ಐಕಾನಿಕ್ ಪ್ರತಿಮೆ: ಕರ್ನಾಟಕ ಪ್ರವಾಸೋದ್ಯಮದ ಹೊಸ ಅವಶ್ಯಕತೆ
ಕಿತ್ತೂರು ಚೆನ್ನಮ್ಮ, ಬಸವಣ್ಣ, ಕೃಷ್ಣದೇವರಾಯ, ರಾಯಣ್ಣ, ರಾಣಿ ಅಬ್ಬಕ್ಕ, ಕನ್ನಡ ಕವಿಗಳು, ವಿಶ್ವಶ್ರೇಷ್ಠ ವಿಜ್ಞಾನಿಗಳು, ಪುರಾಣಪ್ರಸಿದ್ಧರು ಹೀಗೆ ನೂರಾರು ಮೇರು ವ್ಯಕ್ತಿತ್ವಗಳ ನೆಲೆಬೀಡು ಕರ್ನಾಟಕ. ಕರ್ನಾಟಕಕ್ಕೆ ಸೀಮಿತಗೊಳಿಸಿಕೊಳ್ಳಬೇಕು ಎಂಬ ಕಟ್ಟುಪಾಡೂ ಇಲ್ಲ. ದೇಶದ ಬೆಸ್ಟ್ ವ್ಯಕ್ತಿಗಳ ಪ್ರತಿಮೆಯೂ ಕರ್ನಾಟಕದಲ್ಲಿ ನಿರ್ಮಾಣವಾಗಬಹುದು. ಇದು ಪ್ರವಾಸೋದ್ಯಮಕ್ಕೆ ಅತಿ ದೊಡ್ಡ ಹಿರಿಮೆ ಮತ್ತು ಲಾಭ ತಂದುಕೊಡಬಲ್ಲ ಸಂಗತಿ.
ದೇಶ ಮತ್ತು ರಾಜ್ಯ ಅಂತ ಬಂದಾಗ ಒಗ್ಗಟ್ಟು ಎಷ್ಟು ಎಂಬುದು ಎಷ್ಟು ಮುಖ್ಯವೋ ರಾಜ್ಯರಾಜ್ಯಗಳ ಮಧ್ಯೆ ಅಭಿವೃದ್ಧಿ ವಿಚಾರದಲ್ಲಿ ಪೈಪೋಟಿಯೂ ಅಷ್ಟೇ ಮುಖ್ಯವಾಗುತ್ತದೆ. ರಾಜ್ಯಗಳು ಸ್ಪರ್ಧೆಗೆ ಬಿದ್ದು ಅಭಿವೃದ್ಧಿಯಾಗುವುದು ಅಂತಿಮವಾಗಿ ದೇಶದ ಹಿತಕ್ಕೆ ಪೂರಕ. ಪ್ರವಾಸೋದ್ಯಮ ವಿಭಾಗದಲ್ಲಿ ರಾಜ್ಯರಾಜ್ಯಗಳ ನಡುವೆ ಇಂಥದ್ದೊಂದು ಸ್ಪರ್ಧೆಯ ಅಗತ್ಯವಿದೆ.
ಗುಜರಾತ್ ನ ಪ್ರವಾಸೋದ್ಯಮ ಮೊದಲಿನಿಂದಲೂ ಏರುಗತಿಯಲ್ಲೇ ಇದ್ದರೂ, ಅದಕ್ಕೆ ದೊಡ್ಡ ಚಿಮ್ಮುಗೆ ಸಿಕ್ಕಿದ್ದು ಸ್ಟ್ಯಾಚ್ಯೂ ಆಫ್ ಯೂನಿಟಿಯಿಂದ. 182 ಮೀಟರ್ ಅಂದ್ರೆ 593 ಅಡಿ ಎತ್ತರದ ಈ ಏಕತಾ ಪ್ರತಿಮೆ ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿ ದಾಖಲಾಗಿದೆ. 2018ರಲ್ಲಿ ಇದು ಲೋಕಾರ್ಪಣೆಯಾದ ಹೊತ್ತಿನಲ್ಲಿ, ಇಂಥ ಪ್ರತಿಮೆಗೆ ದುಡ್ಡು ಸುರಿಯುವ ಅಗತ್ಯ ಇತ್ತಾ ಎಂಬ ಪ್ರಶ್ನೆ ಎದ್ದಿತ್ತು. ರಾಜಕೀಯ ಬಣ್ಣವೂ ಲೇಪನಗೊಂಡಿತ್ತು. ಆದರೆ ಈಗ ಈ ಪ್ರತಿಮೆಯ ಮಹತ್ವ ಮತ್ತು ಲಾಭ ದೇಶಕ್ಕೆ ಕಾಣುತ್ತಿದೆ. ಇದು ಜಗತ್ತಿನಾದ್ಯಂತ ಇರುವ ಪ್ರವಾಸಿಗರನ್ನು ಸೆಳೆಯುತ್ತಿದೆ. ದೇಶದ ಐಕಾನಿಕ್ ಪ್ರತಿಮೆಯಾಗಿ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಪ್ರತಿ ದಿನ ಕನಿಷ್ಠ 15 ಸಾವಿರ ಪ್ರವಾಸಿಗರನ್ನು ಸೆಳೆಯುವ ಮೂಲಕ ವರ್ಷಕ್ಕೆ ನೂರು ಕೋಟಿಗೂ ಹೆಚ್ಚಿನ ಆದಾಯವನ್ನು ತಂದುಕೊಡುತ್ತಿದೆ.

ಸರ್ದಾರ್ ವಲ್ಲಭಭಾಯ್ ಪಟೇಲರ ವ್ಯಕ್ತಿತ್ವಕ್ಕಿರುವ ಗೌರವ ಬೇರೆ. ಆದರೆ ಒಂದು ಪ್ರತಿಮೆಯಾಗಿ ಅದು ಆಕರ್ಷಿಸುತ್ತಿರುವುದು ಪಾರಂಪರಿಕ ಮತ್ತು ಪ್ರವಾಸೋದ್ಯಮ ದೃಷ್ಟಿಕೋನದ ಸಂಗತಿ. ಇದನ್ನು ನೋಡಿದಾಗ ಕರ್ನಾಟಕದಲ್ಲೂ ಯಾಕೆ ಇಂಥದ್ದೊಂದು ಐಕಾನಿಕ್ ಪ್ರತಿಮೆ ನಿರ್ಮಾಣವಾಗಬಾರದು ಎಂದು ಅನಿಸದೇ ಇರದು. ಕಿತ್ತೂರು ಚೆನ್ನಮ್ಮ, ಬಸವಣ್ಣ, ಕೃಷ್ಣದೇವರಾಯ, ರಾಯಣ್ಣ, ರಾಣಿ ಅಬ್ಬಕ್ಕ, ಕನ್ನಡ ಕವಿಗಳು, ವಿಶ್ವಶ್ರೇಷ್ಠ ವಿಜ್ಞಾನಿಗಳು, ಪುರಾಣಪ್ರಸಿದ್ಧರು ಹೀಗೆ ನೂರಾರು ಮೇರು ವ್ಯಕ್ತಿತ್ವಗಳ ನೆಲೆಬೀಡು ಕರ್ನಾಟಕ. ಕರ್ನಾಟಕಕ್ಕೆ ಸೀಮಿತಗೊಳಿಸಿಕೊಳ್ಳಬೇಕು ಎಂಬ ಕಟ್ಟುಪಾಡೂ ಇಲ್ಲ. ದೇಶದ ಬೆಸ್ಟ್ ವ್ಯಕ್ತಿಗಳ ಪ್ರತಿಮೆಯೂ ಕರ್ನಾಟಕದಲ್ಲಿ ನಿರ್ಮಾಣವಾಗಬಹುದು. ಇದು ಪ್ರವಾಸೋದ್ಯಮಕ್ಕೆ ಅತಿ ದೊಡ್ಡ ಹಿರಿಮೆ ಮತ್ತು ಲಾಭ ತಂದುಕೊಡಬಲ್ಲ ಸಂಗತಿ. ಸ್ಥಳೀಯ ಮತ್ತು ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಏಕತಾ ಮೂರ್ತಿಗಿಂತಲೂ ಎತ್ತರದ ಅಥವಾ ಭಿನ್ನ ಆಕರ್ಷಣೆಯ ಪ್ರತಿಮೆಯೊಂದು ನಿರ್ಮಾಣವಾಗಿ ಅದರ ಸುತ್ತ ಪ್ರವಾಸಿ ಸ್ನೇಹಿ ವಾತಾವರಣ ಕಲ್ಪಿಸಿದರೆ ಅದು ರಾಜ್ಯದ ಐಡೆಂಟಿಟಿ ಎಂಬಷ್ಟು ಖ್ಯಾತವಾಗುವುದರಲ್ಲಿ ಅನುಮಾನವೇ ಇಲ್ಲ. ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಕಾರಣಾಂತರಗಳಿಂದ ಹಿಂದೆ ಬಿದ್ದಿದೆ. ಇಂಥ ಐಕಾನಿಕ್ ಪ್ರತಿಮೆಯೊಂದು ಅಲ್ಲಿ ನಿರ್ಮಾಣವಾದರೆ, ಉತ್ತರಕರ್ನಾಟಕದ ಜಿಲ್ಲೆಯೊಂದರ ಸರ್ವಾಂಗೀಣ ಅಭಿವೃದ್ಧಿಗೆ ಅದೇ ಮೂಲವೂ ಆಗಿಬಿಡಬಹುದು. ಉದ್ಯೋಗ ಸೃಷ್ಟಿಗೂ ಅದು ನಾಂದಿ ಹಾಡಬಹುದು. ವ್ಯವಹಾರ ವಹಿವಾಟುಗಳೂ ಅಭಿವೃದ್ಧಿ ಹೊಂದಬಹುದು. ಜಗತ್ತಿನ ಕಣ್ಣಲ್ಲಿ ಕರ್ನಾಟಕದ ಸ್ಥಾನ ಇನ್ನಷ್ಟು ನಿಚ್ಚಳವಾಗಬಹುದು. ಹೊಸ ಪ್ರವಾಸಿ ಸ್ಥಳಗಳನ್ನು ಸೃಷ್ಟಿಸುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಮೆ ನಿರ್ಮಾಣ ಒಂದು ಸಾಂಸ್ಕೃತಿಕ,ಪಾರಂಪರಿಕ ಮತ್ತು ಆರ್ಥಿಕ ಲಾಭ ತರುವ ಯೋಜನೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಂಭೀರವಾಗಿ ಯೋಚಿಸಲಿ. ಕರ್ನಾಟಕ ತನ್ನ ಶಕ್ತಿಶಾಲಿ ಇತಿಹಾಸವನ್ನು ಕೇವಲ ಪಠ್ಯಪುಸ್ತಕಗಳಲ್ಲಿ ಮಾತ್ರವಲ್ಲ, ಜಗತ್ತಿಗೆ ಕಾಣುವಂತೆ ಕಟ್ಟಬೇಕು. ಅದಕ್ಕಾಗಿ ಒಂದು ಐಕಾನಿಕ್ ಪ್ರತಿಮೆ ತಕ್ಷಣದ ಅಗತ್ಯ. ಆದರೆ ವಿವಾದಕ್ಕೆ ಆಸ್ಪದ ಕೊಡುವ ಪ್ರತಿಮೆ ನಿರ್ಮಾಣವಾಗದಿರಲಿ ಎಂಬುದು ಆಶಯ.