Friday, September 19, 2025
Friday, September 19, 2025

ಜಗತ್ತಿಗೆ ಅತಿ ಹೆಚ್ಚು ಅನ್ವೇಷಕರ ಕೊಟ್ಟ ದೇಶದ ಬಗ್ಗೆ ನಿಮಗೆಷ್ಟು ಗೊತ್ತು ?

ಪೋರ್ಚುಗಲ್ ಅತಿ ಹೆಚ್ಚು ವರ್ಷ ಮತ್ತು ಅತಿ ಕಡಿಮೆ ಸಮಯ ಆಳ್ವಿಕೆ ನಡೆಸಿದ ರಾಜರನ್ನು ಹೊಂದಿದ ದೇಶವಾಗಿದೆ. ಪೋರ್ಚುಗಲ್ ಪ್ರಥಮ ರಾಜ ಅಲ್ಫೋನ್ಸೋ 73 ವರ್ಷ 220 ದಿನಗಳ ಕಾಲ ಈದೇಶದ ರಾಜನಾಗಿದ್ದ.1908 ರಲ್ಲಿಈ ದೇಶದ ಉತ್ತರಾಧಿಕಾರಿ ಕಾರ್ಲೋಸ್ ಇಪ್ಪತ್ತು ನಿಮಿಷಗಳ ಕಾಲ ರಾಜ ಪದವಿ ಹೊಂದಿದ್ದ. ಯುರೋಪಿನ ಅತ್ಯಂತ ಹಳೆಯ ದೇಶ ಎನ್ನುವ ಖ್ಯಾತಿ ಪೋರ್ಚುಗಲ್ಲಿಗೆ ಸೇರುತ್ತದೆ. ಯುರೋಪಿನಲ್ಲಿ ಅತಿ ಹೆಚ್ಚು ಸಮಯ ಸರ್ವಾಧಿಕಾರಿ ಆಡಳಿತ ಹೊಂದಿದ್ದ ದೇಶ ಎನ್ನುವ ಕುಖ್ಯಾತಿಗೂ ಈ ದೇಶ ಪ್ರಸಿದ್ಧ..

  • ರಂಗಸ್ವಾಮಿ ಮೂಕನಹಳ್ಳಿ

ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧ ಇರುವ ಯುರೋಪಿನ ಅತಿ ಹಳೆಯ ದೇಶ ಎನ್ನುವ ಮಾನ್ಯತೆಗೆ ಭಾಜನವಾಗಿರುವ ಪೋರ್ಚುಗಲ್‌ನ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷದಷ್ಟು. ಇದು ಸ್ಪೇನ್ ದೇಶದ ಜೊತೆಗೆ ಉತ್ತರದಲ್ಲಿ 750 ಮೈಲಿಗೂ ಹೆಚ್ಚು ಉದ್ದದ ಗಡಿ ಹಂಚಿಕೊಂಡಿದೆ. ಗಡಿಭಾಗದಲ್ಲಿ ಯಾವುದೇ ತಂಟೆ–ತಕರಾರು ಇಲ್ಲದೆ ಶಾಂತಿಯಿಂದ ನೆಲೆಗೊಂಡಿದೆ. ಗಡಿ ಭಾಗದ ಒಂದೆರಡು ಹಳ್ಳಿಗಳು ನಮಗೆ ಸೇರಬೇಕು ಎನ್ನುವುದು ಪೋರ್ಚುಗೀಸ್‌ ವಾದ. 19ನೇ ಶತಮಾನದಿಂದ ಸ್ಪೇನ್ ಆಳ್ವಿಕೆಗೆ ಒಳಪಟ್ಟಿರುವ ಈ ಹಳ್ಳಿಗಳನ್ನು ಪಡೆಯಲೇಬೇಕೆಂದು ಪೋರ್ಚುಗೀಸ್ ಎಂದೂ ಯುದ್ಧಕ್ಕೆ ನಿಂತಿಲ್ಲ. ಮಾತುಕತೆ ಸಾಗುತ್ತಲೇ ಇದೆ.

lisbon city

ಲಿಸ್ಬನ್ ಪೋರ್ಚುಗಲ್ ದೇಶದ ರಾಜಧಾನಿ. ಹಾಗೆ ನೋಡಲು ಹೋದರೆ ಇತಿಹಾಸದಲ್ಲಿ ಎಲ್ಲಿಯೂ ಲಿಸ್ಬನ್ ಅನ್ನು ಪೋರ್ಚುಗಲ್‌ನ ರಾಜಧಾನಿ ಎಂದು ಉಲ್ಲೇಖಿಸಿಲ್ಲ. ಕಾರ್ಯತಃ (De Facto) ಇದನ್ನು ರಾಜಧಾನಿ ಎಂದು ಶತಮಾನಗಳಿಂದ ಒಪ್ಪಿಕೊಳ್ಳಲಾಗಿದೆ. ಅದಕ್ಕೆಂದು ಯಾವುದೇ ಅದ್ಧೂರಿ ಸಮಾರಂಭ ನಡೆದಿಲ್ಲ.

ಪೋರ್ಚುಗಲ್ ಬದುಕಲು ಉತ್ತಮ ದೇಶ ಎನ್ನುವುದು, ಆ ದೇಶದಲ್ಲಿ ಅನೇಕ ಗ್ರಾಹಕರನ್ನು ಹೊಂದಿದ್ದ ಮತ್ತು ಕೆಲಸದ ವಿಷಯವಾಗಿ ಹಲವು ಪೋರ್ಚುಗೀಸರೊಡನೆ ಮಾತನಾಡುವ ಅವಕಾಶ ಸಿಕ್ಕ ನನಗೆ ಗೊತ್ತಿತ್ತು. ಆದರೆ ಕುಟುಂಬ ಸಮೇತ ಅಲ್ಲಿಗೆ ಹೋಗಬೇಕು ಅನ್ನಿಸಿದ್ದು ಮಾತ್ರ ವಾಸ್ಕೊ ಡ ಗಾಮ ಎನ್ನುವ ನಾವಿಕನಿಂದ!

ಇಂದಿನ ಜಗತ್ತು ಒಂದು ಸಣ್ಣ ಹಳ್ಳಿಯಂತೆ ಮಾರ್ಪಾಡಾಗಲು ವಾಸ್ಕೊ ಡ ಗಾಮ (Vasco da Gama) ಮತ್ತು ಬಾರ್ತಲೋಮಿಯ ದಿಯಾಸ್ (Bartolomeu Dias) ಎನ್ನುವ ಇಬ್ಬರು ಪೋರ್ಚುಗೀಸ್ ನಾವಿಕರು ಕಾರಣ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ವಿಷಯ. ವಾಸ್ಕೊ ಡ ಗಾಮ ಭಾರತವನ್ನು ಮತ್ತು ಬ್ರೆಜಿಲ್ ದೇಶವನ್ನು ಕಂಡುಹಿಡಿದ ನಂತರ ಜಗತ್ತಿನಲ್ಲಿ ಆದ ಬದಲಾವಣೆಗೆ ಇತಿಹಾಸ ಸಾಕ್ಷಿ. ಹೀಗೆ ಜಗತ್ತಿನ ಅತ್ಯಂತ ಮಹತ್ವಪೂರ್ಣ ದೇಶಗಳನ್ನು ಕಂಡುಹಿಡಿದ ನಾವಿಕರ ದೇಶ ಹೇಗಿದೆ ಎನ್ನುವ ಸಹಜ ಕುತೂಹಲ ನನ್ನನ್ನು ಲಿಸ್ಬನ್ ನಗರದಲ್ಲಿ ತಂದು ನಿಲ್ಲಿಸಿತು.

ಲಿಸ್ಬನ್‌ನ ಹೂಂಬೆರ್ತೊ ಡೆಲ್ಗಾದೊ ಏರ್ಪೋರ್ಟಿನಲ್ಲಿ ಇಳಿದು, ನಾನು ಕಾಯಿಸಿಕೊಂಡಿದ್ದ ಹೋಟೆಲ್‌ಗೆ ಹೋಗಲು ಟ್ಯಾಕ್ಸಿ ಹಿಡಿದೆ. ಯುರೋಪಿನ ಯಾವುದೇ ದೇಶಕ್ಕೆ ಹೋದರೆ ‘ನಿಮಗೆ ಸ್ಪ್ಯಾನಿಷ್ ಬರುತ್ತದೆಯೇ?’ ಎಂದು ಕೇಳುವುದು ನನ್ನ ಜಾಯಮಾನ. ಅವರಿಗೆ ಸ್ಪ್ಯಾನಿಷ್ ಬಂದರೆ ಸಂವಹನ ಸುಲಭ. ಮುಕ್ಕಾಲು ಪಾಲು ಯುರೋಪಿನ ದೇಶಗಳ ಜನರಿಗೆ ಇಂಗ್ಲಿಷ್ ಎಂದರೆ ಅಲರ್ಜಿ ಜೊತೆಗೆ ತಾತ್ಸಾರ!

ನನ್ನ ಟ್ಯಾಕ್ಸಿ ಡ್ರೈವರ್‌ನನ್ನು ಹಾಗೆಯೇ ಕೇಳಿದೆ – "ನಿನಗೆ ಸ್ಪ್ಯಾನಿಷ್ ಬರುತ್ತದೆಯೇ? " ಆತ ಗಟ್ಟಿಯಾಗಿ “ಸೊಯ್ ಪೋರ್ಚುಗೀಸ್…” (ನಾನು ಪೋರ್ಚುಗೀಸ್) ಎಂದ. ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಕನ್ನಡ ಮತ್ತು ತೆಲುಗು ಇದ್ದಂತೆ. ಮುಕ್ಕಾಲು ಪದಗಳು ಹೋಲಿಕೆ. ನನ್ನ ಸ್ಪ್ಯಾನಿಷ್‌ ಮಿಶ್ರಿತ ಪೋರ್ಚುಗೀಸ್‌ನಲ್ಲಿ ಹೇಗೋ ಸಂಭಾಳಿಸಿದೆ. “ನಾನು, ನನ್ನ ದೇಶ” ಎನ್ನುವ ಭಾವನೆ ಇವರ ರಕ್ತದಲ್ಲೇ ಇದೆ ಎನ್ನುವುದಕ್ಕೆ ಈ ವಿಷಯ ಸಾಕ್ಷಿ.

belem

ಲಿಸ್ಬನ್ ನಲ್ಲಿ ನೋಡಲೇನಿದೆ?

ಬೆಲಂ ಟವರ್ ಇಲ್ಲಿನ ಆಕರ್ಷಣೆ. ಇದು ಡಿಫೆನ್ಸ್ ಟವರ್ ಎಂದು ಕೂಡ ಪ್ರಸಿದ್ಧಿ ಹೊಂದಿದೆ. ಜೆರೋಮಿನಸ್ ಮೊನೆಸ್ಟರಿಯಲ್ಲಿ (ವಾಸ್ಕೋ ಡ ಗಾಮನ ತಂಗುದಾಣವಾಗಿತ್ತು) ಹತ್ತಾರು ಮ್ಯೂಸಿಯಂ ಗಳು ಮತ್ತು ಕೋಟೆಗಳು ನೋಡಲು ಸಿಗುತ್ತವೆ. ಎಲ್ಲಕ್ಕೂ ಮುಖ್ಯ ಟ್ರಾಮ್ ಪ್ರಯಾಣಕ್ಕೆ ಇಲ್ಲಿಗೆ ಬರುವ ಪ್ರವಾಸಿಗರು ಮುಗಿ ಬೀಳುತ್ತಾರೆ. ಅದಕ್ಕೆ ಕಾರಣ ಇವು 1930 ರಿಂದ ಚಾಲನೆಯಲ್ಲಿವೆ. ಟ್ರಾಮ್ 28 ಎನ್ನುವ ಟ್ರಾಮ್ ತಗ್ಗು ದಿಣ್ಣೆಯ ಲಿಸ್ಬನ್ ನಲ್ಲಿ ಚಲಿಸುವ ಮಜವನ್ನು ಅದರಲ್ಲಿ ಸವಾರಿ ಮಾಡಿಯೇ ಅನುಭವಿಸಬೇಕು.

portugal ride

ಖರ್ಚಿನ ಲೆಕ್ಕಾಚಾರ ಹೀಗಿದೆ

ಬೆಂಗಳೂರಿನಿಂದ ಲಿಸ್ಬನ್ ನಗರಕ್ಕೆ ಐವತ್ತೈದರಿಂದ ಅರವತ್ತು ಸಾವಿರ ರೂಪಾಯಿಯಲ್ಲಿ ಹೋಗಿಬರಲು ಟಿಕೆಟ್ ಸಿಗುತ್ತದೆ. ಉಳಿದಂತೆ ಲಿಸ್ಬನ್ ಯುರೋಪಿನ ಇತರ ನಗರಗಳಿಗಿಂತ ಒಂದಷ್ಟು ಕಡಿಮೆ ವೆಚ್ಚದ ನಗರವೆಂದೇ ಹೇಳಬಹುದು. ಹೊಟೇಲ್ ಅಥವಾ ಅಪಾರ್ಟ್ಮೆಂಟ್ ಯಾವುದಾದರೂ ಸರಿ ದಿನಕ್ಕೆ ಏಳೂವರೆ ಸಾವಿರದಂತೆ ಖರ್ಚಾಗುತ್ತದೆ. ಊಟ ತಿಂಡಿಯ ಖರ್ಚು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಎಲ್ಲಿ ಮತ್ತು ಏನು ತಿನ್ನಬೇಕು ಎನ್ನುವುದರ ಮೇಲೆ ನಿಗದಿಯಾಗುತ್ತೆ. ಆದರೂ ಸರಿಸುಮಾರು ನಾಲ್ಕರಿಂದ ಐದು ಸಾವಿರ ರೂಪಾಯಿ ದಿನಕ್ಕೆ ಬೇಕು. ಮ್ಯೂಸಿಯಂ ಮತ್ತಿತರ ಜಾಗಗಳ ಪ್ರವೇಶ ಶುಲ್ಕ ಬೇರೆ. ಈ ಎಲ್ಲಾ ಲೆಕ್ಕಾಚಾರ ನೋಡಿದರೆ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಒಬ್ಬ ವ್ಯಕ್ತಿಗೆ ಐದಾರು ದಿನ ಇದ್ದು ಬರಲು ಬೇಕಾಗುತ್ತದೆ.

ಭೇಟಿಗೆ ಯಾವ ಸಮಯ ಬೆಸ್ಟ್?

ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಉತ್ತಮ ಸಮಯ. ಉಳಿದ ಸಮಯದಲ್ಲಿ ಚಳಿಯ ಕಾರಣ ಭಾರತೀಯರಿಗೆ ಇರಿಸುಮುರಿಸು ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ ಅದಕ್ಕೆಂದು ವಿಶೇಷ ಬಟ್ಟೆ ಕೂಡ ಬೇಕಾಗುತ್ತದೆ. ಹೀಗಾಗಿ ಜುಲೈನಿಂದ ಅಕ್ಟೋಬರ್ ಸಮಯದಲ್ಲಿ ಇಲ್ಲಿಗೆ ಹೋಗುವುದು ಲೇಸು. ವೇಳೆಯ ವ್ಯತ್ಯಾಸವಿದೆ. ಚಳಿಗಾಲದಲ್ಲಿ ಭಾರತಕ್ಕಿಂತ ನಾಲ್ಕೂವರೆ ಗಂಟೆ ಹಿಂದಿದೆ. ಬೇಸಿಗೆಯಲ್ಲಿ ಐದೂವರೆ ಗಂಟೆ. ಷೆಗನ್ ವೀಸಾ ಪಡೆದರೆ ಪೋರ್ಚುಗಲ್ ಕೂಡ ಹೋಗಬಹುದು. ವಿಶೇಷ ವೀಸಾ ಅವಶ್ಯಕತೆಯಿಲ್ಲ.

ಪುಳಿಚಾರಿಗರ ಗತಿಯೇನು?

ಹೇಳಿಕೇಳಿ ಇದು ಯೂರೋಪಿನ ನಗರ. ಬಹುತೇಕ ಯುರೋಪ್ ನಗರಗಳು ಸಸ್ಯಾಹಾರಿಗಳಿಗೆ ಸಾಕಷ್ಟು ಹಿಂಸೆ ನೀಡುತ್ತವೆ.ಇತ್ತೀಚೆಗೆ ಭಾರತದ ಹೆಸರು ಹೇಳಿಕೊಂಡು ಬಾಂಗ್ಲಾದೇಶೀಯರು ಮತ್ತು ಪಾಕಿಸ್ತಾನಿಗಳು ರೆಸ್ಟೋರೆಂಟ್ ತೆಗೆದಿದ್ದಾರೆ. ಅವೆಲ್ಲ ವಿಧಿಯಿಲ್ಲದೇ ಒಮ್ಮೆ ತಿನ್ನಬಹುದಾದ ರೆಸ್ಟೋರೆಂಟ್ಗಳು. ಬನ್ನು ಬ್ರೆಡ್ಡು ಚೀಸು ಜೊತೆಗೆ ಉತ್ತಮ ಗುಣಮಟ್ಟದ ಮಾವಿನಹಣ್ಣು ಹೊಟ್ಟೆ ತುಂಬಿಸುತ್ತದೆ. ಅಪಾರ್ಟ್ ಮೆಂಟಿನಲ್ಲಿದ್ದರೆ ಬೇಕಾದ್ದು ತಯಾರಿಸಿ ತಿನ್ನಬಹುದು.

ಪೋರ್ಚುಗೀಸರು ಭಾರತೀಯರಂತೆ ಹಣೆಬರಹ (Destiny) ದ ಮೇಲೆ ಬಹಳ ನಂಬಿಕೆಯುಳ್ಳವರು. ನಮ್ಮಲ್ಲಿ ಅನೇಕ ರಾಗಗಳಿರುವಂತೆ ಪೋರ್ಚುಗೀಸರ ಒಂದು ಹಾಡಿನ ಪ್ರಕಾರಕ್ಕೆ ಫಾದೋ (fado) ಎನ್ನುವ ಹೆಸರಿದೆ. ಇದರರ್ಥ ಯಾರೊಬ್ಬರೂ ತಮ್ಮ ಹಣೆಬರಹದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ (one’s fate or destiny cannot be escaped) ಎನ್ನುವುದೇ ಆಗಿದೆ.

ಪೋರ್ಚುಗಲ್ ಅತಿ ಹೆಚ್ಚು ವರ್ಷ ಮತ್ತು ಅತಿ ಕಡಿಮೆ ಸಮಯ ಆಳ್ವಿಕೆ ನಡೆಸಿದ ರಾಜರನ್ನು ಹೊಂದಿದ ದೇಶವಾಗಿದೆ. ಪೋರ್ಚುಗಲ್ ಪ್ರಥಮ ರಾಜ ಅಲ್ಫೋನ್ಸೋ 73 ವರ್ಷ 220 ದಿನಗಳ ಕಾಲ ಈ ದೇಶದ ರಾಜನಾಗಿದ್ದ. 1908 ರಲ್ಲಿ ಈ ದೇಶದ ಉತ್ತರಾಧಿಕಾರಿ ಕಾರ್ಲೋಸ್ ಇಪ್ಪತ್ತು ನಿಮಿಷಗಳ ಕಾಲ ರಾಜ ಪದವಿ ಹೊಂದಿದ್ದ. ಯುರೋಪಿನ ಅತ್ಯಂತ ಹಳೆಯ ದೇಶ ಎನ್ನುವ ಖ್ಯಾತಿ ಪೋರ್ಚುಗಲ್ಲಿಗೆ ಸೇರುತ್ತದೆ. ಯುರೋಪಿನಲ್ಲಿ ಅತಿ ಹೆಚ್ಚು ಸಮಯ ಸರ್ವಾಧಿಕಾರಿ ಆಡಳಿತ ಹೊಂದಿದ್ದ ದೇಶ ಎನ್ನುವ ಕುಖ್ಯಾತಿಗೂ ಈ ದೇಶ ಪ್ರಸಿದ್ಧ. 1926 ರಿಂದ 1974 ರವರೆಗೆ ಸರ್ವಾಧಿಕಾರಿ ಆಳ್ವಿಕೆಗೆ ಪೋರ್ಚುಗಲ್ ಒಳಪಟ್ಟಿತ್ತು. ಜಗತ್ತಿನ ಪ್ರಸಿದ್ಧ ಅನ್ವೇಷಕರ ಹೆಸರು ಹೇಳಿ ಎಂದರೆ ಮೊದಲು ನೆನಪಿಗೆ ಬರುವ ಹಲವು ಹೆಸರನ್ನು ಕೊಟ್ಟ ದೇಶವಿದು. ಪೋರ್ಚುಗೀಸರು ಮೂಲತಃ ಸಾಹಸಿಗಳು, ಅನ್ವೇಷಕರು.

ಇವರ ಅನ್ವೇಷಣೆಯ ಗುರುತಾಗಿ 53 ದೇಶಗಳಲ್ಲಿ 600 ವರ್ಷಕ್ಕೂ ಮೀರಿ ಇವರು ಆಳ್ವಿಕೆ ನಡೆಸಿದ್ದಾರೆ. ತಮ್ಮ ಅಧೀನದಲ್ಲಿದ್ದ ದೇಶಗಳಿಗೆ ಪೋರ್ಚುಗೀಸ್ ಸ್ವಾತಂತ್ರ್ಯ ನೀಡುತ್ತಾ ಬಂದಿತು. ಇತ್ತೀಚೆಗೆ ಅಂದರೆ 1999 ರಲ್ಲಿ ಮಖಾವ್ ಅನ್ನು ಚೀನಾ ದೇಶಕ್ಕೆ ಬಿಟ್ಟು ಕೊಟ್ಟಿತು.

ಪೋರ್ಚುಗಲ್ ಹೊರತುಪಡಿಸಿ ಜಗತ್ತಿನ ಇತರ ಎಂಟು ದೇಶಗಳಲ್ಲಿ ಪೋರ್ಚುಗೀಸ್ ಆಡು ಭಾಷೆಯಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಬಳಸಲ್ಪಟ್ಟ ಭಾಷೆಯಲ್ಲಿ ಪೋರ್ಚುಗೀಸ್ ಗೆ ಆರನೇ ಸ್ಥಾನ! ಲಿಸ್ಬನ್ ನಗರ ರೋಮ್ ನಗರಕ್ಕಿಂತ ಹಳೆಯದು. ಪೋರ್ಚುಗೀಸ್ ನಲ್ಲಿ 80 ಕ್ಕೂ ಅಧಿಕ ಜನ ರೋಮನ್ ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವರಿದ್ದಾರೆ. ಸುಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗೀಸ್ ಪ್ರಜೆ.

ಇಲ್ಲಿನ ಹೆಂಗಸರು ಗಂಡಸರಿಗಿಂತ ಐದರಿಂದ ಆರು ವರ್ಷ ಹೆಚ್ಚು ಬದುಕುತ್ತಾರೆ. ಸರಾಸರಿ 84 ವರ್ಷ ಮಹಿಳೆಯರ ಜೀವಿತಾವಧಿ. ಇತರ ಯೂರೋಪಿಯನ್ ದೇಶಗಳಿಗೆ ಹೋಲಿಸಿದರೆ ಈ ರೀತಿ ಜೀವಿತಾವಧಿ ವ್ಯತ್ಯಾಸ ಇಲ್ಲಿ ಹೆಚ್ಚು.

ಪೋರ್ಚುಗಲ್ ದೇಶ ರಿನ್ಯೂವೆಬಲ್ (ನವೀಕರಿಸಲ್ಪಡುವ) ಇಂಧನ ಉತ್ಪತ್ತಿಯಲ್ಲಿ ಜಗತ್ತಿನ ಅಗ್ರಗಣ್ಯ ಸ್ಥಾನದಲ್ಲಿದೆ. ತಮಗೆ ಬೇಕಾದ 70 ಕ್ಕೂ ಹೆಚ್ಚು ಇಂಧನವನ್ನುಇವರು ರಿನ್ಯೂವೆಬಲ್ ಎನರ್ಜಿ ಮೂಲಕ ಪಡೆಯುತ್ತಾರೆ. ಆ ಮೂಲಕ ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ಇವರ ಪಾತ್ರ ಶ್ಲಾಘನೀಯ.

ಇತರೆ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಪೋರ್ಚುಗಲ್ ತುಂಬಾ ಅಗ್ಗ. ಹೀಗಾಗಿ ಜೇಬಿಗೆ ಹೆಚ್ಚು ಭಾರವಿಲ್ಲದೆ ಸುತ್ತಬಹುದಾದ ದೇಶಗಳ ಪಟ್ಟಿಗೆ ಪೋರ್ಚುಗಲ್ ದೇಶವನ್ನು ಸಲೀಸಾಗಿ ಸೇರಿಸಬಹುದು. ವಾರ ಪೂರ್ತಿ ಅವರ ಆತಿಥ್ಯ ಸವಿದು ಅವರಿಗೆ ಒಬ್ರೇಗಾದೊ (ಧನ್ಯವಾದ) ಜೊತೆಗೆ ತ ಚೌ ( ಬೈ) ಹೇಳಿ ಹೊರಡಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಗಡಿನಾಡು ಕಾಸರಗೋಡಿನ ನಯನಮನೋಹರ ಪ್ರವಾಸಿ ತಾಣಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ...

Read Next

ಗಡಿನಾಡು ಕಾಸರಗೋಡಿನ ನಯನಮನೋಹರ ಪ್ರವಾಸಿ ತಾಣಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ...