Friday, October 3, 2025
Friday, October 3, 2025

ಈ ವಿಶೇಷ ತಾಣಗಳಿಗೆ ಒಂದು ದಿನ ಪ್ರವಾಸ ಕೈಗೊಳ್ಳಿ..

ಕನಕಪುರ, ಮೈಸೂರು, ಚಿಕ್ಕಬಳ್ಳಾಪುರ, ಮೇಳುಕೋಟೆ, ಶ್ರವಣಬೆಳಗೊಳ ಹೀಗೆ ಬೆಂಗಳೂರು ಆಸುಪಾಸಿನಲ್ಲಿ ವಾರಾಂತ್ಯದ ಸುತ್ತಾಟಕ್ಕೆ ವಿಭಿನ್ನವಾದ ಪ್ರವಾಸಿತಾಣಗಳಿವೆ.

ಬೆಂಗಳೂರಿಗರು ವಾರಾಂತ್ಯದಲ್ಲಿ ಸುತ್ತಮುತ್ತಲಿಗೆ ಪ್ರದೇಶಗಳ ಭೇಟಿಗೆ ಮುಂದಾಗುತ್ತಾರೆ. ಸುತ್ತಲಿನ ದೇವಾಲಯಗಳು, ಚಾರಣಕ್ಕೆ ಸೂಕ್ತ ಜಾಗ ಹೀಗೆ ಪ್ರಕೃತಿಯ ಮಡಿಲಲ್ಲಿ ಒಂದಿಡೀ ದಿನವನ್ನು ಕಳೆಯುವ ಮೂಲಕ ವಾರದ ಆರಂಭಕ್ಕೆ ಚುರುಕಿನಿಂದ ಸಿದ್ಧರಾಗುತ್ತಾರೆ. ಹಾಗಾದರೆ ಬೆಂಗಳೂರಿನ ಬಳಿ ಇರುವ ಪ್ರವಾಸಿ ತಾಣಗಳು ಯಾವುದು ? ಸ್ನೇಹಿತರೊಂದಿಗೆ, ಕುಟುಂಬದ ಜೊತೆಗೆ ಇಲ್ಲವಾದರೆ ಸೋಲೋ ರೈಡ್‌ ಗೆ ಸೂಕ್ತವಾದ ಸ್ಥಳಗಳ ಮಾಹಿತಿ ಇಲ್ಲಿದೆ.

ಮೈಸೂರು:

ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಪಾರಂಪರಿಕ ನಗರಿ, ಸ್ವಚ್ಛನಗರಿ ಹೀಗೆ ಸಾಕಷ್ಟು ಬಿರುದುಗಳನ್ನು ಹೊಂದಿರುವ ಮೈಸೂರಿಗೆ ವಾರಾಂತ್ಯದ ಪ್ರವಾಣ ಹಿತಕರವಾಗಿರಲಿದೆ. ಯಾಕೆಂದರೆ ಇಲ್ಲಿ ಶ್ರೀಮಂತ ಇತಿಹಾಸದ ಜೊತೆಗೆ ಪುರಾತತ್ವ, ವಾಸ್ತುಶಿಲ್ಪ ಮತ್ತು ಪರಂಪರೆಯ ಮೌಲ್ಯವನ್ನು ಚಿತ್ರಿಸುವ ಹಲವಾರು ಪ್ರಾಗೈತಿಹಾಸಿಕ ಸ್ಥಳಗಳಿವೆ. ಮೈಸೂರಿನ ಭವ್ಯ ಅರಮನೆ, ಮೈಗಾಲಯ, ಚಾಮುಂಡಿ ಬೆಟ್ಟ, ರೈಲ್ವೇ ಮ್ಯೂಸಿಯಂ, ವ್ಯಾಕ್ಸ್‌ ಮ್ಯೂಸಿಯಂ, ದೇವರಾಜ ಮಾರುಕಟ್ಟೆ, ಶುಕ ವನ ಹೀಗೆ ಸಾಲು ಸಾಲು ಪ್ರವಾಸಿ ತಾನಗಳಿಗೆ ಭೇಟಿ ನೀಡಿ ವಾರಾಂತ್ಯವನ್ನು ಎಂಜಾಯ್‌ ಮಾಡಬಹುದು.

mysore-1-nilendu-banerjee

ಮೇಲುಕೋಟೆ:

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ವಿಶ್ವ ವಿಖ್ಯಾತ ಪ್ರವಾಸಿ ತಾಣ ಮೇಲುಕೋಟೆಯು ರಾಜ್ಯದಲ್ಲಿನ ಅತ್ಯಂತ ಪ್ರಮುಖ ಧಾರ್ಮಿಕ, ಪಾರಂಪರಿಕ ಹಾಗೂ ಐತಿಹಾಸಿಕ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.ಇಲ್ಲಿನ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯ, ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ, ಪಂಚಕಲ್ಯಾಣಿ, ಅಕ್ಕತಂಗಿ ಕೊಳ, ರಾಯಗೋಪುರ, ಧನುಷ್ಕೋಟಿ ಮುಂತಾದ ಇನ್ನೂ ಹತ್ತು ಹಲವು ಸ್ಮಾರಕಗಳು ದೇಶ ವಿದೇಶಗಳ ಪ್ರವಾಸಿಗರನ್ನು ಪ್ರತಿನಿತ್ಯ ಸೆಳೆಯುತ್ತಿವೆ. ಬೆಂಗಳೂರಿನಿಂದ ಮೇಲುಕೋಟೆಗೆ 152ಕಿಮೀ ದೂರವಿದ್ದು ಧಾರ್ಮಿಕ ಪ್ರವಾಸ ಕೈಗೊಳ್ಳುವವರಿಗಿದು ಉತ್ತಮ ಆಯ್ಕೆ.

melu2ed

ಶ್ರವಣಬೆಳಗೊಳ :

ಜೈನರ ಪವಿತ್ರ ಸ್ಥಳವಾಗಿರುವ ಶ್ರವಣಬೆಳಗೊಳ ಹಾಸನ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣ. ಇಲ್ಲಿ ಗೊಮ್ಮಟೇಶ್ವರನ ಪ್ರತಿಮೆ, ಚಂದ್ರಗಿರಿ ಬೆಟ್ಟ, ಶ್ರೀ ರಾಮದೇವರ ಕಟ್ಟೆ ಜಲಪಾತ ಸೇರಿದಂತೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಶ್ರವಣಬೆಳಗೊಳ ಪಟ್ಟಣವು ಸುಮಾರು 2 ಸಹಸ್ರ ವರ್ಷಗಳಿಗೂ ಮೇಲ್ಪಟ್ಟು ಜೈನರ ಕಲೆ, ವಾಸ್ತುಶಿಲ್ಪ, ಧರ್ಮ, ಮತ್ತು ಸಂಸ್ಕೃತಿ ಇವುಗಳ ಪ್ರಮುಖ ಕೇಂದ್ರವಾಗಿದೆ. ಇಲ್ಲಿಗೆ ಭೇಟಿ ನೀಡಲು ಒಂದಿಡೀ ದಿನವನ್ನು ಮೀಸಲಿಡಲೇಬೇಕು.

istockphoto-586356630-612x612

ಕನಕಪುರ:

ಬೆಂಗಳೂರಿನಿಂದ ತೀರಾ ಹತ್ತಿರದಲ್ಲಿರುವ ಪ್ರವಾಸಿ ಕೇಂದ್ರ ಕನಕಪುರ. ಇಲ್ಲಿ ಮೇಕೆದಾಟು, ಕಬ್ಬಾಳದುರ್ಗ, ಚುಂಚಿ ಫಾಲ್ಸ್‌, ಬಿಳಿಕಲ್‌ ರಂಗಸ್ವಾಮಿ ಬೆಟ್ಟ, ಕನಕಪುರ ಪಾರ್ಕ್‌, ಪ್ರಾಣಿ ದಿ ಪೆಟ್‌ ಸ್ಯಾಂಚುರಿ, ಪಿರಮಿಡ್‌ ವ್ಯಾಲಿ ಮಾತ್ರವಲ್ಲದೆ ಜಾನಪದ ಲೋಕ, ಭೀಮೇಶ್ವರಿ ವನ್ಯಜೀವಿ ಅಭಯಾರಣ್ಯಗಳು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಮಕ್ಕಳ ನೆಚ್ಚಿನ ಪಾರ್ಕ್‌, ಪ್ರಾಣಿಗಳ ಲೋಕವನ್ನು ನೋಡುವುದರ ಜೊತೆಗೆ ಚಾರಣ ಪ್ರಿಯರಿಗೆ ಸೂಕ್ತ ಪರಿಸರ, ಆಧ್ಯಾತ್ಮಿಕ ಕೇಂದ್ರಗಳ ಭೇಟಿಯನ್ನಿಚ್ಛಿಸುವವರಿಗೂ ಒಳ್ಳೆಯ ಆಯ್ಕೆಗಳು ಇಲ್ಲಿವೆ.

06-1496740522-4-

ಚಿಕ್ಕಬಳ್ಳಾಪುರ:

ಆಧ್ಯಾತ್ಮಿಕ ಕೇಂದ್ರಗಳು, ಟ್ರಕ್ಕಿಂಗ್‌ ಏರಿಯಾಗಳು ಮಾತ್ರವಲ್ಲದೆ ಪ್ರಕೃತಿಯ ಸೌಂದರ್ಯವನ್ನು ಸವಿಯುವುದಕ್ಕೆ ಚಿಕ್ಕಬಳ್ಳಾಪುರ ಒಳ್ಳೆಯ ಆಯ್ಕೆ. ಒಂದು ದಿನವಿಡೀ ಸಮಯವಿದೆಯಾದರೆ ಇಲ್ಲಿನ ಎಲ್ಲ ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದು. ಅದರಲ್ಲೂ ಟ್ರೆಕ್ಕಿಂಗ್‌ ಮಾಡಲು ನಂದಿ ಗಿರಿ, ಚಂದ್ರ ಗಿರಿ, ಬ್ರಹ್ಮ ಗಿರಿ, ಕಲವರ ಬೆಟ್ಟಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಂದಿದುರ್ಗ, ಭೋಗ ನಂದೀಶ್ವರ ಸ್ವಾಮಿ ದೇವಾಲಯ, ಆದಿಯೋಗಿ ಶಿವನ ಪ್ರತಿಮೆ, ವಿವೇಕಾನಂದ ಜಲಪಾತ ಸೇರಿದಂತೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ.

492916367671666fce289o_20230215185120

ಗೊರವನಹಳ್ಳಿ ಲಕ್ಷ್ಮೀ ದೇವಾಲಯ:

ಇತಿಹಾಸ ಪ್ರಸಿದ್ಧ ಗೊರವನಹಳ್ಳಿ ಲಕ್ಷ್ಮೀ ದೇವಾಲಯ ನೆಲೆಸಿರುವುದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಗ್ರಾಮದಲ್ಲಿ, ಕರ್ನಾಟಕದ ಕೊಲ್ಹಾಪುರ ಎಂದೇ ಕರೆಸಿಕೊಳ್ಳುವ ಈ ಲಕ್ಷ್ಮೀ ದೇವಾಲಯಕ್ಕೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ. ಈ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗು ಭಾನುವಾರಗಳಂದು ವಿಶೇಷ ಪೂಜೆ ಇರುತ್ತದೆ. ಬೆಂಗಳೂರಿನಿಂದ ಗೊರವನಹಳ್ಳಿಗೆ ನೇರವಾಗಿ ಬಸ್‌ ಸೌಲಭ್ಯವಿದ್ದು, ವಸತಿ ಸೌಕರ್ಯವೂ ಇಲ್ಲಿದೆ.

goravanahalli-mahalakshmi-temple

ವಾರಾಂತ್ಯವನ್ನು ಹೇಗೆ ಕಳೆಯುವುದು, ಬೆಂಗಳೂರಿನ ಸುತ್ತಮುತ್ತ ಭೇಟಿಕೊಡಲು ಯಾವ್ಯಾವ ಸ್ಥಳಗಳಿವೆ ಎಂಬುದರ ಬಗ್ಗೆ ಇನ್ನು ಚಿಂತಿಸಬೇಕಿಲ್ಲ. ಈ ಜನಪ್ರಿಯ ತಾಣಗಳಲ್ಲಿ ಯಾವುದನ್ನೇ ಆಯ್ಕೆ ಮಾಡಿಕೊಂಡರೂ ಒಂದಿಡೀ ದಿನ ಖುಷಿ ಹಾಗೂ ನೆಮ್ಮದಿಯಿಂದ ಕಳೆಯಬಹುದು ಎನ್ನುವದರಲ್ಲಿ ಸಂದೇಹವಿಲ್ಲ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ