Monday, August 18, 2025
Monday, August 18, 2025

ಕೈಬೀಸಿ ಕರೆಯುತ್ತಿವೆ ಜಲಸಾಂಗ್ವಿಯ ಶಿಲ್ಪಗಳು

ಕಲ್ಯಾಣ ಕರ್ನಾಟಕದಲ್ಲಿರುವ ಪ್ರಮುಖ ದೇವಾಲಯಗಳೆಂದರೆ ಕೊಪ್ಪಳ ಜಿಲ್ಲೆಯ ಇಟಗಿಯ ಮಹಾದೇವ ದೇವಾಲಯ, ಬಳ್ಳಾರಿ ಜಿಲ್ಲೆಯ ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯ ಹಾಗೂ ಬೀದರ್ ಜಿಲ್ಲೆಯ ಜಲಸಾಂಗ್ವಿಯ ಮಹಾದೇವ ದೇವಾಲಯ. ಅಲ್ಲದೇ ಯಾದಗಿರಿ ಜಿಲ್ಲೆಯ ಶಿರವಾಳ, ಕೊಪ್ಪಳ ಜಿಲ್ಲೆಯ ಕುಕನೂರು, ಹಾಗೂ ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿ ಕಲ್ಯಾಣಿ ಚಾಲುಕ್ಯರ ದೇವಾಲಯಗಳನ್ನು ಕಾಣಬಹುದು.

- ಸಂಜೀವ ಸಿರನೂರಕರ್, ಪ್ರವಾಸೋದ್ಯಮ ತಜ್ಞ, ಕಲಬುರಗಿ

ಕಲ್ಯಾಣ ಕರ್ನಾಟಕದ ಕಿರೀಟ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಪುಟ್ಟ ಗ್ರಾಮ ಜಲಸಾಂಗ್ವಿ ಅಥವಾ ಜಲಸಂಗಿ. ಊರಿನ ಹದಿಮೂರು ಕೆರೆಯ ಎದೆಯಲ್ಲಿ ಸಮಯದ ಸೋಪಾನಗಳನ್ನು ದಾಟಿದ ಒಂದು ಪ್ರಾಚೀನ ಶಿವ ದೇವಾಲಯವಿದೆ. ಅದುವೇ ಊರ ಮಧ್ಯೆ ಪ್ರಶಾಂತವಾಗಿ ನಿಂತಿರುವ ಮಹಾದೇವ ದೇವಾಲಯ. ಇದನ್ನು ಕಮಲೇಶ್ವರ ದೇವಾಲಯವೆಂದೂ ಸ್ಥಳೀಯರು ಕರೆಯುತ್ತಾರೆ. ಕಲ್ಯಾಣಿ ಚಾಲುಕ್ಯರ ಪ್ರಖ್ಯಾತ ಅರಸ ವಿಜಯಾದಿತ್ಯ ಅಥವಾ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯ ವೇಸರ ಶೈಲಿಯಲ್ಲಿದೆ. ಪ್ರಸ್ತುತ ಶಿಥಿಲಾವಸ್ಥೆಯಲ್ಲಿರುವ ಈ ದೇವಾಲಯದ ಹತ್ತಿರ ಹೋದರೆ ಇತಿಹಾಸ ನಮ್ಮ ಜೊತೆ ಮಾತನಾಡುತ್ತದೆ, ಅಲ್ಲಿನ ಶಿಲ್ಪಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ.

ಕಲ್ಯಾಣಿ ಚಾಲುಕ್ಯರ ಆಡಳಿತದ ಅವಧಿಯಲ್ಲಿ ನಿರ್ಮಾಣಗೊಂಡ ದೇವಾಲಯಗಳು ಅನನ್ಯ ವಾಸ್ತುಶಿಲ್ಪಕ್ಕೆ ನಿದರ್ಶನವಾಗಿವೆ. ಗದಗ, ಧಾರವಾಡ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಕಲ್ಯಾಣಿ ಚಾಲುಕ್ಯ ವಾಸ್ತುಶಿಲ್ಪದ ಹತ್ತಾರು ದೇವಾಲಯಗಳಿವೆ. ಕಲ್ಯಾಣ ಕರ್ನಾಟಕದಲ್ಲಿರುವ ಪ್ರಮುಖ ದೇವಾಲಯಗಳೆಂದರೆ ಕೊಪ್ಪಳ ಜಿಲ್ಲೆಯ ಇಟಗಿಯ ಮಹಾದೇವ ದೇವಾಲಯ, ಬಳ್ಳಾರಿ ಜಿಲ್ಲೆಯ ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯ ಹಾಗೂ ಬೀದರ್ ಜಿಲ್ಲೆಯ ಜಲಸಾಂಗ್ವಿಯ ಮಹಾದೇವ ದೇವಾಲಯ. ಅಲ್ಲದೇ ಯಾದಗಿರಿ ಜಿಲ್ಲೆಯ ಶಿರವಾಳ, ಕೊಪ್ಪಳ ಜಿಲ್ಲೆಯ ಕುಕನೂರು, ಹಾಗೂ ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿ ಕಲ್ಯಾಣಿ ಚಾಲುಕ್ಯರ ದೇವಾಲಯಗಳನ್ನು ಕಾಣಬಹುದು.

ಖ್ಯಾತ ವಿದ್ವಾಂಸ, ಸಂಸ್ಕೃತಿ ಚಿಂತಕ ಡಾ. ಎಚ್ ತಿಪ್ಪೇರುದ್ರಸ್ವಾಮಿಯವರು ತಮ್ಮ "ಕರ್ನಾಟಕ ಸಂಸ್ಕೃತಿ ಸಮೀಕ್ಷೆ" ಕೃತಿಯಲ್ಲಿ ಇಟಗಿಯ ಮಹಾದೇವ ದೇವಾಲಯವನ್ನು “ದೇವಾಲಯಗಳ ಚಕ್ರವರ್ತಿ” (Emperor among temples) ಎಂದು ಉಲ್ಲೇಖಿಸಿದ್ದಾರೆ. ಒಟ್ಟಾರೆ ಚಾಲುಕ್ಯರ ಶಿಲ್ಪಕಲೆಯನ್ನು ಭಾರತೀಯ ಶಿಲ್ಪಕಲಾ ತೊಟ್ಟಿಲು (The cradle of Indian Architecture) ಎಂದು ರಾಷ್ಟಕವಿ ಕುವೆಂಪು ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಹೇಳಿಕೆಗಳು ಕಲ್ಯಾಣಿ ಚಾಲುಕ್ಯ ಶಿಲ್ಪಕಲೆಯ ಮಹತ್ವವನ್ನು ಸಾರುತ್ತವೆ. ಕಲ್ಯಾಣಿ ಚಾಲುಕ್ಯರು ನಿರ್ಮಿಸಿದ ದೇವಾಲಯಗಳಲ್ಲಿನ ಶಿಲ್ಪಕಲಾ ಮಾದರಿ ಮುಂದೆ ಹೊಯ್ಸಳರಿಗೆ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರದಲ್ಲಿ ಸುಂದರ ದೇವಾಲಯಗಳನ್ನು ನಿರ್ಮಾಣ ಮಾಡಲು ಸ್ಫೂರ್ತಿ ನೀಡಿತು ಎಂದು ಹಲವು ತಜ್ಞರು ಅಭಿಪ್ರಾಯಪಡುತ್ತಾರೆ.

jalasangwi 1

ಜಲಸಾಂಗ್ವಿಯ ಮಹಾದೇವ ದೇವಾಲಯವು 12 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಮಂದಿರದ ಒಳಭಾಗ ಹಾಗೂ ಹೊರಭಾಗದಲ್ಲಿ ಸುಂದರವಾದ ಶಿಲ್ಪಗಳಿವೆ. ಹೊರಭಾಗದ ಪ್ರಮುಖ ಶಿಲ್ಪಗಳೆಂದರೆ ಶಾಲಭಂಜಿಕಾ ಹಾಗೂ ಮಂದಾಕಿನಿ ಶೈಲಿಯ ಶಿಲ್ಪಗಳು. ಈ ಶಿಲ್ಪಗಳು ವಿಭಿನ್ನ ವಸ್ತ್ರಧಾರಣೆಯಲ್ಲಿ, ವಿವಿಧ ಕೇಶಶೈಲಿಗಳಲ್ಲಿ ಹಾಗೂ ಕೆಲವೊಮ್ಮೆ ಕೈಯಲ್ಲಿ ಜೋಳದ ಧಾನ್ಯದ ಗೊಂಚಲನ್ನು ಹಿಡಿದಿರುವಂತೆ ಗೋಚರಿಸುತ್ತವೆ. ಮಂದಿರದ ಪ್ರಮುಖ ಆಕರ್ಷಣೆಯೆಂದರೆ ಶಾಸನ ಸುಂದರಿ (ಶಿಲಾಬಾಲಿಕೆ) ಎಂಬ ಶಿಲ್ಪ. ಈ ಪೌರಾಣಿಕ ಮಹಿಳೆಯು ಸಂಸ್ಕೃತ ಶಾಸನವನ್ನು ಕನ್ನಡ ಲಿಪಿಯಲ್ಲಿ ಬರೆಯುತ್ತಿರುವ ರೂಪದಲ್ಲಿ ಕಾಣುತ್ತಾಳೆ. ನೃತ್ಯಮುದ್ರೆಯಲ್ಲಿರುವ ಆಕೆ ಬರೆಯುತ್ತಿರುವ ಶಾಸನ ವಿಕ್ರಮಾದಿತ್ಯ ರಾಜನನ್ನು ಸ್ತುತಿಸುತ್ತದೆ. ಶಾಸನದ ಪಾಠ ಈ ರೀತಿಯಾಗಿದೆ; "ಸಪ್ತದ್ವೀಪೋದರೀ ಭೂತಂ ಭೂತಲಂ ಸ್ವೀಕರಿಷ್ಯತಿ ಚಾಲುಕ್ಯ ವಿಕ್ರಮಾದಿತ್ಯ ಸಪ್ತಮೋ ವಿಷ್ಣುವರ್ಧನಃ". ಇದರ ಅರ್ಥ, "ಚಾಲುಕ್ಯ ವಂಶದ ವಿಕ್ರಮಾದಿತ್ಯನು ಏಳು ದ್ವೀಪಗಳನ್ನು ಒಳಗೊಂಡ ಭೂಮಿಯನ್ನು ಗೆದ್ದು ಆಳುತ್ತಿದ್ದಾನೆ" ಎಂದಾಗಿದೆ.

ದೇವಾಲಯವು ಮೂರು ಭಾಗಗಳಲ್ಲಿ ನಿರ್ಮಾಣಗೊಂಡಿದ್ದು, ಎಂಟು ಕಂಬಗಳಿರುವ ನೃತ್ಯ ಕೋಣೆ, ಸುಂದರ ಕೆತ್ತನೆಗಳಿರುವ ನಂದಿ ಕೋಣೆ ಮತ್ತು ಈಶ್ವರ ಲಿಂಗವಿರುವ ಗರ್ಭಗೃಹವಿದೆ. ಗರ್ಭಗೃಹದ ಪ್ರವೇಶ ದ್ವಾರವನ್ನು ದ್ವಾರಪಾಲ ಹಾಗೂ ಯಾಲಿ ಶೈಲಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ದ್ವಾರದ ಮೇಲ್ಭಾಗದಲ್ಲಿ ಗಣಪತಿ ವಿಗ್ರಹವಿದೆ.

ನಿರ್ಲಕ್ಷಿತ ಸ್ಮಾರಕ:

ಇಷ್ಟೆಲ್ಲಾ ಮಹತ್ವವಿರುವ ಜಲಸಾಂಗ್ವಿಯ ದೇವಾಲಯವು ಇಂದು ಶಿಥಿಲಾವಸ್ಥೆಯಲ್ಲಿದೆ, ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಮಂದಿರದ ಗರ್ಭಗೃಹದಲ್ಲಿರುವ ಈಶ್ವರ ಲಿಂಗವು ಗ್ರಾಮಸ್ಥರಿಂದ ನಿತ್ಯಪೂಜೆಗೊಳ್ಳುತ್ತದೆ, ಅಲ್ಲದೆ ಈ ದೇವಾಲಯಕ್ಕೆ ಸಿಗಬೇಕಾದ ಪ್ರಚಾರ, ಮನ್ನಣೆ ಹಾಗೂ ಕಾಯಕಲ್ಪ ಸಿಕ್ಕಿಲ್ಲವೆಂದೇ ಹೇಳಬಹುದು. ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕವಾದ ಈ ದೇವಾಲಯವು ನಿರ್ಲಕ್ಷಕ್ಕೊಳಗಾಗಿದ್ದು ವಿಪರ್ಯಾಸವೇ ಸರಿ.

ಜೀರ್ಣೋದ್ಧಾರ ಕೆಲಸ:

ಭಾರತೀಯ ಪುರಾತತ್ವ ಇಲಾಖೆ (Archaeological Survey of India) ತನ್ನ Indian Archaeology 1991-92- A Review ಎಂಬ ವರದಿಯಲ್ಲಿ (1996 ರಲ್ಲಿ ಪ್ರಕಾಶಿತ) ಈ ದೇವಾಲಯದಲ್ಲಿ ನಡೆದ ಪುನಶ್ಚೇತನ ಕಾರ್ಯಗಳ ಬಗ್ಗೆ ವಿವರಿಸಿದೆ. ಇಲಾಖೆಯು ಪುನಃ 2003 ರಲ್ಲಿ ಪುನಶ್ಚೇತನ ಕಾರ್ಯ ಕೈಗೊಂಡಿತು. ಇತಿಹಾಸ ತಜ್ಞರ ಹಾಗೂ ಸ್ಥಳೀಯರ ಪ್ರಕಾರ ಇದುವರೆಗೆ ನಡೆದ ಪುನಶ್ಚೇತನ ಹಾಗೂ ಜೀರ್ಣೋದ್ಧಾರ ಕೆಲಸದಿಂದ ಪುರಾತನ ಕಟ್ಟಡಕ್ಕೆ ಹಾನಿಯಾಗಿದೆ ಹೊರತು ರಕ್ಷಣೆಯಾಗಿಲ್ಲ. ಆಧುನಿಕ ತಂತ್ರಜ್ಞಾನದ ಮಿಶ್ರಣದಿಂದ ದೇವಾಲಯದ ಪುರಾತನ ಲಕ್ಷಣ ಮರೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ. ಪ್ರಸ್ತುತ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯಿಂದ ಕಾಂಪೌಂಡ್ ಗೋಡೆಯ ಕಾಮಗಾರಿ ಪ್ರಗತಿಯಲ್ಲಿದೆ.

jalasanghwi 2

ಪ್ರವಾಸೋದ್ಯಮಕ್ಕೆ ಪುಷ್ಠಿ:

ಬೀದರ್ ಜಿಲ್ಲೆ ಈಗಾಗಲೇ ಒಂದು ಪ್ರಮುಖ ಪ್ರವಾಸೀ ತಾಣವಾಗಿ ಪ್ರಖ್ಯಾತಗೊಂಡಿದೆ. ಇತ್ತೀಚೆಗೆ ಬೀದರ್ ಕೋಟೆಯಲ್ಲಿ ನಿಯಮಿತವಾಗಿ ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತಿದ್ದು ಪ್ರಮುಖ ಚಲನಚಿತ್ರ ಪ್ರವಾಸೀ ತಾಣವಾಗಿ (Film Tourism Destination) ಬದಲಾಗಿದೆ. ಬೀದರ್ ನಗರದಿಂದ ಕೇವಲ 50 ಕಿ.ಮೀನಷ್ಟು ದೂರದಲ್ಲಿರುವ ಜಲಸಾಂಗ್ವಿ ಗ್ರಾಮಕ್ಕೆ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿಯಿದೆ. ಗ್ರಾಮದಲ್ಲಿ, ದೇವಸ್ಥಾನದ ಸಮೀಪ, ಪ್ರವಾಸಿಗರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಸಿಕೊಟ್ಟರೆ ಪ್ರವಾಸಿಗರ ಸಂಖ್ಯೆ ವೃದ್ಧಿಯಾಗುವುದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಪ್ರವಾಸೋದ್ಯಮ ಇಲಾಖೆಯೂ ಸಹ ಇದನ್ನು ಪರಿಗಣಿಸಿ, ಬೀದರ್, ಹುಮನಾಬಾದ್ ಹಾಗೂ ಬಸವಕಲ್ಯಾಣ ಈ ಮೂರು ತಾಣಗಳನ್ನು ಸೇರಿಸಿ ಪ್ರವಾಸೋದ್ಯಮ ಸರ್ಕ್ಯೂಟ್ ಆಗಿ ಪರಿವರ್ತಿಸಬಹುದು.

ಆರ್ಥಿಕ ಪ್ರಗತಿ, ಉದ್ಯೋಗಾವಕಾಶ:

ಪ್ರವಾಸೋದ್ಯಮ ವೃದ್ಧಿಯಾದರೆ ಸ್ಥಳೀಯ ಜನರಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ದೊರೆಯುತ್ತವೆ, ಹೊಟೇಲ್ ಉದ್ಯಮ ಪ್ರವರ್ಧಮಾನಕ್ಕೆ ಬರುತ್ತದೆ. ಸ್ಥಳೀಯ ಗೈಡ್‌ಗಳಿಗೆ ಹೆಚ್ಚಿನ ಅವಕಾಶ ಲಭ್ಯವಾಗುತ್ತದೆ, ಸಾರಿಗೆ- ಸಂಪರ್ಕ ಸರಾಗವಾಗುತ್ತದೆ, ಒಟ್ಟಾರೆ ಆರ್ಥಿಕ ಪ್ರಗತಿಗೆ ಕಾಯಕಲ್ಪ ನೀಡಿದಂತಾಗುತ್ತದೆ.

ಇತಿಹಾಸವನ್ನು ತಿಳಿಯುವ, ಸುಂದರ ವಾಸ್ತುಶಿಲ್ಪವನ್ನು ನೋಡಿ ಆನಂದಿಸುವ ಆಸಕ್ತರು ಜಲಸಾಂಗ್ವಿಯನ್ನು ನೋಡಲೇಬೇಕು, ಇದು ನಮ್ಮ ನಾಡಿನ ಹೆಮ್ಮೆಯ ಸ್ಮಾರಕ, ಸ್ವಾಭಿಮಾನದ ಪ್ರತೀಕ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ