ಭಾಷೆ ಬಲ್ಲವನು ಇಡೀ ಜಗತ್ತಿಗೆ ನೆಂಟ
ತಿಂಗಳುಗಟ್ಟಲೆ ತನಗೆ ಇಷ್ಟವಾದ ಚಿತ್ರಗಳನ್ನು ಬಿಡಿಸುವುದು ನಂತರ ಅದನ್ನು ಕಲಾರಸಿಕರಿಗೆ ಮಾರುವುದು ಅವನ ವೃತ್ತಿಯಾಗಿತ್ತು. ಇಷ್ಟು ಮಾಹಿತಿ ನನಗೆ ಮೊದಲೇ ತಿಳಿದಿತ್ತು. ಆದರೆ ಅವರಪ್ಪ ವಜ್ರದ ವ್ಯಾಪಾರಿ ಆಗರ್ಭ ಶ್ರೀಮಂತ ಎನ್ನುವುದು ನಂತರ ತಿಳಿದ ವಿಷಯ. ಜೈಪುರದಲ್ಲಿ ಬಹಳ ದೊಡ್ಡ ಹೆಸರು ಇವರ ಮನೆತನದ್ದು. ನನಗೆ ಬಿದ್ದವರು ಯಾರು ಎನ್ನುವುದು ಗೊತ್ತಿರಲಿಲ್ಲ, ಅವರಿಗೆ ಸಹಾಯ ಮಾಡಲು ಹೊರಟಿದ್ದು ರಮ್ಯಳ ಒತ್ತಾಯದ ಮೇರೆಗೆ, ಹಣೆಬರಹ ಎನ್ನುವುದು ಇದಕ್ಕೆ ಎನ್ನಬಹುದು. ಆತ ಮುಂದಿನ ದಿನಗಳಲ್ಲಿ ನನ್ನನ್ನು ಬಹಳಷ್ಟು ಹಚ್ಚಿಕೊಂಡು ಬಿಟ್ಟರು.
- ರಂಗಸ್ವಾಮಿ ಮೂಕನಹಳ್ಳಿ
ಒಮ್ಮೆ ಬಾರ್ಸಿಲೋನಾದಿಂದ ಮಲಾಗ ಎನ್ನುವ ಸ್ಥಳಕ್ಕೆ ಕೆಲಸದ ನಿಮಿತ್ತ ಹೊರಟಿದ್ದೆ. ಬಾರ್ಸಿಲೋನಾದಲ್ಲಿ ನಾಲ್ಕು ಜನ ಜಪಾನೀಯರು ರೈಲನ್ನು ಹತ್ತಿದರು. ಪ್ರಯಾಣದ ಉದ್ದಕ್ಕೂ ಒಮ್ಮೆಯೂ ಅವರು ಧ್ವನಿ ಎತ್ತರಿಸಿ ಮಾತಾಡಿದ್ದನ್ನು ನಾನು ನೋಡಲಿಲ್ಲ. ಮಲಾಗದಲ್ಲಿ ಇಳಿದಾಗ ಅವರು ಮುಂದಿನ ಪ್ರಯಾಣದ ಬಗ್ಗೆ ಒಂದಷ್ಟು ಮಾಹಿತಿಯನ್ನು ಪಡೆಯಲು ರೈಲಿನಲ್ಲಿದ್ದ ಸಿಬ್ಬಂದಿಯನ್ನ ತಮಗೆ ಬಂದ ಇಂಗ್ಲಿಷ್‌ನಲ್ಲಿ ಪ್ರಶ್ನಿಸಿದರು. ಆ ಸಿಬ್ಬಂದಿಗೆ ಇಂಗ್ಲಿಷ್‌ನ ಲವಲೇಶ ಗಾಳಿಯೂ ಇರಲಿಲ್ಲ. ಆತ ಸ್ಪ್ಯಾನಿಷ್ ನಲ್ಲಿ ' ಆಲ್ಗಿನ್ ದೆ ವಸತ್ರೋಸ್ ಸಾವೆಸ್ ಇಂಗ್ಲೆಸ್? '(ನಿಮ್ಮಲ್ಲಿ ಯಾರಿಗಾದರೂ ಇಂಗ್ಲಿಷ್ ಬರುತ್ತದೆಯೇ) ಎನ್ನುವ ಪ್ರಶ್ನೆಯನ್ನು ಕೇಳಿದರು. ಯಾರೊಬ್ಬರೂ ಮುಂದೆ ಬರಲಿಲ್ಲ. ಸಹಜವಾಗಿ ನಾನು ಮುಂದೆ ಹೋದೆ, ಜಪಾನೀಯರು ಇಂಗ್ಲಿಷ್ ನಲ್ಲಿ ಹೇಳಿದ್ದನ್ನು ಸ್ಪ್ಯಾನಿಷ್ ಗೆ ತರ್ಜುಮೆ ಮಾಡಿ ರೈಲ್ವೆ ಸಿಬ್ಬಂದಿಗೆ ಹೇಳಿದೆ. ಅವರು ಸ್ಪ್ಯಾನಿಷ್ ನಲ್ಲಿ ಹೇಳಿದ ಮಾಹಿತಿಯನ್ನು ಕೇಳಿಸಿಕೊಂಡು ಜಪಾನಿ ಯಾತ್ರಿಕರಿಗೆ ಇಂಗ್ಲಿಷ್ ನಲ್ಲಿ ಹೇಳಿದೆ. ಜಪಾನೀಯರು ದೇಹವನ್ನು ಅರ್ಧ ಬಾಗಿಸಿ ಧನ್ಯವಾದ ತಿಳಿಸಿ ಹೋದರು. ಅದು ನನ್ನ ಜೀವನದ ಪ್ರಥಮ ಅನೌಪಚಾರಿಕ ದ್ವಿಭಾಷಿ ಕೆಲಸ. ಅದೊಂತರ ಮನಸ್ಸಿಗೆ ಬಹಳಷ್ಟು ಖುಷಿ ನೀಡಿತು. ಭಾಷೆ ಯಾವುದೇ ಇರಲಿ ಅದನ್ನು ಕಲಿತಷ್ಟೂ ನಮಗೆ ಒಳ್ಳೆಯದು ಎನ್ನುವ ಜ್ಞಾನೋದಯವಾಯಿತು. ಅಂದು ನನ್ನ ಬಹುತೇಕ ಸ್ಪ್ಯಾನಿಷ್ ಸಹ ಪಯಣಿಕರು 'ಮುಯ್ ಬಿಯನ್ ಹೆಚ್ಚೊ' (ಒಳ್ಳೆಯ ಕೆಲಸ ಮಾಡಿದೆ) ಎನ್ನುವ ಶಹಬಾಸ್ ಗಿರಿಯನ್ನು ಕೊಟ್ಟು ಹೋದರು. ಸ್ಪ್ಯಾನಿಷ್ ಬಿಟ್ಟು ಯುರೋಪಿನ ಇತರ ಭಾಷೆಗಳನ್ನ ಕಲಿಯಲು ಈ ಘಟನೆ ನಾಂದಿಯಾಯಿತು.
ರಮ್ಯಳಿಗೆ ಬಾರ್ಸಿಲೋನಾದಲ್ಲಿ ಮೂರು ತಿಂಗಳು ಕಳೆದರೆ ಸಾಕು ಒಂಥರಾ ನಿಶ್ಯಕ್ತಿ ಆವರಿಸಿ ಬಿಡುತ್ತಿತ್ತು. ಇದಕ್ಕೆ ಬಹು ಮುಖ್ಯ ಕಾರಣ ಇಲ್ಲಿ ಸೋಶಿಯಲ್ ಲೈಫ್ ಇಲ್ಲದೆ ಇರುವುದು. ಇಲ್ಲವೆನ್ನುವಷ್ಟು ಸಂಖ್ಯೆಯ ಭಾರತೀಯರು, ಇದ್ದವರಲ್ಲೂ ಸಾಮಾನ್ಯ ಗುಣಗಳ ಕೊರತೆ, ಹೀಗೆ ಪ್ರತಿ ಮೂರು ತಿಂಗಳ ನಂತರ ಬೆಂಗಳೂರಿಗೆ ಒಂದು ಟ್ರಿಪ್ ಹೋಗಲೇಬೇಕು. ಇದು ರಮ್ಯ ಅವಳಾಗೇ ಮಾಡಿಕೊಂಡಿದ್ದ ಅಲಿಖಿತ ನಿಯಮ. ಹೇಗೋ ಚಟ್ನಿಪುಡಿ ಮುಗಿದಿದೆ, ಪುಳಿಯೊಗರೆ ಪುಡಿ ಇನ್ನೆರೆಡು ದಿನಕ್ಕೆ ಮಾತ್ರ ಸಾಕಾಗುತ್ತೆ ಹೋಗಿ ಅವನ್ನೆಲ್ಲಾ ತರುತ್ತೇನೆ ಎನ್ನುತ್ತಿದ್ದ ರಮ್ಯಳಿಗೆ, ನಿನ್ನ ಚಟ್ನಿಪುಡಿ , ಹುಳಿಪುಡಿ , ಪುಳಿಯೊಗರೆ ಪುಡಿ ತುಂಬಾ ದುಬಾರಿ ಎಂದು ಕಿಚಾಯಿಸುತ್ತಿದ್ದೆ.

ಹೀಗೆ ಒಮ್ಮೆ ಬೆಳಗ್ಗೆ ಏಳೂವರೆಗೆ ಬಾರ್ಸಿಲೋನಾದಿಂದ ಫ್ರಾಂಕ್ ಫ಼ರ್ಟ್ ಗೆ ಇದ್ದ ವಿಮಾನಕ್ಕೆ ರಮ್ಯಳನ್ನು ಏರ್ಪೋರ್ಟ್ ಗೆ ಬಿಟ್ಟು ನಂತರ ಬೆಳಗ್ಗೆ 9 ಕ್ಕೆ ಕೆಲಸಕ್ಕೆ ಹೋದರಾಯಿತು ಎಂದು ಅವಳ ಜತೆ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಯುರೋಪಿನಲ್ಲಿ ಏಷ್ಯಾದಲ್ಲಿ ಇದ್ದಂತೆ ಬಹಳ ಕಟ್ಟುಪಾಡುಗಳಿಲ್ಲ. ಅಂದರೆ ನಾವು ಕೂಡ ಪ್ರಯಾಣಿಕರ ಜತೆ ಬೋರ್ಡಿಂಗ್‌ಗೆ ಜತೆಯಾಗಬಹುದು. ಸೆಕ್ಯುರಿಟಿ ಚೆಕ್ ತನಕ ಅವರ ಜತೆಗೆ ಹೋಗಬಹದು. ಆ ನಂತರ ಮುಂದೆ ಬಿಡುವುದಿಲ್ಲ. ಹೀಗೆ ರಮ್ಯಳ ಬೋರ್ಡಿಂಗ್ ಪಾಸ್ ಪಡೆಯಲು ಅವಳೊಂದಿಗೆ ಸರದಿಯಲ್ಲಿ ನಿಂತಿದ್ದೆ. ಹಿಂದೆ ' ಧಪ್ ' ಎನ್ನುವ ಶಬ್ದ ಬಂದಿತು. ಏನೆಂದು ನೋಡಿದರೆ ನಮ್ಮ ಪಕ್ಕದ ಸಾಲಿನಲ್ಲಿ ನಿಂತಿದ್ದ ಹಿರಿಯ ಭಾರತೀಯರಲ್ಲಿ ಒಬ್ಬಾತ ನೆಲಕ್ಕೆ ಬಿದ್ದಿದ್ದರು. ಆತನ ಜತೆಗಿದ್ದ ಮಹಿಳೆ ಬಹಳ ಟೆನ್ಷನ್ ನಲ್ಲಿ ಇರುವಂತೆ ಕಂಡರು. ಇದನ್ನು ನೋಡಿದ ರಮ್ಯ ' ರಂಗ, ಹೋಗು ಅವರಿಗೆ ಸಹಾಯ ಮಾಡು, ನನ್ನ ಪಾಡಿಗೆ ನಾನು ಹೋಗುತ್ತೇನೆ, ಬಾಯ್ ' ಎಂದಳು. ನನಗೆ ರಮ್ಯಳನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಬೋರ್ಡಿಂಗ್ ಪಾಸ್ ಪಡೆದು ನಂತರ ಕಾಫಿ ಬಾರ್ ನಲ್ಲಿ ಕಾಫಿ ಕುಡಿದು ಅವಳಿಗೆ ಬಾಯ್ ಹೇಳುವುದು ನನ್ನ ಉದ್ದೇಶವಾಗಿತ್ತು. ಇಲ್ಲಿ ನೋಡಿದರೆ ಎಲ್ಲಾ ಉಲ್ಟಾ ಆಗುತ್ತಿದೆ. ನಾನು ಸ್ವಲ್ಪ ನಿರುತ್ಸಾಹದಿಂದ ರಮ್ಯ ನಮಗ್ಯಾಕೆ ಇಲ್ಲದ ಉಸಾಬರಿ ಸುಮ್ಮನೆ ಮುಂದೆ ತಿರುಗು ಎಂದೆ. ಅಷ್ಟರಲ್ಲಿ ಅಲ್ಲಿಗೆ ವೈದ್ಯರು ಮೆಡಿಕಲ್ ಕಿಟ್ ಸಮೇತ ಬಂದರು. ಅವರು ಕೇಳುವುದು ಆಕೆಗೆ ಅರ್ಥವಾಗುತ್ತಿಲ್ಲ. ಆಕೆ ಹಿಂದಿಯಲ್ಲಿ ಹೇಳುವುದು ವೈದ್ಯರಿಗೆ ಅರ್ಥವಾಗುತ್ತಿಲ್ಲ. ರಂಗ ಪ್ಲೀಸ್ ಗೋ.. ಎಂದು ರಮ್ಯ ನನ್ನನ್ನು ತಳ್ಳಿದಳು. ನಾನು ವಿಧಿಯಿಲ್ಲದೆ ಸರಿ ಎನ್ನುವಂತೆ ತಲೆಯಾಡಿಸಿ ಅವರ ಬಳಿ ಹೋದೆ. ಆಕೆಯನ್ನು ಮಾತನಾಡಿಸಿದೆ. ಕೆಳಗೆ ಜ್ಞಾನ ತಪ್ಪಿ ಬಿದ್ದವರು ಅವರ ಪತಿ. ಬಾರ್ಸಿಲೋನಾ ದಲ್ಲಿ ಅವರ ಮಗ ಇದ್ದಾನಂತೆ ಅವನ ಮನೆಯಲ್ಲಿ 15 ದಿನ ಇದ್ದು, ನ್ಯೂ ಯಾರ್ಕ್ ನಲ್ಲಿರುವ ಮಗಳ ಮನೆಗೆ ಹೊರಟಿದ್ದರಂತೆ, ಅವರು ಶುಗರ್ ಪೇಷಂಟ್, ಸಾಲದಕ್ಕೆ ಅಮೆರಿಕ ವೀಸಾ ಇರುವ ಪಾಸ್ ಪೋರ್ಟ್ ಜತೆಯಲ್ಲಿ ಇಲ್ಲ ಎನ್ನುವುದು ಗೊತ್ತಾಗಿ ಬಿಪಿ ಹೆಚ್ಚಾಗಿ ಜ್ಞಾನ ತಪ್ಪಿ ಬಿದ್ದಿದ್ದರು. ಇಷ್ಟೆಲ್ಲ ವರದಿಯನ್ನು ನಾನು ವೈದ್ಯರಿಗೆ ಒಪ್ಪಿಸಿದೆ. ನಂತರದ 15 ನಿಮಿಷದಲ್ಲಿ ಅವರಿಗೆ ಪ್ರಜ್ಞೆ ಬಂದಿತು. ನಾನು ಅವರಿಂದ ಅವರ ಮಗನ ನಂಬರ್ ಪಡೆದು ಅವನಿಗೆ ವಿಷಯವ ಮುಟ್ಟಿಸಿದೆ. ನ್ಯೂಯಾರ್ಕ್‌ನಲ್ಲಿರುವ ಅವರ ಮಗಳಿಗೂ ಫೋನ್ ಮಾಡಿ ಗಾಬರಿಯಾಗುವುದು ಬೇಡ. ನಿಗದಿಯಾದಂತೆ ನಿಮ್ಮ ಅಪ್ಪ ಅಮ್ಮ ಅಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಹೇಳಿದೆ. ರಮ್ಯಳಿಗೆ ನೀನು ಹೋಗು ಬಾಯ್ ಎಂದು ದೂರದಿಂದ ಹೇಳಿ, ಅವರ ಮಗ ಅಂಕುರ್ ಬಾಗ್ಲ ಬರುವವರೆಗೆ ಅಲ್ಲಿಯೇ ಅವರೊಂದಿಗೆ ಕುಳಿತೆ.
ಈ ಅಂಕುರ್ ಬಾಗ್ಲ್‌ನನ್ನ ನಾನು ಈ ಹಿಂದೆ ಅಂದರೆ ವರ್ಷ ಅಥವಾ ಎರಡು ವರ್ಷಗಳ ಹಿಂದೆ ಒಮ್ಮೆ ಭಾರತೀಯ ರಾಯಭಾರ ಕಚೇರಿಯಲ್ಲಿ ಭೇಟಿಯಾಗಿದ್ದೆ. ಹತ್ತು ಹದಿನೈದು ನಿಮಷದ ಮಾತುಕತೆಯಾಗಿತ್ತು. ಆದರೆ ನಂತರ ಆತ ನೆನಪಿನಾಳದಿಂದ ಮರೆಯಾಗಿದ್ದ. ಅವನನ್ನ ನೋಡಿದ ತಕ್ಷಣ ನನಗೆ ಹಿಂದಿನ ಭೇಟಿ ನೆನಪಾಯಿತು. 'ಅರೆ ಯಾರ್ ರಂಗ, ಬಹುತ್ ಧನ್ಯವಾದ್ ' ಎಂದವನಿಗೆ ' ನೋ ಆಯ್ ದೆ ಕೆ ' ಎಂದೆ. (ಅದೆಲ್ಲ ಏತಕ್ಕೆ ಎನ್ನುವ ಅರ್ಥ) ಅಂಕುರ್ ಒಬ್ಬ ಕಲಾವಿದ. ಬಾರ್ಸಿಲೋನಾದಲ್ಲಿ ಪೈಂಟರ್ ಆಗಿ ಜೀವನವನ್ನು ಕಂಡುಕೊಂಡಿದ್ದ. ತಿಂಗಳುಗಟ್ಟಲೆ ತನಗೆ ಇಷ್ಟವಾದ ಚಿತ್ರಗಳನ್ನು ಬಿಡಿಸುವುದು ನಂತರ ಅದನ್ನು ಕಲಾರಸಿಕರಿಗೆ ಮಾರುವುದು ಅವನ ವೃತ್ತಿಯಾಗಿತ್ತು. ಇಷ್ಟು ಮಾಹಿತಿ ನನಗೆ ಮೊದಲೇ ತಿಳಿದಿತ್ತು. ಆದರೆ ಅವರಪ್ಪ ವಜ್ರದ ವ್ಯಾಪಾರಿ ಆಗರ್ಭ ಶ್ರೀಮಂತ ಎನ್ನುವುದು ನಂತರ ತಿಳಿದ ವಿಷಯ. ಜೈಪುರದಲ್ಲಿ ಬಹಳ ದೊಡ್ಡ ಹೆಸರು ಇವರ ಮನೆತನದ್ದು. ನನಗೆ ಬಿದ್ದವರು ಯಾರು ಎನ್ನುವುದು ಗೊತ್ತಿರಲಿಲ್ಲ, ಅವರಿಗೆ ಸಹಾಯ ಮಾಡಲು ಹೊರಟಿದ್ದು ರಮ್ಯಳ ಒತ್ತಾಯದ ಮೇರೆಗೆ, ಹಣೆಬರಹ ಎನ್ನುವುದು ಇದಕ್ಕೆ ಎನ್ನಬಹುದು. ಆತ ಮುಂದಿನ ದಿನಗಳಲ್ಲಿ ನನ್ನನ್ನು ಬಹಳಷ್ಟು ಹಚ್ಚಿಕೊಂಡು ಬಿಟ್ಟರು. ಮಗನಿಗಿಂತ ಹೆಚ್ಚಾದ ಪ್ರೀತಿ ತೋರಿಸ ತೊಡಗಿದರು. ವಾರದಲ್ಲಿ ಅಮೇರಿಕ ವೀಸಾ ಇದ್ದ ಪಾಸ್ ಪೋರ್ಟ್ ತರಿಸಿಕೊಂಡು ಅಮೇರಿಕಗೆ ಹೋದರು. ತಿಂಗಳ ನಂತರ ರಮ್ಯ ಮರಳಿ ಬಂದಾಗ ಅವರೂ ಮತ್ತೆ ಬಾರ್ಸಿಲೋನಾಗೆ ಬಂದರು. ಬಂದವರು ನಮ್ಮ ಮನೆಗೂ ಬಂದರು. ಕೇಳದೆ ಹತ್ತಾರು ಗಿಫ್ಟ್ ತಂದಿದ್ದರು. ಬೇಡವೆಂದರೂ ಬಿಡದೆ ಅದನ್ನು ಒತ್ತಾಯವಾಗಿ ನಮಗೆ ಕೊಟ್ಟರು.

ಬಾಗ್ಲ ಪರಿವಾರದೊಂದಿಗೆ ಇಷ್ಟಕ್ಕೆ ನಮ್ಮ ಒಡನಾಟ ನಿಲ್ಲಲಿಲ್ಲ. ಪ್ರತಿ ವರ್ಷವೂ ಅವರಿಗೆ ಸಹಾಯ ಮಾಡಿದ ದಿನದಂದು ನನಗೆ ಧನ್ಯವಾದ ಹೇಳಿದ ಒಂದು ಪತ್ರ ಅವರ ಆಫೀಸ್ ನಿಂದ ಬಂದು ತಲುಪುತ್ತದೆ. ಪ್ರತಿ ವರ್ಷವೂ ಅವರ ಕುಟುಂಬದ ಸದಸ್ಯರೆಲ್ಲರೂ ಯಾವುದಾದರೂ ಒಂದು ದೇಶದಲ್ಲಿ ಸೇರಿ ಒಂದೆರೆಡು ವಾರ ಕಳೆಯುವುದು ಅವರ ಮನೆಯ ಪರಿಪಾಠ. ಈ ಘಟನೆಯ ನಂತರ ಸತತವಾಗಿ ಮೂರು ವರ್ಷಗಳು ಅವರ ಕುಟುಂಬ ಬಾರ್ಸಿಲೋನಾ ದಲ್ಲಿ ಸಭೆ ಸೇರುತ್ತಿತ್ತು. ಒಂದು ದಿನವೂ ತಪ್ಪದೆ ನನಗೂ ರಮ್ಯಳಿಗೂ ಅವರೊಂದಿಗೆ ಕಳೆಯುವ ಇನ್ವಿಟೇಷನ್ ಇರುತ್ತಿತ್ತು. ಇಂದಿಗೂ ಬಾಗ್ಲ ಪರಿವಾರ ನನ್ನ ಅಂದಿನ ಸಣ್ಣ ಸಹಾಯವನ್ನು ನೆನೆಯುತ್ತಾರೆ.
ಇಷ್ಟೆಲ್ಲ ಕಥೆಯನ್ನು ಹೇಳುವ ಉದ್ದೇಶ ಬಹಳ ಸರಳ. ನಾವು ಇದ್ದ ನೆಲದ ಭಾಷೆಯನ್ನು ಕಲಿಯಬೇಕು. ಎಷ್ಟು ಭಾಷೆ ಕಲಿತರೂ ಅದು ನಮಗೆ ವರದಾನ, ಆಸ್ತಿ. ಬಾರ್ಸಿಲೋನಾಗೆ ಬಂದು ಹತ್ತಾರು ವರ್ಷಗಳಾದರೂ ಒಂದಕ್ಷರ ಸ್ಪ್ಯಾನಿಷ್ ಮಾತನಾಡದೆ ಜೀವನ ಸವೆಸುತ್ತಿರುವ ಅನೇಕ ಪಾಕಿಸ್ತಾನಿ, ಚೀನಿ ಮತ್ತು ಬಾಂಗ್ಲಾದೇಶೀಯರನ್ನು ಕಂಡಿದ್ದೇನೆ. ಅದರಲ್ಲಿ ಭಾರತೀಯರೂ ಸೇರಿದ್ದಾರೆ ಎನ್ನುವುದು ದುಃಖದ ವಿಷಯ. ಚೀನಿಯರಂತೂ ಭಾಷೆ ಬಾರದೆ ವ್ಯಾಪಾರವನ್ನು ಕೂಡ ಮಾಡುತ್ತಿದ್ದಾರೆ. ಇದಕ್ಕೆಷ್ಟು ಬೆಲೆ ಎಂದರೆ, ಕ್ಯಾಲುಕುಲೇಟರ್ ನಲ್ಲಿ ಸಂಖ್ಯೆಯನ್ನು ಟೈಪ್ ಮಾಡಿ ತೋರಿಸುತ್ತಾರೆ ಎಂದರೆ ಇವರ ಮಟ್ಟ ಇನ್ನೆಂಥದ್ದು ಎನ್ನುವ ಅರಿವು ನಿಮ್ಮದಾದೀತು.

ಇವತ್ತಿಗೂ ಯಾವುದೇ ದೇಶಕ್ಕೆ ಹೋಗುವ ಮುನ್ನ ಆ ದೇಶದ ಭಾಷೆಯ ಮೂಲಭೂತ ಅಂಶಗಳನ್ನು ಅಂದರೆ ಊಟ ತಿಂಡಿ ಬಗ್ಗೆ ಕೇಳುವುದು, ಹಾಯ್, ಬಾಯ್ ಹೇಳುವುದು, ನಿಮ್ಮ ಭಾಷೆ ನನಗೆ ಬರುತ್ತಿಲ್ಲ ಕ್ಷಮಿಸಿ ಎನ್ನುವುದು, ಧನ್ಯವಾದ ಹೇಳುವುದು ಹೀಗೆ ದಿನ ನಿತ್ಯದ ಬದುಕಿನಲ್ಲಿ ಹತ್ತಾರು ಬಾರಿ ನಾವು ಬಳಸಲೇ ಬೇಕಾದ ಪದಗಳನ್ನು ಕಲಿತು ಹೋಗುತ್ತೇನೆ. ನೀವು ಅವರ ಯಾವ ದೇಶಕ್ಕೆ ಹೋಗಿರುತ್ತೀರ ಅವರ ಭಾಷೆಯಲ್ಲಿ ಒಮ್ಮೆ ಮಾತನಾಡಿ ನೋಡಿ! ಅವರು ಕೊಡುವ ಗೌರವ ನಿಮ್ಮನ್ನು ಇನ್ನಷ್ಟು ಕಲಿಯಲು ಪ್ರೇರೇಪಿಸದಿದ್ದರೆ ಕೇಳಿ. ಎಷ್ಟು ಭಾಷೆ ಕಲಿತರೂ ಅಷ್ಟು ಲಾಭ ನಮಗೆ.