Friday, March 20, 2026
Friday, March 20, 2026

ಕಾಲಗರ್ಭದಲ್ಲಿ ಅಡಗಿಹೋಗಿದ್ದ ಐತಿಹಾಸಿಕ ದೇಗುಲ...!

ನಮ್ಮ ನಾಡಿನ ಭವ್ಯ ಇತಿಹಾಸದ ಒಂದು ಭಾಗವಾಗಿದ್ದ ಈ ಪುಟ್ಟ ಊರು ಹಸಿರಿನ ಆಳದಲ್ಲಿ ಮರೆಯಾಗಿದ್ದು, ಕೆಲ ದಶಕದಿಂದೀಚೆಗಷ್ಟೇ ಬೆಳಕಿಗೆ ಬಂದಿರುವುದು ಒಂದು ವಿಸ್ಮಯವೇ ಸರಿ. ಈ ಪವಿತ್ರ ಸ್ಥಳವು, ಕಳೆದ ಕಾಲ ಘಟ್ಟದ ಮಹತ್ವವನ್ನು ಅರಿಯಲು ಮತ್ತು ಅಂದಿನ ಕಲಾನೈಪುಣ್ಯದ ಅದ್ಭುತವನ್ನು ಕಣ್ತುಂಬಿಕೊಳ್ಳಲು ಆಹ್ವಾನ ನೀಡುತ್ತದೆ.

  • ಹೊಸ್ಮನೆ ಮುತ್ತು

ದಟ್ಟ ಕಾನನವು ಸದಾ ನಿಗೂಢತೆಯ ಪರದೆಯನ್ನು ಹೊದ್ದು ನಿಂತಿರುತ್ತದೆ. ಸೂರ್ಯನ ಕಿರಣಗಳೂ ಕೂಡಾ ಹರಸಾಹಸ ಪಟ್ಟು ಇಳಿಯಬೇಕಾದ ಈ ಹಸಿರು ಗುಮ್ಮಟದಡಿಯಲ್ಲಿ, ಶತಮಾನಗಳಷ್ಟು ಹಳೆಯ ಇತಿಹಾಸ ಮತ್ತು ಪರಂಪರೆಯು ಅನಾದಿ ಕಾಲದಿಂದ ಕಲ್ಲಿನೊಳಗೆ ಹುದುಗಿ, ಹೊರಜಗತ್ತಿಗೆ ಕಾಣದಂತೆ ಉಳಿದಿತ್ತು. ಅಲ್ಲಿನ ಪ್ರತಿ ಶಿಲೆಯಲ್ಲಿ ಪೂರ್ವಜರ ಹೆಜ್ಜೆಗುರುತು, ಕಾಲದ ಆಳವಾದ ಉಸಿರು ಮತ್ತು ಮೌನ ಸೇರಿಕೊಂಡಿತ್ತು. ಕೇಳುವ ಕಿವಿಗೆ ಮಾತ್ರ ಇತಿಹಾಸದ ಕಥೆಗಳ ಗುನುಗು ಕೇಳಿಸಿ, ಆ ಮಹತ್ವದ ಸ್ಥಳ ಮತ್ತೆ ಜೀವ ತಳೆಯಿತು.

ಇದನ್ನೂ ಓದಿ: ರಾಯಲ್ ಫೊಟೋಗ್ರಫರ್‌ನ ರೋಚಕ ಜೀವನಗಾಥೆ

ಈ ಕ್ಷೇತ್ರವೇ ಹೊಸಗುಂದದ ಶ್ರೀ ಉಮಾ ಮಹೇಶ್ವರ (ಶಿವ ಮತ್ತು ಪಾರ್ವತಿಯರ) ದೇಗುಲ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕನಲ್ಲಿರುವ ಒಂದು ಐತಿಹಾಸಿಕ ಮತ್ತು ಪುನರ್ನಿರ್ಮಿತ ದೇವಾಲಯವಾಗಿದೆ. "ಈ ದೇವಾಲಯವು ಸುಮಾರು ಕ್ರಿ.ಶ. 9 ರಿಂದ 13ನೇ ಶತಮಾನದ ಅವಧಿಯಲ್ಲಿ ಈ ಪ್ರದೇಶವನ್ನು ಆಳಿದ ‘ಶಾಂತರ’ ಅರಸು ಮನೆತನದವರ ಕಾಲದ್ದು ಎಂದು ಹೇಳಲಾಗುತ್ತದೆ. ಇದು ಸುಮಾರು 1000 ರಿಂದ 1200 ವರ್ಷಗಳಷ್ಟು ಹಳೆಯದಾಗಿದೆ. " ಕಾಡಿನ ಹೃದಯ ಭಾಗದಲ್ಲಿ ದಟ್ಟ ಮರ-ಬಳ್ಳಿಗಳಿಂದ ಮುಚ್ಚಿಹೋಗಿದ್ದ ಈ ದೇಗುಲವು ಈಗ ಆಧ್ಯಾತ್ಮಿಕ ಆಸಕ್ತಿ ಉಳ್ಳವರಿಗೆ ಧಾರ್ಮಿಕ ಕ್ಷೇತ್ರ, ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳ, ಅಧ್ಯಯನಕಾರರಿಗೆ ಸಂಶೋಧನಾ ಕೇಂದ್ರ, ಪರಿಸರ ಪ್ರಿಯರು ಮತ್ತು ಶಾಂತಿ ಬಯಸುವವರಿಗೆ ನೆಮ್ಮದಿಯ ತಾಣ.

Untitled design (80)

ದಟ್ಟ ಕಾನನದ ಮಡಿಲಲ್ಲಿರುವ ಈ ದೇಗುಲ ಕೇವಲ ಒಂದು ಕಟ್ಟಡವಲ್ಲ; ಅದು ನಮ್ಮ ನಾಡಿನ ಭವ್ಯ ಸಂಸ್ಕೃತಿ ಮತ್ತು ವೈಭವದ ಮೆರುಗನ್ನು ಸಾರುವ ಜೀವಂತ ಸಾಕ್ಷಿಯಾಗಿದೆ. ಇಲ್ಲಿನ ದೇಗುಲಗಳ ಸಮುಚ್ಚಯ, ದೊರೆತ ಐತಿಹಾಸಿಕ ವೀರಗಲ್ಲುಗಳು, ಪ್ರಾಚೀನ ಕಾಲದ ಕಲಾಕೃತಿಗಳ ಅವಶೇಷಗಳು ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧವಾಗಿದ್ದ ಅಂದಿನ ಸಮಾಜದ ಬಗ್ಗೆ ಹೇಳುತ್ತವೆ. ನಮ್ಮ ನಾಡಿನ ಭವ್ಯ ಇತಿಹಾಸದ ಒಂದು ಭಾಗವಾಗಿದ್ದ ಈ ಪುಟ್ಟ ಊರು ಹಸಿರಿನ ಆಳದಲ್ಲಿ ಮರೆಯಾಗಿದ್ದು, ಕೆಲ ದಶಕದಿಂದೀಚೆಗಷ್ಟೇ ಬೆಳಕಿಗೆ ಬಂದಿರುವುದು ಒಂದು ವಿಸ್ಮಯವೇ ಸರಿ. ಈ ಪವಿತ್ರ ಸ್ಥಳವು, ಕಳೆದ ಕಾಲ ಘಟ್ಟದ ಮಹತ್ವವನ್ನು ಅರಿಯಲು ಮತ್ತು ಅಂದಿನ ಕಲಾನೈಪುಣ್ಯದ ಅದ್ಭುತವನ್ನು ಕಣ್ತುಂಬಿಕೊಳ್ಳಲು ಆಹ್ವಾನ ನೀಡುತ್ತದೆ. ಪ್ರಕೃತಿಯ ಮಡಿಲಲ್ಲಿ ಪುನೀತವಾಗಿರುವ ಆ ಸ್ಥಳಕ್ಕೆ ಕಾಲಿಟ್ಟರೆ, ಅದು ಮತ್ತೊಂದು ಲೋಕದ ಬಾಗಿಲು ತೆರೆಸಿದ ಅನುಭವ. ನಗರದ ಜಂಜಾಟದಿಂದ ಬಿಡುಗಡೆ ಬಯಸುವವರಿಗೆ ಮತ್ತು ಪ್ರಕೃತಿಯೊಂದಿಗೆ ಮಾತನಾಡಲು ಬಯಸುವವರಿಗೆ ಇದೊಂದು ಬೇರೆಯದೇ ಆದ ಲೋಕ.

ವಾಸ್ತುಶಿಲ್ಪ ಮತ್ತು ಕಲೆ

ಸುಮಾರು 600 ಎಕರೆಗಳಷ್ಟು ವಿಸ್ತಾರವಾದ ದಟ್ಟಾರಣ್ಯದಲ್ಲಿ ಈ ದೇವಾಲಯ ನಗರಿ ಹರಡಿಕೊಂಡಿದ್ದು, ಹೊಯ್ಸಳ, ಚಾಲುಕ್ಯ ಹಾಗೂ ಕೇರಳ ಶೈಲಿಯ ವಿಶಿಷ್ಟ ವಾಸ್ತುಶಿಲ್ಪವನ್ನು ಕಾಣಬಹುದು. ಪ್ರತಿ ಕಂಬ ಮತ್ತು ಗೋಡೆಯ ಮೇಲಿನ ಸೂಕ್ಷ್ಮ ಕೆತ್ತನೆಗಳು ಅಂದಿನ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿವೆ. ಇಲ್ಲಿ ಶುಭ್ರ ನೀರಿನ ಪುಷ್ಕರಣಿ ಮತ್ತು ವಿಶಿಷ್ಟ ವೀರಗಲ್ಲುಗಳ ಸಮೂಹವನ್ನು ವೀಕ್ಷಿಸಬಹುದು. ಉಮಾಮಹೇಶ್ವರ ದೇವಾಲಯವು ಮುಖಮಂಟಪ, ನವರಂಗ, ಗರ್ಭಗುಡಿ ಮತ್ತು ಪ್ರದಕ್ಷಿಣಾಪಥಗಳನ್ನು ಹೊಂದಿದೆ.

ಈ ದೇಗುಲದ ಹೊರ ಭಿತ್ತಿಯಲ್ಲಿ ಸಮುದ್ರ ಮಂಥನದ ಆಕರ್ಷಕ ಕೆತ್ತನೆಗಳಲ್ಲದೇ, ಅನೇಕ ಮಿಥುನ ಶಿಲ್ಪಗಳು, ಸಾಮಾಜಿಕ-ಪೌರಾಣಿಕ ಶಿಲ್ಪಗಳನ್ನು ಕಾಣಬಹುದಾಗಿದೆ. ಇಲ್ಲಿ ಶ್ರೀಲಕ್ಷ್ಮೀಗಣಪತಿ, ವೀರಭದ್ರ, ಸುಬ್ರಹ್ಮಣ್ಯ, ಕಂಚಿ ಕಾಳಮ್ಮ, ಶ್ರೀ ಪ್ರಸನ್ನ ನಾರಾಯಣ, ದುರ್ಗಾ ದೇಗುಲಗಳೂ ಇವೆ. ಕೇರಳ ಶೈಲಿಯಲ್ಲಿ, ಜಂಬಿಟ್ಟಿಗೆ (Laterite)ಕಲ್ಲು, ಕಾಷ್ಟ ಶಿಲ್ಪ ಮತ್ತು ಮಂಗಳೂರು ಹೆಂಚು ಹೊದಿಸಿ ನಿರ್ಮಿಸಿದ ಕಂಚಿಕಾಳಮ್ಮ ದೇವಸ್ಥಾನವು ಅತ್ಯಂತ ಆಕರ್ಷಕವಾಗಿದೆ. ಉಮಾಮಹೇಶ್ವರ ದೇವಸ್ಥಾನವು 1995ರವರೆಗೂ ಕಾಡಿನಲ್ಲಿ ಮರೆಯಾಗಿತ್ತು. ತೀವ್ರವಾಗಿ ಶಿಥಿಲಗೊಂಡು, ತಳಪಾಯವು ಮಣ್ಣಿನಲ್ಲಿ ಹೂತುಹೋಗಿತ್ತು ಮತ್ತು ದೇಗುಲವನ್ನು ಆವರಿಸಿ ಮರಗಳು ಬೆಳೆದಿದ್ದವು. ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್‌ನ ಕಾಳಜಿಯಿಂದಾಗಿ ದೇಗುಲಗಳ ಸಮುಚ್ಚಯ ಜೀರ್ಣೋದ್ಧಾರಗೊಂಡು, ತನ್ನ ಮೂಲಸ್ಥಿತಿಗೆ ಮರಳಿದೆ. ಇಲ್ಲಿರುವ ದೇವಾಲಯಗಳು, ಅಂದಿನ ಭವ್ಯ ಪರಂಪರೆಯ ಪ್ರತೀಕಗಳಾಗಿದ್ದು, ಪ್ರತಿಯೊಂದು ಶಿಲೆಯೂ ಮಾತನಾಡುತ್ತಾ, ತಮ್ಮ ಮೇಲೆ ಮೂಡಿರುವ ಉತ್ಕೃಷ್ಟ ಕಲ್ಲಿನ ಕೆತ್ತನೆಯ ಮೂಲಕ ಆ ಕಾಲದ ಅದ್ಭುತ ವಾಸ್ತುಶಿಲ್ಪ ಮತ್ತು ಕಲಾಪ್ರೌಢಿಮೆಯನ್ನು ನಮ್ಮ ಕಣ್ಮುಂದೆ ತೆರೆದಿಡುತ್ತದೆ.

Untitled design (82)

ಪಾರಂಪರಿಕ ಜೀವ ಪ್ರಭೇದದ ನೆಲೆ

ದೇಗುಲದ ಸಮೀಪದ ಕಾಡು ಅಮೂಲ್ಯ ವನ ಸಂಪತ್ತಿನ ಆಗರ. ಇಲ್ಲಿ ಮುಗಿಲೆತ್ತರ ಬೆಳೆದ ಬೃಹತ್‌ ಮರಗಳು, ವಿಶಿಷ್ಟ ಬಳ್ಳಿ, ಪೊದೆಗಳಿವೆ. ಈ ಕಾಡಿನಲ್ಲಿ 2000 ಬಗೆಯ ಔಷಧ ಸಸ್ಯಗಳನ್ನು, ಅಳಿವಿನಂಚಿನಲ್ಲಿರುವ 540 ಸಸ್ಯ ಜಾತಿಗಳನ್ನು ಗುರುತಿಸಿದ್ದಾರೆ. "ದೇವಾಲಯದ ಸಮೀಪ ಬೆಳೆದಿರುವ ಬೃಹತ್ ಬಳ್ಳಿಗಳು, ಮರಗಳು ದೇಗುಲಕ್ಕೊಂದು ಅಪೂರ್ವ ಮತ್ತು ರಹಸ್ಯಮಯ ನೋಟವನ್ನು ನೀಡಿವೆ."

ಸ್ಥಳ ಮಾಹಿತಿ:

ಹೊಸಗುಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ. ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಮಾರ್ಗದಲ್ಲಿದೆ. ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ, ಆನಂದಪುರಂನಿಂದ ಸಾಗರ ಕಡೆ 8 ಕಿ.ಮೀ. ಸಾಗಿ, ಎಡಕ್ಕೆ ತಿರುಗಿ ಮತ್ತೆ 3 ಕಿ.ಮೀ. ಕ್ರಮಿಸಿದರೆ ಈ ದೇಗುಲ ಸಿಗುತ್ತದೆ. ಇದು ಶಿವಮೊಗ್ಗ ಪಟ್ಟಣದಿಂದ ಸುಮಾರು 56 ಕಿಲೋಮೀಟರ್ ಮತ್ತು ಸಾಗರ ಪಟ್ಟಣದಿಂದ ಸುಮಾರು 16 ಕಿಲೋಮೀಟರ್ ದೂರದಲ್ಲಿದೆ. ಈ ಸ್ಥಳವು ಸಾಮಾನ್ಯವಾಗಿ ವಾರದ ದಿನಗಳಲ್ಲಿ ಹೆಚ್ಚು ಜನಸಂದಣಿಯಿಂದ ಕೂಡಿರುವುದಿಲ್ಲ, ಆದರೆ ವಾರಾಂತ್ಯದಲ್ಲಿ ಸ್ವಲ್ಪ ಮಟ್ಟಿಗೆ ಜನನಿಬಿಡವಾಗಿರುತ್ತದೆ.

Untitled design (83)

ಈ ಐತಿಹಾಸಿಕ ಸ್ಥಳದ ಸಮೀಪದಲ್ಲೇ ನೀವು ಭೇಟಿ ಕೊಡಬಹುದಾದ ಇನ್ನೂ ಅನೇಕ ಪ್ರಮುಖ ತಾಣಗಳಿವೆ. ಅವುಗಳಲ್ಲಿ ಮುಖ್ಯವಾದವು: ಹೊಂಬುಜ ಪದ್ಮಾವತಿ ದೇವಸ್ಥಾನ, ತಾವರೆಕೊಪ್ಪ ಹುಲಿ-ಸಿಂಹ ಧಾಮ, ಐತಿಹಾಸಿಕ ಚಂಪಕ ಸರಸು, ಸಕ್ರೆಬೈಲ್ ಆನೆ ಕ್ಯಾಂಪ್, ರಾಷ್ಟ್ರಕವಿ ಕುವೆಂಪು ಮನೆ ಮತ್ತು ವಸ್ತುಸಂಗ್ರಹಾಲಯ, ಜೋಗ ಫಾಲ್ಸ್, ಕೆಳದಿ, ಇಕ್ಕೇರಿ, ಕಲಸಿ, ವರದಾಮೂಲ, ವರದಹಳ್ಳಿ ಶ್ರೀಧರಾಶ್ರಮ, ಸಿಗಂದೂರು ಕ್ಷೇತ್ರ, ಗುಡವಿ ಪಕ್ಷಿಧಾಮ ಇನ್ನೂ ಮುಂತಾದವು.

ಉಮಾ-ಮಹೇಶ್ವರ ದೇಗುಲದ ಪ್ರಶಾಂತ ವಾತಾವರಣವು ಭಕ್ತರಿಗೆ ಮತ್ತು ಪ್ರವಾಸಿಗರ ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿದೆ. ಇತಿಹಾಸ ಮತ್ತು ಪ್ರಕೃತಿಯ ಸಮ್ಮಿಲನವನ್ನು ಕಣ್ತುಂಬಿಕೊಳ್ಳಲು ಬಯಸುವವರು, ಒಮ್ಮೆ ಈ ಅದ್ಭುತ ದೇವಾಲಯಕ್ಕೆ ಭೇಟಿ ನೀಡಿ. ಈ ದೇಗುಲವು ನಮ್ಮ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ನಿಧಿಯಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ