ಮಂಡೋದರಿ ಹುಟ್ಟಿದ ಮಾಂಡೋರ್!
ಇಲ್ಲಿನ ವಿಶೇಷವೆಂದರೆ ರಾವಣನ ದೇವಾಲಯ. ಮಂಡೋದರಿಯ ಮೂಲ ಸ್ಥಳ ಎಂದು ನಂಬಲಾಗಿದ್ದು ಇಲ್ಲಿ ಅವಳನ್ನು ರಾವಣ ವರಿಸಿದ ಎನ್ನಲಾಗಿದ್ದು ಜನಮಾನಸದಲ್ಲಿ ಇನ್ನೂ ರಾವಣನನ್ನು ಅಳಿಯ ಎಂದೇ ನಂಬಲಾಗುತ್ತದೆ. ಸುಂದರವಾದ ಉದ್ಯಾನವನವಿದ್ದು ರಾತ್ರಿಯ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಕಲಾತ್ಮಕ ಸ್ಪರ್ಶ ನೀಡುತ್ತದೆ.
- ಶ್ರೀನಿವಾಸ ಮೂರ್ತಿ ಎನ್ ಎಸ್
ರಾಜಸ್ಥಾನದ ಎಂದರೆ ನೆನಪಾಗುವುದೇ ವೈಭವದ ಕೋಟೆಗಳು, ಭವ್ಯವಾದ ಅರಮನೆಗಳು. ಆದರೆ ವೈಭವದಿಂದ ಬದುಕಿದ ರಾಜರ ಮರಣದ ನಂತರವೂ ನಿರ್ಮಾಣವಾದ ಸ್ಮಾರಕಗಳಲ್ಲಿನ ಕಲ್ಲಿನ ಕೆತ್ತನೆಗಳು ತನ್ನದೇ ಆದ ಕಥೆಯ ಹೇಳಲು ಕಾದಿರುವಂತಿದೆ. ಅಂಥ ಸ್ಮಾರಕಗಳಲ್ಲಿ ಜೋಧಪುರದಲ್ಲಿನ ಮಾಂಡೋರಿನ ಸ್ಮಾರಕಗಳು ಪ್ರಮುಖವಾದವು. ಒಮ್ಮೆ ರಾಜರ ಸ್ಮಶಾನವಾಗಿದ್ದ ಇಲ್ಲಿನ ಸ್ಮಾರಕಗಳು ಈಗ ಉದ್ಯಾನವನವಾಗಿ ಗಮನ ಸೆಳೆಯುತ್ತಿದೆ.
ರಾಜಸ್ಥಾನ ಪ್ರವಾಸದಲ್ಲಿ ಹೆಚ್ಚಿನ ಭೇಟಿಯ ಸ್ಥಳಗಳಲ್ಲದೇ ಅಪರೂಪದ ಸ್ಥಳಗಳನ್ನು ಹುಡುಕಿದಾಗ ನಿಮಗೆ ಸಿಗಬಹುದಾದ ಸ್ಥಳಗಳೆಂದರೆ ಅದು ಜೋಧಪುರದಲ್ಲಿನ ಕೋಟೆ ಮತ್ತು ಅರಮನೆಯ ನಡುವೆ ಇರುವ ಮಾಂಡೋರ್. ಮಾಂಡೋರ್ ನಿಮಗೆ ಹೊಸ ಲೋಕವನ್ನೇ ಪರಿಚಯಿಸುತ್ತದೆ. ಇತಿಹಾಸ ನೋಡಿದಲ್ಲಿ ಜೋಧಪುರದಲ್ಲಿನ ಮಾಂಡೋರ್ ಸುಮಾರು ಆರನೇ ಶತಮಾನದಲ್ಲಿ ಮಾರ್ವಾರ್ ಅವರ ಮೊದಲ ರಾಜಧಾನಿಯಾಗಿತ್ತು. ನಂತರ ಕಾಲದಲ್ಲಿ ಜೋಧಪುರಕ್ಕೆ ಬದಲಾಯಿಸಿದರೂ ಇಲ್ಲಿನ ಕೋಟೆಗಳು ಅವಶೇಷಗಳು ಮೂಕ ಸಾಕ್ಷಿಯಾಗಿದೆ. ಗುರ್ಜಾರ್ ಮತ್ತು ಪ್ರತಿಹಾರದ ವಿಘಟನೆಯ ನಂತರವೂ ಪ್ರತಿಹಾರ ಇಲ್ಲಿ ಆಳ್ವಿಕೆ ಮುಂದುವರಿಸಿದ್ದರು.

1389ರಲ್ಲಿ ಮುಖ್ಯಸ್ಥರಾದ ರಾವ್ ಹೇಮಾ ಗೆಹ್ಲೋಟ್ ಪ್ರತಿಹಾರದ ರಾಜಕುಮಾರಿಯನ್ನು ವಿವಾಹವಾದರು. 1427 ರಲ್ಲಿ ರಾವ್ ರಣಮಲ್ ಇಲ್ಲಿನ ಅಧಿಕಾರ ಪಡೆದರು. 1433 ರಲ್ಲಿ ರಾವ್ ರಣಮಲ್ ರನ್ನು ಚಿತ್ತೂರಿನಲ್ಲಿ ಹತ್ಯೆ ಮಾಡಿ ರಾಣ ಮಂಡೋರನ್ನು ವಶಪಡಿಸಿಕೊಂಡ. ಆಗ ಅವರ ಮಗ್ ರಾವ್ ಜೋದ್ ತಪ್ಪಿಸಿಕೊಂಡು ಸುಮಾರು 15 ವರ್ಷಗಳ ನಂತರ ಮಾಂಡೋರನ್ನು ಪುನ: ತನ್ನ ವಶಕ್ಕೆ ಪಡೆದ. ಆದರೆ ಅವನಿಗೆ ಇಲ್ಲಿ ಪದೇ ಪದೇ ಕಾಡಿದ್ದು ರಕ್ತ ಸಿಕ್ತ ನೆನಪುಗಳು. ಹಾಗಾಗಿ ಸುಮಾರು 1459 ರಲ್ಲಿ ರಾವ್ ಜೋಧಾ ಜೊಧಪುರಕ್ಕೆ ರಾಜಧಾನಿಯನ್ನು ಸ್ಥಳಾಂತರಿಸಿದ ನಂತರ ಇದು ನೇಪಥ್ಯಕ್ಕೆ ಸರಿಯಿತು. ಸ್ಥಳ ಪುರಾಣದ ಪ್ರಕಾರ ಇಲ್ಲಿ ರಾಜ ರಾವಣ ಮಂಡೋದರಿಯನ್ನು ಮಾಂಡೋರಿನಲ್ಲಿ ವಿವಾಹವಾದ ಎನ್ನಲಾಗಿದೆ.
ಕೋಟೆಯ ಒಳಗೆ ನಿರ್ಮಾಣವಾಗಿದ್ದ ಹಲವು ದೇವಾಲಯಗಳು ನಂತರ ಕಾಲದಲ್ಲಿ ಪಾಳುಬಿದ್ದವು. ಇಲ್ಲಿ ಮಹಾರಾಜ ತಖ್ತ್ ಸಿಂಗ್ ವರೆಗೆ ಹಲವು ರಾಜರಿಗೆ ಮಂದಿರಗಳನ್ನು ನಿರ್ಮಾಣ ಮಾಡಲಾಗಿದ್ದು ಜಸ್ವಂತ್ ಸಿಂಗ್ ನಂತರ ಕಾಲದಲ್ಲಿ ಜಸ್ವಂತ್ ತಾಡಕ್ಕೆ ಬದಲಾವಣೆಗೊಂಡಿತು.
ಇಲ್ಲಿನ ಸ್ಮಾರಕಗಳ ಪೈಕಿ 1793 ರಲ್ಲಿ ನಿರ್ಮಾಣಗೊಂಡಿರುವ ಅಜಿತ್ ಸಿಂಗ್ ಸ್ಮಾರಕ ಅತ್ಯಂತ ಕಲಾತ್ಮಕವಾಗಿದೆ. ಅಲ್ಲಿನ ರಾಜರ ಸ್ಮಾರಕಗಳ ಜತೆಯಲ್ಲಿ ಅಲ್ಲಿನ ಆಡಳಿತಗಾರ ಛತ್ರಿ ಆಕಾರದ ಸ್ಮಾರಕಗಳು ಗಮನ ಸೆಳೆಯುತ್ತವೆ. ದೇವಾಲಯದ ಜತೆಯಲ್ಲಿ ಸ್ಮಾರಕಗಳು ಇದ್ದು ಕೆಂಪು ಮರಳುಗಲ್ಲಿನಲ್ಲಿ ನಿರ್ಮಾಣವಾಗಿದ್ದು ಕಲಾತ್ಮಕ ಕಂಬಗಳು ಹಾಗು ಶಿಖರವನ್ನು ಹೊಂದಿದೆ.

ಇದಲ್ಲದೇ ಸರ್ಕಾರದ ವಸ್ತು ಸಂಗ್ರಹಾಲಯವಿದೆ. ಇಲ್ಲಿನ ಹಾಲ್ ಆಫ್ ಹೀರೋಸ್ ನಲ್ಲಿನ ಒಂದೇ ಬಂಡೆಯಲ್ಲಿ 16 ಜಾನಪದ ವೀರರ ಕೆತ್ತನೆ ಸಂಸ್ಕೃತಿಯ ಅಭಿಮಾನಕ್ಕೆ ನಿದರ್ಶನ. ಪಕ್ಕದಲ್ಲಿಯೇ 33 ಕೋಟಿ ದೇವರುಗಳ ದೇವಾಲಯ ಎಂಬ ಸಭಾಂಗಣವಿದ್ದು ಹಲವು ದೇವರ ಕೆತ್ತನೆ ಇದೆ. ಇಲ್ಲಿನ ವರ್ಣ ಚಿತ್ರಗಳು ಗಮನ ಸೆಳೆಯುತ್ತದೆ. ಸಮೀಪದ ಬೆಟ್ಟದಲ್ಲಿ ಪಾಳು ಬಿದ್ದ ಮಾಂಡೋರ್ ನಗರ ಗತ ವೈಭವಕ್ಕೆ ಮೂಕ ಸಾಕ್ಷಿಯಾಗಿದ್ದು ಒಡಲಲ್ಲಿ ಹಲವು ಕಥೆಗಳ ಖಜಾನೆಯನ್ನೇ ಹೊತ್ತು ನಿಂತಿದೆ.
ಇಲ್ಲಿನ ವಿಶೇಷವೆಂದರೆ ರಾವಣನ ದೇವಾಲಯ. ಮಂಡೋದರಿಯ ಮೂಲ ಸ್ಥಳ ಎಂದು ನಂಬಲಾಗಿದ್ದು ಇಲ್ಲಿ ಅವಳನ್ನು ರಾವಣ ವರಿಸಿದ ಎನ್ನಲಾಗಿದ್ದು ಜನಮಾನಸದಲ್ಲಿ ಇನ್ನೂ ರಾವಣನನ್ನು ಅಳಿಯ ಎಂದೇ ನಂಬಲಾಗುತ್ತದೆ. ಸುಂದರವಾದ ಉದ್ಯಾನವನವಿದ್ದು ರಾತ್ರಿಯ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಕಲಾತ್ಮಕ ಸ್ಪರ್ಶ ನೀಡುತ್ತದೆ. ಉದ್ಯಾನವನ ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೆ ತೆರೆದಿದ್ದು, ಪ್ರವೇಶ ಶುಲ್ಕ ಅತ್ಯಂತ ಕಡಿಮೆಯಿದ್ದರೂ ಪ್ರವಾಸಿಗರ ಗಮನ ಸೆಳೆದಿಲ್ಲ.
ದಾರಿ ಯಾವುದಯ್ಯ
ಜೋಧಪುರದಿಂದ ಸುಮಾರು 10 ಕಿ ಮೀ ದೂರದಲ್ಲಿ ಮಾಂಡೋರ್ ಇದ್ದು ಸ್ವಂತ ವಾಹನವಿದ್ದಲ್ಲಿ ಸುಲಭವಾಗಿ ತಲುಪಬಹುದು. ಸ್ಥಳೀಯ ವಾಹನದಲ್ಲಿಯೂ ಹೋಗಬಹುದು. ಜೋಧಪುರಕ್ಕೆ ಎಲ್ಲಾ ಕಡೆಯಿಂದ ಸಂಪರ್ಕವಿದ್ದು ಇಲ್ಲಿನ ಪ್ರಸಿದ್ದ ಮೆಹ್ರಾನ್ ಘಡ್, ಉಮೈದ್ ಅರಮನೆ, ಜಸ್ವಂತ್ ಥಾಡ ನೋಡುವವರು ನೋಡಲೇ ಬೇಕಾದ ಸ್ಥಳ.