Friday, October 3, 2025
Friday, October 3, 2025

ಕಾರ್ಕಳದ ಸೊಬಗನ್ನು ಹೆಚ್ಚಿಸುತ್ತಿದೆ “ಆನೆಕೆರೆ ಬಸದಿ”

ಕ್ರಿ.ಶ 1545ರಲ್ಲಿ ಕಾರ್ಕಳ ನಗರದಲ್ಲಿ ಹೊಯ್ಸಳ ಮತ್ತು ಗಂಗರ ಶೈಲಿಯಲ್ಲಿ ಬಸದಿಯನ್ನು ನಿರ್ಮಿಸಲಾಗಿದೆ. ಸುಮಾರು 24.66 ಎಕ್ರೆ ವಿಸ್ತೀರ್ಣದಲ್ಲಿ ನಿರ್ಮಾಣವಾದ ಆ ʻಚತುರ್ಮುಖ ಬಸದಿʼಯು, ಆನೆಕೆರೆ ಚತುರ್ಮುಖ ಬಸದಿ ಎಂಬ ಖ್ಯಾತಿ ಪಡೆದ ಬಗೆ ವಿಶೇಷವಾದುದು - ಸೌಮ್ಯ ಕಾರ್ಕಳ

ಕಾರ್ಕಳ ಸೀಮೆಯು ಭೈರವ ಅರಸರಿಂದ ಆಳಪಟ್ಟಿದ್ದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕಾರ್ಕಳ ಭಾಗದಲ್ಲಿ ಜೈನ ಧರ್ಮಿಯರ ಸಂಖ್ಯೆಯು ಅಧಿಕವಾಗಿರುವುದರಿಂದ ಇಲ್ಲಿ ಅತೀ ಹೆಚ್ಚು ಜೈನ ಬಸದಿಗಳನ್ನು ಕಾಣಬಹುದು, ಅವುಗಳಲ್ಲಿ ಈಗಾಗಲೇ ತುಂಬಾ ಫೇಮಸ್‌ ಆಗಿರುವಂತಹ ವರಂಗ ಕೆರೆ ಬಸದಿ, ಸಾವಿರ ಕಂಬ ಬಸದಿಗಳ ನಡುವೆ ಪ್ರಸ್ತುತ ಆನೆಕೆರೆ ಚತುರ್ಮುಖ ಬಸದಿಯು ಕಾರ್ಕಳದ 18 ಜೈನ ಬಸದಿಗಳಲ್ಲಿ ಒಂದಾಗಿದೆ .

ಕೆರೆ ಮಧ್ಯೆ ಬಸದಿ:

ಕ್ರಿ.ಶ 1545ರಲ್ಲಿ ಕಾರ್ಕಳ ನಗರದಲ್ಲಿ ಸುಮಾರು 24.66 ಎಕ್ರೆ ವಿಸ್ತೀರ್ಣದ ಆನೆಕೆರೆಯ (Anekere Basadi) ಮಧ್ಯೆ ನಿರ್ಮಿಸಿರುವ ಬಸದಿಯು “ಚತುರ್ಮುಖ ಬಸದಿ” ಎಂದೇ ಪ್ರಸಿದ್ಧಿ ಪಡೆದಿದೆ. ಈ ಬಸದಿಯು ಸರ್ವಧರ್ಮೀಯರ ಪುಣ್ಯಕ್ಷೇತ್ರವಾಗಿದೆ. ಈ ಬಸದಿಗೆ ನಾಲ್ಕು ಕಡೆಯಿಂದಲೂ ಬಾಗಿಲುಗಳಿದ್ದು, ಪ್ರತಿಯೊಂದು ಬಾಗಿಲುಗಳು ಕೂಡ ಗರ್ಭಗುಡಿಯನ್ನು ಸೇರುತ್ತದೆ. ಬಸದಿಯ ಮೇಲಿನ ನೆಲೆಯಲ್ಲಿ ಪಾರ್ಶ್ವನಾಥ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿ, ಆದಿನಾಥ ಸ್ವಾಮಿ, ಮಹಾವೀರ ಸ್ವಾಮಿ, ಚಂದ್ರನಾಥ ಸ್ವಾಮಿ ಮತ್ತು ಶಾಂತಿನಾಥ ಸ್ವಾಮಿಯನ್ನು ಕೆಳ ನೆಲೆಯಲ್ಲಿ ಪೂಜಿಸಲಾಗುತ್ತದೆ. ಈ ಕೆರೆ ಬಸದಿಯನ್ನು ಭೈರವ ಅರಸು ವಂಶದ ಪಾಂಡ್ಯನಾಥ ಪಾಂಡ್ಯಪ್ಪೆಡೆಯ ಕಟ್ಟಿಸಿದ ಎಂಬ ಇತಿಹಾಸವಿದೆ. ಆನೆಕೆರೆಯನ್ನು 1262ರಲ್ಲಿ ಭೈರರಸ ಸಾಮ್ರಾಜ್ಯದ ದೊರೆ ರಾಜ ಪಾಂಡ್ಯದೇವನು ಸಣ್ಣದಾದ ಹೊಂಡದ ರೀತಿಯಲ್ಲಿ ನಿರ್ಮಿಸಿದ್ದನು ಎನ್ನಲಾಗಿದೆ. ಮುಂದೆ ಈ ಕೆರೆಯು 25 ಎಕರೆವರೆಗೂ ವಿಸ್ತರಿಸಿಕೊಂಡಿತ್ತು. ಆದರೆ ಈಗ ಕಾರ್ಕಳ ನಗರದಿಂದ ಕೇವಲ 1 ಕಿಲೋ ಮೀಟರ್‌ ದೂರದಲ್ಲಿರುವ ಆನೆಕೆರೆಯು 7 ಎಕರೆ ಜಾಗದಲ್ಲಿದ್ದು, ಸ್ಥಳೀಯ ನೀರಿನ ಮೂಲವಾಗಿಯೂ, ಆಕರ್ಷಕವಾಗಿಯೂ ಗಮನ ಸೆಳೆಯುತ್ತಿದೆ. ಸರ್ಕಾರಿ ದಾಖಲೆಗಳ ಪ್ರಕಾರ, ಇದು ಆರಂಭದಲ್ಲಿ 25 ಎಕರೆ ಪ್ರದೇಶದಲ್ಲಿ ಹರಡಿತ್ತು. ನಂತರ ಈ ಪ್ರದೇಶಕ್ಕೆ ಕುಡಿಯುವ ನೀರನ್ನು ಪೂರೈಸಲು ಬಳಸಲಾಯಿತು. 8 ಶತಮಾನಗಳಿಗೂ ಹೆಚ್ಚು ಕಾಲ ನಗರಕ್ಕೆ ಕುಡಿಯುವ ನೀರಿನ ಪ್ರಾಥಮಿಕ ಮೂಲ ಆನೆಕೆರೆ ಕೆರೆ ಆಗಿತ್ತು.

basadi-6

ಹೆಸರು ಬಂದಿದ್ದು ಹೇಗೆ?

ರಾಜನ ಆನೆಗಳಿಗೆ ಸ್ನಾನ ಮಾಡಲು, ನೀರು ಕುಡಿಯಲು ಹಾಗೂ ಹಾಯಾಗಿರಲು ಬಸದಿಯ ಸುತ್ತ ಬೃಹದಾಕಾರದ ಕೆರೆಯನ್ನು ನಿರ್ಮಾಣ ಮಾಡಲಾಯಿತು. ಬಳಿಕದಿಂದ ಆನೆಕೆರೆ ಬಸದಿ ಎಂಬ ಖ್ಯಾತಿ ಪಡೆಯಿತು. ಹೊಯ್ಸಳ ಮತ್ತು ಗಂಗರ ಶೈಲಿಯಲ್ಲಿ ಬಸದಿಯನ್ನು ನಿರ್ಮಿಸಲಾಗಿದೆ. ಗಜ ಕಟಾಂಜನ, ಸಿಂಹ ಕಟಾಂಜನವಿರುವ ಕಲ್ಲಿನ ಕಂಬಗಳು ಇಲ್ಲಿವೆ.

ಪ್ರಸ್ತುತ ಈ ಆನೆಕೆರೆ ಬಸದಿಯನ್ನು 2.72 ಕೋಟಿ ವೆಚ್ಚದಲ್ಲಿ ಸುತ್ತು ಪೌಳಿ ಕಾಮಗಾರಿ, ಇಂಟರ್‌ ಲಾಕ್‌ ಅಳವಡಿಸಲಾಗಿದ್ದು, ಪ್ರವಾಸ್ಯೋದ್ಯಮಕ್ಕೆ ಅಧಿಕ ಒತ್ತು ನೀಡುತ್ತ ಬರುತ್ತಿರುವುದರಿಂದ ಈ ಬಸದಿಯನ್ನು ಪ್ರವಾಸಿ ತಾಣವನ್ನಾಗಿ ನಿರ್ಮಿಸುವ ಬರದಲ್ಲಿ ಈ ಕೆರೆಯು ಮತ್ತಷ್ಟು ಅಭಿವೃದ್ಧಿ ಕಾಣುತ್ತಿದೆ.

ಸುತ್ತಲೂ ಉದ್ಯಾನವನ, ವಾಕಿಂಗ್ ಟ್ರ್ಯಾಕ್ ಗಳನ್ನು ನಿರ್ಮಿಸಿರುವ ಕಾರಣ ಧಾರ್ಮಿಕತೆ ಜೊತೆಗೆ ಪ್ರವಾಸೋದ್ಯಮಕ್ಕೂ ಈಗ ಒತ್ತುಕೊಡಲಾಗಿದೆ. ಆನೆಕೆರೆ ಪಕ್ಷಿಧಾಮವಾಗಿ ಅಭಿವೃದ್ಧಿಗೊಳ್ಳಬೇಕು. ಬೋಟಿಂಗ್‌ ವ್ಯವಸ್ಥೆ ಕಲ್ಪಿಸಿ, ಇಲ್ಲಿಗಾಗಮಿಸುವ ಭಕ್ತರು ಮತ್ತು ಪ್ರವಾಸಿಗರು ಸಂಭ್ರಮಿಸುವಂತೆ ಆಹ್ಲಾದಕರ ವಾತಾವರಣ ನಿರ್ಮಿಸಿಕೊಡಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿದೆ.

basadi-1

ವರಂಗಕ್ಕೂ, ಇಲ್ಲಿಗೂ ವ್ಯತ್ಯಾಸವೇನು?

ಹೌದು ಪ್ರಸಿದ್ಧ ಪ್ರವಾಸಿ ತಾಣವಾಗಿರುವ ವರಂಗಕ್ಕೂ ಇಲ್ಲಿಗೂ ಸ್ವಲ್ಪ ವ್ಯತ್ಯಾಸವಿದೆ. ನೋಡೋದಕ್ಕೇನೋ ವರಂಗವನ್ನೇ ಹೋಲುವ ಕಾರ್ಕಳದ ಆನೆಕೆರೆ ಚತುರ್ಮುಖ ಬಸದಿ ಹಾಗೂ ವರಂಗ ಕೆರೆ ಬಸದಿ ನಡುವೆ ಸಣ್ಣ ವ್ಯತ್ಯಾಸಗಳಷ್ಟೇ ಕಾಣಬಹುದು. ವರಂಗದಲ್ಲಿ ಬಸದಿಗೆ ತಲುಪಬೇಕಿದ್ದರೆ ದೋಣಿ ಆಶ್ರಯ ಪಡರಯಬೇಕಾಗುತ್ತದೆ. ಆದರೆ ಇಲ್ಲಿ ಕೆರೆ ಮಧ್ಯೆ ಬಸದಿ ತನಕ ವಾಕಿಂಗ್‌ ಟ್ರ್ಯಾಕ್‌ ಇದೆ.

ಹೋಗುವುದು ಹೇಗೆ..?

ಕಾರ್ಕಳ-ಮಂಗಳೂರು ಪ್ರಮುಖ ಹೆದ್ದಾರಿಗೆ ಸಮೀಪವೇ ಹೊಂದಿದ್ದು, ರಸ್ತೆ ಬದಿ ಪಾರ್ಕ್‌ ಇದೆ. ಈ ಪಾರ್ಕಿನಲ್ಲಿ ಕುಳಿತುಕೊಂಡು ಕೆರೆ ಹಾಗೂ ಚತುರ್ಮುಖ ಬಸದಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಜೊತೆಗೆ ನೀವು ಇನ್ನೊಂದು ಸ್ಥಳಕ್ಕೂ ಭೇಟಿ ಕೊಡಬಹುದು. ಅದು ಯಾವುದೆಂದರೆ ಈ ಬಸದಿಯಿಂದ ಸುಮಾರು ಒಂದೂವರೆ ಕಿಲೋ ಮೀಟರ್‌ ಸಾಗಿದರೆ ಪ್ರಸಿದ್ಧ ಕಾರ್ಕಳದ ಗೊಮ್ಮಟೇಶ್ವರನ ಪ್ರತಿಮೆಯನ್ನು ನೋಡಬಹುದು. ಅದು ಕೂಡಾ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ