Monday, November 3, 2025
Monday, November 3, 2025

ಚಕ್ರಗಳ ಮೇಲೆ ರಾಜ್ಯದ ಸಾಮ್ರಾಜ್ಯಗಳು

ದಕ್ಷಿಣ ಭಾರತ ಸಂಸ್ಕೃತಿ ಮತ್ತು ಪರಂಪರೆಯ ಅನುಭವ ನೀಡುತ್ತ, ಪ್ರವಾಸದಲ್ಲಿ ಅದರ ಸತ್ವವನ್ನು ಕಟ್ಟಿಕೊಡಲು ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್‌ ಚಾರಿಯಟ್‌, ತನ್ನ ವೈಭವದ ಓಡಾಟವನ್ನು ಮತ್ತೆ ಆರಂಭಿಸಿದೆ. ರಾಜ್ಯ ಮತ್ತು ಕೇಂದ್ರ ಪ್ರವಾಸೋದ್ಯಮ ನಿಗಮ (KSTDC & IRCTC)ಗಳ ಸಹಯೋಗದಲ್ಲಿ ನವೀನ ಸುಧಾರಣೆಗಳೊಂದಿಗೆ ರೈಲು ಓಡಾಟವನ್ನು ಮತ್ತೆ ಶುರುಮಾಡಿವೆ. ಈ ಗೋಲ್ಡನ್‌ ಚಾರಿಯಟ್‌ನೊಂದಿಗೆ ಪ್ರವಾಸಕ್ಕೆ ಬರುವವರಿಗೆ ರಾಜ್ಯದ ಗೋಲ್ಡನ್‌ ಚರಿತ್ರೆಯ ಅನುಭವ ರೈಲಿನಲ್ಲಿಯೇ ರೀ ಓಪನ್‌ ಆಗಲಿದೆ.

ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್‌ ಪರನಲ್ಲ ||

ಕಪ್ಪೆ ಅರಭಟ್ಟನ ಶಾಸನದ ಸಾಲುಗಳಿವು. ಕನ್ನಡ ಮತ್ತು ಕನ್ನಡಿಗನ ಹಿರಿತನ, ಸ್ವಾಭಿಮಾನದ ಸ್ವಾದವನ್ನು ಸಾರಿದವೋ… ಕನ್ನಡಿಗನ ವೀರತ್ವವನ್ನು ಸುತ್ತಲಿನ ಸಾಮ್ರಾಜ್ಯಗಳಿಗೆ ಬಿತ್ತರಿಸಿದವೋ ತಿಳಿಯದಿದ್ದರೂ, ಕನ್ನಡದ ಕಂಪನ್ನು ಕಣ್ಣರಳಿಸಿ ನೋಡುವಂತೆ ಮಾಡಿದ್ದಂತೂ ಸತ್ಯ. ಈ ಶಾಸನ ಹೊರಡಿಸಿದ್ದು ಚಾಲುಕ್ಯ ಸಾಮ್ರಾಜ್ಯವಾದರೂ ಇಂಥ ಅನೇಕ ರಾಜಮನೆತನಗಳು ಆಳಿ ಬಾಳಿದ ಸಂಸ್ಕೃತಿ, ಇತಿಹಾಸ ಕರ್ನಾಟಕದ ತುಂಬೆಲ್ಲಾ ಇನ್ನೂ ಅಚ್ಚಳಿಯದೆ ಉಳಿದಿವೆ.

ಅದು ಇಂದಿನ ಕೋಟೆ ಕೊತ್ತಲಗಳು, ಅತಿಥಿ ಸತ್ಕಾರ, ಪೋಷಾಕುಗಳು, ಆಚಾರ-ವಿಚಾರ, ಆಹಾರ ಪದ್ಧತಿಗಳು, ವಿಹಾರದ ವನಗಳು, ಭಾವನೆ- ಬಾಂಧವ್ಯಗಳಲ್ಲಿ ಇಂದಿಗೂ ಕಂಗೊಳಿಸುತ್ತದೆ. ಇಂಥ ಸ್ಮರಣಿಕೆಗಳನ್ನು ಸ್ವದೇಶಿ- ವಿದೇಶಿ ಪ್ರವಾಸಿಗಳಿಗೆ ಅನುಭವದ ನೆಲೆಗಳಲ್ಲಿ ಕಟ್ಟಿಕೊಡಲು ಗೋಲ್ಡನ್‌ ಚಾರಿಯಟ್‌ ವಿನೂತನ ಸ್ಥಿತಿಯೊಂದಿಗೆ ಮತ್ತೆ ಪ್ರಸ್ತುತಕ್ಕೆ ಬಂದಿದೆ. ಹೇಳುವುದು ಮರೆತೆ; ಇದರ ನಾಮೋತ್ಪತ್ತಿಯೂ ನಮ್ಮನ್ನು ಜಗತ್ತಿನ ಎರಡನೇ ಅತಿ ಶ್ರೀಮಂತ ಸಾಮ್ರಾಜ್ಯವಾಗಿದ್ದ ವಿಜಯನಗರದ ಕಡೆಗೆ ಕಟ್ಟಿ ಎಳೆಯುತ್ತದೆ. ಹೌದು, ವಿಜಯನಗರ ಅಂದರೆ ಇಂದಿನ ಹಂಪಿ, ಇಲ್ಲಿನ ವಿಜಯ ವಿಠ್ಠಲ ದೇವಾಲಯದಲ್ಲಿ ಸ್ಥಿತವಾಗಿರುವ ಕಲ್ಲಿನ ರಥವೇ ಈ ಗೋಲ್ಡನ್‌ ಚಾರಿಯಟ್‌ನ ಹೆಸರಿಗೆ ಮೂಲ.

chariot 1

ದಕ್ಷಿಣ ಭಾರತ ಸಂಸ್ಕೃತಿ ಮತ್ತು ಪರಂಪರೆಯ ಅನುಭವ ನೀಡುತ್ತ, ಪ್ರವಾಸದಲ್ಲಿ ಅದರ ಸತ್ವವನ್ನು ಕಟ್ಟಿಕೊಡಲು ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್‌ ಚಾರಿಯಟ್‌, ತನ್ನ ವೈಭವದ ಓಡಾಟವನ್ನು ಮತ್ತೆ ಆರಂಭಿಸಿದೆ. ರಾಜ್ಯ ಮತ್ತು ಕೇಂದ್ರ ಪ್ರವಾಸೋದ್ಯಮ ನಿಗಮ (KSTDC & IRCTC)ಗಳ ಸಹಯೋಗದಲ್ಲಿ ನವೀನ ಸುಧಾರಣೆಗಳೊಂದಿಗೆ ರೈಲು ಓಡಾಟವನ್ನು ಮತ್ತೆ ಶುರುಮಾಡಿವೆ. ಈ ಗೋಲ್ಡನ್‌ ಚಾರಿಯಟ್‌ನೊಂದಿಗೆ ಪ್ರವಾಸಕ್ಕೆ ಬರುವವರಿಗೆ ರಾಜ್ಯದ ಗೋಲ್ಡನ್‌ ಚರಿತ್ರೆಯ ಅನುಭವ ರೈಲಿನಲ್ಲಿಯೇ ರೀ ಓಪನ್‌ ಆಗಲಿದೆ. ಹೌದು, ಸುಂದರ ವಿನ್ಯಾಸದ ಈ ಚಾರಿಯಟ್‌ ಒಳಾಂಗಣವು ವಿಭಿನ್ನ ಬೋಗಿಗಳಲ್ಲಿ ಮತ್ತದೇ ವಿಭಿನ್ನ ರಾಜಮನೆತನದ ವೈಭೋಗವನ್ನು ಅನುಭವಕ್ಕೆ ತರಲಿದೆ.

ಒಂದೊಂದು ಬೋಗಿಗೂ ಒಂದೊಂದು ರಾಜವಂಶದ ಹೆಸರು

ಗೋಲ್ಡನ್‌ ಚಾರಿಯಟ್‌, ಕರ್ನಾಟಕವನ್ನು ಆಳಿದ ರಾಜಮನೆತನಗಳನ್ನು ಸ್ಮರಿಸುವ ಸಲುವಾಗಿ, ಪ್ರತಿಯೊಂದು ಬೋಗಿಗೂ ಅವುಗಳ ಹೆಸರನ್ನು ಇರಿಸಿದೆ. ಚಾಲುಕ್ಯ, ಕದಂಬ, ಹೊಯ್ಸಳ, ರಾಷ್ಟ್ರಕೂಟ, ಸಂಗಮ, ಶಾತವಾಹನ, ಗಂಗ ಹೀಗೆ ಒಟ್ಟು 16 ಬೋಗಿಗಳಿದ್ದು ಇವುಗಳಲ್ಲಿ 11 ಬೋಗಿಗಳು ಪ್ರವಾಸಿಗಳ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಿವೆ. ಉಳಿದ ಬೋಗಿಗಳು ಈ ಕೆಳಗಿನಂತೆ ವಿಶೇಷವಾಗಿವೆ.

chariot2

ನಳಪಾಕ ಸವಿಯಾಕ...

ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರೂರುತ್ತಿರಬಹುದು. ಇದು ಪ್ರವಾಸಿಗಳಿಗೆ ತಮ್ಮಿಷ್ಟದ ನಳಪಾಕಗಳನ್ನು ಸಿದ್ಧಪಡಿಸುವ ಸ್ಥಳ. ಅಂದರೆ ರೆಸ್ಟೋರೆಂಟ್‌. ದಕ್ಷಿಣದಿಂದ ಉತ್ತರದವರೆಗೂ ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನು ಶುಚಿ-ರುಚಿಯಾಗಿ ಸಿದ್ಧಪಡಿಸಿ ಪ್ರವಾಸಿಗರಿಗೆ ಉಣಬಡಿಸಲಾಗುತ್ತದೆ. ಬೈ ದ ವೇ.. ರುಚಿ ಎಂಬುದೂ ಇಲ್ಲಿಯೇ ಇದೆ. ನಾನು ಹೇಳ್ತಾ ಇರೋದು ಬಾಯಿರುಚಿಯ ಬಗ್ಗೆ ಮಾತ್ರವಲ್ಲ, ರುಚಿ ಎಂಬ ಇಲ್ಲಿನ ಮತ್ತೊಂದು ರೆಸ್ಟೋರೆಂಟ್‌ ಬಗ್ಗೆ.

ಮದಿರಕ್ಕೊಂದು ಮಂದಿರ

ಪ್ರವಾಸಕ್ಕೆಂದು ಹೊರಟಾಗ ದಾರಿಯ ಮಧ್ಯ, ಮದ್ಯ ಇರದಿದ್ದರೆ ಮಹಾರಾಜ ಆತಿಥ್ಯ ಅಪೂರ್ಣ ಅಲ್ಲವೇ? ಅಪೂರ್ಣ ಆಗದಿದ್ದರೂ ಇಲ್ಲಿರುವ ಬಾರ್‌ ಮಧ್ಯೆ ಕುಳಿತಾಗ ಅರಮನೆಯ ವಾತಾವರಣ ಎಲ್ಲೆಲ್ಲೂ ಹರಡಿಕೊಳ್ಳುತ್ತದೆ. ಸುತ್ತಲೂ ಸುಂದರ ಮರದ ಫರ್ನಿಚರ್ ಗಳು, ಬಂಗಾರ ಬಳಿದಂತೆ ಕಾಣುವ ಫ್ರೇಮ್ಸ್. ವೈನಾದ ವೈನ್‌ ಗ್ಲಾಸ್‌ ಹಿಡಿದು, ಸಿಂಹಾಸನದಂಥ ಸೋಫಾಗಳ ಮೇಲೆ ಕುಳಿತು ಸುರಪಾನ ಮಾಡಬಹುದು, ಅಂದರೆ ಮದ್ಯ ಸೇವಿಸಬಹುದು. ಈ ವಿಭಾಗದ ಹೆಸರು ಮದಿರ.

chariot 5

ಚುಕು ಬುಕು ಜಿಮ್ ಜಿಮ್!

ಪ್ರತಿದಿನ ಯೋಗ ಧ್ಯಾನ ಅಥವಾ ಜಿಮ್‌ ಸರ್ಕಸ್‌ ಮಾಡಿ ಮೈದಣಿಸಿ ಆರೋಗ್ಯದ ಕಾಳಜಿ ಮಾಡುವವರು, ಪ್ರವಾಸದಲ್ಲಿ ಇವುಗಳಿಗೆ ಕಾಲ ಸಿಗದು ಎಂದು ಯೋಚಿಸುವ ಅಗತ್ಯವಿಲ್ಲ. ಇಲ್ಲಿನ ʻಆರೋಗ್ಯʼ ಬೋಗಿಯಲ್ಲಿ ಆರೋಗ್ಯ ಸಂಬಂಧಿತ ಕಾಳಜಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಅಗತ್ಯ ಜಿಮ್‌ ಉಪಕರಣಗಳನ್ನು ಒದಗಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಎನ್ನುವಂತೆ ಇಲ್ಲಿ ಸ್ಪಾ, ಮಸಾಜ್‌ ರೂಮ್‌ಗಳೂ ಇವೆ.

chariot3

ಅರಮನೆಯ ಶಯ್ಯಾಗೃಹ

ಒಟ್ಟಾರೆ ರೈಲಿನಲ್ಲಿ 11ಬೋಗಿಗಳನ್ನು ಪ್ರವಾಸಿ ವಾಸ್ತವ್ಯಕ್ಕಾಗಿ ಸಿದ್ಧಪಡಿಸಲಾಗಿದ್ದು, ಒಟ್ಟು 42 ವಸತಿಗಳಿವೆ. ಇವುಗಳಲ್ಲಿ 84 ಪ್ರವಾಸಿಗಳು ತಂಗಬಹುದಾಗಿದ್ದು, ತುರ್ತು ಬಳಕೆಯ ಉದ್ದೇಶಕ್ಕಾಗಿ ಎರಡರಿಂದ ಮೂರು ರೂಮ್‌ಗಳನ್ನು ಖಾಲಿಯಾಗಿ ಕಾಯ್ದಿರಿಸಲಾಗುತ್ತದೆ. ಸುಂದರ ಸುಸಜ್ಜಿತ ರೂಮ್‌ಗಳು ಇವಾಗಿದ್ದು, ಒಂದು ಬಿಟ್ಟು ಒಂದರಂತೆ ಡಬಲ್‌ ಮತ್ತು ಸಿಂಗಲ್‌ ಬೆಡ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ರೂಮ್‌ನಲ್ಲೂ ಟಿವಿ, ಇಂಟರ್‌ನೆಟ್‌ ವ್ಯವಸ್ಥೆ, ಹೊಂದಿಕೊಂಡಂತೆ ಶೌಚಗೃಹಗಳಿದ್ದು, ಬಳಕೆಗೆ ಇಲ್ಲಿ ಇಡಲಾಗಿರುವ ಸೋಪ್‌, ಶ್ಯಾಂಪೂ, ಕಂಡಿಷನರ್‌ ಹೀಗೆ ಪ್ರತಿ ವಸ್ತುಗಳೂ ಭಾರತೀಯ ರೈಲ್ವೆ ಬ್ರಾಂಡ್‌ನ ವಸ್ತುಗಳಾಗಿವೆ. ವಿಶೇಷ ಏನಂದ್ರೆ, ಇಲ್ಲಿರುವ ಎಲ್ಲ 16 ಬೋಗಿಗಳೂ ಇಲ್ಲಿ ಹವಾ ನಿಯಂತ್ರಿತ.

chariot4

ಊಟವೂ ಸೂಪರ್ ಉಪಚಾರವೂ ಸೂಪರ್!

ಇಲ್ಲಿ ಸಿಬ್ಬಂದಿಯನ್ನು ಪ್ರವಾಸಿಗರ ಸಂಖ್ಯೆಗನುಗುಣವಾಗಿ ನೇಮಿಸಲಾಗುತ್ತದೆ. ಅಡುಗೆಯನ್ನೂ ಅಷ್ಟೆ, ಪ್ರವಾಸಕ್ಕೆ ರೈಲು ಸಿದ್ಧವಾಗುವ ಮುನ್ನ ಅಲ್ಲಿ ಸುತ್ತ ಮುತ್ತಲಿನ ಮಯೂರ, ಹೊಯ್ಸಳದಂಥ ವೈಭವೋಪೇತ ಹೊಟೇಲ್‌ಗಳ ನಳಮಹರಾಜರು ಅಂದರೆ ಅತ್ಯುತ್ತಮ ಬಾಣಸಿಗರನ್ನು ಆರಿಸಿ ಕರೆತರಲಾಗುತ್ತದೆ. ಆಯಾ ಊರಿನ ಊಟ ಅವರು ತಯಾರಿಸಿದರೆ ತಾನೇ ಅಚ್ಚುಕಟ್ಟು ಮತ್ತು ನಿಜವಾದ ಸ್ಥಳೀಯತೆಯ ಸ್ವಾದ ಸಿಗುವುದು. ಇಂಥ ಚಿಕ್ಕ ಪುಟ್ಟ ಆಲೋಚನೆಗಳಿಗೂ ನಿಗಮ ಬಹುಮುಖ್ಯ ಆದ್ಯತೆ ನೀಡಿದೆ. ಇಲ್ಲಿನ ಸುಂದರ ಕೆಂಪು ಟೋಪಿಯ ಸಿಬ್ಬಂದಿಗಳು ಬಲು ಚೆಲುವಿನಿಂದ ಊಟೋಪಚಾರ ವ್ಯವಸ್ಥೆಯನ್ನು, ಕಪ್ಪುಬಿಳಿ ಕೋಟಿನ ಸಿಬ್ಬಂದಿ ವಾಸ್ಥವ್ಯದ ಅಗತ್ಯ ಸೌಕರ್ಯಗಳನ್ನು, ವೈನಾದ ವೈನ್‌ ವ್ಯವಸ್ಥೆಯನ್ನು, ಸೀರೆಯುಟ್ಟ ಸುಂದರ ಅಪ್ಸರೆಯರು ಸ್ವಾಗತ- ಬೀಳ್ಕೊಡುಗೆಗಳನ್ನು ಮಾಡುವಾಗ, ರೈಲು ಪ್ರವಾಸವನ್ನು ಮುಗಿಸಿ ಮರಳಿ ಬರಲು ಮನಸ್ಸಾಗದು. ಖಂಡಿತವಾಗಿಯೂ ನೀವು ಇಲ್ಲಿಂದ ಮರಳುವಾಗ ಅವರೊಟ್ಟಿಗೆ ಒಂದು ಸೆಲ್ಫಿ ಪ್ಲೀಸ್‌ ಅನ್ನುವುದಂತೂ ಖಚಿತ.

GOLDEN CHARIOT 6

ಗೋಲ್ಡನ್‌ ಚಾರಿಯಟ್‌ನಲ್ಲಿ ಪ್ರವಾಸ ಮತ್ತೆ ಶುರುವಾಗಿದೆ. ಅಕ್ಟೋಬರ್‌ 11ಕ್ಕೆ ಮೊದಲ ಪ್ರವಾಸ ಶುರುವಾಗಿತ್ತು ಮುಂದಿನ ಪ್ರವಾಸ ಕನ್ನಡ ರಾಜ್ಯೋತ್ಸವ ದಿನದಂದು ಆಗಲಿದೆ. KSTDC ಮತ್ತು IRCTC ಸಹಯೋಗದಲ್ಲಿ ಇದರ ಕಾರ್ಯಾರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವಿದೆ. ರಾಜ್ಯ ಸರಕಾರ ಮತ್ತು KSTDCಯಿಂದ 1.20 ಕೋಟಿ ರುಪಾಯಿ ಅನುದಾನ ದೊರೆತಿದ್ದು, ರಾಜ್ಯದ ಜತೆಗೆ ಅಂತಾರಾಷ್ಟ್ರೀಯ ಸಾರಿಗೆ ಏಜೆನ್ಸಿಗಳ ಸಲಹೆಗಳನ್ನೂ ಪಡೆದು ವ್ಯವಸ್ಥೆಯಲ್ಲಿ ಆಂತರಿಕ ಬದಲಾವಣೆಗಳನ್ನು ಮಾಡಲಾಗಿದೆ. ಸ್ವೀಟ್‌ ರೂಮ್‌ ಮಾಡಲು ಯೋಜಿಸಲಾಗಿದೆ.
ಪ್ರಶಾಂತ್‌ ಕುಮಾರ್‌ ಮಿಶ್ರಾ
IAS .ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

ಎಲ್ಲರನ್ನೂ ನಾನು ಗೋಲ್ಡನ್‌ ಚಾರಿಯಟ್‌ಗೆ ಸ್ವಾಗತಿಸುತ್ತೇನೆ. ಇದು ಬೆಂಗಳೂರಿನಿಂದ ಪ್ರಯಾಣ ಶುರುಮಾಡಿ ಹಂಪಿ, ಮೈಸೂರು, ಗೋವಾದವರೆಗೂ ಹೋಗುತ್ತದೆ. ಮತ್ತೊಂದು ಪ್ರಯಾಣ ಮಾರ್ಗವಾದಲ್ಲಿ ಕೇರಳದ ಸುಂದರ ನಗರ ಕೊಚ್ಚಿನ್‌ನಿಂದ ಶುರುಮಾಡಿ, ತಮಿಳುನಾಡಿನ ತಂಜಾವೂರಿನವರೆಗೂ ಹೋಗಿ ಬೆಂಗಳೂರಿಗೆ ಮರಳುತ್ತದೆ. ನಿಮಗೆ ಇಡೀ ದಕ್ಷಿಣ ಕರ್ನಾಟಕವನ್ನು ಅನ್ವೇಷಿಸುವ ಬಯಕೆಯಿದ್ದರೆ, ಐಷಾರಾಮಿ, ಕಂಫರ್ಟ್‌ಗಳ ಜತೆಗೆ ಸುತ್ತಾಡಬೇಕೆಂದಿದ್ದರೆ, ಗೋಲ್ಡನ್‌ ಚಾರಿಯೇಟ್‌ನಲ್ಲಿ ನಿಮಗೆ ಸದಾ ಸ್ವಾಗತವಿದೆ.
ಪ್ರಮಿಳಾ ಗುಪ್ತ
IRS. ಗ್ರೂಪ್‌ ಜನರಲ್‌ ಮ್ಯಾನೇಜರ್‌ IRCTC

ಇದೊಂದು ಸುಂದರ ಮತ್ತು ಅತ್ಯದ್ಭುತ ಟ್ರೇನ್‌, ಇದನ್ನು ಪರಿಚಯ ಮಾಡಿಸಿ ಕೊಟ್ಟ KSTDC ಮತ್ತು IRCTCಗೆ ನಾನು ಧನ್ಯವಾದ ತಿಳಿಸುತ್ತೇನೆ. ಇದರಲ್ಲಿ ಐಷಾರಾಮಿ ಮತ್ತು ಒಳ್ಳೆಯ ಡೆಕೋರೇಷನ್‌, ಬಾಯಲ್ಲಿ ನೀರೂರುವಂತೆ ಮಾಡುವ ರೆಸ್ಟೋರೆಂಟ್‌ಗಳು, ಒಳ್ಳೆಯ ಸಿಬ್ಬಂದಿ ಸೇವೆ ಮತ್ತು ಜನ ಇದ್ದಾರೆ. ನನ್ನ ಪ್ರಕಾರ ಕರ್ನಾಟಕ ಮತ್ತು ದಕ್ಷಿಣ ಭಾರತದ ಕುರಿತು ತಿಳಿಯಲು ಇದೊಂದು ಉತ್ತಮ ಅವಕಾಶ. ಹಂಪಿಯಂಥ ವಿಶ್ವದ ಅತ್ಯತ್ತಮ ಪ್ರವಾಸಿ ಸ್ಥಳಕ್ಕೆ ಹೋಗಬಹುದು. ಆರು ದಿನಗಳ ಕಾಲ ಇಲ್ಲಿ ರುಚಿಕರ ಆಹಾರವನ್ನು ಸವಿಯಬಹುದು. ಐಷಾರಾಮಿ ಅನುಭವವನ್ನು ಪಡೆಯಬಹುದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು. ಎಲ್ಲದರ ಜತೆಗೆ ದಕ್ಷಿಣ ಭಾರತದ ಸಂಸ್ಕೃತಿಯನ್ನು ತಿಳಿಯಬಹುದು. ನಿಮ್ಮ ಜೀವನದ ಒಂದು ವಾರವನ್ನು ಐಷಾರಾಮಿಯಾಗಿ ಕಳೆಯಲು ನಿಮಗಿಷ್ಟವಿದ್ದರೆ, ನೀವು ಈ ರೈಲನ್ನು ಉಪಯೋಗಿಸಬಹುದು, ನಾನು ಇದನ್ನು ರೆಕಮೆಂಡ್‌ ಮಾಡುತ್ತೇನೆ.
ಮಾರ್ಕ್‌ ಲಾಮಿ
ಫ್ರಾನ್ಸ್‌ನ ಕಾನ್ಸುಲೇಟ್‌ ಜನರಲ್‌
Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ