ಬುಕ್ಕಾಪಟ್ಟಣ - ಪೆರುವಿನ ಕಟ್ಟಕಡೆಯ ಊರಿನಲ್ಲಿ
ʼಚಾರಿಯಟ್ ಆಫ್ ದಿ ಗಾಡ್ʼ ಕೃತಿಯ ಓದಿನಿಂದ ಪ್ರೇರಣೆಗೊಂಡು ನೇಮಿಚಂದ್ರ ಪೆರುವಿಗೆ ಪ್ರವಾಸ ಬೆಳೆಸುತ್ತಾರೆ. ತಮ್ಮ ನಿಡುಗಾಲದ ಗೆಳತಿಯೊಂದಿಗೆ ಎರಡು ತಿಂಗಳುಗಳ ಕಾಲ ದಟ್ಟ ಕಾಡುಗಳ ಮಧ್ಯೆ ಅಲೆಮಾರಿಯಂತೆ ಅಲೆಯುತ್ತಾರೆ.
ʼನನಗೆ ಮೋಡದ ಮೇಲೆ ಹಾರಬೇಕಾಗಿಲ್ಲ. ಈ ನೆಲದ ಅನುಭವ ಬೇಕಿತ್ತುʼ ದಕ್ಷಿಣ ಆಫ್ರಿಕಾದ ಪೆರುವಿನ ಕಟ್ಟಕಡೆಯ ಊರಾದ ಸಂತಾರೋಸಾದಲ್ಲಿ ನಿಂತು ನೇಮಿಚಂದ್ರ ಹೀಗೆ ಬರೆಯುತ್ತಾರೆ. ʼಪೆರುವಿನ ಪವಿತ್ರ ಕಣಿವೆಯಲ್ಲಿʼ ಪ್ರಖ್ಯಾತ ಲೇಖಕಿ ನೇಮಿಚಂದ್ರ ಅವರ ಪ್ರಯೋಗಶೀಲ ಪ್ರವಾಸ ಕಥನ. 2004ರಲ್ಲಿ ಈ ಕೃತಿ ಪ್ರಕಟಗೊಂಡಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈವರೆಗೆ ಹತ್ತಾರು ಮುದ್ರಣಗಳನ್ನೂ ಕಂಡಿದೆ.
ʼಚಾರಿಯಟ್ ಆಫ್ ದಿ ಗಾಡ್ʼ ಕೃತಿಯ ಓದಿನಿಂದ ಪ್ರೇರಣೆಗೊಂಡು ನೇಮಿಚಂದ್ರ ಪೆರುವಿಗೆ ಪ್ರವಾಸ ಬೆಳೆಸುತ್ತಾರೆ. ತಮ್ಮ ನಿಡುಗಾಲದ ಗೆಳತಿಯೊಂದಿಗೆ ಎರಡು ತಿಂಗಳುಗಳ ಕಾಲ ದಟ್ಟ ಕಾಡುಗಳ ಮಧ್ಯೆ ಅಲೆಮಾರಿಯಂತೆ ಅಲೆಯುತ್ತಾರೆ. ಅಂದಹಾಗೆ ಅವರು ಪೆರುವನ್ನು ತಲುಪಿದ್ದೇ ರೋಚಕ ಎನ್ನಬಹುದು. ವಿಮಾನದ ಟಿಕೆಟಿಗೆ ಲಕ್ಷಗಟ್ಟಲೆ ಭರಿಸಲು ಸಾಧ್ಯವಾಗದೆ ಅಮೆರಿಕದ ಪಶ್ಚಿಮದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಇಳಿದು, ಅಲ್ಲಿಂದ ರೈಲಿನಲ್ಲಿ ಪೂರ್ವಕ್ಕೆ ಹೊರಟು ನಂತರ ಉತ್ತರದ ತುತ್ತತುದಿ ಕೆನಡಾ ತಲುಪಿ ಅಲ್ಲಿಂದ ದಕ್ಷಿಣದ ಮಿಯಾಮಿ ಹೊಕ್ಕು ನಂತರ ಪೆರುವಿನ ರಾಜಧಾನಿಯಾದ ಲೀಮಾಕ್ಕೆ ತಲುಪುತ್ತಾರೆ. ನಾಸ್ಕಾ, ಅರಿಕೇಫಾ, ಕುಸ್ಕೋ, ಮಾಚುಪಿಚು, ಅಮೆಜಾನ್ ಬೇಸ್‌ಗಳಲ್ಲಿ ರೈಲು, ಬಸ್ಸು, ದೋಣಿಯ ಮೂಲಕ ದೇಶದಿಂದ ದೇಶಕ್ಕೆ ಜಿಗಿಯುತ್ತಾ ಹೋಗುತ್ತಾರೆ. ಪ್ರತಿ ಸ್ಥಳ ತಲುಪುವಾಗಲೂ ಲೇಖಕಿಯಲ್ಲಿ ದೀರ್ಘ ನಿಟ್ಟುಸಿರು, ಸಡಗರ ಮತ್ತು ಸಂಭ್ರಮ.
ಬಹುಮುಖ್ಯವಾಗಿ ನೇಮಿಚಂದ್ರ ಓದುಗರಿಗೆ ತಮ್ಮ ಅನುಭವವನ್ನು ಮಾತ್ರ ದಾಟಿಸದೆ ಪೆರುವಿನ ವಿಶ್ವ ರೂಪವನ್ನು ತೋರಿಸಿದ್ದಾರೆ. ʼದಕ್ಷಿಣ ಆಫ್ರಿಕಾದ ಜೀವಂತ ಪರಿಸರವನ್ನು ಕಾಣುವ ಉತ್ಕಟ ಆಸೆಯೊಂದಿಗೆಯೇ ನಾನು ಪೆರುವಿನ ಕಣಿವೆ ತಲುಪಿದೆʼ ಎನ್ನುವ ಲೇಖಕಿ ಅಲ್ಲಿನ ಜನರ ಸಂಸ್ಕೃತಿ, ಅವರ ಆಚಾರ-ವಿಚಾರ, ಭಾಷೆ ಹೀಗೆ ನಾನಾ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಇನ್ನು ಲೇಖಕಿ ಅಮೆಜಾನ್ ಕಾಡಿನಲ್ಲಿ ಬೀಡುಬಿಟ್ಟ ಸಂಗತಿಯೂ ಅತ್ಯಂತ ರೋಚಕವಾಗಿದ್ದು, ಇದು ಮಹಿಳೆಯೊಬ್ಬಳ ಸಾಹಸಿ ಪ್ರವೃತ್ತಿ ಮತ್ತು ದಿಟ್ಟತನವನ್ನು ತೋರುತ್ತದೆ. ಪೆರುವಿನ ಆದಿವಾಸಿ ಜನಾಂಗದ ನಾಗರಿಕತೆ, ಜೀವನ ವಿಧಾನವನ್ನು ಸಂಕ್ಷಿಪ್ತವಾಗಿ ವಿವರಿಸಿರುವ ಲೇಖಕಿ ಪ್ರತಿ ಅಧ್ಯಾಯದಲ್ಲೂ ಕುತೂಹಲ ಕೆರಳಿಸುತ್ತಾ ಸಾಗುತ್ತಾರೆ. ಲೀಮ ಸಂಸ್ಕೃತಿ, ಆಂಚಿಸ್ ಪರ್ವತ, ಶಾಂತವಾಗಿ ಹರಿಯುವ ಉರಬಂಬಾ ನದಿ, ಮಾಚುಪಿಚು ಹೀಗೆ ಹತ್ತಾರು ವಿಷಯಗಳ ಸುತ್ತ ಸ್ವಾರಸ್ಯಕರ ಸಂಗತಿಗಳನ್ನು ಕಟ್ಟಿಕೊಟ್ಟಿರುವ ನೇಮಿಚಂದ್ರ ತಮ್ಮ ಪ್ರವಾಸಕಥನವನ್ನು ಹದವಾಗಿಸಿದ್ದಾರೆ. ತಮ್ಮ ನಿರಾಡಂಬರ ಬರಹ, ಆಪ್ತವಾದ ನಿರೂಪಣೆಯ ಶೈಲಿ, ತಂತ್ರಗಾರಿಕೆ ಮತ್ತು ಇನ್ನಿತರ ಕಸುಬುಗಾರಿಕೆಯಿಂದ ಬಿಗಿಗೊಳಿಸಿದ್ದಾರೆ.
ಪೆರುವಿನ ಬೀದಿಬೀದಿಯಲ್ಲಿ ಅಡ್ಡಾದಿಡ್ಡಿ ಓಡಾಡಿರುವ ನೇಮಿಚಂದ್ರ ಅಲ್ಲಿನ ನೈಜ ಚಿತ್ರಣ ಕಂಡು ಬೆರಗಾಗಿದ್ದಾರೆ. ಜನರ ಮುಗ್ಧತೆ ಮತ್ತು ನಿರಭ್ರ ಪ್ರೀತಿಯ ನಡುವೆಯೂ ಅಲ್ಲಿ ಹಾಸುಹೊಕ್ಕಿರುವ ಭ್ರಷ್ಟ ರಾಜಕೀಯ ವ್ಯವಸ್ಥೆ ಅವರನ್ನು ಕಂಗಾಲಾಗಿಸಿದೆ. ಬೆಳೆದು ನಿಂತಿರುವ ಅಮೆರಿಕ ನೋಡಲು ಹಲವರು ಬಯಸುತ್ತಾರೆ. ಆದರೆ ಲೇಖಕಿ ನಿಜ ಸಂಸ್ಕೃತಿ ಇನ್ನೂ ಜೀವಂತವಾಗಿ ಉಳಿದಿರುವ ಪೆರುವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ʼಪೆರುವಿನ ಪ್ರವಾಸ ಮುಗಿಸಿ ಬಂದಾಗಿನಿಂದ ನನ್ನ ಯೋಚನಾಲಹರಿ ಬದಲಾಗಿದೆʼ ಎಂದು ಸ್ವತಃ ಲೇಖಕಿ ಹೇಳಿಕೊಂಡಿದ್ದಾರೆ.
ಒಟ್ಟಾರೆ ʼಪೆರುವಿನ ಪವಿತ್ರ ಕಣಿವೆಯಲ್ಲಿʼ ಕೃತಿಯು ಪ್ರವಾಸ ಕಥನ ಮಾತ್ರವಲ್ಲ. ಅದು ಐತಿಹಾಸಿಕ ಕಥನವೂ ಹೌದು.