Friday, October 3, 2025
Friday, October 3, 2025

ದೇವರ ಹೆಸರಲ್ಲ, ರಾಕ್ಷಸರ ಹೆಸರಿವೆ ಈ ನಗರಗಳಿಗೆ..

ನೀವು ಎಂದಾದರೂ ನಗರಗಳ ಹೆಸರುಗಳ ಹಿಂದಿನ ಕಥೆಯನ್ನು, ಐತಿಹ್ಯವನ್ನು ತಿಳಿಯುವ ಪ್ರಯತ್ನ ಮಾಡಿದ್ದಾರಾ..? ಸಾಧಕರ ಹೆಸರು, ದೇವರ ಹೆಸರುಗಳನ್ನು ಸ್ಥಳಗಳಿಗೆ ಇಡುವುದನ್ನು ಕಂಡಿರಬಹುದು. ಆದರೆ ರಾಕ್ಷಸರ ಹೆಸರುಗಳನ್ನು ಇಟ್ಟಿರುವುದು ಎಂದಾದರೂ ಕೇಳಿದ್ದೀರಾ..?

ಭಾರತದ ಊರುಗಳು, ನಗರಗಳ ಹೆಸರನ್ನು ಕೇಳುವುದೇ ಚಂದ..ಒಂದೊಂದು ಹೆಸರಿನ ಹಿಂದೆಯೂ ಒಂದಷ್ಟು ಇತಿಹಾಸವಿರುತ್ತವೆ..ಯಾವುದನ್ನು ನಂಬೋದು, ಯಾವುದನ್ನು ಬಿಡೋದು ಎನ್ನುವಷ್ಟರ ಮಟ್ಟಿಗೆ ಗೊಂದಲ ಸೃಷ್ಟಿಯಾಗಿರುತ್ತವೆ.. ಆದರೆ ಕೆಲವು ಹೆಸರುಗಳನ್ನು ಕೇಳಿದರೆ ಯಾಕೆ ಹೀಗೆ ಎನ್ನುವಂತೆ ಪ್ರಶ್ನೆ ಹುಟ್ಟಿಕೊಳ್ಳುತ್ತವೆ..ಅಂದರೆ ಸಾಧಕರು, ರಾಜ್ಯವನ್ನಾಳಿದ ಅರಸರು, ದೇವರ ಹೆಸರುಗಳನ್ನು ಊರುಗಳು ಹೊಂದಿರುವುದು ಸಾಮಾನ್ಯ ವಿಚಾರವೆನ್ನಿಸುತ್ತದೆ. ಆದರೆ ರಾಕ್ಷಸರ ಹೆಸರನ್ನೂ ಸ್ಥಳಗಳಿಗೆ ಇಟ್ಟಿದ್ದಾರೆ ಎಂದರೆ ನಂಬಲೇ ಬೇಕು..ಆ ನಗರಗಳ ಪಟ್ಟಿ ನಿಮ್ಮ ಓದಿಗಾಗಿ..

ಮೈಸೂರು:

ಕರ್ನಾಟಕದಲ್ಲಿ ಅರಮನೆ ನಗರಿ, ಸಾಂಸ್ಕೃತಿಕ ರಾಜಧಾನಿ ಎಂಬೆಲ್ಲಾ ಹೆಸರುಗಳಿಗೆ ಪಾತ್ರವಾಗಿರುವ ʻಮೈಸೂರುʼ, ವಿಶೇಷವಾದ ಹಿನ್ನೆಲೆಯನ್ನು ಹೊಂದಿದೆ. ಅದರಲ್ಲೂ ಮೈಸೂರು ಎಂಬ ಹೆಸರು ಬರಲು ಕಾರಣವೇನು ಎಂಬುದನ್ನು ತಿಳಿದರೆ ಬೆರಗಾಗಿ ಬಿಡುತ್ತೀರಿ. ಹೌದು, ಮೈಸೂರು ನಗರಕ್ಕೆ ಮಹಿಷಾಸುರ ಎಂಬ ರಾಕ್ಷಸನ ಹೆಸರಿಡಲಾಗಿದೆ. ಸನಾತನ ಧರ್ಮದ ಪ್ರಕಾರ, ಮಹಿಷಾಸುರನ ಕಾಲದಲ್ಲಿ ಈ ನಗರವನ್ನು ಮಹಿಷ ಊರು ಎಂದು ಕರೆಯಲಾಗುತ್ತಿತ್ತು. ನಂತರ ಇದನ್ನು ಮಹಿಷೂರು ಎಂದು ಕರೆಯಲಾಯಿತು. ಆದರೆ ಕಾಲ ಬದಲಾದಂತೆ, ಅದರ ಹೆಸರನ್ನು ಮತ್ತೆ ಮೈಸೂರು ಎಂದು ಬದಲಾಯಿಸಲಾಯಿತು ಎಂಬ ಐತಿಹ್ಯವಿದೆ.

mysore

ಜಲಂಧರ್:

ಭಾರತದ ಪಂಜಾಬ್‌ ನ ಪ್ರಮುಖ ನಗರಗಳಲ್ಲಿ ಒಂದು ಜಲಂಧರ್.‌ ಸೋಡಾಲ್ ಮಂದಿರ, ಇಮಾಮ್ ನಾಸಿರ್ ಮಸೀದಿ, ಸೇಂಟ್ ಮೇರಿ ಕ್ಯಾಥೆಡ್ರಲ್, ದೇವಿ ತಲಾಬ್ ಮಂದಿರ ಮತ್ತು ತುಳಸಿ ಮಂದಿರ ಹೀಗೆ ಅನೇಕ ಪ್ರವಾಸಿ ತಾಣಗಳಿಗೆ ಹೆಸರು ಮಾಡಿರುವ ಜಲಂಧರ್‌ ಹೆಸರು ಹುಟ್ಟಿಕೊಂಡಿದ್ದು ಮಾತ್ರ ರಾಕ್ಷನನ ಹೆಸರಿನ ಮೂಲಕ. ಮಹಾಭಾರತದಲ್ಲಿ ಉಲ್ಲೇಖಿಸಲಾದ ರಾಕ್ಷಸ ರಾಜ ಜಲಂಧರನು ಆ ಸಮಯದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದು, ಎಲ್ಲರೂ ಅವನಿಗೆ ಹೆದರುತ್ತಿದ್ದರು. ಕೆಲವರು ಅವನ ಹತ್ತಿರ ಹೋಗಲು ಸಹ ಹಿಂಜರಿಯುತ್ತಿದ್ದರು. ಹೀಗಾಗಿ, ಅವನ ಭಯದಿಂದಾಗಿ ಈ ಸ್ಥಳಕ್ಕೆ ಜಲಂಧರ್ ಎಂದು ಹೆಸರಿಸಲಾಯಿತೆಂಬುದು ಇತಿಹಾಸಕಾರರ ನಂಬಿಕೆ.

ಗಯಾ:

ಬಿಹಾರದ ರಾಜಧಾನಿ ಪಾಟ್ನಾದಿಂದ 100 ಕಿ.ಮೀ. ದಕ್ಷಿಣದಲ್ಲಿ ಫಲ್ಗೂ ನದಿಯ ತೀರದಲ್ಲಿರುವ ಒಂದು ನಗರ ಗಯಾ. ಗಯಾ ಕ್ಷೇತ್ರವು ಹಿಂದೂ ಮತ್ತು ಬೌದ್ಧಧರ್ಮಗಳೆರಡರಲ್ಲೂ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ. ಈ ಸ್ಥಳವನ್ನು ನೋಡಲು ದೇಶ ವಿದೇಶಗಳಿಂದಲೂ ಭೇಟಿ ನೀಡುತ್ತಾರೆ. ಆದರೆ ಈ ನಗರಕ್ಕೆ ಗಯಾಸುರ ರಾಕ್ಷಸನ ಹೆಸರಿಡಲಾಗಿದೆ ಎಂಬ ವಿಚಾರ ನಿಮಗೆ ಗೊತ್ತೇ ?

ಒಮ್ಮೆ ಬ್ರಹ್ಮನು ಗಯಾಸುರನ ತಪಸ್ಸಿನಿಂದ ಸಂತಸಗೊಂಡು, ಅವನು ದೇವತೆಗಳಿಗಿಂತ ಹೆಚ್ಚು ಪರಿಶುದ್ಧನಾಗುತ್ತಾನೆ ಮತ್ತು ಅವನನ್ನು ಯಾರು ನೋಡುತ್ತಾರೋ ಅಥವಾ ಮುಟ್ಟುತ್ತಾರೋ ಅವರ ಎಲ್ಲಾ ಪಾಪಗಳು ತೊಳೆಯಲ್ಪಡುತ್ತವೆ ಎಂದು ಆಶೀರ್ವದಿಸಿದನು. ಅಂದಿನಿಂದ ಈ ನಗರವು ಗಯಾ ಎಂದು ಪ್ರಸಿದ್ಧವಾಯಿತು.

ತಿರುಚಿರಾಪಳ್ಳಿ:

ತಮಿಳುನಾಡು ರಾಜ್ಯದಲ್ಲಿರುವ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ಹಳೆಯ ಜನವಸತಿ ನಗರಗಳಲ್ಲಿ ಪ್ರಮುಖವಾದುದು ತಿರುಚಿರಾಪಳ್ಳಿ. ಆದರೆ ಈ ಹೆಸರಿನ ಹಿಂದಿರುವುದು ರಾಕ್ಷನ ಹೆಸರು ಎಂಬ ವಿಚಾರ ನಿಮಗೆ ಗೊತ್ತಾ? ತ್ರಿಶಿರ ಎಂಬ ಮೂರು ತಲೆಯ ರಾಕ್ಷಸನು ಇಲ್ಲಿನ ಶಿವ ದೇಗುಲದಲ್ಲಿ ತಪಸ್ಸು ಮಾಡಿ ವರ ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಈ ಪಟ್ಟಣಕ್ಕೆ ರಾಕ್ಷಸನ ಹೆಸರಿಡಲಾಗಿದೆ ಎಂಬ ಐತಿಹ್ಯವಿದೆ. ಕಾಲ ಬದಲಾದಂತೆ ನಗರದ ಹೆಸರೂ ಬದಲಾಗಿ, ರಿಸಿಕ್ಕರಪುರಂ, ನಂತರ ಇದನ್ನು ತ್ರಿಸ್ಸಿಪುರಂ ಎಂದು ಕರೆಯಲಾಗುತ್ತಿತ್ತು. ಆದರೆ ನಂತರ ಅದನ್ನು ತಿದ್ದುಪಡಿ ಮಾಡಿ ತಿರುಚಿರಾಪಳ್ಳಿ ಎಂಬ ಹೆಸರನ್ನು ಇಡಲಾಗಿದೆ.

istockphoto-176840803-612x612

ಪಲ್ವಾಲ್:

ಹರಿಯಾಣದ ಪಲ್ವಾಲ್ ಜಿಲ್ಲೆಯ ಹೆಸರು ಹುಟ್ಟಿಕೊಂಡಿರುವುದೂ ಸಹ ಒಬ್ಬ ರಾಕ್ಷಸನ ಹೆಸರಿನಿಂದಾಗಿ. ಹೌದು, ಸ್ಥಳೀಯ ದಂತಕಥೆ ಹೇಳುವ ಪ್ರಕಾರ, ಪಾಂಡವರ ಆಳ್ವಿಕೆಯಲ್ಲಿ ಈ ಪ್ರದೇಶವನ್ನು "ಪಲ್ವಾಸುರ" ಎಂಬ ರಾಕ್ಷಸ ಆಳಿದ್ದು, ಪಲ್ವಾಸುರನನ್ನು ಶ್ರೀಕೃಷ್ಣನ ಅಣ್ಣ ಬಲರಾಮ ಕೊಂದನು. ಈ ಘಟನೆಯ ಸ್ಮರಣಾರ್ಥವಾಗಿ, ಪಲ್ವಾಸುರನಲ್ಲಿ "ಬಲದೇವ್ ಛತ್ ಕಾ ಮೇಳ" ಎಂಬ ವಾರ್ಷಿಕ ಉತ್ಸವವನ್ನು ನಡೆಸಲಾಗುತ್ತದೆ ಮತ್ತು ಬಲರಾಮನಿಗೆ ಸಮರ್ಪಿತವಾದ ದೇವಾಲಯವು ಹತ್ತಿರದಲ್ಲಿದೆ.

ಒಟ್ಟಿನಲ್ಲಿ ನಗರಗಳ ಹೆಸರು ಹುಟ್ಟಿಕೊಳ್ಳುವುದು ಬರಿಯ ಸಾಧಕರು ಮಾಡಿದ ಸಾಧನೆಯ ಫಲವಾಗಿಯೋ ಇಲ್ಲವೇ ದೇವರ ಹೆಸರುಗಳಿಂದಾಗಿಯೋ ಅಲ್ಲ..ರಾಕ್ಷಸರ ಹೆಸರಿನಿಂದಲೂ ಊರಿಗೆ ಅವರ ಹೆರಸನ್ನು ಇಡುವ ರೂಢಿ ಹಿಂದಿನ ಕಾಲದಲ್ಲಿತ್ತು ಎಂದರೆ ನಂಬಲೇ ಬೇಕು..

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ