Thursday, October 2, 2025
Thursday, October 2, 2025

ಕೊಡಗು ದಸರಾ ಕೂಡ ಜಗತ್ ಪ್ರಸಿದ್ಧವೇ!

ಕನ್ನಡ ನಾಡಿನಲ್ಲಿ ನಾಡಹಬ್ಬವಾಗಿಯೇ ಆಚರಿಸಲ್ಪಡುವ ವಿಜಯದಶಮಿ ಅಥವಾ ದಸರಾವನ್ನು ಮೈಸೂರು ಸ್ವಾಗತಿಸಿದರೆ, ಮಡಿಕೇರಿ ಬೀಳ್ಕೊಡುತ್ತದೆ. ಈ ಮಾತು ಅಕ್ಷರಶಃ ನಿಜ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ಜನರನ್ನು ದೇವಲೋಕಕ್ಕೆ ಕರೆದೊಯ್ಯುತ್ತದೆ.

- ಅನಿಲ್ ಹೆಚ್.ಟಿ.

ಆನೆ ಇಲ್ಲ, ಅಂಬಾರಿ ಇಲ್ಲ, ಗದ್ದಲ ಇಲ್ಲ, ಗೊಂದಲ ಇಲ್ಲ, ಸೂರ್ಯಾಸ್ತಮಾನದ ಬಳಿಕ ಮಂಜಿನ ನಗರಿ ಮಡಿಕೇರಿಯಲ್ಲಿ ವಿದ್ಯುದ್ದೀಪಾಲಂಕೖತ ರಸ್ತೆಗಳಲ್ಲಿ ದೇವಾನುದೇವತೆಗಳಿಂದ ಅಸುರರ ಸಂಹಾರದ ದೃಶ್ಯ ವೈಭವವನ್ನು ಹೊತ್ತು ಸಾಗುವ ದಶಮಂಟಪಗಳ ವೈಭವ ಕಣ್ತುಂಬಿಸಿಕೊಳ್ಳುವುದೇ ಒಂದು ಅಪೂರ್ವ ಅನುಭವ.

ಇದು ಮಡಿಕೇರಿ ದಸರಾ. ಇದು ಮಡಿಕೇರಿಯ ಜನೋತ್ಸವ. ಇದು ಮಡಿಕೇರಿಯಲ್ಲಿ ಅರ್ಥಪೂರ್ಣವಾಗಿ ಸಾಗಿಬಂದಿರುವ ದೈವತಾ ಕಾರ್ಯ. ಇದುವೇ ಕೊಡಗಿನ ಪ್ರಮುಖ ನಾಡಹಬ್ಬದ ಸಂಭ್ರಮ.

ಕನ್ನಡ ನಾಡಿನಲ್ಲಿ ನಾಡಹಬ್ಬವಾಗಿಯೇ ಆಚರಿಸಲ್ಪಡುವ ವಿಜಯದಶಮಿ ಅಥವಾ ದಸರಾವನ್ನು ಮೈಸೂರು ಸ್ವಾಗತಿಸಿದರೆ, ಮಡಿಕೇರಿ ಬೀಳ್ಕೊಡುತ್ತದೆ. ಈ ಮಾತು ಅಕ್ಷರಶಃ ನಿಜ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ಜನರನ್ನು ದೇವಲೋಕಕ್ಕೆ ಕರೆದೊಯ್ಯುತ್ತದೆ.

kodagu

ಮಡಿಕೇರಿ ದಸರಾ ಎಂದರೆ ಅಲ್ಲಿ ಅಧಿಕಾರಿಗಳ ದರ್ಬಾರ್ ಇಲ್ಲ. ಸರ್ಕಾರದ ಹಸ್ತಕ್ಷೇಪವಿಲ್ಲ. ಜಾತಿ, ಧರ್ಮಗಳ ಹಂಗಿಲ್ಲದೆ ಜನರೇ ಜನರಿಗೋಸ್ಕರ ಆಚರಿಸುವ ಜನೋತ್ಸವವಾಗಿದೆ. ಹಾಗಾಗಿ ಇತರೆಡೆ ಆಚರಿಸಲ್ಪಡುವ ದಸರಾಕ್ಕಿಂತ ಮಡಿಕೇರಿ ದಸರಾ ವಿಭಿನ್ನ ಹಾಗೂ ವಿಶಿಷ್ಟವಾಗಿ ಕಂಗೊಳಿಸುತ್ತದೆ.

ಮಡಿಕೇರಿ ದಸರಾ ಹಿಂದಿನ ಕಾಲದಿಂದಲೂ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಈ ದಸರಾ ಉತ್ಸವವನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ, ಎಲ್ಲಾ ಮತಗಳ, ಧರ್ಮಗಳ ಜನರು ಒಗ್ಗೂಡಿ ನಡೆಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಮಡಿಕೇರಿ ದಸರಾ ಭಾವೈಕ್ಯತೆಯನ್ನು ಸಾರುವ ಉತ್ಸವವಾಗಿದೆ. ಮಡಿಕೇರಿಯ ದಶಮಂಟಪಗಳ ರಚನೆಯಲ್ಲಿ ಹಿಂದೂಗಳಷ್ಟೇ ಶ್ರದ್ದಾಭಾವದಿಂದ ಮುಸ್ಲಿಮರು, ಕ್ರೈಸ್ತರು ಕೈಜೋಡಿಸುತ್ತಾರೆ. ಮನೆ ಮನೆ ತಿರುಗಿ ಮಂಟಪ ನಿರ್ಮಾಣಕ್ಕೆ ಬೇಕಾದ ಚಂದಾ ಸಂಗ್ರಹಿಸುತ್ತಾರೆ. ದಶಮಂಟಪಗಳ ನಡುವಿನ ಪೈಪೋಟಿಯಲ್ಲಿ ತಮ್ಮ ದೇವಾಲಯದ ಮಂಟಪ ಜನಾಕರ್ಷಣೆ ಆಗಬೇಕೆಂಬ ಛಲದಿಂದ ಹಗಲೂ ರಾತ್ರಿ ಲೆಕ್ಕಿಸದೇ ಕೆಲಸ ಮಾಡುತ್ತಾರೆ. ಒಂದಲ್ಲ, ಎರಡಲ್ಲ, ನೂರಾರು ಕಾರ್ಯಕರ್ತರು ಏಕಚಿತ್ತದಿಂದ ಮಂಟಪವನ್ನು ಅಂದವಾಗಿ ರೂಪುಗೊಳಿಸುವಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಾರೆ, ಮಡಿಕೇರಿ ನಗರ ದಸರಾ ಸಮಿತಿಯೂ ಅಷ್ಟೇ. ಮಡಿಕೇರಿ ನಗರಸಭೆಯ ನೇತೃತ್ವದಲ್ಲಿ ಸಾರ್ವಜನಿಕರನ್ನು ಒಳಗೊಂಡು ರಚಿಸಲ್ಪಟ್ಟ ಮಡಿಕೇರಿ ನಗರ ದಸರಾ ಸಮಿತಿಯು ನಾಡಹಬ್ಬದ ಯಶಸ್ಸಿಗೆ ಪ್ರತೀ ವರ್ಷವೂ ರಾಜಕೀಯ, ಧರ್ಮಗಳ ಅಂತರವಿಲ್ಲದೇ ಕಾರ್ಯನಿರ್ವಹಿಸುತ್ತಾ ಬಂದಿದೆ.

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 26 ವರ್ಷಗಳಿಂದ ಮಡಿಕೇರಿ ದಸರಾಕ್ಕೆ ಅನುದಾನ ನೀಡುತ್ತಾ ಬಂದಿದೆ, ಸರ್ಕಾರ ನೀಡುವ ಅನುದಾನ ದಸರಾ ಆಚರಣೆಗೆ ಸಾಕಾಗುವುದಿಲ್ಲ ಎಂಬ ಕೊರಗಿನ ನಡುವೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ದಸರಾ ಸಮಿತಿ ಆಚರಿಸುತ್ತಾ ಬಂದಿದೆ.

dasara


ಈಗಾಗಲೇ ಮಡಿಕೇರಿಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಪ್ರಾರಂಭವಾಗಿದ್ದು ಕರಗಗಳು ನಗರ ಪ್ರದಕ್ಷಿಣೆ ನಡೆಸಿ ಮಡಿಕೇರಿ ಜನತೆಯ ಪೂಜೆ ಸ್ವೀಕರಿಸುವುದು ವಾಡಿಕೆ. ಶಕ್ತಿದೇವತೆಗಳ ಕರಗ ಪೂಜೆ, ನಗರ ಪ್ರದಕ್ಷಿಣೆ ಜನರಲ್ಲಿ ಪ್ರತೀ ವರ್ಷವೂ ಮಾನಸಿಕವಾಗಿ ಅಭಯ ಉಂಟು ಮಾಡುತ್ತದೆ. ಶಕ್ತಿದೇವತೆಗಳ ಕೃಪೆ ನಾಡಿನ ಮೇಲಿದೆ ಎಂಬ ಭಾವನೆಗೆ ಈ ಪೂಜಾ ಸಂಪ್ರದಾಯ ಕಾರಣವಾಗಿದೆ. ರೋಗರುಜಿನಗಳಿಂದ, ಸಂಕಷ್ಟಗಳಿಂದ ಮಡಿಕೇರಿಯನ್ನು ಶಕ್ತಿದೇವಿಯರು ಕಾಪಾಡುತ್ತಾರೆ ಎಂಬ ಪ್ರಾಚೀನ ನಂಬಿಕೆ ಇಂದಿಗೂ ಭಕ್ತರ ಮನಸ್ಸಿನಲ್ಲಿ ಹಸಿರಾಗಿಯೇ ಇರಲು ಕಾರಣ ಆ ನಂಬಿಕೆಗಳು ವಾಸ್ತವವಾಗಿಯೇ ಉಳಿದುಕೊಂಡಿರುವುದೇ ಆಗಿದೆ.

ಮಡಿಕೇರಿ ದಸರಾದ ಇತಿಹಾಸ:

ಮಡಿಕೇರಿಯಲ್ಲಿ ದಸರಾ ಆಚರಣೆ ಇಂದು ನಿನ್ನೆಯದಲ್ಲ. ಇದಕ್ಕೆ ಗತ ಇತಿಹಾಸವಿದೆ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ, ಆ ನಂತರ ಅರಸೊತ್ತಿಗೆಯನ್ನು ಸ್ಥಾಪಿಸಿ ಕೊಡಗನ್ನಾಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು. 1781 ರಿಂದ 1809 ರವರೆಗೆ ಕೊಡಗನ್ನಾಳಿದ ದೊಡ್ಡವೀರ ರಾಜೇಂದ್ರ ಒಡೆಯರ್ ಮೈಸೂರು ಮಹಾರಾಜರು ನಡೆಸುತ್ತಿದ್ದರಂತೆ. ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದರಂತೆ.

ಆಗಿನ ಕಾಲದಲ್ಲಿ ಪಾಡ್ಯದ ಪ್ರಾತಃ ಕಾಲದಲ್ಲಿ ಏಳುತ್ತಿದ್ದ ಮಹಾರಾಜರು ಮಂಗಳ ಸ್ನಾನ ಮಾಡಿ ನವರಾತ್ರಿ ಉತ್ಸವಕ್ಕೆ ಸಂಕಲ್ಪ ತೊಡುತ್ತಿದ್ದರು. ಆ ನಂತರ ಕೋಟೆಯಲ್ಲಿರುವ ಮಹಾಗಣಪತಿಗೆ ಮೊದಲ ಪೂಜೆ ನೆರವೇರಿಸುವ ಮೂಲಕ ನವರಾತ್ರಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿತ್ತು. ನವರಾತ್ರಿ ಕಾರ್ಯಕ್ರಮಗಳೆಲ್ಲವೂ ಅರಮನೆಯ ಆವರಣದಲ್ಲಿಯೇ ನಡೆಯುತ್ತಿತ್ತು. ನವರಾತ್ರಿ ಉತ್ಸವದಲ್ಲಿ ವಿಶೇಷ ರಾಜರ ದರ್ಬಾರ್, ಕುದುರೆ ಹಾಗೂ ಜಂಬೂಸವಾರಿಯೂ ನಡೆಯುತ್ತಿತ್ತಲ್ಲದೆ, ಕೊಡವರ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವಂಥ ಕಾರ್ಯಕ್ರಮಗಳು ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದವು. ವಿಜಯದಶಮಿಯಂದು ಎಲ್ಲೆಡೆ ದೇವಾಲಯಗಳಲ್ಲಿ ಭಜನೆ, ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಉತ್ಸವಗಳು ನಡೆಯುತ್ತಿದ್ದವು. ಅಂದು ಮೈಸೂರಿನಲ್ಲಿ ನಡೆಯುವಂತೆ ಜಂಬೂ ಸವಾರಿಯೂ ನಡೆಯುತ್ತಿತ್ತು. ಮಡಿಕೇರಿಯ ಅರಮನೆ ಆವರಣದಿಂದ ಈ ಮೆರವಣಿಗೆ ಆರಂಭವಾಗುತ್ತಿತ್ತು.

ಒಂದು ಕಡೆ ದೇವರ ವಿಗ್ರಹವನ್ನು ಹೊತ್ತ ಅಂಬಾರಿ ಆನೆ, ಮತ್ತೊಂದು ಕಡೆ ಮಹಾರಾಜರನ್ನು ಹೊತ್ತ ಆನೆ - ಹೀಗೆ ಎರಡು ಆನೆಗಳು ಮುನ್ನಡೆದರೆ, ಸುತ್ತಲೂ ಸಿಂಗಾರಗೊಂಡ ಆನೆಗಳು, ಕುದುರೆಗಳು, ಸೇನಾಧಿಪತಿಗಳು, ಸೈನಿಕರು ಹಾಗೂ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರಂತೆ. ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಮೆರವಣಿಗೆ ಮಹದೇವಪೇಟೆ ಬಳಿಯ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಮುಕ್ತಾಯಗೊಳ್ಳುತ್ತಿತ್ತು.

ಆದರೆ ಮಹಾರಾಜರ ಈ ನವರಾತ್ರಿ ಉತ್ಸವ ಹೆಚ್ಚು ದಿನ ನಡೆಯಲಿಲ್ಲ. 1834ರಲ್ಲಿ ಕೊಡಗನ್ನಾಳುತ್ತಿದ್ದ ಚಿಕ್ಕವೀರರಾಜರನ್ನು ಬ್ರಿಟಿಷರು ಸೆರೆಹಿಡಿದರು. ಆ ನಂತರ ನವರಾತ್ರಿ ಉತ್ಸವ ಸಾರ್ವಜನಿಕ ಉತ್ಸವವಾಗಿ ಬದಲಾಯಿತು. ನಂತರ ಮಡಿಕೇರಿಯಲ್ಲಿದ್ದ ಭಜನಾಮಂದಿರಗಳು ನವರಾತ್ರಿ ಉತ್ಸವವನ್ನು ಮುಂದುವರಿಸಿದವು. ಅಲ್ಲದೆ, ಮಡಿಕೇರಿಯ ಕೋಟೆಯನ್ನು ಕಾಯುವ ಕೋಟೆ ಶ್ರೀ ಮಾರಿಯಮ್ಮ, ನಗರವನ್ನು ಕಾಯುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಸೈನ್ಯವನ್ನು ಕಾಪಾಡುವ ದಂಡಿನ ಶ್ರೀ ಮಾರಿಯಮ್ಮ, ಆರೋಗ್ಯ ಹಾಗೂ ಐಶ್ವರ್ಯವನ್ನು ದಯಪಾಲಿಸುವ ಶ್ರೀ ಕಂಚಿಕಾಮಾಕ್ಷಮ್ಮ ಹೀಗೆ ನಾಲ್ಕು ಶಕ್ತಿದೇವತೆಗಳನ್ನು ಪೂಜಿಸುವ ಮೂಲಕ ಕರಗಗಳ ನಗರ ಪ್ರದಕ್ಷಿಣೆ ಪ್ರಾರಂಭವಾಗಿ ನಂತರ ತೇರನ್ನು ರಚಿಸಿ ಮೆರವಣಿಗೆಯಲ್ಲಿ ಸಾಗುವ ಆಚರಣೆ ರೂಢಿಗೆ ಬಂತು.

ಬಿದಿರಿನ ಅಟ್ಟಣಿಗೆಯಿಂದ ಮಂಟಪವನ್ನು ರಚಿಸಿ ಅದರಲ್ಲಿ ಉತ್ಸವ ಮೂರ್ತಿಯನ್ನು ಹಿಂದಿನ ಕಾಲದಲ್ಲಿ ಇಡಲಾಗುತ್ತಿತ್ತು. ಈ ಉತ್ಸವ ಮೂರ್ತಿಗೆ ಕನ್ಯೆಯರು ಚೌರಿಗೆಯನ್ನು ಬೀಸುತ್ತಿದ್ದರೆ, ಪುರುಷರು ಮಂಟಪವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ದಾರಿಯುದ್ದಕ್ಕೂ ಪೂಜೆಗಳು ನಡೆಯುತ್ತಿದ್ದವು. ಕೊಡವ ಸಾಂಪ್ರದಾಯಿಕ ವಾಲಗ, ನೃತ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿತ್ತು. ಕೊನೆಗೆ ಮಹದೇವಪೇಟೆ ಬಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆ ಬೀಳುತ್ತಿತ್ತು.

ಮುಂದುವರಿದ ಸಂಪ್ರದಾಯ

ಹಾಲೇರಿ ವಂಶಸ್ಥರ ಕಾಲದಿಂದ ಆರಂಭಗೊಂಡ ಮಡಿಕೇರಿ ದಸರಾ ನಂತರದ ಕಾಲದಲ್ಲಿ ನಿಲ್ಲದೆ ಮುಂದುವರೆಯುತ್ತಾ ಬಂದಿರುವುದು ದಾಖಲಾರ್ಹ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಗ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷ್ ಸರಕಾರ ಎಲ್ಲಾ ರೀತಿಯ ಉತ್ಸವಗಳನ್ನು ಬಹಿಷ್ಕರಿಸಿದಾಗಲೂ ಮಡಿಕೇರಿ ದಸರಾ ನಿಲ್ಲಲಿಲ್ಲವಂತೆ. ಮುಂದೆ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿಯೂ ಕರಗವನ್ನು ಹೊರಡಿಸುವುದು ನಿಲ್ಲಲಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಮಡಿಕೇರಿ ದಸರಾ ಅಭಿವೃದ್ದಿಯತ್ತ ಸಾಗತೊಡಗಿತು. ವಿಶ್ವಯುದ್ದ ಸಂದರ್ಭದಲ್ಲಿ ದೀವಟಿಗೆಗಳ ಜತೆ ಮಡಿಕೇರಿ ದಸರಾ ದೇವಿಯರ ಮೆರವಣಿಗೆ ನಡೆಸಲಾಗಿತ್ತು, ಶತ್ರುದೇಶಗಳ ಕಣ್ಣಿಗೆ ಕಾಣದಂತೆ ಕಂದೀಲು ಬೆಳಗಿಸಿ ಸಂಪ್ರಾದಯಕ್ಕೆ ಚ್ಯುತಿ ಬಾರದಂತೆ ಅಂದಿನ ಹಿರಿಯರು ನಾಡದೇವಿಗೆ ಪೂಜೆ ಸಲ್ಲಿಸುತ್ತಿದ್ದರು ಎಂದು ಹಿರಿಯರು ಸ್ಮರಿಸಿಕೊಳ್ಳುತ್ತಾರೆ.

ಮೊದಲಿದ್ದ ನಾಲ್ಕು ಮಂಟಪಗಳ ಜೊತೆಗೆ ಇನ್ನು ಕೆಲವು ದೇವಾಲಯಗಳು ಕೂಡ ಮಂಟಪವನ್ನು ಹೊರಡಿಸುವುದರ ಮೂಲಕ ದಸರಾ ಮೆರವಣಿಗೆಗೆ ಕಳೆಕಟ್ಟತೊಡಗಿದವು. 1958ರಲ್ಲಿ ರಾಜಸ್ಥಾನದಿಂದ ಬಂದು ಮಡಿಕೇರಿಯಲ್ಲಿ ನೆಲೆಸಿದ್ದ ಭೀಮಸಿಂಗ್ ಅವರು ಬಾಣೆಮೊಟ್ಟೆಯ ರಘುರಾಮ ಮಂಟಪವನ್ನು ಮೆರವಣಿಗೆಗೆ ಸೇರ್ಪಡೆ ಮಾಡಿದರು. ಆಗ ಮೆರವಣಿಗೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಮಂಟಪದೊಂದಿಗೆ ಪೇಟೆ ಶ್ರೀ ರಾಮಮಂದಿರ, ದೇಚೂರಿನ ರಾಮಮಂದಿರ, ಚಿಕ್ಕಪೇಟೆಯ ಬಾಲಕ ರಾಮಮಂದಿರದ ಮಂಟಪಗಳು ಸಾಗುತ್ತಿದ್ದವು. ಮೊದಲು ಇದ್ದ ನಾಲ್ಕು ಮಂಟಪಗಳು ನಂತರದ ವರ್ಷದಲ್ಲಿ ಐದು, ಏಳು, ಒಂಭತ್ತು ಆಯಿತು. ಬಳಿಕ ಕರವಲೆಯ ಶ್ರೀ ಭಗವತಿ ದೇವಿಯ ದೇವಾಲಯ ಮಂಟಪದಿಂದ 10 ನೇ ಮಂಟಪ ಮಡಿಕೇರಿ ದಸರಾಕ್ಕೆ ಸೇರ್ಪಡೆಯಾಯಿತು.

2020- 2021 ರ ಸಂದರ್ಭ ಜಗತ್ತನ್ನು ಕಾಡಿದ ಕೋವಿಡ್ ಮಹಾಮಾರಿ ಸಂದರ್ಭವೂ ಮಡಿಕೇರಿಯಲ್ಲಿ ನಾಡಹಬ್ಬ ದಸರಾ ಸರಳ ರೀತಿಯಲ್ಲಿ ಆಯೋಜಿಸಲ್ಪಟ್ಟಿತ್ತು, ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹೆಚ್ಚೇನು ವೈಭವ ಇಲ್ಲದೇ ಆ ವರ್ಷಗಳಲ್ಲಿ ನಾಡಹಬ್ಬದ ಆಚರಣೆ ಮಡಿಕೇರಿಯಲ್ಲಿ ನಡೆದದ್ದು ಸ್ಮರಣೀಯ.

ವಿಜಯದಶಮಿ ದಿನದಂದು ರಾತ್ರಿ ಮಡಿಕೇರಿಯಲ್ಲಿ ಸಾಗುವ ಮೆರವಣಿಗೆಯಲ್ಲಿ ಪೇಟೆ ಶ್ರೀರಾಮ ಮಂದಿರದ ಮಂಟಪ ಮುಂಚೂಣಿಯಲ್ಲಿರುತ್ತದೆ. ಮಡಿಕೇರಿ ನಗರದ ವಿವಿಧ ದೇವಾಲಯಗಳಾದ ಶ್ರೀ ಪೇಟೆ ರಾಮಮಂದಿರ, ಶ್ರೀಕೋಟೆಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋದಂಡರಾಮ ಮಂದಿರ, ಶ್ರೀ ಚೌಡೇಶ್ವರಿ, ಶ್ರೀ ಕೋಟೆಗಣಪತಿ ದೇವಾಲಯಗಳ ಶ್ರೀದೇಚೂರು ರಾಮಮಂದಿರ, ಕರವಲೆ ಬಾಡಗದ ಶ್ರೀ ಭಗವತಿ ದೇವಾಲಯಗಳಿಗೆ ಸೇರಿದ ದಶಮಂಟಪಗಳು ಮೆರವಣಿಗೆಯಲ್ಲಿ ಸಾಗುತ್ತವೆ.

ವಿಜೃಂಭಿಸತೊಡಗಿದೆ ಉತ್ಸವ-

ಹಿಂದೆ ಕೇವಲ ಐದೋ ಹತ್ತೋ ಸಾವಿರ ರೂಪಾಯಿಯಲ್ಲಿ ನಿರ್ಮಾಣವಾಗುತ್ತಿದ್ದ ಮಂಟಪಗಳು ಇಂದು 20-30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ. ಝಗಮಗಿಸುವ ವಿದ್ಯುತ್ ದೀಪಗಳೊಂದಿಗೆ ಹೈಟೆಕ್ ಮಾದರಿಯ ಚಲನವಲನ ಗಳನ್ನೊಳಗೊಂಡ ಪೌರಾಣಿಕ ಕಥಾಹಂದರದ ಕಲಾಕೃತಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಇಡೀ ನಗರ ವಿದ್ಯುದ್ದೀಪಗಳಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತದೆ ಅಲ್ಲದೆ, ದೇವಲೋಕವೇ ಧರೆಗೆ ಇಳಿದು ಬಂದಂತೆ ಭಾಸವಾಗುತ್ತದೆ. ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿರುವ ಬೃಹತ್ ವೇದಿಕೆಯಲ್ಲಿ ಜನೋತ್ಸವ ಕಾರ್ಯಕ್ರಮಗಳು ನಡೆದರೆ, ನಗರದಾದ್ಯಂತ ರಾತ್ರಿ ಪೂರ್ತಿ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ದಸರಾ ಸಮಿತಿಯು ಮಡಿಕೇರಿ ದಸರಾಕ್ಕೆ ಮೆರುಗು ನೀಡುವ ಉದ್ದೇಶದಿಂದ ಮೈಸೂರು ದಸರಾ ಮಾದರಿಯಲ್ಲಿ ಒಂಭತ್ತು ದಿನಗಳ ಕಾಲ ಕ್ರೀಡಾಕೂಟ, ಕವಿಗೋಷ್ಠಿ ಮಕ್ಕಳ ದಸರಾ, ಮಹಿಳಾ ದಸರಾ, ಜಾನಪದ ದಸರಾ, ಕಾಫಿ ದಸರಾ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.

Madikeri scenic beauty

ಮೈಸೂರು ದಸರಾವನ್ನು ವೀಕ್ಷಿಸಿದ ಬಳಿಕ ಪ್ರವಾಹೋಪಾದಿಯಲ್ಲಿ ಜನ ಮಡಿಕೇರಿ ದಸರಾವನ್ನು ವೀಕ್ಷಿಸಲು ಬರುವುದರಿಂದ ಮೈಸೂರಿನಿಂದ ಮಡಿಕೇರಿಗೆ ಅಂದು ವಿಶೇಷ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಒಮ್ಮೆ ಮಡಿಕೇರಿಯ ಮಂಜಿನಲ್ಲಿ ಮಿಂದೆದ್ದು ದಸರಾ ವೀಕ್ಷಿಸಿ ಹೋದವರು ಆ ಸುಂದರ ಕ್ಷಣವನ್ನು ಎಂದೆಂದಿಗೂ ಮರೆಯಲಾರರು.

ಇಷ್ಟೂ ವರ್ಷಗಳ ಇತಿಹಾಸದಲ್ಲಿ ಮಡಿಕೇರಿ ದಸರಾ ಎಂದಿಗೂ ನಿಂತ ನೀರಾಗಲಿಲ್ಲ. ಮಡಿಕೇರಿ ಜನೋತ್ಸವ ದಸರಾ ಪ್ರತೀ ವರ್ಷವೂ ಹೊಸತನದೊಂದಿಗೆ, ಹೊಸ ಕಾರ್ಯಕ್ರಮಗಳ ಮೂಲಕ, ದಶಮಂಟಪಗಳ ವೈಭವದ ಮೂಲಕ, ಜನರ ಮನಸೆಳೆಯುತ್ತಲೇ ಇದೆ.

ಹೀಗಾಗಿಯೇ ಪ್ರತೀ ದಸರಾ ಆಚರಣೆ ಮುಗಿದ ಮೇಲೂ ಜನರು ಮತ್ತೊಂದು ವರ್ಷದ ದಸರಾಕ್ಕೆ ಕಾಯುವಂತಾಗಿದೆ, 10 ದಿನಗಳ ಸಂಭ್ರಮಕ್ಕಾಗಿ ಜನ 11 ತಿಂಗಳು ಕಳೆಯುವುದನ್ನು ಕಾಯುತ್ತಾರೆ.

ಜನರಿಂದ, ಜನರಿಗಾಗಿ, ಜನರಿಗೋಸ್ಕರ ಸಾಗಿಬಂದಿರುವ ಜನೋತ್ಸವದ ಸಂಭ್ರಮ, ಸಡಗರ, ವಿಜೖಂಭಣೆ ಸದಾ ಹೀಗೇ ಸಾಗುತ್ತಿದೆ. ಜನೋತ್ಸವದ ಕೊನೇ ದಿನ ದಶಮಂಟಪಗಳ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಸಾವಿರಾರು ಜನ ಮಡಿಕೇರಿಗೆ ಬರುತ್ತಾರೆ ಇಂಥ ಜನರಲ್ಲಿ ಈ ವರ್ಷ ನೀವೂ ಒಬ್ಬರಾಗಿರಿ!!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ