Saturday, March 21, 2026
Saturday, March 21, 2026

ಶಿರಸಂಗಿ ಕಾಳಿಕಾದೇವಿ ಜಾತ್ರೆ

ದುಷ್ಟ ಸಂಹಾರಕ್ಕಾಗಿ ಋಷಿಮುನಿಯ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷಳಾದ ಮಹಾಮಾತೆ. ರಾಕ್ಷಸರ ರುಂಡ ಚೆಂಡಾಡಿ ಶಿರಸಂಗಿ ಗ್ರಾಮದಲ್ಲಿ ನೆಲೆನಿಂತ ಮಹಾಕಾಳಿ. ವಿಶ್ವಕರ್ಮರ ಕುಲದೇವತೆ ಶಿರಸಂಗಿ ಕಾಳಿಕಾದೇವಿ ದೇವಸ್ಥಾನ ಪುರಾತನ ಐತಿಹಾಸಿಕ ಹಿನ್ನೆಲೆ ಹೊಂದಿದೆ.

-ಈರಣ್ಣಾ ಎಚ್. ಹುಲ್ಲೂರ, ಯರಗಟ್ಟಿ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿರುವ ಕಾಳಿಕಾದೇವಿ ದೇವಸ್ಥಾನ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಂದು. ಪ್ರತಿ ವರ್ಷ ಯುಗಾದಿ ಸಂದರ್ಭದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದೇವಿಗೆ ವಿಶೇಷ ಪೂಜೆ ನೆರವೇರಿಸಿ ದರ್ಶನ ಪಡೆಯುವುದು ವಾಡಿಕೆ. ಇತಿಹಾಸ ಪ್ರಸಿದ್ಧ ತಾಣವಾಗಿರುವ ಕಾಳಿಕಾದೇವಿ ಆಸ್ಥಾನ ಜಾಗೃತ ಕೇಂದ್ರವಾಗಿ ಪ್ರಸಿದ್ಧಿ ಪಡೆದುಕೊಂಡಿದೆ.

ಇದನ್ನೂ ಓದಿ: ಕಾಲಗರ್ಭದಲ್ಲಿ ಅಡಗಿಹೋಗಿದ್ದ ಐತಿಹಾಸಿಕ ದೇಗುಲ...!

ಪೌರಾಣಿಕ ಹಿನ್ನೆಲೆ

ಐತಿಹಾಸಿಕ ಹಿನ್ನೆಲೆ ಹೊಂದಿರುವ ಶಿರಸಂಗಿ ಕಾಳಿಕಾದೇವಿ ಆಸ್ಥಾನ ಶಕ್ತಿ ಕೇಂದ್ರವಾಗಿದೆ. ಶ್ರೀ ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖಿಸಿದಂತೆ ವಿಶ್ವಕರ್ಮ ವಂಶಜ ಕಾಶ್ಯಪ ಗೋತ್ರದ ವಿಭಾಂಡಕ ಮುನಿಯ ಮಗ ಸಾವರ್ಣಿಕ ಮನ್ವಂತರದ ಸಪ್ತ ಋಷಿಗಳಲ್ಲಿ ಓರ್ವರಾದ ಋಷ್ಯಶೃಂಗ ಮುನಿಗಳು ಲೋಕ‌ ಕಲ್ಯಾಣಕ್ಕಾಗಿ ಯಜ್ಞ ಯಾಗಾದಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ನಲುಂದಾಸುರ, ಬೆಟ್ಟಾಸುರ, ಎಟ್ಟಾಸುರ, ಹಿರಿಕುಂಬಾಸುರ, ಚಿಕ್ಕುಂಬಾಸುರ, ನರುಂದಾಸುರ ಎಂಬ ಆರು ರಾಕ್ಷಸರು ಮುನಿಯ ಯಜ್ಞಕ್ಕೆ ಅಡ್ಡಿಪಡಿಸುತ್ತಾರೆ.

New Project (32)

ಋಷ್ಯಶೃಂಗ ಮುನಿಗಳು ತಮ್ಮ ಯಜ್ಞಕ್ಕೆ ರಾಕ್ಷಸರು ತೊಂದರೆ ನೀಡುವ ವೇಳೆ ಕಾಳಿಕಾ ದೇವಿ ಮೊರೆ ಹೋದರು. ಈ ಸಂದರ್ಭದಲ್ಲಿ ಕಾಳಿಕಾದೇವಿ ಪ್ರತ್ಯಕ್ಷಳಾಗಿ ಆರು ಜನ ರಾಕ್ಷಸರನ್ನು ಸಂಹರಿಸುತ್ತಾಳೆ. ಆ ಅಸುರರು ಬೆಟ್ಟಗಳಾದರು ಎಂಬ ಪ್ರತೀತಿ ಇದೆ. ನಂತರ ಋಷಿಯ ಕೋರಿಕೆಯಂತೆ ದೇವಿ ಶಿರಸಂಗಿಯಲ್ಲಿ ನೆಲೆಸುತ್ತಾಳೆ.‌ ಪೌರಾಣಿಕ ದ್ಯೋತಕವಾಗಿ ದೇವಿಯು ದುಷ್ಟ ರಾಕ್ಷಸರನ್ನು ಸಂಹಾರ ಮಾಡುವಾಗ ಅವರ ರುಂಡಗಳನ್ನು ಚೆಂಡಾಡಿದ ಹಿನ್ನೆಲೆಯಲ್ಲಿ ಅನ್ನದ ಬುತ್ತಿಯ ಗೋಲಾಕಾರದ ಗುಂಡುಗಳನ್ನು ಮಾಡಿ ಹಾರಿಸುವುದು ದೇವಸ್ಥಾನದ ಈಗಿನ ಸಂಪ್ರದಾಯ.

ಇನ್ನು ಶ್ರೀಕ್ಷೇತ್ರಕ್ಕೆ ರಾಮಾಯಣದ ನಂಟು ಇದೆ.‌ ರಘುವಂಶದ ಚಕ್ರವರ್ತಿ ದಶರಥನು ಅನೇಕ ವರ್ಷಗಳ ಕಾಲ ಮಕ್ಕಳಾಗದಿದ್ದಾಗ ಯಜ್ಞಯಾಗಾದಿಗಳನ್ನು ಮಾಡುವ ಸಂದರ್ಭದಲ್ಲಿ ಋಷ್ಯಶೃಂಗ ಮುನಿಗಳನ್ನು ಆಹ್ವಾನಿಸಿ ಆ ಯಾಗಕ್ಕೆ ಅಗ್ನಿಹೋತ್ರಿಯಾಗಲು ಕೋರಿಕೆ ಸಲ್ಲಿಸುತ್ತಾನೆ.‌ ಇದರ ಕುರುಹಾಗಿ ಲಂಕಾಸುರನ ಸಂಹರಿಸಿ ಅಯೋಧ್ಯೆಯಿಂದ ರಾಮನು ಮರಳಿ ಬರುವಾಗ ಇಲ್ಲಿಗೆ ಆಗಮಿಸಿ ಕಾಳಿಕಾ ಮಾತೆಯನ್ನು ಪೂಜಿಸಿ ಋಷ್ಯಶೃಂಗ ಮುನಿಗಳ ಆಶೀರ್ವಾದ ಪಡೆದ ಬಗ್ಗೆ ಕೂಡ ಉಲ್ಲೇಖಗಳು ಪುರಾಣದಲ್ಲಿ ಬರುತ್ತವೆ.

ಕಾಳಿಕಾದೇವಿ ದೇವಾಲಯ ಆವರಣದಲ್ಲಿ ಹಬ್ಬೇಶ್ವರ ದೇವಾಲಯ, ಕಲ್ಮೇಶ್ವರ ದೇವಾಲಯ, ಭೈರವೇಶ್ವರ ದೇವಾಲಗಳಲ್ಲಿ ಕಂಡು ಬರುವ ಗಣೇಶ, ಷಣ್ಮುಖ, ಉಮಾಮಹೇಶ್ವರ, ಕಾಳಭೈರವ, ಚನ್ನಭೈರವ, ಸಪ್ತಮಾತೃಕೆಯರು, ಸೂರ್ಯ ನಾರಾಯಣ ಶಿಲ್ಪಗಳು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ವೈಭವಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಕಲ್ಮೇಶ್ವರ ದೇವಾಲಯ ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಮುಖಮಂಟಪ ಹೊಂದಿದ್ದು ಈ ದೇವಾಲಯದಲ್ಲಿ ಶಿವಲಿಂಗವಿದೆ.‌ ಭೀಮರತಿ ಹೊಂಡ, ಮೌನೇಶ್ವರ ದೇವಾಲಯ, ಖಡ್ಗತೀರ್ಥ, ರಾಮ, ಲಕ್ಷ್ಮಣರ ದೇವಾಲಯಗಳು ಕೂಡ ಇಲ್ಲಿನ ಪ್ರಮುಖ ಆಕರ್ಷಣೆ.

ಚೈತ್ರ ಶುದ್ಧ ಪ್ರತಿಪದೆಯಂದು ಹೊಸ ಗೋಧಿಯಿಂದ ಮಾಡಿದ ಪ್ರಸಾದ ಸಂತರ್ಪಣೆ ನಡೆಯುತ್ತದೆ. ಈ ಐದು ದಿನಗಳೂ ಈ ದೇವಾಲಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಡಗರದಿಂದ ಜರುಗುತ್ತವೆ. ಅಷ್ಟೇ ಅಲ್ಲದೆ ಯುಗಾದಿಯ ಪ್ರತಿಪದೆಯ ನಂತರ ಬರುವ ಐದೂ ಪಂಚಮಿ ತಿಥಿಗಳೂ ಕೂಡ ವಿಶೇಷ ದಿನಗಳಾಗಿವೆ. ಅದರಲ್ಲೂ ಐದನೆಯ ಪಂಚಮಿಯಂದು ಹೆಚ್ಚಿನ ಮಹತ್ವ.

New Project (33)

ದೇವಿಯು ಚೈತ್ರ ಶುದ್ಧ ಪ್ರತಿಪದೆಯಂದು ರಾಕ್ಷಸರ ಸಂಹಾರಕ್ಕೆ ಹೋದವಳು ಜೇಷ್ಠ ಶುದ್ಧ ಪಂಚಮಿ(ಐದನೆಯ ಪಂಚಮಿ)ಯಂದು ಮರಳಿ ದೇವಸ್ಥಾನಕ್ಕೆ ಬರುತ್ತಾಳೆ ಎಂಬುದು ವಾಡಿಕೆ.

ಈ ದೇವಾಲಯದಲ್ಲಿ ಶುಕ್ರವಾರ ಹಾಗೂ ಅಮಾವಾಸ್ಯೆಯಂದು ವಿಶೇಷ ಪೂಜೆ ಹಾಗೂ ನಿತ್ಯವೂ ಅನ್ನ ಸಂತರ್ಪಣೆ ಜರುಗುತ್ತಿದ್ದು, ಇಲ್ಲಿ ಅನ್ನಪೂರ್ಣೇಶ್ವರಿ ನಿಲಯ ಸಭಾಮಂಟಪಗಳು ದೇವಾಲಯ ಆವರಣದಲ್ಲಿವೆ. ಜತೆಗೆ ವಿಶ್ವಕರ್ಮ ಸಂದೇಶ ಎಂಬ ಪತ್ರಿಕೆ ಕೂಡ ಪ್ರಕಟವಾಗುತ್ತಿದೆ. ದೇವಾಲಯಕ್ಕೆ ಆಗಮಿಸುವ ಸದ್ಭಕ್ತರಿಗೆ ವಸತಿ ವ್ಯವಸ್ಥೆ ಕೂಡ ದೇವಾಲಯ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ(ರಿ) ಆಡಳಿತ ಮಂಡಳಿಯವರು ಒದಗಿಸುತ್ತಿದ್ದು ಈ ದೇವಾಲಯ ಆವರಣದಲ್ಲಿರುವ ಸಭಾಮಂಟಪದಲ್ಲಿ ವಿವಾಹಗಳು ಜರುಗುತ್ತವೆ. ಅಲ್ಲದೇ ಮಲ್ಲಕಂಬ, ಯೋಗ, ಸಂಗೀತ, ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.

ಶಾಸನಗಳಲ್ಲಿ ಉಲ್ಲೇಖ

ಕಲ್ಯಾಣ ಚಾಲುಕ್ಯರ ಆಡಳಿತ ಅವಧಿಯಲ್ಲಿ ಮೊದಲನೆಯ ಜಗದೇಕಮಲ್ಲ -2 ಹಾಗೂ ಎರಡನೆಯ ವೀರಸೋಮೇಶ್ವರ ಕಾಲದ ಶಾಸನಗಳು ಇಲ್ಲಿ ಲಭ್ಯವಾಗಿವೆ. ಕ್ರಿ.ಶ.1148 ರ ಶಾಸನದಲ್ಲಿ ʼಕುಂತಳದಲ್ಲಿ ಬರುವ ಚಿನ್ನ ಹೂ ಬೆಳುವಲʼ ಎಂದು ಹೇಳುವ ಮೂಲಕ 30 ಗ್ರಾಮಗಳಿಗೆ ಮುಖ್ಯ ಪಟ್ಟಣವೆನಿಸಿಹುದು ಋಷ್ಯಶೃಂಗಿಗ್ರಾಮ ಎಂದು ಹೇಳಿದೆ. ಇನ್ನೊಂದು ಶಾಸನ ಹೆಬ್ಬಯ್ಯನಾಯಕನಿಗೆ ಸಂಬಂಧಿಸಿದ ವಿವರಣೆ ಹೊಂದಿದೆ.

New Project (36)

ಕುಲದೇವತೆ ಮೂರ್ತಿ

ದೇವಾಲಯ ಗರ್ಭಗೃಹದಲ್ಲಿ ಕಂಡು ಬರುವ ದೇವಿ ಕಾಳಿಕಾಮಾತೆಯ ವಿಗ್ರಹವು 9 ಅಡಿ ಎತ್ತರವಿದ್ದು ಸ್ವರ್ಣ ರೇಖಾಂಕಿತ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತನೆ ಹೊಂದಿದೆ. ಬಲಗೈಯಲ್ಲಿ ಖಡ್ಗ, ತ್ರಿಶೂಲ,‌ ಬಾಕು. ಎಡಗೈಯಲ್ಲಿ ಡಮರು, ಸರ್ಪ, ಖೇಟಕ ಮತ್ತು ಪಾನ ಪಾತ್ರೆ ಹೊಂದಿದ್ದು ಆಕರ್ಷಕವಾಗಿದೆ. ಪೂಜಾ ಸಮಯದಲ್ಲಿ ದೇವಿ ತನ್ನದೇ ಆಭರಣಗಳ ಮೂಲಕ ಶೋಭಿಸುತ್ತಾಳೆ. ಪ್ರತಿ ವರ್ಷ ನಡೆಯುವ ಯುಗಾದಿಗೆ ದೇವಿಯ ಪಲ್ಲಕ್ಕಿ ಉತ್ಸವ ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಜಾತ್ರಾ ಮಹೋತ್ಸವ

ಪ್ರತಿವರ್ಷ ಚೈತ್ರಶುದ್ಧ ಪ್ರತಿಪದೆಯಿಂದ ಪಂಚಮಿಯವರೆಗೆ ಐದು ದಿನ ವಿಜೃಂಭಣೆಯಿಂದ ಕಾಳಿಕಾದೇವಿ ಜಾತ್ರಾ ಮಹೋತ್ಸವ ಜರುಗುತ್ತದೆ. ಯುಗಾದಿ ಅಮಾವಾಸ್ಯೆ ಪ್ರಾತಃಕಾಲ ಅಭಿಷೇಕದಿಂದ ಆರಂಭವಾಗುವ ಈ ಜಾತ್ರಾ ಮಹೋತ್ಸವವು ವಿಶ್ವಕರ್ಮರ ಧ್ವಜಾರೋಹಣ,‌ ಶ್ರೀ ಮಾತೆಗೆ ಹೊಸ ಗೋಧಿಯ ನಿಧಿ ಅರ್ಪಣೆ ಹಾಗೂ ಮರುದಿನ ಚೈತ್ರಶುದ್ಧ ಪ್ರತಿಪದಾ ಪ್ರಾತಃಕಾಲ 5 ಗಂಟೆಗೆ ಬುತ್ತಿ ಹಾರಿಸುವ ಕಾರ್ಯಕ್ರಮ ಒಂದು ಪೌರಾಣಿಕ ದ್ಯೋತಕವಾಗಿ ಜರುಗುತ್ತದೆ. ಅಂದರೆ ಶ್ರೀ ದೇವಿಯು ದುಷ್ಟ ರಾಕ್ಷಸರನ್ನು ಸಂಹಾರ ಮಾಡುವಾಗ ರುಂಡಗಳನ್ನು ಚೆಂಡಾಡಿದಳು ಎಂದು ಅನ್ನದ ಬುತ್ತಿಯ ಗೋಲಾಕಾರದ ಗುಂಡುಗಳನ್ನು ಮಾಡಿ ಹಾರಿಸುವುದು ಸಂಪ್ರದಾಯ.

ದಾರಿ ಹೇಗೆ?

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಕಾಳಿಕಾದೇವಿ ದೇವಸ್ಥಾನವಿದೆ. ಶಿರಸಂಗಿ ತಲುಪಲು ಬೆಳಗಾವಿಯಿಂದ ಸಾರಿಗೆ ವ್ಯವಸ್ಥೆ ಇದೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ 80 ಕಿಮೀ. ಅಂತರ ಇದ್ದು ಯರಗಟ್ಟಿ ಅಥವಾ ಬೈಲಹೊಂಗಲ ಮಾರ್ಗವಾಗಿ ಹೋಗಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ