ಆನೆಗೆ ಕೈತುತ್ತು ತಿನಿಸುವಿರಾ?
ಪಾಲಕ್ಕಾಡ್ ಪಟ್ಟಾಂಬಿ ನ್ಜಾನ್ಗಾಟಿರಿ ಭಗವತಿ ದೇವಸ್ಥಾನದಲ್ಲಿ ಆನೆಗಳಿಲ್ಲ. ಗಜಪೂಜೆಗಾಗಿ ಬೇರೆ ದೇಗುಲಗಳಿಂದ ಇವನ್ನು ಕರೆತರಲಾಗುತ್ತದೆ. ಹಿಂದೆಲ್ಲ ಇಲ್ಲಿಗೆ ಸುಮಾರು 21 ಕ್ಕೂ ಹೆಚ್ಚು ಆನೆಗಳು ಬರುತ್ತಿದ್ದವಂತೆ. ಆದರೆ ಪ್ರಸ್ತುತ ಕಠಿಣ ನಿಯಮಗಳು ಜಾರಿಯಲ್ಲಿರುವುದರಿಂದ ಮೂರರಿಂದ ನಾಲ್ಕು ಆನೆಗಳಷ್ಟೇ ಭಾಗವಹಿಸುತ್ತವೆ.
- ರಮೇಶ್ ಬಳ್ಳಮೂಲೆ
ದೇವರ ಸ್ವಂತ ನಾಡು ಕೇರಳ ಎಂದಾಗ ಥಟ್ಟನೆ ಸರ್ವಾಲಂಕೃತ ಆನೆಯ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಹೌದು, ಆನೆ ಮತ್ತು ಕೇರಳಿಗರ ಮಧ್ಯೆ ಹಿಂದಿನಿಂದಲೂ ದೈವಿಕ ಬಾಂಧವ್ಯವೊಂದು ಏರ್ಪಟ್ಟಿದೆ. ಕೇರಳದ ಬಹುತೇಕ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ಆನೆ ಕಾಣಸಿಗುತ್ತದೆ. ಇಲ್ಲಿನ ಉತ್ಸವ, ಜಾತ್ರೆ, ಪೂಜೆಗಳಿಗೆ ಆನೆ ಇರಲೇಬೇಕು. ಕೇರಳದಲ್ಲಿ ಇರುವಷ್ಟು ಸಾಕು ಆನೆಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಕೆಲ ಶ್ರೀಮಂತರು ಹರಕೆಯ ರೂಪದಲ್ಲಿ ಆನೆಗಳನ್ನು ದೇವಸ್ಥಾನಕ್ಕೆ ನೀಡುವ ಸಂಪ್ರದಾಯವೂ ಇಲ್ಲಿದೆ. ಕೇರಳದ ದೇವಸ್ಥಾನಗಳಲ್ಲಿ ಜನವರಿ-ಮೇ ತಿಂಗಳಲ್ಲಿ ನಡೆಯುವ ಗಜಮೇಳಗಳು ವಿಶ್ವ ಪ್ರಸಿದ್ಧ. ಇನ್ನು ವರ್ಷಪೂರ್ತಿ ದುಡಿಯುವ ಆನೆಗಳಿಗೆ ಆಷಾಢ ಮಾಸದಲ್ಲಿ (ಕೇರಳದಲ್ಲಿ ಕರ್ಕಾಟಕ ಮಾಸ) ವಿಶ್ರಾಂತಿ ನೀಡಲಾಗುತ್ತಿದೆ. ಆ ತಿಂಗಳು ಪೂರ್ತಿ ಆನೆಗಳನ್ನು ಆರೈಕೆ ಮಾಡಲಾಗುತ್ತಿದೆ. ಇದರ ಭಾಗವಾಗಿಯೇ ಆನೆಗಳಿಗೆ ಔಷಧೀಯ ಆಹಾರವನ್ನು ಕೈತುತ್ತಾಗಿ ನೀಡಲಾಗುತ್ತದೆ. ಅದನ್ನೇ ಆನಯೂಟ್ ಎನ್ನಲಾಗುತ್ತದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಬರುವ, ಮಲಯಾಳಂ ಕ್ಯಾಲೆಂಡರಿನ ಕರ್ಕಾಟಕ (ನಮ್ಮಲ್ಲಿ ಆಷಾಢ) ತಿಂಗಳಲ್ಲಿ ದೇವಸ್ಥಾನದ ಆನೆಗಳನ್ನು ಸಾಕ್ಷಾತ್ ಮಹಾಗಣಪತಿಯ ರೂಪವೆಂದು ಸಂಕಲ್ಪಿಸಿ ಗಣಪತಿ ಹೋಮ ನೆರವೇರಿಸಿ ಅವುಗಳಿಗೆ ಔಷಧೀಯ ಅನ್ನ, ಹಣ್ಣು, ತುಪ್ಪ ಇತ್ಯಾದಿ ನೀಡಲಾಗುತ್ತದೆ. ಜತೆಗೆ ಅಭ್ಯಂಗ ಸ್ನಾನದಂಥ ಸುಖ ಚಿಕಿತ್ಸೆಯನ್ನೂ ನೀಡಿ ಆರೋಗ್ಯ ಕಾಳಜಿ ವಹಿಸಲಾಗುತ್ತದೆ.
ಪಾಲಕ್ಕಾಡ್ ಪಟ್ಟಾಂಬಿ
ಕೇರಳದ ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಆನಯೂಟ್ ನೆರವೇರಿಸಲಾಗುತ್ತದೆ. ಅದರಲ್ಲಿಯೂ ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿ ನ್ಜಾನ್ಗಾಟಿರಿ ಭಗವತಿ ದೇವಸ್ಥಾನದಲ್ಲಿ ಈ ಆಚರಣೆ ಬಹಳ ವಿಶೇಷವಾಗಿ ಜರುಗುತ್ತದೆ. ಪ್ರತಿ ಕರ್ಕಾಟಕ ಮಾಸದ ಮೊದಲ ಶುಕ್ರವಾರ ಇಲ್ಲಿ ಆನಯೂಟ್ ನೆರವೇರುತ್ತದೆ. ಈ ಬಾರಿ ಇದು ಜುಲೈ 17ರಂದು ನಡೆದಿದೆ.
ಆ ದಿನ ಬೆಳಗ್ಗೆ ಗಣಪತಿಯ ಪ್ರತಿರೂಪವಾದ ಆನೆಗಳಿಗೆ ಪೂಜೆ ನೆರವೇರಿಸಿ, ಬಳಿಕ ಅವುಗಳಿಗೆ ಕಬ್ಬು, ಅನ್ನ, ತುಪ್ಪ, ತೆಂಗಿನಕಾಯಿ, ಬೆಲ್ಲ ಮತ್ತು ಆಯುರ್ವೇದ ಔಷಧಗಳನ್ನು ನೀಡಲಾಗುತ್ತದೆ. ಯಾವುದೇ ರೋಗರುಜಿನ ಬಾರದೇ ಇರಲಿ ಎನ್ನುವ ಕಾರಣಕ್ಕೆ ಅನ್ನದಲ್ಲಿ ಕರಿಮೆಣಸು, ಅರಿಶಿನ ಮುಂತಾದವುಗಳನ್ನು ಬೆರೆಸಲಾಗುತ್ತದೆ. ಒಟ್ಟಿನಲ್ಲಿ ಮನುಷ್ಯರಂತೆ ಆನೆಗಳನ್ನು ಆರೈಕೆ ಮಾಡಲಾಗುತ್ತದೆ. ವಿಶೇಷ ಪಾಲಕ್ಕಾಡ್ ಪಟ್ಟಾಂಬಿ ನ್ಜಾನ್ಗಾಟಿರಿ ಭಗವತಿ ದೇವಸ್ಥಾನದಲ್ಲಿ ಆನೆಗಳಿಲ್ಲ. ಗಜಪೂಜೆಗಾಗಿ ಬೇರೆ ದೇಗುಲಗಳಿಂದ ಇವನ್ನು ಕರೆತರಲಾಗುತ್ತದೆ. ಹಿಂದೆಲ್ಲ ಇಲ್ಲಿಗೆ ಸುಮಾರು 21 ಕ್ಕೂ ಹೆಚ್ಚು ಆನೆಗಳು ಬರುತ್ತಿದ್ದವಂತೆ. ಆದರೆ ಪ್ರಸ್ತುತ ಕಠಿಣ ನಿಯಮಗಳು ಜಾರಿಯಲ್ಲಿರುವುದರಿಂದ ಮೂರರಿಂದ ನಾಲ್ಕು ಆನೆಗಳಷ್ಟೇ ಭಾಗವಹಿಸುತ್ತವೆ.

ದೇವಸ್ಥಾನಗಳ ಉತ್ಸವದಲ್ಲಿ ಭಾಗವಹಿಸುವ ಆನೆಗಳಿಗೆ ಆನಯೂಟ್ ಕಡ್ಡಾಯ. ಇನ್ನು ಗುರುವಾಯೂರು ಮತ್ತಿತರ ಕಡೆ ಆನೆಗಳ ಸುಖ ಚಿಕಿತ್ಸಾ ಕೇಂದ್ರಗಳಿವೆ. ಆನೆಗಳಿಗೆ ಔಷಧ ಆಹಾರ ನೀಡಿ ಮಜ್ಜನ ಮಾಡಿಸಲಾಗುತ್ತದೆ. ಇದನ್ನೆಲ್ಲ ನೋಡುವುದೇ ಒಂದು ಅದ್ಭುತ ಅನುಭವ.
ತ್ರಿಶೂರ್ ನಲ್ಲಿಯೂ ಹಬ್ಬ
ಪೂರಂ ಮೂಲಕವೇ ಜಗತ್ತಿನ ಗಮನ ಸೆಳೆಯುವ ತ್ರಿಶೂರ್ ವಡಕ್ಕನಾಥನ್ ದೇಗುಲದಲ್ಲಿ ಆನಯೂಟ್ ನಡೆಯುತ್ತದೆ. ಆನಯೂಟ್ ಎನ್ನುವುದು ಇಲ್ಲಿ ಆನೆಗಳಿಗೆ ತಿನಿಸು ನೀಡುವುದು ಮಾತ್ರವಲ್ಲ ಇದೊಂದು ಭವ್ಯ ಪರಂಪರೆ, ಸಂಸ್ಕೃತಿಯ ಭಾಗ ಎಂದೆನಿಸಿಕೊಂಡಿದೆ. ಆ ಮೂಲಕ ವರ್ಷಪೂರ್ತಿ ದುಡಿಯುವ ಆನೆಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ. ಜತೆಗೆ ಒಂದು ತಿಂಗಳ ಅವಧಿಯಲ್ಲಿ ಆನೆಗಳನ್ನು ಆರೈಕೆ ಮಾಡಿ ಮುಂದಿನ ವರ್ಷದ ಉತ್ಸವ, ಜಾತ್ರೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಪಾಲ್ಗೊಳ್ಳಲು ಸಜ್ಜುಗೊಳಿಸಲಾಗುತ್ತದೆ.
ಪ್ರತಿ ವರ್ಷ ತ್ರಿಶೂರ್ ನಲ್ಲಿ ನಡೆಯುವ ಆನಯೂಟ್ ಸಂದರ್ಭದಲ್ಲಿ ಗಜ ಪೂಜೆ ಮತ್ತು ಅಷ್ಟದ್ರವ್ಯ ಮಹಾ ಗಣಪತಿ ಹೋಮ ನೆರವೇರಿಸಲಾಗುತ್ತದೆ. ದೇಗುಲದ ತಂತ್ರಿ ನೇತೃತ್ವದಲ್ಲಿ ಸುಮಾರು 50 ಅರ್ಚಕರು ಈ ಧಾರ್ಮಿಕ ವಿಧಿ-ವಿಧಾನ ನೆರವೇರಿಸುತ್ತಾರೆ. ಈ ವೇಳೆ ದೇವರಿಗೆ 10,008 ತೆಂಗಿನಕಾಯಿ, 3,500 ಕೆಜಿ ಬೆಲ್ಲ, 1,500 ಕೆಜಿ ಅವಲಕ್ಕಿ, 300 ಕೆಜಿ ಅಕ್ಕಿ, 100 ಎಳ್ಳು ಮತ್ತು 75 ಕೆಜಿ ಜೇನು, ಕಬ್ಬು ಮತ್ತು ಲಿಂಬೆಹಣ್ಣು ಅರ್ಪಿಸಲಾಗುತ್ತದೆ. ಈ ತ್ರಿಶೂರ್ ನಲ್ಲಿಯೂ ಜುಲೈ 17ರಂದೇ ಆನಯೂಟ್ ನಡೆದಿದೆ.

ಕರ್ಕಾಟಕ ಮಾಸದಲ್ಲೇ ಯಾಕೆ?
ಕರ್ಕಾಟಕ ಮಾಸದಲ್ಲಿ ಸಾಮಾನ್ಯವಾಗಿ ಯಾವುದೇ ದೇವಾಲಯಗಳಲ್ಲಿ ಉತ್ಸವಗಳಿರುವುದಿಲ್ಲ. ಹೀಗಾಗಿ ಆನೆಗಳಿಗೆ ಈ ತಿಂಗಳು ಬಿಡುವು. ಅಲ್ಲದೆ ಈ ದಿನಗಳಲ್ಲಿ ಜಡಿಮಳೆ ಸುರಿಯುವುದರಿಂದ ಕಾಯಿಲೆಗಳು ವಕ್ಕರಿಸುವ ಸಾಧ್ಯತೆಯೂ ಇದೆ. ಹೀಗಾಗಿ ಆನಯೂಟ್ ಗೆ ಈ ತಿಂಗಳು ಬಹಳ ಪ್ರಶಸ್ತ. ಈ ಔಷಧೀಯ ಅನ್ನ ನೀಡಲು ಪ್ರವಾಸಿಗರಿಗೂ ಅವಕಾಶ ಉಂಟು.
ಎಡೆಬಿಡದೆ ಮಳೆ ಸುರಿಯುವ ಕರ್ಕಾಟಕ ಮಾಸದಲ್ಲಿ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ರೋಗರುಜಿನ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ವೇಳೆ ಔಷಧೀಯ ಗಂಜಿ ಕುಡಿಯುವ ಪದ್ಧತಿ ಕೇರಳದಲ್ಲಿದೆ. ಅದೇ ರೀತಿ ಆನೆಗಳಿಗೂ ಚಿಕಿತ್ಸೆ ನೀಡುವ ಉದ್ದೇಶದಿಂದ ಔಷಧೀಯ ಆಹಾರ ನೀಡಲಾಗುತ್ತದೆ. ಈ ಕರ್ಕಾಟಕ ಮಾಸದ ಮೊದಲ ಶುಕ್ರವಾರ ನಮ್ಮ ದೇವಸ್ಥಾನದಲ್ಲಿ ಆನೆಗಳಿಗೆ ಪೂಜೆ ನೆರವೇರಿಸಲಾಗುತ್ತದೆ. ಇದನ್ನು ಪ್ರತ್ಯಕ್ಷ ಗಣಪತಿ ಹೋಮ ಎಂದು ಕರೆಯಲಾಗುತ್ತದೆ. ಬಳಿಕ ಆನಯೂಟ್ ನೆರವೇರಿಸಲಾಗುತ್ತದೆ. ಮೊದಲೇ ಬುಕ್ ಮಾಡಿದರೆ ಪ್ರವಾಸಿಗರೂ ಆನೆಗೆ ಕೈತುತ್ತು ನೀಡಬಹುದು.
-ಕೃಷ್ಣನ್, ಅರ್ಚಕರು, ಪಟ್ಟಾಂಬಿ ನ್ಜಾನ್ಗಾಟಿರಿ ಭಗವತೀ ದೇವಸ್ಥಾನ
ಪಟ್ಟಾಂಬಿ ನ್ಜಾನ್ಗಾಟಿರಿ ಭಗವತೀ ದೇವಸ್ಥಾನಕ್ಕೆ ಹೋಗುವುದು ಹೇಗೆ?
ಇಲ್ಲಿಗೆ ಬಸ್, ರೈಲು ಮತ್ತು ವಿಮಾನದ ಮೂಲಕ ತೆರಳಬಹುದು. ಪಾಲಕ್ಕಾಡ್ ಬಸ್ ನಿಲ್ದಾಣದಿಂದ ಇಲ್ಲಿಗೆ 60 ಕಿ.ಮೀ., ತ್ರಿಶೂರ್ ನಿಂದ 45 ಕಿ.ಮೀ. ದೂರವಿದೆ. ಹತ್ತಿರದ ರೈಲು ನಿಲ್ದಾಣ ಪಟ್ಟಾಂಬಿ (2 ಕೀ.ಮೀ.), ವಿಮಾನ ನಿಲ್ದಾಣ ಕಲ್ಲಿಕೋಟೆ ವಿಮಾನ (65 ಕಿ.ಮೀ.).
ದೇವಸ್ಥಾನದ ಫೋನ್ ನಂಬರ್: 9846211121