Tuesday, October 7, 2025
Tuesday, October 7, 2025

ಇಸ್ರೇಲಿನ ಹಿಸ್ಟರಿ ಹೇಳುವ ವೆಸ್ಟರ್ನ್ ವಾಲ್

ಈ ತಾಣದ ಮೇಲೆ ಪ್ರಭುತ್ವ ಸಾಧಿಸಲು ಈ ಮೂರೂ ಧರ್ಮೀಯರು ಎರಡು ಸಾವಿರ ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಿದ್ದಾರೆ. ಇದರಿಂದ ಈ ತಾಣ ಕೇವಲ ಧಾರ್ಮಿಕ ಮತ್ತು ಶ್ರದ್ಧಾ ಕೇಂದ್ರವಷ್ಟೇ ಅಲ್ಲ, ರಾಜಕೀಯ ಸಂಘರ್ಷಗಳ ಕೇಂದ್ರವಾಗಿರುವುದೂ ಸತ್ಯ. ಈ ತಾಣ ಪ್ರಾರ್ಥನೆಯನ್ನು ಕಂಡಂತೆ, ಘನಘೋರ ಹೊಡೆದಾಟ, ಯುದ್ಧ, ರಕ್ತಪಾತಗಳಿಗೂ ಪ್ರತ್ಯಕ್ಷದರ್ಶಿಯಾಗಿರುವುದು ವಿಪರ್ಯಾಸ.

ಇಸ್ರೇಲಿನ ರಾಜಧಾನಿ ಜೆರುಸಲೆಮ್ ನಗರದ ಮಧ್ಯಭಾಗದಲ್ಲಿರುವ, ಯಹೂದಿಯರ ಪವಿತ್ರ ಸ್ಥಳವಾದ 'ವೆಸ್ಟರ್ನ್ ವಾಲ್' ಗೂ, ನನಗೂ ಅವಿನಾಭಾವ ಸಂಬಂಧ. ನಾನು ಪ್ರತಿ ಸಲ ಇಸ್ರೇಲಿಗೆ ಹೋದಾಗಲೆಲ್ಲ ಅಲ್ಲಿಗೆ ಹೋಗಿದ್ದೇನೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮೊದಲ ಬಾರಿಗೆ 2017 ರ ಜುಲೈನಲ್ಲಿ ಇಸ್ರೇಲಿಗೆ ಭೇಟಿ ನೀಡಿದಾಗ, ದಿನವಿಡೀ ಬಿಡುವಿಲ್ಲದ ಕಾರ್ಯಕ್ರಮ ಹಾಗೂ ಆ ಕಾರ್ಯಕ್ರಮಗಳ ವರದಿ ಮಾಡಿ ಆಫೀಸಿಗೆ ಕಳಿಸುವ ತರಾತುರಿ. ಅದಾದ ಬಳಿಕ, ಜೆರುಸಲೆಮ್ ನಿಂದ ಟೆಲ್ ಅವಿವ್‌ಗೆ ಪಯಣ. ಅಲ್ಲಿಂದ ವಿಮಾನವೇರಿ ಬೆಂಗಳೂರಿಗೆ ಬರಬೇಕು. ಈ ಮಧ್ಯೆ ನನಗೆ ನಾಲ್ಕು ಗಂಟೆ ಸಮಯವಿತ್ತು. ನಾನು ಒಂದು ಟ್ಯಾಕ್ಸಿ ಮಾಡಿಕೊಂಡು ಪುನಃ ಜೆರುಸಲೆಮ್‌ಗೆ ಹೋಗಿ, ವೆಸ್ಟರ್ನ್ ವಾಲ್‌ಗೆ ಹಣೆಹಚ್ಚಿ ಪ್ರಾರ್ಥನೆ ಮಾಡಿ ಬಂದೆ. ನಾನು ಇಲ್ಲಿ ತನಕ ಇಸ್ರೇಲಿಗೆ ಹನ್ನೊಂದು ಬಾರಿ ಹೋಗಿದ್ದೇನೆ. ಅಷ್ಟೂ ಸಲ ಅಲ್ಲಿಗೆ ಹೋಗದೇ ಬಂದಿಲ್ಲ.

ಇಸ್ರೇಲಿಗೆ ಯಾರೇ ಹೋಗಲಿ, ಅವರು ವೆಸ್ಟರ್ನ್ ವಾಲ್‌ಗೆ ಹೋಗದೇ ಬರುವುದಿಲ್ಲ. ಅದು ಅಮೆರಿಕ ಅಧ್ಯಕ್ಷರಿರಬಹುದು, ಕ್ರಿಶ್ಚಿಯನ್ ಧರ್ಮಗುರು ಪೋಪ್ ಇರಬಹುದು, ಹಾಲಿವುಡ್ ನಟ-ನಟಿಯರಿರಬಹುದು...ವೆಸ್ಟರ್ನ್ ವಾಲ್‌ಗೆ ಭೇಟಿ ನೀಡದೇ ಅವರ ಇಸ್ರೇಲ್ ಪ್ರವಾಸ ಪೂರ್ತಿಯಾಗುವುದಿಲ್ಲ. ಹಾಗಂತ ಅದೇನು ಅದ್ಭುತ ಎನಿಸುವ ಸುಂದರ, ಮನಮೋಹಕ ಪ್ರೇಕ್ಷಣೀಯ ಸ್ಥಳವೇನೂ ಅಲ್ಲ. ಅಷ್ಟಕ್ಕೂ ಅದೊಂದು ದೊಡ್ಡ ಗೋಡೆ. ವಿಶ್ವದ ಅಚ್ಚರಿಗಳಲ್ಲಿ ಒಂದಾದ ಚೀನಾ ಗೋಡೆಯಂಥ ಬೃಹತ್, ರಮಣೀಯ ಗೋಡೆಯೂ ಅಲ್ಲ. ಆದರೂ ವೆಸ್ಟರ್ನ್ ವಾಲ್, ಎಲ್ಲ ಗೋಡೆಗಳಿಗಿಂತ ಪ್ರಮುಖವಾದುದು ಮತ್ತು ಪವಿತ್ರವಾದುದು. ಇದು ಯಹೂದಿಗಳಿಗೆ ಪರಮ ಪವಿತ್ರ ತಾಣವಾದರೂ, ವಿಶ್ವದೆಲ್ಲೆಡೆ ಅಧ್ಯಾತ್ಮ, ಸಂಘರ್ಷ ಮತ್ತು ಶಾಂತಿಯ ಸಂಕೇತವೆಂದೇ ಪರಿಗಣಿತವಾಗಿದೆ. ಈ ಪುರಾತನ ಕಲ್ಲಿನ ಗೋಡೆ, ಸಾವಿರಾರು ವರ್ಷಗಳ ಇತಿಹಾಸ, ತ್ಯಾಗ, ಬಲಿದಾನ, ಭಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ತನ್ನೊಡಲಿನಲ್ಲಿ ಹೊತ್ತುಕೊಂಡಿದೆ.

The Western Wall tells the history of Israel 1

ಗೋಡೆಯ ಒರಟಾದ ಕಲ್ಲುಗಳನ್ನು ಮುಟ್ಟುವ ಪ್ರತಿ ಕೈ, ಅದರ ಒಡಲಿನಲ್ಲಿ ಅಡಗಿರುವ ಪ್ರಾರ್ಥನೆಗಳಲ್ಲಿ ಕೂಡಿಕೊಂಡಿರುವ ಭಾವನೆಗಳ ಸಾಗರದಲ್ಲಿ ತೇಲಿಸಿದ ದಿವ್ಯ ಅನುಭವವನ್ನು ಮಾಡಿಸುತ್ತದೆ. ಅದರಲ್ಲೂ ವಿಶೇಷವಾಗಿ ವಿಶ್ವದೆಲ್ಲೆಡೆ ಇರುವ ಯಹೂದಿಯರಿಗೆ ಈ ತಾಣ ತಲತಲಾಂತರಗಳಿಂದ ದೈವಿಕತೆ, ಸಂಪ್ರದಾಯ ಮತ್ತು ಪರಂಪರೆಯೊಂದಿಗೆ ಸಂವಾದಿಸುವ ಆತ್ಮ ಸೇತುವಾಗಿದೆ. ಇದು ಜಗತ್ತಿನಲ್ಲಿಯೇ ಯಹೂದಿಯರ ಬಯಲು ಪೂಜಾಮಂದಿರ (ಓಪನ್ ಸಿನಗಾಗ್) ಎಂದು ಕರೆಯಿಸಿಕೊಂಡಿದೆ.

ಜೆರುಸಲೆಮ್‌ನಲ್ಲಿರುವ ವೆಸ್ಟರ್ನ್ ವಾಲ್ ಸುತ್ತ ಮುತ್ತಲ ಪ್ರದೇಶ ಅದರಲ್ಲೂ ವಿಶೇಷವಾಗಿ 'ಟೆಂಪಲ್ ಮೌಂಟ್',ವಿಶ್ವದ ಮೂರು (ಯಹೂದಿ, ಕ್ರಿಶ್ಚಿಯನ್ ಮತ್ತು ಮುಸ್ಲಿಂ) ಏಕದೇವತಾವಾದಿ ಧರ್ಮಗಳಿಗೆ, ಅದರಲ್ಲೂ ವಿಶೇಷವಾಗಿ ಯಹೂದಿ ಮತ್ತು ಇಸ್ಲಾಂ ಧರ್ಮಿಯರಿಗೆ ಪವಿತ್ರ ಸ್ಥಳ. ಹೀಗಾಗಿ ಜೆರುಸಲೆಮ್ ಇವರೆಲ್ಲರಿಗೂ Holy land. ಈ ತಾಣದ ಮೇಲೆ ಪ್ರಭುತ್ವ ಸಾಧಿಸಲು ಈ ಮೂರೂ ಧರ್ಮೀಯರು ಎರಡು ಸಾವಿರ ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಿರುವುದರಿಂದ ಈ ತಾಣ ಕೇವಲ ಧಾರ್ಮಿಕ ಮತ್ತು ಶ್ರದ್ಧಾ ಕೇಂದ್ರವಷ್ಟೇ ಅಲ್ಲ, ರಾಜಕೀಯ ಸಂಘರ್ಷಗಳ ಕೇಂದ್ರವಾಗಿರುವುದೂ ಸತ್ಯ. ಈ ತಾಣ ಪ್ರಾರ್ಥನೆಯನ್ನು ಕಂಡಂತೆ, ಘನಘೋರ ಹೊಡೆದಾಟ, ಯುದ್ಧ, ರಕ್ತಪಾತಗಳಿಗೂ ಪ್ರತ್ಯಕ್ಷದರ್ಶಿಯಾಗಿರುವುದು ವಿಪರ್ಯಾಸ.

ಇದು ಅಸಂಖ್ಯ ನಂಬಿಕೆಗಳ ಕಲ್ಲುಗಳಿಂದ ಕಟ್ಟಿದ ಗೋಡೆ. ಇದನ್ನು ಯಹೂದಿಗಳು 'ಪಾವನ ಪ್ರಾರ್ಥನೆಗಳ ಗೋಡೆ' ಎಂದು ಕರೆಯುತ್ತಾರೆ, ನಂಬುತ್ತಾರೆ. ಯಹೂದಿಯರು ಹೀಬ್ರೂ ಭಾಷೆಯಲ್ಲಿ ಕೊಟೆಲ್ (Kotel) ಎಂದು ಕರೆಯುತ್ತಾರೆ. ಈ ಗೋಡೆಗೆ ಹಣೆಹಚ್ಚಿ ತಮ್ಮ ಕಷ್ಟಗಳನ್ನು ತೋಡಿಕೊಂಡರೆ, ಮನಸಾರೆ ಪ್ರಾರ್ಥಿಸಿದರೆ, ಇದು ಅವುಗಳೆಲ್ಲವನ್ನೂ ಪರಿಹರಿಸಿ, ಕೇಳಿದ್ದನ್ನು ಕೊಡುತ್ತದೆ ಎಂದು ನಂಬುತ್ತಾರೆ. ಕೆಲವರು ಈ ಗೋಡೆ ಮುಂದೆ ಗೊಳೋ ಎಂದು ಅಳುತ್ತಾರೆ. ಇನ್ನು ಕೆಲವರು ಈ ಗೋಡೆ ಮುಂದೆ ಶರೀರ ಬಗ್ಗಿಸಿ ಅಂಬೋ ಎಂದು ಶರಣಾಗುತ್ತಾರೆ. ಇನ್ನು ಕೆಲವರಿಗೆ ಇದು ಬರೀ ಕಲ್ಲಿನ ಗೋಡೆಯಲ್ಲ, ಸಾಕ್ಷಾತ್ ಭಗವಂತ! ಸಹಸ್ರಾರು ವರ್ಷಗಳಿಂದ, ಈ ಗೋಡೆಯು ಅನೇಕ ಸಾಮ್ರಾಜ್ಯಗಳ ಪತನ ಮತ್ತು ಏಳಿಗೆಯನ್ನು ಕಂಡಿದೆ. ರಾಜರ ಅಟ್ಟಹಾಸ ಮತ್ತು ವಿನಾಶಕ್ಕೆ ಸಾಕ್ಷಿಯಾಗಿದೆ. ರೋಮನ್ನರಿಂದ ಹಿಡಿದು ಒಟ್ಟೋಮನ್ ಸಾಮ್ರಾಜ್ಯದವರೆಗೂ, ಈ ಗೋಡೆ ಕಷ್ಟ, ಸಂಕೋಲೆ, ಸಂಘರ್ಷ ಮತ್ತು ಹೋರಾಟಗಳ ಮಧ್ಯೆಯೂ ಅಚಲವಾಗಿ ನಿಂತಿದೆ. ಇದು ಯಹೂದಿಗಳ ಸಾಮರ್ಥ್ಯ, ಚೇತರಿಕೆ ಮತ್ತು ಸಹಿಷ್ಣುತೆಯ ದೃಢ ಸಂಕಲ್ಪವಾಗಿಯೂ ನಿಂತಿದೆ.

ಈ ಗೋಡೆ ಸಾಮಾನ್ಯ ಗೋಡೆಯಲ್ಲ. ಕ್ರಿ.ಪೂ 826 ರಲ್ಲಿ ರಾಜ ಸೊಲೊಮನ್ ಮೊದಲ ಪವಿತ್ರ ದೇವಾಲಯ(First Jewish Temple))ವನ್ನು ನಿರ್ಮಿಸಿದಾಗ, ಅದು ಯಹೂದಿ ರಾಷ್ಟ್ರದ ಹೃದಯವಾಗಬೇಕೆಂದು ಆತ ಬಯಸಿದ್ದ. ಜನರು ದೇವರೊಂದಿಗೆ ಮಾತನಾಡಲು ಪ್ರೇರಿತರಾಗುವ ಸ್ಥಳವಾಗಬೇಕು ಮತ್ತು ಯಾರೂ ಒಂಟಿತನವನ್ನು ಅನುಭವಿಸದ ಸ್ಥಳವಾಗಬೇಕು ಎಂದು ಬಯಸಿದ್ದ. ದೇವಾಲಯದ ಉದ್ಘಾಟನೆಯ ಸಮಯದಲ್ಲಿ ಆತ 'ದೇವರೇ, ಈ ಸ್ಥಳದಲ್ಲಿ ಹೇಳಲಾಗುವ ಪ್ರಾರ್ಥನೆಗಳನ್ನು ಗಮನವಿಟ್ಟು ಕೇಳು' ಎಂದು ಪ್ರಾರ್ಥಿಸಿಕೊಂಡಿದ್ದ. ಸೊಲೊಮನ್‌ನ ಪ್ರಾರ್ಥನೆಗಳಿಗೆ ದೇವರು ಸಕಾರಾತ್ಮಕವಾಗಿ ಸ್ಪಂದಿಸಿದ. ದೇವರ ಉಪಸ್ಥಿತಿಯು ದೇವಾಲಯವನ್ನು ಪಾವನಗೊಳಿಸಿ ಜೀವಂತಗೊಳಿಸಿತು. 'ಹೆರೋಡ್ ದಿ ಗ್ರೇಟ್'‌, ದ್ವಿತೀಯ ದೇವಾಲಯವನ್ನು ನಿರ್ಮಿಸಿದನು. ವೆಸ್ಟರ್ನ್ ವಾಲ್, ಟೆಂಪಲ್ ಮೌಂಟ್‌ನ ರಕ್ಷಣಾ ಗೋಡೆಯಾಗಿತ್ತು. ಕ್ರಿ.ಶ. 70ರಲ್ಲಿ ರೋಮನ್ನರು ಈ ದೇವಾಲಯವನ್ನು ನಾಶಪಡಿಸಿದರು, ಆದರೆ ಅವರಿಗೆ ಈ ಗೋಡೆಯನ್ನು ಕೆಡವಲು ಮತ್ತು ನಾಶಪಡಿಸಲು ಸಾಧ್ಯವಾಗದ್ದರಿಂದ ಅದು ಉಳಿದುಕೊಂಡಿತು. ಈ ಗೋಡೆಯಲ್ಲಿ ಭಗವಂತ ನೆಲೆಸಿರುವುದರಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು ಎಂದು ನಂಬಲಾಗಿದೆ.

ಕ್ರಿ.ಶ. 135ರ ಬಾರ್ ಕೊಖ್ಬಾ ದಂಗೆಯ ನಂತರ ಯಹೂದಿಗಳನ್ನು ಜೆರುಸಲೆಮ್‌ನಿಂದ ಹೊಡೆದೋಡಿಸಲಾಯಿತು. ಬೈಜಾಂಟೈನ್ ಕಾಲದಲ್ಲಿ (ಕ್ರಿ.ಶ. 324-638), ಯಹೂದಿಗಳು ವರ್ಷಕ್ಕೊಮ್ಮೆ ಮಾತ್ರ ಸ್ಥಳಕ್ಕೆ ಭೇಟಿ ನೀಡಬಹುದಿತ್ತು. ಮುಸ್ಲಿಂ ಆಳ್ವಿಕೆಯಲ್ಲಿ (ಕ್ರಿ.ಶ. 638-1517), ಯಹೂದಿಗಳು ಗೋಡೆಯ ಬಳಿ ಪ್ರಾರ್ಥನೆ ಮಾಡಲು ಅನುಮತಿ ಪಡೆದರು. ಒಟ್ಟೋಮನ್ ಸಾಮ್ರಾಜ್ಯದಲ್ಲಿ (1517-1917), ಸುಲೇಮನ್ ದಿ ಮ್ಯಾಗ್ನಿಫಿಸೆಂಟ್ ಯಹೂದಿಗಳಿಗೆ ಪ್ರಾರ್ಥನಾ ಹಕ್ಕನ್ನು ದಯಪಾಲಿಸಿದ. ಬ್ರಿಟಿಷರ ಕಾಲದಲ್ಲಿ (1917-1948), ಗೋಡೆಯ ಬಳಿ ಸತತ ಉದ್ವಿಗ್ನ ಪರಿಸ್ಥಿತಿ ನೆಲೆಯೂರಿತ್ತು. ವಿಶೇಷವಾಗಿ 1929ರ ದಂಗೆಯಲ್ಲಿ ವೆಸ್ಟರ್ನ್ ವಾಲ್ ಆವರಣದಲ್ಲಿ 133 ಯಹೂದಿಗಳು ಮತ್ತು 116 ಅರಬ್ಬರು ಮರಣಹೊಂದಿದರು.

1930ರಲ್ಲಿ ಯಹೂದಿಗಳಿಗೆ ಪುನಃ ಪ್ರಾರ್ಥನಾ ಹಕ್ಕನ್ನು ನೀಡಲಾಯಿತು. ಆದರೆ ಆವರಣದ ಮಾಲೀಕತ್ವವನ್ನು ಮುಸ್ಲಿಮರು ಉಳಿಸಿಕೊಂಡರು. 1948 ರಲ್ಲಿ ಇಸ್ರೇಲ್ ಸ್ವತಂತ್ರ ರಾಷ್ಟ್ರವಾಗಿ ಉದಯವಾದರೂ, ಅಂದಿನಿಂದ 1967 ರವರೆಗೆ ವೆಸ್ಟರ್ನ್ ವಾಲ್ ಇರುವ ಜಾಗವನ್ನು ಜೋರ್ಡಾನ್ ವಶಪಡಿಸಿಕೊಂಡಿತ್ತು. ಸುಮಾರು ಹತ್ತೊಂಬತ್ತು ವರ್ಷಗಳವರೆಗೆ ಯಹೂದಿಗಳಿಗೆ ಗೋಡೆಗೆ ಪ್ರವೇಶವನ್ನು ನಿರಾಕರಿಸಲಾಯಿತು. 1967ರಲ್ಲಿ ನಡೆದ 'ಆರು ದಿನಗಳ ಯುದ್ಧ'ದಲ್ಲಿ ಇಸ್ರೇಲ್ ಗೋಡೆಯನ್ನು ವಶಪಡಿಸಿಕೊಂಡಿತು. ಆ ವೇಳೆ ಗೋಡೆಗೆ ಹೊಂದಿಕೊಂಡಿದ್ದ ಮೊರೊಕ್ಕನ್ ಕ್ವಾರ್ಟರ್ ಅನ್ನು ಧ್ವಂಸಮಾಡಿ ಆ ಜಾಗದಲ್ಲಿ 'ವೆಸ್ಟರ್ನ್ ವಾಲ್ ಪ್ಲಾಜಾ' ನಿರ್ಮಿಸಿತು.

ವೆಸ್ಟರ್ನ್ ವಾಲ್‌ಗೆ ಅತಿ ಸನಿಹದಲ್ಲೇ ಇಸ್ಲಾಂ ಧರ್ಮದ ಮೂರನೇ ಅತ್ಯಂತ ಪವಿತ್ರ ಸ್ಥಳವಾದ ಅಲ್-ಅಕ್ಸಾ ಮಸೀದಿಯಿದೆ. ಮುಸ್ಲಿಮರು ಟೆಂಪಲ್ ಮೌಂಟ್‌ನ್ನು ಹರಾಮ್ ಅಲ್-ಷರೀಫ್ ಇಂದು ಕರೆಯುತ್ತಾರೆ. ಮುಸ್ಲಿಮರು ಈ ಗೋಡೆಯನ್ನು 'ಅಲ್-ಬುರಾಕ್ ಗೋಡೆ' ಎಂದು ಕರೆಯುತ್ತಾರೆ. ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ಪ್ರವಾದಿ ಮುಹಮ್ಮದ್ ಅವರು ತಮ್ಮ ರಾತ್ರಿ ಪ್ರಯಾಣದ ಸಮಯದಲ್ಲಿ ಮೆಕ್ಕಾದಿಂದ ಜೆರುಸಲೆಮ್‌ಗೆ ಬಂದಾಗ, ತಮ್ಮ ರೆಕ್ಕೆಗಳಿರುವ ಕುದುರೆಯಾದ ಅಲ್-ಬುರಾಕ್ ಅನ್ನು ಇದೇ ಗೋಡೆಗೆ ಕಟ್ಟಿ ಸ್ವರ್ಗಕ್ಕೆ ಹೋದರು ಎಂದು ನಂಬಲಾಗಿದೆ. ಹೀಗಾಗಿ, ಇದು ಮುಸ್ಲಿಮರಿಗೂ ಧಾರ್ಮಿಕವಾಗಿ ಮಹತ್ವದ ಸ್ಥಳವಾಗಿದೆ. ಯಹೂದಿಗಳಿಗೆ, ಇದು ಅವರ ಎರಡನೇ ದೇವಾಲಯ ಧ್ವಂಸವಾದ ಬಳಿಕ ಉಳಿದಿರುವ ಏಕೈಕ ಪವಿತ್ರ ತಾಣವಾಗಿದೆ.

ಹಲವು ಇತಿಹಾಸಕಾರರ ಪ್ರಕಾರ, ಈ ಮಸೀದಿಯನ್ನು ಉಮಯ್ಯದ್ ಖಲೀಫಾ ಅಬ್ದ್ ಅಲ್-ಮಲಿಕ್ ಸುಮಾರು 705ನೇ ಇಸವಿಯಲ್ಲಿ ನಿರ್ಮಿಸಿದ. ಈ ಸ್ಥಳವು ಯಹೂದಿ ಮತ್ತು ಕ್ರೈಸ್ತರಿಗೂ ಪವಿತ್ರವಾಗಿದೆ. ಇದು ಯಹೂದಿಯರ ಪ್ರಾಚೀನ ದೇವಾಲಯಗಳಿದ್ದ ಸ್ಥಳವಾಗಿದೆ. ಈ ಕಾರಣದಿಂದಾಗಿ, ಈ ಸ್ಥಳವು ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ಪ್ರಮುಖ ವಿವಾದದ ಕೇಂದ್ರಬಿಂದುವಾಗಿದೆ. ಅಲ್-ಅಕ್ಸಾ ಮಸೀದಿಯ ಸಂಕೀರ್ಣವು ಕೇವಲ ಮಸೀದಿಯ ಕಟ್ಟಡವಲ್ಲ, ಇದರಲ್ಲಿ ಡೋಮ್ ಆಫ್ ದಿ ರಾಕ್ (Dome of the Rock), ಮಿನಾರೆಟ್‌ಗಳು ಮತ್ತು ಹಲವಾರು ಇತರ ರಚನೆಗಳೂ ಸೇರಿವೆ. ಈ ಸ್ಥಳದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದಿಂದಾಗಿ ಇದು ಪ್ರಪಂಚದಾದ್ಯಂತ ಮುಸ್ಲಿಮರಿಗೆ ಅತ್ಯಂತ ಪ್ರಮುಖ ತೀರ್ಥಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ.

ವೆಸ್ಟರ್ನ್ ವಾಲ್‌ನಿಂದ ಸುಮಾರು ಅರ್ಧ ಕಿಮೀ ದೂರದಲ್ಲಿ ಏಸುಕ್ರಿಸ್ತನನ್ನು ಶಿಲುಬೆಗೇರಿಸಿ ನಂತರ ಸಮಾಧಿ ಮಾಡಲಾದ ಚರ್ಚ್ ಆಫ್ ದಿ ಹೋಲಿ ಸೆಫಲ್ಕರ್ (Church of the Holy Sepulchre) ಇದೆ. ಮೂರು ವರ್ಷಗಳ ಬಳಿಕ ಏಸು ಸಮಾಧಿಯಿಂದ ಪುನರುತ್ಥಾನಗೊಂಡಿದ್ದು ಇದೇ ಸ್ಥಳದಲ್ಲಿ ಎಂದು ಕ್ರಿಶ್ಚಿಯನ್ನರು ಬಲವಾಗಿ ನಂಬುತ್ತಾರೆ. ಈ ಕಾರಣಕ್ಕಾಗಿಯೇ ಇದು ಪ್ರಪಂಚದಾದ್ಯಂತ ಇರುವ ಕ್ರಿಶ್ಚಿಯನ್ನರಿಗೆ ಅತ್ಯಂತ ಮಹತ್ವದ ತೀರ್ಥಯಾತ್ರಾ ಕೇಂದ್ರವಾಗಿದೆ. ಹೀಗಾಗಿ ವೆಸ್ಟರ್ನ್ ವಾಲ್ ಸುತ್ತಮುತ್ತಲ ಪ್ರದೇಶ ಮೂರು ಧರ್ಮಗಳಲ್ಲಿ ನಂಬಿಕೆಯಿರುವವರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಇದರ ಒಡೆತನ, ಆಡಳಿತ, ಅತಿಕ್ರಮಣಕ್ಕೆ ಸಂಬಂಧಪಟ್ಟಂತೆ ಸಣ್ಣ-ಪುಟ್ಟ ವ್ಯತ್ಯಾಸವಾದರೂ ಮೂರು ಧರ್ಮೀಯರು ಕಿತ್ತಾಡಿಕೊಳ್ಳುತ್ತಾರೆ ಮತ್ತು ಅದು ದೊಡ್ಡ ಸಂಘರ್ಷಕ್ಕೆ ಕಾರಣವಾಗುತ್ತದೆ. ಈ ಮೂರು ಧರ್ಮಗಳಲ್ಲಿ ನಂಬಿಕೆಯಿರುವ ದೇಶಗಳು ಪರಸ್ಪರ ಒಟ್ಟಾಗಿ ಕಿತ್ತಾಡುತ್ತವೆ. ಇದು ಸಹಜವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ.

ವೆಸ್ಟರ್ನ್ ವಾಲ್‌ಗೆ ಭೇಟಿ ನೀಡುವವರು ಗೋಡೆಯ ಬಿರುಕುಗಳಲ್ಲಿ ಕಾಗದದ ಚೀಟಿಗಳನ್ನು ಇಡುವುದು ಒಂದು ಸಾಮಾನ್ಯ ಸಂಪ್ರದಾಯ. ಈ ಚೀಟಿಗಳಲ್ಲಿ ಜನ ತಮ್ಮ ಪ್ರಾರ್ಥನೆ, ಆಸೆ, ಕೋರಿಕೆ, ಬೇಡಿಕೆ ಮತ್ತು ದುಃಖಗಳನ್ನು ದೇವರಿಗೆ ನಿವೇದಿಸಿಕೊಳ್ಳುತ್ತಾರೆ. ಯಹೂದಿ ಸಂಪ್ರದಾಯದ ಪ್ರಕಾರ, ಈ ಗೋಡೆಯು ದೇವಾಲಯದ ಪವಿತ್ರ ಸ್ಥಳದ ಸಮೀಪವಿರುವುದರಿಂದ, ಇಲ್ಲಿ ಸಲ್ಲಿಸುವ ಪ್ರಾರ್ಥನೆಗಳು ನೇರವಾಗಿ ದೇವರಿಗೆ ತಲುಪುತ್ತವೆ ಎಂದು ನಂಬಲಾಗುತ್ತದೆ. ಜನರು ತಾವು ಬರೆದ ಚೀಟಿಯನ್ನು ಗೋಡೆಯ ಬಿರುಕಿನಲ್ಲಿ ಇಡುವುದರಿಂದ, ಅದು ತಮ್ಮ ಪ್ರಾರ್ಥನೆಯನ್ನು ದೇವರ ಬಳಿಗೆ ಕಳುಹಿಸುವ ಒಂದು ಮಾರ್ಗವೆಂದು ಭಾವಿಸುತ್ತಾರೆ.

The Western Wall tells the history of Israel

ಈ ಸಂಪ್ರದಾಯವು ಯಹೂದಿ ಧರ್ಮದ ಒಂದು ರಹಸ್ಯ ಪಂಥವಾದ 'ಕಬಾಲಾ'ದಿಂದ ಬಂದಿರಬಹುದು ಎಂದು ಕೆಲವರು ನಂಬುತ್ತಾರೆ. ಕಬಾಲಾದ ಪ್ರಕಾರ, ದೇವರಿಗೆ ಹತ್ತಿರವಿರುವ ಸ್ಥಳಗಳಲ್ಲಿ ಬರೆದ ಪದಗಳಿಗೆ ಹೆಚ್ಚಿನ ಶಕ್ತಿ ಇರುತ್ತದೆ. ಅನೇಕ ಜನರು ತಮ್ಮ ವೈಯಕ್ತಿಕ ನೋವು, ಆಸೆ ಅಥವಾ ಪ್ರಾರ್ಥನೆಗಳನ್ನು ಬರೆದು ಚೀಟಿಯನ್ನು ಗೋಡೆಯಲ್ಲಿ ಇಡುವುದರಿಂದ ಮಾನಸಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ನೆಮ್ಮದಿ ಪಡೆಯುತ್ತಾರೆ. ಇದು ಒಂದು ರೀತಿಯಲ್ಲಿ ತಮ್ಮ ಚಿಂತೆಗಳನ್ನು ದೇವರಿಗೆ ಅರ್ಪಿಸುವ ಸಂಕೇತವಾಗಿದೆ. ಗೋಡೆಯ ಬಿರುಕುಗಳಲ್ಲಿ ತುಂಬಿದ ಚೀಟಿಗಳನ್ನು ನಿಯಮಿತವಾಗಿ ತೆಗೆದುಹಾಕಲಾಗುತ್ತದೆ. ಈ ಚೀಟಿಗಳನ್ನು ಎಸೆಯಲಾಗುವುದಿಲ್ಲ, ಬದಲಾಗಿ ಅವುಗಳನ್ನು ಗೌರವಯುತವಾಗಿ ಸಂಗ್ರಹಿಸಿ, ಜೆರುಸಲೆಮ್‌ನ ಆಲಿವ್ ಪರ್ವತದ ಮೇಲಿರುವ ಸಮಾಧಿ ಸ್ಥಳದಲ್ಲಿ ದಫನ ಮಾಡಲಾಗುತ್ತದೆ. ಏಕೆಂದರೆ ಇವುಗಳಲ್ಲಿ ದೇವರ ಹೆಸರು ಮತ್ತು ಪವಿತ್ರ ಪ್ರಾರ್ಥನೆಗಳು ಇರುವುದರಿಂದ ಅವುಗಳನ್ನು ಕಸದಂತೆ ಪರಿಗಣಿಸುವುದಿಲ್ಲ.

ಜೆರುಸಲೆಮ್ ಮತ್ತು ವೆಸ್ಟರ್ನ್ ವಾಲ್ ಮೇಲೆ ಪ್ರಭುತ್ವವನ್ನು ಸಾಧಿಸಲು ಯಹೂದಿಯರು ಮತ್ತು ಮುಸ್ಲಿಮರು ಎರಡು ಸಾವಿರ ವರ್ಷಗಳಿಂದ ಹೋರಾಡುತ್ತಲೇ ಇದ್ದಾರೆ. ಅಂದು ಶುರುವಾದ ಯುದ್ಧ ಇವತ್ತಿನ ತನಕವೂ ನಡೆದುಕೊಂಡು ಬಂದಿದೆ. ಹೀಗಾಗಿ ವೆಸ್ಟರ್ನ್ ವಾಲ್ ಪ್ರದೇಶವನ್ನು ಜಗತ್ತಿನಲ್ಲಿಯೇ ಅತ್ಯಂತ ಆಯಕಟ್ಟಿನ, ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸುತ್ತಾರೆ. ಚರ್ಚ್ ಆಫ್ ದಿ ಹೋಲಿ ಸೆಫಲ್ಕರ್ ಈ ಪ್ರದೇಶದಿಂದ ಅರ್ಧ ಕಿಮೀ ದೂರದಲ್ಲಿರುವುದರಿಂದ ಕ್ರಿಶ್ಚಿಯನ್‌ರು ಈ ಸಂಘರ್ಷದಿಂದ ಹೊರಗುಳಿಯದಿದ್ದರೂ ನೇರಾನೇರ ಭಾಗವಹಿಸುತ್ತಿಲ್ಲ. ಹೀಗಾಗಿ ಯಹೂದಿಯರು ಮತ್ತು ಮುಸ್ಲಿಮರ ಮಧ್ಯೆ ಕಾದಾಟವಾದಾಗಲೆಲ್ಲ ಕ್ರಿಶ್ಚಿಯನ್‌ರು ದೊಡ್ಡಣ್ಣನ ಪಾತ್ರವಹಿಸುತ್ತಾರೆ. ಯಹೂದಿಯರು ಮತ್ತು ಮುಸ್ಲಿಮರ ಮಧ್ಯೆ ನಡೆದ ಎಲ್ಲ ಸಂಘರ್ಷಗಳ ಮೂಲಬೇರು, ವೆಸ್ಟರ್ನ್ ವಾಲ್ ಮತ್ತು ಆಲ್ ಅಕ್ಸಾ ಮಸೀದಿಯ ಆವರಣದ ಪ್ರಭುತ್ವ ಸಾಧಿಸುವ ಪೈಪೋಟಿಯ ಆಳಕ್ಕಿಳಿದಿರುವುದು ಇತಿಹಾಸದ ಕಠೋರ ಸತ್ಯ ಮತ್ತು ದುರಂತ ಕಥೆ.

ಅದೇನೇ ಇರಲಿ, ಕಲ್ಲುಗಳ ನಡುವೆ ಅಡಗಿದ ಕೋಟ್ಯಂತರ ಪ್ರಾರ್ಥನೆಗಳನ್ನು ಹೊತ್ತ ವೆಸ್ಟರ್ನ್ ವಾಲ್, ಹೃದಯದ ಭಾಷೆ ಮಾತನಾಡುವ ಕಲ್ಲಿನ ಗೋಡೆ. ಇಸ್ರೇಲ್‌ ಸಾಗಿಬಂದ ಮಾರ್ಗವನ್ನು ಪ್ರತಿಬಿಂಬಿಸುತ್ತಾ ಈ ಗೋಡೆ, ಇತಿಹಾಸಕ್ಕೆ ಕನ್ನಡಿಯಾಗಿದೆ. ಗೋಡೆ ಮತ್ತು ಜನರ ನಡುವಿನ ಭಾವನಾತ್ಮಕ ಸಂಪರ್ಕಕ್ಕೆ ಗೋಡೆ ಮೌನ ಮತ್ತು ಮಾತಿಗೆ ಸಾಕ್ಷಿಯಾಗಿದೆ.

Vishweshwar Bhat

Vishweshwar Bhat

Editor in Chief

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ