. ನದಿಯ ದಂಡೆಯಲ್ಲಿ ಅರಣ್ಯ ಇಲಾಖೆ ಮೊಸಳೆಗಳ ಇರುವಿಕೆಯ ಎಚ್ಚರಿಕೆಯ ಫಲಕ ಹಾಕಿದ್ದು ಜೊತೆಗೆ ಮೊಸಳೆಗಳಿಗೆ ಬಲಿಯಾದ ಪ್ರಾಣಿಗಳ ಆಸ್ತಿ ಪಂಜರಗಳನ್ನು ಪ್ರದರ್ಶನಕ್ಕೆ ಇಟ್ಟದ್ದನ್ನು ನೋಡಿ ಆಶ್ಚರ್ಯವಾಯಿತು. ನಂತರ ಈ ಪ್ರದೇಶದ ನಿಕ್ಷೇಪಗಳೆಂದು ಬಣ್ಣಿಸಲಾದ ಘೇಂಡಾ ಮೃಗಗಳ ತಾಣದತ್ತ ವಾಹನ ಚಲಿಸಿತು. ಕೊಳವೊಂದರಲ್ಲಿ ಸೋಮಾರಿಗಳಂತೆ ನಿಧಾನವಾಗಿ ಚಲಿಸುತ್ತ, ನೀರೊಳಗೆ ಮುಳುಗು ಹಾಕಿ, ತಲೆ ಅಲ್ಲಾಡಿಸಿ ಡರ್..ಡರ್..ಶಬ್ದ ಹೊರಡಿಸುತ್ತ ಮೇಲೆದ್ದು ಉಸಿರಾಡುವ ದೈತ್ಯಾಕಾರದ ಘೇಂಡಾಮೃಗ ಕಂಡಾಗ ನಮಗೆಲ್ಲಕುತೂಹಲ ಇಮ್ಮಡಿಯಾಯಿತು. ಕುರುಚಲು ಕಾಡಿನಮಾರ್ಗದಲ್ಲಿ ಸಾಗುತ್ತಿದ್ದಂತೆಯೇ ಹುಲ್ಲಿನ ಪೊದೆಯಲ್ಲಿ ನಿತಾಂತವಾಗಿ ಮಲಗಿದ ಆಫ್ರಿಕನ್ ಸಿಂಹಗಳನ್ನು ರೂಬೆನ್ ತೋರಿಸಿದ. ಈ ಪರಭಕ್ಷಕ ಪ್ರಾಣಿರಾತ್ರಿ ಬೇಟೆಯಾಡಿ ಈಗ ವಿರಾಮದಲ್ಲಿವೆ. ಮಧ್ಯಾಹ್ನದ ನಂತರವೇ ಅವುಗಳು ಎದ್ದೇಳುವುದಾಗಿ ತಿಳಿಸಿ, ಫೊಟೋ ಕ್ಲಿಕ್ಕಿಸಲು ಅವುಗಳ ಸನಿಹಕ್ಕೆ ಕರೆದೊಯ್ದ. ಅಲ್ಲಿಂದ ಆಫ್ರಿಕನ್ ಕಾಡೆಮ್ಮೆ(ಕೆಪಬಫೇಲೋ) ವಾಸಸ್ಥಾನದತ್ತ ಸಾಗಿದ. ಅರ್ಧವೃತ್ತಾಕಾರದ ಬಾಗಿದ ಕೊಂಬಿನ ದೊಡ್ಡಗಾತ್ರದ ಅನೇಕ ಎಮ್ಮೆಗಳು ಬಯಲಲ್ಲಿ ಹುಲ್ಲು ಮೇಯುತ್ತಿದ್ದವು. ಸದಾ ಗುಂಪುಗೂಡಿ ಸಂಚರಿಸುವ ಈ ವಿಶಿಷ್ಠ ಕಾಡೆಮ್ಮೆಗಳನ್ನು ಸನಿಹದಿಂದ ನೋಡುವ ಅವಕಾಶ ದೊರೆಯಿತು. ಶಾಂತ ಸ್ವಭಾವದ ಜಿರಾಫೆಗಳು ಕತ್ತು ಎತ್ತುತ್ತಾ ನಮ್ಮೆದುರಿಗೆ ಸಾಕ್ಷಾತ್ತಾಗಿ ಬಂದಿದ್ದು ನೋಡಿ ನಮಗೆ ಎಲ್ಲಿಲ್ಲದ ಹರ್ಷವಾಗಿತ್ತು. ಸಫಾರಿ ಸಂಚಾರ ಮಾರ್ಗದಲ್ಲಿ ರಣಹದ್ದುಗಳು, ಆಸ್ಟ್ರಿಚ್, ಕೋರಿಬಸ್ಟರ್ಡ್, ಕಿರೀಟದ ಕ್ರೇನ್ ಗಳು, ಹೈನಾಗಳು, ಕತ್ತೆಕಿರುಬ, ಮಂಗಗಳು, ಬ್ಯಾಟ್ಇಯರ್ಡ್, ಮುಳ್ಳುಹಂದಿ, ಬಬೂನ್ ವಾಟರ್ ಬಕ್ಸ್, ರೆಡ್ ಬಕ್ಸ್, ಕೊಕ್ಕರೆಗಳು, ಸೇರಿದಂತೆ ನೂರಾರು ಪ್ರಾಣಿ-ಪಕ್ಷಿಗಳನ್ನು ರೂಬೆನ್ ಪರಿಚಯಿಸಿದ.

ಇಲ್ಲಿಯ ಮತ್ತೊಂದು ಆಕರ್ಷಣೆ ಮಸಾಯ್ ಬುಡಕಟ್ಟು ಜನಾಂಗದ ವೈವಿಧ್ಯ. ಪುರುಷರು ಕೆಂಪು ನಿಲುವಂಗಿ ಮತ್ತು ಮಣಿಗಳಿಂದ ಅಲಂಕರಿಸಿದ ಆಭರಣಗಳನ್ನು, ಕಿರೀಟಗಳನ್ನು ಧರಿಸುತ್ತಾರೆ. ಕೈಯಲ್ಲಿ ಈಟಿ/ಕೋಲುಗಳನ್ನು ಹಿಡಿದಿರುತ್ತಾರೆ. ಇದು ಅವರ ರಕ್ಷಣೆ ಹಾಗೂ ಆಫ್ರಿಕನ್ ಯೋಧರ ಧೈರ್ಯವನ್ನು ಸಂಕೇತಿಸುವದಂತೆ. ಮಹಿಳೆಯರು ವರ್ಣರಂಜಿತ ಮೇಲುಹೊದಿಕೆಯ ಉಡುಪು, ಕೊರಳಿಗೆ ಮುತ್ತಿನ ವೃತ್ತಾಕಾರದ ಸರ, ಕಿವಿಯೋಲೆ ಧರಿಸಿದ ನೋಟ ಗಮನಾರ್ಹವಾಗಿತ್ತು

Untitled design (77)

ಇ.ಟಿ.ಎ.ಅಥರೈಸೇಷನ್

ವಿದೇಶ ಪ್ರವೇಶಕ್ಕೆ ಸಾಮಾನ್ಯವಾಗಿ ವೀಸಾ ಕಡ್ಡಾಯವಾಗಿರುತ್ತದೆ. ಆದರೆ ಕೀನ್ಯಾಕ್ಕೆ ಬರುವವರಿಗೆ ಇಲ್ಲಿಯ ಸರಕಾರ ವೀಸಾ ಬದಲಾಗಿ ಎಲೆಕ್ಟ್ರಾನಿಕ್ ಟ್ರಾವೆಲ್ ಅಥರೈಸೇಷನ್ (ಇ.ಟಿ.ಎ) ಎಂಬ ಸುಲಭವಾದ ಆನ್ ಲೈನ್ ಫ್ಲಾಟ್ ಫಾರ್ಮ್ ಪರಿಚಯಿಸಿದೆ. ಪ್ರವಾಸಿಗರು ಆನ್ ಲೈನ್ ಮೂಲಕ ತಮ್ಮಮಾಹಿತಿ ಹಾಗೂ ಪಾಸ್ ಪೋರ್ಟ್ ಮತ್ತು ಇತರ ದಾಖಲೆಗಳನ್ನು ಒದಗಿಸಿ ಪ್ರವೇಶ ಪತ್ರ ಪಡೆಯಬೇಕು. ಈ ದೇಶಕ್ಕೆ ಹೋಗುವವರು ಬ್ಲೂಫೀವರ್ ಪ್ರತಿಬಂಧಕ ಚುಚ್ಚುಮದ್ದನ್ನು ನಮ್ಮ ರಾಜ್ಯದ ಅಧಿಕೃತ ಸರಕಾರಿ ಆಸ್ಪತ್ರೆಗಳಿಂದ ಪಡೆದು ಪ್ರಮಾಣಪತ್ರ ಪಡೆಯಬೇಕು.

ಮರೆಯಲಾರದ ಅನುಭವ

ಮಸಾಯ್ ಮಾರಾ ಸಫಾರಿ ಪ್ರವಾಸವು ಪ್ರಕೃತಿಯ ಭವ್ಯತೆಯೊಂದಿಗೆ ಮರೆಯಲಾಗದ ಅನುಭವ ನೀಡುತ್ತದೆ. ಇಲ್ಲಿ ನಡೆಯುವ ವಿಶ್ವದ ಅತ್ಯಂತ ಪ್ರಭಾವಶಾಲಿ ವನ್ಯಜೀವಿಗಳ ಮಹಾ ವಲಸೆ ವೀಕ್ಷಣೆಯೊಂದಿಗೆ ಅಪರೂಪದ ಐದು ದೊಡ್ಡ ಪ್ರಾಣಿಗಳನ್ನು ನೋಡುತ್ತಲೇ ಆಫ್ರಿಕಾದ ಕಾನನ ಸೌಂದರ್ಯದ ಪರಿಚಯವಾಗುತ್ತದೆ. ಇಲ್ಲಿರುವ ಗ್ರೇಟ್ ವ್ಯಾಲಿ ಪಯಣ, ವಿಶಾಲವಾದ ಸವನ್ನಾ ಹುಲ್ಗಾಡಿನ ನೋಟದ ಜೊತೆಗೆ ಶ್ರೀಮಂತ ಮಸಾಯ್ ಸಂಸ್ಕೃತಿಯ ಅಂಗಳದಲ್ಲಿ ಪ್ರಾಣಿಗಳ ಸಾಮ್ರಾಜ್ಯದಲ್ಲಿ ಸಂಚರಿಸುವುದು ಕೇವಲ ಪ್ರವಾಸವಲ್ಲಅದು ಜೀವಮಾನದ ಅನುಭವ.

ಇದನ್ನೂ ಓದಿ: ಜಗತ್ತು ಸುತ್ತುವ ಸಂಗೀತ ಅವಳಲ್ಲೇ ಜಗತ್ತು ಕಂಡ ಪ್ರಸನ್ನ

ಮಸಾಯ್ ಮಾರಾ: ದೇವರು ಕೊಟ್ಟ ವರ

ʼಮಸಾಯಿʼ ಎಂಬ ಬುಡಕಟ್ಟು ಜನಾಂಗದವರು ಬಹಳ ಹಿಂದೆ ನೈಲ್ ನದಿಯ ಜಲಾನಯನ ಪ್ರದೇಶದಿಂದ ಇಲ್ಲಿಗೆ ವಲಸೆ ಬಂದು ವಾಸಿಸುತ್ತಿದ್ದರು. ಅವರ ಗೌರವಾರ್ಥವಾಗಿ “ಮಸಾಯ್” ಎಂಬ ಪದವನ್ನು ಹಾಗೂ ಕೀನ್ಯಾದ ನೈರುತ್ಯದಲ್ಲಿರುವ ತಾಂಜೇನಿಯಾದ ಸೆರೆಂಗೆಟ್ಟಿ ರಾಷ್ಟ್ರೀಯ ಉದ್ಯಾನವನ್ನು ನರೋಕಾ ಕೌಂಟಿಯಲ್ಲಿರುವ “ಮಾರಾ” ನದಿ ವಿಭಜಿಸುತ್ತದೆ. ಆದ್ದರಿಂದ ಈ ಎರಡು ವಿಶೇಷಣಗಳನ್ನುಸೇರಿಸಿ ಈ ಪ್ರದೇಶವನ್ನು“ ಮಸಾಯ್ ಮಾರಾ” ರಾಷ್ಟ್ರೀಯ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ಇಲ್ಲಿ ವನ್ಯಪ್ರಾಣಿಗಳ ಬೇಟೆ ನಿಷೇಧಿಸಲಾಗಿದೆ. ಈ ಸಂರಕ್ಷಿತ ಪ್ರದೇಶದಲ್ಲಿರುವ ಮಸಾಯಿ ಬುಡಕಟ್ಟು ಜನರಿಗೆ ಈ ಪ್ರಾಣಿಲೋಕವು ಕೇವಲ ವನ್ಯಜೀವಿ ತಾಣವಲ್ಲ ಇದು “ದೇವರು ಅವರಿಗಾಗಿ ಕೊಟ್ಟವರ; ಮಾನವ ಮರೆತು ಬಿಟ್ಟಿರುವ ನಿಸರ್ಗಶಾಸ್ತ್ರʼ. ಎಂದು ಅವರು ಗೌರವಿಸುತ್ತಾರೆಂದು ಕಳೆದ ಹತ್ತು ವರ್ಷಗಳಿಂದ ಈ ಪ್ರದೇಶದಲ್ಲಿ ಸಫಾರಿ ವಾಹನ ಚಾಲಕನಾಗಿರುವ ರೂಬೆನ್ ತಿಳಿಸಿದ.

Untitled design (74)

ಹಾಟ್ ಏರ್ ಬಲೂನ್ ಸಫಾರಿ

ಮಸಾಯ್ ಮಾರಾ ಸಫಾರಿ ಪ್ರಕೃತಿ ಪ್ರಿಯರಿಗೆ ಮತ್ತು ವನ್ಯಜೀವಿ ಪ್ರೇಮಿಗಳಿಗೆ ಒಂದು ಅಪರೂಪದ ಅನುಭವವನ್ನು ನೀಡುತ್ತದೆ. ಈ ಪ್ರದೇಶದ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಹಾಟ್ ಏರ್ ಬಲೂನ್ ನಲ್ಲಿ ಸಂಚರಿಸಬೇಕು. ಸೂರ್ಯೋದಯಕ್ಕೆ ಸರಿಯಾಗಿ ಬಿಸಿಗಾಳಿ ಬಲೂನ್ ಪ್ರವಾಸಿಗರನ್ನು ಹೊತ್ತು ಮೇಲೇರುತ್ತಿದ್ದಂತೆ ಸೂರ್ಯನ ಗುಲಾಬಿ ಕಿರಣಗಳು ಆಕಾಶದಾದ್ಯಂತ ಮಿನುಗುತ್ತವೆ. ಬಲೂನ್ ನ ಕೆಳಗೆ ನೇತುಹಾಕಿದ ಬುಟ್ಟಿಯಲ್ಲಿ ನಿಂತು ವನ್ಯಜೀವಿಗಳ ವೀಕ್ಷಣೆಮಾಡುತ್ತ ತೇಲುವ ಒಂದು ಗಂಟೆಗಳ ಅನುಭವ ಸ್ಮರಣೀಯವಾದು. ಭೂದೃಶ್ಯದ ವೈಮಾನಿಕ ಪಕ್ಷಿನೋಟದ ಈ “ಸಾಹಸ ಸಫಾರಿ” ರೋಮಾಂಚಕಾರಿಯಾಗಿರುತ್ತದೆ. ವಿಸ್ತಾರವಾದ ಸವನ್ನಾ,ಇಳಿಜಾರಿನಲ್ಲಿ ಹರಿದ ನದಿ, ಬೆರಗುಗೊಳಿಸುವ ವನ್ಯಪ್ರಾಣಿಗಳ ಸಂಚಾರವನ್ನು ಆನಂದಿಸಬಹುದು. ಉಪಾಹಾರದ ವ್ಯವಸ್ಥೆಯು ಇರುತ್ತದೆ. ಈ ಹಾರಾಟದ ಶುಲ್ಕವೂ ಸಹ ದುಬಾರಿಯಾಗಿದ್ದು, ಒಬ್ಬರಿಗೆ 450 ಡಾಲರ್(45000 ರು.ಗಳು)ಶುಲ್ಕವನ್ನುನೀಡಬೇಕಾಗುತ್ತದೆ.

ಬಿಗ್ ಫೈವ್

ಬಿಗ್ ಫೈವ್ ಎಂಬ ಪದವನ್ನುಮಸಾಯ್ ಮಾರಾದೊಂದಿಗೆ ಗುರುತಿಸಲಾಗುತ್ತಿದೆ. ಆಫ್ರಿಕಾದಲ್ಲಿ ಬೇಟೆಯಾಡಲು ಅತ್ಯಂತ ಕಷ್ಟಕರ ಮತ್ತು ಭಯಂಕರ ಎಂದು ಪರಿಗಣಿಸಲಾಗಿದ್ದ ಐದು ದೊಡ್ಡಪ್ರಾಣಿಗಳನ್ನು ಉಲ್ಲೇಖಿಸಲು ಈ ಪದಗಳನ್ನು ಬಳಸುತ್ತಾರೆ. ಈ ಪಂಚಪ್ರಾಣಿಗಳು ಇಲ್ಲಿಯ ವಿಶೇಷತೆ. ಇದಕ್ಕಾಗಿ ಪ್ರತಿವರ್ಷ ದೇಶವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ನೇರಬೆನ್ನು, ದೊಡ್ಡಕಿವಿ, ನೋಡಲು ವಿಭಿನ್ನವಾಗಿರುವ, ದೈತ್ಯಾಕಾರದ ಆಫ್ರಿಕನ್ ಆನೆ; ಸಂಚಿನಕಣ್ಣು, ಮಿಂಚಿನ ಓಟದ ಪರಭಕ್ಷಕ ಪ್ರಾಣಿಚಿರತೆ; ಸವನ್ನಾ ಪ್ರದೇಶದ ರಾಜನೆಂದೇ ಪ್ರಸಿದ್ಧವಾದ ಗಂಭೀರ ನಡಿಗೆಯ ಸಿಂಹ; ವಿರಳವಾಗಿರುವ ಪುರಾತನ ಬಲಿಷ್ಟ ಸಸ್ಯಾಹಾರಿ ಪ್ರಾಣಿ ಘೇಂಡಾಮೃಗ (ರೈನೋಸಾರಸ್) ಹಾಗೂ ಶಕ್ತಿ ಮತ್ತು ಸಹನೆಯ ಸಂಕೇತವಾಗಿರುವ ಕಾಡೆಮ್ಮೆ(ಕೇಪಬಫೇಲೋ)- ಈ ಐದು ಮಹಾನ್ ಸಸ್ತನಿ ಪ್ರಾಣಿಗಳನ್ನು ಈ ಸಫಾರಿಯಲ್ಲಿ ಕಣ್ತುಂಬಿಕೊಳ್ಳಬಹುದು. ಈ ಪ್ರಾಣಿಗಳ ವಿಭಿನ್ನ ಗಾತ್ರದ ಕಟ್ಟಿಗೆಯ ಸ್ಮರಣಿಕೆಗಳು ಈ ಪ್ರದೇಶದ ಪ್ರವಾಸದುದ್ದಕ್ಕೂ ಮಾರಾಟಕ್ಕೆ ಲಭ್ಯವಾಗುತ್ತವೆ.

Untitled design (73)

ಮಹಾವಲಸೆ

ಶ್ರೀಮಂತ ಜೀವ ವೈವಿಧ್ಯ ಮತ್ತು ಅನುಪಮ ನಿಸರ್ಗ ಸೌಂದರ್ಯಕ್ಕೆ ಹೆಸರುವಾಸಿಯಾದ ಮಸಾಯ್ ಮಾರಾದಲ್ಲಿ ಪ್ರತಿವರ್ಷ ಜರುಗುವ “ಮಹಾವಲಸೆ” (ಗ್ರೇಟ್ ಮೈಗ್ರೇಶನ್) ಎಂಬ ವನ್ಯಪ್ರಾಣಿಗಳ ಜೀವಜಾತ್ರೆ ಇಲ್ಲಿಯ ಬಹು ಪ್ರಸಿದ್ಧ ಕಾರ್ಯಕ್ರಮ. ಇದು ಜಗತ್ತಿನ ಕಾಡು ಪ್ರಾಣಿಗಳ ವಲಸೆಯ ಬಹುದೊಡ್ಡ ಘಟನೆ ಎಂದೇ ಗುರುತಿಸಲಾಗುತ್ತದೆ. ಪ್ರತಿವರ್ಷ ಜುಲೈ ಮತ್ತು ಅಕ್ಟೋಬರ್ ನಡುವೆ ಸಂಭವಿಸುವ ಈ ಸಂಚಾರದ ಸಂದರ್ಭದಲ್ಲಿ ಲಕ್ಷಾಂತರ ಕಾಡುಮೃಗಗಳು ದಕ್ಷಿಣ ಸೆರೆಂಗೆಟಿ ಅರಣ್ಯ ಪ್ರದೇಶದಿಂದ ತಾಜಾ ಹಸಿರು ಹುಲ್ಲುಗಾವಲುನ್ನು ಹುಡುಕುತ್ತಾ ಮಸಾಯ್ ಮಾರಾದತ್ತ ಬರುತ್ತವೆ. ಈ ವಲಸೆಯಲ್ಲಿ ವಿವಿಧ ಕಾಡುಪ್ರಾಣಿಗಳೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಜಿಂಕೆಗಳು(ಗಸೆಲ್), ಹುಲ್ಲೆಗಳು, ಇಂಪಾಲಾಗಳು, ಜೀಬ್ರಾಗಳಲ್ಲದೇ ಜನವರಿ ಮಾರ್ಚ್ ತಿಂಗಳಲ್ಲಿ ಹುಟ್ಟಿದ ಪ್ರಾಣಿಕರುಗಳು ಈ ದಿಬ್ಬಣದಲ್ಲಿರುತ್ತವೆ. ಈ ಪ್ರಾಣಿಗಳು ತಮ್ಮ ವಲಸೆ ಮಧ್ಯದಲ್ಲಿರುವ ಮೊಸಳೆಗಳು ಇರುವ ಅಪಾಯಕಾರಿ “ಮಾರಾ” ನದಿ ದಾಟಬೇಕಾಗುತ್ತದೆ.ಅವುಗಳಿಂದ ತಪ್ಪಿಸಿಕೊಂಡು ದಡ ಸೇರುವ ಹೊತ್ತಿಗೆ ಹಲವು ಪ್ರಾಣಿಗಳು ಮೊಸಳೆಗಳ ಹೊಟ್ಟೆ ಹಂಬಲಕ್ಕೆ ಆಹಾರವಾಗುತ್ತವೆ. ಅನೇಕ ಪ್ರಾಣಿಗಳು ತಮ್ಮ ಹಸಿದ ಬದುಕಿಗಾಗಿ ಮೊಸಳೆಗಳ ಕಣ್ಣಂಚನ್ನು ತಪ್ಪಿಸಿಕೊಂಡು ಮಸಾಯ್ ಮಾರಾ ನೆಲೆಗೆ ಸೇರಿ ಬದುಕಿಗೆ ಹಾದಿ ಕಂಡುಕೊಳ್ಳುತ್ತವೆ. ಪ್ರಾಣಿಸಾಮ್ರಾಜ್ಯದ ಮಹಾವಲಸೆಯ ಈ ಕೌತುಕ ಹಾಗೂ ವಿಶಿಷ್ಟ ಘಟನೆ ವೀಕ್ಷಿಸಲು ಈ ಅವಧಿಯಲ್ಲಿ ದೇಶ, ವಿದೇಶದ ಅನೇಕ ಪ್ರವಾಸಿಗರು ಹಾಗೂ ಛಾಯಾಗ್ರಾಹಕರು ಈ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಈ ಸೀಸನ್ ಅವಧಿಯಲ್ಲಿಈ ಅರಣ್ಯಪ್ರವೇಶದ ಶುಲ್ಕ, ವಾಸ್ತವ್ಯದ ವೆಚ್ಚ, ಸಫಾರಿ ಶುಲ್ಕ,ವಿಮಾನ ದರಗಳು ಅಧಿಕವಾಗಿರುತ್ತವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಉತ್ತರ ಕರ್ನಾಟಕದ ರಂಗನತಿಟ್ಟು...

Read Previous

ಉತ್ತರ ಕರ್ನಾಟಕದ ರಂಗನತಿಟ್ಟು...

ಇದು 1753ರ ಮನೆ, ಗೊತ್ತಿರಲಿ!

Read Next

ಇದು 1753ರ ಮನೆ, ಗೊತ್ತಿರಲಿ!