Tuesday, October 14, 2025
Tuesday, October 14, 2025

ಮರದ ’ಶೂ ಪರ್’ ನಡಿಗೆ

ನೆದರ್ಲ್ಯಾಂಡ್ಸ್ ನ ರೈತಾಪಿ ಜನರು, ಗದ್ದೆ, ತೋಟ, ಹುಲ್ಲುಗಾವಲು, ಬೆಟ್ಟಗುಡ್ಡಗಳಲ್ಲಿ ಓಡಾಡಲು ಅನುಕೂಲವಾಗುವಂತೆ ಈ ' ಕ್ಲೋಂಪೆನ್’ ಎಂಬ ಮರದ ಪಾದರಕ್ಷೆಗಳನ್ನು ಒಂದೇ ವಿನ್ಯಾಸದಲ್ಲಿ ಬೇರೆ ಬೇರೆ ಗಾತ್ರದಲ್ಲಿ ತಯಾರಿಸುತ್ತಿದ್ದರು. ಈಗಲೂ ಪಾರಂಪರಿಕವಾಗಿ ಹಲವು ಕುಟುಂಬಗಳು ಹೆಮ್ಮೆಯಿಂದ ತಯಾರಿಸುತ್ತಾರೆ .

- ವಸಂತ ಕಲ್ ಬಾಗಲ್

ನಮಗೆಲ್ಲ ಗೊತ್ತಿರುವಂತೆ, ಅರಣ್ಯವಾಸಿ ರಾಮನ ಪಾದುಕೆಯನ್ನು ಸೋದರ ಭರತ, ಭಕ್ತಿಯಿಂದ ತನ್ನ ತಲೆಯಮೇಲೆ ಹೊತ್ತುತಂದು ಅಯೋಧ್ಯೆಯ ಸಿಂಹಾಸನದ ಮೇಲೆ ಇಟ್ಟು ಪಾದುಕಾ ಪಟ್ಟಾಭಿಷೇಕವನ್ನು ಮಾಡಿ ಅದರ ನೇತೃತ್ವದಲ್ಲಿ ರಾಮನ ಪರವಾಗಿ ರಾಜ್ಯವಾಳಿದ. ಹಾಗಾಗಿ ತ್ರೇತಾಯುಗದಲ್ಲಿ ಹದಿನಾಲ್ಕು ವರ್ಷಗಳ ಕಾಲ ಕಾಡಿನಲ್ಲಿ ತಿರುಗಾಡಿದ ರಾಮನ ಪಾದುಕೆ ಮರದಿಂದ ಮಾಡಿದ್ದು ಎಂದೇ ನಂಬಿಕೆ !

ಇನ್ನು ಮಠದ ಸ್ವಾಮಿಗಳ ಪಾದಗಳಲ್ಲಿ ಮರದ ಪಾದುಕೆ ಕಂಡಿದ್ದೇವೆ. ಅದು ಬಿಟ್ಟರೆ, ದಸರಾ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮರದ ಕಾಲಿನ ಮನುಷ್ಯರ ನಡಿಗೆಯನ್ನು ನೋಡಿ ಹಸನ್ಮುಖರಾಗಿದ್ದೇವೆ.

80-90ರ ದಶಕದಲ್ಲಿ ಕೂಡ ಮರದ ಕ್ಲಾಗ್ಸ್ ಹಾಕಿಕೊಳ್ಳುವ ಹೊಸದೊಂದು ಫ್ಯಾಶನ್ ಬಂದಿತ್ತು. ಮೇಲ್ಪದರ ಚರ್ಮ ಅಥವಾ ವೆಲ್ವೆಟ್ ಬಟ್ಟೆಯದ್ದು. ಕೆಳಭಾಗ ಸಂಪೂರ್ಣ ಮರದ್ದು. ಅತ್ತಿತ್ತ ಟಕ ಟಕ ಎಂದು ಸದ್ದು ಮಾಡಿಕೊಂಡು ಓಡಾಟ! ಆದರೆ ಈ ಫ್ಯಾಶನ್ ಬಹುದಿನ ಉಳಿಯದೆ ಹಾಗೇ ಮಾಯವಾಯಿತು. ಆ ನಂತರ ಅದರ ನೆನಪು ಆದದ್ದು, ಹಾಲೆಂಡ್ ದೇಶದ ಮರದ ಬೂಟ್ಸ್ ಗಳನ್ನು ನೋಡಿದಾಗಲೇ.

holland shoe 1

ಅಲ್ಲಿಯ ಮರದ ಶೂಗಳನ್ನು 'ಕ್ಲೋಂಪೆನ್' ಎಂದು 13 ನೇ ಶತಮಾನದ ಮಧ್ಯಕಾಲೀನ ಯುಗದಿಂದಲೂ ಕರೆದಿದ್ದಾರೆ. ಈ ಅತಿ ಪ್ರಾಚೀನ ಬೂಟ್ಸ್ ಗಳು ಮೊದಲಿಗೆ ನೆದರ್ಲ್ಯಾಂಡ್ಸ್ ನ 'ಡ್ರೆಂತೆ ' ಪ್ರಾಂತ್ಯದಲ್ಲಿ ಪೀಟ್ ಬಾಗ್- ಒದ್ದೆ ಮಣ್ಣಿನ ಬಾವಿಗಳಲ್ಲಿ, ಮರದ ಎಲೆ ತೊಗಟೆ ಬಿದ್ದ ಹಸಿ ನೆಲದ ಮಣ್ಣಿನ ಹಳ್ಳಗಳಲ್ಲಿ ದೊರಕಿದ್ದವು. ನಂತರವೂ ರೈತರ ದಿನ ನಿತ್ಯದ ಪಾದರಕ್ಷೆಯಾಗಿ ಉಳಿಯಿತು. 18 -19ನೇ ಶತಮಾನದಲ್ಲಿ ಇದರ ಹೆಚ್ಚಿನ ಉತ್ಪಾದನೆಯನ್ನು ಕಾರ್ಖಾನೆಗಳಲ್ಲಿ ಮಾಡಲಾಯಿತು. 20ನೇ ಶತಮಾನದ ವೇಳೆಗೆ, ಅದರ ಬೇಡಿಕೆ ಕಡಿಮೆ ಆಗತೊಡಗಿತು.

ನೆದರ್ಲ್ಯಾಂಡ್ಸ್ ನ ರೈತಾಪಿ ಜನರು, ಗದ್ದೆ, ತೋಟ, ಹುಲ್ಲುಗಾವಲು, ಬೆಟ್ಟಗುಡ್ಡಗಳಲ್ಲಿ ಓಡಾಡಲು ಅನುಕೂಲವಾಗುವಂತೆ ಈ 'ಕ್ಲೋಂಪೆನ್’ ಎಂಬ ಮರದ ಪಾದರಕ್ಷೆಗಳನ್ನು ಒಂದೇ ವಿನ್ಯಾಸದಲ್ಲಿ ಬೇರೆ ಬೇರೆ ಗಾತ್ರದಲ್ಲಿ ತಯಾರಿಸುತ್ತಿದ್ದರು. ಈಗಲೂ ಪಾರಂಪರಿಕವಾಗಿ ಹಲವು ಕುಟುಂಬಗಳು ಹೆಮ್ಮೆಯಿಂದ ತಯಾರಿಸುತ್ತಾರೆ .

ಆಲ್ಡೆರ್ , ಪಾಪ್ಲರ್ ಮತ್ತು ವಿಲ್ಲೋ ಮರಗಳನ್ನು ಹೆಚ್ಚಾಗಿ ಬಳಸಿ ಈ ಪಾದ ಮುಚ್ಚುವ ' ಶೂ' ಗಳನ್ನು ತಯಾರಿಸುತ್ತಾರೆ. ಒಂದು ದಿಮ್ಮಿ ಮರವನ್ನು ಕತ್ತರಿಸಿ ಚಿಕ್ಕ ಹಲಸಿನ ಗಾತ್ರದಷ್ಟು ಕೊಚ್ಚಿ, ಅದನ್ನು ಕೊರೆಯುವ ಯಂತ್ರದಲ್ಲಿ ಸಿಕ್ಕಿಸಿ, ಕಾಲ್ಬೆರಳು ತೋರುವಂತೆ, ಹಿಮ್ಮಡಿ ಮುಚ್ಚುವಂತೆ, ಕೊರೆದು ರೂಪ ತರಿಸುತ್ತಾರೆ. ಒರಟಾಗಿ ಬರುವ ಈ ಮರದ ದಿಮ್ಮಿಯನ್ನು ' ಶೂ' ವಿನ ಆಕಾರಕ್ಕೆ ಹತ್ತರಿ ಹೊಡೆಯುತ್ತಾ, ನೈಸು ಮಾಡುತ್ತಾ , ಪಾಲಿಶ್ ಹಾಕುತ್ತಾ ಹೊಳೆಯುವ ಪಾದರಕ್ಷೆಯಾಗಿ ರೂಪುಗೊಳಿಸಲಾಗುತ್ತದೆ.

ತಿಳಿ ಹಳದಿ ಮರದ ಬಣ್ಣದ ಈ ಶೂಗಳಿಗೆ ವಿವಿಧ ರಂಗುಗಳನ್ನು ಬಳಿದು, ಅದರ ಮೇಲೆ ಹೂವು, ಬಳ್ಳಿ, ಎಲೆ, ವಿಂಡ್ ಮಿಲ್, ಹಸು, ಇನ್ನೂ ಅನೇಕ ನಾಜೂಕು ವಿನ್ಯಾಸಗಳನ್ನು ಕಪ್ಪು ಬಿಳುಪು ತೈಲ ವರ್ಣಗಳಲ್ಲಿ ಬಿಡಿಸುತ್ತಾರೆ. ಒಣಗಿಸಿ ಗುರುವಾರದ ಸಂತೆಯಲ್ಲಿ ಬಿಕರಿಗೆ ಶಿಸ್ತಿನಲ್ಲಿ ಜೋಡಿಸುತ್ತಾರೆ.

ನಮ್ಮ ಸಂತೆಗಳಲ್ಲಿ ಬಣ್ಣಬಣ್ಣದ ಬಳೆ ಮಲಾರಗಳನ್ನು ಹಗ್ಗದಲ್ಲಿ ಜೋತು ಹಾಕುವಂತೆ, ಈ 'ಶೂ' ಗೊಂಚಲುಗಳನ್ನು ಇಳಿ ಬಿಟ್ಟಿರುತ್ತಾರೆ. ಅಂಗಡಿಗಳಲ್ಲಿ ಗೋಡೆಗಳಿಗೆ ಮೊಳೆ ಹೊಡೆದು ಸಾಲಾಗಿ ಸೂರಿನಿಂದ ನೆಲಕ್ಕೆ ಸಿಕ್ಕಿಸಿರುತ್ತಾರೆ. ಅಳತೆ ಮಾತ್ರ ಬೇರೆ ಬೇರೆ. ತಮ್ಮತಮ್ಮ ಕಾಲಿಗೆ ಅನುಗುಣವಾಗಿ ಸಂತೆಗೆ ಬಂದ ಜನ ಸಂತಸದಿಂದ 'ಶೂ' ಕೊಂಡು ಹೋಗುತ್ತಾರೆ. ಪ್ರವಾಸಿಗರೂ ಸಹ ನೆನಪಿನ ಕಾಣಿಕೆಯಾಗಿ ಕೊಳ್ಳುತ್ತಾರೆ.

ಮರದ ನೆಲದ ಮೇಲೆ ಈ ಶೂ ತೊಟ್ಟು ನಡೆದಾಡಿದರೆ ತೂಕಡಿಸುವವರೆಲ್ಲರೂ ಎದ್ದು ಕೂರುವುದರಲ್ಲಿ ಸಂಶಯವಿಲ್ಲ!

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ