Thursday, October 2, 2025
Thursday, October 2, 2025

ಮೈಸೂರು ದಸರಾ ಎಷ್ಟೊಂದು ಸುಂದರಾ! ಚೆಲ್ಲಿದೆ ನಗೆಯ ಪನ್ನೀರಾ...

ದಸರಾ ಹಾಗು ಮೈಸೂರು ಎನ್ನುವುದು ಸಮಾನಾರ್ಥಕ ಪದಗಳಂತಾಗಿಬಿಟ್ಟಿದೆ. ಕೆಲಸದ ಜಂಜಡ, ದಟ್ಟಣೆಯ ಒತ್ತಡ, ಬದುಕಿನ ಸರೋವರವ ಕದಡಿ ಆದ ಬಗ್ಗಡವನ್ನೆಲ್ಲ ತಿಳಿಯಾಗಿಸಬಲ್ಲ ಶಕ್ತಿ ಇರುವುದು ಮೈಸೂರಿಗೆ ಎನ್ನುವುದನ್ನು ನೀವೇ ಇಲ್ಲಿಗೆ ಬಂದು ಅನುಭವಿಸತಕ್ಕದ್ದು! ಹೇಗೆ ಆಕಾಶದಿಂದ ನೋಡುವ ವಾಹನಗಳ ಸಾಲು ನಮ್ಮ ಕಣ್ಣಿಗೆ ಅಂದವಾಗಿ ಕಾಣುತ್ತದೆಯೋ, ಈ ದಸರಾ ಸಮಯದಲ್ಲಿ ಮೈಸೂರಿನ ರಸ್ತೆ ರಸ್ತೆಯಲ್ಲೂ ವಿವಿಧ ವಿನ್ಯಾಸಗಳ ವಿದ್ಯುತ್ ದೀಪಗಳ ಸಾಲು.

ಅರ್ಸೂ ರೋಡ್ನಲ್ ಓಡಾಡ್ಕೊಂಡು

ಅರ್ಮನೆದಾಗೆ ಲೈಟ್ ನೋಡ್ಕೊಂಡು

ಹಸ್ವಾದ್ರೇ ತಗೋ ಚುರ್ಮುರಿ ತಿನ್ಕೊಂಡ್

ಅಂಗೇ ವಸಿ ಗುಡಿಯೊಳಗೆ ಅಡ್ಬಿದ್

ದಸರಾ ನೋಡೂಮಾ? ಮೈಸೂರ್ ದಸರಾ ನೋಡೂಮಾ?

ಜಗದ ಕವಿ ಕುವೆಂಪು ಅಜ್ಜಯ್ಯನ ಅಭ್ಯಂಜನದಲ್ಲಿ ಬರೆದಿರುವಂತೆ ಬಯಲುಸೀಮೆಯ ಜನರಿಗೆ ಎಣ್ಣೆಸ್ನಾನದ ಬಗ್ಗೆ ಏನೂ ಗೊತ್ತಿರಲಿಕ್ಕಿಲ್ಲ. ಅಂತೆಯೇ ಮೈಸೂರು ಜನರಿಗೆ ಟ್ರಾಫಿಕ್ಕು ಗೊತ್ತೇ ಇಲ್ಲ. ವರ್ಷಕ್ಕೊಮ್ಮೆ ಮೈಸೂರಿಗರಿಗೆಲ್ಲ ಟ್ರಾಫಿಕ್ಕಿನ, ರಸ್ತೆ-ತಾಳ್ಮೆಯ ಪಾಠವನ್ನು ಮಾಡುವುದು ಇದೇ ದಸರಾ.

ಆರಂಭವನ್ನು ಟ್ರಾಫಿಕ್ಕಲ್ಲೇ ಮಾಡುವುದು ಸೂಕ್ತವೇ ಆಗಿದೆ. ಬೆಂಗಳೂರಿಗರಿರಲಿ, ಭಾರತದ ಯಾವುದೇ ಊರಿನವರಾಗಿರಲಿ; ವಿಮಾನದಲ್ಲಿ ಕುಳಿತು ಇನ್ನೇನು ಅದು ನೆಲವನ್ನು ಸ್ಪರ್ಶಿಸಬೇಕು ಎನ್ನುವ ಮೊದಲು ಕಾಣುವ ದೃಶ್ಯವನ್ನು ನೋಡಿ ಆನಂದಿಸುತ್ತಾರೆ. ಅದರಲ್ಲೂ ರಾತ್ರಿಯಾದರೆ ಇನ್ನೂ ಹೆಚ್ಚು! ಆಕಾಶದಿಂದ ಕಾಣುವ ವಾಹನಗಳ ಬೆಳಕಿನ ಸಾಲು ಪ್ರತಿಯೊಬ್ಬನೊಳಗಿನ ಮಗು-ಮನ-ತನಕ್ಕೆ ಅದೇನೋ ಸಂತಸ ನೀಡುತ್ತದೆ. ಅದೇ ಈ ಹೆಡ್ಲೈಟುಗಳೇ ರಸ್ತೆ ಮೇಲೆ ಓಡಿಸುವಾಗ ಕಣ್ಣಿಗೆ ಬಿದ್ದರೆ? ಬೈಗುಳ ವಾಚಾಮಗೋಚರ.

lightings

ದಸರಾ ಹಾಗು ಮೈಸೂರು ಎನ್ನುವುದು ಸಮಾನಾರ್ಥಕ ಪದಗಳಂತಾಗಿಬಿಟ್ಟಿದೆ. ಕೆಲಸದ ಜಂಜಡ, ದಟ್ಟಣೆಯ ಒತ್ತಡ, ಬದುಕಿನ ಸರೋವರವ ಕದಡಿ ಆದ ಬಗ್ಗಡವನ್ನೆಲ್ಲ ತಿಳಿಯಾಗಿಸಬಲ್ಲ ಶಕ್ತಿ ಇರುವುದು ಮೈಸೂರಿಗೆ ಎನ್ನುವುದನ್ನು ನೀವೇ ಇಲ್ಲಿಗೆ ಬಂದು ಅನುಭವಿಸತಕ್ಕದ್ದು! ಹೇಗೆ ಆಕಾಶದಿಂದ ನೋಡುವ ವಾಹನಗಳ ಸಾಲು ನಮ್ಮ ಕಣ್ಣಿಗೆ ಅಂದವಾಗಿ ಕಾಣುತ್ತದೆಯೋ, ಈ ದಸರಾ ಸಮಯದಲ್ಲಿ ಮೈಸೂರಿನ ರಸ್ತೆ ರಸ್ತೆಯಲ್ಲೂ ವಿವಿಧ ವಿನ್ಯಾಸಗಳ ವಿದ್ಯುತ್ ದೀಪಗಳ ಸಾಲು. ಅದೂ ತಂತ್ರಜ್ಞಾನ ಮುಂದುವರಿದು ಇದೀಗ LED ಮುಂತಾದವುಗಳು ಬಂದು, ಕುಶಲಕರ್ಮಿಗಳಾದವರು ಅದನ್ನು ಬೇಲೂರು ಶಿಲಾಬಾಲಿಕೆ, ವಿಷ್ಣು, ಕೃಷ್ಣ, ಶಿವ, ಮಹಾರಾಜರು, ಮುಂತಾದ ಆಕೃತಿಗಳಲ್ಲಿ ಸಿದ್ಧಗೊಳಿಸಿ ಮೈಸೂರಿನ ಪ್ರಮುಖ ವೃತ್ತಗಳಲ್ಲಿ ಬೃಹತ್ತಾಗಿ ಅಳವಡಿಸಿದ್ದಾರೆ. ಈ ಟ್ರಾಫಿಕ್ಕಿನಲ್ಲಿ ಚತುಶ್ಚಕ್ರವೋ ದ್ವಿಚಕ್ರವೋ ಎಲ್ಲಾದರೂ ಸುಮ್ಮನೆ ನಿಂತು ನೋಡಿದರೂ ʼಅರೆ ಇದೇನು ಸೊಗಸಾಗಿದೆʼ! ಎಂದು ಉದ್ಗಾರ ಮಾಡುವಂತೆ ಪ್ರೇರೇಪಿಸುವುದು ಮನ. ಅದಕ್ಕಾಗಿಯೇ ಜನರು ಬೇರೆ ಬೇರೆ ಊರುಗಳಿಂದ ಈ ನವರಾತ್ರಿಗೆ ಮೈಸೂರಿಗೆ ಬಂದು ಉಳಿದುಕೊಳ್ಳುವುದು, ಸುಮ್ಮನೆ ಊರೆಲ್ಲ ತಿರುಗಾಡಿಕೊಂಡು ಆನಂದಿಸುವುದು.

ತಮಾಷೆಗೆ ಹೇಳಬೇಕೆಂದರೆ, ಬೇರೆಯವರಿಗೆಲ್ಲ ದಸರಾಕ್ಕೆ ರಜಾ! ಓಹೋ! ಮಜಾ! ಮೈಸೂರಿಗರಿಗೆ ಅಸಲಿಗೆ ಕೆಲಸ ಆರಂಭವೇ ನವರಾತ್ರಿಗೆ. ರಜೆಯಿದ್ದರೂ ಎಲ್ಲೂ ಹೋಗದಿರುವವರೆಂದರೆ ಈ ಮೈಸೂರಿನ ಮಹಾನಿವಾಸಿಗಳೇ. ಏಕೆ ಹೇಳಿ? ತಮ್ಮ ಊರಿನ ಆ ಅಂದದವತಾರವನ್ನು ಕಣ್ತುಂಬಿಕೊಳ್ಳಲು ಬೇರೆ ಬೇರೆ ಊರುಗಳಿಂದ ನೆಂಟರಿಷ್ಟರೂ-ಸ್ನೇಹಿತರೂ ಬರುತ್ತಾರಲ್ಲವೇ? ಈ ಸಮಯದಲ್ಲಿ ಹೊಟೇಲು ಕೊಠಡಿ ಹುಡುಕಾಡಿಕೊಂಡು ಹೋಗುವುದಾದರೂ ಹೇಗೆ? ಹುಡುಕಿದರೂ ದೊರಕದು. ದೊರಕಿದರೂ, ಜೇಬಿನಲ್ಲಿ ಮಡಗಿದ ಕಾಸು ಯಾವುದಕ್ಕೂ ಸಾಲದು. ಹಾಗಾಗಿಯೇ, ಮತ್ತೆ ಈಗೆಲ್ಲಿ ವಾಸ? ಎಂಬ ಪ್ರಶ್ನೆಗೆ, ಮೈಸೂರು ಎಂಬ ಉತ್ತರ ಬಂದ ಕೂಡಲೆ, ಹೆಚ್ಚಿನ ವಿಚಾರಣೆ, ಇತ್ಯಾದಿಗಳು. ದಸರಾಕ್ಕೆ ಬಂದು ಉಳಿದುಕೊಳ್ಳುವ ಭಾಗ್ಯವನ್ನು ಕರುಣಿಸಿಯಾರೆಂಬ ನಿರೀಕ್ಷೆ. ನೋಡಿ ಸ್ವಾಮಿ, ನಿಜವಾದ ಯಾತ್ರಿಕನಿಗೆ ಯಾವುದೇ ಸಂಕೋಚಗಳಿರಲೇಬಾರದು. ಇದ್ದರೆ, ಅವನು ಹೆಚ್ಚು ಸ್ಥಳಗಳನ್ನು ನೋಡಲಾರ; ಹೋದರೂ ಹೇಗೋ ಮುಜುಗುರ ಮಾಡಿಕೊಂಡು ಒದ್ದಾಡಬೇಕಾಗುತ್ತದೆ.

Dasara celebration

ನವರಾತ್ರಿಯ ಸಮಯದಲ್ಲಿ ಮೈಸೂರಿಗೆ ಬರಲಿಚ್ಛಿಸುವವರು ಮೈಸೂರಿನಲ್ಲಿರುವ ಆ ನಿಮ್ಮ ಅತ್ತೆಯ ತಮ್ಮನ ಸೋದರಳಿಯನ ಮೊಮ್ಮಗನ ಹೆಂಡತಿಯ ಓರಗಿತ್ತಿಯ ಅಣ್ಣನ ಮಗನನ್ನೋ ಮಗಳನ್ನೋ ಚೆನ್ನಾಗಿ ಮಾತನಾಡಿಸಿ ಇಟ್ಟುಕೊಳ್ಳೀಪ್ಪಾ! ಉಳಿದುಕೊಳ್ಳಲು ಸೌಖ್ಯವಿದ್ದರೆ ಆಯಿತು ನೋಡಿ!

ಕೇವಲ ರಸ್ತೆ ರಸ್ತೆಗಳಲ್ಲಿನ ವಿದ್ಯುತ್ ದೀಪಗಳೇ ಮೈಸೂರು ದಸರಾದ ಬಂಡವಾಳವೇ?

ಗೋವಿಂದ ವೈದ್ಯನೆಂಬ ಕವಿಯು 17ನೇ ಶತಮಾನದಲ್ಲಿ ರಚಿಸಿರುವ ‘ಕಂಠೀರವ ನರಸರಾಜ ವಿಜಯಂ’ ಎಂಬ ಕಾವ್ಯದಲ್ಲಿ ಒಂದು ವರ್ಣನೆ ಹೀಗಿದೆ ನೋಡಿ:

ಹಿಂಗದೆ ಸಾಲುಗೊಂಡಿಹ ಪೌರರ ಹೊಳ

ವಂಗಳಗಳ ಬಾಗಿಲೊಳಗೆ |

ರಂಗುವಡೆದ ಪವಳದ ತೋರಣದ ಕಾಂತಿ

ಕಂಗೊಳಿಸಿದುವು ಬೀದಿಯಲಿ ||

ಅರ್ಥಾತ್, ನಗರದ ಜನರ ಮನೆಗಳ ಹೊಳೆಯುವ ಅಂಗಳಗಳ ಬಾಗಿಲುಗಳಲ್ಲಿ ಸಾಲಾಗಿ ಹವಳದ ತೋರಣಗಳನ್ನು ಕಟ್ಟಲಾಗಿತ್ತು. ಅವುಗಳ ಕಾಂತಿಯು ಬೀದಿಗಳಲ್ಲಿ ಕಂಗೊಳಿಸುತ್ತಿತ್ತು.

ಈ ಮೇಲಿನದ್ದು ಆಗಿನ ಕಾಲದ ದಸರಾ ವರ್ಣನೆ. ಆದರೆ ಇದು ನಡೆಯುತ್ತಿದ್ದದ್ದು ಶ್ರೀರಂಗಪಟ್ಟಣದಲ್ಲಿ. ಅಸಲಿಗೆ ಇದು ಶುರುವಾದದ್ದು ಹೇಗೆ?

ಇದರ ಕಥೆ ಶುರುವಾಗುವುದು 1610ರ ಆಸುಪಾಸಿನಲ್ಲಿ, ಆಗಿನ ಮಹಾರಾಜರಾದ ರಾಜ ಒಡೆಯರ್ ಅವರಿಂದ.

ಆಗ ಶ್ರೀರಂಗಪಟ್ಟಣವನ್ನಾಳುತ್ತಿದ್ದ ಶ್ರೀ ರಂಗರಾಜರು ವಿಜಯನಗರದ ಮಹಾ ಸಾಮ್ರಾಜ್ಯದ ವಂಶಸ್ಥರು. ಶ್ರೀ ರಂಗರಾಜರು ಆ ಮಹಾ ಸಾಮ್ರಾಜ್ಯದ ವಾರಸುದಾರರೇನೋ ಹೌದು. ಆದರೆ ಅವರಿಗೂ ಶತ್ರುಗಳಿದ್ದರು; ಅವರಿವರ ದಾಳಿಗಳ ನಂತರವೇ ಅವರು ಶ್ರೀರಂಗಪಟ್ಟಣಕ್ಕೆ ಬಂದಿದ್ದು. ಇಂಥ ಸಮಯದಲ್ಲಿ, ಯಾವುದೇ ಯುದ್ಧ ಇತ್ಯಾದಿಗಳಲ್ಲಿ ಅವರ ಸಹಾಯಕ್ಕೆ ಬಂದಿದ್ದು ನೆರೆರಾಜ್ಯದ ರಾಜ ಒಡೆಯರ್ ಅವರು. ಶ್ರೀ ರಂಗರಾಜರಿಗೆ ಮಕ್ಕಳಿರಲಿಲ್ಲ. ತಮ್ಮ ಕೊನೆಗಾಲದಲ್ಲಿ, ಅವರು ಪ್ರೀತಿಯಿಂದ ತಮ್ಮ ರಾಜ್ಯ ಮತ್ತು ಸಿಂಹಾಸನವನ್ನು ರಾಜ ಒಡೆಯರ್‌ಗೆ ಬಳುವಳಿಯಾಗಿ ಕೊಟ್ಟರು. ಸಿಂಹಾಸನವೆಂದರೆ ಕೇವಲ ಅಧಿಪತ್ಯವಲ್ಲ—ನಿಜವಾಗಿಯೂ ರಾಜರು ಕುಳಿತುಕೊಳ್ಳುವ ಸಿಂಹಾಸನ!

ಅಲ್ಲೇ ನೋಡಿ ಕಥೆಗೆ ಒಂದು ತಿರುವು ಸಿಕ್ಕಿದ್ದು. ಆ ಸಿಂಹಾಸನದ್ದು ಅಂಥದ್ದೇನು ವಿಶೇಷ? ಅದು ಸಾಮಾನ್ಯ ಸಿಂಹಾಸನವಾಗಿರಲಿಲ್ಲ. ಅದು ಮಹಾಭಾರತ ಕಾಲದ ಸಿಂಹಾಸನವೆಂಬುದು ಪ್ರತೀತಿ. ಮೊದಲು ಪಾಂಡವರ ಬಳಿಯಲ್ಲಿದ್ದು, ನಂತರ ಶ್ರೀಕೃಷ್ಣನ ಯದುವಂಶಕ್ಕೆ ಸೇರಿತ್ತಂತೆ. ಮೈಸೂರಿನ ಅರಸರು ಕೂಡ ತಮ್ಮನ್ನು ಯದುವಂಶದ ಕುಡಿಗಳೆಂದೇ ಗುರುತಿಸಿಕೊಳ್ಳುವುದರಿಂದ, ಆ ಸಿಂಹಾಸನ ರಾಜ ಒಡೆಯರ್ ಕೈಗೆ ಬಂದದ್ದು ಒಂದು ರೀತಿಯಲ್ಲಿ ಮನೆಗೆ ಬಂದ ಭಾಗ್ಯದಂತಿತ್ತು. ಅದಕ್ಕೇ ಅಲ್ಲವೇ ʼಚಿರಮ್ ಅಭಿವರ್ಧತಾಂ ಯದುಕುಲ ಸಂತಾನಶ್ರೀಃʼ ಎಂದು ರಾಜವಂಶವನ್ನು ಪಂಡಿತರು ಆಶೀರ್ವದಿಸುವುದು, ಹಾರೈಸುವುದು?

ಅಂಥ ಪವಿತ್ರ, ಪೌರಾಣಿಕ ಹಿನ್ನೆಲೆಯುಳ್ಳ ಸಿಂಹಾಸನ ತಮ್ಮದಾದ ಆ ಸಂಭ್ರಮವನ್ನು ಒಂದು ದೊಡ್ಡ ಉತ್ಸವವನ್ನಾಗಿ ಆಚರಿಸದೇ ಇರಲು ಸಾಧ್ಯವೇ? ಹೀಗೆ 1610ರಲ್ಲಿ, ರಾಜ ಒಡೆಯರ್ ಅವರು ದಸರಾ ಆಚರಣೆಯನ್ನು ರಾಜ ವೈಭವದಿಂದ ಆರಂಭಿಸಿದರು. ತಮ್ಮ ನಂತರ ಬರುವವರೂ ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಬೇಕೆಂದು ಆಶಿಸಿದರು. ಅಂದಿನಿಂದ ಇಂದಿನವರೆಗೂ ಈ ಪರಂಪರೆ ನಮ್ಮ ಕಣ್ಣಮುಂದೆ ಜೀವಂತವಾಗಿದೆ. ಆ ಪರಂಪರೆಯು ದೇಶ-ಕಾಲಗಳಿಗೆ ತಕ್ಕಂತೆ ಒಂದಿಷ್ಟು ಬದಲಾವಣೆಗಳನ್ನು ಒಳಗೊಂಡಿದೆಯಷ್ಟೆ.

ಸರಿ. ಇದೀಗ ದೀಪಾಲಂಕಾರದ ವಿಷಯ ಆಯಿತು. ಊರೆಲ್ಲ ಸುತ್ತಾಡುವ ಪ್ರವಾಸಿಗೆ ಹೊಟ್ಟೆ ಹಸಿವಾದರೆ ಮಾಡುವುದೇನು? ಒಂದು, ಇದೀಗ ಸರಕಾರವೇ ಆಹಾರ ಮೇಳ ಎಂಬ ಹೆಸರಿನಲ್ಲಿ ಮೈಸೂರಿನ ಮಹಾರಾಜ ಮೈದಾನದಲ್ಲಿ ಏರ್ಪಾಡು ಮಾಡುತ್ತದೆ. ಅಲ್ಲಿ ಮೈಸೂರಿನ ವಿಶೇಷ ಖಾದ್ಯಗಳಲ್ಲದೇ ಎಲ್ಲ ರೀತಿಯ ಕುರುಕಲು ತಿಂಡಿ, ತಂಪು-ಬಿಸಿ ಪಾನೀಯ, ಎಲ್ಲವೂ ದೊರಕುತ್ತದೆ. ಅಲ್ಲಿನ ಪ್ರಕಟಣೆಯನ್ನು ನೋಡಿಕೊಂಡು ನೀವು ಹೊಟ್ಟೆ ತುಂಬಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಬೆಳಗ್ಗೆ ಹನ್ನೊಂದು ಗಂಟೆಯೊಳಗಾದರೆ ಹಳ್ಳಿ ಹಟ್ಟಿ ಹೊಟೇಲಿನಲ್ಲಿ ಚಿಬ್ಲು ಇಡ್ಲಿ, ಪಾನಕ, ಮಸಾಲೆ ದೋಸೆ ಇವುಗಳನ್ನು ಲೊಚ್ಚುಗುಟ್ಟಿಕೊಂಡು ಮೆಲುಕು ಹಾಕಿ ಹಾಕಿ ತಿನ್ನಬಹುದು. ಇನ್ನು ಈಗಾಗಲೇ ಪ್ರಸಿದ್ಧಿ ಪಡೆದಿರುವ ಮೈಲಾರಿ, ಗುರು ಭವನ ಇತ್ಯಾದಿ ಹೆಸರುಗಳಲ್ಲಿ ಅನ್ನದಾತರು ಇದ್ದೇ ಇದ್ದಾರೆ.

ದಸರಾದ ಸಾಮಾನ್ಯ ಆಕರ್ಷಣೆಗಳಾದ ವಸ್ತುಪ್ರದರ್ಶನ, ಅರಮನೆ, ಇವುಗಳು ಬಿಟ್ಟು, ಭಕ್ತರಿಗೂ, ಇತಿಹಾಸಾಸಕ್ತರಿಗೂ, ಶಿಲ್ಪಕಲಾ ಪ್ರೇಮಿಗಳಿಗೂ ಹಬ್ಬವೆನಿಸುವ ಅದೆಷ್ಟೋ ದೇವಳಗಳು ಮೈಸೂರಿನಲ್ಲಿ, ಅದರಲ್ಲೂ ವಿಶೇಷವಾಗಿ ನವರಾತ್ರಿಯ ಸಮಯದಲ್ಲಿ ನೋಡಬಹುದಾದಂಥವು ಇವೆ. ಅರಮನೆಯ ಪ್ರಾಂಗಣದಲ್ಲೇ ಇರುವ ಲಕ್ಷ್ಮೀರಮಣಸ್ವಾಮಿ ದೇವಸ್ಥಾನ, ತ್ರಿನಯನೇಶ್ವರ ಸ್ವಾಮಿ ದೇವಸ್ಥಾನ, ಶ್ವೇತವರಾಹಸ್ವಾಮಿ ದೇವಸ್ಥಾನ, ಮಹಾಲಕ್ಷ್ಮೀ ದೇವಸ್ಥಾನ, ವೆಂಕಟರಮಣಸ್ವಾಮಿ ದೇವಸ್ಥಾನ (ಅಥವಾ ಕಿಲ್ಲೇ ವೆಂಕಟರಮಣಸ್ವಾಮಿ), ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನ, ಭುವನೇಶ್ವರೀ ದೇವಸ್ಥಾನ ಹಾಗೂ ಗಾಯತ್ರೀ ದೇವಸ್ಥಾನಗಳಿವೆ. ಒಂದಕ್ಕಿಂತ ಒಂದು ಅದ್ಭುತ ವಾತಾವರಣ ಉಳ್ಳಂಥವು. ಅದರಲ್ಲೂ ಸಾಧನೆ ಮಾಡಬೇಕು ಎನ್ನುವವರಿಗೆ ಕುಳಿತು ಶಾಂತಿಯಿಂದ ಧ್ಯಾನಿಸಬಲ್ಲ ವಾತಾವರಣವುಳ್ಳ ದೇವಳಗಳಿವು. ಇಷ್ಟೇ ಅಲ್ಲದೆ ರಾಮಾನುಜ ರಸ್ತೆಯಲ್ಲಿರುವ ಪ್ರಾಚೀನ ದೇವಾಲಯಗಳು. ವಿಶೇಷವಾಗಿ ಶ್ರೀಮನ್ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಕಟ್ಟಿಸಿದ ಕಾಮೇಶ್ವರ-ಕಾಮೇಶ್ವರೀ ದೇವಾಲಯ. ನೇಪಾಳದ ಶೈಲಿಯಲ್ಲಿರುವ ಈ ದೇವಾಲಯದಲ್ಲಿ ಕೆತ್ತನೆಗಳನ್ನು ನೋಡಲಿಕ್ಕೆ ನವರಾತ್ರಿಯ ಅಷ್ಟೂ ದಿನಗಳೂ ಸಾಲದು. ಇನ್ನು, ಅಭಿನವ ಶಂಕರಾಲಯ – ಶಂಕರ ಮಠದಲ್ಲಿ ಥೇಟ್ ಶೃಂಗೇರಿಯಂತೆ ದಿನಕ್ಕೊಂದು ಅಲಂಕಾರವನ್ನು ಮುದ್ದು ಶಾರದಮ್ಮನಿಗೆ ಮಾಡುತ್ತಾರೆ. ಹೇಳುತ್ತಾ ಹೋದರೆ ವಿಜಯದಶಮಿಯೇ ಬಂದು ಬಿಡುತ್ತದೋ ಏನೋ!

ನವರಾತ್ರಿಯ ಸಮಯವು ಉಪಾಸಕರಿಗೆ ಅತ್ಯಂತ ಪ್ರಶಸ್ತ ಸಮಯ. ಅದರಲ್ಲೂ ಜಯಚಾಮರಾಜೇಂದ್ರ ಒಡೆಯರ್ ಮಹಾರಾಜರಂತೂ ಶ್ರೇಷ್ಠ ಶ್ರೀವಿದ್ಯಾ ಉಪಾಸಕರಾಗಿದ್ದರು. ಅವರ ಪೂರ್ವಜರೂ, ಹಾಗೆಯೇ ಈಗ ಶ್ರೀಮನ್ಮಹಾರಾಜರಾದ ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್ ಅವರೂ ಈ ಹತ್ತೂ ದಿನಗಳೂ ತಪಸ್ವಿಗಳಂತೆ, ಅತ್ಯಂತ ಕಟ್ಟುನಿಟ್ಟಿನ ವ್ರತದಲ್ಲಿ ತೊಡಗಿರುತ್ತಾರೆ. ಪ್ರತಿ ಸಂಜೆಯೂ ದರ್ಬಾರ್ ನಡೆಯುತ್ತದೆ. ಮತ್ತೆ ಗೋವಿಂದ ವೈದ್ಯನ ಕಾವ್ಯದಲ್ಲಿ ದರ್ಬಾರಿನ ವರ್ಣನೆಯನ್ನು ಹೀಗೆ ಕಾಣಬಹುದು:

ತೊಳಗುವಾಶ್ವೀಜ ಮಾಸದ ಶುಕ್ಲ ಪಕ್ಷದೊ

ಳಳವಟ್ಟ ಪ್ರಥಮ ದಿವಸದೆ |

ಗಳಿಲನೋಲಗ ಶಾಲೆ ಗಣಪಾರ್ಚನೆ ಹೋಮ

ವೆಳಸಿತು ವಿಪ್ರರಿಂದಾಗ ||

ಗಜ ಶಾಲೆ ಹಯಗಳ ಲಾಯ ದಿವ್ಯಾಯುಧ

ವ್ರಜಗಳ ಮಂಟಪಗಳಿಗೆ |

ದ್ವಿಜರೈದಿ ಹೋಮ ಪುಣ್ಯಾಹಾರ್ಚನೆ ಪೂಜೆಯ

ತ್ರಿಜಗನರಿಯೆ ರಚಿಸಿದರು ||

ಮನೆಯ ದೇವತೆ ಬೆಟ್ಟದ ಚಾಮುಂಡಿಯ

ಮನಗೊಂಡು ಬಹು ಪೂಜೆಯಿಂದ |

ಘನ ಕುಂಕುಮಾರ್ಚನೆ ಪಣ್ಪಲ ನೈವೇದ್ಯ

ವನು ನೆರೆ ಹರುಪದಿಂ ಮಾಡೆ ||

ಆಶ್ವೀಜ ಮಾಸದ ಶುಕ್ಲಪಕ್ಷದ ಮೊದಲ ದಿನದಂದು, ದರ್ಬಾರ್ ಮಂಟಪದಲ್ಲಿ ಬ್ರಾಹ್ಮಣರಿಂದ ಗಣಪತಿ ಹೋಮ ಮತ್ತು ಪೂಜೆಗಳು ಆರಂಭವಾದವು. ನಂತರ ಆನೆ ಲಾಯ, ಕುದುರೆ ಲಾಯ ಮತ್ತು ಆಯುಧಗಳನ್ನು ಇರಿಸುವ ಮಂಟಪಗಳಲ್ಲಿ ಹೋಮ, ಪುಣ್ಯಾಹವಾಚನ ಮತ್ತು ಪೂಜೆಗಳನ್ನು ವಿಜೃಂಭಣೆಯಿಂದ ನಡೆಸಲಾಯಿತು. ರಾಜಮನೆತನದ ಕುಲದೇವತೆಯಾದ ಬೆಟ್ಟದ ಚಾಮುಂಡೇಶ್ವರಿಗೆ ವಿಶೇಷ ಕುಂಕುಮಾರ್ಚನೆ, ಹಣ್ಣು-ಹಂಪಲುಗಳ ನೈವೇದ್ಯವನ್ನು ಅತ್ಯಂತ ಸಂತೋಷದಿಂದ ಸಮರ್ಪಿಸಲಾಯಿತು.

ಈ ದರ್ಬಾರ್ ನೋಡಲು ಸಾರ್ವಜನಿಕರಿಗೆ ಅಷ್ಟು ಸುಲಭವಾಗಿ ಅವಕಾಶ ದೊರಕದು.

ಇನ್ನು ಒಂದು ದಿನದಲ್ಲಿ ಮೈಸೂರಿನ ಸುತ್ತಮುತ್ತ ನೋಡುವಂಥ ಜಾಗಗಳಿವೆ. ಅರಮನೆ, ಮೃಗಾಲಯ, ಲಲಿತ ಮಹಲ್, ಚಾಮುಂಡಿ ಬೆಟ್ಟದಾಚೆಗೂ ಮೈಸೂರಿನ ಆಸುಪಾಸಿನಲ್ಲಿ ಹಲವು ಅದ್ಭುತ ತಾಣಗಳಿವೆ. ದಸರಾ ನೋಡಲು ಬಂದವರು ಅಲ್ಲಿಗೆಲ್ಲ ಭೇಟಿಕೊಟ್ಟರೆ ಮೈಮನಸ್ಸು ಪ್ರಫುಲ್ಲ.

tonnuru kere

ತೊಣ್ಣೂರು ಕೆರೆ

ಮೈಸೂರಿಂದ ಒಂದು ಗಂಟೆ-ಒಂದೂವರೆ ಗಂಟೆಯ ಪ್ರಯಾಣ. ಪಾಂಡವಪುರ ದಾಟಿ, ಹಳ್ಳಿಗಳ ನಡುವೆ ಸಾಗಿದರೆ ಒಂದು ಅದ್ಭುತ ಲೋಕವೇ ತೆರೆದುಕೊಳ್ಳುತ್ತದೆ. ಅದೇ ತೊಣ್ಣೂರು ಕೆರೆ. ಇದೇನು ಸಾಮಾನ್ಯ ಕೆರೆಯಲ್ಲ. ಸುಮಾರು ಸಾವಿರ ವರ್ಷಗಳ ಹಿಂದೆ, ಶ್ರೀ ರಾಮಾನುಜಾಚಾರ್ಯರ ಕಾಲದಲ್ಲಿ ನಿರ್ಮಿಸಲ್ಪಟ್ಟ ಕಲ್ಯಾಣಿ ಇದು. ವಿಶಾಲವಾದ, ಸ್ಫಟಿಕ ಸ್ಪಷ್ಟ ನೀರು, ಸುತ್ತಲೂ ಬೆಟ್ಟಗುಡ್ಡಗಳು, ಕೆರೆಯಂಗಳಕ್ಕೆ ಇಳಿಯಲು ಕಲ್ಲಿನ ಮೆಟ್ಟಿಲುಗಳು. ದಸರಾ ಸಮಯದ ಗದ್ದಲದಿಂದ ಪಾರಾಗಿ, ಇಲ್ಲಿನ ತಣ್ಣನೆಯ ಮೆಟ್ಟಿಲ ಮೇಲೆ ಕುಳಿತು, ಅಲೆಯ ಸಪ್ಪಳವನ್ನು ಕೇಳುತ್ತಿದ್ದರೆ ಸಿಗುವ ನೆಮ್ಮದಿಯೇ ಬೇರೆ.

karigatta

ಕರಿಘಟ್ಟ

ʼಚಾಮುಂಡಿ ಬೆಟ್ಟಕ್ಕೆ ಹೋಗಿ ಬರೋ ಅಷ್ಟರಲ್ಲಿ ಅರ್ಧ ದಸರಾ ಮುಗಿದುಹೋಗಿರುತ್ತೆʼ ಎಂದು ಗೊಣಗುವವರಿಗೆಂದೇ ಇರುವ ಜಾಗವಿದು. ಶ್ರೀರಂಗಪಟ್ಟಣದ ಬಳಿ, ಕಾವೇರಿ ಮತ್ತು ಲೋಕಪಾವನಿ ನದಿಗಳ ಸಂಗಮವನ್ನು ಎತ್ತರದಿಂದ ನೋಡಲು ಹೇಳಿ ಮಾಡಿಸಿದ ಜಾಗ. ಕರಿಘಟ್ಟದ ಮೇಲೊಂದು ವೆಂಕಟರಮಣ ಸ್ವಾಮಿಯ ದೇವಸ್ಥಾನವೂ ಇದೆ. ಬೆಟ್ಟ ಹತ್ತಿ ಹೋಗುವ ತಿರುವುಗಳ ರಸ್ತೆಯ ಅನುಭವವೇ ರೋಚಕ. ಮೇಲೆ ನಿಂತು ನೋಡಿದರೆ, ಕೆಳಗೆ ಹಸಿರು ಹೊದ್ದ ಹೊಲಗದ್ದೆಗಳು, ಶಾಂತವಾಗಿ ಹರಿಯುವ ನದಿ, ದೂರದಲ್ಲಿ ಕಾಣುವ ಶ್ರೀರಂಗಪಟ್ಟಣ. ಒಟ್ಟಿನಲ್ಲಿ, ಚಾಮುಂಡಿ ಬೆಟ್ಟದ ಜನಸಂದಣಿಯಿಲ್ಲದೆ, ಅದೇ ರೀತಿಯ ದಿವ್ಯಾನುಭವ ಮತ್ತು ಸುಂದರ ದೃಶ್ಯವನ್ನು ಸವಿಯಲು ಇದೊಂದು ಅತ್ಯುತ್ತಮ ಆಯ್ಕೆ.

Chunchanakatte falls

ಚುಂಚನಕಟ್ಟೆ ಜಲಪಾತ

ದಸರಾ ಅಂದರೆ ಮಳೆ ನಿಂತು ಚಳಿ ಶುರುವಾಗೋ ಹೊತ್ತು. ಈ ಸಮಯದಲ್ಲಿ ಧುಮ್ಮಿಕ್ಕುವ ಜಲಪಾತ ನೋಡೋ ಮಜಾನೇ ಬೇರೆ. ಮೈಸೂರಿನಿಂದ ಕೆ.ಆರ್. ನಗರದ ಕಡೆಗೆ ಸುಮಾರು 55 ಕಿಮೀ ಸಾಗಿದರೆ ಸಿಗುವುದೇ ಚುಂಚನಕಟ್ಟೆ. ಇಲ್ಲಿ ಕಾವೇರಿ ನದಿಯು ಅಗಲವಾಗಿ ಹರಡಿ, ಬಂಡೆಗಳ ಮೇಲಿಂದ ಧುಮ್ಮಿಕ್ಕುವ ದೃಶ್ಯ ಮನಮೋಹಕ. ಇದರ ವಿಶೇಷತೆ ಏನೆಂದರೆ, ಇಲ್ಲಿ ವನವಾಸದ ಕಾಲದಲ್ಲಿ ಸೀತಾಮಾತೆ ಸ್ನಾನ ಮಾಡಿದ್ದರಿಂದ, ನೀರಿಗೆ ಈಗಲೂ ಅರಿಶಿನದ ಬಣ್ಣವಿದೆ ಮತ್ತು ಎಷ್ಟೇ ಸೋಪು ಹಾಕಿದರೂ ನೊರೆ ಬರುವುದಿಲ್ಲ ಎಂಬ ಪ್ರತೀತಿ ಇದೆ. ದಸರಾ ಸಮಯದಲ್ಲಿ ನೀರಿನ ಹರಿವು ಹೆಚ್ಚಿದ್ದು, ಜಲಪಾತದ ಗಾಂಭೀರ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ.

ಇನ್ನು ವಿಜಯದಶಮಿಯ ದಿನದ ಚಾಮುಂಡಿ ಬೆಟ್ಟದಲ್ಲಿನ ವಿಶೇಷ ಪೂಜೆ, ಬನ್ನಿಮಂಟಪದಲ್ಲಿನ ಪೂಜೆಯ ಕುರಿತು ನಿಮಗೆ ಗೊತ್ತೇ ಇದೆ.

ಒಟ್ಟಿನಲ್ಲಿ, ಮೈಸೂರಿನ ದಸರಾ ಕೇವಲ ಹಬ್ಬವಲ್ಲ. ಅದೊಂದು ಜಾಗೃತಿ; ಅದೊಂದು ಉಪಾಸನೆ, ಅದೊಂದು ದುಬಾರಿ ಸಂತಸ, ಅದುವೇ ಮೈಸೂರು- ಅದೇ ಕರ್ನಾಟಕದ ಅಸ್ತಿತ್ವ!

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ