Monday, December 8, 2025
Monday, December 8, 2025

ಪರ್ತಗಾಳಿ ಮಠದಲ್ಲಿ ಏಷ್ಯಾದ ಅತಿದೊಡ್ಡ ಶ್ರೀರಾಮನ ಕಂಚಿನ ಮೂರ್ತಿ

550 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ, ಗೋವಾದ ಪರ್ತಗಾಳಿ ಮಠ ಈಗ ʼದಕ್ಷಿಣದ ಅಯೋಧ್ಯೆʼಯಾಗಿ ರೂಪಗೊಳ್ಳುವ ಕನಸನ್ನು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ಪರ್ಶವು, ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ಥಳಕ್ಕೆ ಹೊಸ ಆಯಾಮವನ್ನು ನೀಡುವ ಭರವಸೆ ಮೂಡಿಸಿದೆ. ನವೆಂಬರ್ ಇಪ್ಪತ್ತೆಂಟರಂದು ಪ್ರಧಾನಿ ಮೋದಿ ಏಷ್ಯಾದ ಅತಿ ಎತ್ತರದ ಶ್ರೀರಾಮ ಪ್ರತಿಮೆಯನ್ನು ಅನಾವರಣಗೊಳಿಸಿ ಲೋಕಾರ್ಪಣೆ ಮಾಡಿದ್ದಾರೆ. ಕಂಚಿನಿಂದ ನಿರ್ಮಿತವಾದ ಈ ಪ್ರತಿಮೆಯಿಂದಾಗಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವೀಗ ದಕ್ಷಿಣ ಅಯೋಧ್ಯೆಯಾಗಿ ಮಾರ್ಪಟ್ಟಿದೆ.

ದಕ್ಷಿಣ ಭಾರತದ ಪ್ರವಾಸೋದ್ಯಮಕ್ಕೊಂದು ಹೊಸ ಹಿರಿಮೆಯ ಗರಿ ಸೇರ್ಪಡೆಯಾಗಿದೆ. ಅಖಂಡ ಭಾರತದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಇದೊಂದು ಹೆಮ್ಮೆಯ ಕ್ಷಣ. ಉತ್ತರಭಾರತದ ಪಾಲಿಗೆ ಅಯೋಧ್ಯೆಯಲ್ಲಿ ಬಾಲರಾಮ ನೆಲೆಸಿರುವ ಹಾಗೆ, ದಕ್ಷಿಣ ಭಾರತದಲ್ಲಿ ಪಟ್ಟಾಭಿಷಕ್ತ ಭಗವಾನ್ ಶ್ರೀರಾಮನ ಬೃಹತ್ ಪ್ರತಿಮೆ ಅನಾವರಣಗೊಂಡಿದೆ. ಜಗತ್ತಿನ ಅತಿ ದೊಡ್ಡ ಶ್ರೀರಾಮ ಪ್ರತಿಮೆಯೆಂಬ ದಾಖಲೆ ಮತ್ತು ಖ್ಯಾತಿಗೂ ಪಾತ್ರವಾಗಿರುವ ಈ ಪ್ರತಿಮೆ ದೇಶದ ಪ್ರಮುಖ ಆಕರ್ಷಣೆಯಾಗಿ ರೂಪುಗೊಂಡಿದೆ. ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಈ ಮೂಲಕವಾಗಿ ದಕ್ಷಿಣ ಅಯೋಧ್ಯಾ ಎಂಬ ತನ್ನ ಅನ್ವರ್ಥನಾಮವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ. ಎಪ್ಪತೇಳು ಅಡಿ ಎತ್ತರದ ಅದ್ಭುತ ಕಲಾಕುಸುರಿಯ ಭಗವಾನ್ ಶ್ರೀರಾಮನ ಪ್ರತಿಮೆಯನ್ನು ಕಳೆದ ನವೆಂಬರ್ ಇಪ್ಪತ್ತೆಂಟರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಮೃತಹಸ್ತದಿಂದ ಉದ್ಘಾಟಿಸಿರುವುದು ಪರ್ತಗಾಳಿ ಮಠವನ್ನು ದೇಶಕ್ಕೆದೇಶವೇ ತಿರುಗಿ ನೋಡುವಂತೆ ಮಾಡಿದೆ. ಕೇವಲ ಮೋಜುಮಸ್ತಿಯ ರಾಜ್ಯ ಎಂಬಂತಿದ್ದ ಗೋವಾಗೆ ಪರ್ತಗಾಳಿ ಮಠದ ಶ್ರೀರಾಮ ಪ್ರತಿಮೆಯ ಮೂಲಕ ಮತ್ತೊಂದು ಇಮೇಜ್ ಸೃಷ್ಟಿಯಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಇನ್ನುಮುಂದೆ ಗೋವಾ ಪ್ರವಾಸ ಕೈಗೊಳ್ಳುವವರು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಹೋಗಿ ಪ್ರಭುಶ್ರೀರಾಮನ ದರ್ಶನ ಮಾಡುವುದು ಖಚಿತ. ಅಯೋಧ್ಯೆಗೆ ಹೋಗಲಾಗದವರು ದಕ್ಷಿಣ ಅಯೋಧ್ಯೆಯಲ್ಲೇ ಶ್ರೀರಾಮನ ದರ್ಶನಪಡೆದು ಪಾವನರಾಗಬಹುದು.

Partagali Math-1

550 ವರ್ಷಗಳ ಇತಿಹಾಸಕ್ಕೆ ಪ್ರಧಾನಿ ಮೋದಿ ಸ್ಪರ್ಶ!

550 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ, ಗೋವಾದ ಪರ್ತಗಾಳಿ ಮಠ ಈಗ ʼದಕ್ಷಿಣ ಅಯೋಧ್ಯೆʼಯಾಗಿ ರೂಪಗೊಳ್ಳುವ ಕನಸನ್ನು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ಪರ್ಶವು, ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ಥಳಕ್ಕೆ ಹೊಸ ಆಯಾಮವನ್ನು ನೀಡುವ ಭರವಸೆ ಮೂಡಿಸಿದೆ. ನವೆಂಬರ್ ಇಪ್ಪತ್ತೆಂಟರಂದು ಪ್ರಧಾನಿ ಮೋದಿ ಏಷ್ಯಾದ ಅತಿ ಎತ್ತರದ ಶ್ರೀರಾಮ ಪ್ರತಿಮೆಯನ್ನು ಅನಾವರಣಗೊಳಿಸಿ ಲೋಕಾರ್ಪಣೆ ಮಾಡಿದ್ದಾರೆ. ಕಂಚಿನಿಂದ ನಿರ್ಮಿತವಾದ ಈ ಪ್ರತಿಮೆಯಿಂದಾಗಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವೀಗ ದಕ್ಷಿಣ ಅಯೋಧ್ಯೆಯಾಗಿ ಮಾರ್ಪಟ್ಟಂತಾಗಿದೆ. ಗೋವಾ ರಾಜ್ಯ ಮಾತ್ರವಲ್ಲದೆ ದೇಶದ ಎಲ್ಲೆಡೆಯಿಂದ ಸಹಸ್ರಾರು ಭಕ್ತಾದಿಗಳು ಮತ್ತು ಪ್ರವಾಸಿಗರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಇದರ ಜತೆಯಲ್ಲೇ ಮತ್ತೊಂದು ವಿಶೇಷ ಘಳಿಗೆಗೂ ಪ್ರಧಾನಿ ಮೋದಿ ಸಾಕ್ಷೀಭೂತರಾಗಿದ್ದಾರೆ. ಅದು ಪರ್ತಗಾಳಿ ಜೀವೋತ್ತಮ ಮಠದ ಐನೂರ ಐವತ್ತು ವರ್ಷಗಳ ಪಂಚಶತಮಾನೋತ್ಸವ ಸಂಭ್ರಮ. ಅದ್ಭುತ ಪ್ರಕೃತಿ ಸೌಂದರ್ಯದ ನಡುವೆ ನೆಲೆಗೊಂಡಿರುವ ಈ ಸ್ಥಳ ಕಂಡು ಖುದ್ದು ಪ್ರಧಾನಿ ಮೋದಿಯವರೇ ಸ್ತಂಭೀಭೂತರಾಗಿದ್ದಾರೆ. ಇಲ್ಲಿನ ಶಾಂತಿಯುತ ವಾತಾವರಣ ಮತ್ತು ಅಧ್ಯಾತ್ಮಭಾವ ಮೂಡಿಸುವ ಪರಿಸರವನ್ನು ಮನಬಿಚ್ಚಿ ಕೊಂಡಾಡಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ಭಾಗವಧ್ವಜ ಹಾರಿಸಿ ಬಂದ ಬೆನ್ನಲ್ಲೇ ಈ ಬೃಹತ್ ಶ್ರೀರಾಮ ಪ್ರತಿಮೆಯನ್ನು ಉದ್ಘಾಟಿಸುವ ಅವಕಾಶ ಒದಗಿದ್ದು ತಮ್ಮ ಸುಕೃತ ಎಂದು ಮೋದಿ ಬಣ್ಣಿಸಿದ್ದಾರೆ. ಧಾರ್ಮಿಕ ಪ್ರವಾಸಿಗರ ಸಲುವಾಗಿಯೇ ನಿರ್ಮಾಣಗೊಂಡಿರುವ ರಾಮಾಯಣ ಥೀಮ್ ಪಾರ್ಕ್ ಕೂಡ ಮೋದಿಯವರಿಂದಲೇ ಉದ್ಘಾಟನೆಗೊಂಡಿದೆ. ಐನೂರ ಐವತ್ತು ದಿನಗಳ ರಾಮನಾಮ ಜಪ ಮತ್ತು ರಾಮ ರಥಯಾತ್ರೆಯಿಂದ ಈಗಾಗಲೇ ಮನೆಮಾತಾಗಿರುವ ಪರ್ತಗಾಳಿ ಜೀವೋತ್ತಮ ಮಠಕ್ಕೆ ದಕ್ಷಿಣ ಅಯೋಧ್ಯೆಯೆಂಬ ಹೆಸರು ಅರ್ಹವಾಗಿಯೇ ಒಲಿದಿದೆ.

ಇದು ಸನಾತನ ಧರ್ಮದ ನವೋದಯದ ಪರ್ವ

ಭಾರತೀಯ ಸನಾತನ ಧರ್ಮದ ಪುನರುತ್ಥಾನದ ಪರ್ವಕಾಲದಲ್ಲಿ, ಶತಮಾನಗಳ ಕನಸುಗಳು ನನಸಾಗುತ್ತಿರುವ ಈ ಶುಭ ಸಂದರ್ಭದಲ್ಲಿ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ‘ದಕ್ಷಿಣ ಅಯೋಧ್ಯೆ’ ಎಂದು ಖ್ಯಾತಿ ಪಡೆಯಲಿರುವ ಶ್ರೀರಾಮ ಪ್ರತಿಮೆ ಸಂಕೀರ್ಣದ ಉದ್ಘಾಟನೆಯ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಈ ಮಹಾನ್ ಪ್ರತಿಮಾ ಸಂಕೀರ್ಣವು ದೇಶಕ್ಕೆ ಸಮರ್ಪಿಸಲ್ಪಟ್ಟಿರುವುದು ಪ್ರತಿಯೊಬ್ಬ ಧರ್ಮನಿಷ್ಠ ಭಾರತೀಯನ ಪಾಲಿಗೆ ಒಂದು ಐತಿಹಾಸಿಕ ಮತ್ತು ಸ್ಮರಣೀಯ ಕ್ಷಣವಾಗಿದೆ.

ಸನಾತನ ಧರ್ಮವು ಕೇವಲ ಒಂದು ಮತ ಅಥವಾ ಪಂಥವಲ್ಲ; ಅದು ಜೀವನದ ಸಮಗ್ರ ದರ್ಶನ, ಶಾಶ್ವತ ಜೀವನಶೈಲಿ. ಈ ಪರಮೋಚ್ಚ ಧರ್ಮವನ್ನು ಕಾಲದಿಂದ ಕಾಲಕ್ಕೆ ಪೋಷಿಸಲು, ರಕ್ಷಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಅಸಂಖ್ಯಾತ ಮಹಾಪುರುಷರು ನಿರಂತರವಾಗಿ ಶ್ರಮಿಸಿದ್ದಾರೆ, ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆಧುನಿಕ ಯುಗದಲ್ಲಿ, ಧರ್ಮದ ರಕ್ಷಣೆ ಮತ್ತು ವಿಸ್ತಾರವು ಎರಡು ಪ್ರಮುಖ ಆಯಾಮಗಳನ್ನು ಹೊಂದಿದೆ: ಒಂದು, ಪಾಶ್ಚಾತ್ಯ ಜಗತ್ತಿಗೆ ಧರ್ಮದ ಸತ್ವವನ್ನು ಪರಿಚಯಿಸುವುದು; ಮತ್ತೊಂದು, ಸ್ಥಳೀಯವಾಗಿ, ಅದೆಷ್ಟೋ ಶತಮಾನಗಳ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧಾರ್ಮಿಕ ಕೇಂದ್ರಗಳನ್ನು ಉಳಿಸಿ ಬೆಳೆಸುವುದು. ನಾವು ಅದೆಷ್ಟೋ ಪೀಳಿಗೆಗಳ ಕನಸುಗಳು ನನಸಾಗುತ್ತಿರುವ ಒಂದು ಅದ್ಭುತ ಕಾಲಘಟ್ಟದಲ್ಲಿದ್ದೇವೆ. ಕೆಲವೊಮ್ಮೆ ಅಸಂಭವನೀಯವೆನಿಸುವ ಘಟನೆಗಳು ಸಂಭವಿಸುತ್ತವೆ; ಶತಮಾನಗಳಿಂದ ನೆರವೇರದ ಕಾರ್ಯಗಳು ದಶಕಗಳಲ್ಲಿ, ಕೆಲವೊಮ್ಮೆ ಕೆಲವೇ ವರ್ಷಗಳಲ್ಲಿ ನಡೆದು ಇತಿಹಾಸದ ಹಾದಿಯನ್ನೇ ಬದಲಾಯಿಸುತ್ತವೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯು ಶತಮಾನಗಳ ಪ್ರಾರ್ಥನೆಗೆ ದೊರೆತ ಫಲವಾದರೆ, ಈಗ ಗೋವಾದ ಪುಣ್ಯಭೂಮಿಯಲ್ಲಿ ನೆಲೆಗೊಂಡಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ‘ದಕ್ಷಿಣ ಅಯೋಧ್ಯೆ’ ಎಂದು ಖ್ಯಾತಿ ಪಡೆಯಲಿರುವ ಶ್ರೀರಾಮ ಪ್ರತಿಮೆ ಸಂಕೀರ್ಣದ ಉದ್ಘಾಟನೆ, ಈ ದೈವೀ ಕಾರ‌್ಯದ ಸರಮಾಲೆಗೆ ಮತ್ತೊಂದು ಹೊಳೆಯುವ ಮುತ್ತಿನ ಹಾರದಂತಿದೆ.

ಇದು ಕೇವಲ ಒಂದು ಪ್ರತಿಮೆಯ ಪ್ರತಿಷ್ಠಾಪನೆಯಲ್ಲ, ಬದಲಿಗೆ ಶತಮಾನಗಳ ನೋವು, ಅಪಾರ ಸಹಿಷ್ಣುತೆ ಮತ್ತು ಅಚಲ ಶ್ರದ್ಧೆಯ ವಿಜಯೋತ್ಸವವಾಗಿದೆ. ಸನಾತನ ಧರ್ಮದ ಜ್ಯೋತಿಯನ್ನು ಕಳೆದ 550 ವರ್ಷಗಳಿಂದ ನಿರಂತರವಾಗಿ ಉಜ್ವಲವಾಗಿರಿಸಿರುವ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಈ ಪವಿತ್ರ ಕಾರ್ಯ ನೆರವೇರಿರುವುದು ವಿಶೇಷ.

Untitled design (23)

ಪರ್ತಗಾಳಿ ಮಠದ ಇತಿಹಾಸ ಬಲ್ಲಿರಾ?

ಕ್ರಿ.ಶ. 1475ರಲ್ಲಿ, ಉಡುಪಿಯ ಪಾಲಿಮಾರು ಮಠದ ಅಂದಿನ ಸ್ವಾಮಿಗಳಾಗಿದ್ದ ಪರಮಪೂಜ್ಯ ಶ್ರೀ ರಾಮಚಂದ್ರ ತೀರ್ಥರ ದಿವ್ಯ ಹಸ್ತದಿಂದ ಶ್ರೀ ನಾರಾಯಣ ತೀರ್ಥರಿಗೆ ದೀಕ್ಷೆ ನೀಡುವ ಮೂಲಕ ಪರ್ತಗಾಳಿ ಮಠದ ಉದಯವಾಯಿತು. ಮಠದ ಪ್ರಥಮ ಪೀಠಾಧಿಪತಿಗಳಾದ ಶ್ರೀ ನಾರಾಯಣ ತೀರ್ಥರು, ಮಧ್ವ ಸಂಪ್ರದಾಯದ ವೈಷ್ಣವ ತತ್ತ್ವಗಳನ್ನು ಜನಮಾನಸಕ್ಕೆ ತಲುಪಿಸಲು ಅಮೋಘ ಕೊಡುಗೆ ನೀಡಿದರು. ಅವರ ದೂರದೃಷ್ಟಿಗೆ ಸಾಕ್ಷಿಯಾಗಿ, ವಾರಾಣಸಿಯ ಪಂಚಗಂಗಾ ಘಾಟ್‌ನಲ್ಲಿ ಮಠದ ಶಾಖೆಯನ್ನು ಸ್ಥಾಪಿಸಿದರು. ಇದು ಕಾಶಿಯಲ್ಲಿ ಮಧ್ವ ಮಠದ ಪ್ರಥಮ ಸ್ಥಾಪನೆಯಾಗಿದ್ದು, ಅಂದಿನ ಕಾಶಿ ರಾಜರ ಸಹಕಾರದೊಂದಿಗೆ ನೆರವೇರಿತು. ಶ್ರೀ ನಾರಾಯಣ ತೀರ್ಥರ ದಿವ್ಯ ಸಂಕಲ್ಪ ಎಷ್ಟು ಮಹತ್ತರವಾದುದು!

ವಿದ್ಯಾಧೀಶ ತೀರ್ಥರ ದಿವ್ಯ ನೇತೃತ್ವ

ಕಳೆದ 550 ವರ್ಷಗಳಲ್ಲಿ, 24 ಸಮರ್ಥ ಮತ್ತು ಜ್ಞಾನವಂತ ಸ್ವಾಮೀಜಿಗಳು ಮಠದ ಜವಾಬ್ದಾರಿಯನ್ನು ವಹಿಸಿಕೊಂಡು, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪರ್ತಗಾಳಿ ಮಠವು ಕೇವಲ ಒಂದು ಆರಾಧನಾ ಕೇಂದ್ರವಾಗಿರದೆ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಕಾಪಾಡುವ ಪವಿತ್ರ ತಾಣವಾಗಿದೆ. ಕಷ್ಟಕಾಲದಲ್ಲಿ ಆಶ್ರಯ, ಜ್ಞಾನದ ಕೇಂದ್ರ ಮತ್ತು ಧಾರ್ಮಿಕ ಮಾರ್ಗದರ್ಶನದ ಪೀಠವಾಗಿ ನಿಂತಿದೆ. ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ನಿರಂತರವಾಗಿ ಸ್ಫೂರ್ತಿ ನೀಡಿದೆ. ಇಂದಿನ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ ಮಠವು ಭವ್ಯ ಭವಿಷ್ಯದತ್ತ ಮುನ್ನಡೆಯುತ್ತಿದೆ.

ಹನ್ನೊಂದು ದಿನಗಳ ಆಚರಣೆ!

ಗೋವಾದ ಕಾನಕೋಣ ತಾಲೂಕಿನ ರಮಣೀಯ ಪೋಯಿಂಗಿಣಿಂನಲ್ಲಿ, ಪವಿತ್ರ ಕುಶಾವತಿ ನದಿಯ ತೀರದಲ್ಲಿ ನೆಲೆಸಿರುವ ಐತಿಹಾಸಿಕ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠವು, ತನ್ನ 550ನೇ ವರ್ಷದ ಪಂಚಶತಾಬ್ದಿ ಮಹೋತ್ಸವವನ್ನು ಆಚರಿಸುತ್ತಿದೆ. ಈಗಾಗಲೇ ಅಂದರೆ ನವೆಂಬರ್ 27 ರಿಂದ ಪ್ರಾರಂಭವಾಗಿರುವ ಆಚರಣೆ ಡಿಸೆಂಬರ್ 7 ರವರೆಗೆ ಒಟ್ಟು11 ದಿನಗಳ ಕಾಲ ನಡೆಯಲಿದೆ. ಈ ಭವ್ಯ ಸಮಾರಂಭವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಸಮ್ಮಿಲನವಾಗಿದ್ದು, ಅಸಂಖ್ಯಾತ ಭಕ್ತರ ಆಧ್ಯಾತ್ಮಿಕ ದಾಹವನ್ನು ಇಂಗಿಸಲಿದೆ. ಶ್ರೀ ರಾಮನ ಭವ್ಯ ಪ್ರತಿಮೆಯ ಪ್ರತಿಷ್ಠಾಪನೆ ಮತ್ತು ಉದ್ಘಾಟನೆಯು ಜಿಎಸ್‌ಬಿ ಸಮುದಾಯದ ಶ್ರದ್ಧೆ, ಭಕ್ತಿ ಮತ್ತು ಬಹುಕಾಲದ ಕನಸಿಗೆ ದೊರೆತ ಅತ್ಯುನ್ನತ ಮನ್ನಣೆಯಾಗಿದೆ. ಈ ಮಹತ್ತರ ಕಾರ್ಯಕ್ರಮದೊಂದಿಗೆ, ಪರ್ತಗಾಳಿ ಜೀವೋತ್ತಮ ಮಠವು ಕೇವಲ ಒಂದು ಧಾರ್ಮಿಕ ಕೇಂದ್ರವಾಗಿ ಉಳಿಯದೆ, 'ದಕ್ಷಿಣ ಅಯೋಧ್ಯೆ'ಯಾಗಿ ರೂಪುಗೊಳ್ಳಲಿದೆ.

ಪಂಚಶತಕೋಟಿ ಶ್ರೀರಾಮನಾಮ ಜಪ

ಈ ವರ್ಷ ಏಪ್ರಿಲ್ 17ರಂದು ಪಂಚಶತಾಬ್ದಿ ಮಹೋತ್ಸವದ ಭಾಗವಾಗಿ ಪ್ರಾರಂಭಿಸಲಾದ "500 ಕೋಟಿ ಶ್ರೀ ರಾಮ ನಾಮ ಜಪ" ಮಹಾಅಭಿಯಾನ ಅಕ್ಟೋಬರ್ 18ರಂದು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ದೇಶದ ನಾನಾ ಕೋನಗಳಿಂದ ಸಾರಸ್ವತ ಭಕ್ತರು 120 ಪ್ರಮುಖ ಕೇಂದ್ರಗಳು ಮತ್ತು 104 ಉಪ-ಕೇಂದ್ರಗಳ ಮೂಲಕ ಈ ಪವಿತ್ರ ಜಪದಲ್ಲಿ ಭಾಗವಹಿಸಿ, ಮಹೋತ್ಸವಕ್ಕೆ ಒಂದು ಅನನ್ಯ ಆಧ್ಯಾತ್ಮಿಕ ಬಲ ಮತ್ತು ಶಕ್ತಿ ತುಂಬಿದ್ದಾರೆ. ಜಿ ಎಸ್ ಬಿ ಸಮುದಾಯವು ಸಾವಿರಾರು ವರ್ಷಗಳ ಗಾಂಭೀರ್ಯಮಯ ಇತಿಹಾಸವನ್ನು ಹೊಂದಿದೆ. ಸರಸ್ವತಿ ನದಿಯ ತಟದಿಂದ ಹುಟ್ಟಿ, ಭಾರತದ ವಿವಿಧ ಪ್ರದೇಶಗಳಿಗೆ ಹರಡಿದ ಈ ಸಮುದಾಯವು ತನ್ನ ಬೌದ್ಧಿಕ ಶ್ರೇಷ್ಠತೆ, ಆಧ್ಯಾತ್ಮಿಕ ಶ್ರದ್ಧೆ ಮತ್ತು ಸಂಸ್ಕೃತಿ ಸಂರಕ್ಷಣೆಯಿಂದ ಸದಾ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಗೋವಾ ಪ್ರದೇಶವು ಜಿ ಎಸ್ ಬಿ ಗಳ ಹೃದಯದಲ್ಲಿ ಒಂದು ಪ್ರತ್ಯೇಕ ಸ್ಥಾನವನ್ನು ಹೊಂದಿದೆ. ಅವರ ಕುಲದೇವರುಗಳು ಮತ್ತು ಮೂಲ ದೇಗುಲಗಳು ಗೋವಾದ ಪವಿತ್ರ ಭೂಮಿಯಲ್ಲಿ ನೆಲೆಸಿರುವುದರಿಂದ, ಗೋವಾ ಜತೆ ಒಂದು ಅವಿನಾಭಾವ ಸಂಬಂಧವಿದೆ. ಪೋರ್ಚುಗೀಸರ ಆಳ್ವಿಕೆಯ ಕಠಿಣ ಕಾಲದಲ್ಲಿ ಸ್ಥಳಾಂತರಗೊಂಡರೂ, ಜಿ ಎಸ್ ಬಿ ಗಳು ತಮ್ಮ ಪೂರ್ವಜರ ಭೂಮಿ ಮತ್ತು ಆರಾಧನಾ ಸ್ಥಳಗಳೊಂದಿಗಿನ ಆತ್ಮೀಯ ಸಂಬಂಧವನ್ನು ಎಂದಿಗೂ ಮರೆತಿಲ್ಲ.

ವ್ಯವಸ್ಥೆಯಲ್ಲಿ ಅತ್ಯುತ್ತಮ

ಶ್ರೀ ಪರ್ತಗಾಳಿ ಮಠದಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಚೀನ ವಾಸ್ತುಕಲೆಯ ಶ್ರೀಮಂತಿಕೆಯನ್ನು ಕಾಪಾಡಿಕೊಂಡೇ ಆಧುನಿಕ ಅನುಕೂಲತೆಗಳನ್ನು ಸೇರಿಸಲಾಗಿದೆ. ಭಕ್ತರ ಸುಖಾಚರಣೆಗಾಗಿ ಒಂದು ವಿಶಾಲ ಭೋಜನಶಾಲೆ, ಸುಸಜ್ಜಿತ ಗೋಶಾಲೆ, ಸಂಸ್ಕೃತ ಪಾಠಶಾಲೆ, ಮನೋಹರವಾದ ರಾಮಾಯಣ ಉದ್ಯಾನವನ, ಪ್ರಾರ್ಥನಾ ಮಂದಿರ ಮತ್ತು ಯೋಗ ಕೇಂದ್ರ ಸ್ಥಾಪಿಸಲಾಗಿದೆ. ಸುಮಾರು 650 ಅತಿಥಿ ಕೊಠಡಿಗಳು, ವಿಶಾಲ ವಾಹನ ನಿಲ್ದಾಣ ಮತ್ತು ವಿಸ್ತರಿಸಿದ ರಸ್ತೆಗಳು ಭಕ್ತರ ಸೌಕರ್ಯಕ್ಕೆ ನೆರವಾಗಿವೆ. ಮಡಗಾಂವ್-ಕಾರವಾರ ಮಾರ್ಗದಲ್ಲಿ ನಿರ್ಮಿಸಲಾಗಿರುವ ಭವ್ಯ ಸ್ವಾಗತ ದ್ವಾರ ಮಠಕ್ಕೊಂದು ಭೂಷಣ.

ಜಿಎಸ್‌ಬಿ ಸಮುದಾಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥ ಬೃಹತ್ ಕಾರ್ಯಕ್ರಮ ನಡೆಯುತ್ತಿದ್ದು, ಶ್ರೀಮದ್‌ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಹಾರಾಜರ ದಿವ್ಯ ಮಾರ್ಗದರ್ಶನ ಮತ್ತು ಅನುಗ್ರಹದಿಂದ ಎಲ್ಲವೂ ಸಾಧ್ಯವಾಗಿದೆ.

ಸಹಸ್ರ ವರ್ಷಗಳ ಗಟ್ಟಿ ಇತಿಹಾಸ

ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು 'ದಕ್ಷಿಣ ಅಯೋಧ್ಯಾ' ಆಗಿ ಉದಯಿಸಿದ ಐತಿಹಾಸಿಕ ಘಟನೆ ನಿಜಕ್ಕೂ ದಾಖಲಾರ್ಹ ಸಂಗತಿ. ಭಾರತದಂಥ ವಿಶಾಲ, ವೈವಿಧ್ಯಮಯ ಮತ್ತು ಸಹಿಷ್ಣುತೆಯ ನೆಲೆಗಟ್ಟಿನಲ್ಲಿ, ತಮ್ಮ ಸಂಖ್ಯೆಗಳಿಗಿಂತ ತಮ್ಮ ದೂರದೃಷ್ಟಿ, ಸಮಾಜಕ್ಕೆ ನೀಡಿದ ಅನನ್ಯ ಕೊಡುಗೆ ಮತ್ತು ಅಗಾಧ ಪ್ರಭಾವದಿಂದಾಗಿ ವಿಶೇಷ ಸ್ಥಾನ ಪಡೆದ ಸಮುದಾಯಗಳು ವಿರಳ. ಇಂಥ ಅಪೂರ್ವ ಗೌರವಕ್ಕೆ ಪಾತ್ರರಾದವರಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಮುಂಚೂಣಿಯಲ್ಲಿದೆ. ಈ ಸಮುದಾಯವು, ತನ್ನ ಸಣ್ಣ ಸಂಖ್ಯೆಯ ನಡುವೆಯೂ, ಸಾಧನೆಗಳ ಆಕಾಶವನ್ನು ತಲುಪಿದೆ. ಸಾವಿರಾರು ವರ್ಷಗಳ ಇತಿಹಾಸ, ದುರಂತಮಯ ಸ್ಥಳಾಂತರ ಮತ್ತು ಅಪ್ರತಿಮ ಪುನರ್ನಿರ್ಮಾಣದ ಕಥೆಯಿದು. ಸಾರಸ್ವತರು ಮೂಲತಃ ಪ್ರಾಚೀನ ಸರಸ್ವತಿ ನದಿಯ ದಡದಿಂದ ಬಂದವರು ಎಂದು ನಂಬಲಾಗಿದೆ. ಕಾಲಾನುಕ್ರಮದಲ್ಲಿ, ಪರಶುರಾಮ ಕ್ಷೇತ್ರವೆಂದೇ ಪ್ರಖ್ಯಾತವಾದ ಗೋವಾದಲ್ಲಿ ನೆಲೆಸಿದರು. ಅಲ್ಲಿ ತಮ್ಮ ಶ್ರೀಮಂತ ಸಂಸ್ಕೃತಿ ಮತ್ತು ವೈದಿಕ ಪರಂಪರೆಯನ್ನು ಬೆಳೆಸಿದರು. ಆದರೆ, 15ನೇ ಶತಮಾನದ ನಂತರ ಗೋವಾ ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಾಗ, ಇದು ಕೇವಲ ಆಡಳಿತದ ಬದಲಾವಣೆಯಾಗಿರಲಿಲ್ಲ; ಅದು ಧಾರ್ಮಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಮೇಲೆ ಎಸಗಿದ ಗಂಭೀರ ದಾಳಿಯಾಗಿ ಪರಿಣಮಿಸಿತು. ಪೋರ್ಚುಗೀಸರ ಧಾರ್ಮಿಕ ಕ್ರೌರ್ಯಕ್ಕೆ ಒಳಗಾದ ಸಾವಿರಾರು ಜನರು, ತಮ್ಮ ಧರ್ಮ ಮತ್ತು ದೇವಾಲಯಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಆಶ್ರಯ ಹುಡುಕಬೇಕಾಯಿತು. ಇಂದು ಕಾಶ್ಮೀರಿ ಪಂಡಿತರ ದುರಂತದಂತೆಯೇ, ಗೋವಾದಿಂದ ನಿರ್ವಸಿತರಾಗಿ ದಕ್ಷಿಣದತ್ತ ಪಲಾಯನಗೈದ ಸಾರಸ್ವತರು ಕಷ್ಟಗಳನ್ನು ಎದುರಿಸಿದರು. ತಮ್ಮ ಪೂರ್ವಜರ ನೆಲ, ಸಂಪತ್ತು, ಎಲ್ಲವನ್ನೂ ತ್ಯಜಿಸಿ, ಬರಿಗೈಯಲ್ಲಿ ಕರ್ನಾಟಕ, ಮಹಾರಾಷ್ಟ್ರದತ್ತ ಮುಖ ಮಾಡಿದರು.

Untitled design (25)

ಯಶೋಧೆಯಂತೆ ಆದರಿಸಿದ ಕರ್ನಾಟಕ

ನಿರಾಶ್ರಿತರಾದ ಸಾರಸ್ವತರು, ಕರ್ನಾಟಕದ ನೆಲಕ್ಕೆ ಬಂದಾಗ, ಅವರಿಗೆ ಅತ್ಯಗತ್ಯವಾಗಿದ್ದುದು ಆಶ್ರಯ ಮತ್ತು ಬೆಂಬಲ. ಆ ಕಠಿಣ ಸಂದರ್ಭದಲ್ಲಿ, ಕರ್ನಾಟಕದ ಉದಾರ ಮನಸ್ಸಿನ ಅರಸರು ಇವರಿಗೆ ಆಶ್ರಯ ನೀಡಿದರು. ಇದು ಕೇವಲ ತಾತ್ಕಾಲಿಕ ನೆಲೆಗಟ್ಟಾಗಿರಲಿಲ್ಲ; ಬದಲಿಗೆ, ಶಾಶ್ವತ ಸಮ್ಮಿಲನಕ್ಕೆ ನಾಂದಿ ಹಾಡಿತು. ಸಾರಸ್ವತರು, ಕರ್ನಾಟಕದ ಮಣ್ಣಿನೊಂದಿಗೆ ಅಸಾಧಾರಣವಾಗಿ ಬೆರೆತು ಹೋದರು. ಯಾವುದೇ ಘರ್ಷಣೆ, ಕಲಹ ಅಥವಾ ವಾಗ್ವಾದಗಳಿಲ್ಲದೆ, ಹೊಸ ಪರಿಸರವನ್ನು ಗೌರವಿಸಿ, ಅದರ ಅವಿಭಾಜ್ಯ ಅಂಗವಾಗಿ ಬೆಳೆದರು. ತಮ್ಮ ಮನೆ ಮಾತು ಕೊಂಕಣಿಯಾಗಿದ್ದರೂ, ಕರ್ನಾಟಕದ ಜಿಎಸ್ ಬಿಗಳು ಅಪ್ಪಟ ಕನ್ನಡಿಗರಷ್ಟೇ ಸ್ಪಷ್ಟವಾಗಿ ಕನ್ನಡವನ್ನು ಆಡುತ್ತಾರೆ. ಕರ್ನಾಟಕದ ಶ್ರೀಮಂತ ಸಂಸ್ಕೃತಿಯೊಂದಿಗೆ, ತಮ್ಮ ಪ್ರಾಚೀನ ಕೊಂಕಣಿ ಸಂಸ್ಕೃತಿಯನ್ನು ಸಮರ್ಥವಾಗಿ ಉಳಿಸಿಕೊಂಡಿರುವುದು ಇವರ ಬಹುದೊಡ್ಡ ಸಾಧನೆಯಾಗಿದೆ.

ಬುದ್ಧಿವಂತಿಕೆ ಮತ್ತು ಸೌಂದರ್ಯದ ಸಂಗಮ

ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯವು ಶತಮಾನಗಳಿಂದಲೂ 'ಬುದ್ಧಿವಂತಿಕೆ ಮತ್ತು ಸೌಂದರ್ಯದ ಅಪೂರ್ವ ಸಂಯೋಜನೆ' ಎಂದು ಗುರುತಿಸಲ್ಪಟ್ಟಿದೆ. ತಮ್ಮ ಅಸಾಧಾರಣ ಶೈಕ್ಷಣಿಕ ಸಾಧನೆಗಳು, ವ್ಯಾಪಾರ-ವ್ಯವಹಾರಗಳಲ್ಲಿನ ಅಗಾಧ ಕೌಶಲ್ಯ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಅಚಲ ಪ್ರಾಮಾಣಿಕತೆಗೆ ಇವರು ಹೆಸರುವಾಸಿ. 'ಪ್ರಾಮಾಣಿಕತೆ' ಎಂದರೆ ಜಿಎಸ್‌ಬಿ ಸಮುದಾಯದವರು ಎಂಬುದು ಸರ್ವವಿಧಿತ ಮಾತು. ಯಾವುದೇ ಕ್ಷೇತ್ರದಲ್ಲಿರಲಿ, ಇವರ ನೈತಿಕತೆ ಮತ್ತು ಕರ್ತವ್ಯ ನಿಷ್ಠೆ ನಿಜಕ್ಕೂ ಮಾದರಿಯಾಗಿದೆ.

ಸಂಖ್ಯೆಯಲ್ಲಿ ಅತ್ಯಂತ ವಿರಳವಾಗಿದ್ದರೂ, ಗೌಡ ಸಾರಸ್ವತ ಬ್ರಾಹ್ಮಣರು ಕಲೆ, ವಿಜ್ಞಾನ, ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ರಾಜಕೀಯ, ಐಟಿ, ವ್ಯಾಪಾರ ಹೀಗೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಆದ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ತಮ್ಮ ಅಪ್ರತಿಮ ಪರಿಶ್ರಮ, ದೃಢಸಂಕಲ್ಪ ಮತ್ತು ಸಮರ್ಪಣಾಭಾವಗಳಿಂದ ಸಮಾಜಕ್ಕೆ ಗಣನೀಯ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಬುದ್ಧಿಮತ್ತೆ, ದೂರದೃಷ್ಟಿ ಮತ್ತು ಅವಿರತ ಪ್ರಯತ್ನಗಳಿಂದ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ