Saturday, July 26, 2025
Saturday, July 26, 2025

ಬಸದಿಗಳ ನಾಡು ಬಸ್ತಿಕೇರಿಯಾಯ್ತು..!

ಆ ಕಾಲದಲ್ಲಿ ಈ ಪ್ರದೇಶದ ತುಂಬ ನೂರಾಎಂಟು ಬಸದಿಗಳಿದ್ದವಂತೆ. ಪ್ರತಿಯೊಂದು ಬಸದಿಗೂ ಅಭಿಷೇಕ ಮಾಡಲು ಒಂದೊಂದು ಬಾವಿ. ಆ ಕಾಲದ ಹಲವು ಬಾವಿಗಳು ಕಾಡಿನಲ್ಲಿ ಈಗಲೂ ಇವೆಯಂತೆ. ಅಷ್ಟು ಬಸದಿಗಳಲ್ಲಿ ಈಗ ಉಳಿದುಕೊಂಡಿರುವುದು ಕೇವಲ ನಾಲ್ಕು ಮಾತ್ರ.

  • ಶ್ವೇತಾ ಹೊಸಬಾಳೆ

ಗತವೈಭವದ ಕಥೆ ಹೇಳುವ ರಾಜರಾಣಿಯರ ಕೋಟೆ ಕೊತ್ತಲಗಳು, ಅರಮನೆ, ಹಳೇಕಾಲದ ದೇವಸ್ಥಾನಗಳೆಂದರೆ ವಿಶೇಷ ಆಕರ್ಷಣೆ ನನಗೆ, ಅಂಥ ಸ್ಥಳಗಳಲ್ಲಿ ತಿರುಗಾಡುವಾಗ ಮನಸ್ಸು ಆ ಕಾಲಕ್ಕೇ ಹೋಗಿ ಕಲ್ಪನಾಲೋಕದಲ್ಲಿ ವಿಹರಿಸುತ್ತದೆ ಮತ್ತು ಹಿಂದಿನದನ್ನು ನೆನೆಯುತ್ತಾ ಭಾವುಕವಾಗಿಬಿಡುತ್ತದೆ. ಅದರಲ್ಲೂ ಡಾ.ಗಜಾನನ ಶರ್ಮರವರು ಬರೆದಿರುವ ಚೆನ್ನಭೈರಾದೇವಿ ಕಾದಂಬರಿ ಓದಿದಾಗಿನಿಂದಲೂ ಅವಳಿಗೆ ಸಂಬಂಧಪಟ್ಟ ಪ್ರದೇಶಗಳನ್ನು ನೋಡುವುದಕ್ಕೆ ಮನಸ್ಸು ವಿಪರೀತ ಉತ್ಸುಕವಾಗಿತ್ತು.

1552 ರಿಂದ 1606 ರವರೆಗೆ 54 ವರ್ಷಗಳ ಕಾಲ ದಕ್ಷಿಣ ಕೊಂಕಣ ಮತ್ತು ನಗಿರೆ, ಗೇರುಸೊಪ್ಪಾ, ಭಟ್ಕಳ, ಹೊನ್ನಾವರ ಸೇರಿದಂತೆ ಇಡೀ ಶರಾವತಿ ದಂಡೆಯ ಪ್ರದೇಶಗಳನ್ನು ಆಳಿ ಕೆಲವು ಕಾಲ ಪೋರ್ಚುಗೀಸರನ್ನೂ ಹಿಮ್ಮೆಟ್ಟಿಸಿದ ರಾಣಿಯ ಚರಿತ್ರೆ ಆಸಕ್ತಿಕರ. ಇಂಥ ಆಸಕ್ತಿಯಿಂದಲೇ ಹುಡುಕಿಕೊಂಡು ಹೋದ ಜಾಗ ದಟ್ಟ ಕಾಡಿನ ಮಧ್ಯೆ ಇರುವ ನಗರ ಬಸ್ತಿಕೇರಿ ಎಂದೇ ಹೆಸರುಗಳಿಸಿದ ಜಾಗದಲ್ಲಿದ್ದ ಚತುರ್ಮುಖ ದಿಗಂಬರ ಜೈನ ಬಸದಿ. ಹದಿನಾರನೇ ಶತಮಾನದಲ್ಲಿ ರಾಣಿ ಚೆನ್ನಭೈರಾದೇವಿ ತನ್ನ ಪಟ್ಟಾಭಿಷೇಕವಾದ ಸಂದರ್ಭದಲ್ಲಿ ಕಟ್ಟಿಸಿದ್ದು. “ನಮ್ಮ ನಗಿರೆಯ ನೇಮಿನಾಥ ಮತ್ತು ಪಾರ್ಶ್ವನಾಥ ಬಸದಿಗಳಿಂದ ಐನೂರು ಮಾರು ದೂರದಲ್ಲಿ ನಕ್ಷತ್ರಾಕಾರದ ಶಿಲಾವೇದಿಕೆಯ ಮೇಲೆ ನವ ಚತುರ್ಮುಖ ಬಸದಿಯೊಂದನ್ನು ನಿರ್ಮಿಸಲಾಗುವುದು. ಅದಕ್ಕೆ ನುರಿತ ಶಿಲ್ಪಿಗಳನ್ನು ಒದಗಿಸಿಕೊಡಲು ಕಾರ್ಕಳದ ಭೈರರಸರು ಸಮ್ಮತಿಸಿದ್ದಾರೆ” ಎನ್ನುವ ಉಲ್ಲೇಖ ಕಾದಂಬರಿಯಲ್ಲಿ ಬರುತ್ತದೆ.

bastikeri

ಕಾಡಿನ ನಡುವೆ ಕಲ್ಲಿನ ಬಸದಿ

ಈಗಲೂ ಪೂಜೆ ನಡೆಯುತ್ತಿರುವ ಬಸದಿ ಇರುವ ಈ ನಗರದ ಹೆಸರು ಬಸ್ತಿಕೇರಿ. ಕ್ಷೇಮಪುರ ಎಂದೂ ಇದನ್ನು ಕರೆಯಲಾಗುತ್ತದೆ..ಈ ಜಾಗವೇ ಪಾರ್ಶ್ವನಾಥ ತೀರ್ಥಂಕರರ ನೆಲೆ. ಅಷ್ಟೇ ಅಲ್ಲ ಇದು ಆ ಕಾಲದ ನಾಡದೇವತೆಯಾಗಿದ್ದ ಜ್ವಾಲಾಮಾಲಿನಿ ಅಮ್ಮನವರ ಸನ್ನಿಧಿ ಕೂಡ. ಇಲ್ಲಿಂದ ಎಡಕ್ಕೆ ಹೋದರೆ ಆ ಕಾಲದ ರಾಜಬೀದಿಯಾಗಿತ್ತು ಎಂದು ಹೇಳಲಾಗುವ ಬೀದಿ ಸಿಗುತ್ತದೆ. ಬೀದಿಯ ಇಕ್ಕೆಲಗಳಲ್ಲಿ ಕಾಡಿನಿಂದಾವೃತವಾದ ದೊಡ್ಡ ಜಾಗ. ಅಲ್ಲಿ ಸ್ವಲ್ಪ ದೂರ ನಡೆದುಕೊಂಡುಹೋಗಿ ಒಂದಷ್ಟು ಮೆಟ್ಟಿಲುಗಳನ್ನು ಹತ್ತಿ ಎತ್ತರದ ಜಾಗದಲ್ಲಿ ಮುಂದೆ ಸಾಗಿದರೆ, ಮಾನಸ್ಥಂಬದ ಎದುರು ನಕ್ಷತ್ರಾಕಾರದ ವೇದಿಕೆಯ ಮೇಲೆ ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿ ಕಟ್ಟಲಾಗಿರುವ ಕಲ್ಲಿನ ಭವ್ಯ ಚತುರ್ಮುಖ ಬಸದಿ ಕಾಣಿಸುತ್ತದೆ.

ಬಸದಿಯ ನಾಲ್ಕೂ ದಿಕ್ಕುಗಳಲ್ಲಿ ಆಯಾ ದಿಕ್ಕಿಗೆ ಮುಖ ಮಾಡಿಕೊಂಡಿರುವ ಪದ್ಮಾಸನರಾದ ನಾಲ್ಕು ತೀರ್ಥಂಕರರ ಮೂರ್ತಿಗಳಿವೆ. ಪ್ರತಿಯೊಂದು ದಿಕ್ಕಿಗೂ ಪ್ರತ್ಯೇಕ ಪ್ರವೇಶ ದ್ವಾರಗಳೂ ಇವೆ. ಎದುರಿನಿಂದ ಒಳಗೆ ಹೋಗುತ್ತಿದ್ದಂತೆ ಕಾಣುವುದು ಆನೆಯ ಲಾಂಛನವನ್ನು ಹೊಂದಿರುವ ಅಜಿತನಾಥ ತೀರ್ಥಂಕರರು, ಅದರ ಬಲಗಡೆ ಎತ್ತಿನ ಲಾಂಛನ ಹೊಂದಿರುವ ರಿಷಭನಾಥ, ಎಡಗಡೆ ಕುದುರೆಯ ಲಾಂಛನದ ಸಂಭವನಾಥ ತೀರ್ಥಂಕರರು ಮತ್ತು ಹಿಂದುಗಡೆ ಕಪಿ ಲಾಂಛನ ಹೊಂದಿರುವ ಅಭಿನಂದನನಾಥ ತೀರ್ಥಂಕರರ ಮೂರ್ತಿ ಇದೆ. ಪ್ರತಿಯೊಂದು ಭಾಗವೂ ವೈವಿಧ್ಯಮಯ ಕೆತ್ತನೆಗಳಿಂದ ಕೂಡಿರುವ ನಾಲ್ಕು ಕಂಬಗಳು ಮತ್ತು ಪದ್ಮಮಂಡಲದ ತಾರಸಿಯನ್ನು ಹೊಂದಿ ಮೋಹಕವಾಗಿವೆ. ತೀರ್ಥಂಕರರ ಪ್ರವೇಶಕ್ಕೂ ಮುನ್ನ ಬಾಗಿಲಲ್ಲಿ ಎರಡೂ ಕಡೆ ಕ್ಷೇತ್ರಪಾಲರುಗಳ ಮೂರ್ತಿಗಳೂ, ಬಸದಿಯ ಪ್ರವೇಶ ದ್ವಾರಗಳಲ್ಲಿ ಹಾವಿನ ಕೆತ್ತನೆ ಹಾಗೂ ದಂಡವನ್ನು ಹಿಡಿದಿರುವ ದ್ವಾರಪಾಲಕರ ಮೂರ್ತಿಗಳನ್ನು ಕಾಣಬಹುದು. ನಾಲ್ಕೂ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಗೋಡೆಯ ಮೇಲೆ ಮಂಟಪಾಕೃತಿಯ ಕುಸುರಿ ಕೆತ್ತನೆಯಿದ್ದು ಒಂದು ಕಡೆ ಮಾತ್ರ ಎರಡೂ ಬದಿಯ ಮಂಟಪದ ಮೇಲೆ ಹಾವಿನ ಕೆತ್ತನೆಯನ್ನು ಕಾಣಬಹುದು. ಅದು ಬಸದಿಯ ಪ್ರವೇಶ ದ್ವಾರದ ಬಲ ಬದಿಯದಾಗಿದ್ದು, ರಾಣಿಯು ತೆಪ್ಪದಲ್ಲಿ ಶರಾವತಿ ನದಿಯನ್ನು ದಾಟಿ ಆ ಬಾಗಿಲಿನ ಮೂಲಕ ಬಸದಿಯನ್ನು ಪ್ರವೇಶಿಸುತ್ತಿದ್ದಳಂತೆ. ಹೀಗೆಂದು ಅಲ್ಲಿದ್ದ ಪುರಾತತ್ವ ಇಲಾಖೆಯ ಗೈಡ್ ಹೇಳುತ್ತಾರೆ.

ಬಸದಿಯ ಸುತ್ತಲೂ ಪಾಳು ಬಿದ್ದ ಅವಶೇಷಗಳೂ, ಬಾವಿಗಳೂ ಇವೆ. ಆ ಕಾಲದಲ್ಲಿ ಈ ಪ್ರದೇಶದ ತುಂಬ ನೂರಾಎಂಟು ಬಸದಿಗಳಿದ್ದವಂತೆ. ಪ್ರತಿಯೊಂದು ಬಸದಿಗೂ ಅಭಿಷೇಕ ಮಾಡಲು ಒಂದೊಂದು ಬಾವಿ. ಆ ಕಾಲದ ಹಲವು ಬಾವಿಗಳು ಕಾಡಿನಲ್ಲಿ ಈಗಲೂ ಇವೆಯಂತೆ. ಅಷ್ಟು ಬಸದಿಗಳಲ್ಲಿ ಈಗ ಉಳಿದುಕೊಂಡಿರುವುದು ಕೇವಲ ನಾಲ್ಕು ಮಾತ್ರ. ಅವುಗಳಲ್ಲಿ ನೇಮಿನಾಥ ಬಸದಿ, ವರ್ಧಮಾನ ಸ್ವಾಮಿ ಬಸದಿ, ಪಾರ್ಶ್ವನಾಥ ತೀರ್ಥಂಕರರ ಬಸದಿಗಳು ಆರಂಭದಲ್ಲೇ ಸಿಗುತ್ತವೆ. ಚತುರ್ಮುಖ ಬಸದಿಯ ಪ್ರಾಂಗಣದಲ್ಲಿ ಆ ಕಾಲದ ಪಾಳುಬಿದ್ದ ಬಾವಿ, ಮರವೊಂದರ ಬಳಿ ಅಪರೂಪದ ಗರುಡ ದೇವನ ವಿಗ್ರಹ, ಹೊನ್ನುಪ್ಪರಿಗೆ ಮಹಾಸತಿ ಶಿಲ್ಪ, ಸ್ತಂಭದ ಆಕಾರದಲ್ಲಿರುವ ಕ್ಷೇತ್ರಪಾಲರು, ಅಲ್ಲಲ್ಲಿ ಬಿದ್ದುಕೊಂಡಿರುವ ಅವಶೇಷಗಳ ಕಲ್ಲುಗಳನ್ನು ಕಾಣಬಹುದು. ಬಸದಿಯ ಹೊರಗೋಡೆಯ ಒಂದು ಬದಿಯಲ್ಲಿ, ಮೀನಿನ ಕೆತ್ತನೆ ವಿಶೇಷವಾಗಿ ಸೆಳೆಯುತ್ತದೆ.

ಆ ಕಾಲದ ಜೈನ ಧರ್ಮದ ಶ್ರದ್ಧಾಕೇಂದ್ರ

ಸ್ವತಃ ರಾಣಿ ಚೆನ್ನಭೈರಾದೇವಿ ಮತ್ತು ಅವಳ ಪೂರ್ವಜರು ಜೈನಧರ್ಮದ ಅನುಯಾಯಿಗಳಾಗಿದ್ದುದರಿಂದ ಅವಳ ಕಾಲದಲ್ಲಿ ಜೈನ ಧರ್ಮ ಉತ್ತುಂಗದಲ್ಲಿದ್ದ ಕುರುಹುಗಳನ್ನು ಈಗಲೂ ಈ ಪ್ರದೇಶದಲ್ಲಿ ಕಾಣಬಹುದು. ಚತುರ್ಮುಖ ಬಸದಿಗೂ ಮೊದಲೇ ಸಿಗುವ ಈಗಲೂ ನಿತ್ಯಪೂಜೆ ನಡೆಯುತ್ತಿರುವ ಪಾರ್ಶ್ವನಾಥ ಮತ್ತು ಜ್ವಾಲಾಮಾಲಿನಿ ಅಮ್ಮನವರ ಬಸದಿಯ ಎದುರು ಮತ್ತು ಅಕ್ಕಪಕ್ಕಗಳಲ್ಲಿ 24 ತೀರ್ಥಂಕರರ, ಯಕ್ಷ ಯಕ್ಷಿಣಿಯರ, ನಾನಾ ಥರದ ನಾಗದೇವತೆಗಳ ಕಲ್ಲಿನ ದೊಡ್ಡ ಸಂಗ್ರಹವೇ ಇದೆ. ಅಲ್ಲೇ ಸಮೀಪ ವರ್ಧಮಾನ ಸ್ವಾಮಿಯ ಬಸದಿಯ ಅಂಗಳದಲ್ಲಿ ದೊಡ್ಡ ದೊಡ್ಡ ಕಲ್ಲಿನ ಶಿಲಾಶಾಸನಗಳಿವೆ. ಯುದ್ಧಕಾಲದಲ್ಲಿ ಉಪಯೋಗಿಸುತ್ತಿದ್ದ ಕಲ್ಲಿನ ಫಿರಂಗಿ ಗುಂಡುಗಳಿವೆ. ನಗರ ಬಸ್ತಿಕೇರಿ ಎಂದು ಕರೆಸಿಕೊಳ್ಳುತ್ತಿದ್ದ ಈ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದ ಉಲ್ಲೇಖವಿದೆ.

basadi

ಹೋಗುವ ದಾರಿಯೂ ಚೆಂದ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ.ದೂರದಲ್ಲಿ ಗೇರುಸೊಪ್ಪಾ ಊರು. ಅದೇ ರೀತಿ ಪ್ರಸಿದ್ಧ ಜೋಗ ಜಲಪಾತದಿಂದ ಅಲ್ಲಿಗೆ 31 ಕಿ.ಮೀ. ಯಾವ ಮಾರ್ಗದಿಂದಲಾದರೂ ಸರಿ, ನೀವು ಗೇರುಸೊಪ್ಪಾ ಊರು ತಲುಪಿಕೊಳ್ಳಲೇಬೇಕು. ಇಲ್ಲಿ ಹೇರಳವಾಗಿ ಬೆಳೆದಿದ್ದ ಗುಡ್ಡೆಗೇರು (ಸಂಸ್ಕೃತದಲ್ಲಿ ಭಲ್ಲಾಟ) ಮರಗಳಿಂದಾಗಿ ಈ ಊರಿಗೆ ಗೇರುಸೊಪ್ಪಾ ಎನ್ನುವ ಹೆಸರು ಬಂದಿದೆಯಂತೆ. ಭಲ್ಲಾತಕೀಪುರ, ಕ್ಷೇಮಪುರ ಎಂದೂ ಕರೆಯುತ್ತಿದ್ದರಂತೆ. ಈಗಲೂ ನಾವು ಬಸದಿಯ ಎದುರು ಹಾಕಿರುವ ಬೋರ್ಡಿನಲ್ಲಿ ಕ್ಷೇಮಪುರ ಎನ್ನುವ ಹೆಸರನ್ನು ಕಾಣಬಹುದು. ಚೆನ್ನಭೈರಾದೇವಿ ಗೇರುಸೊಪ್ಪೆ ರಾಣಿಯೆಂದೇ ಪ್ರಸಿದ್ಧ. ಜೋಗ ಜಲಪಾತದ ಮೊದಲ ಹೆಸರು ಗೇರುಸೊಪ್ಪೆ ಜಲಪಾತ. ಚತುರ್ಮುಖ ಬಸದಿಗೆ ಹೋಗಲು ಈ ಊರಿನಿಂದ ಚತುರ್ಮುಖ ಬಸದಿ ಎನ್ನುವ ಕಮಾನು ಹಾಕಿದ್ದಾರೆ. ಅಲ್ಲಿಂದ ಆರೇಳು ಕಿ.ಮೀ. ಒಳರಸ್ತೆಯಲ್ಲಿ ಸಾಗಬೇಕು. ಸ್ವಲ್ಪ ದೂರ ಹೋದ ನಂತರ ಮಿನಿ ಗೇರುಸೊಪ್ಪಾ ಡ್ಯಾಂ ಮತ್ತು ಸೇತುವೆ ಸಿಗುತ್ತದೆ. ಅಲ್ಲಿನ ಚೆಕ್ ಪೋಸ್ಟಿನಲ್ಲಿ ಅನುಮತಿ ಪಡೆದು ಮುಂದೆ ಅಗಲವಾದ ಸೇತುವೆಯಲ್ಲಿ ಸಾಗಿದರೆ ಒಂದು ಬದಿ ಡ್ಯಾಂ ಮತ್ತೊಂದು ಬದಿ ಶರಾವತಿ ನದಿಯ ಹರಿವಿನ ಆಕರ್ಷಕ ಕಣಿವೆ. ಕಣ್ಣರಳಿಸುತ್ತಾ ಮುಂದೆ ಸಾಗಿದರೆ ದಟ್ಟ ಅರಣ್ಯವನ್ನು ಸೀಳಿಕೊಂಡು ಹೋಗುವ ಚಿಕ್ಕ ರಸ್ತೆ. ಬಹಳ ಸುಂದರ ಮಾರ್ಗವದು. ರಸ್ತೆಯ ಎರಡೂ ಬದಿ ಜೀರುಂಡೆಗಳ ಸದ್ದಿನೊಂದಿಗೆ ಕಾಡು ಮತ್ತು ಬೃಹತ್ ಮರಗಳು ಸೆಳೆಯುತ್ತವೆ. ಸೇರುವ ಗಮ್ಯಕ್ಕಿಂತ ಸಾಗುವ ದಾರಿ ಚೆಂದ ಎನ್ನುವ ಮಾತಿದೆಯಲ್ಲ, ಹಾಗೆ ಕಾಡು ಹಸಿರನ್ನು ಪ್ರೀತಿಸುವವರು ಬಸದಿಗೆ ಹೋಗುವ ದಾರಿಯನ್ನೂ ಎಂಜಾಯ್ ಮಾಡುವುದು ನಿಶ್ಚಿತ. ಹಾಗೇ ಒಂದೆರಡು ಕಿ.ಮೀ. ಮುಂದೆ ಸಾಗಿದರೆ ನಗರ ಬಸ್ತಿಕೇರಿ ಸಿಗುತ್ತದೆ. ಅಲ್ಲಿ ಮೊದಲು ಸಿಗುವುದು ಪಾರ್ಶ್ವನಾಥ ತೀರ್ಥಂಕರರ ಬಸದಿ ಮತ್ತು ಜ್ವಾಲಾಮಾಲಿನಿ ಅಮ್ಮನವರ ದೇವಸ್ಥಾನ. ಚತುರ್ಮುಖ ಬಸದಿಗೆ ಈ ಮೊದಲೇ ಹೇಳಿದಂತೆ ಅಲ್ಲಿಂದ ಎಡಕ್ಕೆ ಸ್ವಲ್ಪ ದೂರ ಆ ಕಾಲದ ರಾಜಬೀದಿಯಲ್ಲಿ ನಡೆದುಕೊಂಡು ಮುಂದೆ ಹೋಗಬೇಕಾಗುತ್ತದೆ. ಇಲ್ಲಿಗೆ ಭೇಟಿಕೊಡುವವರು, ಈ ಸ್ಥಳವನ್ನು ಹುಡುಕಿಕೊಂಡು ಬರುವ ಪ್ರವಾಸಿಗರು ತುಂಬಾ ಕಡಿಮೆಯಾದ್ದರಿಂದ ಹೋದ ತಕ್ಷಣ ಚತುರ್ಮುಖ ಬಸದಿ ತಕ್ಷಣ ಕಣ್ಣಿಗೆ ಬೀಳದೇ ತುಸು ಗಾಬರಿಯಾಗುವುದು ಸಹಜ.

ಇಲ್ಲಿ ಯಾವುದೇ ಅಂಗಡಿ, ಹೊಟೇಲ್ ಗಳಿಲ್ಲ. ಗೇರುಸೊಪ್ಪಾ ಊರಿನಲ್ಲಿ ಚಿಕ್ಕ ಹೊಟೇಲ್ ಗಳಿವೆ. ಹಾಗಾಗಿ ಬರುವುದಕ್ಕೆ ಮುಂಚೆಯೇ ಹೊಟ್ಟೆ ತುಂಬಿಸಿಕೊಂಡು ಬರುವುದೊಳ್ಳೆಯದು. ಬಸದಿಯ ಅರ್ಚಕರ ಮನೆ ಬಿಟ್ಟರೆ ಇನ್ಯಾವುದೇ ಮನೆಯೂ ಇಲ್ಲ. ಕಾಡಿನ ಮಧ್ಯೆ ಇರುವ ಇಂಟೀರಿಯರ್ ಜಾಗ. ಆದರೆ ಹಳೇಕಾಲದ ಐತಿಹಾಸಿಕ ಸ್ಥಳಗಳನ್ನು ಹುಡುಕಿಕೊಂಡು ಹೋಗಿ ನೋಡಲು ಮನಸ್ಸುಳ್ಳವರು, ಗಿಜಿಗಿಜಿಯಿಂದ ದೂರವಾಗಿ ಮೌನವನ್ನು ಅನುಭವಿಸಲಿಚ್ಛಿಸುವವರು, ನಾಡಿನ ಚರಿತ್ರೆಯ ಬಗ್ಗೆ ತುಸು ಆಸಕ್ತಿ ತಿಳುವಳಿಕೆಯುಳ್ಳವರಿಗೆ ಶರಾವತಿ ಕಣಿವೆಯ ದಟ್ಟ ಕಾಡಿನ ಹಿನ್ನೆಲೆಯಲ್ಲಿ ನಿಂತಿರುವ ಪ್ರಶಾಂತ ಚತುರ್ಮುಖ ಬಸದಿ ಮತ್ತು ಸುತ್ತಲಿನ ಸುಂದರ ಪರಿಸರ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ